ಹೋರಾಟದ ಬೆಳಕಿನಲ್ಲಿ ಮುನ್ನಡೆಯೋಣ...
ಮರೆವು ವರವೂ ಹೌದು ಶಾಪವೂ ಹೌದು. ಈ ದೇಶದ ಚರಿತ್ರೆಯ ಪುಟಗಳಲ್ಲಿ ದಲಿತರ ನೋವು, ಅವಮಾನ ದು:ಖದ ಪುಟಗಳೇ ಆಗಿವೆ. ಬಾಬಾ ಸಾಹೇಬರು ಗಮನಿಸದಿದ್ದರೆ ಭೀಮ ಕೋರೆಗಾಂವ್ ಯುದ್ಧದಲ್ಲಿ ಜಯಿಸಿದ ಚರಿತ್ರೆ ಕೂಡ ಜಗತ್ತಿಗೆ ತಿಳಿಯುತ್ತಿರಲಿಲ್ಲ. ಈ ದೇಶದಲ್ಲಿ ನಡೆದ ದಲಿತರ ಅಷ್ಟೂ ಸಾಹಸ ಶೌರ್ಯಗಳು ಮುಚ್ಚಿಹೋಗಿರಬಹುದು.
ಚಳಿಗಾಲದ ಕಾಲವೆಂದರೆ ಲಂಕೇಶರಿಗೆ ತುಂಬಾ ಇಷ್ಟವಾದ ದಿನಗಳು. ಚಳಿಯ ಹಂತವನ್ನು ಅನುಭವಿಸಬೇಕು ಕಣಯ್ಯ ಎನ್ನುತ್ತಿದ್ದ ಲಂಕೇಶ್ ಡಿಸೆಂಬರ್ 29ರಲ್ಲಿ ಹುಟ್ಟಿದ ನಮ್ಮ ವಿಶ್ವಪ್ರಜ್ಞೆಯ ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಬರೆದ ಲೇಖನ ಇತ್ತೀಚೆಗೆ ‘ವಾರ್ತಾಭಾರತಿ’ಯಲ್ಲಿ ಮತ್ತೆ ಓದಿದೆ. ಕುವೆಂಪು ಅವರ ಬಗ್ಗೆ ಲಂಕೇಶರ ಗ್ರಹಿಕೆ, ಒಳನೋಟ, ಸೂಕ್ಷ್ಮತೆ, ನಿಜಕ್ಕೂ ಅದ್ಭುತ ಅನ್ನಿಸಿತು. ಕನ್ನಡಿಗರು ಸದಾ ಎಚ್ಚರದಲ್ಲಿರುವಂತೆ ಕುವೆಂಪು ಅವರ ಚಿಂತನೆ ಅನಂತವಾದುದು . ಅವರು ಕನವರಿಸಿದ್ದ ‘ಸರ್ವಜನಾಂಗದ ಶಾಂತಿಯ ತೋಟ’ದ ಒಳಗೆ ಈಗ ಏನು ನಡೆಯುತ್ತಿದೆ ಎಂದು ಜಲಗಾರನಾಗಿ ನಿಂತು ಗಮನಿಸಿದಾಗ, ಈ ಜನ ಧರ್ಮ ಜಾತಿಯ ಹಳತನ್ನೇ ಹೊತ್ತು ಮೆರೆಯುತ್ತಿರುವುದು ನನ್ನಂತಹವರಿಗೆ ನೋವಾಗುತ್ತದೆ. ಯಾರಿಗೆ ಯಾರು ದೊಡ್ಡವರು, ಯಾರು ಯಾರಿಗೆ ಸಣ್ಣವರು ಎಂದು ಈಗಲೂ ಜಲಗಾರ ನಗುತ್ತಿದ್ದಾನೆ ಅನ್ನಿಸುತ್ತದೆ. ಬಸವಣ್ಣ ಇಲ್ಲೇ ಹುಟ್ಟಿ, ಬೆಳೆದು ಬರೆದು ಬೆಳಕಾದರು. ಆ ಬೆಳಕನ್ನು ಗರ್ಭಗುಡಿಯಲ್ಲಿಟ್ಟು ಮಂಕಾಗಿಸಿದ್ದರು. ‘ದಯವೇ ಧರ್ಮದ ಮೂಲವಯ್ಯ’ ಎನ್ನುವ ಒಂದು ಸಾಲು ಅರ್ಥವಾಗದವರು ಬಸವಣ್ಣನ ವಾರಸುದಾರರಾಗಿದ್ದಾರೆ. ಅವರು ಈ ಲೋಕದ ಈ ನೆಲದ ಬೆಳಕು ಅಂದರೆ ಸಾಧ್ಯವೇ ಇಲ್ಲ. ಅವರು ನಮ್ಮ ಜಾತಿಯ ಬೆಳಕೆಂದು ಗೋಡೆ ಕಟ್ಟಿದರು. ಇವರಿಗೆಲ್ಲ ತಿಳಿ ಹೇಳಲು ಸಾಧ್ಯವೇ? ನಮ್ಮ ನಡೆ ಹೀಗೆಯೆ ಎಂದು ನಡೆಯುತ್ತಿದ್ದಾರೆ.
