ನಾಲ್ಕು ರಾಜ್ಯಗಳ 175 ಸೀಟುಗಳಲ್ಲಿ ಬಿಜೆಪಿಗೆ ಠಕ್ಕರ್ ಗೆ ಸಜ್ಜು !

Update: 2024-02-27 07:02 GMT
Editor : Ismail | Byline : ಆರ್. ಜೀವಿ

​ನಿತೀಶ್ ಕುಮಾರ್ ಪಲ್ಟಿ ಹೊಡೆದು ಬಿಜೆಪಿ ಜೊತೆ ಹೋದಾಗ ಇಂಡಿಯಾ ಮೈತ್ರಿ ಕೂಟ ಮುಗಿದೇ ಹೋಯಿತು ಎಂಬಂತಹ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ರಾಜಕೀಯ ಅಷ್ಟು ಸುಲಭವೂ ಅಲ್ಲ, ಸರಳವೂ ಅಲ್ಲ, ಅಲ್ಲಿ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಕಳೆದೊಂದು ವಾರದ ಬೆಳವಣಿಗೆಗಳೇ ಸಾಕ್ಷಿ.

ರಾಹುಲ್ ಗಾಂಧಿ ನ್ಯಾಯ ಯಾತ್ರೆಗೆ ಹೊರಡುತ್ತಲೇ ಛಿದ್ರ ಛಿದ್ರವಾಗುವ ಲಕ್ಷಣ ತೋರಿಸಿದ್ದ ಇಂಡಿಯಾ ಮೈತ್ರಿಕೂಟ, ಈಗ ರಾಹುಲ್ ಗಾಂಧಿ ಉತ್ತರ ಪ್ರದೇಶ ತಲುಪುವಾಗ ಭಾರೀ ಚೇತರಿಕೆ ಕಂಡುಕೊಂಡು ಪುಟಿದೇಳುವ ಎಲ್ಲ ಲಕ್ಷಣಗಳನ್ನು ತೋರಿಸುತ್ತಿದೆ. ಅದೂ ಮೈತ್ರಿಕೂಟದ ಮುಖ್ಯ ರೂವಾರಿ ಎಂಬಂತಿದ್ದ ನಿತೀಶ್ ಕುಮಾರ್ ಸ್ವತಃ ಹೊರ ಹೋದ ಮೇಲೆ ಎಂಬುದು ಇನ್ನಷ್ಟು ಗಮನಾರ್ಹ.

ಇಂಡಿಯಾ ಮೈತ್ರಿಕೂಟ ಕಂಗೆಟ್ಟಿಲ್ಲ, ಬದಲಾಗಿ ​ಈಗ ಇನ್ನಷ್ಟು ಗಟ್ಟಿಯಾಗಿದೆ, ದಿಟ್ಟವಾಗಿದೆ ಎಂಬುದು ಸ್ಪಷ್ಟವಾಗುತ್ತಿದೆ. ದಿಲ್ಲಿಯಲ್ಲಿ ಕೇಜ್ರಿವಾಲ್ ಜೊತೆ, ಯುಪಿಯಲ್ಲಿ ​ಸಮಾಜವಾದಿ ಪಕ್ಷದ ಜೊತೆ, ಬಿಹಾರದಲ್ಲಿ ಆರ್ ಜೆ ಡಿ ಜೊತೆ​ ಹಾಗು ಮಹಾರಾಷ್ಟ್ರದಲ್ಲಿ ಶಿವಸೇನೆ ಹಾಗು ಎನ್ ಸಿ ಪಿ ಜೊತೆ - ಕಾಂಗ್ರೆಸ್ ಸೀಟು ಹೊಂದಾಣಿಕೆ ಮುಗಿಸಿರುವುದು ಏನನ್ನು ಸೂಚಿಸುತ್ತದೆ​ ? ​ಒಟ್ಟು 175 ಎಂಪಿ ಸೀ​ಟುಗಳಿರುವ ​ಈ ನಾಲ್ಕು ಪ್ರಮುಖ ರಾಜ್ಯಗಳಲ್ಲಿ ಇಂಡಿಯಾ ಮೈತ್ರಿಕೂಟ ಬಿಜೆಪಿಗೆ ಪ್ರಬಲ ಸವಾಲು ಒಡ್ಡುವ ಸಾಧ್ಯತೆ ನಿಚ್ಚಳವಾಗಿದೆಯೇ ?

