ರಾಹುಲ್ ಗಾಂಧಿ 'ಪಪ್ಪು' ಎಂದಾದರೆ ಬಿಜೆಪಿಗೆ ಇಷ್ಟೊಂದು ತಲೆಬಿಸಿ ಏಕೆ ?
ಅಯೋಧ್ಯೆಯ ನೂತನ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಆಗುತ್ತಿರುವಾಗಲೇ ಈಶಾನ್ಯ ಭಾರತದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ದೇವಸ್ಥಾನಕ್ಕೆ ಹೋಗದಂತೆ ತಡೆಯಲಾಯಿತು. ಒಂದೆಡೆ ಪ್ರಧಾನಿ ಮಂದಿರಕ್ಕೆ ಹೋಗುವಾಗ ಇಡೀ ದೇಶವೇ ಅದರ ಸಂಭ್ರಮದಲ್ಲಿದ್ದರೆ, ಇನ್ನೊಂದೆಡೆ ಮಂದಿರಕ್ಕೆ ಹೋಗುತ್ತಿದ್ದ ವಿಪಕ್ಷ ನಾಯಕನಿಗೆ ಪ್ರವೇಶ ನಿರಾಕರಿಸಲಾಯಿತು.
ಒಂದಾನೊಂದು ಕಾಲದಲ್ಲಿ ಕಾಂಗ್ರೆಸ್ನಲ್ಲಿದ್ದ, ಈಗ ಕಾಂಗ್ರೆಸ್ ಹಾಗು ರಾಹುಲ್ ಗಾಂಧಿಯ ಕಟ್ಟಾ ವಿರೋಧಿಯಾಗಿರುವ ಅಸ್ಸಾಂ ಸಿಎಂ ಹಿಮಂತ್ ಬಿಸ್ವ ಶರ್ಮ ಹಾಗು ರಾಹುಲ್ ನಡುವಿನ ಜಿದ್ದಾಜಿದ್ದಿ ಅಲ್ಲಿ ತಾರಕಕ್ಕೆ ಏರಿದೆ. ಇದರ ಒಂದು ದಿನ ಮೊದಲು ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷರ ಮೇಲೆ ಹಲ್ಲೆ ನಡೆದ ಆರೋಪವೂ ಕೇಳಿಬಂದಿದೆ.
ಯಾರನ್ನು "ಪಪ್ಪು" ಎಂದು ಇದೇ ಬಿಜೆಪಿ ಹಿಂದೊಮ್ಮೆ ಆಡಿಕೊಂಡಿತ್ತೋ, ಆ ರಾಹುಲ್ ಗಾಂಧಿಯ ಯಾತ್ರೆಯ ಬಗ್ಗೆ ಬಿಜೆಪಿಗೆ ಈಗ ಭಯವಾಗಿದೆಯೇ? ಇದು ದ್ವೇಷ ರಾಜಕೀಯ ಅಲ್ಲವೇ ?. ಅಲ್ಲೂ ಅಲ್ಲಿನ ಕಾಂಗ್ರೆಸ್ ಸಂಸದ ಹಾಗು ಶಾಸಕರಿಗೆ ಪ್ರವೇಶ ಕಲ್ಪಿಸಿ ರಾಹುಲ್ ರನ್ನು ಮಾತ್ರ ತಡೆಯುವ ಹಿಂದಿರುವ ತರ್ಕವೇನು ?.
