ಕಲ್ಲು ತೂರಾಟ ಮಾಡಿದರು ಎಂದು ಬುಲ್ಡೋಜರ್ ಹರಿಸಿದ್ದು ರಾಮನ ಆದರ್ಶವೇ ?
ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆಯಾಗಿದೆ. ಬಿಜೆಪಿ ಮತ್ತು ಸಂಘ ಪರಿವಾರ ಆ ಇಡೀ ಕಾರ್ಯಕ್ರಮದಲ್ಲಿ ಭರ್ಜರಿಯಾಗಿ ಮಿಂಚಿದರು. ಆದರೆ ರಾಮನ ತತ್ವಾದರ್ಶಗಳು ಅದೇ ಪರಿವಾರದವರಲ್ಲಿ ಕಾಣಿಸುತ್ತಿವೆಯೆ?. ಒಂದೆಡೆ ರಾಮಮಂದಿರ ಉದ್ಘಾಟನೆಯಾಗುತ್ತಿದ್ದರೆ ದೇಶದ ಹಲವೆಡೆ ಹಿಂಸಾಚಾರ ತಲೆದೋರಿದೆ.
ಆ ಹಿಂಸಾಚಾರ ಏಕೆ ಉಂಟಾಯಿತು?. ರಾಮನ ಹೆಸರಲ್ಲಿ ಈ ದ್ವೇಷ, ಹಿಂಸೆ ಹರಡುತ್ತಿರುವವರು ಯಾರು?.ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದಕ್ಕೂ, ಆ ಕಾರ್ಯಕ್ರಮದ ಬಳಿಕ ದೇಶದ ವಿವಿಧೆಡೆ ಆಗುತ್ತಿರುವ ಬೆಳವಣಿಗೆಗಳಿಗೂ ನಡುವೆ ಅದೆಷ್ಟು ಅಂತರ ಯಾಕೆ ?.
ಏಕೆ ಹಿಂಸೆ, ದ್ವೇಷ ಮತ್ತೆ ಹೆಡೆಯೆತ್ತುವ ಎಲ್ಲ ಲಕ್ಷಣಗಳು ಗೋಚರಿಸತೊಡಗಿವೆ?.
ಏಕೆ ಮುಂಬೈನ ಮೀರಾ ರೋಡ್ನಲ್ಲಿ ಬುಲ್ಡೋಜರ್ ಕಾರ್ಯಾಚರಣೆ ಆಯಿತು? .ಯಾಕೆ ಅಲ್ಲಿನ ಕಟ್ಟಡಗಳನ್ನು ಅಕ್ರಮ ಎಂದು ಕೆಡವಲಾಯಿತು?. ಅದರ ಹಿಂದಿನ ಉದ್ದೇಶವೇನು?. ಯಾರನ್ನು ಗುರಿ ಮಾಡಿ ಅಂಥದೊಂದು ಕಾರ್ಯಾಚರಣೆ ನಡೆದುಹೋಯಿತು?.
ರಾಮನ ಹೆಸರಿನಲ್ಲಿ ಈಗ ದೇಶದಲ್ಲಿ ಏನು ನಡೆಯತೊಡಗಿದೆ?. ಪ್ರಧಾನಿ ಹೇಳಿದ ರಾಮರಾಜ್ಯ ಇದೇನಾ ?. ಅಯೋಧ್ಯೆಯಲ್ಲಿ ಬಾಲರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಿದ ಬಳಿಕ ಪ್ರಧಾನಿ ಹೇಳಿದ್ದೇನು ಎನ್ನೋದನ್ನು ಒಮ್ಮೆ ಗಮನಿಸೋಣ.
