EXIT POLL | ಮಧ್ಯ ಪ್ರದೇಶ, ರಾಜಸ್ತಾನದಲ್ಲಿ ಕಾಂಗ್ರೆಸ್ ಸೋಲುತ್ತಾ ?

Update: 2023-12-02 13:00 GMT
Editor : Ismail | Byline : ಆರ್. ಜೀವಿ

Photo: PTI 

ಪಂಚ ರಾಜ್ಯಗಳ ವಿಧಾನ ಸಭಾ ಚುನಾವಣೆಯ ಎಕ್ಸಿಟ್ ಪೋಲ್ ಅಂದ್ರೆ ಮತಗಟ್ಟೆ ಸಮೀಕ್ಷೆ ನಿನ್ನೆ ಸಂಜೆ ಪ್ರಕಟವಾಗಿದೆ. ಸಾಮಾನ್ಯವಾಗಿ ಈ ಎಕ್ಸಿಟ್ ಪೋಲ್ ಗಳು ನಿಜವಾದ ಫಲಿತಾಂಶಕ್ಕೆ ಬಹಳ ಹತ್ತಿರದಲ್ಲೇ ಇರುತ್ತವೆ. ಹೆಚ್ಚು ಕಡಿಮೆ ಎಕ್ಸಿಟ್ ಪೋಲ್ ಗಳು ಹೇಳಿದ ಹಾಗೇ ಅಂತಿಮ ಫಲಿತಾಂಶ ಬರುತ್ತದೆ. ಎಕ್ಸಿಟ್ ಪೋಲ್ ಗಳೂ ತಪ್ಪಾಗಿವೆ, ಸುಳ್ಳಾಗಿವೆ. ಅವೇ ಅಂತಿಮ ಅಲ್ಲ. ಆದರೆ ಬಹುತೇಕ ಚುನಾವಣೆಗಳಲ್ಲಿ ಎಕ್ಸಿಟ್ ಪೋಲ್ ಗಳಿಗೂ ಕೊನೆಗೆ ಬರುವ ಫಲಿತಾಂಶಕ್ಕೂ ಹೆಚ್ಚು ವ್ಯತ್ಯಾಸ ಇರೋದಿಲ್ಲ.

ಹಾಗಾದರೆ ನಿನ್ನೆ ಬಂದಿರುವ ಎಕ್ಸಿಟ್ ಪೋಲ್ ಗಳು ಹೇಳಿದ ಹಾಗೆಯೇ ನಾಡಿದ್ದು ರವಿವಾರ ಫಲಿತಾಂಶ ಬಂದರೆ ಏನಾಗಲಿದೆ ? . ಈ ಪಂಚ ರಾಜ್ಯ ಚುನಾವಣೆಗಳಲ್ಲಿ ಎಕ್ಸಿಟ್ ಪೋಲ್ ನಿಜವಾದರೆ ಗೆಲುವು ಯಾರಿಗೆ ? ಸೋಲು ಯಾರಿಗೆ ?. ಯಾವ ಪಕ್ಷಕ್ಕೆ ಮೇಲುಗೈ ? ಯಾವ ಪಕ್ಷಕ್ಕೆ ಹಿನ್ನಡೆ ? ಯಾರಿಗೆ ಲಾಭ ? ಯಾರಿಗೆ ನಷ್ಟ ?.

ಎಕ್ಸಿಟ್ ಪೋಲ್ ಗಳ ಪೋಲ್ ಆಫ್ ಪೋಲ್ ಮಾಡಿದ್ರೆ ಅಂದ್ರೆ ಐದಾರು ಪ್ರಮುಖ ಎಕ್ಸಿಟ್ ಪೋಲ್ ಗಳ ಸರಾಸರಿ ತೆಗೆದುಕೊಂಡರೆ ಅದರ ಸಾರಾಂಶ ಹೀಗಿದೆ.

ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ನ ಎಲ್ಲ ಲೆಕ್ಕಾಚಾರ ತಲೆಕೆಳಗಾಗಲಿದೆ. ಅಲ್ಲಿ ಅಂತಿಮ ಕ್ಷಣದಲ್ಲಿ ಬಿಜೆಪಿಯ ಕೈ ಮೇಲಾಗಲಿದೆ. ಅಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಮತ್ತೊಮ್ಮೆ ಅಧಿಕಾರಕ್ಕೆ ಏರಲಿದೆ. ಅಲ್ಲಿ ಬಹುಮತಕ್ಕೆ ಬೇಕಾದ್ದು 116 ಸ್ಥಾನ. ಆದರೆ ಪೋಲ್ ಆಫ್ ಪೋಲ್ಸ್ ನೋಡಿದ್ರೆ ಅಲ್ಲಿ ಬಿಜೆಪಿ ಸುಲಭವಾಗಿ 124 ಸ್ಥಾನ ಗಳಿಸಲಿದೆ.

ಕೆಲವು ಎಕ್ಸಿಟ್ ಪೋಲ್ ಗಳ ಪ್ರಕಾರ ಬಿಜೆಪಿ 150 ಸ್ಥಾನ ಗಳಿಸಿದರೂ ಅಚ್ಚರಿಯಿಲ್ಲ. ಹಾಗಾದರೆ ಅಲ್ಲಿ ಬಿಜೆಪಿ ವಿರುದ್ಧ ಭಾರೀ ಜನಾಕ್ರೋಶ ಇದೆ ಎಂದು ರಾಹುಲ್ ಗಾಂಧಿ ಹೇಳಿದ್ದು ಸುಳ್ಳಾಯಿತೇ ? ಹಿರಿಯ ನಾಯಕ ಕಮಲ್ ನಾಥ್ ಹಾಗು ದಿಗ್ವಿಜಯ್ ಸಿಂಗ್ ರನ್ನೇ ನೆಚ್ಚಿಕೊಂಡು ರಾಜ್ಯವನ್ನು ಅವರ ಉಸ್ತುವಾರಿಗೇ ಸಂಪೂರ್ಣ ಬಿಟ್ಟು ಬಿಟ್ಟಿದ್ದು ಕಾಂಗ್ರೆಸ್ ಗೆ ಮುಳುವಾಯಿತೇ ? ಹದಿನೆಂಟು ವರ್ಷ ಸಿಎಂ ಆಗಿರುವ ಶಿವರಾಜ್ ಸಿಂಗ್ ಚೌಹಾಣ್ ಈಗಲೂ ಆ ರಾಜ್ಯದ ಜನರ ನಡುವೆ ಜನಪ್ರಿಯತೆ ಕಳಕೊಂಡಿಲ್ಲವೇ ? ಚುನಾವಣೆಗೆ ಹತ್ತು ದಿನಗಳಿರುವಾಗಲೂ ಚೌಹಾಣ್ ರನ್ನು ಹೆಚ್ಚು ಬಿಂಬಿಸದೆ ಬಿಜೆಪಿ ಪ್ರಧಾನಿ ಮೋದಿಯವರನ್ನೇ ಹೆಚ್ಚು ತೋರಿಸುತ್ತಿತ್ತು. ಕೊನೆಯ ಒಂದು ವಾರದಲ್ಲಿ ಇದ್ದಕ್ಕಿದ್ದಂತೆ ಎಲ್ಲ ಕಡೆ ಚೌಹಾಣ್ ಅವರು ಕಾಣಿಸಿಕೊಳ್ಳತೊಡಗಿದರು. ಇದು ಬಿಜೆಪಿಗೆ ಲಾಭವಾಯಿತೇ ? ಚೌಹಾಣ್ ಅಷ್ಟೊಂದು ಜನರ ಮಧ್ಯೆ ಜನಪ್ರಿಯರಾಗಿ ಉಳಿದಿದ್ದಾರಾ ? ರಾಹುಲ್ ಗಾಂಧಿ ಮತ್ತೆ ಮತ್ತೆ ಹೇಳುತ್ತಿದ್ದ ಬಿಜೆಪಿ ವಿರುದ್ಧದ ಜನರ ಅಸಮಾಧಾನದ ಅಲೆ ಎಲ್ಲಿದೆ ಹಾಗಾದರೆ ?.

