'ಮದರ್ ಆಫ್ ಡೆಮಾಕ್ರಸಿ'ಯಲ್ಲಿ ಚುನಾವಣೆ ನಡೆಯುವ ರೀತಿಯೇ ಇದು ?
ಪ್ರಧಾನಿ ಮೋದಿಯವರು ಆಗಾಗ ವಿದೇಶಗಳಿಗೆ ಹೋದಾಗೆಲ್ಲ ನಮ್ಮ ದೇಶವನ್ನು ಇಡೀ ಜಗತ್ತಿನ ಮದರ್ ಆಫ್ ಡೆಮಾಕ್ರಸಿ ಅಂತಾನೆ ಬಣ್ಣಿಸ್ತಾರೆ.
ನಮ್ಮದು ಕೇವಲ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ಮಾತ್ರ ಅಲ್ಲ, "ಎಲ್ಲ ಪ್ರಜಾಪ್ರಭುತ್ವಗಳ ಮೂಲ ಭಾರತದಲ್ಲೇ" ಎಂದು ಎದೆ ತಟ್ಟಿಕೊಂಡು ಹೇಳ್ತಾರೆ ಪ್ರಧಾನಿ ಮೋದಿ.
ಇಂತಹ ಮದರ್ ಆಫ್ ಡೆಮಾಕ್ರಸಿಯ ಅತ್ಯಂತ ಮಹತ್ವದ ಅಂಶ ಇಲ್ಲಿ ನಡೆಯುವ ಚುನಾವಣೆ.
ಅದೆಷ್ಟು ಪವಿತ್ರ ? ಅದೆಷ್ಟು ಮಹತ್ವದ್ದು ? ನಮ್ಮ ಪ್ರಜಾಪ್ರಭುತ್ವವನ್ನು ಕಾಪಾಡಲು ಅದೆಷ್ಟು ಮುಖ್ಯ ? ಅಂತ ನಮಗೆಲ್ಲರಿಗೂ ಗೊತ್ತು.
ಆದರೆ ನಿನ್ನೆ ಚಂಡೀಗಢದಲ್ಲಿ ನಡೆದಿರುವ ಒಂದು ಚುನಾವಣೆಯ ವಿವರಗಳನ್ನು ನೀವು ನೋಡಿದ್ರೆ, ಕೇಳಿದ್ರೆ ನೀವು ಬೆಚ್ಚಿ ಬೀಳೋದು ಖಚಿತ.
ಯಾಕಂದ್ರೆ ನಮ್ಮ ದೇಶದಲ್ಲಿ ಹೀಗೂ ಚುನಾವಣೆ ನಡೆಯಲು ಸಾಧ್ಯವೇ ಎಂಬಂತೆ ನಡೆದು ಹೋಗಿದೆ ಆ ಚುನಾವಣೆ.
ಯಾವುದೇ ಅಡ್ಡ ಮತದಾನ ಆಗದೆ, ಯಾವುದೇ ಸದಸ್ಯ ಗೈರು ಹಾಜರಿಯೂ ಆಗದೆ,
ಗರಿಷ್ಟ 16 ವೋಟುಗಳು ಇರುವ ಪಕ್ಷ ಗೆದ್ದು,
20 ಓಟುಗಳಿರುವ ಮೈತ್ರಿಕೂಟ ಸೋತುಹೋಗುವ ಹೊಸ ಬಗೆಯ ಚುನಾವಣೆ ಚಂಡೀಗಢದಲ್ಲಿ ಮಂಗಳವಾರ ನಡೆದಿದೆ.
ಮೋದಿಯ ಮಡಿಲ ಮಾಧ್ಯಮಗಳ ಪತ್ರಕರ್ತರೇ " ಹೀಗೂ ಎಲ್ಲಾದರೂ ನಡೆಯುತ್ತಾ, ಇದು ಸರಿಯಲ್ಲ" ಎಂದು ಹೇಳುವಂತಹ ಒಂದು ಆಘಾತಕಾರಿ ಚುನಾವಣೆ ಅದಾಗಿದೆ.
ಹಾಗಾದರೆ, ಇಂಡಿಯಾ ಕೂಟವನ್ನು ಸೋಲಿಸಲು ಬಹುಮತವಿಲ್ಲದ ಬಿಜೆಪಿ ಅಲ್ಲಿ ಮಾಡಿದ್ದೇನು ? ಬಿಜೆಪಿ ಸದಸ್ಯನನ್ನೇ ಚುನಾವಣಾಧಿಕಾರಿ ಮಾಡಲಾಯಿತೇ ?