ಅವರನ್ನು ತಡೆಯಲು ಸಾಧ್ಯವೇ? ಹರಳಯ್ಯ ಚೆನ್ನಮ್ಮ ದಂಪತಿ ತಮ್ಮ ತೊಡೆ ಚರ್ಮ ಸುಲಿದು ಚಮ್ಮಾಳಿಗೆ ಹೊತ್ತು ಬಸವಣ್ಣನವರಿಗೆ ತಲುಪಿಸಲು ನಡೆದುಕೊಂಡು ಹೋಗುವ ದೃಶ್ಯ ನೆನಪಿಸಿಕೊಂಡರೆ ಇಡೀ ಲೋಕವನ್ನೇ ಹೊತ್ತು ನಡೆದಂತೆ ಕಾಣಿಸುತ್ತದೆ. ಇದು ಭಕ್ತಿಯ ಪರಾಕಾಷ್ಠೆ. ದರ್ಶನ, ಬದ್ಧತೆ, ನಂಬಿಕೆ ಮತ್ತು ಗೌರವ ಇದನ್ನು ಕಂಡು ಕೇಳಿದ ಬಸವಣ್ಣ ಕರಗಿ ಹೋಗಿ ಬಿಡುತ್ತಾರೆ. ಇದರಿಂದ ತಲ್ಲಣಗೊಳ್ಳುತ್ತಾರೆ. ಬಾಯಿ ಕಟ್ಟುತ್ತದೆ, ‘ಶರಣು ಶರಣಾರ್ಥಿ’ ಎನ್ನುವ ಒಂದು ಮಾತು. ಇವರಿಬ್ಬರ ಬಗ್ಗೆ ಎಷ್ಟು ದೊಡ್ಡವರಾಗಿ ಬಿಟ್ಟರಲ್ಲ ಎನ್ನುವುದಕ್ಕಿಂತ ಈ ಕಾರ್ಯದಿಂದ ಇವರು ಎಷ್ಟು ನೋವು ಅನುಭವಿಸಿದರಲ್ಲ ಎಂದು ನೊಂದುಕೊಳ್ಳುತ್ತಾರೆ. ಹೀಗೆ ಎಲ್ಲರನ್ನೂ ಸಮಾನವಾಗಿ ಪ್ರೀತಿಸುವ, ನೋಯುವ ಗುಣದ ನಾಯಕರನ್ನು ಇನ್ನೆಲ್ಲಿ ಕಾಣಬೇಕು? ದೊಡ್ಡ ಜಾತಿಯಲ್ಲಿ ಹುಟ್ಟಿದ ಹೆಣ್ಣುಮಗಳನ್ನು ಸಣ್ಣ ಜಾತಿಯ ಹುಡುಗ ಪ್ರೀತಿಸಿದನೆಂದು ದೊಡ್ಡ ಜಾತಿಯ ತಂದೆ ತಾಯಿಗಳು ತಮ್ಮ ಹೊಟ್ಟೆಯಲ್ಲಿ ಹುಟ್ಟಿದ ಹೆಣ್ಣುಮಗಳನ್ನೇ ಉಸಿರುಗಟ್ಟಿಸಿ ಇನ್ಯಾವುದೋ ರೀತಿಯಲ್ಲಿ ಸಾಯಿಸುತ್ತಾರಲ್ಲ. ಅವರ ಹೊಟ್ಟೆಯಲ್ಲಿ ಕರುಳಿಲ್ಲವೇ! ಎದೆಯಲ್ಲಿ ಹೃದಯವಿಲ್ಲವೇ? ಜೀವಕ್ಕಿಂತ ಜಾತಿ ಧರ್ಮ ದೊಡ್ಡದಾಗಿಬಿಟ್ಟಿತ್ತಲ್ಲ? ಇಂತಹ ಘಟನೆಗಳು ಪತ್ರಿಕೆಯಲ್ಲಿ ಓದಿದಾಗ ‘ಕ್ರೌರ್ಯವೇ ನಮ್ಮ ಧರ್ಮದ ಮೂಲವಯ್ಯ’ ಎಂದು ಈ ಉಳಿದ ಸಮುದಾಯದ ಜನ ಮತ್ತೆ ಮತ್ತೆ ಸಾಬೀತು ಮಾಡುತ್ತಿದ್ದಾರೆ ಅನ್ನಿಸುತ್ತದೆ. ಲಂಕೇಶರು ಬರೆದ ‘ಇಟ್ಟಿಗೆ ಪವಿತ್ರವಲ್ಲ ಜೀವ ಪವಿತ್ರ’ ಲೇಖನ ನೆನಪಾಗುತ್ತದೆ. ಅನಂತತೆಯನ್ನು ದಿಟ್ಟಿಸುತ್ತಿದ್ದ ಹಾಗೇ ಕಾಣುವ ಕುವೆಂಪು ಅವರ ಭಾವ ಚಿತ್ರಗಳನ್ನು ನೋಡುತ್ತಿದ್ದರೆ ಅದೊಂದು ಪ್ರಶಾಂತವಾದ ಬೆಳದಿಂಗಳ ಹಾಗೇ ಕಾಣುತ್ತಾರೆ.
