ಅಧಿಕಾರ, ಪಕ್ಷ ಎಲ್ಲವನ್ನೂ ಕಳಕೊಳ್ಳಲಿದ್ದಾರೆಯೇ ಬಿಹಾರ ಸಿಎಂ ?

Update: 2024-02-06 05:38 GMT
Editor : Ismail | Byline : ಆರ್. ಜೀವಿ

ನಿತೀಶ್ ಕುಮಾರ್ | Photo: PTI  

ಇಂಡಿಯಾ ಮೈತ್ರಿಕೂಟಕ್ಕೆ ಕೈಕೊಟ್ಟು ನಿತೀಶ್ ಕುಮಾರ್ ಎನ್ಡಿಎ ಬಣ ಸೇರುವುದರೊಂದಿಗೆ 9ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿರುವುದೇನೋ ಹೌದು. ಆದರೆ ಬಿಹಾರದಲ್ಲಿ ನಡೆಯುತ್ತಿರುವ ರಾಜಕಾರಣ ಮಾತ್ರ ನಾವು ಇಲ್ಲಿಂದ ಮಡಿಲ ಮಾಧ್ಯಮಗಳಲ್ಲಿ ನೋಡಿದಷ್ಟು ಸರಳವಾಗಿಲ್ಲ. ಒಂದು ರಾಜೀನಾಮೆ, ಇನ್ನೊಂದು ಪ್ರಮಾಣ ವಚನ, ಆ ಸರಕಾರ ಪತನ , ಈ ಸರಕಾರ ನಿರ್ಮಾಣ ಎಂದು ಇಲ್ಲಿಂದ ಕಾಣುವಷ್ಟು ಸಿಂಪಲ್ ಆಗಿಲ್ಲ.

ಬಿಹಾರದ ರಾಜಕಾರಣಕ್ಕಿರುವ ಐತಿಹಾಸಿಕ ಹಿನ್ನೆಲೆ, ಅಲ್ಲಿನ ಜಾತಿ ಸಮೀಕರಣ, ಅಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗಿರುವ ವರ್ಚಸ್ಸು, ಅದನ್ನು ಅವರ ಪುತ್ರ ತೇಜಸ್ವಿ ಬೆಳೆಸಿರುವ ರೀತಿ - ಇವೆಲ್ಲವೂ ಅಲ್ಲಿನ ಮುಂದಿನ ರಾಜಕೀಯವನ್ನು ನಿರ್ಧರಿಸಲಿವೆ. ಈಗ ದಿಲ್ಲಿಯ ರಾಜಕೀಯ ವಿಶ್ಲೇಷಕರ ನಡುವೆ ಎದ್ದಿರುವ ಮುಖ್ಯ ಪ್ರಶ್ನೆ , ಬಿಜೆಪಿ ಜೊತೆ ಮತ್ತೆ ಕೈಜೋಡಿಸಿ ನಿತೀಶ್ ಕುಮಾರ್ ರಾಜಕೀಯವಾಗಿ ಸಂಪೂರ್ಣವಾಗಿ ದಿವಾಳಿಯಾಗುವತ್ತ ಹೆಜ್ಜೆ ಇಟ್ಟಿದ್ದಾರೆಯೇ ?

ಈ ಬಾರಿ ಬಿಜೆಪಿ ತನಗೆ ಬೇಕಾದಂತೆ ಷರತ್ತುಗಳನ್ನು ವಿಧಿಸಿಯೇ ಬೆಂಬಲ ಕೊಟ್ಟಿದ್ದು​, ನಿತೀಶ್ ಅವರನ್ನೂ ಅವರ ಪಕ್ಷವನ್ನೂ ಸಂಪೂರ್ಣವಾಗಿ ಆಪೋಶನ ತೆಗೆದುಕೊಳ್ಳಲಿದೆಯೇ ?. ಈ ದಿಢೀರ್ ನಡೆಯ ಮೂಲಕ ತನ್ನ ವಿಶ್ವಾಸಾರ್ಹತೆಯನ್ನು ಪಾತಾಳಕ್ಕೆ ತಲುಪಿಸಿರುವ ನಿತೀಶ್ ಬಹಳ ಬೇಗ ಅಧಿಕಾರ, ಪಕ್ಷ, ವರ್ಚಸ್ಸು ಎಲ್ಲವನ್ನೂ ಕಳಕೊಳ್ಳುವ ಸ್ಥಿತಿಗೆ ತಲುಪಲಿದ್ದಾರೆಯೇ ?

