ಜನೆರಿಕ್ ಔಷಧಕ್ಕೆ ಗುಣಮಟ್ಟದ ಖಾತರಿ ಇರಲಿ

Update: 2023-12-12 08:56 GMT

ಜನೆರಿಕ್ ಔಷಧ ಬರೆಯಲು ಒತ್ತಾಯಿಸುವ ಸರಕಾರ ಅವುಗಳ ಗುಣಮಟ್ಟದ ಖಾತ್ರಿ ನೀಡುವುದಿಲ್ಲ. ಏಕೆಂದರೆ ಗುಣಮಟ್ಟ ಪರೀಕ್ಷಿಸುವ ಸಿಬ್ಬಂದಿ ಸರಕಾರದ ಬಳಿಯಿಲ್ಲ. ಹೀಗಾಗಿ ಗಣನೀಯ ಪ್ರಮಾಣದ ಔಷಧಗಳು ಸರಕಾರದಿಂದ ಪರೀಕ್ಷೆಗೆ ಒಳಪಡುವುದಿಲ್ಲ. ಗಾತ್ರದಲ್ಲಿ ಯಾವುದೇ ಆಯುಧ ಮಾಫಿಯಾಗಳಿಗಿಂತ ಕಮ್ಮಿಯಿಲ್ಲದ ನಕಲಿ ಔಷಧ ಕಂಪೆನಿಗಳ ಜಾಲದ ಆಳ - ಅಗಲವನ್ನು ಪೂರ್ಣ ಅರಿಯುವ ಸಾಹಸವನ್ನು ಯಾರೂ ಮಾಡಿಲ್ಲ.

ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ಇತ್ತೀಚಿಗೆ ಹೊಸ ನಿಯಮಾವಳಿ ಸೂಚಿಸಿ, ರೋಗಿಗಳಿಗೆ ಔಷಧ ಬರೆಯುವಾಗ ಜನರಿಕ್ ಔಷಧಗಳನ್ನೇ ಬರೆಯಬೇಕು. ತಪ್ಪಿದಲ್ಲಿ ವೈದ್ಯರ ಪರವಾನಿಗೆ ರದ್ದು ಪಡಿಸಲಾಗುವುದು ಮತ್ತು ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ. ಈ ದೇಶದಲ್ಲಿ ಜನೆರಿಕ್ ಔಷಧಗಳ ಪ್ರಸ್ತಾಪ ಇದೇ ಮೊದಲಲ್ಲ. 2002ರ ಸೂಚನೆಯಲ್ಲೂ ಜನೆರಿಕ್ ಔಷಧಗಳ ಪ್ರಸ್ತಾಪವಿತ್ತು. ಆದರೆ, ಆಗ ಅದು ಕಡ್ಡಾಯವಾಗಿರಲಿಲ್ಲ. 2002ರಿಂದ ಇಲ್ಲಿಯವರೆಗೆ ಜನೆರಿಕ್ ಔಷಧ ಉತ್ಪಾದಿಸುವ ಔಷಧ ಕಂಪೆನಿಗಳ ಮೇಲೆ ನಿಗಾ ವಹಿಸಲಿಲ್ಲ. ಇತ್ತೀಚೆಗೆ ಜಾಗತಿಕ ಆರೋಗ್ಯ ಸಂಸ್ಥೆ ದಕ್ಷಿಣ ಆಫ್ರಿಕಾಕ್ಕೆ ಪೂರೈಸಿದ ಔಷಧಗಳಿಂದ ಮಕ್ಕಳ ಮರಣಕ್ಕೆ ಕಾರಣವಾಗಿದೆ ಎಂದು ಮಾನ ತೆಗೆದಿದ್ದರೂ, ಭಾರತ ಸರಕಾರ ಮತ್ತು ಎನ್ಎಂಸಿ ಎಚ್ಚರ ಗೊಳ್ಳದಿರುವುದು ದುರ್ದೈವದ ಸಂಗತಿ!

ಜನೆರಿಕ್ ಔಷಧ ಎಂದರೇನು?

