ಪರ್ಯಾಯ ಶಕ್ತಿಯಾಗಿ ಗೆದ್ದ ‘ಇಂಡಿಯಾ’

Update: 2024-06-02 07:45 GMT

ಕಾಂಗ್ರೆಸ್ ಈ ಚುನಾವಣೆಯಲ್ಲಿ ಗೆಲ್ಲಲಿ, ಬಿಡಲಿ, ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಸರಕಾರ ಅಧಿಕಾರಕ್ಕೆ ಬರಲಿ, ಬಿಡಲಿ ಅವು ಮುಖ್ಯವಾದ ವಿಷಯಗಳೇ ಅಲ್ಲ. ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷದ ರೀತಿಯಲ್ಲಿಯೇ ಪ್ರತಿಪಕ್ಷದ ಪಾತ್ರವೂ ಪ್ರಧಾನವಾದುದೇ. ಈ ಸಲ ಕಾಂಗ್ರೆಸ್ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಿದೆ. ಜೊತೆಗೆ ಮೋದಿ ಇವತ್ತು ದೇಶದ ಅತ್ಯಂತ ಜನಪ್ರಿಯ ನಾಯಕ ಎನ್ನುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಅದು ಕೂಡ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮುಖ್ಯವಲ್ಲ. ರಾಹುಲ್ ಗಾಂಧಿ ಅವರು ಪರ್ಯಾಯ ನಾಯಕನಾಗಿ ಹೊಮ್ಮಿದ್ದಾರೆ. ಅದರಿಂದ ಕಾಂಗ್ರೆಸ್ ಪಕ್ಷಕ್ಕಿಂತ ದೇಶಕ್ಕೆ ಒಳಿತು. ಬದಲಾವಣೆ ಜಗದ ನಿಯಮ ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವೇ?

ಲೋಕಸಭಾ ಚುನಾವಣೆಯ ಮತದಾನ ಮುಗಿದಿದೆ. ಮತಗಟ್ಟೆಯ ಸಮೀಕ್ಷೆಗಳು ಹೊರಬಿದ್ದಿವೆ. ಆದರೂ ಕುತೂಹಲ ತಣಿದಿಲ್ಲ. ಏಕೆಂದರೆ ಮತಗಟ್ಟೆಯ ಸಮೀಕ್ಷೆಗಳು ಕೆಲವೊಮ್ಮೆ ಸುಳ್ಳಾಗಿವೆ. ಕೆಲವೊಮ್ಮೆ ನಿಜವೂ ಆಗಿವೆ. ಅವು ಏನಾದರೂ ಆಗಲಿ, ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ಮತ್ತೆ ಅಧಿಕಾರಕ್ಕೆ ಬರುತ್ತೋ, ಬಿಡುತ್ತೋ. ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಅಧಿಕಾರದ ಚುಕ್ಕಾಣಿ ಹಿಡಿಯುತ್ತೋ, ಇಲ್ಲವೋ. ಆದರೆ ಚುನಾವಣೆ ನಡೆದ ಬಗ್ಗೆ ಅವಲೋಕಿಸುವಾಗ ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್ ಪುಟಿದೆದ್ದ ಬಗೆ ಚರ್ಚೆಗೆ ಅರ್ಹವಾದ ಸಂಗತಿ.

