ವಿಪಕ್ಷ ಮೈತ್ರಿಕೂಟಕ್ಕೆ ಹೆದರಿ ದೇಶದ ಹೆಸರು ಬದಲಾವಣೆಯೇ ?
ಕಳೆದೊಂಬತ್ತು ವರ್ಷಗಳಿಂದ ಬರೀ ಹೆಸರುಗಳನ್ನು ಬದಲಿಸುವ ಕೆಲಸವನ್ನೆ ಮಾಡಿಕೊಂಡು ಬಂದ ಮೋದಿ ಸರ್ಕಾರ, ಈಗ ದೇಶದ ಹೆಸರನ್ನೂ ಬದಲಿಸಲು ಹೊರಟಿದೆಯೆ?. ಹಾಗೆ ದೇಶದ ಹೆಸರನ್ನು ಬದಲಿಸಲು ಮೋದಿ ಸರ್ಕಾರ ಮುಂದಾಗಿರುವುದಕ್ಕೆ ಪ್ರತಿಪಕ್ಷ ಮೈತ್ರಿಕೂಟಕ್ಕೆ INDIA ಎಂದು ಹೆಸರಿಟ್ಟಿರುವುದರಿಂದ ಉಂಟಾಗಿರುವ ಭಯ ಕಾರಣವೆ?.
ಈಗಿನ ಸುದ್ದಿಯ ಪ್ರಕಾರ ನಾಡಿದ್ದು ನಡೆಯಲಿರುವ ಜಿ20 ಔತಣಕೂಟಕ್ಕೆ ರಾಷ್ಟ್ರಪತಿ ಭವನದಿಂದ ಕಳಿಸಲಾಗಿರುವ ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲು ಪ್ರೆಸಿಡೆಂಟ್ ಆಫ್ ಭಾರತ್ ಎಂದು ಉಲ್ಲೇಖಿಸಲಾಗಿದೆ. ಮತ್ತದು ಅಧಿಕೃತ ವಿಚಾರ ಎಂಬುದೂ ದೃಢಪಟ್ಟಿದೆ.
ಆಸಿಯಾನ್ ಶೃಂಗಸಭೆಗೆ ಇಂಡೊನೇಷ್ಯಾಕ್ಕೆ ಹೋಗುವ ಪ್ರಧಾನಿ ಕಾರ್ಯಕ್ರಮದ ಪಟ್ಟಿಯಲ್ಲೂ ಪ್ರೈಮ್ ಮಿನಿಸ್ಟರ್ ಆಫ್ ಭಾರತ್ ಎಂದೇ ನಮೂದಿಸಲಾಗಿರುವ ಬಗ್ಗೆ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ನಿನ್ನೆ ರಾತ್ರಿ ಟ್ವೀಟ್ ಮಾಡಿದ್ದಾರೆ. ಇನ್ನೊಂದು ಸುದ್ದಿಯಂತೆ, ಭಾರತ್ ಎಂದು ಮರುನಾಮಕರಣ ಮಾಡುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಸೆ.18ರಿಂದ 22ರವರೆಗೆ ನಡೆಯಲಿರುವ ಸಂಸತ್ತಿನ ವಿಶೇಷಾಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯಿದೆ.
ನಮ್ಮ ಸಂವಿಧಾನದ ಒಂದನೆ ವಿಧಿಯಲ್ಲಿ “India, that is Bharat, shall be a Union of States.” ಅಂದರೆ "ಇಂಡಿಯಾ, ಅಂದರೆ ಭಾರತ, ರಾಜ್ಯಗಳ ಒಂದು ಒಕ್ಕೂಟ" ಎಂದು ಹೇಳಲಾಗಿದೆ. ಸಾಂವಿಧಾನಿಕವಾಗಿ ಸಮ್ಮತವಾಗಿರುವ ಎರಡೂ ಹೆಸರುಗಳಲ್ಲಿ ಈಗ ಭಾರತ್ ಎಂಬುದನ್ನು ಮಾತ್ರವೇ ಅಧಿಕೃತ ಎಂದು ಮಾಡಹೊರಡುವಷ್ಟು ಮಟ್ಟಿಗೆ INDIA ಎಂಬ ಪ್ರತಿಪಕ್ಷ ಮೈತ್ರಿ ಹೆಸರಿಗೆ ಮೋದಿ ಸರ್ಕಾರ ಹೆದರಿದೆಯೆ?
ಪ್ರತಿಪಕ್ಷಗಳು ಸರ್ಕಾರದ ಇಂಥದೊಂದು ನಡೆಗೆ ಅದು ಭಯಗೊಂಡಿರುವುದೇ ಕಾರಣ ಎಂದಿವೆ. ಈ ಜನರು INDIA ಮೈತ್ರಿಯ ಬಗ್ಗೆ ಎಷ್ಟು ಅಸಮಾಧಾನಗೊಂಡಿದ್ದಾರೆ ಎಂದರೆ ದೇಶದ ಹೆಸರನ್ನೂ ಬದಲಿಸುತ್ತಾರೆಯೇ? ನಾಳೆ ನಮ್ಮ ಮೈತ್ರಿಕೂಟಕ್ಕೆ “ಭಾರತ್” ಎಂದು ಹೆಸರಿಟ್ಟರೆ, “ಭಾರತ್” ಹೆಸರನ್ನೂ ಬದಲಿಸಲಾಗುವುದೆ? ಎಂದು ದೆಹಲಿ ಸಿಎಂ, ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಕೆಣಕಿದ್ದಾರೆ.