"ರಾಮ ವಿವಾದ ಅಲ್ಲ. ರಾಮ ಸಮಾಧಾನ. ಅಂದ್ರೆ ಪರಿಹಾರ. ರಾಮ ಎಲ್ಲರಿಗೂ ಸೇರಿದವನು. ರಾಮ ಮಂದಿರದಿಂದ ಅಶಾಂತಿ ನಿರ್ಮಾಣವಾಗಲಿದೆ ಎನ್ನುವುದು ಸುಳ್ಳು, ಈ ಮಂದಿರ ಭಾರತೀಯ ಸಮಾಜದಲ್ಲಿನ ಶಾಂತಿ, ತಾಳ್ಮೆ, ಸಾಮರಸ್ಯ ಮತ್ತು ಸಮನ್ವಯದ ಸಂಕೇತವಾಗಿದೆ " ಎಂಬ ಮಾತುಗಳನ್ನು ಅವರು ಹೇಳಿದರು. ಆದರೆ ಅವರು ಹಾಗೆ ಹೇಳುತ್ತಿದ್ದರೆ, ದೇಶದ ಹಲವೆಡೆ ಹಿಂಸಾಚಾರ ಆಗಲೇ ಭುಗಿಲೆದ್ದಿತ್ತು. ಅವರು ಉಜ್ವಲ ಭವಿಷ್ಯದ ಬಗ್ಗೆ ಹೇಳುತ್ತಿದ್ದರೆ, ವಾಸ್ತವದಲ್ಲಿ ಹಿಂಸೆಯ ಬೆಂಕಿ ಜ್ವಲಿಸತೊಡಗಿತ್ತು.
ಮಹಾರಾಷ್ಟ್ರ, ಗುಜರಾತ್ ಮತ್ತು ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಭಿನ್ನಧ್ವನಿಗಳನ್ನು ಅಡಗಿಸಲು ಯಥಾ ಪ್ರಕಾರ ಪೊಲೀಸರ ಪ್ರವೇಶವಾಗಿತ್ತು. ಆನಂದ್ ಪಟವರ್ಧನ್ ಅವರ 'ರಾಮ್ ಕೆ ನಾಮ್' ಸಾಕ್ಷ್ಯಚಿತ್ರದ ಪ್ರದರ್ಶನಕ್ಕೆ ಪುಣೆ, ಹೈದರಾಬಾದ್ ಮತ್ತು ಕೇರಳದಲ್ಲಿ ಅಡ್ಡಿ ಮಾಡಲಾಯಿತು. ಕೆಲವೆಡೆ ವಿದ್ಯಾರ್ಥಿಗಳನ್ನು ಥಳಿಸಿದ ಘಟನೆಯೂ ನಡೆಯಿತು.
ಇದೆಲ್ಲಕ್ಕಿಂತ ಅಮಾನವೀಯವಾಗಿ, ಮುಂಬೈನ ಮೀರಾ ರಸ್ತೆಯ ಕೆಲವು ಕಟ್ಟಡಗಳನ್ನು ಅಕ್ರಮ ಎಂಬ ಕಾರಣವೊಡ್ಡಿ ನೆಲಸಮ ಮಾಡಿಬಿಡಲಾಯಿತು. ಮಹಾರಾಷ್ಟ್ರದ ನಾಗ್ಪುರ, ಮೀರಾ ರೋಡ್, ಪನ್ವೇಲ್ ಮತ್ತು ಪುಣೆಯಲ್ಲಿ ಘರ್ಷಣೆಗಳು ಸಂಭವಿಸಿದವು. ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ಮಾರನೇ ದಿನ, ಅಂದರೆ ಜನವರಿ 23ರಂದು ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳ ಒಕ್ಕೂಟ 'ರಿಮೆಂಬರಿಂಗ್ ಬಾಬ್ರಿ' ಹೆಸರಿನಲ್ಲಿ ಶಾಂತಿಯುತ ಪ್ರತಿಭಟನೆ ಆಯೋಜಿಸಿತ್ತು.
ಆಗ ಇದ್ದಕ್ಕಿದ್ದಂತೆ, ತಲೆಗೆ ಕೇಸರಿ ಬಟ್ಟೆ ಕಟ್ಟಿಕೊಂಡಿದ್ದ ಹೊರಗಿನವರ ಗುಂಪೊಂದು ಕ್ಯಾಂಪಸ್‌ಗೆ ನುಗ್ಗಿ, ಬ್ಯಾನರ್‌ಗೆ ಬೆಂಕಿ ಹಚ್ಚಿತು. ಅವರ ಗುಂಪಿನವರೇ ಚಿತ್ರಿಸಿರುವ ವೀಡಿಯೊ ಒಂದರಲ್ಲಿ ಕಾಣಿಸುವಂತೆ, ಅವರೆಲ್ಲ ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುತ್ತಿದ್ದರು ಎಂದು ದಿ ವೈರ್ ವರದಿ ಹೇಳಿದೆ.
