ಗ್ರಹಾಂ ಸ್ಟೇನ್ಸ್ , ಇಬ್ಬರು ಮಕ್ಕಳನ್ನು ಸಜೀವ ಸುಟ್ಟ ಪ್ರಕರಣಕ್ಕೆ 25 ವರ್ಷಗಳು

Update: 2024-02-09 04:27 GMT
Editor : Ismail | Byline : ಆರ್. ಜೀವಿ

ಇಂದು ಜನವರಿ 22 . ​ಜನವರಿ 22 ಎಂದಾಕ್ಷಣ ದೇಶ ಪಾಪಪ್ರಜ್ಞೆಯಿಂದ ತಲೆತಗ್ಗಿಸುತ್ತದೆ. ಈ ದೇಶದಲ್ಲಿ ಬಂದು ನೆಲೆಸಿ​, ಇಲ್ಲಿ ಯಾರೂ ಕೇಳಿ ನೋಡದ ಕುಷ್ಠರೋಗಿಗಳ ಪಾಲಿಗೆ ದೇವರಂತಿದ್ದ, ಅವರ ಸೇವೆಯಲ್ಲಿ ತೊಡಗಿದ್ದ ಕ್ರೈಸ್ತ ಮಿಷನರಿಯೊಬ್ಬರನ್ನು ಅವರ ಇಬ್ಬರು ಪುಟ್ಟ ಮಕ್ಕಳ ಸಹಿತ ಜೀವಂತ ಸುಟ್ಟುಹಾಕಿದ ಅತ್ಯಂತ ಹೇಯ ಕೃತ್ಯಕ್ಕೆ, ಧರ್ಮದ ಹೆಸರಿನಲ್ಲಿ ಈ ದೇಶದಲ್ಲಿ ನಡೆದ ಅತ್ಯಂತ ಅಮಾನುಷ ಘಟನೆಯೊಂದಕ್ಕೆ ಸಾಕ್ಷಿಯಾದ ದಿನ ಅದು.

ಅದು 1999ರ ಜನವರಿ 22. ಘಟನೆ ನಡೆದದ್ದು ಒಡಿಶಾದ ಕಿಯೋಂಜರ್ ಜಿಲ್ಲೆಯ ಮನೋಹರಪುರ ಎಂಬ ಹಳ್ಳಿಯಲ್ಲಿ. ಅವತ್ತು ನಡುರಾತ್ರಿ ಆ ಊರಿನ ಚರ್ಚ್ ಎದುರಲ್ಲಿ ತಮ್ಮದೇ ವ್ಯಾನಿನಲ್ಲಿ ಮಲಗಿದ್ದ ಕ್ರೈಸ್ತ ಮಿಷನರಿ ಗ್ರಹಾಂ ಸ್ಟೇನ್ಸ್ ಮತ್ತವರ ಇಬ್ಬರು ಮಕ್ಕಳು 10 ವರ್ಷದ ಫಿಲಿಪ್ಸ್ ಮತ್ತು 7 ವರ್ಷದ ​ತಿಮೋತಿಯನ್ನು ಜೀವಂತವಾಗಿ ಸುಟ್ಟುಹಾಕಲಾಯಿತು.

ಆ ಅಸಹಾಯಕ​, ಅಮಾಯಕ ಜೀವಗಳು ಬೆಂಕಿಯಲ್ಲಿ ಬೇಯುತ್ತಿದ್ದಾಗ, ಬೆಂಕಿಯಿಟ್ಟಿದ್ದ ಧರ್ಮಾಂಧ ರಕ್ಕಸರ ಗುಂಪು​ ವ್ಯಾನಿನ ಸುತ್ತ ಸುತ್ತುವರಿದು ಜೈ​ಶ್ರೀರಾಮ್ ಎಂದು ಅರಚುತ್ತಿತ್ತಂತೆ. ​ಇಡೀ ​ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ, ಇವತ್ತಿಗೂ ನೆನೆದರೆ ಎದೆ ನಡುಗಿಸುವಂಥ ಆ ಘಟನೆ ನಡೆದು ಇವತ್ತಿಗೆ 25 ವರ್ಷಗಳು.

ಆ ದುರ್ದಿನವನ್ನು, ಅವತ್ತು ನಡುರಾತ್ರಿ ಅಲ್ಲೇನು ನಡೆಯಿತು ಎನ್ನುವುದನ್ನು, ಇವತ್ತಿನ ಮತ್ತು ಅವತ್ತಿನ ಆಡಳಿತಾರೂಢ ಪಕ್ಷದ ಪರಿವಾರದವರು ಅವತ್ತು ಎಂಥ ಕ್ರೂರ ಅಟ್ಟಹಾಸಗೈದಿದ್ದರು ಎನ್ನುವುದನ್ನು ಒಮ್ಮೆ ನೆನಪು ಮಾಡಿಕೊಳ್ಳೋಣ.