ಬಿಜೆಪಿ ಮುಖಂಡರೇ ನಿತೀಶ್ ರನ್ನು ಅತ್ಯಂತ ಕೀಳಾಗಿ ಚಿತ್ರಿಸುತ್ತಿದ್ದು ಇದು ಎಲ್ಲಿಗೆ ಹೋಗಿ ತಲುಪಲಿದೆ ?. ನಿತೀಶ್ ರ ಇಬ್ಬರು ಬದ್ಧ ರಾಜಕೀಯ ವೈರಿಗಳನ್ನೇ ಬಿಜೆಪಿ ಡಿಸಿಎಂ ಮಾಡಿರುವುದು ಯಾವ ಉದ್ದೇಶದಿಂದ ? ಬಿಜೆಪಿಯ ಈ ತಂತ್ರಗಾರಿಕೆಯಿಂದಾಗಿ ಈಗ ನಿಜವಾಗಿಯೂ ನಿತೀಶ್ ಅಡಕತ್ತರಿಯಲ್ಲಿ ಸಿಲುಕಿದ್ದಾರೆಯೆ?.

ನಿತೀಶ್ ರ ವಿಶ್ವಾಸ ದ್ರೋಹ ಹಾಗು ತನ್ನ ಅವಧಿಯಲ್ಲಿ ಸರಕಾರಿ ಉದ್ಯೋಗಕ್ಕೆ ಲಕ್ಷಗಟ್ಟಲೆ ನೇಮಕಾತಿ ಸಹಿತ ಇತರ ಕೆಲಸಗಳನ್ನು ಇಟ್ಟುಕೊಂಡು ಆರ್ ಜೆ ಡಿ ಹಾಗು ಕಾಂಗ್ರೆಸ್ ಬಿಹಾರದ ಮೂಲೆ ಮೂಲೆಗೆ ಹೋಗಿ ಜನರನ್ನು ನಿತೀಶ್ ಹಾಗು ಬಿಜೆಪಿ ವಿರುದ್ಧ ತಿರುಗಿಸುವ ಸಾಧ್ಯತೆ ಕಾಣುತ್ತಿದೆಯೇ ?.

ಸಮಯ ಸಾಧಕ ಹಾಗು ಅವಕಾಶವಾದಿ ರಾಜಕಾರಣಕ್ಕಾಗಿ ನಿತೀಶ್ ಹಾಗು ಬಿಜೆಪಿ ಇಬ್ಬರೂ ಲೋಕಸಭಾ ಚುನಾವಣೆಯಲ್ಲಿ ಬೆಲೆ ತೆರಲಿದ್ದಾರೆಯೆ ?. ಬಿಹಾರ ತಲುಪಿರುವ ರಾಹುಲ್ ಗಾಂಧಿಯ ಯಾತ್ರೆಗೂ ಸಿಗುತ್ತಿರುವ ​ಮಹಿಳೆಯರ, ಯುವಜನರ ಭಾರೀ ಪ್ರತಿಕ್ರಿಯೆ ಏನನ್ನು ಸೂಚಿಸುತ್ತಿದೆ ?.