ಅವರಲ್ಲೊಬ್ಬ, ನಾವು ಒಂದಲ್ಲ, ಇಂಥ ಸಾವಿರ ಬಾಬ್ರಿ ಮಸೀದಿಗಳನ್ನು ನಾಶಪಡಿಸುತ್ತೇವೆ ಎಂದು ಹೇಳುವುದೂ ವೀಡಿಯೊದಲ್ಲಿದೆ ಎನ್ನುತ್ತದೆ ವರದಿ. ಹಾಗಾದರೆ, ಇಲ್ಲಿ, ಎಫ್ಟಿಐಐನ ವಿದ್ಯಾರ್ಥಿಗಳು ಮಾಡುತ್ತಿದ್ದುದು ಏನು, ಈ ಕೇಸರಿ ಪಡೆ ಅಲ್ಲಿ ನುಗ್ಗಿ ಮಾಡಿದ್ದೇನು?.
ಒಂದು ಶಾಂತಿಯುತ ಪ್ರದರ್ಶನ ನೊಂದ ಸಮುದಾಯವೊಂದರ ದನಿಯನ್ನು ಸೂಚಿಸಲು ನಡೆಯುತ್ತಿದ್ದರೆ, ಇವರು ಅಲ್ಲಿಗೆ ನುಗ್ಗಿ ಮತ್ತೇಕೆ ಹಿಂಸೆಯ ಮಾತಾಡುತ್ತಿದ್ದಾರೆ?. ಕೆಡಹುವ, ಕೊಲ್ಲುವ, ದ್ವೇಷದ ಮಾತು ಮತ್ತು ನಡವಳಿಕೆ ಬಿಟ್ಟರೆ ಬೇರೇನೂ ಇವರಿಗೆ ಗೊತ್ತೇ ಇಲ್ಲವೆ? .ರಾಮನ ಹೆಸರಿನಲ್ಲಿ ಹಿಂಸೆಯನ್ನು ಹರಡುತ್ತಿರುವವರು ಇವರಲ್ಲದೆ ಯಾರು?.
ಇನ್ನೂ ಒಂದು ಗಮನಿಸಬೇಕಿರುವ ವಿಚಾರವೆಂದರೆ, ಇತ್ತೀಚಿನ ವರ್ಷಗಳಲ್ಲಿ ಎಫ್ಟಿಐಐನಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಪ್ರವೇಶ ದ್ವಾರದ ಭದ್ರತಾ ಸಿಬ್ಬಂದಿಗೆ ವಿವರಗಳನ್ನು ಸಲ್ಲಿಸದೆ ಹಳೆಯ ವಿದ್ಯಾರ್ಥಿಗಳೂ ಕ್ಯಾಂಪಸ್‌ಗೆ ಪ್ರವೇಶಿಸಲು ಅವಕಾಶವಿಲ್ಲ.
ಹಾಗಿರುವಾಗ, ಆ ಸಂಸ್ಥೆಗೆ ಸಂಬಂಧವೇ ಇಲ್ಲದ ಆ ಗುಂಪು ಹೇಗೆ ಒಳ ನುಗ್ಗಿತು ಎಂಬ ಪ್ರಶ್ನೆ ಎದ್ದಿದೆ.
ಆದರೆ, ಇಲ್ಲಿ ಕೇಸರಿ ಪಡೆಯವರನ್ನು ಪ್ರಶ್ನಿಸುವ ಬದಲು, ಪೊಲೀಸರು ಕೆಲವು ವಿದ್ಯಾರ್ಥಿಗಳನ್ನೇ ಚಿಕಿತ್ಸೆ ಕೊಡಿಸುವ ನೆಪದಲ್ಲಿ ಕರೆದೊಯ್ದರು.