ಆದರೆ ಅವರೊಳಗೊಬ್ಬ ಕ್ರಾಂತಿಕಾರಕ ಕವಿಯ ಮನಸ್ಸು ಸಮಾಜದಲ್ಲಿರುವ ಮೌಢ್ಯ, ಕಂದಾಚಾರ, ಅಸ್ಪಶ್ಯತೆಯ ಆಚರಣೆ ಇವುಗಳ ವಿರುದ್ಧ ಅವರ ವಿಚಾರಧಾರೆಯ ಪ್ರಖರತೆಯನ್ನು ಮುಚ್ಚಿಡಲು ಸಾಧ್ಯವಿಲ್ಲ. ಅದು ಸದಾ ಉರಿಯುವ ಎಚ್ಚರದ ಬೆಳಕು. ಈ ಎಚ್ಚರದ ವಿಚಾರಗಳನ್ನು ನಾವು ಮತ್ತೆ ಮತ್ತೆ ಸಮಾಜಕ್ಕೆ ಹೇಳುತ್ತಲೇ ಇರಬೇಕು. ಮತ್ತೆ ಮತ್ತೆ ಬರೆಯುತ್ತಾ ನೆನಪಿಸಬೇಕು.
ಈಗ ನಾವು ಜನವರಿ ತಿಂಗಳಲ್ಲಿ ನಡೆಯುತ್ತಿದ್ದೇವೆ. ಜನವರಿಯ ಮೊದಲ ದಿನವನ್ನು ಈ ದೇಶದ ಅಸ್ಪಶ್ಯರೆನಿಸಿಕೊಂಡ ಸಮುದಾಯಕ್ಕೆ ವಿಜಯದಿವಸವನ್ನಾಗಿ ಮಾಡಿದವರು ಡಾ. ಭೀಮ ಸಾಹೇಬ ಅಂಬೇಡ್ಕರ್ರವರು. ನಮ್ಮ ನಾಡಿನಲ್ಲಿ 70ರ ದಶಕದಲ್ಲಿ ನೊಂದವರ, ಶೋಷಿತರ, ದಲಿತರ ವಿಮೋಚನೆಗಾಗಿ ಹುಟ್ಟಿದ ದಸಂಸ ಪ್ರಾರಂಭದ ದಿನಗಳಲ್ಲಿ ಭೀಮ ಸಾಹೇಬ ಅಂಬೇಡ್ಕರ್ರವರ ಹೆಸರು ಕಿವಿಯ ಮೇಲೆ ಬಿದ್ದಾಗ ನಾವೆಲ್ಲ ರೋಮಾಂಚನಗೊಂಡಿದ್ದೆವು.
