ಕೊನೆಗೆ ಅವರು ನನ್ನನ್ನೂ ಹುಡುಕಿ ಬಂದರು!

Update: 2024-02-22 08:18 GMT

ಮೊದಲಿಗೆ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ನ ಅಮಾನುಷವಾದ Concentration Campನ್ನು ಸಮರ್ಥಿಸಿದ್ದ ಮತ್ತು ಆ ಕುರಿತು ಸಂಭ್ರಮಿಸಿದ್ದ ಹಾಗೂ ಅದೇ ಹಿಟ್ಲರ್‌ನ final solutionನ ಭಾಗವಾಗಿ ತಾನೂ ಅದೇ Concentration Campನಲ್ಲಿ ಬಂಧನದಲ್ಲಿದ್ದು ಅತಿಕ್ರೂರವಾಗಿ ಶಿಕ್ಷೆ ಅನುಭವಿಸಿ ಅದೃಷ್ಟವಶಾತ್ ಬದುಕುಳಿದಿದ್ದ ಜರ್ಮನ್ ಪಾದ್ರಿ ‘ಪಾಸ್ಟರ್ ಮಾರ್ಟಿನ್ ನೆಮ್ಯೂಲರ್’ನನ್ನು ಸೋವಿಯತ್ ಮಿತ್ರಪಡೆಗಳು ಬಿಡುಗಡೆ ಮಾಡಿದ ನಂತರ ಮಾಡಿದ್ದ ‘‘ಕೊನೆಗೆ ಅವರು ನನ್ನನ್ನೂ ಹುಡುಕಿ ಬಂದರು!’’ ಭಾಷಣದ ಸ್ಫೂರ್ತಿಯಿಂದ ಬರೆದ ಬರಹ.

ಮನುವಾದಿಗಳ ವಿರುದ್ದ ಜನಸಾಮಾನ್ಯರಿಗೆ ಅರಿವು ಮೂಡಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಸಂಶೋಧಕ ಕಲಬುರ್ಗಿ, ಪತ್ರಕರ್ತೆ ಗೌರಿಯಕ್ಕ ಮುಂತಾದ ವಿಚಾರವಾದಿಗಳನ್ನು ಅವರುಗಳು ಹಿಂದೂವಿರೋಧಿ ಎಂದು ಅಪಪ್ರಚಾರ ನಡೆಸಿ ಕೊಂದು ಎಸೆದರು.

►  ಸಂಶೋಧಕನೂ ಅಲ್ಲದ, ಪತ್ರಕರ್ತನೂ ಅಲ್ಲದ ಮತ್ತು ಮನುವಾದಿಗಳ ಅಪಾಯದ ಕುರಿತು ಕಿಂಚಿತ್ತೂ ಅರಿವಿಲ್ಲದ ನಾನು ಆಗ ಕಂಡೂ ಕಾಣದಂತೆ ಕೈಕಟ್ಟಿ, ಬಾಯ್ಮುಚ್ಚಿ ಕುಳಿತಿದ್ದೆ.

ಅಸ್ಸಾಮಿನಲ್ಲಿ ನಡೆಸಲಾದ ‘ಸಿಎಎ ಸಮೀಕ್ಷೆ’ಯಲ್ಲಿ ತಮ್ಮ ಪೂರ್ವಜರ ದಾಖಲೆ ಒದಗಿಸಲಾಗದ ಬರೋಬ್ಬರಿ 12ಲಕ್ಷ ಅನಕ್ಷರಸ್ಥ ಕಡುಬಡ ಹಿಂದೂಗಳನ್ನು ಹಾಗೂ ಸುಮಾರು 6 ಲಕ್ಷ ಅದೇ ಅನಕ್ಷರಸ್ಥ ಕಡುಬಡ ಮುಸ್ಲಿಮರನ್ನು ಪೌರತ್ವ ಪಟ್ಟಿಯಿಂದ ಹೊರಗಿಟ್ಟು ಅವರುಗಳ ಆಧಾರ್ ಕಾರ್ಡ್, ರೇಷನ್ ಕಾರ್ಡ್, ವೋಟರ್ ಐಡಿ ಮುಂತಾದ ಮೂಲಭೂತ ಸೌಕರ್ಯಗಳನ್ನು ಕಿತ್ತುಕೊಂಡರು.