ಮನೋಹರಪುರ. ಒಡಿಶಾದ ಕಿಯೋಂಜರ್ ಜಿಲ್ಲೆಯ ಸಣ್ಣ ಹಳ್ಳಿ ಅದು. ಆದರೆ ಆ ಮನೋಹರಪುರದಲ್ಲಿ ಅವತ್ತು ನಡುರಾತ್ರಿ ನಡೆದುಹೋದದ್ದು ಮಾತ್ರ ​ಅತ್ಯಂತ ​ಭಯಾನಕ ಘಟನೆ. 30 ವರ್ಷಗಳಿಗೂ ಹೆಚ್ಚು ಸಮಯದಿಂದಲೂ ಆ ರಾಜ್ಯದಲ್ಲಿ ನೆಲೆಸಿದ್ದ, ತನ್ನ ದೇಶಕ್ಕೂ ಮರಳದೆ, ಇಲ್ಲಿನ ಬಡ ಮತ್ತು ಅಮಾಯಕ ಜೀವಗಳ ಸೇವೆಯಲ್ಲೇ ದೇವರನ್ನು ಕಂಡುಕೊಂಡಿದ್ದ ಪುಣ್ಯಾತ್ಮನೊಬ್ಬನನ್ನು ಕಡೆಗೆ ಆತನ ಏನೂ ಅರಿಯದ ಕಂದಮ್ಮಗಳನ್ನೂ ಬಿಡದೆ ​ಜೀವಂತವಾಗಿ ಸುಟ್ಟುಹಾಕಿದ ಘಟನೆ ಆ ಸಣ್ಣ ಹಳ್ಳಿಯಲ್ಲಿ ನಡೆದೇ ಹೋದಾಗ, ಸಹೋದರತೆಯ ಹೆಸರಲ್ಲಿ ಈ ದೇಶಕ್ಕಿದ್ದ ಸೌಂದರ್ಯವೂ ಸುಟ್ಟು ಬೂದಿಯಾಗಿತ್ತು.

ಆಸ್ಟ್ರೇಲಿಯಾ ಮೂಲದವರಾಗಿದ್ದ 58 ವರ್ಷದ ಕ್ರೈಸ್ತ ಮಿಷನರಿ ಗ್ರಹಾಂ ಸ್ಟೇನ್ಸ್, ಅವರ ಇಬ್ಬರು ಪುತ್ರರಾದ 10 ವರ್ಷದ ಫಿಲಿಪ್ಸ್ ಮತ್ತು 7 ವರ್ಷದ ​ತಿಮೋತಿ ಆ ಹಳ್ಳಿಯ ಚರ್ಚ್‌ನ ಮುಂದೆ ತಮ್ಮ ವ್ಯಾನಿನಲ್ಲಿ ಮಲಗಿದ್ದಾಗ ಧರ್ಮಾಂದ ಕಟುಕರ ಆ ದಾಳಿ ನಡೆದಿತ್ತು.

ಭಜರಂಗ ದಳ​ದೊಂದಿಗೆ ಗುರುತಿಸಿಕೊಂಡಿದ್ದ ಅಲ್ಲಿನ ಕ್ರಿಮಿನಲ್ ದಾರಾ ಸಿಂಗ್ ಎಂಬವನ ನೇತೃತ್ವದ ಗುಂಪು ಅಂಥ ಹೀನ ಕೃತ್ಯ ನಡೆಸಿತ್ತು.ಗ್ರಹಾಂ ಸ್ಟೇನ್ಸ್ ಸುಮಾರು 30 ವರ್ಷಗಳಿಂದಲೂ ಒಡಿಶಾದ ಮಯೂರ್‌ಭಂಜ್ ಜಿಲ್ಲೆಯಲ್ಲಿ ಕುಷ್ಠ ರೋಗಿಗಳಿಗಾಗಿ ಕೆಲಸ ಮಾಡುತ್ತಿದ್ದರು. ಅವರು 1965ರಲ್ಲಿ ಆಸ್ಟ್ರೇಲಿಯಾದಿಂದ ಭಾರತಕ್ಕೆ ಬಂದಿದ್ದರು ಮತ್ತು ಇಲ್ಲಿಯೇ ನೆಲೆಸಿದ್ದರು. ಅವರ ಕುಟುಂಬ ಬಾರಿಪಾಡದಲ್ಲಿ ಕುಷ್ಠರೋಗಿಗಳ ಆಶ್ರಮವನ್ನು ತೆರೆದಿತ್ತು.

ಅಲ್ಲಿನ ಆದಿವಾಸಿಗಳು ಮತ್ತು ಕುಷ್ಠರೋಗಿಗಳಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿರಿಸಿದ್ದ​ರು. ಆದಿವಾಸಿಗಳನ್ನು ಬಲವಂತವಾಗಿ ಮತಾಂತರ ಮಾಡುತ್ತಿದ್ದಾರೆ ಎಂಬುದು ಅವರನ್ನು ಕೊಂದವರ ಆರೋಪವಾಗಿತ್ತು. ಅವತ್ತು ರಾತ್ರಿ ಸ್ಟೇನ್ಸ್ ಹಬ್ಬಕ್ಕಾಗಿ ಆ ಹಳ್ಳಿಗೆ ಹೋಗಿದ್ದುದನ್ನು ತಿಳಿದ ದಾರಾ ಸಿಂಗ್ ಗುಂಪು ಕಟ್ಟಿಕೊಂಡು ಅಲ್ಲಿಗೆ ಹೋಗುತ್ತಾನೆ. ಆತನ ಪ್ರಚೋದನೆಯಂತೆ ಸ್ಟೇನ್ಸ್ ಮತ್ತವರ ಮಕ್ಕಳು ಮಲಗಿದ್ದ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತದೆ ಗುಂಪು.