ನಾವು ಭೀಮ ಸಾಹೇಬರ ಬಗ್ಗೆ ಆಗ ಕೇಳಿ ಬೆಳೆದವರು. ಆಗ ಭೀಮ ಸಾಹೇಬರ ಬಗ್ಗೆ ಅಷ್ಟೊಂದು ಪುಸ್ತಕಗಳು ಸಿಗುತ್ತಿರಲಿಲ್ಲ. ಈಗ ಭೀಮ ಸಾಹೇಬರ ಬದುಕು ಬರಹಗಳ ಬಗ್ಗೆ ಹೆಚ್ಚಿನ ಪುಸ್ತಕಗಳು, ಬರವಣಿಗೆಗಳು ಸಿಗುತ್ತವೆ. ನಾವು ಅವರನ್ನು ಓದಬೇಕು, ಓದಿದಷ್ಟು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಮತ್ತು ಕನಿಷ್ಠ ಅವರ ನಡೆ ನುಡಿಗಳನ್ನು ಅನುಸರಿಸಬೇಕು. ಇದು ಆಗಿದೆಯೇ ಎಂದು ಈ ಐದು ದಶಕಗಳನ್ನು ಹಿಂದಿರುಗಿ ನೋಡಬೇಕು. ಭೀಮ ಕೋರೆಗಾಂವ್ ವಿಜಯದಿವಸ್ ಬಗ್ಗೆ ಈಗ ತುಂಬಾ ಜನ ತಿಳಿದುಕೊಂಡಿದ್ದಾರೆ. ಆ ಕಾರಣಕ್ಕಾಗಿ ದಸಂಸ ಮುಂದುವರಿದ ಭಾಗದಂತೆ, ವಿಜಯ ದಿವಸವನ್ನು ನಾಡಿನ ಎಲ್ಲೆಡೆ ಆಚರಿಸುತ್ತಿದೆ. ನಿಜವಾಗಿ ನಾವು ಸ್ವಾಭಿಮಾನದಿಂದ ಆಚರಿಸಿಕೊಳ್ಳಬೇಕಾದ ದಿನ ಎಂದು ಅಭಿಮಾನದಿಂದ ಹೇಳಿಕೊಳ್ಳಬೇಕು. ಮಹಾರ್ ಸೇನೆಯ ಮಹಾ ಸೇನಾಧಿಪತಿ ಸಿದ್ದನಾಕ, ಪೇಶ್ವೆಯ ಎರಡನೇ ಬಾಜಿರಾಯ ಹತ್ತಿರ ಹೋಗಿ ‘ಈ ನೆಲದ ಮೂಲ ನಿವಾಸಿಗಳು ನಾವು. ನಮಗೆ ಇಂಗ್ಲಿಷರ ಜೊತೆ ಸೇರಿ ನಿಮ್ಮ ಎದುರು ಯುದ್ಧ ಮಾಡುವುದಕ್ಕಿಂತ, ನಿಮ್ಮೊಟ್ಟಿಗೆ ಸೇರಿ ಅವರ ವಿರುದ್ಧ ಹೋರಾಡುವುದು ಈ ನೆಲದ ನ್ಯಾಯ ಎಂಬುದು ನಮ್ಮ ಭಾವನೆ. ನಿಮ್ಮ ಸೈನ್ಯದಲ್ಲಿ ನಮ್ಮನ್ನು ಸೇರಿಸಿಕೊಳ್ಳಿ . ನಮ್ಮ ಜನರನ್ನು ಅಮಾನವೀಯವಾಗಿ ನಡೆಸಿಕೊಳ್ಳುವುದನ್ನು ತಪ್ಪಿಸಿ, ನಮ್ಮನ್ನು ಜನ ಸಾಮಾನ್ಯರಂತೆ ನೋಡಿಕೊಳ್ಳಿ’ ಎಂದಿದ್ದಕ್ಕೆ, ಜಾತಿಯ ವಿಷವನುಂಡು, ಕ್ರೌರ್ಯವನ್ನು ತೇಗುವ ಬಾಜಿರಾಯ, ‘ನಮ್ಮ ಜೊತೆಗೆ ಸೇರಿ ಯುದ್ಧ ಮಾಡುವುದು ಒತ್ತಟ್ಟಿಗಿರಲಿ. ನಿಮ್ಮನ್ನು ಇಲ್ಲಿಯವರೆಗೆ ಬಿಟ್ಟವರ್ಯಾರು? ನಿಮ್ಮನ್ನು ಸೈನ್ಯಕ್ಕೆ ಸೇರಿಸಿಕೊಳ್ಳುವುದು ಸಾಧ್ಯವಿಲ್ಲದ ಮಾತು. ನಿಮಗೆ ನಮ್ಮಿಂದ ಸೂಜಿ ಮೊನೆಯಷ್ಟು ಕೂಡ ಏನೂ ಸಿಗುವುದಿಲ್ಲ’ ಎನ್ನುವ ಅವಮಾನದ ಮಾತನ್ನಾಡುತ್ತಾನೆ.
