ಮಾಜಿ ಐಪಿಎಸ್ ಅಧಿಕಾರಿಯ ಜೀವಾವಧಿ ಶಿಕ್ಷೆ ಎತ್ತಿ ಹಿಡಿದ ಗುಜರಾತ್ ಹೈಕೋರ್ಟ್

Update: 2024-02-09 04:52 GMT
Editor : Ismail | Byline : ಆರ್. ಜೀವಿ

ಗುಜರಾತ್ ಹೈಕೋರ್ಟ್

"​ನೀವು ಈ ಇಡೀ ಜಗತ್ತನ್ನೇ ಪಡೆಯಲು ಅರ್ಹರು. ಆದರೆ ನಿಮ್ಮಂತಹ ಧೈರ್ಯಶಾಲಿ, ಪ್ರಾಮಾಣಿಕ ವ್ಯಕ್ತಿಯನ್ನು ಪಡೆಯುವ ಅರ್ಹತೆ ಈ ಜಗತ್ತಿಗೆ ಸಿಗಲಿ ಎಂದು ಹಾರೈಸುತ್ತೇನೆ". ಈ ಅಮಾನುಷ ಆಡಳಿತ ನಿಮ್ಮನ್ನು ಸೋಲಿಸಿಬಿಡಬಹುದು ಎಂಬ ಮೂರ್ಖ ಲೆಕ್ಕಾಚಾರ ಹಾಕಿಕೊಂಡಿದೆ. ಆದರೆ ನೀವು ಎಂತಹ ಉಕ್ಕಿನಿಂದ ತಯಾರಾದವರು ಎಂಬ ಊಹೆ ಕೂಡ ಅವರಿಗಿಲ್ಲ. ನಿಮ್ಮನ್ನು ಮುರಿದು ಹಾಕುವ ಪ್ರಯತ್ನದಲ್ಲಿ ಅವರು ನಿಮ್ಮನ್ನು ಯಾರೂ, ಎಂದೂ ಸೋಲಿಸಲಾರದ, ನಾಶ ಪಡಿಸಲಾರದವರಾಗಿ ಪರಿವರ್ತಿಸಿ ಬಿಟ್ಟಿದ್ದಾರೆ "

ಕಳೆದ ಡಿಸೆಂಬರ್ 21 ರಂದು ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ 60ನೇ ಹುಟ್ಟು ಹಬ್ಬದಂದು ಅವರ ಮಕ್ಕಳಾದ ಆಕಾಶಿ ಹಾಗು ಶಂತನು ಸಂಜೀವ್ ಭಟ್ ಅವರು ಹೇಳಿರುವ ಸಾಲುಗಳಿವು. ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ ಜೈಲಿನ ದಿನಗಳು ಮುಗಿಯುತ್ತಲೇ ಇಲ್ಲ.

1990ರ ಕಸ್ಟಡಿ ಹಿಂಸೆ ಪ್ರಕರಣಕ್ಕೆ ಸಂಬಂಧಿಸಿ ಜಾಮ್ನಗರ್ ಸೆಷನ್ಸ್ ನ್ಯಾಯಾಲಯ 2019ರಲ್ಲಿ ಅವರಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಗುಜರಾತ್ ಹೈಕೋರ್ಟ್ ಎತ್ತಿಹಿಡಿದಿದೆ. ಅಲ್ಲಿಗೆ ಗುಜರಾತ್​ ನಲ್ಲಿ ಸಿಗುವ ನ್ಯಾಯ ಎಂಥದು ಎನ್ನೋದು ಮತ್ತೊಮ್ಮೆ ಕಾಣಿಸತೊಡಗಿದೆ. ಹೇಗೆ ವ್ಯವಸ್ಥಿತವಾಗಿ ಒಬ್ಬ ದಕ್ಷ ಅಧಿಕಾರಿಯನ್ನು​ ವ್ಯವಸ್ಥಿತವಾಗಿ ಸಿಲುಕಿಸಲಾಗಿದೆ ಎಂಬುದು ಸ್ಪಷ್ಟವಿರುವಾಗಲೂ ಆ ಅಧಿಕಾರಿಯ ಜೈಲುಜೀವನ ವರ್ಷಗಳಿಂದ ವರ್ಷಗಳಿಗೆ ದಾಟುತ್ತಲೇ ಇದೆ.