ಸ್ಟೇನ್ಸ್ ಮತ್ತು ಅವರ ಮಕ್ಕಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರಾದರೂ, ಹೊರಗಿದ್ದ ಗುಂಪು ಎಂಥ ಕ್ರೌರ್ಯ ಮೆರೆದಿತ್ತೆಂದರೆ, ಅವರು ತಪ್ಪಿಸಿಕೊಳ್ಳಲು ಬಿಡದೆ, ಜೀವಂತ ದಹನವಾಗುವುದನ್ನು ಅಟ್ಟಹಾಸಗೈಯುತ್ತ ನೋಡಿತ್ತು ಎಂದು ಅಂದಿನ ವರದಿಗಳು ಹೇಳುತ್ತವೆ. ನಿದ್ದೆಯಲ್ಲಿದ್ದಾಗಲೇ ಸುಟ್ಟುಹಾಕಲು ಬಂದಿದ್ದವರಿಗೆ, ಬೆಂಕಿಯಲ್ಲಿ ಬೇಯುತ್ತಿದ್ದವರ ಆಕ್ರಂದನ ಕನಿಷ್ಠ ಕನಿಕರವನ್ನಾದರೂ ಮೂಡಿಸುವುದು ಹೇಗೆ ಸಾಧ್ಯವಿತ್ತು?

​ಘಟನೆ ನಡೆದು ಒಂದು ವರ್ಷ ತಲೆ ಮರೆಸಿಕೊಂಡಿದ್ದ ದಾರಾ ಸಿಂಗ್ ನನ್ನ ಮತ್ತೆ ಬಂಧಿಸಲಾಯಿತು. ಒಬ್ಬರು ತನ್ನ ಧರ್ಮದ ಆಶಯಗಳನ್ನು ಬುಡಕಟ್ಟು ಜನರ ಸೇವೆಯಲ್ಲಿ ಕಂಡುಕೊಂಡಿದ್ದರೆ, ಇನ್ನೊಬ್ಬನಿಗೆ ಧರ್ಮವೆಂದರೆ ಹಲ್ಲೆ, ದರೋಡೆ, ಕೊಲೆಗಳಾಗಿದ್ದವು. ಒಂದೇ ಒಂದು ಗೋವುಗಳನ್ನು ಪಾಲನೆ ಮಾಡದ ಈತ ಗೋ ಸುರಕ್ಷಾ ಸಮಿತಿಯ ಮೂಲಕ ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸುತ್ತಿದ್ದ.

ಗ್ರಹಾಂಸ್ಟೈನ್ಸ್ ಮತ್ತು ಅವರ ತಂಡ ಮನುಷ್ಯರ ಸೇವೆಯಲ್ಲಿ ದೇವರನ್ನು ಹುಡುಕುತ್ತಿದ್ದರೆ, ಗೋವುಗಳಲ್ಲಿ ದೇವರನ್ನು ಕಂಡುಕೊಂಡ ಈತ ಅದರ ರಕ್ಷಣೆಗಾಗಿ ಮನುಷ್ಯರನ್ನೇ ಕೊಲ್ಲುತ್ತಿದ್ದ. ಇದು ಈತನನ್ನು ಅಂತಿಮವಾಗಿ ಒಬ್ಬ ಪಾದ್ರಿಯನ್ನಷ್ಟೇ ಅಲ್ಲ, ಯಾವುದೇ ಧರ್ಮ ರಾಜಕೀಯದ ಅರಿವಿಲ್ಲದ ಮುಗ್ಧ ಇಬ್ಬರು ಮಕ್ಕಳನ್ನು ಜೀವಂತ ಸುಟ್ಟು ಹಾಕುವ ಹಂತಕ್ಕೆ ತಲುಪಿಸಿತು.

ಅಂತಿಮವಾಗಿ ಆತ ನಂಬಿದ ಸಿದ್ಧಾಂತ ಆತನನ್ನು ರಾಕ್ಷಸನನ್ನಾಗಿಸಿತು. ಕಟ್ಟ ಕಡೆಗೆ ಜೈಲು ಪಾಲು ಮಾಡಿತು.

ದಾರಾಸಿಂಗ್ ಅನಕ್ಷರಸ್ಥನಾಗಿರಲಿಲ್ಲ. ಕಲಾ ಪದವೀಧರನಾಗಿದ್ದ ಮಾತ್ರವಲ್ಲ, ಹಿಂದಿ ಭಾಷೆಯಲ್ಲಿ ಪರಿಣತನಾಗಿದ್ದ. ಒಡಿಶಾದ ಒಂದು ಶಾಲೆಯಲ್ಲಿ ಕೆಲ ಕಾಲ ಹಿಂದಿ ಶಿಕ್ಷಕನಾಗಿ ಕೆಲಸ ಮಾಡಿದ್ದ.