​ಕಳೆದ ಮೂರ್ನಾಲ್ಕು ದಿನಗಳ ಬೆಳವಣಿಗೆಗಳಿಂದ ಬಿಜೆಪಿ ಚಿಂತೆಗೆ ಬಿದ್ದಿದೆಯೇ ? ​ತನ್ನೆಲ್ಲ ಅಸ್ತ್ರಗಳ ಹೊರತಾಗಿಯೂ ಒಂದೊಂದೇ ರಾಜ್ಯದಲ್ಲಿ ಇಂಡಿಯಾ ಮೈತ್ರಿ ಗಟ್ಟಿಯಾಗುತ್ತಿರುವುದರಿಂದ ಗಲಿಬಿಲಿಗೊಂಡಿರುವ ಬಿಜೆಪಿ ಕೊನೆ ಅಸ್ತ್ರವಾಗಿ ದಂಡ ಎತ್ತಿಕೊಂಡಿದೆಯೇ ?

ಕಾಂಗ್ರೆಸ್ ನ ಖಾತೆಯಿಂದ ​ದಿಢೀರನೇ ಹಣ ಹೋಗಿದ್ದು, ​ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಮೇಲೆ ಸಿಬಿಐ ರೇಡ್ , ಕೇಜ್ರಿವಾಲ್ ಗೆ ಬಂಧನ ಭೀತಿ , ಟ್ವಿಟರ್ ಮೇಲೂ ಒತ್ತಡ - ಇವೆಲ್ಲ ಏನನ್ನು ಸೂಚಿಸುತ್ತಿವೆ ? 400 ಸೀಟುಗಳನ್ನು ಗೆಲ್ಲುವುದಾಗಿ ​ಅಬ್ಬರದ ಪ್ರಚಾರ ಮಾಡುತ್ತಿರುವ ಬಿಜೆಪಿ ಒಳಗೊಳಗೇ ಬೆದರಿದೆಯೇ ? ಇಂಡಿಯಾ ಕೂಟ ​ಮತ್ತೆ ಎದ್ದು ನಿಲ್ಲುತ್ತಿದೆಯೇ ?​ ಬಿಜೆಪಿಗೆ ದೊಡ್ಡ ತಲೆನೋವಾಗುವ ಸಾಧ್ಯತೆ ಕಂಡು ಬರುತ್ತಿದೆಯೇ ? ​ ​ಚುನಾವಣಾ ನೀತಿ ಸಂಹಿತೆ ಘೋಷಣೆ ಆಗುವುದರೊಳಗೆ ಇಂಡಿಯಾ ಕೂಟವನ್ನು ಛಿದ್ರ ಮಾಡಲು ಇನ್ನೂ ಏನೇನು ಅಸ್ತ್ರ ಪ್ರಯೋಗಿಸಬಹುದು ಬಿಜೆಪಿ ಸರಕಾರ ? ನಿತೀಶ್ ಕುಮಾರ್ ಅವರನ್ನು ಎನ್ಡಿಎ ತೆಕ್ಕೆಗೆ ಸೆಳೆದಾಗ ಇಂಡಿಯಾ ಮೈತ್ರಿಕೂಟದ ವಿರುದ್ಧ ಏನೋ ಮಹಾ ತಂತ್ರಗಾರಿಕೆ ಮಾಡಿದ ರೀತಿಯಲ್ಲಿ ಮೋದಿ ಪಡೆ ಪೋಸು ಕೊಟ್ಟಿತ್ತು.

ರಾಹುಲ್ ಗಾಂದಿಯವರ ಭಾರತ್ ಜೋಡೋ ನ್ಯಾಯ ಯಾತ್ರೆ ಬಿಹಾರಕ್ಕೆ ಬರುತ್ತಿದ್ದ ಹೊತ್ತಲ್ಲಿಯೇ ಇಂಡಿಯಾ ಮೈತ್ರಿಕೂಟದಿಂದ ನಿತೀಶ್ ಕುಮಾರ್ ಕಳಚಿಕೊಂಡಿದ್ದರು. ತಾನಿಲ್ಲದೆ ಇಂಡಿಯಾ ಮೈತ್ರಿಕೂಟ ಇಲ್ಲ ಎಂಬ ಭ್ರಮೆ ಅವರಲ್ಲಿಯೂ ಇತ್ತು. ಆದರೆ, ರಾಹುಲ್ ಧೃತಿಗೆಟ್ಟಿರಲಿಲ್ಲ. ಅವರ ಕಣ್ಣೆದುರಲ್ಲಿ ಸ್ಪಷ್ಟತೆ ಇದ್ದ ಹಾಗಿತ್ತು. ಈ ನಡುವೆಯೇ ಇಂಡಿಯಾ ಮೈತ್ರಿಕೂಟ ಛಿದ್ರವಾಗಿ ಹೋಗಿಬಿಡುತ್ತದೇನೋ ಎಂಬ ಊಹಾಪೋಹಗಳು ಎದ್ದವು.

