ರಸ್ತೆಯಲ್ಲಿ ಲಾಂಗ್ ಹಿಡಿದುಕೊಂಡು ಬಂದರೆ ಬಿಡ್ತಾರಾ ಪೊಲೀಸರು ?

Update: 2023-11-23 14:19 GMT
Editor : Ismail | Byline : ಆರ್. ಜೀವಿ

ಸಾಂದರ್ಭಿಕ ಚಿತ್ರ

ಉಡುಗೊರೆಗಳು ಕೂಡ ಕತ್ತಿ, ಮಚ್ಚು, ಲಾಂಗ್ ರೂಪದಲ್ಲಿರುವುದು ಇವತ್ತಿನ ವಿಪರ್ಯಾಸವೂ ಹೌದು, ಅಭಿಮಾನದ ಅತಿರೇಕವೂ ಹೌದು. ಇಂಥ ಅತಿರೇಕಗಳನ್ನು ಸ್ಟಾರ್ಗಳು ಸಂಭ್ರಮಿಸುವುದು ಕೂಡ ಮತ್ತೊಂದು ಬಗೆಯ ಯಡವಟ್ಟುಗಳಿಗೆ ಕಾರಣವಾಗುತ್ತದೆ. ಈಗ ನಟ ದರ್ಶನ್ ವಿಚಾರದಲ್ಲಿಯೂ ಹಾಗೆಯೇ ಆಗಿದೆ. ಕನ್ನಡದ ದೊಡ್ಡ ಸ್ಟಾರ್ ದರ್ಶನ್ ಸಾರ್ವಜನಿಕ ಕಾರ್ಯಕ್ರಮದಲ್ಲಿ ಲಾಂಗ್ ಪ್ರದರ್ಶಿಸಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಅದು ಅಭಿಮಾನಿಗಳು ಉಡುಗೊರೆಯಾಗಿ ಕೊಟ್ಟ ಲಾಂಗ್. ಬೆಳ್ಳಿಯ ಲಾಂಗ್ ಎಂದು ಹೇಳಲಾಗಿದೆ. ಅದನ್ನು ದರ್ಶನ್ ಹಾಗೂ ಅಭಿಷೇಕ್ ಕೈಯಲ್ಲಿ ಹಿಡಿದು ಪ್ರದರ್ಶಿಸಿದ್ದಾರೆ. ಅದೀಗ ವಿವಾದಕ್ಕೆ ಕಾರಣವಾಗಿರುವ ವಿಚಾರ. ಸಾಮಾನ್ಯವಾಗಿ ರೌಡಿಶೀಟರ್ಗಳು ತಮ್ಮ ಬರ್ತ್​ ಡೇ  ಸಂದರ್ಭದಲ್ಲಿ ಲಾಂಗ್ ಹಿಡಿದು ಕೇಕ್ ಕತ್ತರಿಸಿ ಪೋಸ್ ಕೊಡುವುದು ಆಗಾಗ ಸುದ್ದಿಯಾಗುತ್ತಿರುತ್ತದೆ.
ಇದು ಕಾನೂನಿನ ದೃಷ್ಟಿಯಲ್ಲಿ ಅಪರಾಧವೆ? ಸಾರ್ವಜನಿಕವಾಗಿ ಬೆದರಿಸುವ ದೃಷ್ಟಿಯಿಂದ ಕತ್ತಿ, ಮಚ್ಚು, ಲಾಂಗ್ನಂಥ ಆಯುಧ ಹಿಡಿಯುವುದಕ್ಕೂ ಉಡುಗೊರೆಯಾಗಿ ಅಭಿಮಾನಿಗಳು ಕೊಟ್ಟದ್ದನ್ನು ಪ್ರದರ್ಶಿಸುವುದಕ್ಕೂ ವ್ಯತ್ಯಾಸ ಇದೆಯಲ್ಲವೆ ಎಂದೆಲ್ಲ ವಾದಿಸಲಾಗುತ್ತದೆ.ಆದರೆ ಒಬ್ಬ ಸೆಲೆಬ್ರಿಟಿಗೆ, ತಾನು ಏನೇ ಮಾಡಿದರೂ ತನ್ನನ್ನು ನೋಡಿ ಅನುಸರಿಸುವ ಸಾವಿರಾರು ಜನ ಇದ್ದಾರೆ ಎಂಬ ಎಚ್ಚರ ಇರಲೇಬೇಕಾಗುತ್ತದೆ.​
ಈ ಹಿನ್ನೆಲೆಯಲ್ಲಿ ಖ್ಯಾತ ಸ್ಟಾರ್ ಒಬ್ಬರು ಹೀಗೆ ಸಾರ್ವಜನಿಕವಾಗಿ ಲಾಂಗ್ ಪ್ರದರ್ಶಿಸುವಾಗ ಏಳುವ ಕಾನೂನಿನ, ಸಾಮಾಜಿಕ ಜವಾಬ್ದಾರಿಯ ಪ್ರಶ್ನೆಗಳ ದೃಷ್ಟಿಯಿಂದ ಇದನ್ನು ನೋಡಬೇಕು. ಅಭಿಮಾನಿಗಳಿಗೆ ತಾವು ಲಾಂಗ್ ಉಡುಗೊರೆ ಕೊಟ್ಟಿದ್ದೂ ಸರಿ, ಅದನ್ನು ದರ್ಶನ್ ಪ್ರದರ್ಶಿಸಿದ್ದೂ ಸರಿ ಎಂದೇ ಅನ್ನಿಸಬಹುದು.