ಆದರೆ ಅವರು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಠಾಣೆಗೆ ಕರೆದೊಯ್ದಿದ್ದರು. ಹೇಗಿದೆ ನೋಡಿ ರಾಮನ ಹೆಸರಿನಲ್ಲಿನ ಪೊಲೀಸ್ ನ್ಯಾಯ? ಜನವರಿ 22ರಂದು, ಕ್ಯಾಂಪಸ್‌ನಲ್ಲಿ 'ರಾಮ್ ಕೆ ನಾಮ್' ಸ್ಕ್ರೀನಿಂಗ್ ಆಯೋಜಿಸಿದ್ದಾಗಲೂ, ಪ್ರದರ್ಶನದ ನಡುವೆಯೇ ಕೆಲವು ಸಿಬ್ಬಂದಿ ಘೋಷಣೆ ಕೂಗಿ, ಪ್ರದರ್ಶನ ನಿಲ್ಲಿಸಲು ಯತ್ನಿಸಿದ್ದ ಘಟನೆ ನಡೆದಿತ್ತು.
ಹೈದರಾಬಾದ್‌ನಲ್ಲಿ ಕೂಡ ಜನವರಿ 21ರಂದು 'ರಾಮ್ ಕೆ ನಾಮ್' ಪ್ರದರ್ಶನಕ್ಕೆ ಹಿಂದುತ್ವ ಗುಂಪುಗಳು ಅಡ್ಡಿಪಡಿಸಿದ್ದವು.
ಅಲ್ಲಿಯೂ ಪೊಲೀಸರು, ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಕಾರ್ಯಕ್ರಮ ಸಂಘಟಕರ ವಿರುದ್ಧವೇ ದರ್ಪ ತೋರಿಸಿದ್ದರು. ಕಾರ್ಯಕ್ರಮ ನಡೆದ ಸ್ಥಳದ ಮಾಲೀಕರು ಮತ್ತು ಕಾರ್ಯಕ್ರಮ ಆಯೋಜಿಸಿದ್ದ ಸಂಘಟನೆಯ ಸದಸ್ಯರು ಸೇರಿದಂತೆ ನಾಲ್ವರನ್ನು ಬಂಧಿಸಲಾಯಿತು.
ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 143 (ಕಾನೂನುಬಾಹಿರ ಸಭೆ), ಸೆಕ್ಷನ್ 290 (ಸಾರ್ವಜನಿಕ ಉಪದ್ರವ), ಸೆಕ್ಷನ್ 295ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು) ಮತ್ತು ಸೆಕ್ಷನ್ 149ರ ಅಡಿಯಲ್ಲಿ ಕೇಸ್ ದಾಖಲಾಗಿದೆ. ಕೇರಳದಲ್ಲಿ ಬಲಪಂಥೀಯ ಬೆಂಬಲಿಗರ ಪ್ರತಿಭಟನೆಯ ನಡುವೆಯೂ ಕೆಆರ್ ನಾರಾಯಣನ್ ಫಿಲ್ಮ್ ಇನ್‌ಸ್ಟಿಟ್ಯೂಟ್ ವಿದ್ಯಾರ್ಥಿಗಳು 'ರಾಮ್ ಕೇ ನಾಮ್' ಪ್ರದರ್ಶಿಸಿದರು. ಪೊಲೀಸರ ಮಧ್ಯಪ್ರವೇಶದಿಂದ ಅಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು.
ಜನವರಿ 22ರಂದು ಮತ್ತೊಂದು ಘಟನೆಯಲ್ಲಿ, ಆಂಧ್ರದ ಸಂಗರೆಡ್ಡಿ ಜಿಲ್ಲೆಯ ಹತ್ನೂರ್ ಗ್ರಾಮದಲ್ಲಿ ಮುಸ್ಲಿಮರ ಅಂಗಡಿಗಳ ಮೇಲೆ ದಾಳಿ ನಡೆಸಲಾಯಿತು. ಹಿಂದುತ್ವದ ಗುಂಪು ಮುಸ್ಲಿಂರ ಅಂಗಡಿಗಳಿಗೆ ಬೆಂಕಿ ಹಚ್ಚಿರುವುದಲ್ಲದೆ ವಾಹನಗಳನ್ನೂ ಜಖಂಗೊಳಿಸಿದೆ ಎಂದು ವರದಿಯಾಗಿದೆ. ಇನ್ನು ಮಧ್ಯಪ್ರದೇಶದಲ್ಲಿ ಬಲಪಂಥೀಯ ಸಂಘಟನೆ ಕಾರ್ಯಕರ್ತರು ಚರ್ಚ್ ಮೇಲೆ ಹತ್ತಿ ಕ್ರೈಸ್ತರ ಪವಿತ್ರ ಧಾರ್ಮಿಕ ಸಂಕೇತ ಶಿಲುಬೆಯ ಮೇಲೆ ಕೇಸರಿ ಧ್ವಜ ಇಟ್ಟು, ವಿಕೃತ ಸಂಭ್ರಮ ಪಟ್ಟರು.