ಮೂಲ ಔಷಧ ಕಂಪೆನಿಗಳು ತಯಾರಿಸಿದ ಔಷಧಕ್ಕೆ ‘ಬ್ರಾಂಡೆಡ್ ಔಷಧ’(Original molecule) ಎನ್ನುತ್ತಾರೆ. ಮೂಲ ಕಂಪೆನಿ ಬಿಟ್ಟು ಅನ್ಯರು ತಯಾರಿಸಿದ್ದನ್ನು ‘ಜನೆರಿಕ್ ಔಷಧ’ ಎನ್ನಲಾಗುತ್ತದೆ. ಮೊದಲಿಗೆ ಔಷಧವು ‘ಜನೆರಿಕ್’ ವರ್ಗದ್ದೋ, ‘ಬ್ರಾಂಡೆಡ್’ ವರ್ಗದ್ದೋ ಎಂಬುದನ್ನು ಸುಲಭವಾಗಿ ಪತ್ತೆ ಹಚ್ಚುವ ವಿಧಾನಗಳಿಲ್ಲ. ಔಷಧ ನೋಡಿ ಇದು ಯಾವ ವರ್ಗಕ್ಕೆ ಸೇರಿದ್ದು ಎಂದು ಗುರುತಿಸುವ ಚಿಹ್ನೆಗಳಿರುವುದಿಲ್ಲ. ಜನಸಾಮಾನ್ಯರನ್ನು ಬಿಡಿ, ವಾಸ್ತವದಲ್ಲಿ ಔಷಧಗಳನ್ನು ನೋಡುತ್ತಿದ್ದಂತೆಯೇ ಅದು ಜನೆರಿಕ್ ಅಥವಾ ಬ್ರಾಂಡೆಡ್ ಎಂದು ಗುರುತಿಸುವುದು ವೈದ್ಯರಿಗೂ , ಔಷಧ ಅಂಗಡಿಯಲ್ಲಿರುವ ಸಿಬ್ಬಂದಿಗೂ ಕಷ್ಟ! ಔಷಧದ ಬೆಲೆ ಕಡಿಮೆಯಿದ್ದರೆ ‘ಜನೆರಿಕ್’, ಹೆಚ್ಚಿದ್ದರೆ ‘ಬ್ರಾಂಡೆಡ್’ ಎಂಬ ನಂಬಿಕೆಯೂ ಕೆಲವರಲ್ಲಿದೆ. ಎಲ್ಲ ಔಷಧಗಳ ವಿಚಾರದಲ್ಲೂ ಇದು ಸರಿಯಲ್ಲ. ಕೆಲ ಜನೆರಿಕ್ ಔಷಧಗಳ ಬೆಲೆಯೂ ಹೆಚ್ಚು ಇರುತ್ತದೆ. ಕೆಲ ಬ್ರಾಂಡೆಡ್ ಔಷಧಗಳ ಬೆಲೆ ಜನೆರಿಕ್ ಗಳಿಗಿಂತಲೂ ಕಮ್ಮಿ ಇರುವುದೂ ಇದೆ!!

ಜನೆರಿಕ್ ಔಷಧಗಳ ಗುಣಮಟ್ಟ ಮತ್ತು ಪರಿಣಾಮಗಳ ಬಗ್ಗೆ ಸರಕಾರ ನಿರಂತರ ನಿಗಾ ಇಡುವಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಿ, ವೈದ್ಯರು ಮತ್ತು ಜನಸಾಮಾನ್ಯರಲ್ಲಿ ಜನೆರಿಕ್ ಔಷಧಗಳ ಬಗ್ಗೆ ವಿಶ್ವಾಸ ಮೂಡುವಂತೆ ಮಾಡಬೇಕು. ಅಂಗೈಯಲ್ಲಿ ಅರಮನೆ ತೋರಿಸುವ ನಮ್ಮ ಜನಪ್ರತಿನಿಧಿಗಳು ಡಂಬಾಚಾರಕ್ಕೆ ವಿದಾಯ ಹೇಳಿ, ವಾಸ್ತವದ ಹಿನ್ನೆಲೆಯನ್ನು ಜನರಿಗೆ ಮನದಟ್ಟು ಮಾಡಬೇಕು. ಆಗ ವೈದ್ಯರು ಸಮಾಜದಲ್ಲಿ ಗೌರವದಿಂದ ಬಾಳಲು ಸಾಧ್ಯ. ಜನೆರಿಕ್ ಔಷಧದ ಮಾರಾಟ ಮಳಿಗೆಗಳ ಸಂಖ್ಯೆ ಜನಸಂಖ್ಯೆಗನುಗುಣವಾಗಿ ಹೆಚ್ಚಾಗಬೇಕು. ಎಲ್ಲ ಊರಲ್ಲಿ ಎಲ್ಲ ಔಷಧಗಳು ಸಿಗುವಂತೆ ನೋಡಿಕೊಳ್ಳಬೇಕು. ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ, ವಿವಿಧ ಯೋಜನೆಗಳ ಅಡಿಯಲ್ಲಿ ಸರಕಾರದ ಸಹಾಯಧನ ಪಡೆಯುವ ನೆಟ್ವರ್ಕ್ ಆಸ್ಪತ್ರೆಗಳಲ್ಲಿ, ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಜನೆರಿಕ್ ಔಷಧ ಬಳಕೆಯನ್ನು ಕಡ್ಡಾಯಗೊಳಿಸಬೇಕು. ಇದರಿಂದ ಆಗುವ ಆರ್ಥಿಕ ಲಾಭಗಳ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಮನ ಮುಟ್ಟುವಂತೆ ಮನವರಿಕೆ ಮಾಡಿಕೊಡಬೇಕು.