ಧರ್ಮ ಒಬ್ಬ ಮನುಷ್ಯನನ್ನು ಯಾವ ದಿಕ್ಕಿಗೆ ಬೇಕಾದರೂ ಕೊಂಡೊಯ್ಯಬಹುದು ಎನ್ನುವುದಕ್ಕೆ ಈತ ಉದಾಹರಣೆಯಾಗಿದ್ದ. ಸ್ವಾಮಿ ವಿವೇಕಾನಂದ, ಮಹಾತ್ಮಾಗಾಂಧಿ, ನಾರಾಯಣಗುರುವಿನಂತಹ ಸಂತರ ಹಿಂದೂ ಧರ್ಮ ಇವನಿಗೆ ಆದರ್ಶವಾಗಿದ್ದರೆ ಇಂದು ಈತನೂ ಒಡಿಶಾದ ಬುಡಕಟ್ಟು ಸಮುದಾಯದ ನಡುವೆ ಒಬ್ಬ ಮಹಾತ್ಮನಾಗಿ ಬೆಳೆಯುತ್ತಿದ್ದ. ಅವರ ಸೇವೆಯ ಮೂಲಕ ನಿಜವಾದ ಹಿಂದೂ ಧರ್ಮೀಯನಾಗಿ ಗುರುತಿಸಲ್ಪಡುತ್ತಿದ್ದ.

ದುರದೃಷ್ಟವಶಾತ್ ಈತ ಬಜರಂಗದಳ, ಆರೆಸ್ಸೆಸ್‌ನ ಹಿಂದುತ್ವದ ಕಾಲಾಳುವಾದ. ಹಿಂದೂ ಧರ್ಮದ ಹೆಸರಿನಲ್ಲಿ ಅವರು ಈತನಲ್ಲಿ ದ್ವೇಷ, ಹಿಂಸೆಯನ್ನು ಬಿತ್ತಿದರು. ಮನುಷ್ಯನಾಗಿ ಎತ್ತರಕ್ಕೆ ಬೆಳೆಯಬಹುದಾಗಿದ್ದ ಈತನೊಳಗೆ ಮೃಗತ್ವವನ್ನು ತುಂಬಿದರು. ಗೋರಕ್ಷಣೆಯ ಹೆಸರಿನಲ್ಲಿ ಮನುಷ್ಯರನ್ನು ಕೊಂದು ಹಾಕುವ ಮನಸ್ಥಿತಿಯನ್ನು ಬಿತ್ತಿದ್ದರು.

ಸ್ವಾಮಿ ವಿವೇಕಾನಂದರನ್ನು ಈತ ಆದರ್ಶವಾಗಿ ತೆಗೆದುಕೊಂಡಿದ್ದರೆ ‘‘ಗೋವಿನ ಜೀವಕ್ಕಿಂತ ಮನುಷ್ಯನ ಜೀವ ದೊಡ್ಡದು’’ ಎನ್ನುವ ಮೌಲ್ಯವನ್ನು ತನ್ನೊಳಗೆ ಇಳಿಸಿಕೊಳ್ಳುತ್ತಿದ್ದ. ದೇಶ ಬರದಿಂದ ತತ್ತರಿಸುತ್ತಿರುವಾಗ ಗೋರಕ್ಷಣೆಗಾಗಿ ಹಣ ಸಂಗ್ರಹಿಸಲು ಬಂದ ಬ್ರಾಹ್ಮಣ ಗುಂಪಿಗೆ ಛೀಮಾರಿ ಹಾಕಿದ ಮಹಾನ್ ಸಂತ ಸ್ವಾಮಿ ವಿವೇಕಾನಂದರು.

ಆದರೆ ಅವರ ಸಿದ್ಧಾಂತಕ್ಕೆ ಬೆನ್ನು ಹಾಕಿ, ಗೋಳ್ವಾಲ್ಕರ್, ಹೆಡಗೇವಾರ್ ಸಿದ್ಧಾಂತಕ್ಕೆ ಮುಖಮಾಡಿದ ಪರಿಣಾಮವಾಗಿ ಈತನಿಗೆ ಮನುಷ್ಯನಿಗಿಂತ ಗೋವು ಮಿಗಿಲೆನಿಸಿತು. ಇಷ್ಟಕ್ಕೂ ಗೋವನ್ನು ದೇವರೆಂದು ಈತ ಪೂಜಿಸುತ್ತಿದ್ದರೆ ಗೋಸಾಕಣೆಯಲ್ಲಾದರೂ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದ. ಈತನಿಗೆ ಗೋವಿಗಿಂತ ಮುಖ್ಯವಾಗಿ ಗೋವಿನ ಹೆಸರಿನಲ್ಲಿ ನಡೆಸುವ ಹಿಂಸೆಯೇ ಇಷ್ಟವಾಯಿತು.