ತಾನು ಹೇಳಿದಂತೆ ಕೇಳದ, ತನ್ನ ವಿರುದ್ಧ ದಿಟ್ಟತನ ತೋರಿಸಿದ ಅಧಿಕಾರಿಯನ್ನು ಹೇಗೆ ಸರ್ಕಾರವೊಂದು ಬಲಿಪಶು ಮಾಡಬಲ್ಲದು ಎಂಬುದಕ್ಕೆ ಸಂಜೀವ್ ಭಟ್ ಕೇಸ್ ಒಂದು​ ಸ್ಪಷ್ಟ ಉದಾಹರಣೆ. ಗ್ಯಾಂಗ್ ರೇಪಿಸ್ಟ್ಗಳನ್ನು ರಕ್ಷಿಸುವುದು ಒಂದೆಡೆಯಾದರೆ, ಸಂಜೀವ್ ಭಟ್ರನ್ನು ಜೈಲಿಗೆ ಹಾಕಿರೋದು ಇನ್ನೊಂದೆಡೆ.

ಇದು ಗುಜರಾತ್ ಸರ್ಕಾರದ​ ನ್ಯಾಯದ ಮಾದರಿ. ಜೈಲಲ್ಲಿ ಇರಬೇಕಾದವರು ಅಧಿಕಾರದ ಸ್ಥಾನಗಳಲ್ಲಿ ಮೆರೆಯುವಾಗ ನಿಜವಾದ ದೇಶ ಭಕ್ತರು ಜೈಲಲ್ಲಿ ಕೊಳೆಯುವಂತಾಗಿರುವುದು ವಿಪರ್ಯಾಸ. ಅಥವಾ ಇವತ್ತಿನ ಕರಾಳ ದಿನಗಳಲ್ಲಿ ಬಹುಶಃ ಅದು ಸಹಜ. ಯಾವುದೇ ತಳಹದಿಯೇ ಇಲ್ಲದ ಕೇಸಿನಲ್ಲಿ ಹೇಗೆ ಒಬ್ಬ ದಿಟ್ಟ ಅಧಿಕಾರಿಯನ್ನು​ ವರ್ಷಗಟ್ಟಲೆ ಜೈಲಲ್ಲಿ ಕೊಳೆಯಿಸಲಾಗುತ್ತಿದೆ ಎಂಬುದನ್ನು ನೆನೆದರೇ ಕಳವಳವಾಗುತ್ತದೆ.

ಪ್ರಭುತ್ವಕ್ಕೆ ಇಷ್ಟವಾಗುವವರಿಗೆ ನಿವೃತ್ತರಾದ ​ಬೆನ್ನಿಗೇ​ ಪ್ರತಿಷ್ಠಿತ ಹುದ್ದೆಗಳು ಸಿಗುವ ಕಾಲದಲ್ಲಿ, ಬೆನ್ನು ಮೂಳೆ ಉಳಿಸಿಕೊಂಡ, ಜೀ ಹುಜೂರ್ ಎನ್ನದ, ಸಲಾಮು ಹೊಡೆಯದ ಅಧಿಕಾರಿಗಳು ​ಹೀಗೆಲ್ಲ ಹಿಂಸೆ ಅನುಭವಿ​ಸಿದ್ದಾರೆ.​ ಸತ್ಯ ಹೇಳಿದ್ದಕ್ಕಾಗಿ ಬಲಿಪಶುವಾದವರು ಈ ಮಾಜಿ ಐಪಿಎಸ್ ಅಧಿಕಾರಿ. ಸತ್ಯ ಹೇಳಿದರೆಂಬ ಕಾರಣಕ್ಕಾಗಿಯೇ ಅವರ ಮೇಲೆ ಅವರು ಮಾಡಿಯೇ ಇರದ ತಪ್ಪುಗಳನ್ನು ಹೊರಿಸಲಾಯಿತು.