ಗುಣಮಟ್ಟದ ಗ್ಯಾರಂಟಿ ಬೇಕು

ರಾಷ್ಟ್ರೀಯ ವೈದ್ಯಕೀಯ ಆಯೋಗ ಜನೆರಿಕ್ ಔಷಧಗಳನ್ನು ಬರೆಯುವುದನ್ನು ಕಡ್ಡಾಯ ಮಾಡುವ ಮೊದಲು, ಅದರ ಗುಣಮಟ್ಟದ ಬಗ್ಗೆ ಸರಕಾರ ಗ್ಯಾರಂಟಿ ಕೊಡಬೇಕು. ಗುಣಮಟ್ಟ ನಿಯಂತ್ರಣದ ಕಾರ್ಯಕ್ಕೆ ಮೊದಲು ಆದ್ಯತೆ ಕೊಟ್ಟು, ಅದರಲ್ಲಿ ಯಶಸ್ಸು ಸಾಧಿಸಿದ ಮೇಲೆ ಜನೆರಿಕ್ ಔಷಧ ಬರೆಯಲು ವೈದ್ಯರಿಗೆ ಆದೇಶಿಸಿದರೆ ಅದಕ್ಕೊಂದು ಅರ್ಥವಿರುತ್ತಿತ್ತು. ಔಷಧ ಗುಣಮಟ್ಟದ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಇರದೇ ಹೋದಲ್ಲಿ, ರೋಗಿಗಳ ಜೊತೆ ಅಹೋರಾತ್ರಿ ಹೋರಾಡುವ ವೈದ್ಯರು ಸಂಕಷ್ಟಕ್ಕೆ ಸಿಲುಕುವುದರಲ್ಲಿ ಸಂಶಯವಿಲ್ಲ. ಕಳಪೆ ಗುಣಮಟ್ಟದ ಜನೆರಿಕ್ ಔಷಧದಿಂದ ಅಪಾಯ ತಪ್ಪಿದ್ದಲ್ಲ. ರೋಗಿ ಗುಣಮುಖವಾಗುವುದಿಲ್ಲ. ಏಕೆಂದರೆ ಸೋಂಕು ಸದೆಬಡಿಯುವ ಶಕ್ತಿ ಔಷಧದಲ್ಲಿರುವುದಿಲ್ಲ. ಇದರಿಂದ ರೋಗಿ ಮತ್ತು ರೋಗಿಯ ಸಂಬಂಧಿಕರ ಸಿಟ್ಟಿಗೆ ವೈದ್ಯ ಗುರಿಯಾಗುವುದು ತಪ್ಪುವುದಿಲ್ಲ. ವೈದ್ಯರ ಮೇಲಿನ ಹಲ್ಲೆಗೆ ಇವು ಬೆಂಕಿಗೆ ತುಪ್ಪ ಸುರಿಯುವುದರಲ್ಲಿ ಸಂಶಯವಿಲ್ಲ. ರೋಗಿ ಚಿಕಿತ್ಸೆಯಿಂದ ಬದುಕಿ ಉಳಿಯಬೇಕು. ವೈದ್ಯ ರೋಗಿಗಳನ್ನು ಬದುಕಿಸಲು, ಬದುಕಿ ಉಳಿಯಬೇಕಾದರೆ ಸರಕಾರ ಇಂತಹ ಅವಸರದ ಆದೇಶಗಳಿಗೆ ಅನುವು ನೀಡದೆ, ಔಷಧ ಗುಣಮಟ್ಟದ ಕಡೆಗೆ ಗಮನ ಕೊಡುವುದು ಸೂಕ್ತ ಮತ್ತು ಸಮಂಜಸ.

