ಚುನಾವಣೆ ಗೆಲ್ಲಲು 'ಭಾರತ ರತ್ನ'ವನ್ನೂ ಅಸ್ತ್ರವಾಗಿ ಬಳಸುತ್ತಿದೆಯೇ ಮೋದಿ ಸರಕಾರ ?

Update: 2024-02-19 05:26 GMT

Photo ; PTI 

ಆರ್. ಜೀವಿ

ಭಾರತ ರತ್ನದ ಘನತೆ ಎಲ್ಲಿಗೆ ಬಂದು ಮುಟ್ಟಿತಲ್ಲ ಎಂದು ಕಳವಳವಾಗುತ್ತದೆ. ದೇಶದ ಸಾಧಕರನ್ನು ಗೌರವಿಸುವ ಬದಲು ಚುನಾವಣಾ ಸಮೀಕರಣಕ್ಕೆ ಯಾವುದೇ ಮುಲಾಜಿಲ್ಲದೆ ಭಾರತದ ಪರಮೋಚ್ಚ ನಾಗರಿಕ ಪ್ರಶಸ್ತಿ ಬಳಕೆಯಾಗತೊಡಗಿದೆಯೆ?. ಭಾರತ ರತ್ನದ ಮೂಲಕ ಸರ್ಕಾರಗಳನ್ನು ಉರುಳಿಸುವ, ಬಿಜೆಪಿಗೆ ಹೊಸ ಪಕ್ಷಗಳ ಮೈತ್ರಿ ಸಾಧ್ಯವಾಗುವಂತೆ ಮಾಡುವ ರಾಜಕೀಯ ಜೋರಾಗಿದೆಯೆ?.

ಈ ಬಾರಿಯ ಚುನಾವಣೆಯಲ್ಲಿ ಚುನಾವಣಾ ಸಮೀಕರಣ ಮತ್ತು ಮೈತ್ರಿ ಕೂಡ ಭಾರತರತ್ನ ಸಮೀಕರಣ ಮತ್ತು ಭಾರತ ರತ್ನ ಮೈತ್ರಿ ಎನ್ನುವಂಥ ಸ್ಥಿತಿ ಬಂದುಬಿಟ್ಟಿದೆಯೆ?. ಮುಂಬರುವ ಚುನಾವಣೆಯನ್ನು ಗೆಲ್ಲಲು ಭಾರತ ರತ್ನವನ್ನು ಕೂಡ ಒಂದು ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆಯೆ?.

ದೇಶದ ಅತ್ಯುನ್ನತ ಗೌರವವನ್ನು ತನಗೆ ಬೇಕಾದವರ ಪಕ್ಷಾಂತರಕ್ಕಾಗಿ ಬಿಜೆಪಿ ಬಳಸತೊಡಗಿದೆಯೆ?. ಹಾಗಾದರೆ ದೇಶದ ಅತ್ಯುನ್ನತ ಗೌರವ ಎಂಬುದಕ್ಕೆ ಯಾವ ಬೆಲೆ?. ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಘೋಷಿಸಿದ ಬೆನ್ನಲ್ಲೇ ಎಲ್ ಕೆ ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಿಸಲಾಗಿತ್ತು.

ಈಗ ಮತ್ತೆ ಮೂವರಿಗೆ ಮರಣೋತ್ತರವಾಗಿ ಭಾರತ ರತ್ನ ಘೋಷಿಸಲಾಗಿದೆ. ಅವರಲ್ಲಿ ಇಬ್ಬರು ಮಾಜಿ ಪ್ರಧಾನಿಗಳಾದ ಚೌಧರಿ ಚರಣ್ ಸಿಂಗ್ ಹಾಗೂ ಪಿವಿ ನರಸಿಂಹರಾವ್. ಮತ್ತೊಬ್ಬರು ಹಸಿರು ಕ್ರಾಂತಿಯ ಹರಿಕಾರ ಎಂಎಸ್ ಸ್ವಾಮಿನಾಥನ್.

