ಮಹಾರಾಷ್ಟ್ರ ರಾಜಕೀಯ: ಬಿಜೆಪಿ ಆಟದಲ್ಲಿ ಉಳಿದು ಗೆಲ್ಲುವವೆ ಪ್ರಾದೇಶಿಕ ಪಕ್ಷಗಳು?

Update: 2023-07-04 13:47 GMT

- ಹರೀಶ್ ಎಚ್.ಕೆ.

‘‘ನಾವು ಅಧಿಕಾರಕ್ಕೆ ಬಂದರೆ ಅಜಿತ್ ಪವಾರ್ ಜೈಲಿಗೆ ಹೋಗಿ ಮೈಮುರಿದು ಕೆಲಸ ಮಾಡಬೇಕಾಗುತ್ತದೆ’’ ಎಂದು ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಈ ಹಿಂದೆ ಹೇಳಿದ್ದರು. ಈಗ ದೇವೇಂದ್ರ ಫಡ್ನವೀಸ್ ಇರುವ ಸರಕಾರದಲ್ಲಿಯೇ ಅದೇ ಅಜಿತ್ ಪವಾರ್ ಉಪಮುಖ್ಯಮಂತ್ರಿ!

ಬೇರೆ ಯಾರೋ ಅಲ್ಲ, ಈ ದೇಶದ ಪ್ರಧಾನಿ ಕೇವಲ 5 ದಿನಗಳ ಹಿಂದೆ ಭೋಪಾಲ್ನಲ್ಲಿ ಸಾರ್ವಜನಿಕ ಸಭೆಯಲ್ಲಿಯೇ ಶರದ್ ಪವಾರ್ ಅವರ ಎನ್ಸಿಪಿ ವಿರುದ್ಧ 70 ಸಾವಿರ ಕೋಟಿ ರೂ. ಹಗರಣಗಳ ಗಂಭೀರ ಆರೋಪ ಮಾಡುತ್ತಾರೆ. ಈ ಹಗರಣಗಳ ವಿರುದ್ಧ ವಿರುದ್ಧ ಸಮಗ್ರ ತನಿಖೆ ಖಚಿತವೆಂದೂ ಅಬ್ಬರಿಸುತ್ತಾರೆ. ಅದಕ್ಕೆ ನೆರೆದಿದ್ದ ಸಾವಿರಾರು ಬಿಜೆಪಿ ಕಾರ್ಯಕರ್ತರು, ಬೆಂಬಲಿಗರಿಂದ ಭಾರೀ ಹರ್ಷೋ ದ್ಗಾರ, ಘೋಷಣೆ, ಕರತಾಡನ ವ್ಯಕ್ತವಾಗುತ್ತದೆ. ಅದರ ಬೆನ್ನಿಗೇ, ಭ್ರಷ್ಟಾಚಾರಿಗಳ ವಿರುದ್ಧ ಮೋದಿ ಮಾಸ್ಟರ್ ಸ್ಟ್ರೋಕ್ ಎಂದು ಬಿಜೆಪಿ ಐಟಿ ಸೆಲ್ ಉದ್ಗಾರ ತೆಗೆಯುತ್ತದೆ.

ಇವೆಲ್ಲ ಆಗಿ ಐದನೇ ದಿನಕ್ಕೆ ಎನ್ಸಿಪಿ ನಾಯಕ, ಆ ಭಾರೀ ಹಗರಣ ಸರಣಿಯ ರೂವಾರಿ ಎನ್ನಲಾದ ಅಜಿತ್ ಪವಾರ್ ಬಿಜೆಪಿ ಮೈತ್ರಿಕೂಟದ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗು ತ್ತಾರೆ. ಅವರ ಜೊತೆ ಅವರದೇ ಪಕ್ಷದ ಇನ್ನೂ ಎಂಟು ಮಂದಿ ಸಚಿವರೂ ಆಗುತ್ತಾರೆ.