► ನಾನು ಅಸ್ಸಾಮಿ ಅಲ್ಲವಾದ ಕಾರಣ, ನನ್ನ ರಾಜ್ಯದಲ್ಲಿನ್ನೂ ಸಿಎಎ ಸಮೀಕ್ಷೆ ನಡೆದಿಲ್ಲವಾದ ಕಾರಣ ಮತ್ತು ನನ್ನ ಆಧಾರ್ ಕಾರ್ಡ್, ರೇಷನ್ ಕಾರ್ಡ್, ವೋಟರ್ ಐಡಿಗಳಂತೂ ನನ್ನ ಬ್ಯಾಗಿನಲ್ಲಿ ಭದ್ರವಾಗಿಯೇ ಇದ್ದ ಕಾರಣ ನಾನು ಆ ಕುರಿತು ತಲೆಕೆಡಿಸಿಕೊಳ್ಳಲು ಹೋಗಲಿಲ್ಲ.

ಕೊರೋನ ಲಾಕ್‌ಡೌನ್‌ನಂತಹ ದೇಶದ ವಿಪತ್ತಿನ ಸಂದರ್ಭಕ್ಕೆ ಬಳಕೆಯಾಗಬೇಕಿದ್ದ ಆರ್‌ಬಿಐ ಮೀಸಲು ನಿಧಿ 1 ಲಕ್ಷದ 76ಸಾವಿರ ಕೋಟಿ ರೂ.ಯನ್ನು ದೇಶದ ಆರ್ಥಿಕ ತಜ್ಞರುಗಳ ಪ್ರಬಲ ವಿರೋಧದ ನಡುವೆಯೂ ಸರಕಾರದ ವಶಕ್ಕೆ ಪಡೆದರು.

► ನಾನು ಆರ್ಥಿಕತಜ್ಞನಲ್ಲ. ನನಗಿದೆಲ್ಲ ಅರ್ಥವಾಗದು ಎಂಬ ಸಬೂಬು ತೆಗೆದು ನಾನು ಮೌನ ತಳೆದೆ.

ಯಾವುದೇ ಪೂರ್ವತಯಾರಿ ಇಲ್ಲದೇ ನೋಟ್‌ಬ್ಯಾನ್ ಮಾಡಿದರು. ಅದರ ದುಷ್ಪರಿಣಾಮವಾಗಿ ಮೂರು ಲಕ್ಷಕ್ಕೂ ಹೆಚ್ಚು ಸಣ್ಣ, ಮಧ್ಯಮ ಗಾತ್ರದ ಉದ್ಯಮಗಳು ನಷ್ಟಕ್ಕೊಳಗಾಗಿ ಮುಚ್ಚಲ್ಪಟ್ಟವು. ಅಲ್ಲಿನ ಕೋಟ್ಯಂತರ ಕಾರ್ಮಿಕರು ಕೆಲಸ ಕಳೆದುಕೊಂಡರು. ದೇಶದ ನಿರುದ್ಯೋಗದ ಮಟ್ಟ ಕಳೆದ 45 ವರ್ಷಗಳಷ್ಟು ಹಿಂದಿನ ಮಟ್ಟಕ್ಕೆ ಕುಸಿಯಿತು.

► ನಾನು ಯಾವುದೇ ಉದ್ಯಮ ಹೊಂದಿಲ್ಲ. ಜೊತೆಗೆ ನಾನು ಯಾವುದೇ ಸಂಸ್ಥೆಯ ಉದ್ಯೋಗಿಯೂ ಅಲ್ಲ ಎಂಬ ಕಾರಣಕ್ಕಾಗಿ ಆ ಕುರಿತು ತುಟಿಪಿಟಿಕ್ ಎನ್ನದೆ ಸುಮ್ಮನೆ ಉಳಿದೆ.