ಟಿಎಂಸಿ ಮತ್ತು ಎಎಪಿ ತಮ್ಮ ದಾರಿ ತಮಗೆ ಎಂಬಂತೆ ಕಾಂಗ್ರೆಸ್ನಿಂದ ಬೇರೆಯಾಗಲು ಹೊರಟಿವೆ ಎಂಬುದು ದೊಡ್ಡ ಮಟ್ಟದಲ್ಲಿ ಬಿಂಬಿತವಾಯಿತು. ಅದೆಲ್ಲದರ ನಂತರವೂ ಇಂಡಿಯಾ ಮೈತ್ರಿಕೂಟ ದೃಢಗೊಂಡು ನಿಂತಿರುವುದು ಕಾಣಿಸುತ್ತಿದೆ​, ಮತ್ತದು ಬಿಜೆಪಿಗೆ ಪ್ರಬಲ ಸವಾಲಾಗಿಯೇ ನಿಂತಿದೆ.

ಯಾವುದು ಇಂಡಿಯಾ ಮೈತ್ರಿಕೂಟದ ಎದುರಿನ ಬಹಳ ಬಿಕ್ಕಟ್ಟಿನ ವಿಚಾರ ಎನ್ನಲಾಗಿತ್ತೊ​, ಆ ಸೀಟು ಹಂಚಿಕೆ ಪ್ರಕ್ರಿಯೆಯನ್ನು​ ಒಂದೊಂದೇ ರಾಜ್ಯಗಳಲ್ಲಿ ಕಾಂಗ್ರೆಸ್ ಯಶಸ್ವಿಯಾಗಿ ಅಂತಿಮಗೊಳಿ​ಸುತ್ತಿರುವುದು ​ಸದ್ಯದ ಮಹತ್ವದ ಬೆಳವಣಿಗೆ.ದಿಲ್ಲಿ ಲೋಕಸಭಾ ಸೀಟು ಹಂಚಿಕೆ ಸಂಬಂಧ ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ನಡುವೆ ಒಪ್ಪಂದ ಅಂತಿಮಗೊಂಡಿದೆ.

ಆಮ್ ಆದ್ಮಿ ಪಕ್ಷ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದರೆ, ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಉತ್ತರ ಪ್ರದೇಶದಲ್ಲಿ ಎಸ್ಪಿ ಜೊತೆಗಿನ ಹೊಂದಾಣಿಕೆ ತೀವ್ರ ಸವಾಲಿನದ್ದಾಗಿತ್ತು. ಆದರೆ ಅದು ಕೂಡ ಸರಾಗವಾಗಿಯೆ ಬಗೆಹರಿದಿರುವುದಾಗಿ ವರದಿಗಳು ಹೇಳುತ್ತಿವೆ.

ಯುಪಿಯ 80 ಲೋಕಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ 17ರಲ್ಲಿ ಸ್ಪರ್ಧಿಸಲಿದ್ದು, ಉಳಿದ 63 ಕ್ಷೇತ್ರಗಳಲ್ಲಿ ಎಸ್ಪಿ ಹಾಗೂ ಇಂಡಿ​ಯಾ ಮೈತ್ರಿಕೂಟದ ಇತರ ಪಕ್ಷಗಳು ಕಣಕ್ಕಿಳಿಯಲಿವೆ. ಕಾಂಗ್ರೆಸ್ ಸ್ಪರ್ಧಿಸಲಿರುವ 17 ಸ್ಥಾನಗಳಲ್ಲಿ ರಾಯ್ಬರೇಲಿ, ಅಮೇಥಿಯೂ ಸೇರಿವೆ ಎನ್ನಲಾಗಿದೆ. ಮೋದಿ ಕ್ಷೇತ್ರವಾದ ವಾರಣಸಿಯಲ್ಲೂ ಕಾಂಗ್ರೆಸ್ ಸ್ಪರ್ಧಿಸಲಿದೆ.