ಈಗ ಏಳುವ ಪ್ರಶ್ನೆಗಳೆಂದರೆ, ಭೋಪಾಲ್ನಲ್ಲಿ ಪ್ರಧಾನಿ ನೀಡಿದ್ದ ಸಮಗ್ರ ತನಿಖೆಯ ಭರವಸೆಯ ಕಥೆಯೇನು? ಆ 70 ಸಾವಿರ ಕೋಟಿ ರೂ. ಹಗರಣಗಳ ಆರೋಪಗಳೆಲ್ಲಾ ಸುಳ್ಳೇ? ಅಥವಾ ಅಂಥದೊಂದು ಆರೋಪ ಮಾಡಿ ತನಿಖೆಯ ಮಾತನಾಡಿದ್ದೇ ಅವರು ಬಂದು ತಮ್ಮ ಸರಕಾರವನ್ನು ಬೆಂಬಲಿಸಲು ಸೂಚಿಸುವುದಕ್ಕಾಗಿತ್ತೆ?

ಇನ್ನೂ ಒಂದು ತಮಾಷೆ ಗಮನಿಸಬೇಕು. ‘‘ನಾವು ಅಧಿಕಾರಕ್ಕೆ ಬಂದರೆ ಅಜಿತ್ ಪವಾರ್ ಜೈಲಿಗೆ ಹೋಗಿ ಮೈಮುರಿದು ಕೆಲಸ ಮಾಡಬೇಕಾಗುತ್ತದೆ’’ ಎಂದು ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಈ ಹಿಂದೆ ಹೇಳಿದ್ದರು. ಈಗ ದೇವೇಂದ್ರ ಫಡ್ನವೀಸ್ ಇರುವ ಸರಕಾರದಲ್ಲಿಯೇ ಅದೇ ಅಜಿತ್ ಪವಾರ್ ಉಪಮುಖ್ಯಮಂತ್ರಿ!

ಮಹಾರಾಷ್ಟ್ರದಲ್ಲಿ ರವಿವಾರ ನಡೆದಿರುವ ಬೆಳವಣಿಗೆ ಪಕ್ಷಾಂತರ, ಆಪರೇಷನ್ ಕಮಲ ಇತ್ಯಾದಿ ಎಲ್ಲ ವ್ಯಾಖ್ಯೆಗಳನ್ನು, ಮಿತಿಗಳನ್ನು ಮೀರಿದೆ. ಕೇವಲ ಒಂದೇ ವರ್ಷದ ಅವಧಿಯಲ್ಲಿ ಆ ರಾಜ್ಯದ ಎರಡು ಪ್ರಮುಖ ಹಾಗೂ ಅಷ್ಟೇ ಪ್ರಭಾವಿ ಪ್ರಾದೇಶಿಕ ಪಕ್ಷಗಳನ್ನು ಬಿಜೆಪಿ ನುಂಗಿ ನೀರು ಕುಡಿದಿದೆ. ಈಗಾಗಲೇ ರಾಜ್ಯದಲ್ಲಿದ್ದ ಶಿವಸೇನೆ- ಕಾಂಗ್ರೆಸ್-ಎನ್ಸಿಪಿ ಮೈತ್ರಿ ಸರಕಾರ ಉರುಳಿಸಿ, ಶಿವಸೇನೆಯ 57 ಶಾಸಕರಲ್ಲಿ 40 ಶಾಸಕರನ್ನು ತಂದು ಬಿಜೆಪಿ-ಶಿವಸೇನೆ ಮೈತ್ರಿ ಸರಕಾರ ರಚಿಸಿ ಏಕನಾಥ್ ಶಿಂದೆಯನ್ನು ಸಿಎಂ ಮಾಡಿತ್ತು ಬಿಜೆಪಿ. ಆ ಮೂಲಕ ಶಿವಸೇನೆಯ ಉದ್ಧವ್ ಠಾಕ್ರೆಗೆ ಪಕ್ಷವೇ ಇಲ್ಲದಂತಾಗಿತ್ತು.