ಇಲ್ಲಿಯೂ ಮತ್ತದೇ ಚುನಾವಣಾ ಸಮೀಕರಣ, ರಾಜಕೀಯ ಲೆಕ್ಕಾಚಾರ, ಮತ್ತೊಂದು ಪಕ್ಷವನ್ನು ಎನ್ಡಿಎ ತೆಕ್ಕೆಗೆ ಸೆಳೆಯುವ ಉದ್ದೇಶ, ಇಂಡಿಯಾ ಮೈತ್ರಿಕೂಟವನ್ನು ಪೂರ್ತಿ ಒಡೆಯುವ ಹುನ್ನಾರವೇ ಅಡಗಿರುವುದು ಶೋಚನೀಯ. ಭಾರತ ರತ್ನ ಈ ಮಟ್ಟದಲ್ಲಿ ರಾಜಕೀಯಕ್ಕೆ ಬಳಕೆಯಾಗುತ್ತಿದೆ ಎಂದು ಬಹುಶಃ ಯಾರೂ ಊಹಿಸಿರಲಿಕ್ಕಿಲ್ಲ. ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಕೊಡುವ ಮೂಲಕ ಬಿಜೆಪಿ ಹೇಗೆ ಲಾಭ ಮಾಡಿಕೊಂಡಿತು ಎಂಬುದನ್ನು ನೋಡಿದ್ದೇವೆ.

ಆ ಮೂಲಕ ಅದು ಬಿಹಾರದಲ್ಲಿ ಸರ್ಕಾರವನ್ನೇ ಬದಲಿಸಿತು. ನಿತೀಶ್ ಕುಮಾರ್ ಎನ್ಡಿಎ ಮೈತ್ರಿ ಸೇರಿ ಮತ್ತೆ ಬಿಹಾರ ಸಿಎಂ ಆದರು. ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಘೋಷಣೆಯಾಗುತ್ತಿದ್ದಂತೆಯೇ ನಿತೀಶ್ ಕುಮಾರ್ ಮೋದಿಯನ್ನು ಹಾಡಿ ಹೊಗಳಿದ್ದರು.

ಅದಾಗುತ್ತಿದ್ದಂತೆ ಅವರು ಇಂಡಿಯಾ ಮೈತ್ರಿಕೂಟಕ್ಕೆ ಕೈಕೊಟ್ಟು ಮೋದಿಯ ಬಳಿ ಓಡಿಹೋದರು.

ನಿತೀಶ್ ಕುಮಾರ್ ಅವರನ್ನು ಪುನಃ ತನ್ನ ತೆಕ್ಕೆಗೆ ಎಳೆದುಕೊಳ್ಳುವ ಮೂಲಕ, ಇಂಡಿಯಾ ಮೈತ್ರಿಕೂಟಕ್ಕೆ ಬಿಜೆಪಿ ಭಾರೀ ಹೊಡೆತ ಕೊಟ್ಟಿತು. ಇಂಡಿಯಾ ಮೈತ್ರಿಕೂಟದ ವಿಶ್ವಾಸ ಕುಸಿಯುವ ಹಾಗೆ ಮಾಡುವುದಕ್ಕಾಗಿಯೇ ಸರಿಯಾದ ಸಮಯ ನೋಡಿಕೊಂಡು ಮೋದಿ ಸರ್ಕಾರ ಭಾರತ ರತ್ನ ಅಸ್ತ್ರವನ್ನು ಪ್ರಯೋಗಿಸುತ್ತಿದೆ ಎಂಬುದಕ್ಕೆ ಕೆಲವೇ ದಿನಗಳ ಅಂತರದಲ್ಲಿ ಮತ್ತೊಂದು ನಿದರ್ಶನ ಈಗ ಸಿಕ್ಕಿದೆ.

ಮಾಜಿ ಪ್ರಧಾನಿ, ರೈತರಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದ ನೇತಾರ ಚೌಧರಿ ಚರಣ್ ಸಿಂಗ್ ಅವರಿಗೆ ಭಾರತ ರತ್ನ ಘೋಷಿಸುವ ಮೂಲಕ ಮತ್ತೊಮ್ಮೆ ರಾಜಕೀಯ ಆಟವನ್ನೇ ಮೋದಿ ಸರ್ಕಾರ ಆಡಿದೆ. ಚೌಧರಿ ಚರಣ್ ಸಿಂಗ್ ಅವರಿಗೆ ಭಾರತ ರತ್ನ ಘೋಷಿಸಿರುವುದರ ಹಿಂದೆ ಪಶ್ಚಿಮ ಯುಪಿಯಲ್ಲಿನ ಚುನಾವಣಾ ಅಖಾಡದಲ್ಲಿ ತನ್ನ ಜಾಗವನ್ನು ಸುರಕ್ಷಿತ ಆಗಿಸಿಕೊಳ್ಳಲು ಬಿಜೆಪಿ ಎಲ್ಲ ತಯಾರಿ ಮಾಡಿಕೊಂಡಂತಾಗಿದೆ.