ಬಿಹಾರದ ಜಾತಿ ಸಮೀಕರಣ ಕೂಡ ನಿತೀಶ್ ಗೆ ಪ್ರತಿಕೂಲವಾಗಿ ರೂಪುಗೊಳ್ಳುತ್ತಿದೆಯೇ ?​ ಮೊನ್ನೆ ಮೊನ್ನೆಯವರೆಗೂ ನಿತೀಶ್ ಅವರ ವಿರುದ್ಧ ಅತ್ಯಂತ ಕೆಟ್ಟದಾಗಿ ಟೀಕಿಸುತ್ತಿದ್ದ ಬಿಜೆಪಿ ಏಕೆ ಮತ್ತೊಮ್ಮೆ ನಿತೀಶ್ ಅವರನ್ನು ಕರೆದುಕೊಳ್ಳಲು ನಿರ್ಧರಿಸಿತು?

ಬಿಜೆಪಿ ಬಾಗಿಲು ನಿತಿಶ್ ಪಾಲಿಗೆ​ ಶಾಶ್ವತವಾಗಿ ಮುಚ್ಚಿದೆ ಎಂದಿದ್ದ ಬಿಜೆಪಿ ಮತ್ತೆ ತೆರೆದು ಕರೆದುಕೊಂಡದ್ದರ ಹಿಂದೆ ಇರುವುದು ಅದರ ಚಾಣಾಕ್ಷ ಚುನಾವಣಾ ಲೆಕ್ಕಾಚಾರವೇ ಆಗಿದೆ.

ಬಿಹಾರವನ್ನು ಹೇಗಾದರೂ ತನ್ನ ವಶ ಮಾಡಿಕೊಳ್ಳಲೇಬೇಕೆಂದು ಹೊಂಚುತ್ತಿರುವ ಬಿಜೆಪಿ, ಬಿಹಾರದ 40 ಲೋಕಸಭಾ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದೆ. ಕಳೆದ ಬಾರಿ ಎನ್ಡಿಎ ಮೈತ್ರಿಕೂಟ 39 ಸ್ಥಾನಗಳನ್ನು ಗೆದ್ದಿತ್ತು. ಈ ಸಲ ಎಲ್ಲವನ್ನೂ ಗೆಲ್ಲುವ ಉದ್ದೇಶದೊಂದಿಗೆ ಬಿಜೆಪಿ ತಂತ್ರ ರೂಪಿಸುತ್ತಿದೆ.

ಹಾಗಾಗಿಯೇ ಅದು ಈಗ ಕೇವಲ ರಾಜಕೀಯ ತಂತ್ರದ ಭಾಗವಾಗಿಯೇ ನಿತೀಶ್ ಜೊತೆ ಕೈಜೋಡಿಸಿರುವುದು ಸ್ಪಷ್ಟ.ಅವರ ಜಾತಿ ಜನಗಣತಿ ಸೇರಿದಂತೆ, ಬಿಜೆಪಿ ವಿರುದ್ದ ಅವರು ತೋರಿಸಿದ್ದ ಅಸ್ತ್ರಗಳನ್ನೇ ಇಟ್ಟುಕೊಂಡು ತನ್ನ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ಹೊರಟಿದ್ದು,

ಅದರ ಈ ತಂತ್ರ ನಿತೀಶ್ ಅವರನ್ನು ಪೂರ್ತಿ ದುರ್ಗತಿಗೆ ತಳ್ಳಿದರೆ ಅಚ್ಚರಿಯಿಲ್ಲ.

ಒಂದೆಡೆ ಬಿಜೆಪಿ ತನ್ನ ನೆಲೆಯನ್ನು ಬಿಹಾರದಲ್ಲಿ ಭದ್ರವಾಗಿಸುವ ನಿಟ್ಟಿನಲ್ಲಿ ಯೋಚಿಸುತ್ತಿದ್ದರೆ,

ನಿತೀಶ್ ಕುಮಾರ್​ ಗೆ ಮಾತ್ರ ತಮ್ಮ ಪಕ್ಷ ಈಗ ಹೊಂದಿರುವ ಸ್ಥಾನಗಳನ್ನಾದರೂ ಉಳಿಸಿಕೊಳ್ಳುವ ಅನಿವಾರ್ಯತೆ ಇದೆ.