ಪ್ರಜಾಸತ್ತೆ ಎಂಬುದಕ್ಕೆ ಯಾವ ಅರ್ಥವೂ ಇಲ್ಲದಂತೆ ಮಾಡುವ ಇಂಥದೊಂದು ಸ್ಥಿತಿ ತಲೆದೋರಿದರೆ, ಇನ್ನು ವಿಪಕ್ಷಗಳು ಸಮಾನ ಅವಕಾಶ ಪಡೆದು ಚುನಾವಣೆ ಸ್ಪರ್ಧಿಸುವುದಾದರೂ ಹೇಗೆ ?
ಒಂದು ನಗರದ ಮೇಯರ್ ಚುನಾವಣೆ ಗೆಲ್ಲಲು ಹೀಗೆಲ್ಲಾ ನಡೆದರೆ, ಇನ್ನು ಲೋಕಸಭಾ ಚುನಾವಣೆಯಲ್ಲಿ ಏನೇನೆಲ್ಲ ಮಾಡಬಹುದು ?
ಬಹುಮತವೇ ಇಲ್ಲದಿದ್ದರೂ ಏಕೆ ಹೀಗೆ ಗೆಲ್ಲಲೇ ಬೇಕೆಂಬ ಹಠ ? ಅಧಿಕಾರ ಪಡೆದೇ ತೀರುವ ದಾರ್ಷ್ಟ್ಯ ? ಅದಕ್ಕಾಗಿ ಎಂಥ ಕೀಳುಮಟ್ಟಕ್ಕೂ ಇಳಿಯಬಲ್ಲ ದುರ್ನೀತಿ ಯಾಕೆ ?
ಚಂಡೀಘಡ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಆದರೆ ಅದು ಹೇಗೆ ಗೆದ್ದಿದೆ ಎಂದು ನೋಡಿದರೆ ನಮ್ಮ ಚುನಾವಣಾ ವ್ಯವಸ್ಥೆ ಬಗ್ಗೆಯೇ ಆತಂಕ ಮೂಡುತ್ತದೆ.
ಚಂಡೀಘಡ ಚುನಾವಣೆಯಲ್ಲಿ ಆಪ್ ಅಭ್ಯರ್ಥಿ ಗೆಲುವು ಖಚಿತವಾಗಿತ್ತು. ಆಪ್ ಬಳಿ 13 ಹಾಗೂ ಕಾಂಗ್ರೆಸ್ ಬಳಿ 7 ಕೌನ್ಸಿಲರ್ ಗಳ ಬಲವಿತ್ತು.
ಎರಡೂ ಪಕ್ಷಗಳು ಒಗ್ಗಟ್ಟಾಗಿ ಮತ ಚಲಾಯಿಸುವುದು ನಿರ್ಧಾರವಾಗಿತ್ತು.
ಬಿಜೆಪಿ ಬಳಿ ಇದ್ದಿದ್ದು 14 ಕೌನ್ಸಿಲರ್ ಗಳು ಮಾತ್ರ. ಬಿಜೆಪಿ ಸಂಸದೆ ಕಿರಣ್ ಖೇರ್ ಮತ ಹಾಗು ಒಂದು ಅಕಾಲಿ ದಳದ ಮತವೂ ಬಿಜೆಪಿಗೆ ಬಂದರೆ ಒಟ್ಟು ಗರಿಷ್ಟ 16 ಮತಗಳು ಮಾತ್ರ ಬಿಜೆಪಿ ಬಳಿ ಇದ್ದಿದ್ದು.
ಆದರೆ ಅಂತಿಮ ಹಂತದಲ್ಲಿ ಅಚ್ಚರಿ ನಡೆದಿದೆ. ಬಿಜೆಪಿ ಅಭ್ಯರ್ಥಿ ಮನೋಜ್ ಸೋನ್ಕರ್ ಗೆಲುವು ದಾಖಲಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಸೋಂಕರ್ 16 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಆಮ್ ಆದ್ಮಿ ಪಾರ್ಟಿಯ ಕುಲ್ದೀಪ್ ಕುಮಾರ್ 12 ಮತಗಳನ್ನು ಪಡೆದು ಸೋತಿದ್ದಾರೆ.