ಈಗ ರಾಜ್ಯಗಳ ಒಕ್ಕೂಟ ಕೂಡ ಆಕ್ರಮಣಕ್ಕೆ ಒಳಗಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಎಕ್ಸ್ನಲ್ಲಿ ಬರೆದಿದ್ದಾರೆ. ಬಿಜೆಪಿಯ ವಿನಾಶಕಾರಿ ಮನಸ್ಸು ಮಾತ್ರ ಜನರನ್ನು ಹೇಗೆ ಇಬ್ಭಾಗಿಸಬಹುದು ಎಂಬುದನ್ನು ಯೋಚಿಸಲು ಸಾಧ್ಯ. ಮತ್ತೊಮ್ಮೆ ಅವರು ಇಂಡಿಯನ್ಸ್ ಮತ್ತು ಭಾರತೀಯರು ಎಂಬ ಬಿರುಕು ಮೂಡಿಸಿದ್ದಾರೆ. ಇಂಡಿಯಾ ಬಣಕ್ಕೆ ಹೆದರಿ ಅವರು ಈ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಕೆ ಸಿ ವೇಣುಗೋಪಾಲ್ ಹೇಳಿದ್ದಾರೆ.
ಇಂಡಿಯಾವನ್ನು ಭಾರತ್ ಎಂದು ಕರೆಯುವುದರಲ್ಲಿ ಸಾಂವಿಧಾನಿಕವಾಗಿ ಯಾವುದೇ ಆಕ್ಷೇಪವಿಲ್ಲ. ಆದರೆ ಅಸಂಖ್ಯ ಬ್ರಾಂಡ್ ಮೌಲ್ಯ ಹೊಂದಿರುವ ಇಂಡಿಯಾವನ್ನು ಸಂಪೂರ್ಣ ಕೈಬಿಡುವ ಮೂರ್ಖತನವನ್ನು ಸರ್ಕಾರ ಪ್ರದರ್ಶಿಸುವುದಿಲ್ಲ ಎಂದುಕೊಂಡಿದ್ದೇನೆ ಎಂದು ಸಂಸದ ಶಶಿ ತರೂರ್ ಬಹಳ ಮುಖ್ಯ ವಿಚಾರದೆಡೆಗೆ ಗಮನ ಸೆಳೆದಿದ್ದಾರೆ.
ಇಂಗ್ಲಿಷ್‌ನಲ್ಲಿ ಇಂಡಿಯಾ ಮತ್ತು ಹಿಂದಿಯಲ್ಲಿ ಭಾರತ್ ಎಂದು ಹೇಳುತ್ತೇವೆ. ಆದರೆ ಜಗತ್ತಿಗೆ ಇಂಡಿಯಾ ಎಂದು ತಿಳಿದಿದೆ, ದೇಶದ ಹೆಸರನ್ನು ಬದಲಾಯಿಸಲು ಇದ್ದಕ್ಕಿದ್ದಂತೆ ಏನಾಯಿತು? ಕವಿ ರವೀಂದ್ರನಾಥ ಟ್ಯಾಗೋರ್ ಹೆಸರನ್ನು ಕೂಡ ಬದಲಿಸುತ್ತಾರೆಯೇ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೇಳಿದ್ದಾರೆ.
ತಮಿಳುನಾಡು ಸಿಎಂ ಮತ್ತು ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್, ಬಿಜೆಪಿ ಭಾರತವನ್ನು ಪರಿವರ್ತಿಸುವುದಾಗಿ ಭರವಸೆ ನೀಡಿತ್ತು. ಆದರೆ ದೇಶಕ್ಕೆ ಒಂಬತ್ತು ವರ್ಷಗಳ ನಂತರ ಸಿಕ್ಕಿದ್ದು ಹೆಸರು ಬದಲಾವಣೆ ಮಾತ್ರ ಎಂದು ಕುಟುಕಿದ್ದಾರೆ. ಸಂವಿಧಾನದಲ್ಲಿ ಉಲ್ಲೇಖವಾಗಿರುವ ಹೆಸರನ್ನು ಬದಲಿಸುವ ಅಗತ್ಯವಿಲ್ಲ ಎಂದು ಕರ್ನಾಟಕ ಸಿಎಂ ಸಿದ್ದರಾಮಯ್ಯ ಹೇಳಿದ್ದರೆ, ವಿಪಕ್ಷ ಮೈತ್ರಿಕೂಟ ಇಂಡಿಯಾ ಹೆಸರು ಕೇಳಿದರೇ ಮೋದಿಗೆ ಭಯ. ನಾವೆಲ್ಲರೂ ಭಾರತೀಯರೇ. ಸೋಲಿಗೆ ಹೆದರಿ ಹೀಗೆ ಮಾಡುವುದು ಸರಿಯಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ದೇಶದ ಸಂವಿಧಾನದಿಂದ ಪಾಸ್‌ಪೋರ್ಟ್‌ವರೆಗೆ ಇಂಡಿಯಾ ಹೆಸರು ಎಲ್ಲೆಡೆ ಇದೆ. ಅವರಿಗೆ ಇಂಡಿಯಾ ಹೆಸರಿನ ಬಗ್ಗೆ ಸಮಸ್ಯೆಯಿದ್ದರೆ, ಭಾರತ್ ಬಗ್ಗೆಯೂ ಸಮಸ್ಯೆ ಇರಬೇಕು. ಏಕೆಂದರೆ ನಮ್ಮ ಘೋಷಣೆ ‘ಜುಡೇಗಾ ಭಾರತ್, ಜೀತೇಗಾ ಇಂಡಿಯಾ ಎಂದು ಬಿಹಾರ ಡಿಸಿಎಂ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿದ್ದಾರೆ. ನೀವು ಎಷ್ಟು ಸ್ಥಳಗಳಿಂದ ಹೆಸರನ್ನು ತೆಗೆದುಹಾಕುತ್ತೀರಿ? ನೀವು ಎಷ್ಟು ಖರ್ಚು ಮಾಡುತ್ತೀರಿ? ಹೆಸರನ್ನು ಬದಲಾಯಿಸಲು ಒಂದು ರಾಜ್ಯದ ಬಜೆಟ್‌ನಷ್ಟು ವೆಚ್ಚವಾಗಬಹುದು. ಮೇಕ್ ಇನ್ ಇಂಡಿಯಾ ಮತ್ತು ಸ್ಕಿಲ್ ಇಂಡಿಯಾಕ್ಕೆ ಏನಾಗುತ್ತದೆ? ಎಂದು ಯಾದವ್ ಪ್ರಶ್ನಿಸಿದ್ದಾರೆ.