ಗಣ್ಯ ವ್ಯಕ್ತಿಗಳಿಗೆ ಕತ್ತಿ, ತಲವಾರುಗಳನ್ನು ಕೊಡುವ ಪರಿಪಾಠ ನಮ್ಮಲ್ಲಿ ಇದೆಯಲ್ಲವೆ?. ಲಾಂಗ್ ಕೊಟ್ಟಿದ್ದಾಗಲೀ ಅದನ್ನು ಅವರು ಹಿಡಿದಿದ್ದಾಗಲೀ ಏನು ತಪ್ಪು? . ಅವರೇನು ಲಾಂಗ್ ಹಿಡಿದು ಬೆದರಿಸಿದ್ದಾರಾ ಎಂಬ ಪ್ರಶ್ನೆಗಳನ್ನು ಅಭಿಮಾನಿಗಳು ಈಗ ಕೇಳತೊಡಗಿದ್ದಾರೆ. ಭಾರತೀಯ ಕಾನೂನಿನಡಿಯಲ್ಲಿ ಬಂದೂಕುಗಳಂಥ ಅಸ್ತ್ರಗಳನ್ನು ಪರವಾನಗಿಯಿದ್ದಲ್ಲಿ ಮಾತ್ರ ಇಟ್ಟುಕೊಳ್ಳಬಹುದು ಮತ್ತು ಸಾಗಿಸಬಹುದು.
ಒಂಬತ್ತು ಇಂಚಿಗಿಂತಲೂ ಉದ್ದದ ಕತ್ತಿಗಳು ಮತ್ತು ಬ್ಲೇಡ್‌ಗಳಿಗೂ ಶಸ್ತ್ರಾಸ್ತ್ರ ಕಾಯಿದೆಯಡಿ ಪರವಾನಗಿ ಅಗತ್ಯವಿರುತ್ತದೆ.
ಪರವಾನಗಿ ಇಲ್ಲದೆ ಶಸ್ತ್ರಾಸ್ತ್ರಗಳನ್ನು ಸಾಗಿಸಿದರೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.
ಶಸ್ತ್ರಾಸ್ತ್ರ ಕಾಯಿದೆ ನಿಯಮಗಳು 2016ರ ನಿಯಮ 8ರ ಅಡಿಯಲ್ಲಿ ಪರವಾನಗಿ ಹೊಂದಿರುವ ವ್ಯಕ್ತಿ ಕೂಡ ಆಯುಧಗಳನ್ನು ಸಾರ್ವಜನಿಕ ಸ್ಥಳದಲ್ಲಿ ಝಳಪಿಸುವಂತಿಲ್ಲ ಮತ್ತು ಮದುವೆ, ಸಾರ್ವಜನಿಕ ಸಭೆ, ಜಾತ್ರೆ, ಮೆರವಣಿಗೆ ಅಥವಾ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಗೆ ಒಯ್ಯುವಂತಿಲ್ಲ. ಈ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಶಸ್ತ್ರಾಸ್ತ್ರ ಕಾಯಿದೆಯ ನಿಯಮ 32ರ ಅಡಿಯಲ್ಲಿ ನೀಡಲಾದ ಪರವಾನಗಿಯನ್ನು ರದ್ದುಗೊಳಿಸಬಹುದು. 
