ತ್ರಿವರ್ಣ ಧ್ವಜವನ್ನೇ ವಿರೋಧಿಸುವ ಬಿಜೆಪಿ ಜೊತೆ ನಿಂತ ಎಚ್ ಡಿ ಕೆ !
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೇಸರಿ ಶಾಲು ಹಾಕಿಕೊಂಡು ಹಿಂದುತ್ವ ಪಡೆಗಳ ಜೊತೆ ಹೆಜ್ಜೆ ಹಾಕಿದ್ದಾರೆ. ಜೈ ಶ್ರೀರಾಮ್ ಎಂದೇ ಭಾಷಣ ಆರಂಭಿಸಿದ್ದಾರೆ. ಅವರಂತೆಯೇ ಅವರ ಪಕ್ಷದ ನಾಯಕರು, ಕಾರ್ಯಕರ್ತರೂ ಕೇಸರಿ ಶಾಲು ಹಾಕಿಕೊಂಡು ಬಿಜೆಪಿ ನಾಯಕರನ್ನು ಹಿಂಬಾಲಿಸಿದ್ದಾರೆ. ಇದೆಲ್ಲ ನಿನ್ನೆ ಆಗಿದ್ದು ಮಂಡ್ಯದ ನೆಲದಲ್ಲಿ ಎಂಬುದು ಇನ್ನೂ ವಿಶೇಷ.
ಕುಮಾರಸ್ವಾಮಿ ಮೊದಲ ಬಾರಿ ಬಿಜೆಪಿ ಜೊತೆ ಸೇರಿ ಸರಕಾರ ರಚಿಸುವಾಗ ಆ ಪಕ್ಷದ ಯಡಿಯೂರಪ್ಪನವರೇ ಹಸಿರು ಶಾಲು ಹಾಕಿಕೊಂಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಬಾರಿ ಮೈತ್ರಿಯಾಗುವಾಗ ಬಿಜೆಪಿಯವರು ಕುಮಾರಸ್ವಾಮಿಗೆ ಕೇಸರಿ ಶಾಲು ಹಾಕಿಸಿದ್ದಾರೆ.
ವಿಧಾನಸಭೆಯಲ್ಲಿ ತನ್ನ ಪಕ್ಷ ಸೋಲಲು ಮುಸ್ಲಿಮರು ಕಾರಣ ಎಂದು ನಿರ್ಧರಿಸಿಬಿಟ್ಟಿರುವ, ಕುಮಾರಸ್ವಾಮಿ ಆ ಸಿಟ್ಟನ್ನು ಕೇಸರಿ ಶಾಲಿನ ಮೂಲಕ ತೋರಿಸುತ್ತಿದ್ದಾರೆ. ಇನ್ನು ಮಂಡ್ಯದಲ್ಲಿ ಬಿಜೆಪಿ ಮಾಡುತ್ತಿರುವ ರಾಜಕೀಯ. ಚುನಾವಣೆ ಗೆಲ್ಲಲು ಏನು ಬೇಕಾದರೂ ಮಾಡುತ್ತೇವೆ ಎಂದು ಹೊರಟಿರುವ ಬಿಜೆಪಿ, ಮಂಡ್ಯದಲ್ಲಿ ರಾಷ್ಟ್ರ ಧ್ವಜವನ್ನೇ ವಿರೋಧಿಸಿ ಬೀದಿಗಿಳಿದಿದೆ. ಗಲಾಟೆ ಮಾಡಿದೆ. ಬಿಜೆಪಿ ಹಿರಿಯ ಮುಖಂಡರು ತ್ರಿವರ್ಣ ಧ್ವಜವನ್ನು ತಾಲಿಬಾನ್ ಧ್ವಜಕ್ಕೆ ಹೋಲಿಸುವ ಮಾತಾಡಿದ್ದಾರೆ.