ಸರಕಾರದ ಬಾಯಿಗೆ ಬೀಗ?

ಸರಕಾರ ಔಷಧ ಕಂಪೆನಿಗಳ ಉಸಾಬರಿಗೆ ಹೋಗದೆ, ಬಡಪಾಯಿ ವೈದ್ಯರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಲು ಹೊರಟಿರುವುದು ಸರಿಯಲ್ಲ. ಜನರ ಮುಂದೆ ಜನೆರಿಕ್ ಔಷಧಗಳ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ಮಂತ್ರಿ ಮಹೋದಯರು ಜನರ ಮೂಗಿಗೆ ತುಪ್ಪ ಹಚ್ಚಿ ತೆಪ್ಪಗಿರಿಸುವ ಆಟ ಆರೋಗ್ಯಕರವಾದದ್ದಲ್ಲ. ಇದು ವೈದ್ಯ-ರೋಗಿಗಳ ನಡುವಿನ ಸಂಬಂಧ ಹಳಸುವಂತೆ ಮಾಡುತ್ತದೆ. ಜನರ ಜೀವದೊಡನೆ ಚೆಲ್ಲಾಟವಾಡುವ ಹುಡುಗಾಟಕ್ಕೆ ವಿದಾಯ ಹೇಳಬೇಕು. ಬ್ರಾಂಡೆಡ್ ಔಷಧ ಕಂಪೆನಿಗಳು ವೈದ್ಯರಿಗೆ ಕಾಣಿಕೆಗಳನ್ನು, ಸೆಮಿನಾರ್ಗಳನ್ನು, ಪರದೇಶಿ ಟೂರ್ಗಳನ್ನು ‘ಸ್ಪಾನ್ಸರ್’ ಮಾಡಿ, ಮರುಳು ಮಾಡಿ ಕೊಳ್ಳೆ ಹೊಡೆಯುತ್ತವೆ ಎಂಬ ಆಪಾದನೆ ಇದೆ. ನೆನಪಿಡಿ: ವೈದ್ಯರಿಗೆ ಆದಾಯ ಬರುವುದು ರೋಗಿಗಳಿಂದಲೇ ವಿನಃ ಔಷಧ ಕಂಪೆನಿಗಳಿಂದಲ್ಲ. ಹೀಗಾಗಿ ರೋಗಿಗಳನ್ನು ವಾಸಿ ಮಾಡುವಲ್ಲಿ ವೈದ್ಯರು ಖಂಡಿತವಾಗಿ ರಾಜಿ ಮಾಡಿಕೊಳ್ಳಲಾರರು.

ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ಪ್ರಕಟಣೆಯಂತೆ, ಭಾರತದ ಔಷಧಗಳ ಪೈಕಿ ಶೇ.20ರಷ್ಟು ನಕಲಿ. ಶೇ.12 ರಷ್ಟು ಗುಣಮಟ್ಟವಿಲ್ಲದವು (ಒಟ್ಟು ಶೇ.32). ಜನೆರಿಕ್ ಔಷಧ ಬರೆಯಲು ಒತ್ತಾಯಿಸುವ ಸರಕಾರ ಅವುಗಳ ಗುಣಮಟ್ಟದ ಖಾತ್ರಿ ನೀಡುವುದಿಲ್ಲ. ಏಕೆಂದರೆ ಗುಣಮಟ್ಟ ಪರೀಕ್ಷಿಸುವ ಸಿಬ್ಬಂದಿ ಸರಕಾರದ ಬಳಿಯಿಲ್ಲ. ಹೀಗಾಗಿ ಗಣನೀಯ ಪ್ರಮಾಣದ ಔಷಧಗಳು ಸರಕಾರದಿಂದ ಪರೀಕ್ಷೆಗೆ ಒಳಪಡುವುದಿಲ್ಲ. ಗಾತ್ರದಲ್ಲಿ ಯಾವುದೇ ಆಯುಧ ಮಾಫಿಯಾಗಳಿಗಿಂತ ಕಮ್ಮಿಯಿಲ್ಲದ ನಕಲಿ ಔಷಧ ಕಂಪೆನಿಗಳ ಜಾಲದ ಆಳ - ಅಗಲವನ್ನು ಪೂರ್ಣ ಅರಿಯುವ ಸಾಹಸವನ್ನು ಯಾರೂ ಮಾಡಿಲ್ಲ. ಅವರು ನಿರ್ಮಿಸುವ ಚಕ್ರವ್ಯೆಹವನ್ನು ಭೇದಿಸುವುದು ಕಷ್ಟದ ಕೆಲಸ. ಸರಕಾರ ಚಾಪೆ ಕೆಳಗೆ ನುಗ್ಗಿದರೆ, ನಕಲಿ ಔಷಧ ಕಂಪೆನಿಗಳು ರಂಗೋಲಿ ಕೆಳಗೆ ನುಸುಳುವ ಕಲೆಯನ್ನು ಕರಗತ ಮಾಡಿಕೊಂಡಿರುತ್ತವೆ.

ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಅಗ್ಗದ ಗುಣಮಟ್ಟದ ಜನೆರಿಕ್ ಔಷಧಗಳನ್ನು ಪೂರೈಸುವ ಕೆಲವು ಭಾರತೀಯ ಔಷಧ ಕಂಪೆನಿಗಳು, ದೇಶೀಯವಾಗಿ ಕಳಪೆ ಔಷಧಗಳನ್ನು ಮಾರಾಟ ಮಾಡುತ್ತಿವೆ. ಮುಂಬೈ, ಗುಜರಾತಿನ ಶೇಠ್ಜಿಗಳ ಹಿತ್ತಲಲ್ಲೇ ಜನೆರಿಕ್ ಔಷಧಗಳು ತಯಾರಾಗುತ್ತವೆ. ನೋಡಲು ಬ್ರಾಂಡೆಡ್ ಔಷಧ ಕಂಪೆನಿಗಳ ಪ್ಯಾಕ್ಗಳನ್ನು ನಾಚಿಸುವಷ್ಟು ಆಕರ್ಷಕ ಪ್ಯಾಕ್ಗಳನ್ನು ಹೊಂದಿರುತ್ತವೆ. ಔಷಧ ವಿತರಕರಿಗೆ ಕಡಿಮೆ ದರಕ್ಕೆ ಕೊಡುತ್ತವೆ. ಪ್ಯಾಕ್ ಮೇಲಿನ ಎಂ.ಆರ್.ಪಿ. ಮಾತ್ರ ಹೆಚ್ಚು ಕಡಿಮೆ ಬ್ರಾಂಡೆಡ್ ಔಷಧ ಕಂಪೆನಿಗಳಷ್ಟೇ ಇರುತ್ತದೆ. ಇದರಿಂದ ಜನರಿಗೇನು ಲಾಭವಾಗುವುದಿಲ್ಲ. ಔಷಧ ಅಂಗಡಿಯವರಿಗೆ ಮಾತ್ರ ಹಣ ಗಳಿಸುವ ನಿಧಿ ಆಗಿರುತ್ತವೆ.