ಕೊನೆಕೊನೆಗೇ ಆ ಹಿಂಸೆಯನ್ನೇ ಈತ ಧರ್ಮವೆಂದು ನಂಬಿದ್ದ. ಅಥವಾ ಆತನಿಗೆ ಅದನ್ನು ನಂಬಿಸುವಲ್ಲಿ ಸಂಘಪರಿವಾರ ಯಶಸ್ವಿಯಾಗಿತ್ತು.ಆ ಕರಾಳ ಘಟನೆಯನ್ನು ಆಗಿನ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಕಟುವಾದ ಪದಗಳಲ್ಲಿ ಖಂಡಿಸಿದ್ದರು. ಸ್ಟೇನ್ಸ್ ಹತ್ಯೆ ದೇಶದ ಸಹಿಷ್ಣುತೆ ಮತ್ತು ಸಾಮರಸ್ಯದ ಅದುವರೆಗಿನ ಘನತೆಗೇ ಕಳಂಕ​, ಮತ್ತದು ವಿಶ್ವದಲ್ಲೇ ಒಂದು ಕರಾಳ ಕೃತ್ಯ ಎಂದು ಅವರು ಹೇಳಿದ್ದರು.

ಆಗಿನ ಗೃಹ ಸಚಿವರಾಗಿದ್ದ ಎಲ್‌ಕೆ ಅಡ್ವಾಣಿ ಮೂವರು ಕೇಂದ್ರ ಮಂತ್ರಿಗಳ ತಂಡವನ್ನು ಮನೋಹರಪುರಕ್ಕೆ ಕಳುಹಿಸಿದ್ದರು ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶ ಡಿಪಿ ವಾಧ್ವಾ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯನ್ನು ಘೋಷಿಸಿದ್ದರು. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಯಿತು.

ವಾಧ್ವಾ ಆಯೋಗ ಆ ಹತ್ಯೆಯಲ್ಲಿ ದಾರಾ ಸಿಂಗ್ ತಪ್ಪಿತಸ್ಥ ಎಂದು ಹೇಳಿತಾದರೂ, ಆತ ಬಜರಂಗದಳದವನು ಎಂಬ ಆರೋಪಗಳನ್ನು ತಳ್ಳಿಹಾಕಿದ್ದು ವಿಚಿತ್ರವಾಗಿತ್ತು. ದಾರಾ ಸಿಂಗ್ ಬಜರಂಗದಳಕ್ಕೆ ಸೇರಿದವನು ಎಂಬುದಕ್ಕೆ ಬೇಕಾದಷ್ಟು ಪುರಾವೆಗಳಿರುವಾಗಲೂ ವಾಧ್ವಾ ಆಯೋಗ ಹಾಗೆ ಹೇಳಿದ್ದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು.

ದಾರಾ ಸಿಂಗ್ ಕುಖ್ಯಾತ ಕ್ರಿಮಿನಲ್ ಆಗಿದ್ದನಲ್ಲದೆ, ಸ್ಟೇನ್ಸ್ ಹತ್ಯೆಯ ವೇಳೆಯಲ್ಲಾಗಲೇ ಆತನ ವಿರುದ್ಧ 9 ಪ್ರಕರಣಗಳು ದಾಖಲಾಗಿದ್ದವು.​​ ಗೋರಕ್ಷಕ ದಳದ ಮುಖಂಡನಾಗಿ ದಾರಾಸಿಂಗ್ ಹಲವು ಕ್ರಿಮಿನಲ್ ಕೃತ್ಯಗಳನ್ನು ಎಸಗಿದ್ದ. ಈತ ಮನುಷ್ಯ ವೇಷದಲ್ಲಿ ಓಡಾಡುತ್ತಿದ್ದ ಮೃಗವೇ ಆಗಿ ಮಾರ್ಪಟ್ಟಿದ್ದ.

1998ರಲ್ಲಿ ಒಡಿಶಾದ ಜಾನುವಾರು ಸಾಗಾಟದ ವಾಹನವೊಂದನ್ನು ತಡೆದು ಅದನ್ನು ದರೋಡೆಗೈದದ್ದಷ್ಟೇ ಅಲ್ಲದೆ, ಲಾರಿಯಲ್ಲಿದ್ದ ಸಹಾಯಕ ಶೇಕ್ ರೆಹಮಾನ್‌ನನ್ನು ಥಳಿಸಿ ಕೊಂದಿದ್ದ. 1999ರಲ್ಲಿ ಅರುಳ್ ದಾಸ್ ಎನ್ನುವ ಕ್ರಿಶ್ಚಿಯನ್ ಪಾದ್ರಿಯನ್ನು ಬಾಣದಿಂದ ಹೊಡೆದು ಚಿತ್ರ ಹಿಂಸೆ ನೀಡಿ ಕೊಂದು ಹಾಕಿದ್ದ.

ಈ ಸಂದರ್ಭದಲ್ಲೇ ಈತನನ್ನು ಬಂಧಿಸಿದ್ದಿದ್ದರೆ ಗ್ರಹಾಂಸ್ಟೈನ್ಸ್ ಮತ್ತು ಆತನ ಮಕ್ಕಳ ಬರ್ಬರ ಹತ್ಯೆ ನಡೆಯುತ್ತಿರಲಿಲ್ಲವೇನೋ.