ಎಎಪಿ ಮತ್ತು ಕಾಂಗ್ರೆಸ್ ಒಟ್ಟು 20 ಮತಗಳನ್ನು ಹೊಂದಿದ್ದವು. ಆದರೆ ಎಎಪಿ ಮತ್ತು ಕಾಂಗ್ರೆಸ್ನ 8 ಮತಗಳನ್ನು ಅಸಿಂಧು ಎಂದು ಘೋಷಿಸಲಾಯಿತು. ಚಲಾವಣೆಗೊಂಡ ಮತಪತ್ರಗಳ ಮೇಲೆ ಚುನಾವಣಾಧಿಕಾರಿ ಗುರುತು ಹಾಕುತ್ತಿರುವುದು, ಏನೋ ಬರೆಯುತ್ತಿರುವುದು ಕ್ಯಾಮೆರಾದಲ್ಲಿ ದಾಖಲಾಗಿದೆ.
ಆಪ್ ಹಾಗು ಕಾಂಗ್ರೆಸ್ ಆರೋಪಿಸಿದಂತೆ , ಲೈವ್ ಕ್ಯಾಮರಾ ಎದುರಲ್ಲಿಯೇ ಚುನಾವಣಾಧಿಕಾರಿ ಹೀಗೆ ಅನಾಚಾರದಲ್ಲಿ ತೊಡಗಿದ್ದರು ಎಂದಾದರೆ, ಮತಗಳನ್ನು ಎಲ್ಲರ ಕಣ್ಣೆದುರಲ್ಲಿಯೇ ಹೀಗೆ ಅನರ್ಹಗೊಳಿಸಲು ಅದೆಂಥ ಧೈರ್ಯ ಮತ್ತು ಅದರ ಹಿಂದೆ ಇರುವುದು ಯಾರು ಎಂಬುದು ಸ್ಪಷ್ಟ.
ಫಲಿತಾಂಶ ಘೋಷಣೆಯಾದ ಮೇಲೆ ಚುನಾವಣಾಧಿಕಾರಿ ತಾನು ಗುರುತು ಹಾಕಿದ ಮತಪತ್ರಗಳನ್ನು ಟೇಬಲ್ ಮೇಲೆಯೇ ಮರೆತು ಹೋಗಿ ಸ್ವಲ್ಪ ಸಮಯದ ಬಳಿಕ ಮತ್ತೆ ಅದನ್ನು ಎತ್ತಿಕೊಳ್ಳುವಾಗ ಇಂಡಿಯಾ ಬ್ಲಾಕ್ ನ ಕೌನ್ಸಿಲರ್‌ಗಳು ಬಂದು ಅದನ್ನು ಅವರ ಕೈಯಿಂದ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಆದರೆ ಅಲ್ಲಿಯೇ ಇದ್ದ ಬಿಜೆಪಿ ಕೌನ್ಸಿಲರ್‌ಗಳು ಅದನ್ನು ಅವರ ಕೈಯಿಂದ ಎಳೆದು ಆ ಅಧಿಕಾರಿಯ ಕೈಗೆ ಕೊಟ್ಟು ಹೊರಗಡೆ ಕಳುಹಿಸುತ್ತಾರೆ.
ಇದೆಲ್ಲವೂ ಅಲ್ಲಿ ಇರುವ ಕ್ಯಾಮೆರಾದಲ್ಲಿ ಸೆರೆ ಆಗಿದೆ.
ಹಾಗಾದರೆ ಇನ್ನು ಮುಂದೆ ದೇಶದಲ್ಲಿ ಇದೇ ರೀತಿ ಚುನಾವಣೆಗಳು ನಡೆಯಲಿವೆಯೇ ?
ಯಾವ ಪಕ್ಷಕ್ಕೆ ಎಷ್ಟೇ ಸ್ಥಾನ ಬಂದರೂ ಕೊನೆಗೆ ಅಧಿಕಾರ ಬಿಜೆಪಿಗೆ ಎಂಬಂತಾಗಲಿದೆಯೇ ?
ಚುನಾವಣಾಧಿಕಾರಿ ಅನಿಲ್ ಮಾಸ್ಸಿ ಬಿಜೆಪಿಯ ಅಲ್ಪಸಂಖ್ಯಾತ ಘಟಕದಲ್ಲಿದ್ದ ವ್ಯಕ್ತಿ ಎಂದು ಆಮ್ ಆದ್ಮಿ ಪಕ್ಷದ ರಾಘವ್ ಛಡ್ಡಾ ಗಂಭೀರ ಆರೋಪ ಮಾಡಿದ್ದಾರೆ. .