ಅವರ ಹುದ್ದೆ, ಅಧಿಕಾರ ಎಲ್ಲವನ್ನೂ ಕಿತ್ತುಕೊಳ್ಳಲಾಯಿತು. ಕಡೆಗೆ ಅವರ ಬದುಕನ್ನೇ ನರಕಮಯವಾಗಿಸಲಾಯಿತು. ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ, ಜೈಲಿಗೆ ಕಳಿಸಲಾಯಿತು. ಒಂದರ ಬೆನ್ನಿಗೊಂದು ಪ್ರಕರಣಗಳಲ್ಲಿ ಜೈಲಿನಲ್ಲಿಯೇ ಕೊಳೆಯುವಂತೆ ಮಾಡಲಾಗಿರುವ ವ್ಯವಸ್ಥಿತ ಚಕ್ರವ್ಯೂಹದಲ್ಲಿ ಅವರು ಸಿಕ್ಕಿಕೊಂಡಿದ್ದಾರೆ.

ಹೊರಬರುವ ದಾರಿಗಳನ್ನೆಲ್ಲ ಮುಚ್ಚುವ ಪ್ರಯತ್ನಗಳೂ ಅವರ ವಿರುದ್ಧ ನಡೆಯುತ್ತಲೇ ಇವೆ. ಈಗಲೂ ಮತ್ತೆ ಅದೇ ಆಗಿದೆ. ಈಗ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿಯಲಾಗಿರುವ ಪ್ರಕರಣ ಸಂಜೀವ್ ಭಟ್ ಅವರು ಗುಜರಾತ್ನ ಜಾಮ್ನಗರದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಅಧಿಕಾರದಲ್ಲಿದ್ದ ಹೊತ್ತಿನಲ್ಲಿ ನಡೆದದ್ದು.

ಬಿಜೆಪಿ ನಾಯಕ ಎಲ್‌ ಕೆ ಅಡ್ವಾಣಿಯವರು 1990ರಲ್ಲಿ ರಥಯಾತ್ರೆ ಕೈಗೊಂಡಿದ್ದ ವೇಳೆ ಗುಜರಾತ್‌ನಲ್ಲಿ ವ್ಯಾಪಕ ಕೋಮುಗಲಭೆಗಳು ಸಂಭವಿಸಿದ್ದವು. ಈ ವೇಳೆ ಭಟ್‌ ಜಾಮ್‌ನಗರದ ಹೆಚ್ಚುವರಿ ಎಸ್‌ಪಿಯಾಗಿದ್ದರು. ಕೋಮುಗಲಭೆ ಸಂದರ್ಭವೊಂದರಲ್ಲಿ ಅವರು ಸುಮಾರು 133 ಜನರನ್ನು ಬಂಧಿಸಿದ್ದರು.

ಬಂಧಿತರಲ್ಲಿ ಪ್ರಭುದಾಸ್ ವೈಷ್ಣಾನಿ ಎಂಬ ವ್ಯಕ್ತಿ ಬಿಡುಗಡೆ ಬಳಿಕ ಮೂತ್ರಪಿಂಡದ ವೈಫಲ್ಯದಿಂದ ಆಸ್ಪತ್ರೆಯಲ್ಲಿ ನಿಧನರಾಗಿದ್ದುದೇ ಮುಂದಿನ ಎಲ್ಲದಕ್ಕೂ ಒಂದು ನೆಪವಾಯಿತು. ಸಂ​ಜೀವ್ ಭಟ್ ಹಾಗೂ ಅವರ ಸಹೋದ್ಯೋಗಿಗಳು ಕಸ್ಟಡಿಯಲ್ಲಿ ನೀಡಿದ ಹಿಂಸೆಯಿಂದ ವೈಷ್ಣಾನಿ ಸಾವನ್ನಪ್ಪಿರುವುದಾಗಿ ಕುಟುಂಬ ಆರೋಪಿಸಿತ್ತು.