ಆದರೆ ಈತನಿಗೆ ರಾಜಕೀಯ ಶಕ್ತಿಗಳ ಬೆಂಬಲವಿತ್ತು. ಬಿಜೆಪಿಯ ಸಕ್ರಿಯ ​ಕಾರ್ಯಕರ್ತನಾಗಿದ್ದ ಈತ ಸಂಘಪರಿವಾರದ ಬೇರೆ ಬೇರೆ ಸಹ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ. ಚುನಾವಣಾ ಪ್ರಚಾರದಲ್ಲೂ ಈತನನ್ನು ರಾಜಕೀಯ ವ್ಯಕ್ತಿಗಳು ಬಳಸಿಕೊಳ್ಳುತ್ತಿದ್ದರು.

ವಾಧ್ವಾ ಆಯೋಗದ ವರದಿಯ ನಂತರ, ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ವಿಚಾರಣೆ ನಡೆಸಿತ್ತು ಮತ್ತು ದಾರಾ ಸಿಂಗ್ ಬಜರಂಗದಳದೊಂದಿಗೆ ಸಂಪರ್ಕ ಹೊಂದಿದ್ದುದನ್ನು ಎತ್ತಿ ತೋರಿಸಿತ್ತು. 2003ರಲ್ಲಿ, ಖುರ್ದಾದ ವಿಚಾರಣಾ ನ್ಯಾಯಾಲಯ ಎಲ್ಲಾ 13 ಆರೋಪಿಗಳನ್ನು ದೋಷಿಗಳೆಂದು ಘೋಷಿಸಿತು. ದಾರಾ ಸಿಂಗ್‌ಗೆ ಮರಣದಂಡನೆ ವಿಧಿಸಲಾಯಿತು ಮತ್ತು ಇತರರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಆದರೆ 2005ರ ಮೇನಲ್ಲಿ ಒಡಿಶಾ ಹೈಕೋರ್ಟ್ ದಾರಾ ಸಿಂಗ್‌ಗೆ ಸೆಷನ್ಸ್ ನ್ಯಾಯಾಲಯ ವಿಧಿಸಿದ್ದ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತು.

ಆತ ಅದನ್ನೂ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದನಾದರೂ, ಆತನ ಮೇಲ್ಮನವಿಯನ್ನು ನ್ಯಾಯಾಲಯ ವಜಾಗೊಳಿಸಿತು. ಹತ್ಯೆಯಾದ ಸ್ಟೇನ್ಸ್ ಪತ್ನಿ ಗ್ಲಾಡಿಸ್ ಸ್ಟೇನ್ಸ್ ತನ್ನ ಮಗಳು ಎಸ್ತರ್ ಜೊತೆ ಒಡಿಶಾದಲ್ಲಿಯೇ ಉಳಿದುಕೊಂಡರು. ತನ್ನ ಪತಿ ಮತ್ತು ಇಬ್ಬರು ಪುತ್ರರ ಹಂತಕರನ್ನು ಕ್ಷಮಿಸಿದ್ದೇನೆ ಎಂದು 2003ರಲ್ಲಿ ಅವರು ಮಾಧ್ಯಮಗಳಿಗೆ ಹೇಳಿ​ಕೆ ನೀಡಿದ್ದರು ಎಂದು ಹಿಂದೂ ಪತ್ರಿಕೆಯ ವರದಿ ಹೇಳುತ್ತದೆ.

ಕೊಂದವರನ್ನು ಕ್ಷಮಿಸಿದ್ದೇನೆ. ಅವರ ಬಗ್ಗೆ ಯಾವುದೇ ಕಹಿ ಭಾವನೆಯಿಲ್ಲ. ಏಕೆಂದರೆ ಗುಣಪಡಿಸಲು ಕ್ಷಮೆಯಿಂದಷ್ಟೇ ಸಾಧ್ಯ.

ದ್ವೇಷ ಮತ್ತು ಹಿಂಸೆಯಿಂದ ಈ ನೆಲ ಗುಣಮುಖವಾಗಬೇಕಿದೆ ಎಂದಿದ್ದರು ಆಕೆ. ಕುಷ್ಠರೋಗದಿಂದ ಬಳಲುತ್ತಿರುವವರಿಗಾಗಿ ಅವರು ಮಾಡುತ್ತಿರುವ ಕೆಲಸಕ್ಕೆ 2005ರಲ್ಲಿ ಅವರನ್ನು ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಲಾಗಿದೆ.

ಆದರೆ, ಸ್ಟೇನ್ಸ್​ ಹಾಗು ಅವರ ಇಬ್ಬರು ಮಕ್ಕಳ ಭಯಾನಕ ಹತ್ಯೆಯ ಕರಾಳತೆ ಮಾತ್ರ ಅಳಿಸುವಂಥದ್ದಲ್ಲ.​ ಕ್ರೈಸ್ತರ ವಿರುದ್ಧದ ಸತತ ಹಿಂಸಾತ್ಮಕ ದಾಳಿಗಳ ಕರಾಳ ನೆರಳಿನಲ್ಲೇ ಗ್ರಹಾಂ ಸ್ಟೇನ್ಸ್ ಹತ್ಯೆ ನಡೆದಿತ್ತು. 1998ರಲ್ಲಿ ಕ್ರೈಸ್ತರ ವಿರುದ್ಧ ಕೋಮು ಸ್ವರೂಪದ 116 ದಾಳಿಗಳುನಡೆದಿರುವುದನ್ನು ಅಡ್ವಾಣಿಯೇ ಹೇಳಿದ್ದರ ಬಗ್ಗೆ 1999ರ ಫೆಬ್ರವರಿ 24ರಂದು ವರದಿಯಾಗಿತ್ತು. 1998ರಲ್ಲಿ ಗುಜರಾತ್‌ನಲ್ಲಿ ಚರ್ಚ್‌ಗಳನ್ನು ಸಹ ಧ್ವಂಸಗೊಳಿಸಲಾಗಿತ್ತು.