1996ರಿಂದ 2019ರವರೆಗೆ ನಡೆದ ಎಲ್ಲಾ ಲೋಕಸಭಾ ಚುನಾವಣೆಗಳಲ್ಲೂ ಬಿಜೆಪಿ ಒಂದಿಲ್ಲೊಂದು ರೀತಿ ಚುನಾವಣಾ ಅಜೆಂಡಾಗಳನ್ನು ಸೃಷ್ಟಿ ಮಾಡುತ್ತಿತ್ತು. ಬಿಜೆಪಿಯ ಅಜೆಂಡಾಗಳಿಗೆ ಪ್ರತಿತಂತ್ರ ರೂಪಿಸುವುದಕ್ಕಾಗಿ ಕಾಂಗ್ರೆಸ್ ತನ್ನೆಲ್ಲಾ ಶ್ರಮವನ್ನು ವ್ಯಯಿಸುತ್ತಿತ್ತು. 2004ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಬಂದಿದ್ದರೂ ಆಗ ಬಿಜೆಪಿಯೇ ಹೆಣೆದಿದ್ದ ‘ಇಂಡಿಯಾ ಶೈನಿಂಗ್’ ಅಜೆಂಡಾ ಬಿಜೆಪಿಗೇ ತಿರುಗುಬಾಣ ಆಗಿದ್ದ ಕಾರಣಕ್ಕೆ. 2009ರಲ್ಲಿ ಎನ್ಡಿಎ ಪಾಳೆಯ ನಾಯಕತ್ವವೇ ಇಲ್ಲದೆ ಪೇಲವವಾಗಿದ್ದ ಕಾರಣಕ್ಕೆ.

ಆದರೆ ಈ ಸಲ ಬಿಜೆಪಿ ಬಡವರ ವಿರೋಧಿ, ಮಹಿಳಾ ವಿರೋಧಿ, ಶ್ರೀಮಂತರನ್ನು ಓಲೈಸುತ್ತಿರುವ ಪಕ್ಷ, ಚುನಾವಣಾ ಬಾಂಡ್ಗಳ ಅಕ್ರಮ, ನಿರುದ್ಯೋಗ, ಬೆಲೆ ಏರಿಕೆ, ಅಗ್ನಿಪಥ ಯೋಜನೆಯ ವೈಫಲ್ಯ, ಚೀನಾ ಅತಿಕ್ರಮಣ, ಭ್ರಷ್ಟಾಚಾರ, ಸಂವಿಧಾನ ಬದಲಾವಣೆಯ ಹುನ್ನಾರದಂತಹ ವಿಷಯಗಳನ್ನು ಕಾಂಗ್ರೆಸ್ ಪಕ್ಷ ಚುನಾವಣಾ ಅಸ್ತ್ರಗಳನ್ನಾಗಿ ರೂಪಿಸಿತು. ಪ್ರತಿಸಲವೂ ಚುನಾವಣೆ ಬಂದಾಗ ಎದ್ದೇಳುತ್ತಿದ್ದ ಕಾಂಗ್ರೆಸ್ ಪಕ್ಷ ಈ ಸಲ ಬೇಗ ತನ್ನ ತಯಾರಿ ಆರಂಭಿಸಿ, ಬಹಳ ವರ್ಷಗಳ ಬಳಿಕ ತಾನು ಅಜೆಂಡಾಗಳನ್ನು ರೂಪಿಸಿ, ಬಿಜೆಪಿ ಅದಕ್ಕೆ ಪ್ರತಿಕ್ರಿಯಿಸಲೇಬೇಕಾದಂತಹ ಅನಿವಾರ್ಯತೆಯನ್ನು ಸೃಷ್ಟಿಸಿತು.

