ಅಮರ ಮಧುರ ದನಿಯ ಒಡೆಯನಿಗೆ ವಿದಾಯ

Update: 2024-02-25 05:54 GMT

ಅಮೀನ್ ಸಯಾನಿ ಅವರ ಮಾತಿಗೆ ಮೋಡಿಹಾಕುವ ಸಾಮರ್ಥ್ಯವಿತ್ತು. ದಾಖಲೆ ಎನಿಸಿರುವ 54,000 ಕಾರ್ಯಕ್ರಮಗಳನ್ನು ಅವರು ನಡೆಸಿಕೊಟ್ಟಿದ್ದಾರೆ. ಸುಮಾರು 19,000 ರೇಡಿಯೊ ಜಾಹೀರಾತು ಜಿಂಗಲ್ಗಳಿಗೆ ಕಂಠದಾನ ಮಾಡಿದ್ದಾರೆ. ಅನೇಕ ಹಿಂದಿ ಚಿತ್ರಗಳಲ್ಲಿ ಉದ್ಗೋಷಕರಾಗಿ ಕಾಣಿಸಿಕೊಂಡಿದ್ದಾರೆ. ಅವರು ಆಕಾಶವಾಣಿಗೆ ನಡೆಸಿಕೊಟ್ಟ ಚಿತ್ರ ರಂಗದ ಪ್ರಸಿದ್ಧ ಕಲಾವಿದರು ಮತ್ತು ತಂತ್ರಜ್ಞರ ಸಂದರ್ಶನಗಳು ಸಹ ಅಪಾರ ಜನಪ್ರಿಯತೆ ಪಡೆದಂಥವು. ಸೆಲೆಬ್ರಿಟಿಗಳಿಗೆ ಅವರ ಬದುಕಿಗೆ ಸಂಬಂಧಿಸಿದ ವಿಚಾರ-ವಿವಾದಗಳನ್ನು ಕುರಿತು ಪ್ರಶ್ನಿಸುವಾಗ ಮನುಷ್ಯ ಘನತೆಗೆ ಕುಂದುಂಟಾಗದ, ಎದುರು ಕೂತವರಿಗೆ ಮುಜುಗರವಾಗದ ಭಾಷೆಯನ್ನು ಬಳಸಿ ಅವರಿಂದ ಉತ್ತರ ಪಡೆಯುತ್ತಿದ್ದ ರೀತಿ ಇಂದಿಗೂ ಅಧ್ಯಯನ ಯೋಗ್ಯ.

‘‘ನಮಸ್ಕಾರ್ ಬೆಹನೋ ಬಾಯಿಯೋ; ಮೈ ಆಪ್ ಕಾ ದೋಸ್ತ್ ಅಮೀನ್ ಸಯಾನಿ ಬೋಲ್ ರಹಾ ಹೂನ್’’.