ವಿಪಕ್ಷಗಳ ಟೀಕಾ ಪ್ರಹಾರಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ " ಕಾಂಗ್ರೆಸ್‌ಗೆ ದೇಶದ ಹೆಸರನ್ನು ಭಾರತ ಎಂದು ಬದಲಾಯಿಸಿದರೆ ತೊಂದರೆ ಏಕೆ? ಅವರೇಕೆ ರಾಜಕೀಯ ಯಾತ್ರೆಗೆ 'ಭಾರತ್ ಜೋಡೋ' ಎಂದು ಹೆಸರಿಟ್ಟರು ? ಭಾರತ್ ಮಾತಾ ಕೀ ಜೈ ಎಂದರೆ ಕೋಪ ಏಕೆ? ಕಾಂಗ್ರೆಸ್ ದೇಶ ಹಾಗೂ ದೇಶದ ಸಂವಿಧಾನವನ್ನು ಗೌರವಿಸುವುದಿಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ " ಎಂದಿದ್ದಾರೆ.
ತೇಜಸ್ವಿ ಯಾದವ್ ಎತ್ತಿರುವ ಪ್ರಶ್ನೆ ಮಹತ್ವದ್ದಾಗಿದೆ. ಬರೀ ಹೆಸರು ಬದಲಿಸುವ ವ್ಯರ್ಥ ಕಸರತ್ತನ್ನೇ ಉದ್ದಕ್ಕೂ ಮಾಡಿಕೊಂಡು ಬಂದಿರುವ ಮೋದಿ ಸರ್ಕಾರ ಅದರಿಂದ ಸಾಧಿಸಿದ್ದೇನು?. ಹೆಸರೊಂದನ್ನು ಬದಲಿಸುವುದೆಂದರೆ ಅದು ತೀರಾ ಸ್ಥಳೀಯ ಮಟ್ಟದಿಂದ ಹಿಡಿದು, ಜಿಲ್ಲೆ, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬದಲಾಗಬೇಕಾಗುತ್ತದೆ. ಅದು ತೆಗೆದುಕೊಳ್ಳುವ ಸಮಯ, ಶ್ರಮ ಅಪಾರ. ಅದು ಅತ್ಯಂತ ದುಬಾರಿ ವೆಚ್ಚದ ವ್ಯವಹಾರ. ಅಷ್ಟಾದ ಮೇಲೆಯೂ ಅದು ಜನರ ಬಾಯಲ್ಲಿ ಬದಲಾಗುವುದು ಸುಲಭವಲ್ಲ.
ನಮ್ಮ ದೇಶದಲ್ಲಿ ಇದು ಇನ್ನೂ ಸಂಕೀರ್ಣ. ಯಾಕೆಂದರೆ ವಿಶ್ವದ ಅತಿ ಹೆಚ್ಚು ಜನಸಂಖ್ಯೆಯುಳ್ಳ ದೇಶ ಮಾತ್ರವಾಗಿರದೆ, ವೈವಿಧ್ಯಮಯ ಸಂಸ್ಕೃತಿಗಳು, ಭಾಷೆಗಳು ಮತ್ತು ಜನಾಂಗಗಳನ್ನು ಹೊಂದಿರುವ ದೇಶ ಇದು. ಈ ವರ್ಷದ ಆರಂಭದಲ್ಲಿ, ಮಹಾರಾಷ್ಟ್ರದ ಔರಂಗಾಬಾದ್ ನಗರಕ್ಕೆ ಛತ್ರಪತಿ ಸಂಭಾಜಿ ನಗರ ಎಂದು ಮರುನಾಮಕರಣ ಮಾಡಲಾಯಿತು.
ಅದೇ ವೇಳೆ ಮಹಾರಾಷ್ಟ್ರದ ಉಸ್ಮಾನಾಬಾದ್ ಅನ್ನು ಧಾರಾಶಿವ್ ಎಂದು ಬದಲಿಸಲಾಯಿತು. 2016ರಲ್ಲಿ ಹರಿಯಾಣ ರಾಜ್ಯ ಸರ್ಕಾರ ಗುರ್ಗಾಂವ್ ಹೆಸರನ್ನು ಗುರುಗ್ರಾಮ್ ಎಂದು ಬದಲಿಸಿತು. ಉತ್ತರ ಪ್ರದೇಶದ ಅಲಹಾಬಾದ್ ನಗರವನ್ನು 2018ರಲ್ಲಿ ಪ್ರಯಾಗ್‌ರಾಜ್ ಎಂದು ಬದಲಿಸಲಾಯಿತು. ಅಲಹಾಬಾದ್‌ನ ಮರುನಾಮಕರಣದಿಂದ ರಾಜ್ಯ ಸರ್ಕಾರಕ್ಕೆ 300 ಕೋಟಿ ರೂ. ವೆಚ್ಚವಾಗಿದೆ ಎಂದು ಇಂಡಿಯಾ ಟುಡೇ ಈ ಹಿಂದೆ ವರದಿ ಮಾಡಿತ್ತು.