ಅದಾಗಿ ಒಂದೇ ವರ್ಷದಲ್ಲಿ ಎನ್ಸಿಪಿಯ 54 ಶಾಸಕರಲ್ಲಿ ಗಮನಾರ್ಹ ಸಂಖ್ಯೆಯ ಶಾಸಕರನ್ನು ತಂದು, ಅಜಿತ್ ಪವಾರ್ ಅವರನ್ನು ಡಿಸಿಎಂ ಮಾಡಿದೆ. ಅಲ್ಲಿಗೆ ಶರದ್ ಪವಾರ್ ಅವರಿಗೇ ಪಕ್ಷವಿಲ್ಲದಂತೆ ಮಾಡಿದೆ ಮೋದಿ-ಶಾ ಜೋಡಿಯ ಬಿಜೆಪಿ.

288 ಸದಸ್ಯ ಬಲದ ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಈಗಾಗಲೇ ಬಿಜೆಪಿ-ಶಿವಸೇನೆಗೆ ಬಹುಮತ ಇತ್ತು. ಈಗ ಅದರ ಜೊತೆಗೆ ಎನ್ಸಿಪಿ ಶಾಸಕರ ಬೆಂಬಲವೂ ಸಿಕ್ಕಿತು. ಎನ್ಸಿಪಿಯ 40 ಶಾಸಕರು ಬೆಂಬಲ ನೀಡುತ್ತಿರುವುದು ಖಚಿತ ಎಂದಾದರೆ ಸರಕಾರಕ್ಕೆ ಇನ್ನೂರಕ್ಕೂ ಹೆಚ್ಚು ಸ್ಥಾನಗಳ ಬಹುಮತವಿದೆ.

ಇದರ ಅರ್ಥವಿಷ್ಟೆ, ಮತದಾರರು ಯಾವ ಪಕ್ಷಕ್ಕೆ ಮತ ಹಾಕಿದರೂ ಬರುವುದು ಬಿಜೆಪಿ ಸರಕಾರವೇ. ಬಿಜೆಪಿ ವಿರುದ್ಧವೇ ಮತ ಹಾಕಿದರೂ ಅಧಿಕಾರಕ್ಕೆ ಬರುವುದು ಬಿಜೆಪಿ ಸರಕಾರವೇ. ಅಲ್ಲದೆ, ಬಿಜೆಪಿ ಸರಕಾರಕ್ಕೆ ಬಹುಮತ ಸಿಕ್ಕಿದರೆ ಮಾತ್ರ ಸಾಲದು, ವಿಪಕ್ಷವೇ ಇರಬಾರದು. ಅಲ್ಲಿಯವರೆಗೂ ಬಿಜೆಪಿ ಆಪರೇಷನ್ ನಡೆಯುತ್ತಲೇ ಇರುತ್ತದೆ.