ಇದರಿಂದ ಸಿಡಿದೆದ್ದ ಐನೂರು ಜನರಿದ್ದ ಮಹಾರ್ ಸೈನ್ಯ, ಪೇಶ್ವೆಯ ಇಪ್ಪತ್ತೆಂಟು ಸಾವಿರ ಸೈನಿಕರನ್ನು ಸದೆಬಡಿದು ಸೋಲಿಸಿತು. ಚರಿತ್ರೆಯಲ್ಲಿ ದಾಖಲಾದ ಈ ಪುಟಗಳನ್ನು ಭೀಮ ಸಾಹೇಬರು, ಇಂಗ್ಲೆಂಡಿನ ಬ್ರಿಟಿಷ್ ಗ್ರಂಥಾಲಯದಲ್ಲಿ ಓದಿ ನಮಗೆಲ್ಲ ಪರಿಚಯ ಮಾಡಿಸಿಕೊಟ್ಟಿದ್ದಾರೆ. ಆದರೆ ಈಗಲು ಇಂತಹ ಘಟನೆಗಳು ಬೇರೆ ಬೇರೆ ರೀತಿಯಲ್ಲಿ ಅಲ್ಲಲ್ಲಿ ನಡೆಯುತ್ತಿವೆ. ಕಳೆದ ಐದು ವರ್ಷಗಳಲ್ಲಿ ದಲಿತರ ಮೇಲೆ ಹತ್ತು ಸಾವಿರ ದೌರ್ಜನ್ಯದ ಕೇಸುಗಳು ದಾಖಲಾಗಿವೆ. ದಲಿತರಿಗೆ ಮನೆ ಕಟ್ಟಿಸಿಕೊಳ್ಳಲು ಸಾಧ್ಯವಾಗದಿರುವುದು, ನಡೆದಾಡುವ ದಾರಿಗಳನ್ನು ಮುಚ್ಚುವುದು, ಈ ಕಡೆ ಬಂದರೆ ನೋಡು ಎನ್ನುವ ಮಾತುಗಳಿಗೇನು ಕಡಿಮೆ ಇಲ್ಲ. ಎಚ್ಚೆತ್ತ ದಲಿತರು ಇಂತಹ ಘಟನೆಗಳ ವಿರುದ್ಧ ಹೋರಾಡಿ ಗೆಲ್ಲುವ ಅನಿವಾರ್ಯತೆ ಈಗಲೂ ಇದೆ. ಭೀಮ ಕೋರೆಗಾಂವ್ ವಿಜಯದಿವಸ ದಿನದಿಂದ ನಾವೆಲ್ಲ ಪ್ರೇರಣೆ ಪಡೆದುಕೊಂಡು ಸಂವಿಧಾನಾತ್ಮಕವಾಗಿ ನ್ಯಾಯ ಪಡೆದುಕೊಳ್ಳಲು ನಿರಂತರವಾಗಿ ಶ್ರಮಿಸಬೇಕಾದ ಅನಿವಾರ್ಯತೆ ನಮ್ಮೆಲ್ಲರ ಮೇಲಿದೆ.
ಬಾಬಾ ಸಾಹೇಬ ಅಂಬೇಡ್ಕರವರನ್ನು ಸೋಲಿಸಿದ ಜನ ನಾವೆನ್ನುವ ಅಪವಾದ ನಮ್ಮ ಮೇಲಿದೆ. ಆದ್ದರಿಂದ ಅಂಬೇಡ್ಕರ್ರನ್ನು ಮತ್ತೆ ಮತ್ತೆ ಸೋಲಿಸುವುದು ಬೇಡ. ಪ್ರತಿದಿನ ಅವರ ಆಶಯಗಳನ್ನು ಗೆಲ್ಲಿಸುತ್ತ ಹೋದರೆ ನಾವು ಗೆದ್ದಂತೆ ಆಗುತ್ತದೆ. ಅಸ್ಪಶ್ಯತೆ ನಾಶವಾಗಬೇಕಾದರೆ ಪೇಶ್ವೆಯಂತಹ ಜಾತಿ ಮನಸ್ಸುಗಳನ್ನು ಅಂಬೇಡ್ಕರ್ ವಿಚಾರಧಾರೆಯ ಮೂಲಕ ಹೊಡೆದೋಡಿಸಬೇಕು. ಇಲ್ಲದ್ದಿದ್ದರೆ ಪೇಶ್ವೆಗಳು ಮರುಕಳುಹಿಸುವ ದಿನ ದೂರವಿರುವುದಿಲ್ಲ. ಅದಕ್ಕಾಗಿ ಪ್ರಜಾಪ್ರಭುತ್ವವನ್ನು ಮತ್ತು ಸಂವಿಧಾನವನ್ನು ಉಳಿಸುವ, ಗೆಲ್ಲಿಸುವ ಪ್ರಯತ್ನ ಎಲ್ಲರದ್ದೂ ಎಂದು ತಿಳಿದುಕೊಳ್ಳಬೇಕು.