ಅಖಿಲೇಶ್ ಯಾದವ್ ಮತ್ತು ಪ್ರಿಯಾಂಕಾ ಗಾಂಧಿ ನಡುವಿನ ಮಾತುಕತೆ ಬಳಿಕ ಸೀಟು ಹಂಚಿಕೆ ಒಪ್ಪಂದ ಬಹುತೇಕ ಅಂತಿಮಗೊಂಡಿತೆನ್ನಲಾಗಿದೆ. ಮೈತ್ರಿ ವಿಚಾರವಾಗಿ ಡಿಂಪಲ್ ಯಾದವ್ ಕೂಡ ಹರ್ಷ ವ್ಯಕ್ತಪಡಿಸಿರುವುದು ವರದಿಯಾಗಿದೆ. ​ಬಿಹಾರದಲ್ಲಿ ಹೇಗೂ ತೇಜಸ್ವಿ ಯಾದವ್ ಅವರು ರಾಹುಲ್ ಜೊತೆ ಆಪ್ತ ಮಿತ್ರರಂತೆಯೇ ಇದ್ದಾರೆ. ಅಲ್ಲೇನೂ ಸೀಟು ಹೊಂದಾಣಿಕೆ ದೊಡ್ಡ ಸಮಸ್ಯೆಯಾಗುವ ಲಕ್ಷಣಗಳಿಲ್ಲ.

​ಅತ್ತ ಮಹಾರಾಷ್ಟ್ರದಲ್ಲೂ ಉದ್ಧವ್ ಠಾಕ್ರೆ ತನ್ನ ಪಕ್ಷ ಒಡೆದ ಬಿಜೆಪಿ ವಿರುದ್ಧ ಸಿಡಿದೆದ್ದಿದ್ದಾರೆ. ಹಾಗಾಗಿ ಕಾಂಗ್ರೆಸ್ ಜೊತೆ ಅವರು ಗಟ್ಟಿಯಾಗಿಯೇ ನಿಲ್ಲುವ ಲಕ್ಷಣಗಳಿವೆ. ಇದೆಲ್ಲವೂ ಇಂಡಿಯಾ ಮೈತ್ರಿಕೂಟ ಸದೃಢಗೊಳ್ಳುತ್ತಿರುವುದರ ಸೂಚನೆಯಾಗಿ ಮಹತ್ವದ ವಿದ್ಯಮಾನಗಳಾಗಿವೆ. ಕಾಂಗ್ರೆಸ್ ಪಕ್ಷವನ್ನು ಏಕಾಂಗಿಯಾಗಿಸಿಬಿಡಲು, ಮೈತ್ರಿಕೂಟವನ್ನು ಛಿದ್ರವಾಗಿಸಿಬಿಡಲು ಬಹುಶಃ ತೆರೆಮರೆಯಲ್ಲೇ ನಡೆದಿದ್ದ ​ಹತ್ತು ಹಲವು ಯತ್ನಗಳು ವಿಫಲವಾದಂತಿವೆ.

​ನಾಡಿದ್ದು ಫೆಬ್ರವರಿ 25ಕ್ಕೆ ಉತ್ತರ ಪ್ರದೇಶದಲ್ಲಿ ರಾಹುಲ್ ನ್ಯಾಯ ಯಾತ್ರೆಯಲ್ಲಿ ಅಖಿಲೇಶ್ ಕೂಡ ಭಾಗವಹಿಸ್ತಾರೆ.

ಅದು ಯುಪಿ ರಾಜಕೀಯದ ಮಟ್ಟಿಗೆ ದೊಡ್ಡ ಬೆಳವಣಿಗೆಯಾಗಲಿದೆ. ಮತದಾರರಿಗೆ ಸ್ಪಷ್ಟ ಸಂದೇಶ ರವಾನೆಯಾಗಲಿದೆ. ದಿಲ್ಲಿಯಲ್ಲಂತೂ ಆಪ್, ಕಾಂಗ್ರೆಸ್ ಕೈ ಜೋಡಿಸಿದ್ದರಿಂದ ಕಳೆದ ಬಾರಿ ಎಲ್ಲ ಏಳು ಸೀಟು ಗೆದ್ದಿದ್ದ ಬಿಜೆಪಿಗೆ ಈಗ ಆ ಏಳೂ ಸೀಟುಗಳನ್ನು ಉಳಿಸಿಕೊಳ್ಳೋದು ದೊಡ್ಡ ಸವಾಲಾಗಲಿದೆ ಎಂದೇ ಹೇಳಲಾಗುತ್ತಿದೆ.

ಬಿಹಾರ ಹಾಗು ಮಹಾರಾಷ್ಟ್ರದಲ್ಲಿ ತೇಜಸ್ವಿ ಯಾದವ್ ಹಾಗು ಉದ್ಧವ್ ಠಾಕ್ರೆ ಊರೂರು ಸುತ್ತಿ ತಮಗೆ ಬಿಜೆಪಿ ಮಾಡಿರುವ ದ್ರೋಹವನ್ನು ಹೇಳುತ್ತಿದ್ದಾರೆ. ಅಲ್ಲಿ ತೀವ್ರ ಆಡಳಿತ ವಿರೋಧಿ ಅಲೆ ಇದೆ ಎಂದೇ ಹೇಳಲಾಗುತ್ತಿದೆ. ಇನ್ನು ರಾಹುಲ್ ಗಾಂಧಿ ಹೋದಲ್ಲಿ ಬಂದಲ್ಲಿ ನಿರುದ್ಯೋಗಿ ಯುವಕರನ್ನು, ಹಿಂದುಳಿದ ವರ್ಗಗಳನ್ನು, ದಲಿತರನ್ನು ಉದ್ದೇಶಿಸಿ ಮಾತಾಡುತ್ತಿದ್ದಾರೆ. ನಿಮಗೆ ಕಳೆದ ಹತ್ತು ವರ್ಷಗಳಲ್ಲಿ ಭಾಷಣ, ಭರವಸೆ ಅಲ್ಲದೆ ಮೋದಿಯವರು ಬೇರೇನನ್ನೂ ಕೊಟ್ಟಿಲ್ಲ ಎಂದು ಸಾರಿ ಸಾರಿ ಹೇಳುತ್ತಿದ್ದಾರೆ. ಈ ಬಾರಿಯೂ ನೀವು ಜಾಗೃತರಾಗದಿದ್ದರೆ ಮುಂದೆ ನಿಮಗೆ ಬೀದಿಗಿಳಿದು ನಿರುದ್ಯೋಗದ ವಿರುದ್ಧ ಪ್ರತಿಭಟಿಸುವ ಹಕ್ಕೂ ಉಳಿಯೋದಿಲ್ಲ ಎಂದು ಎಚ್ಚರಿಸುತ್ತಿದ್ದಾರೆ. ಜಾತಿ ಜನಗಣತಿ ಆಗದೆ ಹಿಂದುಳಿದವರಿಗೆ ನ್ಯಾಯ ಸಿಗೋದು ಅಸಾಧ್ಯ ಎಂದೇ ಮತ್ತೆ ಮತ್ತೆ ಹೇಳುತ್ತಿದ್ದಾರೆ.

ಉದ್ಧವ್ ಠಾಕ್ರೆ, ತೇಜಸ್ವಿ ಯಾದವ್, ಹೇಮಂತ್ ಸೊರೇನ್, ಅಖಿಲೇಶ್ ಯಾದವ್, ಕೇಜ್ರಿವಾಲ್ - ಇವರೆಲ್ಲರಿಗೂ ಒಂದು ವಿಷಯ ಸ್ಪಷ್ಟವಾಗಿದೆ.

ಕಾಂಗ್ರೆಸ್ ಬಗ್ಗೆ ನಮಗೆ ಏನೇ ತಕರಾರಿದ್ದರೂ ಸದ್ಯಕ್ಕೆ ಬಿಜೆಪಿಯನ್ನು, ಅದರ ಸರ್ವಾಧಿಕಾರಿ ಆಡಳಿತವನ್ನು ಕೊನೆಗೊಳಿಸದೇ ಇದ್ದರೆ ನಮ್ಮ ರಾಜಕೀಯಕ್ಕೆ ಉಳಿಗಾಲವಿಲ್ಲ ಎಂದು ಅವರು ಎದ್ದು ಕೂತಿದ್ದಾರೆ. ಇದು ನಮಗಿರುವ ಕೊನೆಯ ಅವಕಾಶ ಎಂದು ನಿರ್ಧರಿಸಿ ಅವರು ಬೀದಿಗಿಳಿದಿದ್ದಾರೆ.

ಹಾಗಾದರೆ ಈ 175 ಎಂಪಿ ಸೀಟುಗಳಲ್ಲಿ ಬಿಜೆಪಿಗೆ ಇಂಡಿಯಾ ಕೂಟ ಭಾರೀ ಠಕ್ಕರ್ ಕೊಡೋದು ಖಚಿತ ಎಂದೇ ಹೇಳಲಾಗುತ್ತಿದೆ.