ಚುನಾವಣಾಧಿಕಾರಿಗೆ ಬಿಜೆಪಿಯ ಯಾವ ಮತಗಳೂ ಅಸಿಂಧುವಾಗಿ ಕಾಣಿಸಲಿಲ್ಲ. ಬದಲಿಗೆ ಗೆಲ್ಲಲೇಬೇಕಿದ್ದ ಎಎಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಮತಗಳೇ ಅಸಿಂಧುವಾಗಿ ಕಂಡವು. ಅದೂ ಒಂದೆರಡಲ್ಲ, ಎಂಟು ಮತಗಳು ಅಸಿಂಧು ಆದವು.
ಇದಕ್ಕಿಂತ ಹಾಸ್ಯಾಸ್ಪದ ಮತ್ತು ಅಪಾಯಕಾರಿ ಏನಿದೆ ?
ಈ ಚುನಾವಣೆ ಕಾಂಗ್ರೆಸ್ ಮತ್ತು ಎಎಪಿ ಮೈತ್ರಿಗೆ ಒಂದು ಪ್ರಾಯೋಗಿಕ ಚುನಾವಣೆಯಾಗಿತ್ತು. ಮೊದಲ ಚುನಾವಣೆಯಲ್ಲಿಯೇ ಹೀಗಾಗಿದೆ.
ಅಸಿಂಧು ನಿರ್ಧಾರ ಪ್ರಶ್ನಿಸಿ ಆಮ್ ಆದ್ಮಿ ಪಾರ್ಟಿ ಹಾಗೂ ಕಾಂಗ್ರೆಸ್ ಭಾರಿ ಪ್ರತಿಭಟನೆ ನಡೆಸಿವೆ.
ಚಲಾವಣೆಗೊಂಡ ಮತಪತ್ರಗಳ ಮೇಲೆ ಚುನಾವಣಾಧಿಕಾರಿ ಅನಗತ್ಯ ಗುರುತುಗಳನ್ನು ಹಾಕಿ ಅನರ್ಹಗೊಳಿಸಿದ್ದಾರೆ ಎಂದು ಮೈತ್ರಿಕೂಟದ ಸದಸ್ಯರು ಆರೋಪಿಸಿದ್ದಾರೆ.
ಫಲಿತಾಂಶದ ಬೆನ್ನಲ್ಲೇ ಆಮ್ ಆದ್ಮಿ ಪಾರ್ಟಿ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಇದು ಪ್ರಜಾಪ್ರಭುತ್ವದ ಕರಾಳ ದಿನ. ಮತಗಳನ್ನು ಕದ್ದು ಬಿಜೆಪಿ ತನ್ನ ಅಭ್ಯರ್ಥಿಯನ್ನು ಹೇಗೆ ಗೆಲ್ಲಿಸಿತು ಎಂಬುದನ್ನು ಎಲ್ಲರೂ ನೋಡಿದ್ದಾರೆ. ಬಿಜೆಪಿ ಮೋಸದ ಮೂಲಕ ಮೇಯರ್ ಸ್ಥಾನ ಗೆದ್ದುಕೊಂಡಿದೆ ಎಂದು ಆರೋಪಿಸಿದ್ದಾರೆ.
ಮೇಯರ್ ಚುನಾವಣೆಯಲ್ಲಿ ಮೋಸ ಮಾಡಿರುವ ಬಿಜೆಪಿ ಲೋಕಸಭಾ ಚುನಾವಣೆಯಲ್ಲೂ ಮೋಸ ಮಾಡಲಿದೆ ಅನ್ನೋದು ಖಚಿತ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಫಲಿತಾಂಶದ ಬೆನ್ನಲ್ಲೇ ಆಪ್ ಅಭ್ಯರ್ಥಿ ಕುಲ್ದೀಪ್ ಕುಮಾರ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಗೆಲ್ಲುವುದು ಸ್ಪಷ್ಟವಾಗಿಯೇ ಇದ್ದಲ್ಲೂ ಹೀಗೆ ಆಗುತ್ತದೆ ಎಂಬುದೇ ಆಘಾತಕಾರಿ ಸಂಗತಿಯಾಗಿದೆ. ನಿಜವಾಗಿಯೂ ಗೆಲ್ಲಬೇಕಾದವರು ಸೋತು ಕಣ್ಣೀರು ಹಾಕುತ್ತಿದ್ದರೆ, ಅತ್ಯಂತ ಭಂಡತನ ಮತ್ತು ಮೋಸದಿಂದ ಗೆದ್ದ ಬಿಜೆಪಿ ಮಾತ್ರ ಮುಗಿಲು ಮುಟ್ಟುವ ಸಂಭ್ರಮಾಚರಣೆಯಲ್ಲಿ ತೊಡಗಿದ್ದುದು ನಿಜವಾಗಿಯೂ ವಿಪರ್ಯಾಸ.