ಹೆಸರು ಬದಲಿಸಿದ ಮಾತ್ರಕ್ಕೇ ಎಲ್ಲ ಮುಗಿದುಬಿಡುವುದಿಲ್ಲ. ಅಲ್ಲಿಂದ ದೊಡ್ಡ ಕಸರತ್ತೇ ಶುರುವಾಗಬೇಕಿರುತ್ತದೆ. ನಕ್ಷೆಗಳ ನವೀಕರಣ, ರಸ್ತೆ ಸಂಚಾರ ವ್ಯವಸ್ಥೆ, ಹೆದ್ದಾರಿ ಹೆಗ್ಗುರುತುಗಳು, ರಾಜ್ಯ ಮತ್ತು ನಾಗರಿಕ ಪ್ರಾಧಿಕಾರದ ಕಚೇರಿಗಳಲ್ಲಿ ಬಳಸುವ ಅಧಿಕೃತ ಸಾಮಗ್ರಿಗಳಲ್ಲಿನ ಬದಲಾವಣೆ ಇವೆಲ್ಲದಕ್ಕೆ ಬಹಳ ದೊಡ್ಡ ಪ್ರಮಾಣದಲ್ಲಿ ಹಣ ಖರ್ಚು ಮಾಡಬೇಕಾಗುತ್ತದೆ.
ಈ ಮೊದಲು ಕೂಡ ಅಧಿಕೃತ ಹೆಸರನ್ನು ಬದಲಿಸಿದ ಹಲವು ದೇಶಗಳಿವೆ.
ಶ್ರೀಲಂಕಾ ಎಂಬ ಹೆಸರನ್ನು 1972ರಲ್ಲಿ ಇಡಲಾಯಿತು. ಆದರೆ ಎಲ್ಲಾ ಸರ್ಕಾರಿ ಬಳಕೆಯಿಂದ ಅದರ ಹಿಂದಿನ ಹೆಸರು ಸಿಲೋನ್ ಇಲ್ಲವಾಗುವುದಕ್ಕೆ ಒಂದೆರಡಲ್ಲ, ಸುಮಾರು 40 ವರ್ಷಗಳೇ ಬೇಕಾದವು.
ಟರ್ಕಿ ಬದಲಿಗೆ ಟರ್ಕಿಯೆ, ಹಾಲಂಡ್ ಬದಲಿಗೆ ನೆದರ್ಲ್ಯಾಂಡ್ಸ್, ರಿಪಬ್ಲಿಕ್ ಆಫ್ ಮ್ಯಾಸಿಡೋನಿಯಾ ಎಂಬುದು ಅಧಿಕೃತವಾಗಿ ರಿಪಬ್ಲಿಕ್ ಆಫ್ ನಾರ್ಥ್ ಮ್ಯಾಸಿಡೋನಿಯಾ ಆದದ್ದು, ಜೆಕ್ ಗಣರಾಜ್ಯದ ಹೆಸರು ಜೆಕಿಯಾ ಎಂದಾದದ್ದು ಇವೆಲ್ಲ ಅಂಥ ಉದಾಹರಣೆಗಳು.
2018ರಲ್ಲಿ ಸ್ವಾಜಿಲ್ಯಾಂಡ್ ಹೆಸರನ್ನು ಈಸ್ವತಿನಿ ಎಂದು ಬದಲಿಸಲಾಯಿತು. ಆಗ ದಕ್ಷಿಣ ಆಫ್ರಿಕಾ ಮೂಲದ ಬೌದ್ಧಿಕ ಆಸ್ತಿ ವಕೀಲ ಡ್ಯಾರೆನ್ ಒಲಿವಿಯರ್, ದೇಶದ ಹೆಸರು ಬದಲಿಸುವುದರ ವೆಚ್ಚ ಲೆಕ್ಕಾಚಾರ ಮಾಡುವ ವಿಧಾನವನ್ನು ಕಂಡುಕೊಂಡರು. ಅದನ್ನು ಔಟ್ಲುಕ್ ವರದಿ ಉಲ್ಲೇಖಿಸಿರುವ ಪ್ರಕಾರ,
ಮಾರುಕಟ್ಟೆ ವೆಚ್ಚ - ಒಟ್ಟು ಆದಾಯದ ಸುಮಾರು ಶೇ.6ರಷ್ಟು ಮರುಬ್ರಾಂಡಿಂಗ್ ಕಸರತ್ತಿನ ವೆಚ್ಚ - ಒಟ್ಟಾರೆ ಮಾರ್ಕೆಟಿಂಗ್ ಬಜೆಟ್‌ನ ಶೇ.10ರಷ್ಟು. ಇದರಂತೆ, ಇಂಡಿಯಾವನ್ನು ಭಾರತ್ ಎಂದು ಬದಲಾಯಿಸಲು ಅಂದಾಜು ವೆಚ್ಚ ಲೆಕ್ಕ ಹಾಕುವುದಾದರೆ,
2023ರ ಆರ್ಥಿಕ ವರ್ಷದಲ್ಲಿ ತೆರಿಗೆ ಮತ್ತು ತೆರಿಗೆಯೇತರ ಆದಾಯ ಸೇರಿ ದೇಶದ ಒಟ್ಟು ಆದಾಯ 23.84 ಲಕ್ಷ ಕೋಟಿ ರೂ.
ಡ್ಯಾರೆನ್ ಒಲಿವಿಯರ್ ಸೂತ್ರದಂತೆ, ಇಂಡಿಯಾದ ಒಟ್ಟು ಆದಾಯ - 23.84 ಲಕ್ಷ ಕೋಟಿ ರೂ. ಭಾರತ್ ಎಂದು ಮರುಬ್ರಾಂಡಿಂಗ್ ಮಾಡಲು ಆಗುವ ವೆಚ್ಚ = 14,304 ಕೋಟಿ ರೂ.