ಅತ್ಯಂತ ಗಂಭೀರ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಅಜಿತ್ ಪವಾರ್ ಸದಾ ಕಾಲ ಅಧಿಕಾರ ದಾಹಿಯಾಗಿಯೇ ಇದ್ದವರು. ಎನ್ಸಿಪಿ ನಾಯಕ ಶರದ್ ಪವಾರ್ ಅವರಿಗೆ ಗಂಟಲಲ್ಲಿ ಸಿಕ್ಕ ಮುಳ್ಳಿನಂತೆ ಇದ್ದವರು. ಇದೀಗ ಆ ಮುಳ್ಳು ಬೆನ್ನಿಗೆ ಇರಿದಿದೆ. ಅಜಿತ್ ಪವಾರ್ ಡಿಸಿಎಂ ಆಗುವಾಗ ಅವರ ಜೊತೆ ಪ್ರಮಾಣ ವಚನ ಸ್ವೀಕರಿಸಿದ ಎಂಟು ಮಂದಿಯ ಪೈಕಿ ಹಲವರ ಮೇಲೆಯೂ ಗಂಭೀರ ಭ್ರಷ್ಟಾಚಾರ ಆರೋಪಗಳಿವೆ. ಸಚಿವರಾಗಿ ಪ್ರಮಾಣ ಸ್ವೀಕರಿಸಿದ ಛಗನ್ ಭುಜಬಲ್ ಅವರನ್ನು ಭ್ರಷ್ಟಾಚಾರ ಆರೋಪದಲ್ಲಿ ಬಿಜೆಪಿ ಸರಕಾರವೇ ಜೈಲಿಗೆ ಕಳಿಸಿತ್ತು. ಇನ್ನೊಬ್ಬ ಹೊಸ ಸಚಿವ ಹಸನ್ ಮುಶ್ರಿಫ್ ಮೇಲೆ ಮನಿ ಲಾಂಡರಿಂಗ್ ಸಂಬಂಧಿತ ಈ.ಡಿ. ಪ್ರಕರಣವಿದೆ. ನಲ್ವತ್ತು ಸಾವಿರ ರೈತರ ಹಣ ನುಂಗಿಹಾಕಿರುವ ಗಂಭೀರ ಆರೋಪ ಇವರ ಮೇಲಿದೆ. ಮೋದಿ-ಶಾ ಅವರ ಸರಕಾರದಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ಸಚಿವರಿಲ್ಲ. ಅವರ ಪಕ್ಷದಲ್ಲಿ ಮುಸ್ಲಿಮ್ ಲೋಕಸಭಾ ಸದಸ್ಯರಿಲ್ಲ. ರಾಜ್ಯಸಭಾ ಸದಸ್ಯರೂ ಇಲ್ಲ. ಆದರೆ ಮಹಾರಾಷ್ಟ್ರದಲ್ಲಿ ಕಳಂಕಿತ ಹಸನ್ ಮುಶ್ರಿಫ್ ಅವರನ್ನು ಸಚಿವರಾಗಿ ಒಪ್ಪಿಕೊಳ್ಳಲು ಬಿಜೆಪಿಗೆ, ಸಂಘ ಪರಿವಾರಕ್ಕೆ ಯಾವುದೇ ಆಕ್ಷೇಪವಿಲ್ಲ.

ಇನ್ನು ಸ್ವತಃ ಹಸನ್ ಮುಶ್ರಿಫ್ ಕೂಡ ಬಿಜೆಪಿ ರಾಜ್ಯದಲ್ಲಿ ಕೋಮುವಾದ ಹರಡುತ್ತಿದೆ ಎಂದು ಕೆಲವೇ ದಿನಗಳ ಹಿಂದೆ ಅದರ ವಿರುದ್ಧ ಮೆರವಣಿಗೆ ಮಾಡಿದ್ದರು. ಆ ರಾಜ್ಯದಲ್ಲಿ ಇತ್ತೀಚೆಗೆ ಕೋಮು ಹಿಂಸಾಚಾರದ ಘಟನೆಗಳು ತಡೆಯಿಲ್ಲದೆ ನಡೆಯುತ್ತಿವೆ. ಮುಸ್ಲಿಮರನ್ನು ಗುರಿ ಮಾಡಲಾಗುತ್ತಿದೆ. ಆದರೆ ಹಸನ್ ಅವರಿಗೂ ಬಿಜೆಪಿ ಸರಕಾರದಲ್ಲಿ ಸಚಿವರಾಗಲು ಯಾವುದೇ ಸಮಸ್ಯೆಯಿಲ್ಲ. ಎಲ್ಲ ಶಾಸಕರು, ಸಂಸದರಿಗೂ ಅಷ್ಟೆ. ಅಧಿಕಾರ ಸಿಗಬೇಕು, ಜೈಲು ತಪ್ಪಬೇಕು. ಅದಕ್ಕಾಗಿ ಅವರು ಯಾರ ಜೊತೆಗೂ ಸೇರುತ್ತಾರೆ.