ಕಾಂಗ್ರೆಸ್ ಅಜೆಂಡಾಗಳಿಗೆ ಬಿಜೆಪಿ ಪ್ರತಿಕ್ರಿಯಿಸಬೇಕಾದ ಸ್ಥಿತಿಯನ್ನು ಯಾರೂ ಊಹಿಸಿರಲಿಲ್ಲ. ಕಳೆದ ಲೋಕಸಭಾ ಚುನಾವಣೆ ವೇಳೆ ನಡೆದ ವಿದ್ಯಮಾನಗಳನ್ನೇ ಉಲ್ಲೇಖಿಸುವುದಾದರೆ, ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದಾಗ 2019ರ ಫೆಬ್ರವರಿ 14ರಂದು ಪುಲ್ವಾಮಾ ಭಯೋತ್ಪಾದಕ ದಾಳಿ ಘಟಿಸಿದ ಬಳಿಕ ಕಾಂಗ್ರೆಸ್, ಆಡಳಿತರೂಢ ಬಿಜೆಪಿ ವಿರುದ್ಧ ಯಾವುದೇ ನಿಖರವಾದ ಕಾರ್ಯತಂತ್ರಗಳನ್ನು ರೂಪಿಸುವ ಪ್ರಯತ್ನವನ್ನೇ ಮಾಡಲಿಲ್ಲ. ಇದಕ್ಕೂ ಮೊದಲು ಫ್ರಾನ್ಸ್ ದೇಶದಿಂದ ರಫೇಲ್ ಯುದ್ಧ ವಿಮಾನಗಳ ಖರೀದಿಯಲ್ಲಿ ನರೇಂದ್ರ ಮೋದಿ ಸರಕಾರ ಭ್ರಷ್ಟಾಚಾರ ಎಸೆಗಿದೆ ಎಂಬ ಆರೋಪವನ್ನು ಸಾಬೀತುಪಡಿಸಲೂ ವಿಫಲವಾಯಿತು. ಮೋದಿ ವಿರುದ್ಧ ಕಾಂಗ್ರೆಸ್ ಮೊಳಗಿಸಿದ ‘ಚೌಕಿದಾರ್ ಚೋರ್ ಹೈ’ ಎಂಬ ಘೋಷಣೆಯೂ ತಿರುಗುಬಾಣವಾಯಿತು. ಒಟ್ಟಿನಲ್ಲಿ ಕಣ್ಣ ಮುಂದೆ ಎಂತಹುದೇ ಪ್ರಮುಖ ವಿಷಯ ಇದ್ದರೂ ಅದನ್ನು ಬಳಸಿಕೊಂಡು ಬಿಜೆಪಿಯನ್ನು ಬಗ್ಗು ಬಡಿಯಲು ಕಾಂಗ್ರೆಸ್ ಪಕ್ಷದಿಂದ ಸಾಧ್ಯವಾಗುತ್ತಲೇ ಇರಲಿಲ್ಲ. ಆದರೆ ಈ ಸಲ ಭಿನ್ನವಾದ ಪರಿಸ್ಥಿತಿಯನ್ನು ಕಾಣಬಹುದಾಗಿದೆ.

ವೃದ್ಧಿಸಿದ ರಾಹುಲ್ ಗಾಂಧಿ ವರ್ಚಸ್ಸು

2022ರ ಸೆಪ್ಟಂಬರ್ 7ರಂದು ದೇಶದ ದಕ್ಷಿಣದ ತುದಿ ಕನ್ಯಾಕುಮಾರಿಯಿಂದ 2023ರ ಜನವರಿ 30ರವರೆಗೆ ದೇಶದ ಮುಕುಟದಂತಿರುವ ಕಾಶ್ಮೀರದವರೆಗೆ 136 ದಿವಸ 4,080 ಕಿಲೋ ಮೀಟರ್ ನಡೆದ ‘ಭಾರತ ಜೋಡೊ ಪಾದಯಾತ್ರೆ’ ‘ರಾಜಕೀಯದಲ್ಲಿ ಗಂಭೀರತೆ ಇಲ್ಲ’ ಎನ್ನುವ ಗುರುತರ ಆರೋಪ ಎದುರಿಸುತ್ತಿದ್ದ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ವರ್ಚಸ್ಸನ್ನು ಗಣನೀಯವಾಗಿ ವೃದ್ಧಿಸಿತು.