ಷರತ್ತುಗಳನ್ನು ಉಲ್ಲಂಘಿಸುವವರು ಅಥವಾ ಪರವಾನಗಿಯಿಲ್ಲದ ಶಸ್ತ್ರಾಸ್ತ್ರಗಳನ್ನು ಹೊಂದಿರುವವರು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25ರ ಅಡಿಯಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.  ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯೂ ಆಗಬಹುದು.
ಕೆಲವು ಷರತ್ತುಗಳಿಗೆ ಒಳಪಟ್ಟು ಕೆಲವು ಸಮುದಾಯಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಮತ್ತು ಈ ವಿನಾಯಿತಿಗಳು ಬಹಳ ಸೀಮಿತವಾಗಿವೆ.
ಕರ್ನಾಟಕದಲ್ಲಿ ಕೊಡವ ಸಮುದಾಯ ಮತ್ತು ಜುಮ್ಮಾ ಹಿಡುವಳಿದಾರರು ಸಹ ಕತ್ತಿ, ಕಠಾರಿ ಮತ್ತು ಬಂದೂಕುಗಳನ್ನು ಒಯ್ಯಲು ನಿರ್ದಿಷ್ಟ ವಿನಾಯಿತಿಯನ್ನು ನೀಡಲಾಗಿದೆ. ಆದರೆ ಇದು ಕೊಡಗು ಜಿಲ್ಲೆಯಲ್ಲಿ ಮಾತ್ರ ಅನ್ವಯಿಸುತ್ತದೆ ಮತ್ತು ಶಸ್ತ್ರಾಸ್ತ್ರಗಳನ್ನು ನೋಂದಾಯಿಸಿರಬೇಕಾಗುತ್ತದೆ.
ಉಡುಗೊರೆ ರೂಪದಲ್ಲಿರುವ ಲಾಂಗ್ ಥರದ ಆಯುಧವನ್ನು ಆ ಕ್ಷಣಕ್ಕೆ ಹಿಡಿದು ಪೋಸ್ ಕೊಡುವುದು ಕಾನೂನಿನ ವ್ಯಾಖ್ಯೆಗೆ ಸಿಗುತ್ತದೆಯೊ ಇಲ್ಲವೊ​ ?. ಆದರೆ ಹಾಗೆ ಮಾಡುವಾಗ ​ದೊಡ್ಡ ಸ್ಟಾರ್ ಆದವರಿಗೆ ಮಾತ್ರ ಒಂದು ಸಣ್ಣ ಎಚ್ಚರ ಇರುವುದು ಮುಖ್ಯವಾಗುತ್ತದೆ. 
ಯಾಕೆಂದರೆ ಅದು​ ಕೇವಲ ಕಾನೂನಿನ ಪ್ರಶ್ನೆ ಅಲ್ಲ. ಅದು  ಅವರ ಸಾಮಾಜಿಕ ಹೊಣೆಗಾರಿಕೆಯ ಪ್ರಶ್ನೆ.
ಇಂಥ ನಡವಳಿಕೆಗಳ ಬಗ್ಗೆ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳುವುದಕ್ಕೆ ಅವಕಾಶವಿದೆ, ಸಾರ್ವಜನಿಕ ಸ್ಥಳಗಳಲ್ಲಿ ಹೀಗೆ ಮಾರಕಾಸ್ತ್ರ ಪ್ರದರ್ಶನ ಕಾನೂನು ಬಾಹಿರವಾಗಿರುವುದರಿಂದ ಪೊಲೀಸರು ಸ್ವಯಂಪ್ರೇರಿತವಾಗಿ ಕೇಸ್ ದಾಖಲು ಮಾಡಲೂ ಬಹುದು ಎಂದು ನಿವೃತ್ತ ಎಸಿಪಿ ಬಿಕೆ ಶಿವರಾಂ ಹೇಳುತ್ತಾರೆ.