-ರೇಡಿಯೊ ಟ್ಯೂನ್ ಮಾಡಿ ಕಾಯುತ್ತಿದ್ದ ಕೇಳುಗರಿಗೆ ಮೇಲಿನ ಮಾತುಗಳು ಅಲೆ ಅಲೆಯಾಗಿ ತೇಲಿಬಂದರೆ ಕಿವಿಗೆ ಜೇನು ಸುರಿದಂಥ ಹೊಯ್ದಂಥ ಅನುಭವ. ಅದರ ಹಿಂದೆಯೇ ಜನಪ್ರಿಯ ಹಿಂದಿ ಗೀತೆಗಳ ಪುಟ್ಟ ವಿವರದೊಡನೆ ಚಿತ್ರಗೀತೆ ಆರಂಭವಾದರೆ ತನ್ಮಯರಾಗಿ ಕೇಳುತ್ತಿದ್ದ ಶ್ರೋತೃಗಳು ‘‘ಅಗಲೇ ಸಪ್ತಾಹಿ ಫಿರ್ ಮಿಲೇಂಗೇ, ತಬ್ ತಕ್ ಕೇಲಿಯೇ ಅಪ್ನೆ ದೋಸ್ತ್ ಅಮೀನ್ ಸಹಾನೀಕೋ ಇಜಾಜತ್ ದೀಜಿಯೇ..ನಮಸ್ಕಾರ್, ...ಶುಭರಾತ್ರಿ,..ಶಬ್ಬಾ ಖಯರ್’’ ಎಂಬ ಉಪಸಂಹಾರದ ಮಾತುಗಳವರೆಗೆ ಗಾನದ ರಸಗಂಗೆಯಲ್ಲಿ ಮಿಂದ ಅನುಭವದೊಡನೆ ಮೇಲೇಳುತ್ತಿದ್ದರು. ರೇಡಿಯೊ ಸಿಲೋನ್ನ ಬಿನಾಕಾ ಗೀತ್ಮಾಲಾ ಕಾರ್ಯಕ್ರಮದಿಂದ ಆರಂಭವಾದ ಈ ನಿರೂಪಕ ಮತ್ತು ಕೇಳುಗರ ನಡುವಿನ ಅವಿನಾಭಾವ ಸಂಬಂಧ ಆರಂಭವಾಗಿ ಎಪ್ಪತ್ತೆರಡು ವರ್ಷ. ಕಾರ್ಯಕ್ರಮವೊಂದು ಪರಂಪರೆಯಾಗಿ ಬೆಳೆಯಲು ಪ್ರಮುಖ ಕಾರಣಕರ್ತರಾದ ಆ ಮಧುರ ದನಿಯ ಒಡೆಯನ ಬದುಕಿನ ಪ್ರಯಾಣ ಕಳೆದ ಮಂಗಳವಾರ ರಾತ್ರಿ ಕೊನೆಗೊಂಡಿತು. ಆದರೆ ಅವರು ಆರಂಭಿಸಿದ ಗಾಯನ ರಸಿಕತೆಯ ಪರಂಪರೆ ಮತ್ತು ಅವರ ಧ್ವನಿ ಅಮರವಾಗಿದೆ.

ಕೇವಲ ಕಾರ್ಯಕ್ರಮ ನಿರೂಪಕರಾಗದೆ, ನಿರೂಪಣೆಯ ಪ್ರಸ್ತಾವನೆ, ಭಾಷೆ, ಭಾವಪೂರ್ಣ ಧ್ವನಿಯ ಏರಿಳಿತದಲ್ಲಿ ಹೊಸತನವನ್ನು ತಂದು ಕೇಳುಗರನ್ನು ಸೆಳೆದ ಗಾರುಡಿಗರು ಅವರು. ಸಾರ್ವಜನಿಕ ಸಮಾರಂಭಗಳಲ್ಲಿ ‘ಬಾಯಿಯೋ ಬೆಹನೋ...’ ಎಂದು ಆರಂಭವಾಗುತ್ತಿದ್ದ ಸಂಬೋಧನೆಯನ್ನು ಬದಲಿಸಿ ಮಹಿಳೆಯರಿಗೇ ಮೊದಲ ಆದ್ಯತೆ ನೀಡಿ ಗಮನಸೆಳೆದ ಅವರು ಕಾರ್ಯಕ್ರಮ ಮುಗಿಯುವಾಗ ಶ್ರೋತೃಗಳ ಅನುಮತಿಯನ್ನು ಬೇಡಿ ವಂದಿಸುತ್ತಿದ್ದ ರೀತಿಗೂ ಜನ ಮನಸೋತರು. ಅವರ ನಿರೂಪಣಾ ಕ್ರಮ ಮುಂದೆ ಒಂದು ಅನುಸರಿಸಲೇಬೇಕಾದ ಮಾದರಿಯಾಯಿತು. ಕೌನ್ ಬನೇಗಾ ಕರೋಡ್ಪತಿ ನಿರೂಪಕ ಅಮಿತಾಭ್ ಅವರಿಗೂ ಈ ಪ್ರಭಾವದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ! ಅವರ ಆರಂಭವನ್ನು ತುಸು ಬದಲಿಸಿದ ಅಮಿತಾಭ್ ಅವರು ‘ದೇವಿಯೋ ಔರ್ ಸಜ್ಜನೋ’ ಎಂದು ಶುರು ಮಾಡಿ ಮುಕ್ತಾಯವನ್ನು ಅವರಂತೆಯೇ ಮುಗಿಸುತ್ತಿದ್ದರು.