80 ಕೋಟಿ ಭಾರತೀಯರಿಗೆ ಆಹಾರ ನೀಡುವ ಆಹಾರ ಭದ್ರತಾ ಕಾರ್ಯಕ್ರಮಕ್ಕಾಗಿ ಕೇಂದ್ರ ಸರ್ಕಾರ ಪ್ರತಿ ತಿಂಗಳು ಸುಮಾರು 14,000 ಕೋಟಿ ರೂ. ವೆಚ್ಚ ಮಾಡುತ್ತದೆ ಎಂಬುದನ್ನು ಇಲ್ಲಿ ಗಮನಿಸಬಹುದು. ಇನ್ನೊಂದು ವಿಚಾರ ಗಮನಿಸಬೇಕು. ಏನೆಂದರೆ, ಇಂಡಿಯಾ ಬದಲು ಭಾರತ್ ಎಂದು ಕೇಂದ್ರ ಸರ್ಕಾರ ಬಳಸುತ್ತಿರುವುದು ಇದು ಎರಡನೇ ಸಲ.
ದಿ ವೈರ್ ವರದಿ ಮಾಡಿರುವ ಪ್ರಕಾರ, ಕಳೆದ ತಿಂಗಳು ಪ್ರಧಾನಿ ಮೋದಿ ಗ್ರೀಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಎಲ್ಲಾ ಪ್ರೋಟೋಕಾಲ್ ಸರಕುಗಳಲ್ಲಿಯೂ ಪ್ರೈಂ ಮಿನಿಸ್ಟರ್ ಆಫ್ ಭಾರತ್ ಎಂದು ಉಲ್ಲೇಖಿಸಲಾಗಿರುವುದಾಗಿ ತಿಳಿದುಬಂದಿದೆ.
ಸಿಬ್ಬಂದಿ ಹೇಳುವ ಪ್ರಕಾರ ಭಾರತ್ ಎಂದು ಬಳಸಲು ಮೌಖಿಕವಾಗಿ ಸೂಚಿಸಲಾಗಿತ್ತು.
ಈ ಸಲವೂ ಬಿಜೆಪಿ ನಾಯಕರು ಆಮಂತ್ರಣ ಪತ್ರಿಕೆ ಟ್ವೀಟ್ ಮಾಡಿರುವ ವಿಚಾರ ಬಿಟ್ಟರೆ, ಇದರ ಬಗ್ಗೆ ರಾಷ್ಟ್ರಪತಿ ಭವನವಾಗಲಿ ಅಥವಾ ಜಿ20 ಕಾರ್ಯಕ್ರಮಗಳನ್ನು ಸಂಯೋಜಿಸುತ್ತಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವಾಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಕಳೆದ ಮುಂಗಾರು ಅಧಿವೇಶನದಲ್ಲಿ ಬಿಜೆಪಿ ರಾಜ್ಯಸಭಾ ಸದಸ್ಯ ನರೇಶ್ ಬನ್ಸಲ್ ಅವರು ಸಂವಿಧಾನದಿಂದ 'ಇಂಡಿಯಾ' ಎಂಬ ಪದವನ್ನು ತೆಗೆದುಹಾಕುವಂತೆ ಕಲಾಪವೊಂದರ ವೇಳೆ ಒತ್ತಾಯಿಸಿದ್ದರು. ಇದಕ್ಕೆ ಬಿಜೆಪಿ ಸಂಸದ ಹರನಾಥ್ ಸಿಂಗ್ ಯಾದವ್ ಬೆಂಬಲ ವ್ಯಕ್ತಪಡಿಸಿದ್ದರು.
ಇದಾಗಿ ಕೆಲವು ವಾರಗಳ ಬಳಿಕ ಗುವಾಹಟಿಯಲ್ಲಿನ ಕಾರ್ಯಕ್ರಮವೊಂದರಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, ಇಂಡಿಯಾ ಎನ್ನುವ ಬದಲು ಭಾರತ್ ಎಂದು ಬಳಸಬೇಕು ಎಂದಿದ್ದರು. ಎಂದಿನಂತೆ ಸಿನಿಮಾ ನಟರು, ಕ್ರಿಕೆಟಿಗರು ಮೋದಿ ಸರಕಾರದ ಈ ನಡೆಯನ್ನು ಸ್ವಾಗತಿಸಿದ್ದಾರೆ.
ಈಗ ಜಿ20 ಆಮಂತ್ರಣದಲ್ಲಿ ಭಾರತ್ ಎಂಬ ಬಳಕೆಯ ಸುದ್ದಿ ಹೊರಬೀಳುತ್ತಿದ್ದಂತೆ, ವಿಶ್ವಕಪ್ ಜೆರ್ಸಿಯಲ್ಲಿ ಇಂಡಿಯಾ ಬದಲು ಭಾರತ್ ಎಂದು ಬರೆಯಲು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಬಿಸಿಸಿಐಗೆ ಒತ್ತಾಯಿಸಿರುವುದು ವರದಿಯಾಗಿದೆ. ಈ ಮಧ್ಯೆ, ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಒಂದು ಮಾತು ಹೇಳಿದ್ದಾರೆ.
ದೇಶದ ಹೆಸರಾಗಿ ಭಾರತ್ ಮತ್ತು ಇಂಡಿಯಾ ಎರಡೂ ಸ್ವೀಕೃತವಾಗಿವೆ. ಆದರೂ ಬಿಜೆಪಿ ಅವುಗಳನ್ನು ಪರಸ್ಪರ ವಿರುದ್ಧವಾಗಿಸಿ ಬಿಂಬಿಸುತ್ತಿದೆ. ನಾವು ಇಂಡಿಯಾ ಮತ್ತು ‘ಭಾರತ್ ಎರಡನ್ನೂ ಒಪ್ಪಿಕೊಳ್ಳುತ್ತೇವೆ ಮತ್ತು ಅವುಗಳ ಬಗ್ಗೆ ಹೆಮ್ಮೆಪಡುತ್ತೇವೆ. ISRO ನಲ್ಲಿರುವ ‘I’ ಭಾರತವಾಗಿದೆ, IIT ಗಳಲ್ಲಿ “I” ಭಾರತವಾಗಿದೆ, IIM ಗಳಲ್ಲಿನ ‘I’ ಭಾರತವಾಗಿದೆ, IPS ನಲ್ಲಿನ ‘I’ ಭಾರತವಾಗಿದೆ. ಬಿಜೆಪಿ ರಾಜಕಾರಣ ತೀರಾ ಕೆಳಮಟ್ಟಕ್ಕೆ ಇಳಿದಿದೆ. ಯಾಕೆಂದರೆ ಅದು INDIA ಪ್ರತಿಪಕ್ಷ ಮೈತ್ರಿಕೂಟಕ್ಕೆ ಹೆದರಿದೆ ಎಂದಿದ್ದಾರೆ ಗೊಗೊಯ್.
