ಗುರುತಿನ ಚೀಟಿ

Update: 2023-12-24 04:34 GMT

ಮೂಲ: ಮುಹಮ್ಮದ್ ದರ್ವೀಷ್ 

ಕನ್ನಡಕ್ಕೆ: ಕೆ. ಫಣಿರಾಜ್

ಮುಹಮ್ಮದ್ ದರ್ವೀಷ್ (1941-2008), ಫೆಲೆಸ್ತೀನಿನ ಮಹಾಕವಿ ಮಾತ್ರವಲ್ಲ, ಜಗತ್ಪ್ರಸಿದ್ಧ ಕವಿಗಳ ಮುಂಚೂಣಿ ಸಾಲಿನಲ್ಲಿ ನೆಲೆಗೊಂಡಿರುವಂತಹ ಕವಿ. 1948ರ ಇಸ್ರೇಲ್ ಆಕ್ರಮಣದಲ್ಲಿ ಅವರ ಹುಟ್ಟೂರನ್ನು ನಾಶಗೊಳಿಸಲಾಯಿತು. ಅಲ್ಲಿಂದ ಅವರು ಜೀವನ ಪೂರ್ತಿ ಇಸ್ರೇಲ್ ಆಕ್ರಮಿತ ಪ್ರದೇಶ, ಲೆಬನಾನ್, ಅಮೆರಿಕಗಳಲ್ಲಿ ನಿರಾಶ್ರಿತರ ಜೀವನ ನಡೆಸಿದರು. ಅವರು, ಫೆಲೆಸ್ತೀನಿಯರ ಪ್ರತಿರೋಧ ಚಳವಳಿಯ ಸಕ್ರಿಯ ಭಾಗವಾಗಿದ್ದರು. ಅವರ ಪದ್ಯಗಳಲ್ಲಿ ಆಕ್ರಮಣಕ್ಕೆ ತುತ್ತಾದ ಫೆಲೆಸ್ತೀನಿಯರ ಆಕ್ರೋಶ, ವಿಷಾದಗಳ ಜೊತೆಗೆ ಮಾನವರ ಅಸ್ತಿತ್ವದ ಹಲವು ಗಾಢ ಭಾವಗಳು ಹೆಣೆದುಕೊಂಡು, ಕಾವ್ಯಕ್ಕೆ ಹೊಸ ಖದರ್ ದಕ್ಕಿರುವುದನ್ನು ಅನುಭವಿಸಬಹುದು.

 

ಬರೆದಿಟ್ಟುಕೊಳ್ಳಿ

ನಾನೊಬ್ಬ ಅರಬ

ಗುರುತಿನ ಚೀಟಿ ನಂಬ್ರ 50000

ಎಂಟು ಮಕ್ಕಳಿವೆ ನನಗೆ

ಒಂಭತ್ತನೇದು ಹುಟ್ಟಲಿದೆ ಕಳೆದರೆ ಮುಂದಿನ ಬೇಸಿಗೆ

ನನ್ನ ಕಂಡರೆ ಕೋಪವೇ ನಿಮಗೆ?

ಬರೆದಿಟ್ಟುಕೊಳ್ಳಿ 

ನಾನೊಬ್ಬ ಅರಬ

ಕಲ್ಲು ಗಣಿಯ ಶ್ರಮಿಕರಲ್ಲೊಬ್ಬ 

ಎಂಟು ಮಕ್ಕಳಿವೆ ನನಗೆ

ಅವರಿಗೆ ರೊಟ್ಟಿ ಬಟ್ಟೆ ಪುಸ್ತಕಗಳ

ತೆಗೆದು ಕೊಡುವೆ ಕಲ್ಲುಗಳಿಂದಲೇ.