ಅಜಿತ್ ಪವಾರ್ 2019ರಲ್ಲಿಯೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರು. ಅದಾಗಿ ಕೇವಲ 48 ಗಂಟೆಗಳಲ್ಲಿ ಅವರ ವಿರುದ್ಧದ 9 ಪ್ರಕರಣಗಳಲ್ಲಿ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ ಕ್ಲೀನ್ ಚಿಟ್ ನೀಡಿತ್ತೆಂಬುದು ವರದಿಯಾಗಿತ್ತು. ಇದೀಗ ಮತ್ತೊಮ್ಮೆ ಅವರು ಬಿಜೆಪಿ ಜೊತೆ ಕೈಜೋಡಿಸಿದ್ದಾರೆ. ಗಂಭೀರ ಭ್ರಷ್ಟಾಚಾರ ಆರೋಪಗಳನ್ನು ಹೊತ್ತ ಎನ್ಸಿಪಿ ನಾಯಕರು ಬಿಜೆಪಿ ಸೇರಿ ಪರಿಶುದ್ಧರಾಗಲು ಬಯಸಿದ್ದಾರೆ ಎನ್ನುವುದು ರಾಜಕೀಯ ವಲಯದಲ್ಲಿನ ಮಾತು.

ಪ್ರಧಾನಿ ಮೋದಿ ಭಾಷಣಗಳಲ್ಲಿ ನೂರಾರು ಬಾರಿ ಹೇಳಿದ ಹಾಗೆ ನಿಜವಾಗಿಯೂ ಮನಸ್ಸು ಮಾಡಿದರೆ ಸಿಬಿಐ, ಐಟಿ ಹಾಗೂ ಈ.ಡಿ. ಬಳಸಿಕೊಂಡು ಕಳೆದ ಒಂಭತ್ತು ವರ್ಷಗಳಲ್ಲಿ ದೇಶದ ಎಲ್ಲ ಭ್ರಷ್ಟ ರಾಜಕಾರಣಿಗಳನ್ನು ಜೈಲಿಗೆ ಕಳಿಸಿಬಿಡಬಹುದಿತ್ತು. ಆದರೆ ಈಗ ಈ.ಡಿ., ಸಿಬಿಐಗಳೆಲ್ಲ ಬಳಕೆಯಾಗುತ್ತಿರುವುದು ಭ್ರಷ್ಟಾಚಾರ ನಿಗ್ರಹಕ್ಕಲ್ಲ. ಬದಲಾಗಿ, ವಿಪಕ್ಷದವರನ್ನು ತಮ್ಮ ಕಡೆ ಸೆಳೆದುಕೊಳ್ಳುವುದಕ್ಕೆ.

ಮೊನ್ನೆ ಬಿಹಾರದಲ್ಲಿ ನಡೆದ ವಿಪಕ್ಷಗಳ ಮಹಾ ಮೈತ್ರಿಕೂಟ ರಚನೆಯ ಸಭೆಯಲ್ಲಿ ಎನ್ಸಿಪಿ ನಾಯಕ ಪ್ರಫುಲ್ ಪಟೇಲ್ ಕೂಡ ಭಾಗವಹಿಸಿದ್ದರು. ಈಗ ಆ ಪಕ್ಷದ ಹೆಚ್ಚಿನವರೆಲ್ಲ ಬಿಜೆಪಿ ಜೊತೆ ಸೇರಿದ್ದಾರೆ. ಇನ್ನು ಪ್ರಫುಲ್ ಪಟೇಲ್ ಮೇಲೂ ಹಲವು ಭ್ರಷ್ಟಾಚಾರ ಪ್ರಕರಣಗಳಿವೆ. 2024ರಲ್ಲಿ ಎಲ್ಲ ವಿಪಕ್ಷಗಳು ಒಂದಾಗಿ ಹೋರಾಡಬೇಕಿರುವುದು ಬಿಜೆಪಿ ವಿರುದ್ಧ ಅಲ್ಲ, ಈ.ಡಿ. ವಿರುದ್ಧ ಎಂದು ವಿಶ್ಲೇಷಕರು ವ್ಯಂಗ್ಯವಾಡುತ್ತಿರುವುದು ಈ ಅರ್ಥದಲ್ಲಿಯೇ.