ಆನಂತರ ದಿಲ್ಲಿಯ ಜೆಎನ್‌ಯು ಮುಂತಾದೆಡೆ ಜನಪರ ಹೋರಾಟದ ಹಿನ್ನೆಲೆಯ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದರು ಮತ್ತು ಸುಳ್ಳು ಕೇಸು ಹಾಕಿ ಎಳೆಪ್ರಾಯದ ವಿದ್ಯಾರ್ಥಿಗಳನ್ನು ಜೈಲಿನಲ್ಲಿಟ್ಟರು.

►  ನಾನು ವಿದ್ಯಾರ್ಥಿ ಅಲ್ಲ, ನಮ್ಮ ಮನೆಯ ಮಕ್ಕಳ್ಯಾರೂ ಅಲ್ಲಿ ಕಲಿಯುತ್ತಿಲ್ಲ. ಹಾಗಾಗಿ ಅವರವರ ಸಮಸ್ಯೆಗಳನ್ನು ಅವರವರೇ ಸರಿಪಡಿಸಿಕೊಳ್ಳಲಿ ಎಂದು ಸುಮ್ಮನಾದೆ!

ಆ ನಂತರ ಸರಕಾರದ ಜನವಿರೋಧಿ ನೀತಿಯ ವಿರುದ್ಧ ಭಾಷಣ ಮಾಡುವ, ಹೋರಾಟ ಮಾಡುವ, ಲೇಖನ ಬರೆಯುವ ಸುಮಾರು 13 ಜನ ಕವಿಗಳನ್ನು, ಬುದ್ಧಿಜೀವಿಗಳನ್ನು, ಜನಪರ ಹೋರಾಟಗಾರರನ್ನು, ಜಾಮೀನು ರಹಿತ ಕೇಸು ಜಡಿದು ಜೈಲಲ್ಲಿ ಇಟ್ಟರು.

► ನಾನು ಬುದ್ಧಿಜೀವಿಯೂ ಅಲ್ಲ, ಹೋರಾಟಗಾರನೂ ಅಲ್ಲ, ಕವಿಯೂ ಅಲ್ಲ, ಕಲಾವಿದನೂ ಅಲ್ಲ ಎಂಬ ಕಾರಣಕ್ಕಾಗಿ ಬಾಯ್ಮುಚ್ಚಿ ಕುಳಿತು ಬಿಟ್ಟೆ!

ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಬಹುಮತದಿಂದ ಆಯ್ಕೆಯಾದ ಇತರ ಪಕ್ಷಗಳ ಸರಕಾರಗಳ ಶಾಸಕರುಗಳನ್ನು, ಮಂತ್ರಿಗಳನ್ನು ಐ.ಟಿ., ಈ.ಡಿ., ಸಿ.ಬಿ.ಐ. ಮೂಲಕ ಬೆದರಿಸಿ ಹಣ, ಅಧಿಕಾರದ ಅಮಿಷ ಒಡ್ಡಿ ತಮ್ಮದೇ ಪಕ್ಷದ ಸರಕಾರ ರಚಿಸುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸತೊಡಗಿದರು.

►  ನಾನು ಶಾಸಕನಲ್ಲ, ಸಂಸದನಲ್ಲ, ಸಚಿವನೂ ಅಲ್ಲವಾದ ಕಾರಣ ನನಗದು ಸಂಬಂಧಿಸಿದ ವಿಚಾರವಲ್ಲವೆಂದು ನಿರ್ಧರಿಸಿ ನಿರ್ಲಿಪ್ತನಾಗಿ ಉಳಿದೆ.

ನಂತರದಲ್ಲಿ ಅವರು ಮುಸ್ಲಿಮ್ ಎಂಬ ಕಾರಣಕ್ಕಾಗಿ, ಗೋಮಾಂಸದ ಹೆಸರಲ್ಲಿ ದೇಶದ ಗಡಿಕಾಯುವ ಸೈನಿಕನ ತಂದೆ ದಾದ್ರಿಯ ಅಖ್ಲಾಕ್ ಮುಂತಾದ ದೇಶವಾಸಿಗಳ ಮೇಲೆ ಅಲ್ಲಲ್ಲಿ ದಾಳಿ ನಡೆಸತೊಡಗಿದರು.