ಚೌಧರಿ ಚರಣ್ ಸಿಂಗ್ ಅವರ ಮೊಮ್ಮಗ, ರಾಷ್ಟ್ರೀಯ ಲೋಕದಳ (ಆರ್ ಎಲ್ ಡಿ) ನಾಯಕ ಜಯಂತ್ ಚೌಧರಿ ಅವರು ಬಿಜೆಪಿ ತೆಕ್ಕೆಗೆ ಹೋಗುವುದು ನಿಶ್ಚಿತವಾಗಿದೆ. ಬಿಜೆಪಿ ಜತೆಗಿನ ಆರ್ಎಲ್ಡಿ ಮೈತ್ರಿ ಕುರಿತ ವದಂತಿಗಳು ಈಗ ಬರೀ ವದಂತಿಗಳಾಗಿ ಉಳಿದಿಲ್ಲ. ಹೀಗೆ ಬಿಜೆಪಿಗೆ ಕರೆಸಿಕೊಳ್ಳುವುದಕ್ಕೂ ಭಾರತ ರತ್ನ ಬಳಕೆಯಾಗುತ್ತಿರುವುದು, ಬಿಜೆಪಿ ಜೊತೆ ಮೈತ್ರಿಗೆ ಒಪ್ಪುವವರ ಪರಿವಾರಕ್ಕೂ ಭಾರತರತ್ನ ಕೊಡಲಾಗುತ್ತಿರುವುದು ಇಂಥ ಎಲ್ಲ ವಿಲಕ್ಷಣಗಳನ್ನು ಇವತ್ತಿನ ರಾಜಕಾರಣದಲ್ಲಿ ನೋಡಬೇಕಾಗಿ ಬಂದಿದೆ.

ಚೌಧರಿ ಚರಣ್ ಸಿಂಗ್ ಅವರಿಗೆ ಭಾರತ ರತ್ನ ನೀಡಬೇಕೆಂದು 2021ರ ಡಿಸೆಂಬರ್ನಲ್ಲಿ ಅವರ 119ನೇ ಜನ್ಮದಿನಾಚರಣೆ ಸಂದರ್ಭದಲ್ಲಿಯೇ ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಒತ್ತಾಯಿಸಿದ್ದರು. ಆದರೆ, ಮೋದಿ ಸರ್ಕಾರ ಹೊತ್ತು ನೋಡಿಕೊಂಡು, ತನ್ನ ಲಾಭ ನೋಡಿಕೊಂಡು, ತಾನೇನು ಮಾಡಬೇಕೋ ಅದನ್ನೇ ಮಾಡಿದೆ.

ಭಾರತ ರತ್ನವನ್ನು ಚೌಧರಿ ಚರಣ ಸಿಂಗ್ ಅವರಿಗೆ ಘೋಷಿಸುವ ಮೂಲಕ ಮೋದಿಯವರು ಮನಸ್ಸು ಗೆದ್ದಿದ್ದಾರೆ ಎಂದು ಈಗ ಜಯಂತ್ ಚೌಧರಿ ಹೇಳಿದ್ದಾರೆ. ನಿತೀಶ್ ಕುಮಾರ್ ಅವರಂತೆಯೇ ಈಗ ಜಯಂತ್ ಚೌಧರಿ ಕೂಡ ಮೋದಿಯನ್ನು ಹಾಡಿ ಹೊಗಳಿದ್ದಾರೆ.

ಚರಣ್ ಸಿಂಗ್ ಅವರ ಮೊಮ್ಮಗ ಜಯಂತ್ ಚೌಧರಿ ನೇತೃತ್ವ ಆರ್ಎಲ್ಡಿ ಮತ್ತು ಬಿಜೆಪಿ ನಡುವಿನ ಮೈತ್ರಿ ಕುರಿತ ವದಂತಿಗಳ ನಡುವೆಯೇ ಚೌಧರಿ ಚರಣ್ ಸಿಂಗ್ ಅವರಿಗೆ ಭಾರತರತ್ನ ಘೋಷಣೆಯಾಗುತ್ತಿದ್ದಂತೆ ಒಂದು ಚಿತ್ರವಂತೂ ಸ್ಪಷ್ಟವಾಗಿತ್ತು. ಅದು, ಈ ಘೋಷಣೆಯ ಹಿಂದಿನ ರಾಜಕೀಯ ಲೆಕ್ಕಾಚಾರ.