ಈಗ ಗಲಿಬಿಲಿಗೊಂಡಿರುವುದು ಮೋದಿ ಸರ್ಕಾರ.

ಚುನಾವಣೆಯಲ್ಲಿ ಎದುರಿಸುವ ಮೊದಲೇ ಇಂಡಿಯಾ ಮೈತ್ರಿಕೂಟವನ್ನು ಮಣಿಸಿಬಿಡುವ, ಇಲ್ಲವಾಗಿಸುವ ಹುನ್ನಾರ ನಡೆದಿತ್ತು.

ಆದರೆ ವಿಪಕ್ಷ ಮೈತ್ರಿಕೂಟ ಬಿಜೆಪಿಯನ್ನು ಅಖಾಡದಲ್ಲಿ ಎದುರಾಗಲು ತಯಾರಾಗುತ್ತಿದೆ. ಮತ್ತಿದು, ವಿಪಕ್ಷಗಳೇ ಇಲ್ಲ​ದಂತೆ ಮಾಡಿ ಗೆದ್ದೆನೆಂದು ಹೇಳಿಕೊಳ್ಳುವ ಬಿಜೆಪಿಗೆ ಆಘಾತ ತಂದಿದೆ. ಹಾಗಾಗಿಯೇ ಅದು ಈಗ ಹೊಸ ಅಸ್ತ್ರಗಳನ್ನು ಪ್ರಯೋಗಿಸುತ್ತಿದೆ. ಬೇರೆ ಬೇರೆ ದಿಕ್ಕುಗಳಿಂದ ಪ್ರಯೋಗಿಸಿ ಚದುರಿಸಲು ನೋಡುತ್ತಿದೆ. ಏನು ಮಾಡುವುದು ಎಂಬ ಗೊಂದಲ ಮತ್ತು ಹತಾಶೆಯಲ್ಲಿಯೇ ಏನೇನೋ ಮಾಡುತ್ತಿರುವ ಹಾಗೆಯೂ ಕಾಣಿಸುತ್ತಿದೆ.

ಒಂದೆಡೆ, ಕೇಜ್ರಿವಾಲ್ ಬೆನ್ನುಬಿದ್ದಿದ್ದರೆ, ಮತ್ತೊಂದೆಡೆ, ಒಂದು ಕಾಲದ ತನ್ನದೇ ಮನುಷ್ಯ ಸತ್ಯಪಾಲ್ ಮಲಿಕ್ ಮೇಲೆ ಮುಗಿಬಿದ್ದಿದೆ. ​ಲಂಚ ಕೊಡಲು ಬಂದಿದ್ದರು ಎಂದು ಹೇಳಿದ ಸತ್ಯಪಾಲ್ ಮಲಿಕ್ ಮೇಲೆಯೇ ಅವರು ಆಸ್ಪತ್ರೆಯಲ್ಲಿರುವಾಗ ಸಿಬಿಐ ದಾಳಿ ನಡೆದಿದೆ. ಪುಲ್ವಾಮಾ ದಾಳಿ ವಿಚಾರವಾಗಿ ಮಲಿಕ್ ಹೇಳಿದ್ದ ಸ್ಫೋಟಕ ವಿಚಾರಗಳು, ಈಗಲೂ ಚುನಾವಣೆ ಗೆಲ್ಲುವುದಕ್ಕಾಗಿ ಏನನ್ನು ಬೇಕಾದರೂ ಮಾಡಿಯಾರು ಎಂಬ ಮಲಿಕ್ ಈಚಿನ ಹೇಳಿಕೆ - ಇವೆಲ್ಲದಕ್ಕೂ ಪ್ರತಿಕ್ರಿಯೆಯೆಂಬಂತೆ ಚುನಾವಣೆಯ ಸರಿಹೊತ್ತಿನಲ್ಲಿಯೇ ಸಿಬಿಐ ದಾಳಿಯ ಆಟ ಶುರುವಾಗಿದೆ.