ಕಡೆಗೆ ಈ ಆಟ ಅವರನ್ನು ಅವರದೇ ತಪ್ಪುಗಳ ಫಲವಾಗಿ ​ರಾಜಕೀಯ ನೆಲೆ ಕಳೆದುಕೊಳ್ಳುವ ಸ್ಥಿತಿಗೆ ತಳ್ಳಬಹುದೆ? ಇಂಥದೊಂದು ಸಾಧ್ಯತೆಯ ಬಗ್ಗೆ ತೇಜಸ್ವಿ ಯಾದವ್ ಅವರೇ ಹೇಳಿದ್ದಾರೆ. ಬರೆದಿಟ್ಡುಕೊಳ್ಳಿ, ಆಗುವುದು ಹಾಗೇನೆ ಎಂದಿದ್ದಾರೆ. ನಿತೀಶ್ ಕುಮಾರ್ ಪಕ್ಷದ ಕೊನೆಯಾಗಲಿದೆ. ಆಟ ಈಗಷ್ಟೇ ಶುರುವಾಗಿದೆ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ. ಎರಡು ವಿಚಾರಗಳನ್ನು ಮುಖ್ಯವಾಗಿ ಗಮನಿಸಬೇಕು. ಬಿಜೆಪಿ ಈ ಬಾರಿ ಆಟವಾಡಿರುವ ರೀತಿ ಬಲು ಚಾಣಾಕ್ಷತನದ್ದಾಗಿದೆ.

ಮೈತ್ರಿ ಬದಲಿಸುತ್ತಲೇ ಬಿಹಾರ ರಾಜಕೀಯದಲ್ಲಿ ಹಿಡಿತ ಇಟ್ಟುಕೊಂಡಿರುವ ನಿತೀಶ್ ಅವರನ್ನು ಅದು ಸರಿಯಾಗಿಯೇ ಖೆಡ್ಡಾಕ್ಕೆ ಬೀಳಿಸಿದ ಹಾಗಿದೆ. ಮಹಾ ಘಟಬಂಧನ್ ಮೈತ್ರಿ ಸರ್ಕಾರದಲ್ಲಿದ್ದಾಗ ಬಿಹಾರದಲ್ಲಿ ಜಾತಿ ಗಣತಿ ಸಮೀಕ್ಷೆ ನಡೆಸಿ, ಅದರ ವರದಿ ಬಿಡುಗಡೆ ಮಾಡಿ ಆ ಪ್ರಕಾರವೇ ಮೀಸಲಾತಿ ಏರಿಳಿತ ಮಾಡಿದ್ದ ನಿತೀಶ್ ಕುಮಾರ್ ಅವರ ಸಾಧನೆಯದ್ದೇ ಲಾಭವನ್ನು ಎನ್‌ಡಿಎ ಪಾಲಾಗಿಸುವುದು ಬಿಜೆಪಿ ತಂತ್ರವಾಗಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಬಿಹಾರದ ಒಟ್ಟು 40 ಸ್ಥಾನಗಳ ಪೈಕಿ ಬಿಜೆಪಿ 17 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಜೆಡಿಯು 16 ಹಾಗೂ ಎಲ್‌ಜೆಪಿ 6 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದವು. ಈ ಬಾರಿ ತನ್ನ ಸ್ಥಾನ ಗಳಿಕೆ ಹೆಚ್ಚು ಮಾಡಿಕೊಳ್ಳಲು ಬಿಜೆಪಿ ಮುಂದಾಗಿದೆ. ಸೀಟು ಹಂಚಿಕೆ ಹೊತ್ತಲ್ಲೂ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಸಿಗುವ ಸಾಧ್ಯತೆ ಇದೆ.