ಬಂಧಿತರಿಗೆ ನೀರು ಕುಡಿಯದಂತೆ ಪೊಲೀಸರು ತಡೆದಿದ್ದು, ವೈಷ್ಣಾನಿ ಅವರ ಕಿಡ್ನಿಗೆ ಹಾನಿ ಉಂಟಾಗಲು ಕಾರಣವಾಯಿತು ಎಂದು ಅವರು ದೂರಲಾಗಿತ್ತು. ಇಂಥದೊಂದು ಪ್ರಕರಣ ಇಟ್ಟುಕೊಂಡು ಭಟ್ ಅವರನ್ನು ಹತ್ಯೆ ದೋಷಿ ಎಂದು ಮಾಡಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಅದನ್ನೀಗ ಹೈಕೋರ್ಟ್ ಎತ್ತಿಹಿಡಿದಿದೆ. 2019ರಲ್ಲಿ ಭಟ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದಾಗ, ಮಾಡದ ತಪ್ಪಿಗೆ ಶಿಕ್ಷೆ ವಿಧಿಸಲಾಗಿದೆ ಎಂದು ಅವರ ಪತ್ನಿ ಶ್ವೇತಾ ಭಟ್ ನೋವಿನಿಂದ ಹೇಳಿದ್ದರು.​ ಮೃತಪಟ್ಟ ಆ ವ್ಯಕ್ತಿ ನೇರವಾಗಿ ಸಂಜೀವ್ ಭಟ್ ವಶದಲ್ಲಿ ಇರಲೇ ಇಲ್ಲ.

ಬರೀ ಸೇಡಿಗಾಗಿ, ಅವರನ್ನು ಹಾಗೆ ಬಲಿಪಶು ಮಾಡಲಾಯಿತು. ಮತ್ತು ಅವರ ಕುಟುಂಬ ಕೂಡ ಅದೇ ನೋವಿನಲ್ಲಿ ಚಡಪಡಿಸುವ ಹಾಗೆ ಮಾಡಲಾಯಿತು. ಎಲ್ಲ ಶುರುವಾದದ್ದು, 2002ರ ​ಗುಜರಾತ್ ಹತ್ಯಾಕಾಂಡ ಪ್ರಕರಣದಲ್ಲಿ, ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಪಾತ್ರದ ಬಗ್ಗೆ ಆರೋಪಿಸಿ ಸಂಜೀವ್ ಭಟ್ ಸುಪ್ರೀಂ ಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸಿದಾಗ.

ಮೋದಿ ಕರೆದಿದ್ದ ಉನ್ನತ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ತಾವು ಹಾಜರಿದ್ದುದಾಗಿಯೂ, ಮುಸ್ಲಿಮರ ವಿರುದ್ಧ ಹಿಂದೂಗಳು ನಡೆಸುವ ಹಿಂಸಾಚಾರವನ್ನು ತಡೆಯದಿರುವಂತೆ ಮೋದಿ ಆ ಸಭೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದರೆಂದೂ ಸಂಜೀವ್ ಭಟ್ ಗಂಭೀರ ಆರೋಪ ಮಾಡಿದ್ದರು. ಆದರೆ ಸುಪ್ರೀಂ ಕೋರ್ಟ್ ನೇಮಿಸಿದ್ದ ವಿಶೇಷ ತನಿಖಾ ತಂಡ, ಸಂಜೀವ್ ಭಟ್ ಅವರ ಆರೋಪಗಳನ್ನು ತಳ್ಳಿಹಾಕಿತು. ಅಲ್ಲಿಂದ ಶುರುವಾಯಿತು ಭಟ್ ವಿರುದ್ಧದ ಅಧಿಕಾರಸ್ಥರ ಆಟ.

ಅವರನ್ನು ಅನಧಿಕೃತ ಗೈರುಹಾಜರಿ ಎಂಬ ಕಾರಣವೊಡ್ಡಿ ಪೊಲೀಸ್ ಸೇವೆಯಿಂದ ತೆಗೆಯಲಾಯಿತು. ಪ್ರತಿಸ್ಪರ್ಧಿ ರಾಜಕೀಯ ಪಕ್ಷಗಳ ನಾಯಕರೊಂದಿಗೆ ಸಕ್ರಿಯ ಸಂಪರ್ಕದಲ್ಲಿದ್ದ ಆರೋಪವೂ ಅವರ ಮೇಲೆ ಬಂತು. ಈ ನಡುವೆಯೇ​ ಅವರನ್ನು ಬಂಧಿಸಿ 1990ರ ಲಾಕಪ್ ಹಿಂಸೆ ಪ್ರಕರಣದಲ್ಲಿ 2019ರ ಜೂನ್ 20ರಂದು ಜೀವಾವಧಿ ಶಿಕ್ಷೆ ವಿಧಿಸಲಾಯಿತು.