ಆರ್‌ಎಲ್‌ಡಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಮಿತ್ರಪಕ್ಷ ಹಾಗೂ ಇಂಡಿಯಾ ಮೈತ್ರಿಕೂಟದ ಭಾಗವಾಗಿತ್ತು ಎನ್ನುವುದು ಇಲ್ಲಿ ಗಮನಾರ್ಹ. ಇಂಥ ಸನ್ನಿವೇಶದಲ್ಲಿ ಚೌಧರಿ ಚರಣ್ ಸಿಂಗ್ ಅವರಿಗೆ ಭಾರತರತ್ನ ಘೋಷಿಸಿದ್ದರ ಹಿಂದಿನ ರಾಜಕೀಯ ಲೆಕ್ಕಾಚಾರವನ್ನು ಅಲ್ಲಗಳೆಯಲು ಸಾಧ್ಯವೇ ಇರಲಿಲ್ಲ. ಇದಕ್ಕೂ ಮೊದಲು ಆರ್ಎಲ್ಡಿ ಮತ್ತು ಬಿಜೆಪಿ ನಡುವೆ ಸೀಟು ಹಂಚಿಕೆ ಒಪ್ಪಂದವಾಗಿದ್ದುದರ ಬಗ್ಗೆ ಸುದ್ದಿಗಳು ಹರಿದಾಡಿದ್ದವು. ಅದು ಈಗ, ಪ್ರಶಸ್ತಿ ಘೋಷಣೆ ಬಳಿಕ ಜಯಂತ್ ಚೌಧರಿ ಮಾತುಗಳಿಂದ ಖಚಿತವಾಗಿದೆ.

ಹಿಂದಿನ ಸರ್ಕಾರಗಳು ಇಂದಿನವರೆಗೂ ಏನು ಮಾಡಲು ಸಾಧ್ಯವಾಗಲಿಲ್ಲವೋ ಅದು ಪ್ರಧಾನಿ ಮೋದಿಯವರ ದೂರದೃಷ್ಟಿಯಿಂದ ಪೂರ್ಣಗೊಂಡಿದೆ. ಮುಖ್ಯವಾಹಿನಿಯ ಭಾಗವಾಗಿರದ ಜನರನ್ನು ಪ್ರೋತ್ಸಾಹಿಸಿದ್ದಕ್ಕಾಗಿ ಮೋದಿಯವರ ಸರ್ಕಾರಕ್ಕೆ ಕೃತಜ್ಞತೆ ಹೇಳುತ್ತೇನೆ ಎಂದು ಜಯಂತ್ ಚೌಧರಿ ಅವರು ಮೋದಿಯನ್ನು ಹೊಗಳಿದ್ದಾರೆ.

ನೀವು ಬಿಜೆಪಿ ಜೊತೆ ಕೈಜೋಡಿಸಲು ಸಿದ್ಧರಿದ್ದೀರಾ ಎಂದು ಕೇಳಿದ್ದಕ್ಕೆ, ಇನ್ನೂ ಅನುಮಾನವಿದೆಯೆ? ನಿಮ್ಮ ಪ್ರಶ್ನೆಯನ್ನು ನಾನು ಹೇಗೆ ನಿರಾಕರಿಸಲು ಸಾಧ್ಯ? ಎಂದು ಮಾರ್ಮಿಕವಾಗಿ ಅವರು ಮರುಪ್ರಶ್ನೆ ಹಾಕಿದ್ದಾರೆ. ಅಂತೂ ಜಯಂತ್ ಚೌಧರಿ ಅವರು ಸಮಾಜವಾದಿ ಪಕ್ಷದ ಜೊತೆಗಿನ ಸ್ನೇಹ ಮತ್ತು ಇಂಡಿಯಾ ಮೈತ್ರಿಯನ್ನು ತೊರೆದು ಬಿಜೆಪಿಯೊಂದಿಗೆ ಕೈಜೋಡಿಸುವುದು ಖಚಿತವಾದಂತಾಗಿದೆ.

ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಆರ್‌ಎಲ್‌ಡಿ ಪ್ರಭಾವ ಹೊಂದಿದೆ. ಮುಖ್ಯವಾಗಿ ಪ್ರಭಾವಿ ಜಾಟ್ ಸಮುದಾಯ ಮತ್ತು ರೈತರ ಬೆಂಬಲ ಅದಕ್ಕಿದೆ. ಆರ್ಎಲ್ಡಿಯನ್ನು ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಜಾಟ್ ಸಮುದಾಯವನ್ನು ತನ್ನೆಡೆಗೆ ಸೆಳೆಯುವುದು ಬಿಜೆಪಿಯ ಉದ್ದೇಶವಾಗಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಸೋತಿದ್ದ 16 ಸೀಟುಗಳಲ್ಲಿ 7 ಕ್ಷೇತ್ರಗಳು ಪಶ್ಚಿಮ ಯುಪಿಯಲ್ಲಿದ್ದವು. ಉತ್ತರ ಪ್ರದೇಶದ 80 ಸೀಟುಗಳ ಪೈಕಿ 29 ಕ್ಷೇತ್ರಗಳು ಪಶ್ಚಿಮ ಯುಪಿಯಲ್ಲಿವೆ. ಇಂಡಿಯಾ ಮೈತ್ರಿಕೂಟದಲ್ಲಿ ಆರ್‌ಎಲ್‌ಡಿಗೆ 7 ಸೀಟುಗಳನ್ನು ನೀಡಲಾಗುತ್ತದೆ ಎಂದು ಜನವರಿಯಲ್ಲಿ ಅಖಿಲೇಶ್ ಯಾದವ್ ತಿಳಿಸಿದ್ದರು. ಆದರೆ ಯಾವ ಕ್ಷೇತ್ರಗಳನ್ನು ಹಂಚಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಇರಲಿಲ್ಲ.

ಈಗಿನ ಬೆಳವಣಿಗೆಯ ಬಗ್ಗೆ ಮಾತನಾಡಿರುವ ಅಖಿಲೇಶ್ ಯಾದವ್, ಪಕ್ಷಗಳನ್ನು ಹೇಗೆ ಒಡೆಯಬೇಕು ಮತ್ತು ಯಾವಾಗ ಯಾರನ್ನು ಸೆಳೆಯಬೇಕು ಎಂಬುದು ಬಿಜೆಪಿಗೆ ತಿಳಿದಿದೆ. ಅದು ಇಡಿ, ಸಿಬಿಐ ಮತ್ತು ಆದಾಯ ತೆರಿಗೆಯಂತಹ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿರುವುದು ವರದಿಯಾಗಿದೆ.

ಬಿಜೆಪಿ ತನ್ನ ರಾಜಕೀಯ ಆಟಕ್ಕಾಗಿ ಭಾರತ ರತ್ನವನ್ನೂ ಬಳಸುತ್ತಿದೆ ಎಂಬುದು ಕೂಡ ಈಗ ಬಯಲಾಗುತ್ತಿದೆ. ಈಗಾಗಲೇ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಅವರ ಜೆಡಿಯು ಬಿಜೆಪಿ ತೆಕ್ಕೆಗೆ ಬಿದ್ದಾಗಿದೆ. ಈಗ ಆರ್ಎಲ್ಡಿ ಸರದಿ. ಇದರೊಂದಿಗೆ ಇಂಡಿಯಾ ಮೈತ್ರಿಕೂಟವನ್ನು ಮತ್ತದರ ಮತದಾರರನ್ನು ಪೂರ್ತಿ ಗೊಂದಲದಲ್ಲಿ ಬೀಳಿಸುವುದು ಬಿಜೆಪಿಯ ತಂತ್ರವಾಗಿದೆ. ಹಾಗಾಗಿ, ಚೌಧರಿ ಚರಣ್ ಸಿಂಗ್ ಅವರ ಸಾಧನೆಗಾಗಿ ಭಾರತ ರತ್ನ ಕೊಡಲಾಗಿದೆಯೊ ಅಥವಾ ಚುನಾವಣೆಯಲ್ಲಿ ಸೀಟುಗಳನ್ನು ಗೆದ್ದುಕೊಳ್ಳುವುದಕ್ಕಾಗಿ ಕೊಡಲಾಗಿದೆಯೊ ಎಂಬ ಅನುಮಾನ ಏಳುತ್ತದೆ.