ಇನ್ನು ಇಬ್ಬರು ಡಿಸಿಎಂ​ ಗಳ ಆಯ್ಕೆಯಲ್ಲೂ ಬಿಜೆಪಿ ಚಾಣಾಕ್ಷತನ ಎದ್ದು ಕಾಣಿಸುತ್ತದೆ. ಯಾರು ನಿತೀಶ್ ಅವರಿಗೆ ಬದ್ಧ ರಾಜಕೀಯ ವೈರಿಗಳೊ ಅವರನ್ನೇ ಡಿಸಿಎಂ ಆಗಿಸಿರುವುದು ನಿತೀಶ್ ಕುಮಾರ್ ಅವರನ್ನು ಖಂಡಿತವಾಗಿಯೂ ಕಡು ಕಷ್ಟಕ್ಕೆ ಸಿಲುಕಿಸಿದೆ.

ಒಂದೆಡೆ ನಿತೀಶ್ ಅವರ ಬದ್ಧ ವೈರಿಗಳು ಅವರಾದರೆ, ಇನ್ನೊಂದೆಡೆ ಅವರ ಜಾತಿ ಹಿನ್ನೆಲೆ ಕೂಡ ಬಿಜೆಪಿಗೆ ಚುನಾವಣೆಯಲ್ಲಿ ಲಾಭ ತಂದುಕೊಡಲಿದೆ. ಬಿಜೆಪಿ ನಾಯಕರಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆಗಳನ್ನು ನೀಡಲಾಗಿದ್ದು, ಒಬಿಸಿ ಮತ್ತು ಮೇಲ್ವರ್ಗದ ಭೂಮಿಹಾರ್ ಸಮುದಾಯಗಳನ್ನು ಸೆಳೆಯಲು ಬಿಜೆಪಿ ತಂತ್ರ ರೂಪಿಸಿದೆ.

ಸಾಮ್ರಾಟ್ ಚೌಧರಿ ಒಬಿಸಿ ನಾಯಕರಾಗಿದ್ದಾರೆ. ಕಾಂಗ್ರೆಸ್ನಿಂದ ರಾಜಕಾರಣ ಶುರು ಮಾಡಿ, ಬಳಿಕ ಆರ್ಜೆಡಿ, ಜೆಡಿಯು ಎಲ್ಲ ಕಡೆಗೂ ಹೋಗಿ ಕಡೆಗೆ ಬಿಜೆಪಿ ಸೇರಿ, ಅಲ್ಲಿಯೂ ಬಹುಬೇಗ ಪ್ರಭಾವಿಯಾಗಿ ಬೆಳೆದವರು.

ನಿತೀಶ್ ಕುಮಾರ್ ಬಿಜೆಪಿ ಜೊತೆ ಸಂಬಂಧ ಕಡಿದುಕೊಂಡು ಮಹಾಘಟಬಂಧನ್ ಸೇರಿದ್ಧಾಗ ಅವರನ್ನು ತೀವ್ರವಾಗಿ ಟೀಕಿಸಿದ್ದ ಸಾಮ್ರಾಟ್ ಚೌಧರಿ, ​ಕೇಸರಿ ಮುಂಡಾಸು ಧರಿಸಲು ಆರಂಭಿಸಿ,​ ನಿತೀಶ್ ರನ್ನು ಇಳಿಸಿ ಬಿಜೆಪಿ ಸರ್ಕಾರ ಮತ್ತೆ ಬರುವವರೆಗೂ ಅದನ್ನು ಬಿಚ್ಚದಿರುವ ಶಪಥ ಮಾಡಿದ್ದರು.