ಹೀಗೆ ರೇಡಿಯೊ ಕಾರ್ಯಕ್ರಮವನ್ನು ಭಾರತದ ಮೂಲೆ ಮೂಲೆಗೆ ತಲುಪಿಸಿ ನಿರೂಪಣೆಯ ಕಲಾವಿದನಿಗೆ ಸ್ಟಾರ್ಗಿರಿ ತಂದುಕೊಟ್ಟವರು ಅಮೀನ್ ಸಯಾನಿ ಅವರು.

1932ರ ಡಿಸೆಂಬರ್ 23ರಂದು ಮುಂಬೈಯ ಬಹುಭಾಷಿಕ ಕುಟುಂಬದಲ್ಲಿ ಜನಿಸಿದ ಅಮೀನ್ ಸಯಾನಿ ಅವರದು ಭಾರತ ಸ್ವಾತಂತ್ರ ಸಂಗ್ರಾಮ ಕಾಲದ ಎಲ್ಲ ಆದರ್ಶಗಳನ್ನು ಮೈಗೂಡಿಸಿಕೊಂಡ ವ್ಯಕ್ತಿತ್ವ. ಗುಜರಾತಿ, ಹಿಂದಿ, ಮರಾಠಿ, ಉರ್ದು ಮತ್ತು ಇಂಗ್ಲಿಷ್ ಭಾಷೆಗಳ ಪರಿಚಿತವಿದ್ದ ಅವರ ಕುಟುಂಬ ವರ್ಗ ಗಾಂಧೀಜಿಯ ಆದರ್ಶಗಳನ್ನು ಮೈಗೂಡಿಸಿಕೊಂಡಿತ್ತು. ತಾಯಿ ಕುಲ್ಸುಮ್ ಸಯಾನಿ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದರು. ಮಹಾತ್ಮರ ಆದೇಶದಂತೆ ಅವರು ಹಿಂದಿ, ಗುಜರಾತಿ ಮತ್ತು ಉರ್ದುವಿನಲ್ಲಿ ನವಸಾಕ್ಷರರಿಗಾಗಿ ರೆಹ್ಬಾರ್ ಎಂಬ ಪಾಕ್ಷಿಕವನ್ನು ಹೊರತರುತ್ತಿದ್ದರು. ಗಾಂಧಿಯವರ ಸಲಹೆಯಂತೆ ಸರಳವಾದ ಹಿಂದೂಸ್ತಾನಿ ಭಾಷೆಯಲ್ಲಿ ದೇಶದ ತರುಣರಿಗೆ ಮಾಹಿತಿ ಮತ್ತು ಮನರಂಜನೆಯನ್ನು ಕೇಂದ್ರವಾಗಿಟ್ಟುಕೊಂಡು ಹೊರಬರುತ್ತಿದ್ದ ಆ ಪತ್ರಿಕೆಗೆ ಎಳೆಯ ವಯಸ್ಸಿನಿಂದಲೇ ತಾಯಿಗೆ ನೆರವಾದ ಅಮೀನ್ ಸಂವಹನದ ಸೂಕ್ಷ್ಮಗಳನ್ನು ಅರಿತರು. ರೇಡಿಯೊ ನಿರೂಪಕರಾಗಿದ್ದ ಅಣ್ಣ ಹಮೀದ್ ಸಯಾನಿ ಅವರಿಂದ ಹದಿಮೂರನೇ ವಯಸ್ಸಿನಲ್ಲೇ ತರಬೇತಿ ಪಡೆದ ಅಮೀನ್ ಇಂಗ್ಲಿಷ್ ಭಾಷೆಯಲ್ಲಿ ಮುಂಬೈ ಆಕಾಶವಾಣಿಯ ಮಕ್ಕಳ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ತೋರಿದ ಕುಶಲತೆ ಎಲ್ಲರ ಗಮನ ಸೆಳೆಯಿತು. ಅವರು ಆಕಾಶವಾಣಿಯ ಹಿಂದಿ ಮತ್ತು ಇಂಗಿಷ್ ಕಾರ್ಯಕ್ರಮ ನಿರೂಪಕರಾಗಿ ಬೆಳೆಯಲು ಬಹುಕಾಲ ಬೇಕಾಗಲಿಲ್ಲ.