​ಆ ಮತಾಂಧ ದಾಳಿಗಳಿಗೆ ಕಡಿವಾಣ ಹಾಕದೇ ಪರೋಕ್ಷ ಕುಮ್ಮಕ್ಕು ನೀಡುವ ಕೆಲಸವೇ ಅವತ್ತಿನ ಆಳುವವರಿಂದ ನಡೆಯಿತು.

ಹಾಗಾಗಿ ಅದು ಸ್ಟೇನ್ಸ್ ಕುಟುಂಬದ ಸಜೀವ ದಹನದ ಘಟನೆಗೆ ದಾರಿಯಾಯಿತು. ಈಗಲೂ, ಕ್ರೈಸ್ತರ ಮೇಲಿನ ದಾಳಿ ಘಟನೆಗಳು ಸತತವಾಗಿವೆ. ಈಚಿನ ಹಲವು ವರ್ಷಗಳಲ್ಲಂತೂ ಅಂಥ ದಾಳಿಗಳು ಹೆಚ್ಚುತ್ತಲೇ ಇವೆ. ಅಂಕಿ ಆಂಶಗಳು ಹೇಳುವ ಪ್ರಕಾರ, ದೇಶದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಕ್ರೈಸ್ತರ ಮೇಲಿನ ದಾಳಿಗಳು ನಾಲ್ಕು ಪಟ್ಟು ಜಾಸ್ತಿಯಾಗಿವೆ.

ಹಿಂಸೆ, ಚರ್ಚ್‌ಗಳು ಹಾಗೂ ಪ್ರಾರ್ಥನಾ ಸಭೆಗಳ ಮೇಲಿನ ದಾಳಿಗಳು, ಕ್ರೈಸ್ತ ಧರ್ಮಾನುಯಾಯಿಗಳಿಗೆ ಕಿರುಕುಳ, ಬಹಿಷ್ಕಾರ, ಬಲವಂತದ ಮತಾಂತರದಲ್ಲಿ ತೊಡಗಿದ್ದಾರೆ ಎಂಬ ಸುಳ್ಳು ಆರೋಪ ​- ಹೀಗೆ ಕ್ರೈಸ್ತ ಸಮುದಾಯ ಎದುರಿಸುತ್ತಿರುವ ದಾಳಿಗಳಿಗೆ ಕೊನೆಯೇ ಇಲ್ಲವಾಗಿದೆ.ಈ ಕುರಿತು ದೇಶಾದ್ಯಂತ ಅಂಕಿಅಂಶಗಳನ್ನು ಸಂಗ್ರಹಿಸುವ ಇವಾಂಜೆಲಿಕಲ್ ಫೆಲೋಶಿಪ್ ಆಫ್ ಇಂಡಿಯಾ (ಇಎಫ್ಐ) ಹೇಳುವ ಪ್ರಕಾರ,

2012ರಿಂದ 2022ರವರೆಗೆ 11 ವರ್ಷಗಳಲ್ಲಿ ಅಂಥ ದಾಳಿ ಘಟನೆಗಳು ನಾಲ್ಕು ಪಟ್ಟು ಹೆಚ್ಚಾಗಿವೆ.

ಮೊದಲ ಬಾರಿಗೆ ದೊಡ್ಡ ಪ್ರಮಾಣದ ದಾಳಿಗಳು ​ದಾಖಲಾದದ್ದು 2016ರಲ್ಲಿ. ನಂತರದ ವರ್ಷಗಳಲ್ಲಿಯೂ ಈ ಸಂಖ್ಯೆ ಹೆಚ್ಚುತ್ತಲೇ ಹೋಯಿತು.

ಮತ್ತೊಂದು ದಾಖಲೆ ಮಟ್ಟದ ಏರಿಕೆ ಕಂಡದ್ದು 2021ರಲ್ಲಿ. ಆ ವರ್ಷ 505 ದಾಳಿಗಳು ನಡೆದಿದ್ದರೆ, 2022ರಲ್ಲಿ ಅವು 599ಕ್ಕೆ ಏರಿದ್ದವು.

2014ರಿಂದ ಈಚಿನವರೆಗೆ ದಾಖಲಾದ ದಾಳಿ ಘಟನೆಗಳ ವಿವರಗಳನ್ನು ನೋಡುವುದಾದರೆ,

2014 – 151 ದಾಳಿಗಳು

2015 – 179

2016 – 247

2017 – 351

2018 – 325

2019 – 366

2020 – 327

2021 – 505

2022 – 599

2023 – 525

ಕಳೆದ ವರ್ಷ ಬರೀ 8 ತಿಂಗಳುಗಳಲ್ಲೇ ಕ್ರೈಸ್ತರ ವಿರುದ್ಧ 500ಕ್ಕೂ ಹೆಚ್ಚು ದಾಳಿಗಳು ಸಂಭವಿಸಿದ್ದು ತೀವ್ರ ಕಳವಳಕ್ಕೆ ಕಾರಣವಾಗಿತ್ತು.