ಶರದ್ ಪವಾರ್ ಮಹಾ ಚಾಣಾಕ್ಷ ರಾಜಕಾರಣಿ ಎಂಬುದು ನಿಜ. ಆದರೆ ಈಗಿನ ಬೆಳವಗೆ ನೋಡಿದರೆ ಮಹಾರಾಷ್ಟ್ರದ ರಾಜಕೀಯದ ಮೇಲಿನ ಅವರ ಹಿಡಿತ ಸಂಪೂರ್ಣ ಸಡಿಲವಾಗಿರುವಂತೆ ಕಾಣುತ್ತಿದೆ. ಅವರ 5 ದಶಕಗಳ ರಾಜಕೀಯ ಜೀವನದಲ್ಲಿ ಇದು ಬಹುದೊಡ್ಡ ಹಿನ್ನಡೆ ಎಂದೇ ಬ್ಣಸಲಾಗಿದೆ.

ತಮ್ಮ ಪಕ್ಷಗಳನ್ನು ಉಳಿಸಿಕೊಳ್ಳಲು ಆಗದ ಉದ್ಧವ್ ಠಾಕ್ರೆ ಹಾಗೂ ಶರದ್ ಪವಾರ್ ಈಗ ಜನರ ಬಳಿ ಹೋಗಿ ಹೊಸತಾಗಿ ಪಕ್ಷ ಕಟ್ಟುತ್ತೇವೆ, ಬಿಜೆಪಿಯ ಅನ್ಯಾಯವನ್ನು ಮನವರಿಕೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಇದು ಸುಲಭದ ಮಾತಲ್ಲ. ಆದರೆ ಅಸಾಧ್ಯವೂ ಅಲ್ಲ. ಅವರಿಬ್ಬರೂ ನಿಜಕ್ಕೂ ಬೀದಿಗಿಳಿದು ಹೋರಾಡಿ, ಮರಾಠಾ ಅಸ್ಮಿತೆಯ, ಸ್ವಾಭಿಮಾನದ ಹಾಗೂ ಅದಕ್ಕಾದ ಅವಮಾನದ ಬಗ್ಗೆ ರಾಜಕೀಯ ಪ್ರಜ್ಞೆ ಬೆಳೆಸುವಲ್ಲಿ ಯಶಸ್ವಿಯಾದರೆ ಬಿಜೆಪಿಯನ್ನು ಸೋಲಿಸುವುದು ಅಸಾಧ್ಯವಲ್ಲ. ಇನ್ನೊಂದೆಡೆ, ಈಗ ಬಿಜೆಪಿ ಜೊತೆಗೂ ಏಕನಾಥ್ ಶಿಂದೆ ಹಾಗೂ ಅಜಿತ್ ಪವಾರ್ ಇದ್ದಾರೆ. ಹಾಗಾಗಿ ಬಿಜೆಪಿಯೂ ಮರಾಠಾ ರಾಜಕೀಯಕ್ಕೆ ಇಳಿದರೆ ಅಚ್ಚರಿಯಿಲ್ಲ.