ಭಾರತ ಜೋಡೊ ಯಾತ್ರೆ ‘ಬಿಜೆಪಿಯು ದೇಶವನ್ನು ಜಾತಿ-ಧರ್ಮದ ಆಧಾರದ ಮೇಲೆ ಒಡೆಯುತ್ತಿದೆ. ಬಡವರು ಮತ್ತು ಶ್ರೀಮಂತರ ನಡುವಿನ ಕಂದಕವನ್ನು ಹೆಚ್ಚಿಸುತ್ತಿದೆ, ಕಾಂಗ್ರೆಸ್ ಎಲ್ಲರನ್ನೂ-ಎಲ್ಲವನ್ನೂ ಬೆಸೆಯಲು ಬಯಸುತ್ತದೆ’ ಎಂಬ ಸಂದೇಶ ಕೊಡುವ ಯಾತ್ರೆಯಾಗಿತ್ತು. ಯಾತ್ರೆಯುದ್ದಕ್ಕೂ ರಾಹುಲ್ ಗಾಂಧಿ ಅವರು ಒಗ್ಗಟ್ಟಿನ ಮಾತನ್ನಷ್ಟೇಯಲ್ಲದೆ, ‘ಬಿಜೆಪಿ ಬಡವರ ವಿರೋಧಿ, ಮಹಿಳಾ ವಿರೋಧಿ, ಶ್ರೀಮಂತರ ಪರ, ಅಂಬಾನಿ-ಅದಾನಿ ಪರ, ಬಿಜೆಪಿಯಿಂದಾಗಿ ದೇಶದಲ್ಲಿ ನಿರುದ್ಯೋಗ ಹೆಚ್ಚಾಯಿತು, ಬೆಲೆ ಏರಿಕೆಗೆ ನೇರ ಕಾರಣ ಬಿಜೆಪಿಯ ಆರ್ಥಿಕ ನೀತಿಗಳು ಕಾರಣ’ ಎಂಬಂತಹ ಹಲವು ವಿಷಯಗಳನ್ನು ಪ್ರಸ್ತಾಪಿಸಿದರು. ಜನರ ಸಮಸ್ಯೆಗಳನ್ನು ಜನರ ಬಳಿಗೆ ಹೋಗಿ ಮಾತನಾಡಿದರು. ಅದು 2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪಾಲಿನ ನಿಜವಾದ ತಯಾರಿಯಾಗಿತ್ತು.

ಕರ್ನಾಟಕದಿಂದ ಕಾಂಗ್ರೆಸ್ ಪುನರುತ್ಥಾನಕ್ಕೆ

ಭಾರತ ಜೋಡೊ ಪಾದಯಾತ್ರೆಯ ಬಳಿಕ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ವಿಶೇಷವಾದ ಪ್ರಯೋಗ ನಡೆಸಿತು. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿಗೆ ಸಿದ್ದರಾಮಯ್ಯ ಅವರ ನಾಯಕತ್ವವೂ ಕಾರಣ ಎನ್ನುವುದನ್ನು ಅಲ್ಲಗಳೆಯಲಾಗದಿದ್ದರೂ ಆ ಪಕ್ಷ ಘೋಷಿಸಿದ 5 ಗ್ಯಾರಂಟಿ ಯೋಜನೆಗಳೂ ಅಷ್ಟೇ ಪ್ರಮಾಣದ ಪಾತ್ರವನ್ನು ವಹಿಸಿದವು. ಆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ಶ್ರೇಯ ಸಿದ್ದರಾಮಯ್ಯ ಅವರಿಗೆ ಸಲ್ಲಬೇಕಾದದ್ದಾದರೂ ಅವುಗಳನ್ನು ಆರ್ಥಿಕ ಪರಿಣಿತರ ಜೊತೆ ಸಮಾಲೋಚಿಸಿ ರೂಪಿಸಿದ್ದು ರಾಜ್ಯಕ್ಕೆ ಹೈಕಮಾಂಡ್ ಕಳುಹಿಸಿದ ತಂಡ ಎನ್ನುವುದನ್ನು ಒಪ್ಪಲೇಬೇಕು. ಸ್ವತಃ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರೇ ಬಂದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಪಕ್ಷದ ನಿಲುವನ್ನು ಗಟ್ಟಿಯಾಗಿ ಹೇಳಿದ್ದರು. ಗ್ಯಾರಂಟಿ ಯೋಜನೆಗಳು ಸ್ವೀಕಾರವಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಸಾಧಿಸಿದ ಜಯದಿಂದಾಗಿ ಆ ಪಕ್ಷಕ್ಕೆ ರಾಷ್ಟ್ರ ಮಟ್ಟದಲ್ಲಿ ಶಕ್ತಿ ಬಂದಂತಾಯಿತು. ಇದೇ ತಂತ್ರವನ್ನು ಪಕ್ಕದ ತೆಲಂಗಾಣ ರಾಜ್ಯದಲ್ಲೂ ಮಾಡಿ ಅಲ್ಲಿಯೂ ಕಾಂಗ್ರೆಸ್ ಅರ್ಹ ಜಯ ಸಾಧಿಸಿತು.