ಎಕ್ಸಿಟ್ ಪೋಲ್ ನೋಡಿ ವಿಚಲಿತರಾಗಬೇಡಿ. ರವಿವಾರ ಕಾಂಗ್ರೆಸ್ ಸರಕಾರವೇ ಮಧ್ಯಪ್ರದೇಶದಲ್ಲಿ ಬರಲಿದೆ. ಮತ ಎಣಿಕೆ ಸರಿಯಾಗಿ ಆಗುವಂತೆ ನೋಡಿಕೊಳ್ಳಿ ಎಂದು ಕಾಂಗ್ರೆಸ್ ನಾಯಕ ಕಮಲ್ ನಾಥ್ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಅವರು ಹೇಳಿದ ಹಾಗೆ ಎಕ್ಸಿಟ್ ಪೋಲ್ ಗಳು ಸುಳ್ಳಾಗಲಿವೆಯೇ ? ಕಾಂಗ್ರೆಸ್ ಬಿಜೆಪಿಯನ್ನು ಸೋಲಿಸಿ ಅಲ್ಲಿ ಸರಕಾರ ರಚಿಸಲಿದೆಯೇ ? ಕಾದು ನೋಡೋಣ.

ಇನ್ನು ರಾಜಸ್ಥಾನದ ವಿಷಯ. ಅಲ್ಲಿ ಕಾಂಗ್ರೆಸ್ ನ ಗೆಹಲೋಟ್ ಹಾಗು ಪೈಲಟ್ ನಡುವೆ ಇದ್ದ ಗೊಂದಲ ಕಾಂಗ್ರೆಸ್ ಗೆ ಕಂಟಕವಾಗಿತ್ತು. ಸಾಲದ್ದಕ್ಕೆ ಪ್ರತಿ ಐದು ವರ್ಷಕ್ಕೊಮ್ಮೆ ಅಲ್ಲಿ ಸರಕಾರ ಬದಲಾಗುವ ಪರಿಪಾಠವೇ ಇದೆ. ಹಾಗಾಗಿ ಕಾಂಗ್ರೆಸ್ ಸೋಲೋದು ಖಚಿತ ಎಂದೇ ಹೇಳಲಾಗುತ್ತಿತ್ತು. ಆದರೆ ಕೊನೆಯ ಎರಡು ತಿಂಗಳಲ್ಲಿ ಗೆಹಲೋಟ್ ಮ್ಯಾಜಿಕ್ ಅದ್ಯಾವ ಪರಿ ನಡೆಯಿತು ಅಂದ್ರೆ ಇದೇ ಮೊದಲ ಬಾರಿ ರಾಜಸ್ತಾನದಲ್ಲಿ ಮತ್ತೆ ಆಡಳಿತಾರೂಢ ಪಕ್ಷವೇ ಗೆದ್ದರೂ ಅಚ್ಚರಿಯಿಲ್ಲ ಎಂಬಂತಹ ವಾತಾವರಣ ಸೃಷ್ಟಿಯಾಯಿತು. ಗೆಹಲೋಟ್ ರ ವಿಮೆ ಇತ್ಯಾದಿ ಯೋಜನೆಗಳು ಅಲ್ಲಿನ ಜನರಿಗೆ ಭಾರೀ ಇಷ್ಟವಾಗಿದೆ ಎಂಬ ವರದಿಗಳೂ ಬಂದವು. ಅಲ್ಲೂ ಬಿಜೆಪಿ ವಸುಂಧರಾ ರಾಜೆಯನ್ನು ಬದಿಗೆ ಸರಿಸಿ ಮೋದೀಜಿ ಅವರೇ ಪ್ರಚಾರದ ಕೇಂದ್ರ ಬಿಂದುವಾಗಿದ್ದರು. ಆದರೆ ಚುನಾವಣೆಗೆ ಇನ್ನೇನು ವಾರವಿದೆ ಎನ್ನುವಾಗ ರಾಜೇ ಎಲ್ಲಡೆ ಕಾಣಿಸಿಕೊಳ್ಳತೊಡಗಿದರು. ಆಗಲೇ ಬಿಜೆಪಿ ಮತ್ತೆ ಚಿಗಿತುಕೊಂಡು ಕಾಂಗ್ರೆಸ್ ಗೆ ಭಾರೀ ಠಕ್ಕರ್ ನೀಡಿದೆ ಎಂಬ ವರದಿಗಳಿವೆ.