ಶಿಕ್ಷಣ ಪಡೆದುಕೊಳ್ಳುವುದು ಅಂದರೆ ಹುಲಿಯ ಹಾಲನ್ನು ಕುಡಿದಂತೆ. ಶಿಕ್ಷಣಕ್ಕೆ ಅಂತಹ ಶಕ್ತಿಯಿದೆ. ಶಿಕ್ಷಣದಿಂದ ವಿವೇಚನೆ, ಅರಿವು, ಜ್ಞಾನ ಮಾತ್ರವಲ್ಲದೆ ಅನ್ಯಾಯವನ್ನು ಪ್ರಶ್ನಿಸುವ ವಿಶ್ವಾಸ ಕೂಡ ಬರುತ್ತದೆ ಎನ್ನುವುದೇ ಭೀಮ ಸಾಹೇಬರ ಬಲವಾದ ನಂಬಿಕೆಯಾಗಿತ್ತು ಮತ್ತು ಅದು ನಿಜ ಕೂಡಾ. ನೀವು ಬಿಡಿಬಿಡಿಯಾಗಿದ್ದರೆ ಪ್ರಯೋಜನವಿಲ್ಲ. ಜೇನು ನೊಣಗಳ ಹಾಗೆ ಒಗ್ಗಟ್ಟಾಗಿದ್ದರೆ ಮಾತ್ರ ಗೆಲುವಿನ ಸಿಹಿ ಸಿಗುತ್ತದೆ ಎಂಬ ಸರಳ ಸೂತ್ರ ಹೇಳಿದ್ದರು. ಆದರೆ ಕಳೆದ ಐದು ದಶಕಗಳಲ್ಲಿ ದಲಿತರಿಗೆ ಆದ ಅನ್ಯಾಯಗಳ ವಿರುದ್ಧ ಒಟ್ಟಾಗಿ ಹೋರಾಡಿದ್ದು ತುಂಬ ಕಡಿಮೆಯೇ ಎನ್ನುವುದು ದಸಂಸ ಸಂಗಾತಿಗಳಿಗೆ ತಿಳಿಯದ ವಿಷಯವೇನಲ್ಲ. ಆದರೆ ದಸಂಸ ಈ ನೆಲದಲ್ಲಿ ಸಂವಿಧಾನಾತ್ಮಕವಾಗಿ ದಲಿತರಿಗೆ ಸಿಗಬೇಕಾದ ಸವಲತ್ತುಗಳಿಗಾಗಿ ಸರಕಾರಗಳ ವಿರುದ್ಧ, ಭೂ ಮಾಲಕರ ವಿರುದ್ಧ, ಪುರೋಹಿತಶಾಹಿ, ಬಂಡವಾಳಶಾಹಿಗಳ ವಿರುದ್ಧ ಹೋರಾಡಿದ್ದು ಕಡಿಮೆಯೇನು ಇಲ್ಲ. ಹೆಂಡ ಬೇಡ, ಭೂಮಿ ಬೇಕು ಎನ್ನುತ್ತಾ ದಸಂಸ, ದಲಿತರಿಗಾಗಿ ಭೂ ಹೋರಾಟದ ಆಂದೋಲನ ಬಹಳ ದೊಡ್ಡ ರೀತಿಯಲ್ಲಿ ಹಮ್ಮಿಕೊಂಡಿತ್ತು.
ಈ ಹೊತ್ತು ದಲಿತರಿಗೆ ಅಂಗೈ ಅಗಲ ನೆಲ ಸಿಕ್ಕಿದ್ದರೆ ಅದು ದಸಂಸ ಹೋರಾಟದಿಂದ. ಇಷ್ಟಾದರೂ ಕರ್ನಾಟಕದಲ್ಲಿ ದಲಿತರಿಗೆ ದಕ್ಕಿರುವ ಭೂಮಿ ಶೇ.0.58. ಕನಿಷ್ಠ ಶೇ.1ರಷ್ಟು ಭೂಮಿ ಪಡೆದುಕೊಳ್ಳಲಾರದ ದೌರ್ಭಾಗ್ಯ ದಲಿತರದ್ದು. ದಸಂಸ ಇನ್ನೊಂದು ಮಹತ್ವದ ಹೋರಾಟ ಮಾಡಿದ್ದು ‘ನಮ್ಮ ಮಕ್ಕಳು ವಸತಿ ಶಾಲೆಯಲ್ಲಿ ಕಲಿಯಬೇಕೆನ್ನುವುದಕ್ಕಾಗಿ’. ಈಗ ಪರಿಶಿಷ್ಟ ಜಾತಿ- ಪರಿಶಿಷ್ಟ ವರ್ಗದ ಮಕ್ಕಳು ವಸತಿ ಶಾಲೆಯಿಂದಾಗಿ ಓದುವ ವಾತಾವರಣ ಸೃಷ್ಟಿಯಾಗಿ, ಕರ್ನಾಟಕದಲ್ಲಿ ಈಗ ಎರಡುವರೆ ಲಕ್ಷ ಮಕ್ಕಳು ವಸತಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ ಎಂದು ಶಿಕ್ಷಣ ತಜ್ಞರು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರೂ ಆಗಿರುವ ಡಾ. ದೇವರಾಜ್ ಅವರು ಮಾಹಿತಿ ನೀಡುತ್ತಾರೆ. ಇಷ್ಟೊಂದು ಮಕ್ಕಳು ಕಲಿಕೆಯ ಹಿಂದಿರುವ ಶಕ್ತಿ ‘ಹೋಬಳಿಗೊಂದು ವಸತಿ ಶಾಲೆ’ ಯೋಜನೆ. ದಸಂಸ ಹೋರಾಟದ ಫಲಶೃತಿ ಇದಾಗಿದೆ ಮತ್ತು ಹೀಗೆ ಶಿಕ್ಷಣ ಪಡೆದ ಸಾವಿರಾರು ಮಕ್ಕಳು ದೇಶ ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಮಕ್ಕಳ ಮುಖದಲ್ಲಿ ಒಂದಿಷ್ಟು ಬೆಳಕಿದ್ದರೆ ಅದರ ಹಿಂದೆ ಅಂಬೇಡ್ಕರ್ ಕನಸು ಮತ್ತು ದಸಂಸ ಹೋರಾಟದ ಛಲವಿತ್ತು. ಇವೆಲ್ಲ ದಸಂಸ ಹೋರಾಟದ ಚರಿತ್ರೆಯ ಪುಟಗಳಲ್ಲಿ ದಾಖಲಾಗಲೇಬೇಕು. ಮರೆವು ವರವೂ ಹೌದು ಶಾಪವೂ ಹೌದು.