ರಾಷ್ಟ್ರಧ್ವಜ, ನಾಡ ಧ್ವಜ ಎರಡೂ ಬೇಡ, ನಮಗೆ ಕೇಸರಿ ಧ್ವಜವೇ ಬೇಕು ಎಂದು ಹೋರಾಟಕ್ಕೆ ಇಳಿದಿದ್ದಾರೆ ಬಿಜೆಪಿಯವರು. ಹಿಂದುತ್ವದ ಹೆಸರಿನಲ್ಲಿ ಜನರನ್ನು ಎತ್ತಿಕಟ್ಟುವ ಪಿತೂರಿ ಬಿಟ್ಟರೆ, ಬಿಜೆಪಿ ಬಳಿ ಚುನಾವಣೆ ಗೆಲ್ಲುವುದಕ್ಕೆ ದಾರಿಗಳೇ ಇಲ್ಲವೇ ?. ಮಂಡ್ಯದಂಥ ನೆಲದಲ್ಲೂ ಅದು ಈಗ ತನ್ನ ಹಳೇ ಚಾಳಿಯನ್ನೇ ತೋರಿಸಲು ಹೊರಟಿದೆ, ಮತ್ತದಕ್ಕೆ ಜಾತ್ಯತೀತ ಎಂದು ಹೆಸರಿಟ್ಟುಕೊಂಡು ಬಿಜೆಪಿ ಮತ್ತು ಸಂಘ ಪರಿವಾರದವರ ರಾಮರಸ ಕುಡಿದ ಜೆಡಿಎಸ್ ಜೊತೆಯಾಗಿದೆ.
ಅತ್ಯಂತ ಅಪಾಯಕಾರಿಯಾಗಿ ಕಾಣಿಸುತ್ತಿರುವ ಸಂಗತಿಯೇ ಇದು. ಬಿಜೆಪಿ ಮಾಡುತ್ತಲೇ ಬಂದಿರುವುದೇ ಕೋಮು ರಾಜಕಾರಣ ಮತ್ತು ಬಳಸುತ್ತ ಬಂದಿರುವುದು ಹಿಂದುತ್ವದ ಅಸ್ತ್ರ ಎಂಬುದು ಗೊತ್ತಿರುವ ವಿಚಾರ. ಆದರೆ ಹೆಸರಲ್ಲಿಯೇ ಜಾತ್ಯತೀತ ಎಂದಿಟ್ಟುಕೊಂಡ ಜೆಡಿಎಸ್ ಮಾತ್ರ ಇಷ್ಟೊಂದು ಲಜ್ಜೆಗೇಡಿ ಪಕ್ಷವಾಗುತ್ತದೆ ಮತ್ತು ತನ್ನ ವ್ಯಕ್ತಿತ್ವವನ್ನೇ ಪೂರ್ತಿಯಾಗಿ ಕೋಮುವಾದಿಗಳಿಗೆ ಮಾರಿಕೊಳ್ಳುತ್ತದೆ.
ಮತ್ತದಕ್ಕೆ ಜಾತಿಬಲದ ಲೇಬಲ್ ಅಂಟಿಸಿಕೊಂಡು ಅತ್ಯಂತ ಹೊಲಸು ರಾಜಕೀಯ ಮಾಡಹೊರಟಿದೆ ಎಂದರೆ ಅಚ್ಚರಿಯಾಗುತ್ತದೆ.
ಬಿಜೆಪಿ ಹೇಗೆಲ್ಲಾ ಆಟವಾಡುತ್ತ ಮಂಡ್ಯವನ್ನು ಗೆಲ್ಲಲು ಹೊರಟಿದೆ ಮತ್ತು ಅದಕ್ಕಾಗಿ ಎಂತಹ ರಾಜಕೀಯ ಮಾಡುತ್ತಿದೆ ಎಂಬುದು ದಿಗಿಲು ಹುಟ್ಟಿಸುತ್ತಿರುವಾಗಲೇ, ಆರೆಸ್ಸೆಸ್ ಮತ್ತು ಬಿಜೆಪಿಯನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿದ್ದ ಕುಮಾರಸ್ವಾಮಿ, ಹೇಗೆ ಬಜರಂಗದಳ ಕಾರ್ಯಕರ್ತರ ಹಾಗೆ ಬದಲಾಗಿಬಿಟ್ಟಿದ್ದಾರೆ ಎಂಬುದು ಅಸಹ್ಯವಾಗಿ, ಅತ್ಯಂತ ಕೊಳಕಿನದ್ದಾಗಿ ಕಾಣಿಸತೊಡಗಿದೆ.