ಸ್ಥಾಪಿತ ಕಾನೂನುಗಳ ವಿಚಾರದಲ್ಲಿ ತನಗೆ ಗೊತ್ತಿರಲಿಲ್ಲ, ಮಾಹಿತಿ ಇರಲಿಲ್ಲ ಎಂದು ಯಾರೇ ಹೇಳಿದರೆ, ಕಾನೂನಿನ ಬಗೆಗಿನ ಅಂಥ ನಿರ್ಲಕ್ಷ್ಯಕ್ಕೆ ಸುಪ್ರೀಂ ಕೋರ್ಟ್ನಲ್ಲಿ ಕೂಡ ಮಾನ್ಯತೆ ಇಲ್ಲ ಎಂದು ಅವರು ಹೇಳುತ್ತಾರೆ. ಇದೆಲ್ಲದರ ಜೊತೆಗೇ,​ ಅಸಂಖ್ಯ  ಅಭಿಮಾನಗಳನ್ನು ಹೊಂದಿರುವ ಸೆಲೆಬ್ರಿಟಿಗಳು ಹೀಗೆ ಮಾಡುವುದರಿಂದ ತಪ್ಪು ಸಂದೇಶ ಕೊಟ್ಟಂತಾಗುತ್ತದೆ ಎಂಬುದೂ ಗಮನಿಸಬೇಕಾದ ವಿಚಾರ.
ದರ್ಶನ್ ಅವರನ್ನು ಸಮರ್ಥಿಸಿಕೊಳ್ಳುವವರೆಲ್ಲ, ಅವರು ಅಭಿಮಾನಿಗಳಿಗೆ ನಿರಾಸೆ ಮಾಡುವುದಿಲ್ಲ ಎಂಬ ಮಾತುಗಳನ್ನು ಹೇಳುತ್ತಿರುವುದನ್ನು ಗಮನಿಸಬಹುದು. ಅದರರ್ಥ, ಅವರು ಅಭಿಮಾನಿಗಳು ತಂದ ಬೆಳ್ಳಿ ಲಾಂಗ್ ಅನ್ನು ಅವರಿಗೆ ನಿರಾಸೆ ಮಾಡಬಾರದು ಎಂಬ ಕಾರಣಕ್ಕಾಗಿ ಕೈಯಲ್ಲಿ ಹಿಡಿದು ಪೋಸ್ ಕೊಟ್ಟಿದ್ದಾರೆ.
ಆದರೆ, ಅಭಿಮಾನಿಗಳಿಗೆ ನಿರಾಸೆ ಮಾಡಬಾರದು ಎಂಬುದಕ್ಕಿಂತ ಮುಖ್ಯವಾಗಿ ತಾನು ಲಕ್ಷಾತರ ಅಭಿಮಾನಿಗಳನ್ನು ಹೊಂದಿರುವಾಗ ಸಾರ್ವಜನಿಕವಾಗಿ ಏನು ಮಾಡಬಾರದು, ಏನು ಮಾಡಬಹುದು ಎಂಬ ಎಚ್ಚರವನ್ನು​ ಒಬ್ಬ ಜನಪ್ರಿಯ ಸ್ಟಾರ್  ಹೊಂದಿರುವುದು​ ಬಹಳ ಅಗತ್ಯ. ಲಾಂಗ್ ಉಡುಗೊರೆ ಕೊಟ್ಟ ​​ಕೆಲವರ  ಸಂತೋಷಕ್ಕಾಗಿ ನಾಡಿನಾದ್ಯಂತದ ಅಭಿಮಾನಿಗಳಿಗೆ ಏಕೆ ತಪ್ಪು ಸಂದೇಶ ಕೊಡುವಂತೆ ನಡೆದುಕೊಳ್ಳಬೇಕು ಎಂಬುದನ್ನು ಯೋಚಿಸುವುದು ಅಗತ್ಯ.