► ನಾನು ಗೋಮಾಂಸ ತಿನ್ನುವುದಿಲ್ಲ, ನಾನು ಮುಸ್ಲಿಮನೂ ಅಲ್ಲ, ನಂಗ್ಯಾಕೆ ಊರಿನ ಉಸಾಬರಿ ಎಂಬ ಕಾರಣಕ್ಕಾಗಿ ಕಂಡೂ ಕಾಣದಂತೆ ಸುಮ್ಮನಿದ್ದೆ!

ಆನಂತರ ಉನಾ ಮತ್ತಿತರೆಡೆ ಸತ್ತ ಪ್ರಾಣಿಗಳ ಚರ್ಮ ಸುಲಿವ ಉದ್ಯೋಗದ ದಲಿತರ ವಿರುದ್ಧ ಸುಳ್ಳು ವದಂತಿ ಹರಡಿ ದಾಳಿ ಮಾಡಿಸಿದರು.

► ನನ್ನದು ಚರ್ಮ ಸುಲಿವ ಉದ್ಯೋಗ ಅಲ್ಲ ಮತ್ತು ನಾನು ದಲಿತನೂ ಅಲ್ಲ ಎಂಬ ಕಾರಣಕ್ಕಾಗಿ ಆ ಘಟನೆಗಳನ್ನು ಕಂಡೂ ಕಾಣದಂತೆ ಕಣ್ಮುಚ್ಚಿ ಕುಳಿತೆ!

ಆನಂತರ ಕ್ರೈಸ್ತರ ಮೇಲೆ, ಚರ್ಚ್‌ಗಳ ಮೇಲೆ, ಪಾದ್ರಿಗಳ ಮೇಲೆ ಅಲ್ಲಲ್ಲಿ ದಾಳಿ ನಡೆಸಿದರು.

►  ನಾನು ಕ್ರೈಸ್ತನಲ್ಲ. ನನಗೇಕೆ ಊರ ಉಸಾಬರಿ ಎಂಬ ಕಾರಣಕ್ಕಾಗಿ ನಾನು ತಲೆಕೆಡಿಸಿಕೊಳ್ಳಲೇ ಇಲ್ಲ!

ಆನಂತರ ಉನ್ನಾವೊ ಎಂಬಲ್ಲಿ 17 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಎರಡು ಬಾರಿ ಸಾಮೂಹಿಕ ಅತ್ಯಾಚಾರ ನಡೆಸಿ, ಎರಡು ಬಾರಿ ಸಾಯಿಸಲು ಪ್ರಯತ್ನ ಪಟ್ಟು, ಮೂರನೇ ಬಾರಿ ಸುಟ್ಟು ಕೊಂದೇ ಬಿಟ್ಟರು. ನ್ಯಾಯ ಕೇಳಿದ ಆಕೆಯ ಹೆತ್ತವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಲಾಕಪ್‌ನಲ್ಲಿಟ್ಟು ಕೊಂದರು.

ಹಾಥರಸ್ ಎಂಬಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ದಲಿತ ಯುವತಿಯ ಶವದ ಮುಖವನ್ನು ಕೂಡಾ ಆಕೆಯ ಹೆತ್ತವರಿಗೆ ನೋಡಲು ಬಿಡದೆ ಪೊಲೀಸ್ ಭದ್ರತೆಯಲ್ಲಿ ರಾತ್ರೋರಾತ್ರಿ ಸುಟ್ಟು ಹಾಕಿದರು.

ಜಮ್ಮುವಿನಲ್ಲಿನ ಅಲೆಮಾರಿ ಜನರನ್ನು ಓಡಿಸುವ ನೆಪದಲ್ಲಿ ಆ ಸಮುದಾಯದ 8ವರ್ಷದ ಎಳೆಯ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿದರು ಮತ್ತು ಪೊಲೀಸರು ಆ ಅತ್ಯಾಚಾರಿ ಕೊಲೆಗಡುಕರನ್ನು ಬಂಧಿಸಿದಾಗ ಅವರ ಬಿಡುಗಡೆಗೆ ಒತ್ತಾಯಿಸಿ ರಾಷ್ಟ್ರಧ್ವಜ ಹಿಡಿದು ಮೆರವಣಿಗೆ ನಡೆಸಿದರು.