ಈ ದೇಶದ ಚರಿತ್ರೆಯ ಪುಟಗಳಲ್ಲಿ ದಲಿತರ ನೋವು, ಅವಮಾನ ದು:ಖದ ಪುಟಗಳೇ ಆಗಿವೆ. ಬಾಬಾ ಸಾಹೇಬರು ಗಮನಿಸದಿದ್ದರೆ ಭೀಮ ಕೋರೆಗಾಂವ್ ಯುದ್ಧದಲ್ಲಿ ಜಯಿಸಿದ ಚರಿತ್ರೆ ಕೂಡ ಜಗತ್ತಿಗೆ ತಿಳಿಯುತ್ತಿರಲಿಲ್ಲ. ಈ ದೇಶದಲ್ಲಿ ನಡೆದ ದಲಿತರ ಅಷ್ಟೂ ಸಾಹಸ ಶೌರ್ಯಗಳು ಮುಚ್ಚಿ ಹೋಗಿರಬಹುದು. ಆದರೆ ತಿಳಿದಿರುವಷ್ಟು ಇತಿಹಾಸವನ್ನು ಹೇಳಬೇಕಾದ ಕರ್ತವ್ಯ ನಮ್ಮೆಲ್ಲರದಾಗಿದೆ. ಇದೆಲ್ಲ ಈಗ ಏಕೆ ನೆನಪಾಯಿತೆಂದರೆ, 1973ರ ನವೆಂಬರ್1ರಲ್ಲಿ ಆಗಿನ ಮುಖ್ಯಮಂತ್ರಿಯಾಗಿದ್ದ ದೇವರಾಜ್ ಅರಸು ಅವರು, ಮೈಸೂರು ರಾಜ್ಯವನ್ನು ಕರ್ನಾಟಕವೆಂದು ನಾಮಕರಣ ಮಾಡಿ, ಮೂರನೇ ವಾರಕ್ಕೆ ಸರಿಯಾಗಿ ಟಿ.ಬಸವಲಿಂಗಪ್ಪ ಅವರು ಮಾಡಿದ ಒಂದು ಭಾಷಣಕ್ಕೆ ಕರ್ನಾಟಕದ ಬಹು ಭಾಗಗಳಿಂದ ವಿರೋಧ ವ್ಯಕ್ತವಾಯಿತು ಮತ್ತು ಮುಂದೆ ಕೆಲವು ದಿನಗಳಲ್ಲಿ ದಸಂಸ ಹುಟ್ಟಿಗೂ ಕಾರಣವಾಯಿತು. ಇದರಿಂದ ಮೈಮರೆತು ಮಲಗಿದ ಶೋಷಿತ ಜನಾಂಗಕ್ಕೆ ಎಚ್ಚರವಾಯಿತು. ಭೀಮ ಸಾಹೇಬರು ನಮ್ಮ ಮನೆ ಮನಗಳಲ್ಲಿ ಬರುವಂತಾಯಿತು. ಹೀಗೆಲ್ಲ ಬರೆಯಲು, ಮಾತಾಡಲು ಸಾಧ್ಯವಾಯಿತು. ಕೆಲವು ದಿನಗಳ ಹಿಂದೆ ನಮ್ಮ ನಾಡಿನ ಪ್ರಸಿದ್ಧ ಲೇಖಕರು, ಚಿಂತಕರು ಆದ ಡಾ.ನಟರಾಜ್ ಹುಳಿಯಾರ್ ಅವರು ಫೋನ್ ಮಾಡಿ ‘ಸುಬ್ಬು ನೀನು ಬಸವಲಿಂಗಯ್ಯನವರ ಮೇಲೆ ಪದ್ಯ ಬರೆದಿದ್ದೀಯ ಅಂತ ಕೇಳಿದರು. ನಾನು ‘ಇಲ್ಲ ಸಾರ್’ ಅಂದೆ. ಇಷ್ಟೆಲ್ಲ ಚಳುವಳಿಗೆ ಕಾರಣರಾದ ಅವರ ಬಗ್ಗೆ ಕವಿತೆ ಬರೆಯದೆ ಇರುವುದು ನಮ್ಮ ಲೋಪವೇ ಅನ್ನಿಸಿತು. ಮಲಹೊರುವ ಅನಿಷ್ಠ ಪದ್ಧತಿಯನ್ನು ರಾಜ್ಯದಲ್ಲಷ್ಟೇ ಅಲ್ಲ ದೇಶದಲ್ಲೇ ನಿಷೇಧ ಮಾಡಿದ ಕಾನೂನನ್ನು ಜಾರಿಗೆ ತರಲು ಕಾರಣರಾದವರು ಟಿ.