1952ರಲ್ಲಿ ರೇಡಿಯೊ ಸಿಲೋನ್ ಆರಂಭಿಸಿದ ಹಿಂದಿ ಚಲನಚಿತ್ರಗೀತೆಗಳ ಬಿನಾಕ ಗೀತ್ಮಾಲಾ ಸರಣಿಯ ನಿರೂಪಕರಾಗಿ ಅವಕಾಶ ಪಡೆದ ಅಮೀನ್ ಸಯಾನಿ ಮತ್ತೆ ಹಿಂದಿರುಗಿ ನೋಡಲಿಲ್ಲ. ಮೂವತ್ತು ನಿಮಿಷದ ಅವಧಿಯ ಕಾರ್ಯಕ್ರಮದ ಆರಂಭದಲ್ಲಿ ಪರಿಚಯ, ನಡುವೆ ಗೀತೆಗಳ ಮಾಹಿತಿ ಮತ್ತು ಕೊನೆಯಲ್ಲಿ ಕಾರ್ಯಕ್ರಮಕ್ಕೆ ಹಾಡುತ್ತಿದ್ದ ಮಂಗಳ ಚಿತ್ರಗೀತೆಗಳಷ್ಟೇ ಜನಪ್ರಿಯವಾಗಿ ಕೇಳುಗ ವಲಯದಲ್ಲಿ ಬಿರುಗಾಳಿ ಎಬ್ಬಿಸಿತು. ಎಲ್ಲರ ಮನವನ್ನು ಗೆಲ್ಲುವ ಸರಳವಾದ ಭಾಷೆ ಅವರ ನಿರೂಪಣೆಯ ಪ್ರಮುಖ ಯಶಸ್ಸು. ಪ್ರೇಕ್ಷಕರನ್ನು ಒಲಿಸಿಕೊಳ್ಳುವಂತೆ ಒಮ್ಮೊಮ್ಮೆ ಅವರ ಮಾತು ಲಲ್ಲೆಗರೆದರೆ, ಚಿತ್ರಗೀತೆಗಳಲ್ಲಿ ಅಡಕವಾದ ಸಂಭ್ರಮ, ವಿಷಾದ, ನೋವು, ಪ್ರಣಯ, ಸಂಘರ್ಷ ಮುಂತಾದ ಸಂಚಾರಿ ಭಾವಗಳನ್ನು ತಲುಪಿಸಲು ಮಾಡುತ್ತಿದ್ದ ಅವರ ಮಾತಿನ ಏರಿಳಿತಕ್ಕೆ ಕೇಳುಗರು ಶರಣಾದರು. ರೇಡಿಯೊ ಮನರಂಜನಾ ಮಾಧ್ಯಮದಲ್ಲಿ ಜನಪ್ರಿಯತೆಯ ತುಟ್ಟ ತುದಿಗೇರಿದ ಗೀತ್ಮಾಲಾ ಕಾರ್ಯಕ್ರಮ ಐವತ್ತರ ದಶಕದ ಹಿಂದೀ ಚಿತ್ರಗಳ ಯಶಸ್ಸಿಗೂ ಕಾರಣವಾಯಿತು. ಹಾಗಾಗಿ ಚಿತ್ರೋದ್ಯಮ, ರೇಡಿಯೊ ಮತ್ತು ಕೇಳುಗರ ನಡುವೆ ಗಟ್ಟಿಯಾದ ಬೆಸುಗೆ ಸಾಧ್ಯವಾಯಿತು. ಕೋಟ್ಯಂತರ ಕೇಳುಗರು ಸಯಾನಿ ಅವರ ಅಭಿಮಾನಿಗಳಾದ ಪವಾಡವೂ ಜರುಗಿತು. ನಿರೂಪಕನೊಬ್ಬ ಮೊದಲಬಾರಿಗೆ ಸೆಲೆಬ್ರಿಟಿಯಾಗಿ ಮೆರೆದ ವಿದ್ಯಮಾನವದು. ಸುಮಾರು ಏಳು ವರ್ಷಕಾಲ ರೇಡಿಯೊ ಸಿಲೋನ್ ಆಳಿದ ಬಿನಾಕಾ ಗೀತ್ಮಾಲಾ ನಂತರ ಆಲ್ ಇಂಡಿಯಾ ರೇಡಿಯೊದಲ್ಲಿ ಮುಂದುವರಿಯಿತು. 1994ರವರೆಗೆ ಆ ಸರಣಿ ಬೇರೆ ಪ್ರಾಯೋಜಿತ ಹೆಸರಿನಲ್ಲಿ ಒಂದೇ ರೀತಿಯ ಜನಪ್ರಿಯತೆ ಉಳಿಸಿಕೊಂಡು ಪ್ರಸಾರವಾಯಿತು.

ಅಮೀನ್ ಸಯಾನಿ ಅವರು ಮನರಂಜನಾ ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಲು ಕಾರಣಕರ್ತರಾದವರು ಭಾರತ ಗಣರಾಜ್ಯವಾದ ನಂತರದಲ್ಲಿ ರಚನೆಯಾದ ನೆಹರೂ ಸಂಪುಟದಲ್ಲಿ ವಾರ್ತಾ ಮತ್ತು ಪ್ರಸಾರ ಖಾತೆಯ ಮಂತ್ರಿಯಾಗಿದ್ದ ಬಾಲಕೃಷ್ಣ ವಿಶ್ವನಾಥ ಕೇಸ್ಕರ್ ಅವರು. ಒಂದೆಡೆ ಆಧುನಿಕತೆಯನ್ನು ಮೈಗೂಡಿಸಿಕೊಂಡು ಸಮಕಾಲೀನ ಆಗತ್ಯಗಳಿಗೆ ತಕ್ಕಂತೆ ಭಾರತವನ್ನು ಕಟ್ಟಲು ನೆಹರೂ ಹೆಣಗಿದರೆ ಸಂಪ್ರದಾಯಸ್ಥ ಕೇಸ್ಕರ್ ಪರಿಶುದ್ಧ ಸಂಸ್ಕೃತಿಯ ಭಾರತವನ್ನು ಕಟ್ಟಲು ಬಯಸಿದ್ದರು. ಇಸ್ಲಾಮ್ ಮತ್ತು ಪಾಶ್ಚಿಮಾತ್ಯರ ಪ್ರಭಾವದಿಂದ ಹೊಲಸೆದ್ದು ಹೋಗಿರುವ ಭಾರತೀಯ ಸಂಗೀತ, ಮುಖ್ಯವಾಗಿ, ಹಿಂದಿ ಸಿನೆಮಾ ಗೀತೆಗಳು ಸಮಾಜದ ಅಭಿರುಚಿ ಕೆಡಿಸಿದೆಯೆಂದು ಅವರು ಗಾಢವಾಗಿ ನಂಬಿದ್ದರು. ಸಿನೆಮಾ ಪ್ರಭಾವವನ್ನು ಅರಿತ ನೆಹರೂ ಅವರು ಚಿತ್ರೋದ್ಯಮವು ಸೃಜನಶೀಲವಾಗಿ ಮುನ್ನಡೆಯಲು ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವ, ರಾಷ್ಟ್ರೀಯ ಚಲನಚಿತ್ರ ಪುರಸ್ಕಾರ ಯೋಜನೆಗಳನ್ನು ನೆಹರೂ ಅವರು ಜಾರಿಗೆ ತಂದ ಕಾಲದಲ್ಲಿಯೇ ಕೇಸ್ಕರ್ ಅವರು ತಮ್ಮ ದೃಷ್ಟಿಯಲ್ಲಿ ಅಗ್ಗದ ಮನರಂಜನೆ ಎನಿಸಿದ ಚಲನಚಿತ್ರಗೀತೆಗಳ, ಕ್ರಿಕೆಟ್ ಕಾಮೆಂಟರಿ ಮುಂತಾದ ಕಾರ್ಯಕ್ರಮಗಳ ಪ್ರಸಾರಕ್ಕೆ ಸಂಪೂರ್ಣ ನಿಷೇಧ ಹೇರಿದರು. ಆಕಾಶವಾಣಿ ಕೇವಲ ಸುದ್ದಿ, ಮಾಹಿತಿ ಪ್ರಸಾರದ ಮಾಧ್ಯಮ ಮಾತ್ರವಲ್ಲದೆ ಚಿತ್ರಗೀತೆ, ಜನಪದ ಗೀತೆ, ವೀಕ್ಷಕ ವಿವರಣೆ ಮುಂತಾದ ಕಾರ್ಯಕ್ರಮಗಳ ಮನರಂಜನೆಯ ಮಾಧ್ಯಮವಾಗಿ ಜನಪ್ರಿಯವಾಗಿ ದೇಶದ ಮೂಲೆ ಮೂಲೆಯನ್ನು ತಲುಪಿತ್ತು. ಕೇಸ್ಕರ್ ಅವರ ನಿರ್ಧಾರದಿಂದ ಚಿತ್ರಗೀತೆಗಳ ಪ್ರಸಾರದ ಮೂಲಕ ಚಿತ್ರಗಳಿಗೆ ಪ್ರಚಾರ ಪಡೆಯುತ್ತಿದ್ದ ನಿರ್ಮಾಪಕರು ಹೌಹಾರಿದರು. ಚಿತ್ರಗಳ ಪ್ರಚಾರಕ್ಕೆ ಹೊಡೆತಬಿತ್ತು. ಚಿತ್ರಗೀತೆಗಳಿಗೆ ಒಲಿದಿದ್ದ ಜನತೆಗೆ ನಿರಾಶೆಯಾಯಿತು.