ಮಂಡ್ಯದಲ್ಲಿ ಅವರು ಹಾಗು ಅವರ ಪಕ್ಷದ ನಾಯಕರು ಹೋಗುವಾಗ ಅಲ್ಲಿ ಜೆಡಿಎಸ್ ಧ್ವಜವೇ ಇಲ್ಲ. ಅವರೂ ಸೇರಿ ಎಲ್ಲವೂ ಕೇಸರಿಮಯ.ಅದಕ್ಕಿಂತಲೂ ಆಘಾತಕಾರಿಯಾಗಿ, ಬಿಜೆಪಿ ಜೊತೆ ಸೇರಿಕೊಂಡು ರಾಷ್ಟ್ರಧ್ವಜದ ವಿರುದ್ಧವೇ ಕುಮಾರಸ್ವಾಮಿ ಬೀದಿಗಿಳಿದಿರುವುದರಿಂದ ಅವರ ಸಂಘಿ ಅವತಾರವನ್ನು, ಅತ್ಯಂತ ಕೀಳು ಮಟ್ಟದ ರಾಜಕಾರಣ ಜನರೆದುರು ಬಯಲಾಗಿದೆ.
ರಾಜಕೀಯವಾಗಿ ಇದೆಲ್ಲವೂ ಎಲ್ಲಿಗೆ ಹೋಗಿ ಮುಟ್ಟಬಹುದು?. ಸೋತು ಸುಣ್ಣವಾದ ಹತಾಶೆಯಲ್ಲಿ ಎಲ್ಲ ವಿವೇಕವನ್ನೂ ವಿವೇಚನೆಯನ್ನೂ ಕಳೆದುಕೊಂಡಂತಿರುವ ಜೆಡಿಎಸ್, ಆ ಹತಾಶೆಯಲ್ಲಿಯೇ ಮಾಡುತ್ತಿರುವ ಈ ಸರಣಿ ಪ್ರಮಾದಗಳ ಪರಿಣಾಮಗಳೇನು ?
ಮಂಡ್ಯವನ್ನು ಗೆಲ್ಲೋದನ್ನು ಪ್ರತಿಷ್ಠೆಯ ವಿಷ್ಯವಾಗಿ ಮಾಡಿಕೊಂಡಿರುವ ಕುಮಾರಸ್ವಾಮಿ, ಅದಕ್ಕಾಗಿ ಎಲ್ಲ ನೈತಿಕ ಎಲ್ಲೆಗಳನ್ನೂ ಮೀರ ಹೊರಟಿದ್ದಾರೆಯೆ?. ಮಂಡ್ಯದ ಕೆರಗೋಡು ಪ್ರಕರಣದಲ್ಲಿ ಕಾಣಿಸುತ್ತಿರುವ ಅತಿರೇಕಗಳನ್ನು ಗಮನಿಸಿದರೆ ಇದೆಲ್ಲವೂ ಹೌದೆನ್ನಿಸುತ್ತಿದೆ.
ಇತ್ತೀಚೆಗೆ ಅನುಭವಿಸಿರುವ ಹಿನ್ನಡೆಗಳ ಹಿನ್ನೆಲೆಯಲ್ಲಿ ಕಾಡುತ್ತಿರುವ ಭಯದಿಂದಾಗಿ,
ರಾಜಕೀಯವಾಗಿ ನೆಲೆ ಕಳೆದುಕೊಳ್ಳುವ ಆತಂಕದಿಂದಾಗಿ ಜೆಡಿಎಸ್ ಎಂಥದೋ ಉನ್ಮಾದಕ್ಕೆ ವಿವಶವಾದಂತೆ ಅದರ ಇವತ್ತಿನ ನಡೆಗಳು ಗೋಚರಿಸತೊಡಗಿವೆ.
ಅಂದಹಾಗೆ, ಕೆರಗೋಡು ಗ್ರಾಮದಿಂದ ಮಂಡ್ಯ ಡಿಸಿ ಕಚೇರಿವರೆಗೆ ಕುಮಾರಸ್ವಾಮಿ ಪಾದಯಾತ್ರೆ ನಡೆಸಿರೋದು ಯಾವುದೋ ಜನೋದ್ಧಾರದ ಉದ್ದೇಶಕ್ಕಾಗಿ ಅಲ್ಲ. ಬದಲಾಗಿ ಕೆರಗೋಡಿನಲ್ಲಿ ಬಿಜೆಪಿಯ ಜನ ಹಾರಿಸಿದ್ದ ಹನುಮ ಧ್ವಜವನ್ನು ಸರ್ಕಾರ ಇಳಿಸಿದೆ ಎಂಬುದನ್ನು ವಿರೋಧಿಸಿ ಕೇಸರಿ ಶಾಲು ಹೊದ್ದು ಅವರು ಪಾದಯಾತ್ರೆ ಮಾಡಿದ್ದಾರೆ.
ಜೆಡಿಎಸ್ ನ ಹಸಿರು ಶಾಲು ಬಿಟ್ಟು, ಬಿಜೆಪಿ, ಬಜರಂಗದಳ, ವಿಶ್ವ ಹಿಂದೂ ಪರಿಷತ್ ಜೊತೆಗೆ ಕುಮಾರಸ್ವಾಮಿ ಕೂಡ ಒಂದಾಗಿ ಹೋಗಿದ್ದಾರೆ. ಇದರೊಂದಿಗೆ, ಕೆರಗೋಡು ಗ್ರಾಮದಲ್ಲಿ ಭುಗಿಲೆದ್ದಿರುವ ಹನುಮಧ್ವಜ ವಿವಾದ ಪೂರ್ತಿಯಾಗಿ ರಾಜಕೀಯ ತಿರುವು ಪಡೆದುಕೊಂಡಿದ್ದು,
ಬಿಜೆಪಿಗೂ ಜೆಡಿಎಸ್ಗೂ ಅದು ಚುನಾವಣೆಯ ಹೊಸ ಅಸ್ತ್ರವಾಗಿ ಕಂಡಿದೆ.
ಸರ್ಕಾರಿ ಜಾಗದಲ್ಲಿ ಸ್ಥಾಪಿಸಿದ್ದ ಧ್ವಜಸ್ತಂಭದಿಂದ ಹನುಮಧ್ವಜ ಇಳಿಸಿ, ತ್ರಿವರ್ಣ ಧ್ವಜ ಹಾರಿಸಿದ ಸರ್ಕಾರದ ನಡೆಯನ್ನು ಖಂಡಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಅವರಿಗಿಂತ ಜೋರಾಗಿ ಕುಮಾರಸ್ವಾಮಿ ಮತ್ತವರ ಜೆಡಿಎಸ್ ಕಾರ್ಯಕರ್ತರು ತಮ್ಮ ಪಕ್ಷದ ಶಾಲನ್ನೇ ಬಿಟ್ಟು ಕೇಸರಿ ಶಾಲುಗಳನ್ನು ಧರಿಸಿ ರಾಷ್ಟ್ರ ಧ್ವಜದ ವಿರುದ್ಧ ಬೀದಿಗೆ ಇಳಿದಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಖುದ್ದು ಹೆಚ್.ಡಿ. ಕುಮಾರಸ್ವಾಮಿಯವರೇ ಕೇಸರಿ ಶಾಲು ಧರಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅವರ ಭಾಷಣ ಜೈ ಶ್ರೀರಾಮ್ ಘೋಷಣೆಯೊಂದಿಗೆ ಆರಂಭವಾಗುತ್ತದೆ. ಹನುಮ ಧ್ವಜ ತೆರವುಗೊಳಿಸಿದ್ದು ಅವರಿಗೆ ಸರ್ಕಾರದ ಉದ್ಧಟತನವಾಗಿ ಕಂಡಿದೆ.