ದೇಶದ ಹೆಸರನ್ನು ಭಾರತ ಅಥವಾ ಇಂಡಿಯಾ ಎಂದು ಇಡಬೇಕೇ ಎಂಬುದರ ಕುರಿತಾಗಿ ಸಂವಿಧಾನವನ್ನು ಅಳವಡಿಸಿಕೊಳ್ಳುವ ಮೊದಲಿನಿಂದಲೂ ಚರ್ಚೆಗಳು ನಡೆದಿವೆ. ಸಂವಿಧಾನದ ರಚನೆಯ ಸಮಯದಲ್ಲೂ ಹಲವು ನಾಯಕರು ಭಾರತ ಎಂಬ ಹೆಸರಿಡಲು ಸೂಚನೆ ನೀಡಿದ್ದರು. ಆದರೂ ಇಂಡಿಯಾ' ಎಂಬುದಕ್ಕೆ ಬಹುಮತ ಬಂದ ಕಾರಣ ಅದನ್ನೇ ಇಡಲಾಯಿತು. ಅಂದಿನ ಅಧ್ಯಕ್ಷ ಬಾಬು ರಾಜೇಂದ್ರ ಪ್ರಸಾದ್ ಅವರು ದೇಶದ ಹೆಸರನ್ನು ಮತಕ್ಕೆ ಹಾಕಿದಾಗ, ಇಂಡಿಯಾ ದಟ್ ಈಸ್ ಭಾರತ ಎಂಬ ಹೆಸರಿಗೆ ಬಹುಮತ ದೊರೆತ ಕಾರಣ ಅದನ್ನೇ ಅಳವಡಿಸಿಕೊಳ್ಳಲಾಯಿತು.
'ಭಾರತೀಯರು ಸ್ವಇಚ್ಛೆಗೆ ಅನುಸಾರವಾಗಿ ದೇಶವನ್ನು ಇಂಡಿಯಾ ಅಥವಾ ಭಾರತ ಎಂದು ಕರೆಯಲು ಮುಕ್ತ ಅವಕಾಶ ಹೊಂದಿದ್ದಾರೆ' ಎಂದು 2016ರಲ್ಲಿಯೇ ಸುಪ್ರೀಂ ಕೋರ್ಟ್ ಪ್ರತಿಪಾದಿಸಿದೆ. ಇಂಡಿಯಾವನ್ನು 'ಭಾರತ' ಎಂದು ಕರೆಯುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಮಹಾರಾಷ್ಟ್ರದ ನಿರಂಜನ್ ಭಟ್ಬಾಲ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿತ್ತು. 'ಭಾರತ ಅಥವಾ ಇಂಡಿಯಾ? ನೀವು ಭಾರತ ಎಂದು ಪರಿಗಣಿಸಿದರೆ ಹಾಗೆಂದು ಕರೆಯಲು ಅಡ್ಡಿಯಿಲ್ಲ. ಬೇರೆಯವರು ಇಂಡಿಯಾ ಎಂದು ಸಂಬೋಧಿಸಲು ಇಚ್ಛಿಸಿದರೆ ಅವರಿಗೆ ಅಡ್ಡಿಪಡಿಸಬಾರದು' ಎಂದು ಹೇಳಿದ್ದ ಮುಖ್ಯ ನ್ಯಾಯಮೂರ್ತಿಯಾಗಿದ್ದ ಟಿ.ಎಸ್. ಠಾಕೂರ್ ಹಾಗೂ ನ್ಯಾಯಮೂರ್ತಿ ಯು.ಯು. ಲಲಿತ್ ಅವರಿದ್ದ ವಿಭಾಗೀಯ ನ್ಯಾಯಪೀಠವು, ಅರ್ಜಿಯನ್ನು ವಜಾಗೊಳಿಸಿತ್ತು.
ಈ ನಡುವೆ ಸೆಪ್ಟೆಂಬರ್ 9 ಹಾಗು10 ರಂದು ದೇಶದಲ್ಲೇ ಜಿ 20 ಶೃಂಗ ಸಭೆ ನಡೆಯುವ ನಡುವೆಯೇ ಇಂತಹದೊಂದು ಕಸರತ್ತಿಗೆ ಮೋದಿ ಸರಕಾರ ಯಾಕೆ ಇಳಿಯಿತು ಎಂಬ ಚರ್ಚೆಯೂ ಶುರುವಾಗಿದೆ. ಜಿ ೨೦ಗೆ ಈ ಬಾರಿ ಭಾರತದ ಅಧ್ಯಕ್ಷತೆ. ಹಾಗಾಗಿ ವರ್ಷದಿಂದೀಚಿಗೆ ಅದಕ್ಕಾಗಿ ಭಾರೀ ತಯಾರಿ ಹಾಗು ಪ್ರಚಾರ ಮಾಡಿಕೊಂಡು ಬರಲಾಗುತ್ತಿದೆ. ಸಾವಿರಾರು ಕೋಟಿ ರೂಪಾಯಿ ಖರ್ಚಾಗಿದೆ.