ಕಾಂಗ್ರೆಸ್ ಹೊರತಾದ ಮೈತ್ರಿಕೂಟ ರಚನೆಗೆ ಒತ್ತು ನೀಡಬೇಕು ಎಂದು ಅಲವತ್ತುಕೊಳ್ಳುತ್ತಿದ್ದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟಕ್ಕೆ ಜೈ ಎನ್ನತೊಡಗಿದರು. ಇದಾದ ಮೇಲೆ ಕಾಂಗ್ರೆಸ್ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ಗಡ ವಿಧಾನಸಭಾ ಚುನಾವಣೆಗಳನ್ನು ಸೋತರೂ ಮತಗಳಿಕೆಯ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ಮೂಲಕ ಲೋಕಸಭಾ ಚುನಾವಣೆಗೆ ತಮ್ಮದೇ ನಿಜವಾದ-ಸಮರ್ಥವಾದ ಪ್ರತಿಪಕ್ಷ ಎನ್ನುವುದನ್ನು ಸಾಬೀತುಪಡಿಸಿತು.

ನಂತರ 2024ರ ಜನವರಿ 14ರಿಂದ ಮಾರ್ಚ್ 16ರವರೆಗೆ 62 ದಿನಗಳ ಕಾಲ ಮಣಿಪುರದ ತೌಬಲ್ನಿಂದ ಮುಂಬೈವರೆಗೆ ರಾಹುಲ್ ಗಾಂಧಿ ಅವರು ನಡೆಸಿದ 2ನೇ ಹಂತದ ಭಾರತ ಜೋಡೊ ಯಾತ್ರೆ ಕಾಂಗ್ರೆಸ್ ಪಕ್ಷಕ್ಕೆ ಇನ್ನಷ್ಟು ಚೈತನ್ಯ ತುಂಬಿತು. 2ನೇ ಹಂತದ ‘ಭಾರತ ಜೋಡೊ ಯಾತ್ರೆ’ಯನ್ನು ‘ಭಾರತ ಜೋಡೊ ನ್ಯಾಯ ಯಾತ್ರೆ’ ಎಂದು ಮರುನಾಮಕರಣ ಮಾಡಿ ಇದು ‘ಕೇಂದ್ರ ಬಿಜೆಪಿ ಸರಕಾರ ದೇಶದ ಜನರಿಗೆ ನಿರಂತರವಾಗಿ ಮಾಡುತ್ತಿರುವ ಅನ್ಯಾಯಗಳ ವಿರುದ್ಧ ನ್ಯಾಯಕ್ಕಾಗಿ ಒತ್ತಾಯಿಸಿ ನಡೆಸುತ್ತಿರುವ ಯಾತ್ರೆ’ ಎಂದು ಬಿಂಬಿಸಲಾಯಿತು. ಮೊದಲ ಯಾತ್ರೆಯಂತೆ ರಾಹುಲ್ ಗಾಂಧಿ ಅವರು ದೇಶದ ಜನಸಾಮಾನ್ಯರ ದಿನನಿತ್ಯದ ಸಮಸ್ಯೆಗಳಾದ ನಿರುದ್ಯೋಗ, ಬೆಲೆ ಏರಿಕೆ ಮತ್ತಿತರ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಾ ಸಾಗಿದರು. ಜೊತೆಜೊತೆಗೆ ಯಾತ್ರೆಯನ್ನು ಮಣಿಪುರದಲ್ಲಿ ಆರಂಭಿಸುವ ಮೂಲಕ ಅಲ್ಲಿನ ಹಿಂಸಾಚಾರವನ್ನೇ ಉಲ್ಲೇಖಿಸಿ ‘ಬಿಜೆಪಿ ಮಹಿಳಾ ವಿರೋಧಿ’ ಎನ್ನುವುದನ್ನು ದೇಶವಾಸಿಗಳಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದರು. ಯಾತ್ರೆ ಆದಿವಾಸಿಗಳಿರುವ ಕಡೆಯೂ ಸಾಗುವಂತೆ ನೋಡಿಕೊಂಡು ನರೇಂದ್ರ ಮೋದಿಯವರ ಸರಕಾರ ಆದಿವಾಸಿಗಳಿಗೆ ಮರಣ ಶಾಸನ ಬರೆಯಲು ಹೊರಟಿದೆ. ಆದಿವಾಸಿಗಳ ಸಂಪತ್ತನ್ನು ತನ್ನ ಉದ್ಯಮಿ ಗೆಳೆಯರಾದ ಅದಾನಿ-ಅಂಬಾನಿಗೆ ಕೊಡುತ್ತಿದ್ದಾರೆ ಎಂದು ಒತ್ತಿ ಹೇಳಿದರು.