ವಾಸ್ತವವಾಗಿ, ಈ ಪ್ರಕರಣದಲ್ಲಿ ಭಟ್ ಮತ್ತಿತರರ ವಿರುದ್ಧದ ಆರೋಪ ಕೈಬಿಡುವಂತೆ ಗುಜರಾತ್ ಸರ್ಕಾರವೇ ಮನವಿ ಮಾಡಿತ್ತು. ಆದರೆ ಯಾವಾಗ ಮೋದಿ ವಿರುದ್ಧ ಭಟ್ ಅಫಿಡವಿಟ್ ಸಲ್ಲಿಸಿದರೊ, ಆಗ ಸರ್ಕಾರ ತನ್ನ ಅರ್ಜಿ ವಾಪಸ್ ಪಡೆಯಿತು. ಆ ಬಳಿಕ ಭಟ್ ಮತ್ತಿತರ ಆರೋಪಿಗಳ ವಿರುದ್ಧ ಕ್ರಿಮಿನಲ್ ವಿಚಾರಣೆ ಮುಂದುವರಿದು, ಭಟ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿತ್ತು.

ಈ ಮಧ್ಯೆ, ಗುಜರಾತ್ ಮಾಜಿ ಗೃಹಸಚಿವ ಹರೇನ್ ಪಾಂಡ್ಯ ಕೊಲೆ ಕೇಸಿನ ವಿಚಾರವಾಗಿ 2003ರಲ್ಲಿ ತಾವು ಸಾಬರಮತಿ ಜೈಲು ಸೂಪರಿಂಟೆಂಡೆಂಟ್ ಆಗಿದ್ದಾಗ ದೊರೆತ ಅತ್ಯಂತ ಮಹತ್ವದ ಸಾಕ್ಷ್ಯವನ್ನು ನಾಶಗೊಳಿಸುವಂತೆ ಆಗಿನ ಗುಜರಾತ್ ಗೃಹಸಚಿವ ಅಮಿತ್ ಶಾ ಒತ್ತಡ ಹೇರಿದ್ದರೆಂದೂ, ತಾನದಕ್ಕೆ ಒಪ್ಪದೇ ಇದ್ದಾಗ ಆ ಹುದ್ದೆಯಿಂದ ತನ್ನನ್ನು ತೆಗೆಯಲಾಯಿತೆಂದೂ ಭಟ್ ಬಹಿರಂಗಪಡಿಸಿದ್ದರು.

ಇವೆಲ್ಲವೂ ಸಂಜೀವ್ ಭಟ್ ಅವರನ್ನು ಹಣಿಯುವುದಕ್ಕೆ ಆಮೇಲೆ ಹೇಗೆ ಅಸ್ತ್ರಗಳಾಗಿ ಬದಲಾದವು ಎಂಬುದಕ್ಕೆ ಅವರ ಇವತ್ತಿನ ಸ್ಥಿತಿಯೇ ಸಾಕ್ಷಿ. 1996ರಲ್ಲಿ ಗುಜರಾತ್ನ ಬನಸ್ಕಾಂತ ಜಿಲ್ಲಾ ಎಸ್ಪಿ ಆಗಿದ್ದಾಗ, ರಾಜಸ್ಥಾನ ಮೂಲದ ಸುಮರ್ಸಿಂಗ್ ರಾಜ್ಪುರೋಹಿತ್ ಎಂಬ ವಕೀಲರನ್ನು ಡ್ರಗ್ ಹೊಂದಿದ್ದ ಆರೋಪದಲ್ಲಿ ಬನಸ್ಕಾಂತದ ಪಾಲನ್ಪುರ್ ಪಟ್ಟಣದಲ್ಲಿ ಅವರು ತಂಗಿದ್ದ ಹೊಟೇಲ್ ಕೊಠಡಿಯಿಂದ ಬಂಧಿಸಲಾಗಿದ್ದ ಪ್ರಕರಣದಲ್ಲಿಯೂ ಭಟ್ ಅವರನ್ನು ಜೈಲುಪಾಲಾಗಿಸಲಾಯಿತು.