ಕ್ರೈಸ್ತರ ಮೇಲಿನ ದಾಳಿಗಳು ನಿರಂತರವಾಗಿ ನಡೆಯುತ್ತಿರುವುದರ ನಡುವೆಯೂ, ಕ್ರೈಸ್ತರ ಮೇಲಿನ ದಾಳಿಗಳಲ್ಲಿನ ಹೆಚ್ಚಳವನ್ನು ಸರ್ಕಾರ ನಿರಾಕರಿಸುತ್ತಿರುವ ಬಗ್ಗೆ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಖಂಡನೆಯನ್ನೂ ವ್ಯಕ್ತಪಡಿಸಿತ್ತು. ಇದೆಲ್ಲದರ ನಡುವೆಯೇ ಕಳೆದ ಕ್ರಿಸ್ಮಸ್ ವೇಳೆ ಆಯ್ದ ಕ್ರೈಸ್ತ ಮುಖಂಡರನ್ನು​ ತನ್ನ ನಿವಾಸದಲ್ಲಿ ಕ್ರಿಸ್ಮಸ್ ಆಚರಿಸಲು ​ಪ್ರಧಾನಿ ಮೋದಿ ಆಹ್ವಾನಿಸಿದ್ದರು. ಒಂದೆಡೆ ಅವರದೇ ಪರಿವಾರದವರಿಂದ ಕ್ರೈಸ್ತರ ಮೇಲೆ ನಿಲ್ಲದ ದಾಳಿಗಳು, ಇನ್ನೊಂದೆಡೆ ಔತಣಕ್ಕೆ ಕರೆದು ಕ್ರೈಸ್ತ​ರನ್ನೂ ಕ್ರೈಸ್ತರ ಕೊಡುಗೆಗಳನ್ನೂ ಕೊಂಡಾಡುವ ಸೋಗಲಾಡಿತನ.

​ಜನವರಿ 22 ಸಕಲ ಭಾರತೀಯರಿಗೆ ಆತ್ಮವಿಮರ್ಶೆಯ, ಪಾಪನಿವೇದನೆಯ ದಿನವಾಗಬೇಕು. ಅಂದು ಧರ್ಮದ ಹೆಸರಲ್ಲಿ ಕುಷ್ಠ ರೋಗಿಗಳ ಸೇವೆಯೇ ಧರ್ಮವೆಂದು ಭಾವಿಸಿದ ಒಬ್ಬ ಸಂತನನ್ನು ಮತ್ತು ಆತನ ಮುಗ್ಧ ಮಕ್ಕಳನ್ನು ಧರ್ಮದ ಹೆಸರಲ್ಲೇ ಕೊಂದು ಹಾಕಲಾಯಿತು ಮತ್ತು ಆ ಕಗ್ಗೊಲೆಯ ಕಳಂಕವನ್ನು ಕೊಲೆಗಾ​ರರು ಹಿಂದೂ ಧರ್ಮಕ್ಕೆ ಅಂಟಿಸಿದ್ದರು.

ಧರ್ಮ ಮನುಷ್ಯನನ್ನು ಮಹಾತ್ಮನಾಗಿಯೂ ಮಾಡಬಹುದು ಕೆಲವೊಮ್ಮೆ ಮೃಗವಾಗಿಸಲೂ ಬಹುದು. ಈ ದಿನ ನಾವು ನಮಗೇ ಕೇಳಿ ಕೊಳ್ಳಬೇಕಾದುದು, ನಮಗೆ ಎಂತಹ ಧರ್ಮ ಬೇಕು?. ವಿವೇಕಾನಂದರ ಧರ್ಮವೋ ಅಥವಾ ದಾರಾಸಿಂಗ್‌ನ ಧರ್ಮವೋ?.

ಗಾಂಧೀಜಿಯ ರಾಮ ನಮಗೆ ಆದರ್ಶವಾಗಬೇಕೋ ಅಥವಾ ಗೋಡ್ಸೆಯ ರಾಮ ಆದರ್ಶವಾಗಬೇಕೋ?. ಗೋವುಗಳ ರಕ್ಷಣೆಯ ಹೆಸರಿನಲ್ಲಿ ಮನುಷ್ಯರನ್ನು ಕೊಲ್ಲುವ ಮೌಲ್ಯ ಬೇಕೋ ಅಥವಾ ಧರ್ಮದ ಹೆಸರಿನಲ್ಲಿ ಕುಷ್ಠರೋಗಿಗಳನ್ನು ಸೇವೆ ಮಾಡುವ ಮೌಲ್ಯಗಳು ಬೇಕೋ?. ಎಂತಹ ಧರ್ಮದ ಮೂಲಕ ನಾವು ಭಾರತದ ಭವಿಷ್ಯವನ್ನು ರೂಪಿಸಬೇಕು ಎನ್ನುವುದನ್ನು ಚಿಂತಿಸಲು ಜನವರಿ 22 ಒಂದು ನೆಪವಾಗಲಿ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!