ಅಲ್ಲಿ ಇಂಥದೇ ಒಟ್ಟು ನಾಲ್ಕು ಘಟನೆಗಳು ಜನವರಿ 21ರಂದು ಸಂಭವಿಸಿವೆ.
ಮಧ್ಯಪ್ರದೇಶದ ಜಬುವಾದ ರಾಣಾಪುರ್ ತೆಹಸಿಲ್‌ನಲ್ಲಿರುವ ದಬ್ತಲೈ, ಮತಾಸುಲಾ, ಉಬೇರಾವ್ ಮತ್ತು ಧಮನಿನಾಥು ಗ್ರಾಮಗಳಲ್ಲಿ ಆ ಘಟನೆಗಳು ನಡೆದಿವೆ. ಅವು ಹೆಚ್ಚು ಬುಡಕಟ್ಟಿನವರೇ ಇರುವ ಪ್ರದೇಶಗಳಾಗಿವೆ. ಈ ಯಾವ ಘಟನೆಗಳಲ್ಲೂ ಎಫ್ಐಆರ್ ದಾಖಲಾಗಿಯೇ ಇಲ್ಲ.
ಇನ್ನು ಮುಂಬೈನ ಹೊರವಲಯದಲ್ಲಿ ಮೂರು ಪ್ರತ್ಯೇಕ ಘಟನೆಗಳು ನಡೆದವು. ಮೀರಾ ರಸ್ತೆಯಲ್ಲಿ ಎರಡು ಮತ್ತು ಪನ್ವೇಲ್ನಲ್ಲಿ ಒಂದು ಘಟನೆ ನಡೆದಿರುವುದು ವರದಿಯಾಗಿದೆ. ಮೀರಾ-ಭಯಂದರ್ ಪ್ರದೇಶದಲ್ಲಿ ಜನವರಿ 21ರ ಸಂಜೆ ಹಿಂದುತ್ವ ಗುಂಪುಗಳು ಕೇಸರಿ ಧ್ವಜಗಳೊಂದಿಗೆ ಜೈ ಶ್ರೀರಾಮ್ ಘೋಷಣೆ ಕೂಗುತ್ತ ಹಾದುಹೋಗುತ್ತಿದ್ದಾಗ ಘರ್ಷಣೆ ಉಂಟಾಯಿತು.
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವೀಡಿಯೊ ಒಂದರಲ್ಲಿರುವಂತೆ, ಬೈಕ್ನಲ್ಲಿದ್ದ ಯುವಕನೊಬ್ಬ ಕೇಸರಿ ಧ್ವಜಗಳನ್ನು ಬೀಸುತ್ತಿದ್ದ ಮತ್ತು ಕೈಯಲ್ಲಿ ಆಯುಧ ಹೊಂದಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 13 ಮಂದಿಯನ್ನು ಬಂಧಿಸಿದ್ದಾರೆ.
ಪನ್ವೇಲ್‌ನಲ್ಲಿ, ಕಚ್ಚಿ ಮೊಹಲ್ಲಾ ಎಂಬ ಮುಸ್ಲಿಂರು ಹೆಚ್ಚು ಸಂಖ್ಯೆಯಲ್ಲಿರುವ ಪ್ರದೇಶದಲ್ಲಿ ಜೈ ಶ್ರೀ ರಾಮ್ ಎಂದು ಕೂಗುತ್ತಾ ಕೆಲವರು ಗುಂಪು ಸೇರಿದಾಗ ನಡೆದ ಘರ್ಷಣೆಯಲ್ಲಿ ಕೆಲವರಿಗೆ ಗಾಯಗಳಾಗಿವೆ. ಇದಾದ ಕೆಲ ಸಮಯದಲ್ಲಿಯೇ ಪನ್ವೇಲ್ ರೈಲು ನಿಲ್ದಾಣದಲ್ಲೂ ಇದೇ ರೀತಿಯ ಘಟನೆ ನಡೆದಿರುವುದು ವರದಿಯಾಗಿದೆ.