ಅಂಥ ಬದ್ಧ ವೈರಿಯನ್ನು ಈಗ ಡಿಸಿಎಂ ಎಂದು ನಿತೀಶ್​ ಪಕ್ಕದಲ್ಲಿ ಕೂರಿಸಿಕೊಳ್ಳಬೇಕಾಗಿದೆ. ಇನ್ನು ವಿಜಯ್ ಕುಮಾರ್ ಸಿನ್ಹಾ ಪ್ರಭಾವಿ ಭೂಮಿಹಾರ್ ಸಮುದಾಯವರಾಗಿದ್ದು, ಅವರ ವಿಚಾರದಲ್ಲಿ ಕೂಡ ನಿತೀಶ್ ಹಿಂದೆ ಆಟವಾಡಿದ್ದರು. ಸ್ಪೀಕರ್ ಸ್ಥಾನದಲ್ಲಿದ್ದ ​ಸಿನ್ಹಾ, ಮಹಾಘಟಬಂಧನ್ ಸೇರಿದ್ದ ನಿತಿಶ್ ಸರ್ಕಾರ ಬಂದ ಬಳಿಕ ಸ್ಪೀಕರ್ ಹುದ್ದೆಗೆ ರಾಜೀನಾಮೆ ಕೊಡಬೇಕಾಗಿ ಬಂದಿತ್ತು.

ಹೀಗೆ ಇಬ್ಬರು ಬದ್ಧ ವೈರಿಗಳನ್ನೇ ನಿತೀಶ್ ಸರ್ಕಾರದಲ್ಲಿ ಬಿಜೆಪಿ ಡಿಸಿಎಂಗಳನ್ನಾಗಿ ಕೂರಿಸಿದೆ. ಈ ಸರ್ಕಾರ ಹೆಚ್ಚು ದಿನ ಬಾಳುವುದಿಲ್ಲ ಎಂಬ ಮಾತನ್ನು ಚುನಾವಣಾ ಪ್ರಚಾರ ತಜ್ಞ​ ಹಾಗು ಜನಜಾಗೃತಿಗಾಗಿ ಇಡೀ ಬಿಹಾರ ಪ್ರವಾಸ ಕೈಗೊಂಡಿರುವ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಲೋಕಸಭೆ ಚುನಾವಣೆ ಬಳಿಕ ಆರು ತಿಂಗಳೊಳಗೆ ಸರ್ಕಾರ ಬದಲಾಗಲಿದೆ ಎಂದು ಅವರು ಹೇಳಿದ್ದಾರೆ. ನಿತಿಶ್ ಬಗ್ಗೆ ಹಿಂದೆಯೂ ಕಟುವಾಗಿ ಮತ್ತು ಕೆಟ್ಟದಾಗಿ ಆಡಿಕೊಳ್ಳುತ್ತಿದ್ದ ಬಿಜೆಪಿ ನಾಯಕರು ಈಗಲೂ ಅಂಥ ಮಾತುಗಳನ್ನು ಆಡುವುದನ್ನು ನಿಲ್ಲಿಸಿಲ್ಲ.

ಬಹಳ ಹಗುರವಾಗಿ ನಿತೀಶ್ ಬಗ್ಗೆ ಬಿಜೆಪಿ ನಾಯಕರು ಆಡಿಕೊಳುತ್ತಲೇ ಇದ್ದಾರೆ. ​ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ನಿತೀಶ್ ಅವರನ್ನು ನಾವು ಮತ್ತೆ ಮುಖ್ಯಮಂತ್ರಿ ಮಾಡಿದ್ದೇವೆ. ಇನ್ನಾದರೂ ಸರಿಯಾದಾರೂ ಎಂಬ ಧಾಟಿಯಲ್ಲಿ ಮಾತಾಡಿದ್ದಾರೆ.