2ನೇ ಹಂತದ ಯಾತ್ರೆಯ ವೇಳೆ 15ನೇ ಶತಮಾನದ ಅಸ್ಸಾಮಿ ಸಂತ ಶ್ರೀ ಶಂಕರದೇವ್ ಅವರ ಜನ್ಮಸ್ಥಳವಾದ ಬಟಾದ್ರವ ಥಾನ್ ದರ್ಶನಕ್ಕೆ ರಾಹುಲ್ ಗಾಂಧಿ ಅವರಿಗೆ ಆಡಳಿತ ಸಮಿತಿ ಅನುಮತಿ ನೀಡಿದ್ದರೂ ಅಸ್ಸಾಮ್ ಬಿಜೆಪಿ ಸರಕಾರ ಅನುಮತಿ ನೀಡಲಿಲ್ಲ. ಅಲ್ಲಿನ ಮೋರಿಗಾಂವ್ ಜಿಲ್ಲೆಯಲ್ಲಿ ರಾಹುಲ್ ಗಾಂಧಿ ಅವರು ಕಾರ್ನರ್ ಮೀಟಿಂಗ್ ಮಾಡಲು ಬಿಡಲಿಲ್ಲ. ಬಿಜೆಪಿ ಕಾರ್ಯಕರ್ತರು ರಾಹುಲ್ ಗಾಂಧಿ ಅವರ ಮೇಲೆ ಹಲ್ಲೆಗೆ ಯತ್ನಿಸಿದರು. ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ಮೇಲೆ ದೂರು ದಾಖಲಿಸಿದರು. ಇದ್ಯಾವುದರಿಂದಲೂ ವಿಚಲಿತರಾಗದ ರಾಹುಲ್ ಗಾಂಧಿ ಅವರು ದಿನದಿಂದ ದಿನಕ್ಕೆ ಆಕ್ರಮಣಕಾರಿಯಾಗಿಯೇ ಮಾತನಾಡಿದರು. ‘ತಾನು ಎಂತಹುದೇ ದಾಳಿಗೂ ಜಗ್ಗುವ ನಾಯಕ’ ಅಲ್ಲ ಎಂಬ ಸಂದೇಶವನ್ನು ಸ್ಪಷ್ಟವಾಗಿ ರವಾನಿಸಿದರು.