ಏನಿದು ಇಡೀ ದೇಶದಲ್ಲಿ ಮಂದಿರವೇ ಆವರಿಸಿಕೊಂಡಿರುವಾಗ ಒಬ್ಬರಿಗೆ ಮಂದಿರ ಪ್ರವೇಶಕ್ಕೆ ನಿರ್ಬಂಧದ ರಾಜಕೀಯ? ಇದನ್ನೇ ರಾಹುಲ್ ಗಾಂಧಿ, ತಾವು ಮಾಡಿರುವ ಅಪರಾಧವಾದರೂ ಏನು ಎಂದು ಪ್ರಶ್ನಿಸುವ ಮೂಲಕ ಮತ್ತೊಂದು ರೀತಿಯಲ್ಲಿ ಕೇಳಿದ್ದಾರೆ. ಭಾರತ್ ಜೋಡೋ ನ್ಯಾಯ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ 15ನೇ ಶತಮಾನದ ಅಸ್ಸಾಮಿ ಸಂತ ಸ್ರೀಮಂತ ಶಂಕರದೇವ ಅವರ ಜನ್ಮ ಸ್ಥಳವಾದ ಬಟದ್ರವ ಸತ್ರ ದೇಗುಲಕ್ಕೆ ಹೋಗದಂತೆ ತಡೆಯಲಾಯಿತು.
ಹಿಂದುತ್ವದ ಹೆಸರಿನ ರಾಜಕಾರಣ ಮಾಡುತ್ತಿರುವ ಪ್ರಧಾನಿ ಮೋದಿ ಮತ್ತು ಅವರದೇ ಪಕ್ಷದ ಅಧಿಕಾರವಿರುವ ಅಸ್ಸಾಂನಲ್ಲಿ ಇದೆಂಥ ಕೀಳು ರಾಜಕೀಯ?. ಅಯೋಧ್ಯೆಯ ಕಾರ್ಯಕ್ರಮದಲ್ಲಿ ಭಾಗವಹಿಸದವರೆಂಬ ಕಾರಣಕ್ಕೆ ಅಸ್ಸಾಂನಲ್ಲಿ ಅವರು ಭೇಟಿ ನೀಡಬಯಸಿದ್ದ ದೇವಸ್ಥಾನಕ್ಕೆ ಪ್ರವೇಶ ನೀಡದೆ ಸೇಡು ತೀರಿಸಿಕೊಳ್ಳಲಾಯಿತೆ?.
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಆಗುತ್ತಿರುವ ದಿನವೇ ಸಂತ ಸ್ರೀಮಂತ ಶಂಕರ ದೇವ ಅವರ ಜನ್ಮಸ್ಥಳವಾದ ಬಟದ್ರಾವ ಸತ್ರ ದೇಗುಲಕ್ಕೆ ರಾಹುಲ್ ಗಾಂಧಿ ಭೇಟಿ ನೀಡೋದು ಸರಿಯಲ್ಲ.
ಇದು ಅನಗತ್ಯ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿರುವುದೇ ನಿಜಕ್ಕೂ ವಿಚಿತ್ರವಾಗಿತ್ತು.
ರಾಹುಲ್ ಗಾಂಧಿ ಆ ದೇವಾಲಯಕ್ಕೆ ಭೇಟಿ ನೀಡಿದ್ದರೆ ಅದೇಗೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತಿತ್ತು?. ಅಸ್ಸಾಂ ಸರ್ಕಾರ ಮುಂದೆ ಮಾಡುತ್ತಿರುವ ನೆಪವೇ ಬಹಳ ವಿಚಿತ್ರವಾಗಿದೆ. ಆದರೆ ಅದರ ರಾಜಕೀಯ ಮಾತ್ರ ಇದರಿಂದ ಬಟಾಬಯಲಾಗಿದೆ. ನನಗೆ ನಿರ್ಬಂಧ ವಿಧಿಸಿರೋದು ಏಕೆ? ನಾನು ಮಾಡಿದ ಅಪರಾಧವಾದ್ರೂ ಏನು ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಇದು ಮೇಲ್ನೋಟಕ್ಕೆ ರಾಹುಲ್ ವಿರುದ್ಧದ ಹಿಮಂತ್ ಬಿಸ್ವ ಶರ್ಮಾ ಹಗೆತನದಂತೆ ಕಂಡರೂ, ರಾಹುಲ್ ಪ್ರಕಾರ, ಶರ್ಮಾ ಒಬ್ಬರೇ ಇಂಥದೊಂದು ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಅವರು ತಮಗೆ ಮೇಲಿಂದ ಏನು ನಿರ್ದೇಶನ ಇದೆಯೊ ಅದನ್ನು ಪಾಲಿಸಿದ್ದಾರೆ ಅಷ್ಟೆ.ದೇಗುಲಕ್ಕೆ ಯಾರು ಭೇಟಿ ನೀಡಬೇಕು, ಯಾರು ಭೇಟಿ ನೀಡಬಾರದು ಎಂದು ಪ್ರಧಾನಿ ಮೋದಿ ನಿರ್ಧರಿಸುತ್ತಾರೆಯೆ ಎಂದೂ ರಾಹುಲ್ ಗಾಂಧಿ ಕೇಳಿದ್ದಾರೆ.