ಇನ್ನೊಬ್ಬ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯ ಅವರು ನಿತೀಶ್ ರ ರಾಜಕೀಯವನ್ನು ಗರ್ಲ್ ಫ್ರೆಂಡ್ ಬದಲಾಯಿಸುವುದಕ್ಕೆ ಹೋಲಿಸಿ ಮಾತಾಡಿದ್ದಾರೆ. ಮೊನ್ನೆಯಷ್ಟೇ ಮಾಜಿ ಸಚಿವ ರವಿಶಂಕರ್ ಪ್ರಸಾದ್, ಇಂಡಿಯಾ ಮೈತ್ರಿಕೂಟಕ್ಕೆ ಭವಿಷ್ಯವಿಲ್ಲವೆಂದು ನಿತೀಶ್ ಕುಮಾರ್ ಹೇಳುವುದಾದರೆ, ಬಿಜೆಪಿಯಲ್ಲಿ ಪ್ರಧಾನಿ ಹುದ್ದೆ ಖಾಲಿ ಇಲ್ಲ ಎಂದು ನಿತೀಶ್ ವಿಚಾರದಲ್ಲಿ ಕುಹಕವಾಡಿದ್ದಾರೆ.

ಯಾವ ಸೈದ್ಧಾಂತಿಕ ಬದ್ಧತೆಯೂ ಇಲ್ಲದೆ ಮೈತ್ರಿ ಬದಲಿಸುವ ನಿತೀಶ್ ಆ ಕಾರಣದಿಂದಲೇ ತಮ್ಮ ಘನತೆ ಕಳೆದುಕೊಂಡಿರುವುದಂತೂ ನಿಜ. ಇನ್ನೆಲ್ಲಿಗೂ ಹೋಗುವುದಿಲ್ಲ, ಇನ್ನು ಎನ್ಡಿಎಯಲ್ಲೇ ಇರುತ್ತೇನೆ ಎಂದು ಹಾಸ್ಯಾಸ್ಪದವಾಗಿ ಈಗ ಅವರು ಬದ್ಧತೆ ಪ್ರಕಟಿಸಿದ್ಧಾರೆ. ಅವರ ನಡೆಯೇ ಅವರನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳದ ಮಟ್ಟಿಗೆ ತೆಗೆದುಕೊಂಡು ಹೋಗಿದೆ.

ಈಗ ಅವರು ಮತ್ತೊಮ್ಮೆ ಬಿಜೆಪಿ ಪಾಲಾಗಿದ್ದು, ಅವರನ್ನು ಬಳಸಿಕೊಳ್ಳಲೆಂದೇ ಬಿಜೆಪಿ ತಂತ್ರ ಹೂಡಿರುವುದು ಸ್ಪಷ್ಟ. ಇದೆಲ್ಲದರ ನಡುವೆಯೇ ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆ ಬಿಹಾರ ಪ್ರವೇಶಿಸಿದೆ.​ ಅಲ್ಲಿ ಅವರ ಯಾತ್ರೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು, ಯುವಕರು ಭಾಗವಹಿಸುತ್ತಿದ್ದಾರೆ.

ಚುನಾವಣಾ ಲೆಕ್ಕಾಚಾರಗಳ ಹೊರತಾಗಿಯೂ ತನ್ನದೇ ಅರ್ಥವಂತಿಕೆಯನ್ನು ಹೊಂದಿರುವ ರಾಹುಲ್ ಯಾತ್ರೆ ಈಗಿನ ರಾಜಕೀಯ ಸನ್ನಿವೇಶದಲ್ಲಿ, ಇಂಡಿಯಾ ಮೈತ್ರಿಕೂಟದಲ್ಲಿ ರಾಹುಲ್ ಒಬ್ಬಂಟಿಯಾದರು ಎನ್ನಿಸಿದಂತಿರುವ ಹೊತ್ತಲ್ಲಿ ಹೊಸ ಸಾಧ್ಯತೆಯನ್ನೇ ತೆರೆಯುವ ಸಾಧ್ಯತೆಯೂ ಇಲ್ಲದೇ ಇಲ್ಲ.