► ಹಾಗೆ ಅತ್ಯಾಚಾರಕ್ಕೊಳಗಾದ, ಕೊಲೆಯಾದ ಯುವತಿಯರು ನನ್ನ ಬಂಧುಗಳೂ ಅಲ್ಲ, ನಮ್ಮ ಜಾತಿಯವರೂ ಅಲ್ಲ ಎಂಬ ಕಾರಣಕ್ಕಾಗಿ ನಾನು ನಿರ್ಲಜ್ಜೆ ಮೆರೆದೆ!

ಈ ನಡುವೆ ಹಿಂದಿನ ಸರಕಾರಗಳು ಸ್ಥಾಪಿಸಿದ್ದ ದೇಶದ ಲಕ್ಷಾಂತರ ಕೋಟಿ ರೂ. ಬೆಲೆ ಬಾಳುವ ಸರಕಾರಿ ಆಸ್ತಿಗಳನ್ನು ಇವರ ಪಕ್ಷದ ಚುನಾವಣಾ ಖರ್ಚಿಗೆ ಹಣ ಸುರಿವ ಉದ್ಯಮಿಗಳಿಗೆ ಮೂರು ಕಾಸಿನ ಬೆಲೆಗೆ ಮಾರಾಟ ಮಾಡತೊಡಗಿದರು.

 ► ಸರಕಾರದ ಆಸ್ತಿ ಹೋದರೆ ನನಗೇನು? ಅದು ನನ್ನಪ್ಪನ ಆಸ್ತಿ ಅಲ್ಲವಲ್ಲ ಎಂದು ನಾನು ಆಗಲೂ ಬಾಯ್ಮುಚ್ಚಿ ಕುಳಿತಿದ್ದೆ!

ಮನಮೋಹನ್ ಸಿಂಗ್ ಸರಕಾರದ ಅವಧಿಯಲ್ಲಿ ಪ್ರತೀ ವಿಮಾನಕ್ಕೆ 526 ಕೋಟಿ ರೂ.ಗೆ ಕರಾರು ಆಗಿದ್ದ ಯುದ್ಧ ವಿಮಾನಕ್ಕೆ ಇವರ ಅವಧಿಯಲ್ಲಿ 1,670 ಕೋಟಿ ರೂ. ಕೊಟ್ಟು ಖರೀದಿಸಿದರು. ಆ ಮೂಲಕ ದೇಶದ ಖಜಾನೆಗೆ ಕನಿಷ್ಠ 30 ಸಾವಿರ ಕೋಟಿಗೂ ಹೆಚ್ಚು ನಷ್ಟವಾಯಿತು ಎಂದು ದೂರು ದಾಖಲಾಯಿತು.

► ನಾನು ಯಾವುದೇ ರಾಜಕೀಯ ಪಕ್ಷದ ಸದಸ್ಯನಲ್ಲವಾದ ಕಾರಣ ಆ ಕುರಿತು ಕಾಂಗ್ರೆಸ್‌ನವರು ಅಥವಾ ಕಮ್ಯೂನಿಸ್ಟರು ಹೋರಾಟ ನಡೆಸಿಕೊಳ್ಳಲಿ ಎಂದು ಸುಮ್ಮನೆ ಉಳಿದೆ.

ಆ ನಂತರ, ದೇಶದ ಕೃಷಿಭೂಮಿಯನ್ನು ಉದ್ಯಮಿಗಳ ಪಾಲು ಮಾಡುವ ಮೂಲಕ ರೈತರನ್ನು ಜೀತದಾಳುಗಳನ್ನಾಗಿ ಸುವ ಗುಪ್ತ ಕಾರ್ಯಸೂಚಿ ಹೊಂದಿರುವ ರೈತ ವಿರೋಧಿ ‘ಕೃಷಿ ಕಾಯ್ದೆ’ಗಳನ್ನು ಜಾರಿಗೊಳಿಸಲು ಮುಂದಾದರು.