" ಕಾನೂನು ಸುವ್ಯವಸ್ಥೆ ಬಿಕ್ಕಟ್ಟು ಎನ್ನಲಾಗುತ್ತಿದೆ. ಆದರೆ ಕಾನೂನು ಸುವ್ಯವಸ್ಥೆ ಬಿಕ್ಕಟ್ಟಿನ ವೇಳೆ ಕಾಂಗ್ರೆಸ್ ಸಂಸದ ಗೌರವ್ ಗೊಗೋಯ್ ಹೋಗಬಹುದು. ಮತ್ತೆಲ್ಲರೂ ಹೋಗಬಹುದು. ಆದರೆ ನಾನು ಮಾತ್ರ ಹೋಗುವಂತಿಲ್ಲ ಏಕೆ " ಎಂಬುದು ರಾಹುಲ್ ಪ್ರಶ್ನೆಯಾಗಿತ್ತು. ಪಕ್ಷದ ಸಂಸದ ಗೌರವ್ ಗೊಗೊಯ್ ಹಾಗೂ ಬಟದ್ರಾವ ಶಾಸಕ ಸಿಬಾಮೋನಿ ಬೋರಾ ಅವರಿಬ್ಬರು ಶಂಕರದೇವರ ಜನ್ಮಸ್ಥಳಕ್ಕೆ ಹೋಗಲು ಅವಕಾಶ ನೀಡಲಾಯಿತು.
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನಾ ಸಮಾರಂಭ ಇರುವುದರಿಂದ ಇಲ್ಲಿಯೂ ದೇವಸ್ಥಾನಕ್ಕೆ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗಲಿದೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಅಲ್ಲಿಗೆ ಭೇಟಿ ನೀಡಿದರೆ ನೂಕುನುಗ್ಗಲು ಉಂಟಾಗಬಹುದು ಎಂದೇ ನೆಪ ಹೇಳಲಾಗಿತ್ತು. ಆದರೆ, ಶಂಕರದೇವರ ದೇವಸ್ಥಾನದಲ್ಲಿ ಜನರೇ ಇರಲಿಲ್ಲ, ದೇವಸ್ಥಾನ ಸಂಪೂರ್ಣ ಖಾಲಿಯಿತ್ತು ಎಂಬುದನ್ನೂ ವರದಿಗಳು ಖಚಿತಪಡಿಸಿವೆ.
ಒಳಗೆ ಹೋಗಿದ್ದ ಸಂಸದ ಗೌರವ್ ಗೊಗೋಯಿ ಕೂಡ ಅದನ್ನೇ ಹೇಳಿದ್ದರು.