ಈಗ ಎಕ್ಸಿಟ್ ಪೋಲ್ ನ ಪೋಲ್ ಆಫ್ ಪೋಲ್ಸ್ ಪ್ರಕಾರ ರಾಜಸ್ಥಾನದಲ್ಲಿ ಬಿಜೆಪಿ ಬಹುಮತ ಪಡೆಯಲಿದೆ. ಕಾಂಗ್ರೆಸ್ ಅದಕ್ಕೆ ತೀವ್ರ ಸ್ಪರ್ಧೆ ಒಡ್ಡಿ ಕೆಲವೇ ಸೀಟುಗಳ ಅಂತರದಿಂದ ಸೋಲಲಿದೆ. ಕೆಲವು ಸಮೀಕ್ಷೆಗಳ ಪ್ರಕಾರ ಬಿಜೆಪಿ ಭರ್ಜರಿ ಬಹುಮತವನ್ನೇ ಪಡೆಯಲಿದೆ. ಕಾಂಗ್ರೆಸ್ ಹೀನಾಯವಾಗಿ ಸೋಲಲಿದೆ.

ಹಾಗಾದರೆ ಕೊನೆ ಕ್ಷಣದಲ್ಲಿ ಗೆಹಲೋಟ್ ಮ್ಯಾಜಿಕ್ ನಡೆಯಲಿಲ್ಲವೇ ? ಮೋದೀಜಿ ಹಾಗು ಕೊನೆಗೆ ಪ್ರಚಾರಕ್ಕೆ ಬಂದ ವಸುಂಧರಾ ರಾಜೇ ರಾಜಸ್ಥಾನದಲ್ಲಿ ಬಿಜೆಪಿಯನ್ನು ಮೇಲೆ ತಂದರೇ ? ಗೆಹಲೋಟ್ ರನ್ನೇ ಹೆಚ್ಚು ನೆಚ್ಚಿಕೊಂಡಿದ್ದು ಕಾಂಗ್ರೆಸ್ ಗೆ ದುಬಾರಿಯಾಯಿತೇ ?. ಅದು ರವಿವಾರ ಗೊತ್ತಾಗಲಿದೆ.

ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಗೆ ಶುಭ ಸುದ್ದಿಯಿದೆ. ಅಲ್ಲೂ ಸಂಪೂರ್ಣವಾಗಿ ಕಾಂಗ್ರೆಸ್ ಸಿಎಂ ಭೂಪೇಶ್ ಭಾಗೇಲ್ ಅವರೇ ಆವರಿಸಿಕೊಂಡಿದ್ದರು. ಇಡೀ ರಾಜ್ಯವನ್ನು ಅವರ ಸುಪರ್ದಿಗೆ ಕಾಂಗ್ರೆಸ್ ಬಿಟ್ಟಂತಿತ್ತು. ಪಕ್ಷದ ಮೇಲೆ ಅವರ ಸಂಪೂರ್ಣ ಹಿಡಿತ ಇತ್ತು. ಅಲ್ಲಿನ ಆದಿವಾಸಿಗಳ ನಡುವೆ ಅವರು ಬಹಳ ಜನಪ್ರಿಯ ನಾಯಕ ಎಂದೇ ಖ್ಯಾತರು. ಅಲ್ಲಿ ಬಿಜೆಪಿ ಚುನಾವಣೆ ಸಮೀಪಿಸುವಾಗ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಮಧ್ಯ ಛತ್ತೀಸ್ ಗಢದಲ್ಲಿ ದೊಡ್ಡ ಪ್ರಮಾಣದಲ್ಲೇ ಓಟು ಗಳಿಸುವ ಸಾಧ್ಯತೆ ಇದೆ.