ಚಿತ್ರಗೀತೆಗಳ ಬಗ್ಗೆ ಆಕಾಶವಾಣಿ ಅನುಸರಿಸಿದ ಬಿಗಿ ಧೋರಣೆಯನ್ನು ರೇಡಿಯೊ ಸಿಲೋನ್ ತನ್ನ ಅನುಕೂಲಕ್ಕೆ ಬಗ್ಗಿಸಿಕೊಂಡಿತು. ಅಮೀನ್ ಸಯಾನಿ ಅವರನ್ನು ಕಾರ್ಯಕ್ರಮ ರೂಪಿಸಲು ಆಹ್ವಾನವಿತ್ತು. 1952ರಲ್ಲಿ ಹಿಂದಿ ಚಿತ್ರಗೀತೆಗಳ ಪ್ರಸಾರದ ಕಾರ್ಯಕ್ರಮ ರೂಪಿಸಿತು. ಅಮೆರಿಕ ಸೇನೆ ಬಿಟ್ಟುಹೋಗಿದ್ದ ಹ್ರಸ್ವ ತರಂಗಾಂತರಗಳ ಬಲಶಾಲಿ ಟ್ರಾನ್ಸ್ಮೀಟರ್ ಬಳಸಿ ಬಿನಾಕಾ ಗೀತ್ ಮಾಲಾ ಚಲನಚಿತ್ರ ಗೀತೆಗಳ ಪ್ರಸಾರದ ಸರಣಿಯು ಭಾರತ ಮತ್ತು ಅದರ ನೆರೆಹೊರೆಯ ದೇಶಗಳನ್ನು ತಲುಪಿತು. ಅದರೊಡನೆ ಅಮೀನ್ ಸಯಾನಿ ಅವರ ಧ್ವನಿ ಬಾರತದ ಮೂಲೆ ಮೂಲೆಯಲ್ಲಿ ಅನುರಣಿಸಿತು. ಚಿತ್ರಗೀತೆಗಳಷ್ಟೇ ಅವರ ನಿರೂಪಣೆ ಜನಪ್ರಿಯವಾಯಿತು. ದೇಶ ವಿದೇಶಗಳ ಕೇಳುಗರನ್ನು ಬೆಸೆಯುವ ಕೊಂಡಿಯಾಯಿತು.

ಅಮೀನ್ ಸಯಾನಿ ಅವರ ಮಾತಿಗೆ ಮೋಡಿಹಾಕುವ ಸಾಮರ್ಥ್ಯವಿತ್ತು. ದಾಖಲೆ ಎನಿಸಿರುವ 54,000 ಕಾರ್ಯಕ್ರಮಗಳನ್ನು ಅವರು ನಡೆಸಿಕೊಟ್ಟಿದ್ದಾರೆ. ಸುಮಾರು 19,000 ರೇಡಿಯೊ ಜಾಹೀರಾತು ಜಿಂಗಲ್ಗಳಿಗೆ ಕಂಠದಾನ ಮಾಡಿದ್ದಾರೆ. ಅನೇಕ ಹಿಂದಿ ಚಿತ್ರಗಳಲ್ಲಿ ಉದ್ಗೋಷಕರಾಗಿ ಕಾಣಿಸಿಕೊಂಡಿದ್ದಾರೆ. ಅವರು ಆಕಾಶವಾಣಿಗೆ ನಡೆಸಿಕೊಟ್ಟ ಚಿತ್ರ ರಂಗದ ಪ್ರಸಿದ್ಧ ಕಲಾವಿದರು ಮತ್ತು ತಂತ್ರಜ್ಞರ ಸಂದರ್ಶನಗಳು ಸಹ ಅಪಾರ ಜನಪ್ರಿಯತೆ ಪಡೆದಂಥವು. ಸೆಲೆಬ್ರಿಟಿಗಳಿಗೆ ಅವರ ಬದುಕಿಗೆ ಸಂಬಂಧಿಸಿದ ವಿಚಾರ- ವಿವಾದಗಳನ್ನು ಕುರಿತು ಪ್ರಶ್ನಿಸುವಾಗ ಮನುಷ್ಯ ಘನತೆಗೆ ಕುಂದುಂಟಾಗದ, ಎದುರು ಕೂತವರಿಗೆ ಮುಜುಗರವಾಗದ ಭಾಷೆಯನ್ನು ಬಳಸಿ ಅವರಿಂದ ಉತ್ತರ ಪಡೆಯುತ್ತಿದ್ದ ರೀತಿ ಇಂದಿಗೂ ಅಧ್ಯಯನ ಯೋಗ್ಯ. ಪ್ರಸಿದ್ಧಿಯ ತುತ್ತ ತುದಿಯಲ್ಲಿದ್ದ ಗಾಯಕಿ ಲತಾ ಮಂಗೇಷ್ಕರ್ ಅವರಿಗೆ ಗಾಯಕ ಮುಹಮ್ಮದ್ ರಫಿ ಜೊತೆಗಿನ ಜಗಳ, ಸಂಗೀತ ನಿರ್ದೇಶಕ ಒ.