► ನಾನು ಕೃಷಿಕನಲ್ಲ. ಬೇಕಿದ್ದರೆ ರೈತರೇ ಹೋರಾಟ ಮಾಡಿಕೊಳ್ಳಲಿ ಎಂದು ನಾನು ಸಮ್ಮನಾದೆ!

ಪ್ರತಿಭಟಿಸುತ್ತಿದ್ದ ಆ ರೈತರ ಮೇಲೆ ಕಾರು ಹತ್ತಿಸಿ ಕೊಂದು ಹಾಕಿದರು.

►  ಆ ಹತ್ಯಾಕಾಂಡದಲ್ಲಿ ನಾನು ಅಥವಾ ನನ್ನ ಬಂಧುಗಳ್ಯಾರೂ ಸತ್ತಿಲ್ಲ ಎಂಬ ಕಾರಣಕ್ಕಾಗಿ ನಾನು ಉಸಿರೆತ್ತದೆ ಕುಳಿತೆ!

ಆನಂತರ ಹಿಜಾಬ್ ಹೆಸರಿನಲ್ಲಿ ಬಾಲ್ಯದಿಂದಲೂ ಒಟ್ಟಿಗೇ ಆಡಿಬೆಳೆದ ಹಿಂದೂ-ಮುಸಲ್ಮಾನ ವಿದ್ಯಾರ್ಥಿಗಳ ನಡುವೆ ಸಂಘರ್ಷ ತಂದಿಟ್ಟರು. ಮತ್ತದೇ ಕಾರಣಕ್ಕಾಗಿ ಮುಸ್ಲಿಮ್ ಸಮುದಾಯದ ಎಳೆಯ ವಿದ್ಯಾರ್ಥಿನಿಯರನ್ನು ಶಾಲಾ, ಕಾಲೇಜಿನಿಂದ ದೂರವಿಟ್ಟರು.

► ನಾನು ವಿದ್ಯಾರ್ಥಿಯಲ್ಲ, ಮುಸ್ಲಿಮನೂ ಅಲ್ಲ ಎಂಬ ಕಾರಣಕ್ಕಾಗಿ ಕಂಡೂ ಕಾಣದಂತೆ ಕಣ್ಮುಚ್ಚಿ ಕುಳಿತೆ!

ಇದೇ ರೀತಿಯಾಗಿ ಆ ಎಲ್ಲರನ್ನೂ ಹಂತಹಂತವಾಗಿ ಮುಗಿಸಿದ ಅವರುಗಳ ಕಣ್ಣು ಇದೀಗ, ಅವರ ದೌರ್ಜನ್ಯವನ್ನು ಕಂಡೂ ಕಾಣದಂತೆ ಕಣ್ಮುಚ್ಚಿ ಕುಳಿತುಕೊಳ್ಳುವ ಮೂಲಕ ಪರೋಕ್ಷವಾಗಿ ಅವರ ಬೆಳವಣಿಗೆಗೆ ಕಾರಣನಾಗಿದ್ದ ನನ್ನಂತಹವರ ಮೇಲೂ ಬಿದ್ದಿದೆ.

 ► ಆದರೆ, ಅಂದಿನಿಂದ ಇಂದಿನವರೆಗೂ ಮಹಿಳೆಯರು, ಕಾರ್ಮಿಕರು, ರೈತರು, ವಿದ್ಯಾರ್ಥಿಗಳು, ಮುಸ್ಲಿಮರು, ಕ್ರೈಸ್ತರು, ದಲಿತರು, ಬುದ್ಧಿಜೀವಿಗಳು, ಜನಪರ ಹೋರಾಟಗಾರರು, ಕವಿಗಳು, ಸೈನಿಕರು, ಮಹಿಳೆಯರು, ಶೋಷಿತರು, ಜನಸಾಮಾನ್ಯರು ಮುಂತಾದ ಯಾರ ಪರವೂ ನಾನು ಮಾತನಾಡಿಲ್ಲವಾದ ಕಾರಣ ಈಗ ನನ್ನ ಪರ ಮಾತನಾಡಲು ಅವರು ಯಾರೂ ಜೀವಂತವಾಗಿ ಉಳಿದಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಚಂದ್ರಶೇಖರ ಶೆಟ್ಟಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!