ಆದರೆ ಎಕ್ಸಿಟ್ ಪೋಲ್ ಗಳ ಪ್ರಕಾರ ಅಲ್ಲಿ ಕೊನೆಗೂ ಕಾಂಗ್ರೆಸ್ ಸರಕಾರವೇ ಮತ್ತೆ ಬರಲಿದೆ. ಬಹುಮತಕ್ಕೆ ಅಲ್ಲಿ 46 ಸೀಟು ಬೇಕು. ಕಾಂಗ್ರೆಸ್ 49ರವರೆಗೆ ಸೀಟು ಗಳಿಸುವ ಸಾಧ್ಯತೆ ಇದೆ. ಬಿಜೆಪಿ ತೀವ್ರ ಸ್ಪರ್ಧೆ ನೀಡಿದರೂ ಕೊನೆಗೆ ಸೋಲಲಿದೆ. ಎಕ್ಸಿಟ್ ಪೋಲ್ ಗಳ ಪ್ರಕಾರ ಕಾಂಗ್ರೆಸ್ ಪಾಲಿಗೆ ಬಂಪರ್ ಲಾಟರಿ ಹೊಡೆಯಲಿರುವುದು ದಕ್ಷಿಣ ತೆಲಂಗಾಣ ರಾಜ್ಯದಲ್ಲಿ. ಅಲ್ಲಿ ತೀವ್ರ ದುರ್ಬಲವಾಗಿದ್ದ ಕಾಂಗ್ರೆಸ್ ಆಶ್ಚರ್ಯಕರ ರೀತಿಯಲ್ಲಿ ಪುಟಿದೆದ್ದಿದೆ. ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆ ಹಾಗು ಚುನಾವಣೆ ಸಂದರ್ಭದಲ್ಲಿ ರಾಹುಲ್ , ಪ್ರಿಯಾಂಕ ಅವರ ಪ್ರಚಾರ ಪಕ್ಷಕ್ಕೆ ಬಹಳ ದೊಡ್ಡ ಬೂಸ್ಟ್ ಕೊಟ್ಟಿದೆ ಎನ್ನುತ್ತಿವೆ ಸಮೀಕ್ಷೆಗಳು. ತೆಲಂಗಾಣದ ಅತ್ಯಂತ ಪವರ್ ಫುಲ್ ರಾಜಕಾರಣಿ ಚಂದ್ರಶೇಖರ್ ರಾವ್ ಅವರ ಬಿಗಿ ಹಿಡಿತವನ್ನು ತಪ್ಪಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ ಎಂದೇ ಹೇಳುತ್ತಿವೆ ಎಲ್ಲ ಸಮೀಕ್ಷೆಗಳು. ಅಲ್ಲಿನ ಜನರಲ್ಲಿರುವ ಇಂದಿರಾ ಗಾಂಧಿ ಅವರ ಮೇಡಕ್ ನಿಂದ ಸ್ಪರ್ಧೆಯ ನೆನಪೂ ಕಾಂಗ್ರೆಸ್ ಕೈ ಹಿಡಿದಿದೆ ಎನ್ನುತ್ತಿವೆ ವರದಿಗಳು.

ಅಲ್ಲಿ ಬಹುಮತಕ್ಕೆ ಬೇಕಿರುವುದು 60 ಸೀಟುಗಳು. ಕಾಂಗ್ರೆಸ್ ಆ ನಂಬರನ್ನು ಸುಲಭವಾಗಿ ದಾಟಲಿದೆ ಎನ್ನುತ್ತಿವೆ ಸಮೀಕ್ಷೆಗಳು. ಅದು 70 ದಾಟಿದರೂ ಆಶ್ಚರ್ಯವಿಲ್ಲ ಎನ್ನುತ್ತಿವೆ ಕೆಲವು ಎಕ್ಸಿಟ್ ಪೋಲ್ ಗಳು. ಇನ್ನು ಮಿಝೋರಾಂ ನಲ್ಲಿ ಅಲ್ಲಿನ ಪ್ರಾದೇಶಿಕ ಪಕ್ಷಗಳದ್ದೇ ಕಾರುಬಾರು ನಡೆಯಲಿದೆ. ಈ ಬಾರಿ ಅಲ್ಲಿ ಆಡಳಿತಾರೂಢ MNF ಗಿಂತ ZPM ಪಕ್ಷ ಮುನ್ನಡೆ ಸಾಧಿಸಲಿದೆ. ಆದರೆ ಬಹುಮತಕ್ಕೆ ಬೇಕಾದ 21 ಸೀಟು ಅದು ಪಡೆಯೋದು ಕಷ್ಟ ಎನ್ನುತ್ತಿವೆ ಎಕ್ಸಿಟ್ ಪೋಲ್ ಗಳು. ಅಲ್ಲಿ ಕಾಂಗ್ರೆಸ್ ಏಳು ಹಾಗು ಬಿಜೆಪಿ ಒಂದು ಸೀಟು ಗಳಿಸುವ ಸಾಧ್ಯತೆ ಇದೆ. ಹಾಗಾದರೆ ಅಲ್ಲಿ ZPM ಗೆ ಬಹುಮತ ಬರದಿದ್ದರೆ ಕಿಂಗ್ ಮೇಕರ್ ಅಗಲಿರುವವರು ಯಾರು ?