ಇದು ಸನ್ಮಾನವೊ ಅಥವಾ ವ್ಯವಹಾರವೊ ಎಂಬ ಕಳವಳಕಾರಿ ಪ್ರಶ್ನೆ ಕಾಡುತ್ತದೆ. ವ್ಯವಹಾರದ ಕಾರಣಕ್ಕಾಗಿ ಮಾಡುವ ಸನ್ಮಾನ ಸನ್ಮಾನವಾಗುವುದಿಲ್ಲ. ಬದಲಾಗಿ ಅದು ಬರೀ ರಾಜಕೀಯವಾಗುತ್ತದೆ. ಇನ್ನು, ಪಿವಿ ನರಸಿಂಹರಾವ್ ಅವರಿಗೂ ಭಾರತರತ್ನ ಘೋಷಿಸಲಾಗಿದೆ. ಬಾಬ್ರಿ ಮಸೀದಿ ಧ್ವಂಸಗೊಂಡಿದ್ದು ಪಿವಿ ನರಸಿಂಹರಾವ್ ಕಾಲದಲ್ಲಿ. ಅದು ಅವರ ಮೌನ ಸಮರ್ಥನೆಯೊಂದಿಗೆ ನಡೆದಂತಿತ್ತು. ಮೊನ್ನೆಯಷ್ಟೇ ರಥಯಾತ್ರೆ ಮೂಲಕ ದೇಶಾದ್ಯಂತ ರಕ್ತಪಾತಕ್ಕೆ ಕಾರಣರಾಗಿದ್ದ, ಧ್ರುವೀಕರಣ ರಾಜಕಾರಣವನ್ನೇ ಮಾಡಿಕೊಂಡು ಬಂದಿದ್ದ ಎಲ್ಕೆ ಅಡ್ವಾಣಿ ಅವರಿಗೆ ಭಾರತರತ್ನ ಘೋಷಿಸಿದ್ದ ಮೋದಿ ಸರ್ಕಾರ, ಈಗ ಪಿವಿ ನರಸಿಂಹರಾವ್ ಅವರಿಗೆ ಪ್ರಶಸ್ತಿ ಪ್ರಕಟಿಸಿದೆ.

ಪಿವಿ ನರಸಿಂಹರಾವ್ ಅವರಿಗೆ ಭಾರತರತ್ನ ಘೋಷಿಸಿರುವುದನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸ್ವಾಗತಿಸಿದ್ದಾರೆ.   ಆದರೆ ಬಿಜೆಪಿಯ ಲೆಕ್ಕಾಚಾರಗಳು ಏನಿವೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಒಂದು ಕಡೆ ಈ ಬಾರಿ 400 ಕ್ಕೂ ಅಧಿಕ ಸೀಟುಗಳನ್ನು ನಾವು ಸುಲಭವಾಗಿ ಗೆದ್ದು ಬಿಡುತ್ತೇವೆ ಎಂಬ ಪ್ರಚಾರದ ಅಬ್ಬರ. ಇನ್ನೊಂದೆಡೆ ಒಂದೊಂದು ಸೀಟು ಕೈ ಬಿಟ್ಟು ಹೋಗದಂತೆ ಮಾಡಲು ಇನ್ನಿಲ್ಲದ ಕಸರತ್ತು.

ಹಾಗಾದರೆ ನಿಜ ಯಾವುದು ? ಸುಲಭವಾಗಿ 400 ಸೀಟು ಗೆದ್ದು ಬಿಡುವುದೋ ಅಥವಾ 300 ಪಡೆಯುವುದೇ ಕಷ್ಟವಾಗಲಿದೆ ಎಂದು ನಡೆಸಲಾಗುತ್ತಿರುವ ಕಸರತ್ತುಗಳೇ ? ಎಲ್ಲ ಸ್ವಾಯತ್ತ ಸಂಸ್ಥೆಯನ್ನು ಬೇಕಾಬಿಟ್ಟಿ ಬಳಸಿ ಕೊಂಡಾಯಿತು. ಈಗ ಭಾರತ ರತ್ನ ದಂತಹ ಪರಮೋಚ್ಚ ಗೌರವವೂ ಈ ರಾಜಕೀಯದ ಆಟಕ್ಕೆ ಈಡಾಗಿದೆ. ಇನ್ನೂ ಏನೇನೆಲ್ಲಾ ನೊಡಲಿಕ್ಕಿದೆ ?

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!