ರಾಷ್ಟ್ರಧ್ವಜ ಇಲ್ಲವೆ ಕನ್ನಡಧ್ವಜ ಹಾರಿಸುವುದಕ್ಕೆ ಅನುಮತಿ ಪಡೆದವರು ಕೇಸರಿ ಧ್ವಜ ಹಾರಿಸಿದರೆಂದು ಸರ್ಕಾರ ಹೇಳುತ್ತಿದ್ದರೆ ಅದು ಕುಮಾರಸ್ವಾಮಿಯವರಿಗೆ ಕೇಳಿಸುತ್ತಲೇ ಇಲ್ಲ. ಸಂಘರ್ಷಕ್ಕೆ ಎಡೆ ಮಾಡಿರುವುದು ಬಿಜೆಪಿಯಾದರೆ, ಸರ್ಕಾರವೇ ಸಂಘರ್ಷಕ್ಕೆ ಕಾರಣ ಎಂದು ಕುಮಾರಸ್ವಾಮಿ ಅರಚಾಡುತ್ತಿದ್ದಾರೆ.
ಅವರೊಂದು ರೀತಿಯಲ್ಲಿ ಬಿಜೆಪಿಯ ಲೌಡ್ ಸ್ಪೀಕರ್ ಆಗಿಬಿಟ್ಟರಾ ಅನ್ನುವ ಅನುಮಾನವೂ ಕಾಡದೇ ಇರುವುದಿಲ್ಲ.
ಒಬ್ಬ ಮಾಜಿ ಸಿಎಂ ಅಂಥ ಮಟ್ಟಕ್ಕೆ ಇಳಿದದ್ದು ಕಳವಳಕಾರಿ. ಹನುಮ ಧ್ವಜ ಇಳಿಸಿ ಅಲ್ಲಿ ಸರಕಾರ ಹಾರಿಸಿದ್ದು ದೇಶದ ತ್ರಿವರ್ಣ ಧ್ವಜ. ಅದನ್ನೇ ಬಿಜೆಪಿ ಮುಖಂಡ ಸಿ ಟಿ ರವಿ ತಾಲಿಬಾನ್ ಧ್ವಜ ಎಂದು ಹೇಳುತ್ತಿದ್ದಾರೆ. ಎ ಎನ್ ಐ ಸಂಸ್ಥೆಗೆ ನೀಡಿರುವ ಹೇಳಿಕೆಯಲ್ಲಿ ಅವರು ಸರಕಾರ ತಾಲಿಬಾನ್ ಧ್ವಜ ಹಾರಿಸಲು ಹೊರಟಿದೆ ಎಂದೇ ಹೇಳಿದ್ದಾರೆ. ಅಂದರೆ ಅವರಿಗೀಗ ದೇಶದ ರಾಷ್ಟ್ರ ಧ್ವಜ ತಾಲಿಬಾನ್ ಧ್ವಜದ ಹಾಗೆ ಕಾಣುತ್ತಿದೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
"ರಾಷ್ಟ್ರಧ್ವಜ ಹಾರಬೇಕಿದ್ದ ಜಾಗದಲ್ಲಿ ಹನುಮಧ್ವಜ ಹಾರಿಸಿರುವುದು,
ಉದ್ದೇಶಪೂರ್ವಕವಾಗಿ ನಿಯಮ ಉಲ್ಲಂಘಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದು ಈ ಯಾವುವೂ ಆಕಸ್ಮಿಕ ಅಲ್ಲ. "
"ಈ ಘಟನೆ ಬಿಜೆಪಿ ಹಾಗೂ ಸಂಘ ಪರಿವಾರದ ಪೂರ್ವ ನಿಯೋಜಿತ ಕೃತ್ಯ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
"ರಾಜ್ಯ ಸರ್ಕಾರದ ವಿರುದ್ಧ ವ್ಯವಸ್ಥಿತವಾಗಿ ಜನರನ್ನು ಎತ್ತಿಕಟ್ಟುವ ಉದ್ದೇಶದಿಂದಲೇ ಇಂತಹದ್ದೊಂದು ಸ್ಥಿತಿ ನಿರ್ಮಾಣ ಮಾಡಲಾಗಿದೆ. ಮಂಡ್ಯದಲ್ಲಿ ಕೋಮುಗಲಭೆ ಎಬ್ಬಿಸುವ ಸಂಚನ್ನು ಬಿಜೆಪಿ ನಾಯಕರು ರೂಪಿಸಿರುವುದು, ಲೋಕಸಭಾ ಚುನಾವಣೆಗೆ ನಡೆಸಿರುವ ತಯಾರಿಯಾಗಿದೆ ಎಂಬುದರಲ್ಲಿ ಅನುಮಾನವೇ ಇಲ್ಲ" ಎಂದು ಸಿಎಂ ಹೇಳಿದ್ದಾರೆ.
"ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ನಾವು ಯಾವುದೇ ನಿರ್ದಿಷ್ಟ ಜಾತಿ, ಧರ್ಮ, ಸಮುದಾಯದ ವಿರುದ್ಧವಿಲ್ಲ, ನಮ್ಮದು ಸಂವಿಧಾನಪರವಾದ ನಿಲುವು. ಬಿಜೆಪಿ ನಾಯಕರ ಮಾತುಗಳಿಗೆ ಮರುಳಾಗಿ, ಕಾನೂನು ಕೈಗೆತ್ತಿಕೊಳ್ಳುವ ತಪ್ಪನ್ನು ಜನತೆ ಮಾಡಬಾರದು" ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.
ಒಂದು ಸಣ್ಣ ಅವಕಾಶ ಸಿಕ್ಕಿದರೂ, ಕಾಂಗ್ರೆಸ್ ಒಂದು ಸಮುದಾಯವನ್ನು ಓಲೈಸುವ ತುಷ್ಟೀಕರಣ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸುವುದು ಹೊಸದಲ್ಲ. ಈಗಲೂ ಅದೇ ಅಪಪ್ರಚಾರದಲ್ಲಿ ಬಿಜೆಪಿ ನಾಯಕರೆಲ್ಲ ತೊಡಗಿದ್ದಾರೆ. ಕಾಂಗ್ರೆಸ್ ಅನ್ನೂ ಸಿದ್ದರಾಮಯ್ಯನವರನ್ನೂ ಹಿಂದೂ ವಿರೋಧಿ ಎನ್ನತೊಡಗಿದ್ಧಾರೆ.
ಇದೆಲ್ಲದಕ್ಕೂ ಕುಮಾರಸ್ವಾಮಿ ಸಾಥ್ ಕೊಟ್ಟು ನಿಂತಿದ್ದಾರೆ. ಹೇಗಾದರೂ ಈ ಬಾರಿ ಮಂಡ್ಯದಲ್ಲಿ ಗೆದ್ದು ತೋರಿಸಬೇಕೆನ್ನುವ ಹಠದಲ್ಲಿ ಅವರು ಹಾದಿ ತಪ್ಪುತ್ತಿದ್ದಾರೆಯೇ, ಎಂಬ ಅನುಮಾನ ಅವರ ಈ ನಡೆಯಲ್ಲಿನ ಅತಿರೇಕವನ್ನು ಗಮನಿಸಿದರೆ ಬಾರದೇ ಇರುವುದಿಲ್ಲ.
ಮಂಡ್ಯ ತನ್ನದೇ ಆದ ಸಾಂಸ್ಕೃತಿಕ ಹಿನ್ನೆಲೆ ಉಳ್ಳದ್ದಾಗಿದೆ.
ಹಾಗೆಯೇ ರಾಷ್ಟ್ರ ಹಾಗು ರಾಜ್ಯ ರಾಜಕಾರಣದ ಹಲವು ಆಗುಹೋಗುಗಳಲ್ಲಿ ಸ್ವಾತಂತ್ರ್ಯಪೂರ್ವದಿಂದಲೂ ಮಂಡ್ಯ ರಾಜಕಾರಣದ ಪಾತ್ರ ಇದ್ದೇ ಇದೆ.