2002ರ ಗಲಭೆ ಪ್ರಕರಣದಲ್ಲಿ ಮುಗ್ಧ ಜನರನ್ನು ಸಿಲುಕಿಸುವ ಯತ್ನದ ಆರೋಪಿಗಳಲ್ಲಿ ಒಬ್ಬರನ್ನಾಗಿಯೂ ಸಂಜೀವ್ ಭಟ್ ಅವರನ್ನು ಹೆಸರಿಸಲಾಯಿತು. ಹೀಗೆ ಎಲ್ಲವೂ ಸಂಜೀವ್ ಭಟ್ ಅವರನ್ನು ಸುತ್ತಿಕೊಂಡಿವೆ. ಸತ್ಯ ಹೇಳಿದ್ದನ್ನೇ ಸಂಚು ಎನ್ನಲಾಯಿತಲ್ಲ ಎಂಬುದೇ ಭಟ್ ಪ್ರಕರಣದಲ್ಲಿ ಆಘಾತಕಾರಿ ವಿಚಾರ.

ಈ ದೇಶಕ್ಕೆ ಹೆಮ್ಮೆ ತಂದ ಮಹಿಳಾ ಅಥ್ಲೀಟ್ಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತ ಬಿಜೆಪಿಯ ಸಂಸದನ ರಕ್ಷಣೆಗೆ ಸ್ವತಃ ನಿಲ್ಲುತ್ತದೆ ಸರ್ಕಾರ.​ ಗಂಭೀರ ಸೆಕ್ಷನ್ ಗಳಡಿ ಎಫ್ ಐ ಆರ್ ಆದ ಮೇಲೂ ಆತನ ಬಂಧನ ಆಗೋದಿಲ್ಲ. ಹೆಣ್ಣುಮಗಳೊಬ್ಬಳ ಕುಟುಂಬವನ್ನು ಅವಳ ಕಣ್ಣೆದುರೇ ಕೊಂದು​ ಸಾಮೂಹಿಕ ಅತ್ಯಾಚಾರವೆಸಗಿದವರನ್ನು ಸನ್ನಡತೆಯ ಆಧಾರದ ಮೇಲೆ ಜೈಲಿನಿಂದ ಬಿಡುಗಡೆ ಮಾಡಲಾಗುತ್ತದೆ.​ ಅದಕ್ಕಾಗಿ ಅಪರಾಧಿಗಳ ಜೊತೆ ಸರಕಾರವೇ ಸೇರಿಕೊಂಡು ಸುಪ್ರೀಂ ಕೋರ್ಟ್ ಅನ್ನೇ ದಾರಿ ತಪ್ಪಿಸಲಾಗುತ್ತದೆ.

ಹೀಗೆ ರೇಪಿಸ್ಟ್ಗಳ ಪರ ನಿಲ್ಲುವ ಅನಾಚಾರವನ್ನೂ ಮಾಡುತ್ತದೆ ಸರ್ಕಾರ. ಆದರೆ ಒಬ್ಬ​ ದಕ್ಷ, ದಿಟ್ಟ ಐಪಿಎಸ್ ಅಧಿಕಾರಿಯಾಗಿದ್ದ ​ಸಂಜೀವ ಭಟ್ ​ಈ ವ್ಯವಸ್ಥೆಯ ಪಾಲಿಗೆ ಜೈಲಿನಲ್ಲೇ ಕೊಳೆಯಬೇಕಾದ ಕ್ರಿಮಿನಲ್. ಇಲ್ಲಿ ಯಾವುದೇ ಸಾಕ್ಷ್ಯಾಧಾರಗಳಿಲ್ಲದ, ಸುಳ್ಳಾರೋಪದಲ್ಲಿ ಯುವ ವಿದ್ವಾಂಸ ಉಮರ್ ಖಾಲಿದ್ ​ವರ್ಷಗಳಿಂದ ಜೈಲಲ್ಲಿದ್ದಾರೆ.