​ಕಾಂಗ್ರೆಸ್ ಖಾತೆಯಿಂದ 65 ಕೋಟಿಯನ್ನು ಆದಾಯ ತೆರಿಗೆ ಇಲಾಖೆ ಮೂಲಕ ತೆಗೆಯಲಾಗಿದೆ. ರಾಜಕೀಯ ಪಕ್ಷಗಳಿಗೆ ಇನ್ಕಮ್ ಟ್ಯಾಕ್ಸ್ ಇಲ್ಲ. ಬಿಜೆಪಿ ಈವರೆಗೆ ತೆರಿಗೆ ಕಟ್ಟಿದೆಯೇ ? ನಮಗೇಕೆ ಈ ರೀತಿಯ ಕಿರುಕುಳ ಎಂದು ಕಾಂಗ್ರೆಸ್ ಕೇಳುತ್ತಿದೆ. ಅತ್ತ ರೈತ ಆಂದೋಲನದ ಬಗ್ಗೆ ಟ್ವೀಟ್ ಮಾಡಿದವರ ಖಾತೆಗಳನ್ನೇ ಅಮಾನತು ಮಾಡಲು ಎಕ್ಸ್ ಗೆ ಮೋದಿ ಸರಕಾರ ಒತ್ತಡ ಹಾಕಿದೆ.

ಇದು ಸರಿಯಲ್ಲ, ಇದಕ್ಕೆ ತನ್ನ ಒಪ್ಪಿಗೆಯಿಲ್ಲ, ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇರಬೇಕು, ಆದರೂ ಸರಕಾರದ ಆದೇಶ ಆಗಿರುವುದರಿಂದ ಭಾರತದಲ್ಲಿ ಮಾತ್ರ ಸರಕಾರ ಹೇಳಿರುವ ನಿರ್ದಿಷ್ಟ ಖಾತೆಗಳನ್ನು ಅಮಾನತು ಮಾಡುವುದಾಗಿ ಎಕ್ಸ್ ಹೇಳಿಕೆ ಬಿಡುಗಡೆ ಮಾಡಿದೆ. ಇದರಿಂದ ಮೋದಿ ಸರಕಾರ ರೈತ ಆಂದೋಲನದ ಬಗ್ಗೆ ಅದೆಷ್ಟು ತಲೆಕೆಡಿಸಿಕೊಂಡಿದೆ ಎಂಬುದು ಜಗಜ್ಜಾಹೀರಾಗಿದೆ. ಮದರ್ ಆಫ್ ಡೆಮಾಕ್ರಸಿ ಎಂದು ಭಾಷಣ ಮಾಡುತ್ತಲೇ ಮಾತಾಡಿದವರ ಖಾತೆಯನ್ನೇ ಅಮಾನತು ಮಾಡಿಸುವ ಅದರ ಕ್ರಮ ಇಡೀ ವಿಶ್ವದೆದುರು ಬಯಲಾಗಿದೆ.

ಒಳಗೊಳಗೇ ರೈತ ಆಂದೋಲನದ ಧ್ವನಿ ಹತ್ತಿಕ್ಕಲು ನೋಡಿದ ಅದರ ಕ್ರಮ ಅದಕ್ಕೇ ತಿರುಗುಬಾಣವಾಗಿದೆ. ಮೋದಿ ಸರ್ಕಾರ ಈ ರೀತಿ ಎಕ್ಸ್ ಮೇಲೆ ಒತ್ತಡ ಹಾಕಿತ್ತು ಎಂಬ ಸತ್ಯ ಇಡೀ ಜಗತ್ತಿನೆದುರು ತೆರೆದುಕೊಂಡಿದೆ. ಆಪ್​ ನ ಹಿರಿಯ ನಾಯಕಿ ಆತಿಶಿ ಆರೋಪಿಸಿರುವ ಪ್ರಕಾರ, ಇಂಡಿಯಾ ಮೈತ್ರಿಕೂಟವನ್ನು ಬಿಡುವಂತೆ ಆಪ್ ನಾಯಕರ ಮೇಲೆ ಬಿಜೆಪಿ ಒತ್ತಡ ಹೇರುತ್ತಿದೆ ಮತ್ತು ಅದಕ್ಕಾಗಿ ಈಡಿಯನ್ನು ಮುಂದೆ ಬಿಟ್ಟು ಬೆದರಿಸಲಾಗುತ್ತಿದೆ.