ಹೇಗೆ ಗೆದ್ದೆವು ಎನ್ನುವುದರ ಬಗ್ಗೆ ಸ್ವಲ್ಪವೂ ಲಜ್ಜೆಯಾಗಲೀ ಪಶ್ಚಾತ್ತಾಪವಾಗಲೀ ಇಲ್ಲದವರು ಎಷ್ಟು ನೀತಿಗೆಟ್ಟಿದ್ದಾರೆ ಎಂಬುದಕ್ಕೆ ಇದೊಂದು ಸಣ್ಣ ನಿದರ್ಶನ ಅಷ್ಟೆ.
ಚಂಡಿಘಡ ಮೇಯರ್ ಚುನಾವಣೆ ಪ್ರಕ್ರಿಯೆಯನ್ನು ಪ್ರಶ್ನಿಸಿ ಹಾಗೂ ಮರುಚುನಾವಣೆಗೆ ಆದೇಶಿಸುವಂತೆ ಕೋರಿ, ಎಎಪಿ ನಾಯಕ ರಾಘವ್ ಛಡ್ಡಾ ಕೋರ್ಟ್ ಮೊರೆ ಹೋಗಿದ್ದಾರೆ.
" ಚುನಾವಣಾ ಪ್ರಕ್ರಿಯೆ ಸಂವಿಧಾನಾತ್ಮಕವಾಗಿ ನಡೆದಿಲ್ಲ. ಇದು ಅಕ್ರಮ ಮಾತ್ರವಲ್ಲ, ದೇಶದ್ರೋಹವೂ ಹೌದು. ಮೊದಲು ಚುನಾವಣಾಧಿಕಾರಿಗೆ ಆರೋಗ್ಯ ಸರಿಯಿಲ್ಲ ಎಂದು ಹೇಳಿಸಿ ಚುನಾವಣೆ ಮುಂದೂಡಲಾಯಿತು. ಆಮೇಲೆ ನಮ್ಮ ಪಕ್ಷದ ಕೌನ್ಸಿಲರ್ ಗಳನ್ನು ಖರೀದಿಸುವ ವಿಫಲ ಯತ್ನ ನಡೆಯಿತು. ಈಗ ತಮ್ಮ ಪಕ್ಷದ ಸದಸ್ಯನನ್ನೇ ಚುನಾವಣಾಧಿಕಾರಿ ಮಾಡಿ ಭ್ರಷ್ಟಾಚಾರದ ಮೂಲಕ ಗೆದ್ದಿದ್ದಾರೆ. ಬಿಜೆಪಿ ಇಡೀ ಚುನಾವಣಾ ಪ್ರಕ್ರಿಯೆಯನ್ನೇ ತಿರುಚಿದೆ. ದೇಶದ್ರೋಹದಲ್ಲಿ ದೊಡ್ಡ ಇತಿಹಾಸ ರಚಿಸಿದೆ ಬಿಜೆಪಿ " ಎಂದು ಛಡ್ಡಾ ಗಂಭೀರ ಆರೋಪ ಮಾಡಿದ್ದಾರೆ.
20 ಮತಗಳನ್ನು ಹೊಂದಿರುವ ಪಕ್ಷಗಳ ಗೆಲುವು ಖಚಿತವಾಗಿದ್ದಾಗ 16 ಮತಗಳನ್ನು ಪಡೆದ ಬಿಜೆಪಿ ಅಡ್ಡದಾರಿಯಿಂದ ಗೆದ್ದಿದೆ.
ಮೊದಲ ತಪ್ಪು ಚುನಾವಣಾಧಿಕಾರಿಯಿಂದ ನಡೆದಿದೆ. ಎಎಪಿ ಸದಸ್ಯರನ್ನು ಖರೀದಿಸುವ ಆಪರೇಷನ್ ಕಮಲ ವಿಫಲಗೊಂಡ ಬಳಿಕ ಮತಗಳನ್ನು ಅನರ್ಹಗೊಳಿಸುವ ಕೆಟ್ಟ ಪದ್ಧತಿಗೆ ಬಿಜೆಪಿ ಕೈಹಾಕಿದೆ ಎಂದು ಛಡ್ಡಾ ಆರೋಪಿಸಿದ್ದಾರೆ.
ಚುನಾವಣಾಧಿಕಾರಿ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.