ಹಾಗಿದ್ದರೆ, ಅಂಥದೊಂದು ನೆಪ ಮುಂದಿಟ್ಟು ರಾಹುಲ್ ಅವರನ್ನು ತಡೆದದ್ದರ ಹಿಂದಿರುವುದು ರಾಜಕೀಯ ಉದ್ದೇಶ ಎನ್ನುವುದೇ ಸ್ಪಷ್ಟವಾಗುತ್ತದೆಯಲ್ಲವೆ?. ರಾಹುಲ್ ಅವರಿಗೆ ಪ್ರವೇಶ ನಿರಾಕರಿಸಿರುವುದನ್ನು ಖಂಡಿಸಿ ಮಹಿಳಾ ಕಾಂಗ್ರೆಸ್ ಮುಖಂಡರು ಧರಣಿ ಕುಳಿತರು. ರಾಹುಲ್ ಕೂಡಾ ಇದರಲ್ಲಿ ಪಾಲ್ಗೊಂಡರು.
ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಪ್ರಧಾನಿ ಮತ್ತು ಅಸ್ಸಾಂ ಮುಖ್ಯಮಂತ್ರಿ ಅವಕಾಶ ನೀಡದಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಾಂಗ್ರೆಸ್ ಸೇವಾದಳದ ಮುಖ್ಯಸ್ಥ ಲಾಲ್ಜಿ ದೇಸಾಯಿ ಟೀಕಿಸಿದರು. ಇದು ಘೋರವಾಗಿದೆ. ದೇಶದಲ್ಲಿ ಯಾರು ಯಾವ ಸಮಯದಲ್ಲಿ ಪ್ರಾರ್ಥನೆ ಮಾಡಬೇಕೆಂದು ಪ್ರಧಾನಿ ನಿರ್ಧರಿಸುವುದು ದುರದೃಷ್ಟಕರ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನಿಜ. ದೇಶದಲ್ಲಿ ವಿಪಕ್ಷ ನಾಯಕರೊಬ್ಬರು ದೇವಸ್ಥಾನ ಪ್ರವೇಶ ಮಾಡಬೇಕೆ ಬೇಡವೆ ಎಂಬುದನ್ನೂ ಪ್ರಧಾನಿಯೇ ನಿರ್ಧರಿಸುವ ಸ್ಥಿತಿ ಬಂದುಬಿಟ್ಟಿದೆಯೆ?. ಶಂಕರದೇವರ ತತ್ವದಲ್ಲಿ ನಂಬಿಕೆಯಿಟ್ಟವನು ನಾನು. ಅಲ್ಲದೆ ನಮಗೆ ಒಗ್ಗೂಡಿಸುವುದರಲ್ಲಿ ನಂಬಿಕೆಯೇ ಹೊರತು ದ್ವೇಷವನ್ನು ಹರಡುವುದರಲ್ಲಲ್ಲ ಎಂದೂ ರಾಹುಲ್ ಹೇಳಿದ್ದಾರೆ.
ಅಸ್ಸಾಂ ಮತ್ತು ಇಡೀ ದೇಶ ಶಂಕರದೇವರು ತೋರಿಸಿದ ಮಾರ್ಗವನ್ನು ಅನುಸರಿಸಬೇಕು ಎಂಬುದು ನನ್ನ ನಂಬಿಕೆ ಎಂಬ ರಾಹುಲ್ ಮಾತು ಮಹತ್ವದ್ದು. ಹಿಂದುತ್ವದ ಮಾತನಾಡುವ ಮಂದಿ, ನಿಜವಾಗಿಯೂ ಸಂತರಾದವರ ತತ್ವಗಳನ್ನು ಅನುಸರಿಸುತ್ತಿದ್ದಾರೆಯೆ?. ರಾಮರಾಜ್ಯದ ಮಾತನಾಡುತ್ತಿರುವವರ ಮನಸ್ಸು ರಾಮನ ಆದರ್ಶಗಳ ಹತ್ತಿರವಾದರೂ ಸುಳಿದಾಡಿದ್ದು ಇದೆಯೆ?.