​ಈ ನಡುವೆ ನಿನ್ನೆ ಲಾಲು ಪ್ರಸಾದ್ ಯಾದವ್ ರನ್ನು ಈ ಡಿ ವಿಚಾರಣೆಗೆ ಕರೆದಿತ್ತು. ಇವತ್ತು ತೇಜಸ್ವಿ ಯಾದವ್ ರನ್ನು ಕರೆದಿದೆ. ಲಾಲು ಯಾದವ್ ಅವರಿಗೆ ಬಿಹಾರದಲ್ಲಿ ಭಾರೀ ಜನಪ್ರಿಯತೆ ಇದೆ. ಈಗ ಆರೋಗ್ಯ ತೀರಾ ಹದಗೆಟ್ಟಿರುವ ಅವರನ್ನು ಈ ಡಿ ಮೂಲಕ ಕೇಂದ್ರ ಸರಕಾರ ಈ ರೀತಿ ನಡೆಸಿಕೊಳ್ಳುತ್ತಿದೆ ಎಂದು ಈಗಾಗಲೇ ಪ್ರಚಾರ ಶುರುವಾಗಿದೆ. ನನ್ನ ತಂದೆಗೇನಾದರೂ ಆದರೆ, ಅದರ ಹೊಣೆ ಬಿಹಾರದ ಗಿರ್ಗಿಟ್ ಅಂದ್ರೆ ನಿತೀಶ್ , ಸಿಬಿಐ, ಈ ಡಿ ಹಾಗು ಅದರ ಮಾಲೀಕರೇ ಹೊರಬೇಕಾಗುತ್ತದೆ ಎಂದು ಲಾಲು ಪುತ್ರಿ ರೋಹಿಣಿ ಆಚಾರ್ಯ ಎಚ್ಚರಿಕೆ ನೀಡಿದ್ದಾರೆ.

ಇದೆಲ್ಲವನ್ನೂ ಬಿಹಾರದ ಜನರು ನೋಡುತ್ತಿದ್ದಾರೆ. ಲಾಲು ಹಾಗು ಅವರ ಕುಟುಂಬಕ್ಕೆ ಕಿರುಕುಳ ನೀಡಲಾಗುತ್ತಿದೆ, ಅವರ ಸರಕಾರವನ್ನೂ ಉರುಳಿಸಲಾಯಿತು ಎಂಬುದನ್ನು ಆರ್ ಜೆ ಡಿ ಜನರ ಅನುಕಂಪ ಗಿಟ್ಟಿಸಲು ಬಳಸದೇ ಬಿಡೋದಿಲ್ಲ. ಬಿಹಾರದ ಮಟ್ಟಿಗೆ ರಾಹುಲ್ ಹಾಗೂ ತೇಜಸ್ವಿ ಯಾದವ್ ಅವರ ಮ್ಯಾಜಿಕ್ ಹೊಸದೇ ಬಗೆಯಲ್ಲಿ ಫಲ ಕೊಡಲೂ ಬಹುದು. ನಿತೀಶ್ ಲೆಕ್ಕಾಚಾರಗಳನ್ನು, ಅದಕ್ಕಿಂತಲೂ ಬಿಜೆಪಿಯ ಲೆಕ್ಕಾಚಾರಗಳನ್ನು ಮೀರಿದ ಸಮೀಕರಣವೊಂದು ನಿಶ್ಚಯವಾಗಲೂ​ಬಹುದು.

ಎಲ್ಲವನ್ನು ಕಾದು ನೋಡಬೇಕಿದೆ. ಅದೇನೇ ಇದ್ದರೂ, ಈಗ ನಿತೀಶ್ ಕುಮಾರ್ ಬಂದು ನಿಂತಿರುವ ತಿರುವು ಮಾತ್ರ ಅವರನ್ನು ದುರವಸ್ಥೆಗೆ ತಳ್ಳುವ ಹಾಗೆಯೇ ಕಾಣಿಸುತ್ತಿರುವುದು ಮಾತ್ರ ಸ್ಪಷ್ಟ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!