ಬಿಜೆಪಿಯ ಇಂಥ ಜಂಘಲ್ ರಾಜ್ ಕಾನೂನನ್ನು ಹಿಂದೆಂದೂ ಕಂಡಿರಲಿಲ್ಲ. ಇದರಿಂದ ಯಾವುದೇ ಮೈತ್ರಿಗೆ ಹಿನ್ನಡೆ ಆಗಿದೆ ಎನ್ನುವುದಕ್ಕಿಂತ ಹೆಚ್ಚಾಗಿ ದೇಶದ ಪ್ರಜಾಪ್ರಭುತ್ವಕ್ಕೆ ದೊಡ್ಡ ಹಿನ್ನಡೆಯಾಗಿದೆ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿದೆ.
ಇಲ್ಲೇ ಹೀಗಾದರೆ ಇನ್ನು ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಏನೆಲ್ಲ ನಡೆಯಬಹುದು ಎಂದು ಊಹಿಸುವುದೇ ಕಷ್ಟ. ಗೆಲ್ಲಲು ಬಿಜೆಪಿ ಎಂಥ ಕೆಳ ಮಟ್ಟಕ್ಕಾದರೂ ಇಳಿಯುವುದು ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್ ನಾಯಕ ಪವನ್ ಕುಮಾರ್ ಬನ್ಸಲ್ ಹೇಳಿದ್ದಾರೆ.
ಮೇಯರ್ ಚುನಾವಣೆಯಲ್ಲಿ 8 ಮತಗಳನ್ನೇ ಅನರ್ಹಗೊಳಿಸಲು ಚುನಾವಣಾಧಿಕಾರಿಯನ್ನು ಇಟ್ಟುಕೊಂಡು ಆಟವಾಡುವುದು ನಿಜಕ್ಕೂ ಪ್ರಜಾಪ್ರಭುತ್ವವನ್ನು ದುರ್ಗತಿಗೆ ತಳ್ಳುವ ಕೆಲಸವಾಗಿದೆ.
ಇದು ಪ್ರಶ್ನಿಸಲೇಬೇಕಾದ ವಿಚಾರವಾಗಿದೆ. ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿಗಳು ದೇಶದ ಜನರೆದುರು ಇದನ್ನು ಇಡುವ ಜರೂರು ಇದೆ. ಇದರ ವಿರುದ್ಧ ಸುಪ್ರೀಂ ಕೋರ್ಟ್ ಮೊರೆಹೋಗುವ ಅಗತ್ಯವಿದೆ.
ಇಲ್ಲಿ ಎಲ್ಲರ ಕಣ್ಣೆದುರಿಗೇ ಲೈವ್ ಕ್ಯಾಮರಾಗಳಿರುವಲ್ಲಿಯೇ ಹೀಗಾಗಿದೆ ಎಂದ ಮೇಲೆ, ಪೂರ್ತಿ ಅವರದೇ ವಶದಲ್ಲಿರುವ, ಅವರದೇ ನಿಯಂತ್ರಣದಲ್ಲಿರುವ, ಅವರದೇ ಭದ್ರತೆಯಡಿಯಲ್ಲಿ ಇರುವ ಚುನಾವಣೆಗೆ ಸಂಬಂಧಿಸಿದ ಇತರ ವ್ಯವಸ್ಥೆಗಳಲ್ಲಿ ಏನೇನೆಲ್ಲ ಆಗಬಹುದು ಎಂದು ಈಗ ಜನರು ಪ್ರಶ್ನಿಸುತ್ತಿದ್ದಾರೆ. ವಿಶ್ವ ಗುರುವಿನ ದೇಶದಲ್ಲಿ ಚುನಾವಣೆ ನಡೆಯುವ ರೀತಿಯೇ ಇದು ? ಇದು ಮದರ್ ಆಫ್ ಡೆಮಾಕ್ರಸಿಗೆ ಭೂಷಣವೇ ? ಭಾಷಣದಲ್ಲಿ ಹೇಳೋದಕ್ಕೂ ನಿಜವಾಗಿ ಮಾಡೋದಕ್ಕೂ ಸಂಬಂಧವೇ ಇಲ್ಲವೇ ? ಅದಕ್ಕೇ ಅಲ್ವಾ ಹಿರಿಯರೊಬ್ಬರು ಹೇಳಿದ್ದು ಮೋದಿ ಹಿಪಾಕ್ರಸಿ ಕಿ ಬಿ ಸೀಮಾ ಹೋತಿ ಹೈ ಅಂತ.