ಅಂಗಡಿಯವರಿಗೆ ಲಾಭ ಮುಖ್ಯ

ಔಷಧ ಅಂಗಡಿಯವರು ತಮಗೆ ಯಾವ ಕಂಪೆನಿಯ ಔಷಧ ಮಾರಿದರೆ ಹೆಚ್ಚು ಲಾಭ ಸಿಗುತ್ತದೆ ಎನ್ನುವುದನ್ನು ಅವಲಂಬಿಸಿ ಔಷಧ ತರಿಸುತ್ತಾರೆ. ಅವರಿಗೆ ರೋಗಿಯ ರೋಗ ಗುಣಮುಖವಾಗುವುದೋ ಇಲ್ಲವೋ ಎಂಬುದು ಗೌಣ. ನಮ್ಮ ಜನರಿಗೂ ಔಷಧ ಅಂಗಡಿಯವರೇ ಮೊದಲ ವೈದ್ಯರು. ಅವರಿಗೆ ತಮ್ಮ ತೊಂದರೆಗಳನ್ನು ತಿಳಿಸಿ, ಅಂಗಡಿಯವರು ಕೊಟ್ಟ ಔಷಧ ನುಂಗಿ, ಕಡಿಮೆಯಾಗದಿದ್ದಲ್ಲಿ ವೈದ್ಯರನ್ನು ಕಾಣುತ್ತಾರೆ. ವೈದ್ಯರ ಪ್ರಿಸ್ಕ್ರಿಪ್ಶನ್ ಚೀಟಿ ಇಲ್ಲದೆ ಔಷಧ ಮಾರುವುದು ಅಪರಾಧ. ವೈದ್ಯರ ಚೀಟಿಯನ್ನು ದೊಡ್ಡ ದೊಡ್ಡ ನಗರಗಳಲ್ಲಿ ಕೇಳುತ್ತಾರೆ. ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ‘ಕೌಂಟರ್ ಸೇಲ್ ಬ್ಯುಸಿನೆಸ್’ ಅವ್ಯಾಹತವಾಗಿ ಸಾಗಿರುತ್ತದೆ. ಒಂದೇ ಔಷಧವನ್ನು ತಯಾರಿಸುವ 2 ಕಂಪೆನಿಗಳು ಬ್ರಾಂಡೆಡ್ ಮತ್ತು ಜನೆರಿಕ್ ಎರಡರ ಮೇಲೂ ಎಂ.ಆರ್.ಪಿ. ಒಂದೇ ಇರುತ್ತದೆ. ಉದಾ: 100ರೂ. ಇದೆ ಎಂದಿಟ್ಟುಕೊಳ್ಳೋಣ. ಬ್ರಾಂಡೆಡ್ ಔಷಧ ಕಂಪೆನಿಯವರು ಔಷಧ ಅಂಗಡಿಯವರಿಗೆ 90ರೂ.ಗೆ ಕೊಡುತ್ತಾರೆ. ಆದರೆ, ಜನೆರಿಕ್ ಔಷಧ ತಯಾರಿಸಿದ ಕಂಪೆನಿ ಅದೇ ಔಷಧವನ್ನು ಅಂಗಡಿಯವರಿಗೆ 50 ರೂ.ಗೆ ಕೊಡುತ್ತಾರೆ. ಅಂಗಡಿಯವರಿಗೆ ಲಾಭ ಮುಖ್ಯ. ಈ ಹಿನ್ನೆಲೆಯಲ್ಲಿ ಅವರು ಜನೆರಿಕ್ ಔಷಧ ಮಾರಿ ಲಾಭ ಪಡೆಯುತ್ತಾರೆ. ಇದರಿಂದ ಹಾವು ಬಡಿದು ಹದ್ದಿಗೆ ಹಾಕಿದಂತಾಗುತ್ತದೆ. ರೋಗಿಯ ಕಿಸೆಯ ಕಾಸು ಕರಗುತ್ತದೆ. ರೋಗಿ ಗುಣವಾಗದಿದ್ದುದಕ್ಕೆ ವೈದ್ಯರ ಮಾನ ಹರಾಜಾಗುತ್ತದೆ. ಈ ವ್ಯವಸ್ಥೆಗೆ ಮೊದಲು ಕಡಿವಾಣ ಬೀಳಬೇಕು.

ಪೂರ್ವಸಿದ್ಧತೆ ಬೇಕು

ಸರಕಾರ ಜನೆರಿಕ್ ಔಷಧಗಳನ್ನು ಮಾರುಕಟ್ಟೆಯಲ್ಲಿ ಅನುಮತಿಸುವ ಮೊದಲು ಪ್ರತೀ ಬ್ಯಾಚ್ ಔಷಧಗಳ ಗುಣಮಟ್ಟವನ್ನು ಪರಿಶೀಲಿಸಬೇಕು. ಗುಣಮಟ್ಟದ ತಪಾಸಣೆ ಮಾಡದ ಲೋಪಗಳ ಲಾಭ ಪಡೆದು ಹಲವು ಕಂಪೆನಿಗಳು ಗುಣಮಟ್ಟವಿಲ್ಲದ ಔಷಧಗಳನ್ನು ಮುಕ್ತವಾಗಿ ತಯಾರಿಸುತ್ತಿವೆ. ಗುಣಮಟ್ಟದ ಜನೆರಿಕ್ ಔಷಧಗಳ ದೇಶೀಯ ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಲಭ್ಯವಾಗುವವರೆಗೆ ತನ್ನ ನಿರ್ಧಾರವನ್ನು ಮುಂದೂಡುವಂತೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಭಾರತೀಯ ವೈದ್ಯಕೀಯ ಮಂಡಳಿ(ಎನ್ಎಂಸಿ)ಗೆ ಮನವಿ ಮಾಡಿದೆ. ಐಎಂಎ ಪ್ರತಿನಿಧಿಗಳ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಕೇಂದ್ರ ಆರೋಗ್ಯ ಸಚಿವರು ಎನ್ಎಂಸಿಗೆ ಸೂಚನೆ ನೀಡಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಎನ್ಎಂಸಿ ತನ್ನ ಆದೇಶವನ್ನು ತಡೆಹಿಡಿದಿದೆ. ಈ ಬಗ್ಗೆ ಪೂರ್ವ ಸಿದ್ಧತೆ ಮಾಡಿಕೊಂಡು, ಪರಿಶೀಲಿಸಿ, ಚರ್ಚಿಸಿ ಆದೇಶಿಸುವ ಮನೋಭಾವವನ್ನು ರೂಢಿಸಿಕೊಳ್ಳುವುದು ಸೂಕ್ತ.