ಬಸವಲಿಂಗಪ್ಪನವರು. ನಾವು ಕವಿತೆ ಬರೆಯಲಿಲ್ಲ ಸರಿ. ಆದರೆ ‘‘ಟಿ.ಬಸವಲಿಂಗಪ್ಪ ಮತ್ತು ಬೂಸಾ ಚಳವಳಿ -ಕಾಲು ಶತಮಾನ’’ ಈ ಪುಸ್ತಕವನ್ನು ಲಕ್ಷ್ಮೀ ನಾರಾಯಣ ನಾಗವಾರರವರು ಹೊರತರುವಲ್ಲಿ ನಮ್ಮಂಥವರ ಪಾತ್ರ ಕೂಡ ಇತ್ತು ಎನ್ನುವುದು ಸಮಾಧಾನದ ಸಂಗತಿ. ನಟರಾಜ್ ಹುಳಿಯಾರ್ರವರು ಬಸವಲಿಂಗಪ್ಪನಂಥ ಕ್ರಾಂತಿಕಾರಿ ರಾಜಕಾರಣಿಯ ಬಗ್ಗೆ ಒಂದು ಕವಿತೆ ಬರೆಯದಿದ್ದರೆ ನೀ ಎಂಥ ಕವಿ ಕಣಯ್ಯ ಎಂದಿದ್ದು ಸರಿ ಅನ್ನಿಸಿತು.
ಮುಂದಿನ ದಿನಗಳಲ್ಲಿ ಬರೆಯುತ್ತೇನೆ ಸರ್ ಎಂದೆ. ಈ ಐದು ದಶಕಗಳಲ್ಲಿ ಸೋಲು ಗೆಲುವುಗಳು ಏನೇ ಇರಲಿ ಬಸವಲಿಂಗಪ್ಪ, ಭೀಮ ಸಾಹೇಬರನ್ನು ಮರೆತಿಲ್ಲ , ಮರೆಯಕೂಡದು ಕೂಡ. ಅವರನ್ನು ಅವರ ವಿಚಾರಗಳಿಂದಲೇ ಗೆಲ್ಲಿಸುತ್ತಿರಬೇಕು. ಇಲ್ಲದಿದ್ದರೆ ನಮ್ಮ ಸೋಲು ಖಚಿತ. ನಮ್ಮ ವಿರೋಧದ ಭೂತ ನಮ್ಮನ್ನು ತಿಂದು ಹಾಕಲು ರೆಡಿಯಾಗಿ ನಿಂತಿದೆ. ಆ ಭೂತದ ಬಲೂನಿಗೆ ನಾವು ಸೂಜಿಯಾದರೆ ಸಾಕು. ಪ್ರಜಾಪ್ರಭುತ್ವ , ಸಂವಿಧಾನ ನಮ್ಮ ಉಸಿರಾಗಿ ಉಳಿಯುತ್ತದೆ ಎಂದು ಹೇಳುತ್ತ ಇವತ್ತು ಸೋಮವಾರ ನಾಡಿನ ನನ್ನ ಎಲ್ಲಾ ಬಂಧುಗಳಿಗೆ ಸಂಕ್ರಾತಿಯ ಶುಭಾಷಯಗಳು. ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡು ಎನ್ನುವ ನೆಲದ ಮಾತನ್ನು ಎದೆಗೆ ಇಳಿಸಿಕೊಳ್ಳೋಣ. ಹಾಗೇ ಬದುಕೋಣ.