ಇಂಡಿಯಾ ಮೈತ್ರಿಕೂಟ ತೊರೆಯದಿದ್ದರೆ ಕೇಜ್ರಿವಾಲ್​ ರನ್ನು ಶೀಘ್ರ ಬಂಧಿಸಲಾಗುವುದು ಎಂಬ ಬೆದರಿಕೆಯನ್ನು ಒಡ್ಡಲಾಗುತ್ತಿದೆ ಎಂದು ಆತಿಶಿ ಹೇಳಿದ್ದಾರೆ. ಆಪ್ ಮತ್ತು ಕಾಂಗ್ರೆಸ್ ನಡುವೆ ಸೀಟು ಹಂಚಿಕೆ ಅಂತಿಮವಾಗಿರುವ ಹೊತ್ತಿನಲ್ಲಿಯೇ ಇಂಥದೊಂದು ಬೆದರಿಕೆ ಬಂದಿರುವುದು ನಿಜವೇ ಆಗಿದ್ದಲ್ಲಿ ಇದರ ಅರ್ಥವೇನು? ಯಾಕೆ ಇಷ್ಟೆಲ್ಲ ಗೊಂದಲ ಸೃಷ್ಟಿಸಲಾಗುತ್ತಿದೆ? ಆ ಮೂಲಕ ಏನನ್ನು ಅಡಗಿಸಲು ಅದು ನೋಡುತ್ತಿದೆ?

ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ವಿಪಕ್ಷಗಳನ್ನು ಅಸಹಾಯಕತೆ ಅಥವಾ ದಿಕ್ಕೆಟ್ಟ ಸ್ಥಿತಿಗೆ ತಳ್ಳುವ ಹುನ್ನಾರವನ್ನು ಬಿಜೆಪಿ ಮಾಡುತ್ತಿದೆಯೆ?

​ಕಾಂಗ್ರೆಸ್ ಅನ್ನು ಚುನಾವಣೆಯಲ್ಲಿ ಏಕಾಂಗಿಯಾಗಿಸಬೇಕು ಎಂಬುದೇ ಅಲ್ಲವೆ?​ ಯಾಕೆ ಎಲ್ಲದರ ಮೇಲೆಯೂ ನಿಯಂತ್ರಣ ​ಹೇರಲು ನೋಡುತ್ತಿದೆ ಮೋದಿ ಸರ್ಕಾರ? ಪ್ರಜಾಸತ್ತಾತ್ಮಕವಾದ ಎಲ್ಲವನ್ನೂ ತಡೆಯುವ, ತನ್ನ ಅಸಾಂವಿಧಾನಿಕ ನೀತಿಗಳ ಬಗ್ಗೆ ಕೊಂಚವೂ ಪಶ್ಚಾತ್ತಾಪ ಪಡದ, ಚುನಾವಣಾ ಬಾಂಡ್ ಹೆಸರಿನಲ್ಲಿ ಪರಮ ಭ್ರಷ್ಟತೆಯನ್ನು ಎಸಗಿದ, ಇಷ್ಟಾಗಿಯೂ ವಿಪಕ್ಷಗಳ ಮೇಲೆ ಯಾವ್ಯಾವುದೋ ನೆಪ ಇಟ್ಟುಕೊಂಡು ಮುಗಿಬೀಳುವ ಮೋದಿ ಸರ್ಕಾರ ನಿಜವಾಗಿಯೂ ಹತಾಶೆಗೆ ಸಿಕ್ಕಿಬಿದ್ದಿದೆಯೆ?​

​ಹಾಗಾದರೆ ಮುಂದಿನ ಕೆಲ ದಿನಗಳಲ್ಲಿ ಬಿಜೆಪಿ ಇನ್ನೂ ಏನೇನು ಆಟವಾಡಲಿದೆ, ತಂತ್ರ ಹೂಡಲಿದೆ? ಚುನಾವಣಾ ಮೈದಾನದಲ್ಲಿ ತಾನು ಮಾತ್ರವೇ ಇರಬಹುದಾದ ಅವಕಾಶ ಹೆಚ್ಚಿಸುವುದಕ್ಕಾಗಿ ಬಿಜೆಪಿ ಹೀಗೆ ವಿಪಕ್ಷಗಳನ್ನೂ, ಹೋರಾಟಗಳನ್ನೂ, ಭಿನ್ನ ಧ್ವನಿಯನ್ನೂ ಹತ್ತಿಕ್ಕಲು ​ಎಲ್ಲ ದಿಕ್ಕಿನಿಂದಲೂ ಯತ್ನಿಸುತ್ತಿ​ದೆ. ನೀತಿ ಸಂಹಿತೆ ಜಾರಿಯಾಗಲು ಕೆಲವೇ ವಾರಗಳಿರುವಾಗ ಇದೆಲ್ಲ ಎಲ್ಲಿಗೆ ಹೋಗಿ ತಲುಪಲಿದೆ ಎಂದು ಕಾದು ನೋಡೋಣ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!