ಪಿ. ನಯ್ಯರ್ ಅವರೊಂದಿಗಿನ ಮುನಿಸು, ಸೋದರಿ ಆಶಾ ಭೋಂಸ್ಲೆಯ ಜೊತೆಗಿನ ಸ್ಪರ್ಧೆ, ಮದುವೆಯಾಗದೆ ಉಳಿಯಲು ಮಾಡಿದ ನಿರ್ಧಾರಕ್ಕೆ ಸಂಬಂಧಿಸಿದ ಸೂಕ್ಷ್ಮ ಪ್ರಶ್ನೆಗಳನ್ನು ಹಾಕಿಯೂ ಮುಜುಗರಗೊಳಿಸದೆ ಅವರಿಂದ ಉತ್ತರ ಪಡೆದ ಸಯಾನಿ ಸೆಲೆಬ್ರಿಟಿಗಳ ಸಂದರ್ಶನದ ಉತ್ತಮ ಮಾದರಿಯೊಂದನ್ನು ಹಾಕಿಕೊಟ್ಟರು.

ಸಯಾನಿ ಅವರ ನಿಧನವು ಐವತ್ತು ಅರವತ್ತರ ದಶಕದ ಹಿಂದಿ ಚಿತ್ರಗೀತೆಗಳ ಸುವರ್ಣ ಯುಗ ಹಾಗೂ ನೌಷಾದ್, ಮದನ್ ಮೋಹನ್, ಒ.ಪಿ. ನಯ್ಯರ್, ಖಯ್ಯಾಂ, ಸಿ. ರಾಮಚಂದ್ರ, ಅನಿಲ್ ಬಿಸ್ವಾಸ್, ಹೇಮಂತ್ ಕುಮಾರ್, ಶಂಕರ್ ಜೈ ಕಿಷನ್, ಎಸ್.ಡಿ. ಬರ್ಮನ್ ಮುಂತಾದ ಸಂಗೀತ ದಿಗ್ಗಜರು ಸಂಯೋಜಿಸಿದ ರಾಗಗಳನ್ನು, ಮುಹಮ್ಮದ್ ರಫಿ, ಲತಾ ಮಂಗೇಷ್ಕರ್, ಆಶಾ, ಹೇಮಂತ್ ಕುಮಾರ್, ಮನ್ನಾ ಡೇ, ಮುಖೇಶ್, ಕಿಶೋರ್ ಅವರಂಥ ಗಂಧರ್ವರು ಸುರಿಸಿದ ಗಾನಸುಧೆಯನ್ನು ದೇಶದ ಮೂಲೆ ಮೂಲೆಗೆ ತಲುಪಿಸಿ ಮನರಂಜನಾ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಿದ್ದ ಆಕಾಶವಾಣಿಯ ಅಭೂತಪೂರ್ವ ಯುಗದ ಅಂತ್ಯದಂತೆ ಕಾಣುತ್ತದೆ. ಆ ಸೃಜನಶೀಲ ಮನಸ್ಸುಗಳು ಸೃಷ್ಟಿಸಿದ ಸಂಗೀತ, ಸಾಹಿತ್ಯ ಮತ್ತು ಗಾಯನವನ್ನು ಪ್ರತೀ ಮನೆಯಲ್ಲಿ, ಕೇಳುಗರ ಹೃದಯದಲ್ಲಿ ಅನುರಣಿಸುವಂತೆ ದಾಟಿಸುವಲ್ಲಿ ಸಯಾನಿ ಅವರ ಕಾಣಿಕೆ ಮಹತ್ವದ್ದು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಡಾ.ಕೆ. ಪುಟ್ಟಸ್ವಾಮಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!