ಏಷ್ಯಾ ಖಂಡದಲ್ಲೇ ಮೊದಲ ಬಾರಿಗೆ ಸಹಕಾರಿ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಕೆವಿ ಶಂಕರೇಗೌಡರು ಕ್ರಾಂತಿ ಮೊಳಗಿಸಿದ್ದರು. ಶಿಕ್ಷಣ ಕ್ಷೇತ್ರದಲ್ಲೂ ಅವರದು ದೊಡ್ಡ ಹೆಸರು. ಎಂಥದೇ ಇಕ್ಕಟ್ಟು ಬಿಕ್ಕಟ್ಟಿನ ನಡುವೆಯೂ ತನ್ನ ಸಾಂಸ್ಕೃತಿಕ ಸೊಗಡನ್ನು ಕಳೆದುಕೊಂಡಿರದ ಮಂಡ್ಯದಲ್ಲಿ ಇವತ್ತಿನ ರಾಜಕಾರಣ ನಿಜಕ್ಕೂ ಕೊಳಕೆನ್ನಿಸುವಂಥ ಬೆಳವಣಿಗೆ.
ಸಂಘ ಪರಿವಾರದ ದ್ವೇಷ ರಾಜಕಾರಣಕ್ಕೆ ಆಹಾರವಾಗದೆ ಈವರೆಗೂ ಉಳಿದಿರುವ ಮಂಡ್ಯವನ್ನು ಕುಮಾರಸ್ವಾಮಿ ಈಗ ಹರಿವಾಣದಲ್ಲಿಟ್ಟು ಬಿಜೆಪಿಗೆ ಕೊಡಲು ಹೊರಟಿದ್ದಾರೆ. ಅಧಿಕಾರದ ಹಸಿವು, ಆಳುವ ಹಸಿವು, ಜನರನ್ನು ಒಡೆವ ಧೋರಣೆಯ ಹಿಕಮತ್ತು ಎಲ್ಲವೂ ಸೇರಿ ಮಂಡ್ಯವನ್ನು ಅಲ್ಲೋಲ ಕಲ್ಲೋಲಗೊಳಿಸಲಿದೆಯೆ?
ಮಂಡ್ಯ ರಾಮನಗರದ ರಾಜಕೀಯ, ಅಲ್ಲಿ ಇತ್ತೀಚಿಗೆ ಜೆಡಿಎಸ್ ಅನುಭವಿಸಿರುವ ಹಿನ್ನಡೆಗಳ ಹಿನ್ನೆಲೆಯಲ್ಲಿ ಈಗಿನ ರಾಜಕೀಯ ವಿಷಮಯವಾಗಿ ಕಾಣುತ್ತಿದೆ ? ಇನ್ನೊಂದೆಡೆ ಕಾಂಗ್ರೆಸ್ ಬೆಂಬಲದಿಂದ ಗೆದ್ದಿದ್ದ ದರ್ಶನ್ ಪುಟ್ಟಣ್ಣಯ್ಯ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತ,
ಕಾಂಗ್ರೆಸ್ಗೆ ಸಡ್ಡು ಹೊಡೆಯುತ್ತಿರುವಂತೆ ಕಾಣಿಸುತ್ತಿದೆ. ಅವರು ಜೆಡಿಎಸ್ ಜೊತೆ ಕೈ ಜೋಡಿಸಿದ್ದಾರಾ ಎಂಬ ಅನುಮಾನಗಳು ಶುರುವಾಗಿವೆ.
ಹಾಗಾದರೆ ಮಂಡ್ಯವನ್ನು ಜೆಡಿಎಸ್ ಬಿಜೆಪಿ ಗೆ ಒಪ್ಪಿಸಲು ವೇದಿಕೆ ಸಜ್ಜಾಗಿದೆಯೇ ? ಇಂಥದೊಂದು ರಾಜಕೀಯದ ಪರಿಣಾಮ ಅಕ್ಕಪಕ್ಕದ ಜಿಲ್ಲೆಗಳ ಮೇಲೂ ಆಗಲಿದೆಯೇ ? ಇವೆಲ್ಲವೂ ಸದ್ಯಕ್ಕೆ ಆತಂಕ ಮೂಡಿಸುತ್ತಿರುವ ಪ್ರಶ್ನೆಗಳಾಗಿವೆ. ಈ ಬಾರಿ ಲೋಕಸಭಾ ಚುನಾವಣೆಗೆ ಬಿಜೆಪಿ ಮಂಡ್ಯವನ್ನು ಜೆಡಿಎಸ್ ಗೇ ಬಿಟ್ಟು ಕೊಡಬಹುದು. ಅಲ್ಲಿ ಕುಮಾರಸ್ವಾಮಿ ಅಥವಾ ಅವರ ಪಕ್ಷದ ಯಾರೂ ನಿಲ್ಲಬಹುದು. ಗೆಲ್ಲಲೂಬಹುದು.