ಬರೆದಿಟ್ಟುಕೊಳ್ಳಿ

ನಾನೊಬ್ಬ ಅರಬ

ನನ್ನ ಹೆಸರಿಗೆ ಲಗಾತ್ತಾಗಿಲ್ಲ ಯಾವುದೇ ಬಿರುದು

ರೇಗಿರುವ ಜನರ ದೇಶದಲ್ಲಿ

ಸಂಯಮದಿಂದ ಇರುವೆ

ಕಾಲ ಹುಟ್ಟುವುದಕ್ಕೆ ಮುಂಚೆಯೇ

ಶಕೆಗಳ ಶುರುವಿಗೆ ಮುನ್ನವೇ

ಪೈನ್, ಓಲಿವ್ ಮರಗಳಿಗಿಂತ ಹಿಂದೆಯೇ

ಹುಲ್ಲು ಗರಿಕೆ ಇನ್ನೂ ತಲೆ ಎತ್ತದಿರುವಾಗ

ನಾನು ನನ್ನ ಬೇರು ಬಿಟ್ಟಿರುವೆ

ನನ್ನಜ್ಜಂದಿರು ರೈತರು

ನನ್ನಪ್ಪ ನೇಗಿಲ ಕುಟುಂಬದ ಕೂಸು

ಯಾರೂ ಹೊಟ್ಟೆ ತುಂಬಿದವರಲ್ಲ

ಯಾರಿಗೂ ಹಿರಿ ಮನೆತನದ ಹಂಗಿಲ್ಲ

ಅಕ್ಷರ ಕಲಿಸುವುದಕ್ಕೆ ಮುನ್ನ

ನೇಸರನ ಸ್ವಾಭಿಮಾನ ಕಲಿಸಿರುವರು ನನಗೆ

ನನ್ನ ಮನೆಯೂ ರೆಂಬೆ ಕೊಂಬೆಗಳಿಂದ 

ಕಟ್ಟಿದ ಕಾವಲುಗಾರನ ಗುಡಿಸಲು

ಮನೆತನದ ಭಾರವಿಲ್ಲ ನನ್ನ ಹೆಸರಿಗೆ

ಇದು ನನ್ನ ಜಾತಕ, ತೃಪ್ತಿಯಾಯ್ತೇ ನಿಮಗೆ!

ಬರೆದಿಟ್ಟುಕೊಳ್ಳಿ

ನಾನೊಬ್ಬ ಅರಬ

ನೀವು ನಮ್ಮ ಹಿರಿಕರ ತೋಟ ಕದ್ದಿದ್ದೀರಿ

ಕದ್ದಿದ್ದೀರಿ ನನ್ನ ಮಕ್ಕಳೊಟ್ಟಿಗೆ ನಾನು ಉತ್ತುಬಿತ್ತ ನೆಲವನ್ನ

ಏನು ಉಳಿಸಿದ್ದೀರಿ ನಮಗೆ

ಈ ಕಲ್ಲು ಬಂಡೆಗಳ ಹೊರತು

ಅವನ್ನು ಕಿತ್ತುಕೊಳ್ಳಲಿದೆಯಂತೆ 

ನಿಮ್ಮ ಪ್ರಭುತ್ವ! ಹೌದೇ!

ಹೀಗಾಗಿ,

ಬರೆದಿಟ್ಟುಕೊಳ್ಳಿ ಪುಟದ ಮೊದಲ ಸಾಲಲ್ಲಿ:

ನಾನು ಯಾರನ್ನೂ  ದ್ವೇಷಿಸುವುದಿಲ್ಲ

ಏನನ್ನೂ ಕಬಳಿಸುವುದಿಲ್ಲ

ಆದರೆ ನನಗೆ ಹಸಿವಾಯಿತೆಂದರೆ

ಕಬಳಿಸಿದವರ ಮಾಂಸವೇ ಎನ್ನ ಆಹಾರ

ಹುಷಾರ್! ನನಗೂ ಹಸಿವಾಗುತ್ತದೆ

ಹುಷಾರ್! ನನಗೂ ಸಿಟ್ಟು ನೆತ್ತಿಗೇರುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!