ಆದರೆ, ಅನಂತರ ಅಂದರೆ ಜನವರಿ 23ರಂದು ಮುಂಬೈನ ಮೀರಾ ರಸ್ತೆಯಲ್ಲಿ ನಡೆದದ್ದು ಮಾತ್ರ ಸೇಡಿನ ಕ್ರಮವಲ್ಲದೆ ಇನ್ನೇನು?
ಮೆರವಣಿಗೆ ವೇಳೆ ಸಂಘರ್ಷ ನಡೆಯಿತೆಂಬ ಕಾರಣಕ್ಕಾಗಿಯೇ ಅಲ್ಲಿ ಬುಲ್ಡೋಜರ್ಗಳು ಬಂದು ಅಬ್ಬರಿಸಿದವು. ಕೆಲವು ಕಟ್ಟಡಗಳನ್ನು ಅಕ್ರಮ ಎಂದು ಹೇಳಿ ಕೆಡವಲಾಯಿತು.
ಕಾನೂನು ಕೈಗೆತ್ತಿಕೊಂಡು ಹಿಂಸೆ ನಡೆಸಿದರೆ ತಕ್ಕ ಪಾಠ ಕಲಿಸಲಾಗುತ್ತದೆ. ಕಾನೂನು ಸುವ್ಯವಸ್ಥೆ ಹಾಳುಗೆಡವಲು ಯಾರನ್ನೂ ಬಿಡುವುದಿಲ್ಲ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರೇನೋ ಘಟನೆ ನಡೆದ ರಾತ್ರಿ ದೊಡ್ಡ ಮಾತು ಹೇಳಿದ್ದರು.
ಅನಂತರ ಅವರ ಸರ್ಕಾರ ಮಾಡಿದ್ದೇನು? ಇದ್ದಕ್ಕಿದ್ದಂತೆ ಕಟ್ಟಡಗಳು ಅಕ್ರಮವಾಗಿಬಿಟ್ಟವೆ? ಇದು ರಾಮರಾಜ್ಯದ ಹೆಸರಿನಲ್ಲಿಯ ಬಿಜೆಪಿಯವರ ಅಸಲೀ ರಾಜ್ಯವೆ? ಇನ್ನು, ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ಶೋಭಾಯಾತ್ರೆ ಹಾಗೂ ಶ್ರೀರಾಮನ ಮೂರ್ತಿ ಮೆರವಣಿಗೆ ವೇಳೆ ಗದ್ದಲ ಉಂಟಾದ ಬೆನ್ನಲ್ಲೇ ಕೋಟನೂರು ಗ್ರಾಮದಲ್ಲಿರುವ ಲುಂಬಿಣಿ ಉದ್ಯಾನವನದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಕಿಡಿಗೇಡಿಗಳು ಅಪಮಾನ ಮಾಡಿರುವ ಘಟನೆ ನಡೆದಿದೆ.
ಭವಿಷ್ಯದಲ್ಲಿ ಯಾರೂ ಹಿಂದೂ ಭಾವನೆಗಳಿಗೆ ಧಕ್ಕೆ ತರಲು ಸಾಧ್ಯವಿಲ್ಲ ಎಂದು ಅಯೋಧ್ಯೆ ಕಾರ್ಯಕ್ರಮದ ಬಳಿಕ ಆರೆಸ್ಸೆಸ್ ಹೇಳಿದೆ.
ಇದರರ್ಥ ಏನು? ಹಿಂದುತ್ವದ ಹೆಸರಿನಲ್ಲಿ ಸಮುದಾಯಗಳ ನಡುವೆ ತಾರತಮ್ಯ ಬಗೆಯುತ್ತಿರುವವರು ಯಾರು? .ಎಲ್ಲವನ್ನೂ ಕೆದಕಿ ಕೆದಕಿ ಕೆಣಕುತ್ತಿರುವವರು ಯಾರು?. ದ್ವೇಷವನ್ನು ಸಾಧಿಸುತ್ತಿರುವವರು ಯಾರು?. ಶ್ರೀರಾಮನ ಹೆಸರಿನಲ್ಲಿ ಇವರು ನಿಜವಾಗಿಯೂ ಏನು ಮಾಡಲು ಹೊರಟಿದ್ದಾರೆ?