ಆದರೆ ಅಜಿತ್ ಪವಾರ್ ಬಂದ ಮೇಲೆ ಸಂಖ್ಯಾ ಬಲ ಇದೆಯೆಂದು ಶಿಂದೆಯನ್ನು ಕೆಳಗಿಳಿಸಿ ಮತ್ತೆ ದೇವೇಂದ್ರ ಫಡ್ನವಿಸ್ ಅವರನ್ನೇ ಮುಖ್ಯಮಂತ್ರಿ ಮಾಡಿದರೆ ಮಹಾರಾಷ್ಟ್ರದಲ್ಲಿ ಮರಾಠಾ / ಬ್ರಾಹ್ಮಣ ರಾಜಕಾರಣ ಗರಿಗೆದರುವ ಸಾಧ್ಯತೆ ಇದೆ. ಅಜಿತ್ ಪವಾರ್ ಎನ್ಸಿಪಿ ಶಾಸಕರೊಂದಿಗೆ ಸರಕಾರಕ್ಕೆ ಸೇರ್ಪಡೆಯಾದರೆ ತಾನು ಹೊರ ನಡೆಯುವುದಾಗಿ ಏಕನಾಥ್ ಶಿಂದೆ ಬೆದರಿಕೆಯೊಡ್ಡಿದ ಕೆಲ ದಿನಗಳಲ್ಲೇ ಸರಕಾರದಲ್ಲಿ ಅಜಿತ್ ಪವಾರ್ ಸೇರ್ಪಡೆ ಆಗಿರುವ ಹಿನ್ನೆಲೆಯಲ್ಲಿಯೂ ಮುಂದಿನ ಬೆಳವಣಿಗೆಗಳು ಕುತೂಹಲಕಾರಿ. ದೇವೇಂದ್ರ ಫಡ್ನವೀಸ್ ಮತ್ತು ಏಕನಾಥ್ ಶಿಂದೆ ಮಧ್ಯೆ ಮುಸುಕಿನ ಗುದ್ದಾಟವಿದೆ ಎಂಬ ಗುಸುಗುಸು ಕೂಡ, ಸಂಭಾವ್ಯ ಬೆಳವಣಿಗೆಗೆ ಪುಷ್ಟಿ ನೀಡುವಂತಿವೆ. ಸರಕಾರದಲ್ಲಿ ಬಿಜೆಪಿಯ ಹಸ್ತಕ್ಷೇಪ ಹೆಚ್ಚಿದೆ ಎನ್ನುವ ಆರೋಪಗಳು ಶಿಂದೆ ಬಣದಿಂದ ಆಗಾಗ ಕೇಳಿಬರುತ್ತಿದ್ದವು. ಮತ್ತೊಂದೆಡೆ, ಶಿಂದೆ ಬಣದ 10 ಸಚಿವರನ್ನು ಸಚಿವ ಸಂಪುಟ ವಿಸ್ತರಣೆ ವೇಳೆ ಕೈಬಿಡಬೇಕು ಎನ್ನುವ ಒತ್ತಾಯ ಬಿಜೆಪಿ ನಾಯಕರದ್ದು. ಈಗ ಸರಕಾರದ ಜೊತೆ ಕೈಜೋಡಿಸಿರುವ ಎನ್ಸಿಪಿಯ 9 ಮಂದಿ ಶಿಂದೆ ಬಣದವರಿಗೆ ಪರ್ಯಾಯವಾಗಿ ಬಂದವರೇ ಎಂಬ ಪ್ರಶ್ನೆಯೂ ಎದ್ದಿದೆ.

ಅಂತೂ ಮಹಾರಾಷ್ಟ ರಾಜಕಾರಣ ಈಗ ನಿರ್ಣಾಯಕ ಕಾಲ ಘಟ್ಟಕ್ಕೆ ಬಂದು ನಿಂತಿದೆ. ಅಲ್ಲಿನ ಎರಡು ಪ್ರಮುಖ ಪ್ರಾದೇಶಿಕ ಪಕ್ಷಗಳು ಈಗ ಹೆಸರಿಗೆ ಮಾತ್ರ ಇವೆ. ಆ ಪಕ್ಷಗಳ ಶಾಸಕರೆಲ್ಲರೂ ಬಿಜೆಪಿ ಹಿಡಿತದಲ್ಲಿದ್ದಾರೆ. ಉದ್ಧವ್ ಠಾಕ್ರೆ ಹಾಗೂ ಶರದ್ ಪವಾರ್ ಸೋಲೊಪ್ಪಿಕೊಳ್ಳದೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನರ ವಿಶ್ವಾಸ ಗಳಿಸಿ ಮತ್ತೆ ಶಿವಸೇನೆ ಹಾಗೂ ಎನ್ಸಿಪಿಯನ್ನು ಹೊಸದಾಗಿ ಮೇಲೆತ್ತಿದರೆ ಅದೊಂದು ಐತಿಹಾಸಿಕ ದಾಖಲೆಯಾಗಲಿದೆ. ಇಲ್ಲದಿದ್ದರೆ ಆ ಎರಡೂ ಪಕ್ಷಗಳ ಕಾಲ ಮುಗಿದುಹೋದಂತೆಯೇ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!