ಖಂಡಿತ ಇಲ್ಲ. ಇವರಿಗೆ ರಾಜಕಾರಣಕ್ಕಾಗಿ ಮಾತ್ರವೇ ರಾಮ ಬೇಕು, ಮಂದಿರ ಬೇಕು. ಅದನ್ನೂ ದ್ವೇಷ ಹರಡುವುದಕ್ಕಾಗಿಯೇ ಬಳಸಲಾಗುತ್ತಿದೆ ಎಂಬುದೇ ವಿಪರ್ಯಾಸ. ಅಸ್ಸಾಂನಲ್ಲಿ ಕಾಂಗ್ರೆಸ್ ನಾಯಕರ ಮೇಲೆ ಹಲ್ಲೆ ನಡೆದ ಬಗ್ಗೆಯೂ ಆರೋಪಗಳು ಕೇಳಿಬಂದಿದ್ದವು. ಅಲ್ಲದೆ, ಯಾತ್ರೆಯಲ್ಲಿ ಪಾಲ್ಗೊಳ್ಳದಿರುವಂತೆ ಜನರನ್ನು ಬೆದರಿಸಲಾಗುತ್ತಿದೆ ಎಂದು ಕೂಡ ರಾಹುಲ್ ಆರೋಪಿಸಿದ್ದರು.
ಹಾಗಾದರೆ ಮೋದಿಯವರಿಗೆ, ಹಿಮಂತ್ ಬಿಸ್ವ ಶರ್ಮಾಗೆ, ಬಿಜೆಪಿಗೆ ಯಾಕೆ ರಾಹುಲ್ ಬಗ್ಗೆ ಇಷ್ಟೊಂದು ಭಯ?. ಯಾಕೆ ಅವರಿಗೆ ತಮ್ಮ ಇಷ್ಟು ಬಲಾಢ್ಯ ರಾಜಕೀಯದ ಬಗ್ಗೆ ನಂಬಿಕೆ ಇಲ್ಲವಾಗಿದೆ ?. ಜನರು ನಾಳೆ ಮತ ಹಾಕುತ್ತಾರೊ ಇಲ್ಲವೊ, ಗೆಲ್ಲಿಸುತ್ತಾರೊ ಇಲ್ಲವೊ ಎಂಬ ಆತಂಕ ಬಿಜೆಪಿಯನ್ನು ಕಾಡುತ್ತಿದೆಯೆ?
ಮತ್ತು ಹಾಗೆ ಅವರು ಆತಂಕದಲ್ಲಿರುವಾಗಲೇ ರಾಹುಲ್ ಜನರ ನಡುವೆ ಹೋಗುತ್ತಿರುವುದು, ಅವರೊಡನೆ ಸಂವಾದದಲ್ಲಿ ತೊಡಗುವುದು,
ಜನರ ನಡುವೆ ಅವರು ಹೊಸ ಅಲೆಯೊಂದನ್ನು ಸೃಷ್ಟಿಸುವುದು ಬಿಜೆಪಿಯ ಆತಂಕವನ್ನು ಇನ್ನಷ್ಟು ಹೆಚ್ಚಿಸುತ್ತಿದೆಯೆ?
ಅಯೋಧ್ಯೆಯ ಅಷ್ಟೊಂದು ಅಬ್ಬರದ ಕಾರ್ಯಕ್ರಮದಲ್ಲಿ ತಾನು ಭಾಗಿಯಾಗಿದ್ದುದರ ನಡುವೆಯೂ, ಇಡೀ ದೇಶವೇ ಅಯೋಧ್ಯೆಯ ರಾಮ ಮಂದಿರ ಹಾಗು ತನ್ನನ್ನೇ ನೋಡುತ್ತಿರುವುದರ ನಡುವೆಯೂ, ಅಸ್ಸಾಂನಲ್ಲಿ ರಾಹುಲ್ ದೇವಸ್ಥಾನವೊಂದರಲ್ಲಿ ಕಾಣಿಸಿಕೊಳ್ಳುವುದರಿಂದ ತನ್ನ ಮಹತ್ವ ಕಡಿಮೆಯಾಗಬಹುದು ಎಂಬ ಭಯವೇನಾದರೂ ಮೋದಿಯವರನ್ನು ಕಾಡಿತ್ತೆ?