ಅಷ್ಟಕ್ಕೂ ಅವರು ಮಾಡಿದ್ದ ತಪ್ಪು ಸತ್ಯ ಹೇಳಿದ್ದು, ದಿಟ್ಟತನ ತೋರಿದ್ದು ಮಾತ್ರ. ​ಸಂಜೀವ್ ಭಟ್ ಅವರ ಈ ಹೋರಾಟದಲ್ಲಿ ಅವರ ಜೊತೆ ಗಟ್ಟಿಯಾಗಿ ನಿಂತಿರುವವರು ಪತ್ನಿ ಶ್ವೇತಾ ಭಟ್, ಮಕ್ಕಳು ಆಕಾಶಿ ಹಾಗು ಶಂತನು. ಅವರೆಂದೂ ಸತ್ಯ ಹೇಳಿ ತಂದೆ ಸೋತರು ಎಂದು ಹೇಳಲೇ ಇಲ್ಲ. ಬದಲಾಗಿ ನಮ್ಮ ತಂದೆಯ ದಿಟ್ಟತನ ನಮಗೆ ಅತ್ಯಂತ ದೊಡ್ಡ ಹೆಮ್ಮೆ ಎಂದು ಸಾರಿ ಸಾರಿ ಹೇಳಿದರು.

​"ನಾವಿಂದು ಇರುವ ಜಗತ್ತು ಪ್ರತಿದಿನವೂ ಪ್ರತಿ ಸೆಕೆಂಡ್ ಈ ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ಹೋರಾಡುವ ಮತ್ತು ಮುನ್ನುಗ್ಗುವ ಜಗತ್ತಾಗಿದೆ​ " ಎನ್ನುತ್ತಾರೆ ಅವರು. ​" ನೀವು ನಮ್ಮ ಧೈರ್ಯ, ನಮ್ಮ ಹೃದಯದಲ್ಲಿನ ವಿವೇಚನಾಶೀಲ ಧ್ವನಿ, ನಮ್ಮ ಧ್ರುವತಾರೆ, ನಮ್ಮ ಹೃದಯ ಬಡಿತ​ " ಎಂದು ಈ ಧೈರ್ಯಶಾಲಿ ಮಕ್ಕಳು ​ಕಳೆದ ವರ್ಷ ಹೇಳಿದ್ದರು.

​" ನೀವು ಧ್ವನಿಯಿಲ್ಲದವರನ್ನು, ದ್ವೇಷ ಮತ್ತು ಹಿಂಸೆಗೆ ಬಲಿಯಾದ ಸಾವಿರಾರು ಜನರನ್ನು ರಕ್ಷಿಸಿದ್ದೀರಿ​" ​ಎಂದಿದ್ದ ಅವರ ಫೇಸ್ ಬುಕ್ ಪೋಸ್ಟ್, ದ್ವೇಷ ಮತ್ತು ಹಿಂಸೆಯ ಬಲಿಪಶುಗಳಿಗೆ ನ್ಯಾಯಕ್ಕಾಗಿ ಹೋರಾಡಲು ಭಟ್ ಅವರ ಅಚಲವಾದ ಬದ್ಧತೆಯನ್ನು ಒತ್ತಿಹೇಳಿ​ತ್ತು. ಸತ್ಯ ಮತ್ತು ಉತ್ತರದಾಯಿತ್ವಕ್ಕಾಗಿ ಅವರ ದಶಕಗಳ ಹೋರಾಟವನ್ನು ಎತ್ತಿ ತೋರಿ​ಸಿತ್ತು.

​" ನ್ಯಾಯಕ್ಕಾಗಿ ನಮ್ಮ ಹೋರಾಟ ಮುಂದುವರೆಯುತ್ತದೆ. ನೀವು ಯಾವಾಗಲೂ ಹೇಳುವಂತೆ, ನಾವು ಹೋರಾಡುತ್ತೇವೆ, ನಾವು ವಿರೋಧಿಸುತ್ತೇವೆ, ನಾವು ಜಯಿಸುತ್ತೇವೆ. ಇದು ನಿಶ್ಚಿತ​ " ಎಂಬ ಸಾಲುಗಳೊಂದಿಗೆ​ ಆ ಪೋಸ್ಟ್ ಕೊನೆಯಾ​ಗಿತ್ತು.​ ಇದು ಹೋದ ವರ್ಷದ ಪೋಸ್ಟ್. ಈಗಲೂ ಆ ಕುಟುಂಬದ ಸ್ಥೈರ್ಯ ಹಾಗೇ ಉಳಿದಿರಲಿ ಎಂದು ಹಾರೈಸೋಣ. ಯಾಕೆಂದರೆ ಕೊನೆಗೂ ಗೆಲ್ಲೋದು ಸತ್ಯಾನೇ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!