ಆ ಕೆಲವೇ ಅಭಿಮಾನಿಗಳನ್ನು ಪ್ರೀತಿಯ ಮಾತುಗಳ ಮೂಲಕವೇ ಮನವರಿಕೆ ಮಾಡಿ ಒಪ್ಪಿಸಲು ಅವಕಾಶವಿರುವಾಗ, ಅನವಶ್ಯಕ ತಪ್ಪೊಂದು ಆಗುವುದಕ್ಕೆ ಅವಕಾಶ ಮಾಡಿಕೊಡದಿರುವುದು ಒಳ್ಳೆಯದಲ್ಲವೆ?. ಒಬ್ಬ ನಟ ಒಂದು ಸಿನಿಮಾ ಪೋಸ್ಟರಿನಲ್ಲಿ ಲಾಂಗ್ ಹಿಡಿದು ಕಾಣಿಸಿಕೊಂಡರೆ ಅದು ನಿಜವಲ್ಲ, ಕಥೆ ಎಂದು ಅಂದುಕೊಳ್ಳಬಹುದು. ಆದರೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಟನೊಬ್ಬ ಹೀಗೆ ಲಾಂಗ್ ಹಿಡಿದು ಪೋಸ್ ಕೊಡುವಾಗ, ತಾನೀಗ ಸಿನಿಮಾ ಹೀರೋ ಎಂಬುದಕ್ಕಿಂತ ಹೆಚ್ಚಾಗಿ ಒಬ್ಬ ಜವಾಬ್ದಾರಿ ಇರುವ ವ್ಯಕ್ತಿ ಎಂಬುದನ್ನು ಮರೆಯಬಾರದು. 
ಇದು ಸಿನಿಮಾ ಅಲ್ಲ, ಜೀವನ ಎಂಬ ಎಚ್ಚರ ಇರಬೇಕು. ಯಾಕೆಂದರೆ ಲಾಂಗ್, ಮಚ್ಚು ಇಂಥ ಯಾವುದೇ ಮಾರಕಾಸ್ತ್ರವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು ಹಿಂಸೆಯನ್ನು ಪರೋಕ್ಷವಾಗಿ ಬೆಂಬಲಿಸಿದ ಹಾಗೆಯೇ ಆಗುತ್ತದೆ. ಇವತ್ತಿನ ಸಮಾಜದಲ್ಲಿ ಒಂದು ಸಣ್ಣ  ನೆಪವೂ ಎಂಥೆಂಥ ​ಕ್ರೌರ್ಯಕ್ಕೆ  ಕಾರಣವಾಗಿಬಿಡಬಲ್ಲುದು, ಒಂದು ಸಣ್ಣ ಮಾತು ಕೂಡ ಏನೆಲ್ಲ ಅನಾಹುತಗಳನ್ನು ತಂದಿಡಬಲ್ಲದು ಎಂಬುದು ದರ್ಶನ್ ಅಂಥ ಸ್ಟಾರ್ ನಟರಿಗೆ ಗೊತ್ತಿರದೇ ಇರುವ ವಿಚಾರವಲ್ಲ. ಹೀಗಿರುವಾಗ, ಲಕ್ಷಾಂತರ ಜನ ಫಾಲೋವರ್ಸ್ ಇರುವ ಅಂಥವರ ಸಾಮಾಜಿಕ ಹೊಣೆಗಾರಿಕೆ ದೊಡ್ಡದಿರುತ್ತದೆ. ಅಂಥ ಸ್ಟಾರ್ ಒಬ್ಬರು ಹೀಗೆ ವರ್ತಿಸೋದು ಖಂಡಿತ ಸರಿಯೆನ್ನಿಸುವುದಿಲ್ಲ.
 
ಹಿಂಸೆಯ ಸ್ವರೂಪವಾಗಿರುವ ಲಾಂಗ್ ಖಂಡಿತವಾಗಿಯೂ ಸ್ಟಾರ್ ಗಿರಿಯ, ಹೀರೋ ಗಿರಿಯ ಸಂಕೇತವಾಗುವುದಿಲ್ಲ. ತಾನು ಹೀರೋ ಎಂದು ತೋರಿಸಿಕೊಳ್ಳಲು ಅದರ ಪ್ರದರ್ಶನ ಮಾಡಬೇಕಿಲ್ಲ ಎಂಬುದು ಸ್ಟಾರ್ಗಳಿಗೆ, ಸೆಲೆಬ್ರಿಟಿಗಳಿಗೆ ಮೊದಲು ಅರಿವಾಗಬೇಕು. ಅದು ಪಾತಕದ, ಕೊಲೆಗಡುಕತನದ ಸಂಕೇತವಾಗಿರುವಾಗ, ಅದನ್ನು ದೂರವಿಡುವುದು, ಅದನ್ನು ಉಡುಗೊರೆಯಾಗಿ ತಂದವರನ್ನೂ ನಯವಾಗಿಯೇ ತಿರಸ್ಕರಿಸುವ ಮೂಲಕ ತಿದ್ದುವುದು ದರ್ಶನ್ ಅಂಥವರಿಗೆ ಖಂಡಿತ ಸಾಧ್ಯವಿದೆ.