ದೇಶದ ಬಹುತೇಕ ಎಲ್ಲ ಟಿವಿ ಚಾನಲ್ ಗಳಲ್ಲಿ, ಪತ್ರಿಕೆಗಳಲ್ಲಿ, ಫೇಸ್ ಬುಕ್ ನಲ್ಲಿ, ವಾಟ್ಸಾಪ್ ನಲ್ಲಿ, ಟ್ವಿಟರ್ ನಲ್ಲಿ, ಗೋಡೆ ಗೋಡೆಗಳಲ್ಲಿ, ಮೊಬೈಲ್ ಗಳಲ್ಲಿ ರಾಮ ಮಂದಿರ ಹಾಗು ಮೋದಿಯವರೇ ಆವರಿಸಿಕೊಂಡಿರುವಾಗ ಒಂದು ದೇವಸ್ಥಾನಕ್ಕೆ ರಾಹುಲ್ ಗಾಂಧಿ ಹೋದ ಕೂಡಲೇ ಏನೋ ಅವಾಂತರ ಆಗಿ ಬಿಡುತ್ತೆ ಎಂದು ಯೋಚಿಸಲು ಕಾರಣವೇನು ? ಇದ್ಯಾವ ರೀತಿಯ ಸರ್ವಾಧಿಕಾರ ? ಇದರ ಹಿಂದಿರುವ ಭಯ, ಸಂಶಯ ಯಾವ ರೀತಿಯದ್ದು ?.
ಬಿಜೆಪಿ ಹಾಗು ಅದರ ಮುಖಂಡರು ಹೇಳುವ ಪ್ರಕಾರ ಮೋದಿಯವರಿಗೆ ರಾಹುಲ್ ಗಾಂಧಿ ಯಾವ ರೀತಿಯಲ್ಲೂ ಸಾಟಿಯಲ್ಲ. ಅವರ ಯಾವ ಯಾತ್ರೆಯಿಂದಲೂ ಬಿಜೆಪಿಗೆ ಏನೂ ವ್ಯತ್ಯಾಸ ಆಗೋದಿಲ್ಲ. ಬಿಜೆಪಿಯವರ ಪ್ರಕಾರ ರಾಹುಲ್ ಗಾಂಧಿ ಹೋದಲ್ಲೆಲ್ಲಾ ಬಿಜೆಪಿಗೇ ಲಾಭ ಆಗೋದು.
ಅವರ ಪ್ರಕಾರ ರಾಹುಲ್ ಗಾಂಧಿಯನ್ನು ದೇಶದ ಜನರು ಗಂಭೀರವಾಗಿ ತೆಗೆದುಕೊಳ್ಳೋದೇ ಇಲ್ಲ. ಹಾಗಾದರೆ ಮತ್ತೆ ಯಾಕೆ ರಾಹುಲ್ ಗಾಂಧಿಯ ಭಾರತ್ ಜೋಡೋ ನ್ಯಾಯ ಯಾತ್ರೆ ಬಗ್ಗೆ ಬಿಜೆಪಿ ಇಷ್ಟೊಂದು ತಲೆ ಕೆಡಿಸಿಕೊಂಡಿದೆ ?.
ರಾಹುಲ್ ಗಾಂಧಿ ಬಗ್ಗೆ ಬಿಜೆಪಿ ತಲೆಕೆಡಿಸಿಕೊಂಡಿಲ್ಲ ಎಂದಾದರೆ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಹೀಗೆಲ್ಲಾ ಅಡ್ಡಿಪಡಿಸುವುದಕ್ಕೆ, ಅಲ್ಲಿ ಹೋಗಕೂಡದು, ಇಲ್ಲಿ ಹೋಗಕೂಡದು ಎಂದು ತಡೆಯುವುದಕ್ಕೆ ಬಿಜೆಪಿ ಹೋಗಬೇಕಾಗಿರಲಿಲ್ಲ. ಅಲ್ವಾ ?.