ಒಟ್ಟಾರೆ ಎಕ್ಸಿಟ್ ಪೋಲ್ ಗಳು ನಿಜವಾದರೆ ಕಾಂಗ್ರೆಸ್ ಪಾಲಿಗೆ ಅದು ಅಷ್ಟೊಂದು ಸಿಹಿ ಸುದ್ದಿಯಲ್ಲ. ಹಿಂದಿ ಹಾರ್ಟ್ ಲ್ಯಾಂಡ್ ನ ಎರಡು ರಾಜ್ಯಗಳು ಅದರ ಕೈ ತಪ್ಪುವುದು ಅದಕ್ಕೆ ಶುಭ ಸುದ್ದಿಯಲ್ಲ. ಮಧ್ಯ ಪ್ರದೇಶ ಹಾಗು ರಾಜಸ್ಥಾನ ಎರಡನ್ನೂ ಬಿಜೆಪಿ ಗೆದ್ದರೆ ಅದಕ್ಕೆ ದೊಡ್ಡ ಪ್ಲಸ್ ಪಾಯಿಂಟ್. ಲೋಕಸಭಾ ಚುನಾವಣೆಗೆ ದೊಡ್ಡ ಶಕ್ತಿಯಾಗಲಿದೆ.

ಛತ್ತೀಸ್ ಗಢವನ್ನು ಕಾಂಗ್ರೆಸ್ ಉಳಿಸಿಕೊಂಡರೆ ಮುಖಭಂಗವಾಗುವುದು ತಪ್ಪುತ್ತದೆ. ತೆಲಂಗಾಣದಲ್ಲಿ ಕೈ ಪಕ್ಷ ನಿರೀಕ್ಷೆಯಂತೆ ಗೆದ್ದರೆ ಅದು ಹೆಚ್ಚುವರಿ ಲಾಭ. ವಿಶೇಷ ಅಂದ್ರೆ ರಾಹುಲ್ ಗಾಂಧಿ ಪ್ರಚಾರಕ್ಕೆ ಹೆಚ್ಚು ಹೋಗದ ರಾಜಸ್ತಾನ, ಮಧ್ಯ ಪ್ರದೇಶ , ಛತ್ತೀಸ್ ಗಢ ಗಳಲ್ಲಿ ಕಾಂಗ್ರೆಸ್ ಗೆ ಪರಿಸ್ಥಿತಿ ಚೆನ್ನಾಗಿಲ್ಲ. ಗೆಹಲೋಟ್, ಕಮಲ್ ನಾಥ್ ಕೈಗೇ ಕೊಟ್ಟಿದ್ದ ರಾಜಸ್ಥಾನ, ಮಧ್ಯ ಪ್ರದೇಶ ಕೈ ತಪ್ಪಲಿದೆ. ಭಾಗೇಲ್ ಕೈಗೆ ಕೊಟ್ಟಿರುವ ಛತ್ತೀಸ್ ಗಢ ಕಷ್ಟದಲ್ಲಿ ಕೈಯಲ್ಲಿ ಉಳಿಯಬಹುದು. ಆದರೆ ರಾಹುಲ್ ಗಾಂಧಿ ವ್ಯಾಪಕವಾಗಿ ಪ್ರಚಾರ ಮಾಡಿದ್ದ ತೆಲಂಗಾಣದಲ್ಲಿ ಜನ ಕೈ ಹಿಡಿದಿದ್ದಾರೆ ಎನ್ನುತ್ತಿವೆ ವರದಿಗಳು. ಏನಾಗಲಿದೆ ಎಂದು ರವಿವಾರ ದವರೆಗೆ ಕಾದು ನೋಡೋಣ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!