ಅದನ್ನು ಮೊದಲು ಮಾಡಬೇಕಾಗಿರುವುದು ಅವರ ಹೀರೋ ಗಿರಿಯ, ಸ್ಟಾರ್ ಗಿರಿಯ ಜವಾಬ್ದಾರಿಯೂ ಹೌದು. ​ಇವತ್ತು ನಮ್ಮ ಸುತ್ತಮುತ್ತ ನಾವೂ ಊಹಿಸಲೂ ಭಯಪಡುವಂತಹ ಹಿಂಸೆ ನಡೆಯುತ್ತಿದೆ. ಕಗ್ಗೊಲೆಗಳಾಗುತ್ತಿವೆ. ತೀರಾ ಸಭ್ಯರಂತೆ ಕಾಣುವ, ಗ್ರಹಸ್ಥರೇ ಎಂತೆಂತಹ ಹತ್ಯಾಕಾಂಡವನ್ನೇ ಮಾಡಿ ಇಡೀ ನಾಡನ್ನು ಬೆಚ್ಚಿ ಬೀಳಿಸುತ್ತಿದ್ದಾರೆ. 
ಹೀಗಿರುವಾಗ ಸೆಲೆಬ್ರಿಟಿಯೊಬ್ಬರು ತಾನು ಸಮಾಜಕ್ಕೆ ಏನು ಸಂದೇಶ ರವಾನಿಸುತ್ತಿದ್ದೇನೆ ಎಂಬುದರ ಬಗ್ಗೆ ಬಹಳ ಎಚ್ಚರದಿಂದಿರಬೇಕಾಗಿದೆ.   ಯಾರೋ ಒಬ್ಬ ಬೀದಿಯಲ್ಲಿ ಲಾಂಗ್ ಹಿಡಿದುಕೊಂಡು ಬಂದರೆ ಅವನನ್ನು ಪೊಲೀಸರು ಬಿಡ್ತಾರಾ? 
ಹೀಗಿರುವಾಗ ಕೈಯಲ್ಲಿ ಲಾಂಗ್ ಹಿಡಿದು ಸಾರ್ವಜನಿಕವಾಗಿ ತಾನು ಪೋಸ್ ಕೊಡುವುದು ತಪ್ಪೆಂಬುದು ದೊಡ್ಡ ದೊಡ್ಡ ಸ್ಟಾರ್ ಗಳಿಗೆ ಅರ್ಥವಾಗಬೇಕಲ್ಲವೆ?. 
ಅಭಿಮಾನಿಗಳು ಬಹಳ ಮುಗ್ಧರಾಗಿರುತ್ತಾರೆ. ಈ ಮುಗ್ಧತೆ ಬಡ ಹುಡುಗರಲ್ಲಿ ಮಾತ್ರವಲ್ಲ, ದುಡ್ಡಿದ್ದವರು, ಆಸ್ತಿವಂತರಾಗಿದ್ದರೂ ಅಭಿಮಾನಿಗಳಾಗಿ ಅವರು ಹೆಚ್ಚು ವಿವೇಚನೆ ಮಾಡಲಾರದವರು.  ​ಅವರಿಗೆ ತಮ್ಮ ನೆಚ್ಚಿನ ಸ್ಟಾರ್ ನಟನ ಮುಂದೆ ಒಮ್ಮೆ ಮುದುಡಿ ಒಂದು ಅಪ್ಪುಗೆ ಪಡೆದುಬಿಡುವುದರಲ್ಲಿಯೇ ಧನ್ಯತೆ. ಅಂಥ ಅಭಿಮಾನಿಗಳು ಭಾವೋದ್ವೇಗದಲ್ಲಿ ಮಾಡುವ ತಪ್ಪಿನ ಜೊತೆ ತಾವೂ ಮತ್ತೊಂದು ತಪ್ಪು ಆಗುವುದಕ್ಕೆ ಅವಕಾಶ ಮಾಡಿಕೊಡದಂತೆ ನಡೆದುಕೊಳ್ಳಬೇಕಿರುವುದು ಸ್ಟಾರ್ ಗಳ ಬಹು ದೊಡ್ಡ ಹೊಣೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!