ಈಗ ಜಿ 20 ಹಾಗು ಅದರಲ್ಲಿ ಭಾರತ ಹಾಗು ಮೋದಿ ಪಾತ್ರವೇ ಎಲ್ಲ ಕಡೆ ಚರ್ಚೆಯಾಗಬೇಕಾದ ಹೊತ್ತಲ್ಲಿ ಈ ಹೊಸ ಚರ್ಚೆಯನ್ನು ಮೋದಿ ಸರಕಾರ ಯಾಕೆ ಶುರು ಮಾಡಿದೆ ಎಂಬ ಬಗ್ಗೆ ಖ್ಯಾತ ಪತ್ರಕರ್ತ ರವೀಶ್ ಕುಮಾರ್ ವಿಶ್ಲೇಷಣೆ ಮಾಡಿದ್ದಾರೆ. ಅವರ ಪ್ರಕಾರ ಈ ಬಾರಿ ಜಿ 20 ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗುವ ಬಗ್ಗೆಯೇ ಸಂಶಯಗಳು ಎದ್ದಿವೆ. ಈಗಾಗಲೇ ರಷ್ಯಾ ಹಾಗು ಚೀನಾ ಅಧ್ಯಕ್ಷರು ಶೃಂಗ ಸಭೆಗೆ ಬರೋದಿಲ್ಲ ಎಂದು ಖಚಿತವಾಗಿದೆ. ಆ ಎರಡು ದೊಡ್ಡ , ಪ್ರಮುಖ ದೇಶಗಳ ನಾಯಕರು ಬರದಿದ್ದರೆ ಶೃಂಗ ಸಭೆ ಸಪ್ಪೆಯಾಗುತ್ತದೆ. ಯಾವುದೇ ಪ್ರಮುಖ ನಿರ್ಧಾರಕ್ಕೆ ಬರೋದು ಕಷ್ಟ. ಅಮೇರಿಕ ಅಧ್ಯಕ್ಷರ ಪತ್ನಿಗೆ ಕೋವಿಡ್ ಆಗಿರೋದ್ರಿಂದ ಅವರೂ ಬರೋ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ವರ್ಷವಿಡೀ ನಡೆದ ಜಿ 20 ಸಂಬಂಧಿತ ವಿವಿಧ ಕ್ಷೇತ್ರಗಳ ಸಭೆಯಲ್ಲೂ ಯಾವುದೇ ದೊಡ್ಡ ಫಲಿತಾಂಶ ಬಂದ ಹಾಗಿಲ್ಲ. ಹಾಗಾಗಿ ಜಿ 20 ಹೆಸರಲ್ಲಿ ಧಮಾಕ ಮಾಡುವ, ದೇಶಾದ್ಯಂತ ಪ್ರಚಾರ ಪಡೆಯುವ ಮೋದಿ ಸರಕಾರದ ಲೆಕ್ಕಾಚಾರ ತಪ್ಪಿದೆ.
ಹಾಗಾಗಿ ಜಿ 20 ನಡೆಯುವ ಹೊತ್ತಲ್ಲೇ ಇಂತಹದೊಂದು ಹೊಸ ಚರ್ಚೆಯನ್ನು ಮೋದಿ ಸರಕಾರ ಶುರು ಮಾಡಿದೆಯೇ ಎಂಬ ಪ್ರಶ್ನೆಯೂ ಇದೆ.
ಈಗ ಕೆಲವು ಬಿಜೆಪಿ ನಾಯಕರು ಇಂಡಿಯಾ ಎಂಬುದು ಗುಲಾಮಗಿರಿಯ ಸಂಕೇತ ಎಂದು ಹೇಳುವುದು ಬಹಳ ತಮಾಷೆಯಾಗಿದೆ. ಅದು ನಿಜವೇ ಆಗಿದ್ದರೆ ಕಳೆದ ಒಂಬತ್ತು ವರ್ಷಗಳಲ್ಲಿ ಮೋದಿ ಸರಕಾರಕ್ಕೆ ಆ ಯೋಚನೆ ಬರಲಿಲ್ಲ ಯಾಕೆ ?. ಈಗ ಭಾರತ್ ಹೆಸರಿಂದ ಹಿಂದೆ ಬಿದ್ದಿರುವ ಮೋದಿ ಸರಕಾರಕ್ಕೆ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇತ್ ಬಹಳ ಮಾರ್ಮಿಕ ಪ್ರಶ್ನೆ ಕೇಳಿದ್ದಾರೆ.
"ನಾವು ಜುಡೆಗ ಭಾರತ್ ಜೀತೇಗ ಇಂಡಿಯಾ ಎಂದ ಕೂಡಲೇ ನೀವು ಬೆಚ್ಚಿ ಬೀಳುತ್ತೀರಿ, ಭಾರತ ಮಾತೆ ನಮ್ಮವಳು, ಇಂಡಿಯಾ ಕೂಡ ನಮ್ಮದೇ, ಏಕೆಂದರೆ ನಿಮ್ಮ ಪೂರ್ವಜರು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೊರಾಡಿಲ್ಲ, ನೀವು ಆಗಲೂ ಇಂಗ್ಲಿಷರ ಜೊತೆ ಇದ್ರಿ, ಆಗಲೂ ಸಂಚು ಹೂಡ್ತಾ ಇದ್ರಿ, ಈಗಲೂ ದೇಶದ ೧೪೦ ಕೋಟಿ ಜನರ ವಿರುದ್ಧದ ಈ ನಿಮ್ಮ ಕೆಲಸ ಒಂದು ಸಂಚಾಗಿದೆ, ಷಡ್ಯಂತ್ರವಾಗಿದೆ. ವಿಪಕ್ಷದ ಮೇಲಿನ ದ್ವೇಷದಿಂದ ತಾಯಿಯ ಹೆಸರು ಬದಲಾಯಿಸುವ ಆಟ ಯಾಕೆ ಮೋದೀಜಿ ? ಇದು ಬಾಬಾ ಸಾಹೇಬರ ಸಂವಿಧಾನ ಬದಲಾಯಿಸುವ ಷಡ್ಯಂತ್ರ, ನೀವು ಇಂಡಿಯಾ ಮತ್ತು ಭಾರತಕ್ಕೆ ಮಾಡಿರುವ ಬೆಲೆ ಏರಿಕೆ, ನಿರುದ್ಯೋಗ, ಆರ್ಥಿಕ ಅಸಮಾನತೆ, ದ್ವೇಷದ ಬೆಂಕಿ ಹಾಗು ಅದಾನಿಯ ಮಹಾ ಹಗರಣದಿಂದ ಮುಕ್ತಿ ಕೊಡಿ ಎಂದಿದ್ದಾರೆ ಸುಪ್ರಿಯಾ.