ಆದರೆ ಈಗ ಅಲ್ಲಿ ಕುಮಾರಸ್ವಾಮಿಯನ್ನು ಬಳಸಿಕೊಂಡು ಸಂಘ ಪರಿವಾರ ಆಡುತ್ತಿರುವ ಆಟ ಮುಂದುವರಿದರೆ ಅದರ ಸಂಪೂರ್ಣ ರಾಜಕೀಯ ಲಾಭ ಆಗೋದು ಕೊನೆಗೆ ಬಿಜೆಪಿಗೇ.
ಬಿಜೆಪಿ ಅಲ್ಲಿ ತಳಮಟ್ಟದಲ್ಲಿ ಗಟ್ಟಿಯಾದ ಕೂಡಲೇ ಮಾಡುವ ಮೊದಲ ಕೆಲಸ ಜೆಡಿಎಸ್ ಅನ್ನು ತನ್ನ ದಾರಿಯಿಂದ ನಿವಾರಿಸಿಕೊಳ್ಳುವುದು.
ಅಲ್ಲಿಗೆ ಮಂಡ್ಯ ಸಂಪೂರ್ಣ ಸಂಘ ವಶವಾಗುತ್ತದೆ.
ರಾಷ್ಟ್ರಧ್ವಜ ಬೇಕೊ ಕೇಸರಿ ಧ್ವಜ ಬೇಕೊ? ಮಂಡ್ಯದ ಜನರು ಬೇಕೊ ಸಂಘ ಪರಿವಾರದವರೇ ಬೇಕೊ ? ಎಂದು ಮಂಡ್ಯದ ಜನರು ಕುಮಾರಸ್ವಾಮಿಯವರನ್ನು ಕೇಳುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಅವರ ಗಮನಕ್ಕೂ ಬಂದಿರಬಹುದು.
ತಾನು ಯಾವ ಹೆಜ್ಜೆ ತೆಗೆದುಕೊಳ್ಳಬೇಕಾಗಿದೆ ಎಂಬ ವಿವೇಚನೆ ಅವರಿಗಿಲ್ಲದೇ ಹೋದಲ್ಲಿ,
ಇವತ್ತು ಪಕ್ಷದ ಹಸಿರು ಧ್ವಜ ಕಣ್ಮರೆಯಾಗಿ ಕೇಸರಿ ಧ್ವಜದ ಜೊತೆ ಹೊರಟಿರುವ ಅವರ ರಾಜಕೀಯ ಅಸ್ತಿತ್ವವೂ ಅದೇ ಹಾದಿಯಲ್ಲಿ ಕಳೆದುಹೋಗುವ ಅಪಾಯವಂತೂ ಇದೆ.
ಮಂಡ್ಯವನ್ನು ದೊಡ್ಡ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಮಂಡ್ಯದ ಜನರು ಕಾಪಾಡಿಕೊಂಡಾರು.
ಆದರೆ ಕುಮಾರಸ್ವಾಮಿ ತಮ್ಮ ರಾಜಕೀಯ ಅಸ್ತಿತ್ವ ಕೇಸರಿ ಅಲೆಯಲ್ಲಿ ಕೊಚ್ಚಿಹೋಗದಂತೆ ತಾವೇ ಕಾಯ್ದುಕೊಳ್ಳಬೇಕಾಗಿದೆ. ಪ್ರಾದೇಶಿಕ ಪಕ್ಷದ ಘನತೆ ಉಳಿಸಿಕೊಳ್ಳುವುದಕ್ಕಾದರೂ ಅವರು ಎಚ್ಚರಗೊಳ್ಳಬೇಕಾಗಿದೆ.