ಇನ್ನೊಂದೆಡೆ ಕಾಂಗ್ರೆಸ್ ಪಕ್ಷವು ‘ಇಂಡಿಯಾ’ ಮೈತ್ರಿಕೂಟಕ್ಕೆ ಉಂಟಾದ ಎಲ್ಲಾ ಅಡೆತಡೆಗಳನ್ನು ನಿವಾರಿಸಿಕೊಂಡು ‘ಘಟಬಂಧನ’ವನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸದಲ್ಲಿ ನಿರತವಾಗಿತ್ತು. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ ಏಕಾಂಗಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ ನಂತರವೂ ಮಮತಾ ಬ್ಯಾನರ್ಜಿ ಅವರನ್ನು ರಾಷ್ಟ್ರಮಟ್ಟದಲ್ಲಿ ‘ಇಂಡಿಯಾ’ ಮೈತ್ರಿಕೂಟದ ಜೊತೆಯಲ್ಲೇ ಉಳಿಸಿಕೊಳ್ಳಲು ಯಶಸ್ವಿಯಾಯಿತು. ಪಂಜಾಬ್ನಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡಿದ ಮೇಲೂ ಆಮ್ ಆದ್ಮಿ ಪಕ್ಷದೊಂದಿಗೆ ದಿಲ್ಲಿ, ಹರ್ಯಾಣ ಮತ್ತು ಗುಜರಾತ್ಗಳಲ್ಲಿ ಸೀಟು ಹಂಚಿಕೆ ಮಾಡಿಕೊಂಡು ‘ಇಂಡಿಯಾ’ ಮೈತ್ರಿ ಕೂಟಕ್ಕೆ ಧಕ್ಕೆಯಾಗದಂತೆ ಎಚ್ಚರ ವಹಿಸಿತು. ಸಮಾಜವಾದಿ ಪಕ್ಷದ ವಿರೋಧದ ನಡುವೆಯೂ ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷವನ್ನೂ ಇಂಡಿಯಾ ಮೈತ್ರಿಕೂಟಕ್ಕೆ ಕರತರುವ ಪ್ರಯತ್ನ ನಡೆಸಿತು. ಸಮಾಜವಾದಿ ಮುಖಂಡ ಅಖಿಲೇಶ್ ಯಾದವ್ ಮತ್ತು ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಇಬ್ಬರೂ ಸಹಮತ ವ್ಯಕ್ತಪಡಿಸದ ಕಾರಣಕ್ಕೆ ಕಾಂಗ್ರೆಸ್ ಪ್ರಯತ್ನ ಸಫಲವಾಗಲಿಲ್ಲ. ಇದರ ಹೊರತಾಗಿ ‘ಇಂಡಿಯಾ’ ಮೈತ್ರಿಕೂಟವನ್ನು ಮುನ್ನಡೆಸುತ್ತಿರುವ ಕಾಂಗ್ರೆಸ್ ಎಲ್ಲಾ ಹಂತದಲ್ಲೂ ಮಿತ್ರ ಪಕ್ಷಗಳ ಪಾಲಿಗೆ ಸ್ನೇಹಮಯಿಯಾಗಿಯೇ ವರ್ತಿಸಿತು.

ಜಿ-23 ನಾಯಕರಾದ ಗುಲಾಮ್ ನಬಿ ಆಝಾದ್, ಕಪಿಲ್ ಸಿಬಲ್, ಕ್ಯಾಪ್ಟನ್ ಅಮರಿಂದರ್ ಸಿಂಗ್ ಸೇರಿದಂತೆ ಹಲವಾರು ಮುಂಚೂಣಿ ನಾಯಕರು ಪಕ್ಷ ಬಿಟ್ಟು ಹೋದರೂ ಕಾಂಗ್ರೆಸ್ ವಿಚಲಿತವಾಗಲಿಲ್ಲ. ಮುತ್ಸದ್ದಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಚುನಾವಣೆ ಮೂಲಕವೇ ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿ ನಿಷ್ಠರಿಗೆ ಪ್ರಾಮುಖ್ಯತೆ ಎನ್ನುವ ಸಂದೇಶವನ್ನೂ ಕಳುಹಿಸಿತು. ಈಗಾಗಲೇ ಹೇಳಿದಂತೆ 2022ರಲ್ಲಿ ಭಾರತ ಜೋಡೊ ಯಾತ್ರೆ ಮೂಲಕ ಬಿಜೆಪಿ ವಿರುದ್ಧದ ನಿಜವಾದ ಹೋರಾಟ ಆರಂಭಿಸಿದ ಕಾಂಗ್ರೆಸ್ ಆನಂತರ ಬಂದ ನಾನಾ ಸಮಸ್ಯೆಗಳನ್ನು ಶಾಂತಚಿತ್ತವಾಗಿ ಬಗೆಹರಿಸಲು ಪ್ರಯತ್ನಿಸಿತು. ಮಧ್ಯಪ್ರದೇಶ, ಛತ್ತೀಸ್ಗಡ ಮತ್ತು ರಾಜಸ್ಥಾನ ಸೋಲನ್ನೂ ಸಮಚಿತ್ತದಿಂದ ಸ್ವೀಕರಿಸಿತು. ಚುನಾವಣೆ ಹೊಸ್ತಿಲಲ್ಲಿ ಉಂಟಾದ ಸಂಪನ್ಮೂಲದ ಕೊರತೆಯನ್ನೂ ನೀಗಿಸಿಕೊಂಡಿತು.

ಅಂತಿಮವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ‘ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ತುಷ್ಟೀಕರಣ ಮಾಡುತ್ತಿರುವ ಪಕ್ಷ ಎಂದು ಬಿಂಬಿಸಲು’ ನಡೆಸಿದ ಪ್ರಯತ್ನಕ್ಕೆ ಪ್ರತಿಯಾಗಿ ಚುನಾವಣಾ ಅಖಾಡದಲ್ಲಿ ನಿರುದ್ಯೋಗ, ಬೆಲೆ ಏರಿಕೆ, ಅಗ್ನಿಪಥ ಯೋಜನೆಯ ವೈಫಲ್ಯ, ಚುನಾವಣಾ ಬಾಂಡ್ಗಳ ಅಕ್ರಮ, ಭ್ರಷ್ಟಾಚಾರ, ಸಂವಿಧಾನ ಬದಲಾವಣೆ, ಸಂಪತ್ತಿನ ಅಸಮಾನ ಹಂಚಿಕೆ, ಬಡವರ ದುಡ್ಡು ಅಂಬಾನಿ-ಅದಾನಿಗೆ ಎನ್ನುವ ವಿಷಯಗಳ ಮೇಲೆ ಚರ್ಚೆ ಆಗುವಂತೆ ಮಾಡುವಲ್ಲಿ ಕಾಂಗ್ರೆಸ್ ಯಶಸ್ವಿಯಾಯಿತು.

ಕಾಂಗ್ರೆಸ್ ಈ ಚುನಾವಣೆಯಲ್ಲಿ ಗೆಲ್ಲಲಿ, ಬಿಡಲಿ, ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಸರಕಾರ ಅಧಿಕಾರಕ್ಕೆ ಬರಲಿ, ಬಿಡಲಿ ಅವು ಮುಖ್ಯವಾದ ವಿಷಯಗಳೇ ಅಲ್ಲ. ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷದ ರೀತಿಯಲ್ಲಿಯೇ ಪ್ರತಿಪಕ್ಷದ ಪಾತ್ರವೂ ಪ್ರಧಾನವಾದುದೇ. ಈ ಸಲ ಕಾಂಗ್ರೆಸ್ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಿದೆ. ಜೊತೆಗೆ ಮೋದಿ ಇವತ್ತು ದೇಶದ ಅತ್ಯಂತ ಜನಪ್ರಿಯ ನಾಯಕ ಎನ್ನುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಅದು ಕೂಡ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮುಖ್ಯವಲ್ಲ. ರಾಹುಲ್ ಗಾಂಧಿ ಅವರು ಪರ್ಯಾಯ ನಾಯಕನಾಗಿ ಹೊಮ್ಮಿದ್ದಾರೆ. ಅದರಿಂದ ಕಾಂಗ್ರೆಸ್ ಪಕ್ಷಕ್ಕಿಂತ ದೇಶಕ್ಕೆ ಒಳಿತು. ಬದಲಾವಣೆ ಜಗದ ನಿಯಮ ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವೇ?

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಧರಣೀಶ್ ಬೂಕನಕೆರೆ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!