ಆರ್ ಜೆ ಡಿ ಯ ರಾಜ್ಯಸಭಾ ಸಂಸದ ಮನೋಜ್ ಕುಮಾರ್ ಝಾ ಅವರು "ಬಿಜೆಪಿಯವರು ಇಷ್ಟು ಬೇಗ ಹೆದರಿಬಿಡ್ತಾರೆ ಅಂತ ನಮಗೆ ಗೊತ್ತೇ ಇರಲಿಲ್ಲ. ಇನ್ನೂ ಕೆಲವೇ ವಾರಗಳಾಗಿವೆ. ಆಗಲೇ ಇಷ್ಟೊಂದು ಹೆದರಿ ಹೀಗೆಲ್ಲ ಹೆಸರಿನ ರಾಜಕೀಯ ಶುರು ಮಾಡಲಾಗಿದೆ. ಸಂವಿಧಾನದ ಆರ್ಟಿಕಲ್ ಒಂದರಲ್ಲಿ ಬಹಳ ಸ್ಪಷ್ಟವಾಗಿದೆ. india that is bharat ... ಇನ್ನು ನಮ್ಮ ಬಗ್ಗೆ ಹೆದರಿಕೆನಾ... ನಮ್ಮ ಮೈತ್ರಿಕೂಟದ ಟ್ಯಾಗ್ ಲೈನ್ ಓದಿಕೊಳ್ಳಿ - ಅದು ಜುಡೆಗಾ ಭಾರತ್ ಜೀತೇಗಾ ಇಂಡಿಯಾ.. ಇನ್ನು ಏನೇನೆಲ್ಲ ಕಸಿದುಕೊಳ್ತೀರಿ... ಅಂಬೇಡ್ಕರ್ ಕೊಟ್ಟಿದ್ದು ಅದನ್ನು ಈ ದೇಶಕ್ಕೆ... ನೀವು ಬಾಬಾ ಸಾಹೇಬರಿಗೆ ಮಾಲಾರ್ಪಣೆ ಮಾಡ್ತೀರಿ... ಆದರೆ ನಿಮ್ಮ ಮನಸ್ಸಲ್ಲಿ ಅವರಿಲ್ಲ.. ಈಗ ನಿಮಗೆ ಬಹುಮತ ಇರುವುದರಿಂದ ಏನೇನು ಅಧಿಕಾರ , ಅಂತಸ್ತು ಸಿಕ್ಕಿದೆಯೋ ಅದೆಲ್ಲವೂ ಒಂದು ದಿನ ಹೋಗಲಿದೆ... ಅದನ್ನು ಈ ಇಂಡಿಯಾ ಹಾಗು ಭಾರತವನ್ನು ಪ್ರೀತಿಸುವ ಜನರೇ ನಿಮ್ಮಿಂದ ಕಿತ್ತುಕೊಳ್ಳಲಿದ್ದಾರೆ " ಎಂದು ಮೋದಿ ಸರಕಾರಕ್ಕೆ ಚಾಟಿ ಬೀಸಿದ್ದಾರೆ.
ಈ ದೇಶದ ಸೌಂದರ್ಯವೇ ಆಗಿರುವ ವೈವಿಧ್ಯ ಮೋದಿ ಸರ್ಕಾರ ಬಂದ ಮೇಲೆ ನಾಶವಾಗುತ್ತಲೇ ಬಂದಿದೆ. ಈಗ ದೇಶದ ಹೆಸರಿನಲ್ಲಿರುವ ವೈವಿಧ್ಯವನ್ನು ಚಿವುಟಿಹಾಕುವುದಕ್ಕೂ ಅದು ಹೊರಟಿದೆ. ಮತ್ತದು, ಮೈತ್ರಿಕೂಟದ ಹೆಸರಲ್ಲಿ ಆ ಶಬ್ದ ಇದೆ ಎಂಬ ಕಾರಣಕ್ಕೆ ಎಂಬ ವಿಚಾರ ಇನ್ನೂ ದಿಗ್ಭ್ರಮೆ ಮೂಡಿಸುತ್ತದೆ. ಒಂದು ಸರ್ಕಾರ ಯಾಕೆ ಹೀಗೆ ವೈವಿಧ್ಯತೆಗೆ ಭಯ ಬೀಳುತ್ತದೆ? ಯಾಕೆ ತನ್ನದೇ ಚಿಪ್ಪೊಳಗೆ ಸೇರಿಕೊಳ್ಳಬೇಕೆನ್ನುವ ಅಭದ್ರತೆ ಅದನ್ನು ಕಾಡುತ್ತದೆ?. ಇತಿಹಾಸದಲ್ಲಿ ಈ ಪ್ರಶ್ನೆಗಳಿಗೆ ಉತ್ತರಗಳಿವೆ. ಮತ್ತು ನಿಜವಾದ ಇತಿಹಾಸದ ಬಗ್ಗೆಯೂ ಈ ಸರ್ಕಾರಕ್ಕೆ ಅಷ್ಟೇ ಭಯ.