ಔಷಧ ಉತ್ಪಾದಿಸುವ ಕಂಪೆನಿಗಳಿಗೆ ಪರವಾನಿಗೆ ನೀಡುವಾಗ, ಔಷಧಗಳ ಗುಣಮಟ್ಟವನ್ನು ನಿರ್ಧರಿಸುವಾಗ ‘ಅಂಡರ್ ಟೇಬಲ್’ ನಡೆಯುವ ಅವ್ಯವಹಾರಗಳಿಗೆ ಅವಕಾಶ ನೀಡಬಾರದು .ಆಗ ಮಾತ್ರ ಜನೆರಿಕ್ ಔಷಧಗಳ ಬಗ್ಗೆ ವೈದ್ಯರಲ್ಲಿ ಮತ್ತು ಜನರಲ್ಲಿ ವಿಶ್ವಾಸ ಮೂಡುತ್ತದೆ. ಬಳಕೆ ಹೆಚ್ಚಾಗುತ್ತದೆ. ಜನರ ಮೇಲಿನ ಆರ್ಥಿಕ ಹೊರೆ ಕುಗ್ಗುತ್ತದೆ. ಭಾರತದ ಫಾರ್ಮಾವಲಯವು ಔಷಧ ಉತ್ಪಾದನೆಯಲ್ಲಿ ವಿಶ್ವದ ಮೂರನೇ ಸ್ಥಾನದಲ್ಲಿದೆ. ಪ್ರಪಂಚದಾದ್ಯಂತ ಬಳಸಲಾಗುವ ಪ್ರತಿಶತ 20ರಷ್ಟು ಜನೆರಿಕ್ ಔಷಧಗಳನ್ನು ಭಾರತದಲ್ಲಿ ತಯಾರಿಸಲಾಗುತ್ತದೆ. ಅಮೆರಿಕದಲ್ಲಿ ಬಳಸಲಾಗುತ್ತಿರುವ ಪ್ರತಿಶತ 40ರಷ್ಟು ಜನೆರಿಕ್ ಔಷಧಗಳನ್ನು ಭಾರತದಿಂದ ತರಿಸಿಕೊಳ್ಳುವುದು. ಯು.ಕೆ.ಯಲ್ಲಿ ಬಳಸಲಾಗುವ ಜನೆರಿಕ್ ಔಷಧಗಳ ನಾಲ್ಕನೇ ಒಂದು ಭಾಗವು ಭಾರತದಿಂದ ಹೋಗುತ್ತದೆ. ಆದರೆ ಭಾರತದಲ್ಲಿ ಅವುಗಳ ಬಳಕೆ ಕೇವಲ ಪ್ರತಿಶತ 10 ಮಾತ್ರ. ಹೊರದೇಶಕ್ಕೆ ಹೋಗುವ ಜನೆರಿಕ್ ಔಷಧಯ ಗುಣಮಟ್ಟ ಬೇರೆ, ನಮ್ಮ ದೇಶದ ಮಾರುಕಟ್ಟೆಯಲ್ಲಿ ಸಿಗುವ ಜನೆರಿಕ್ ಔಷಧಯ ಗುಣಮಟ್ಟ ಬೇರೆ. ಈ ತಾರತಮ್ಯ ಔಷಧ ಉತ್ಪಾದಿಸುವ ಕಂಪೆನಿಗಳಿಂದ ಕಣ್ಮರೆ ಆಗಬೇಕು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!