ಭೀಮಾ ಕೋರೆಗಾಂವ್ ಯುದ್ಧ ಮತ್ತು ವಿಮೋಚನೆಯ ಸಂದೇಶಗಳು

ಕೋರೆಗಾಂವ್ ಕದನದಲ್ಲಿನ ಮಹರ್‌ಗಳ ವಿಜಯ ಇನ್ನಿಲ್ಲದಂತೆ ಜಾತಿ ವ್ಯವಸ್ಥೆ ಹಾಗೂ ಜಾತಿ ರಾಜ್ಯಾಡಳಿತ ಮತ್ತು ರಾಜಕೀಯ ಆಡಳಿತದ ಮೇಲೆ ಅಪ್ಪಳಿಸಿತು ಮತ್ತು ಅದರ ಅಡಿಪಾಯವನ್ನು ಅಲುಗಾಡಿಸಿತು. ಇದು ಮಹರ್‌ಗಳ ಕುತ್ತಿಗೆಗೆ ಮಣ್ಣಿನ ಮಡಿಕೆ ಮತ್ತು ಬೆನ್ನಿಗೆ ಪೊರಕೆಯನ್ನು ಕಟ್ಟಿಸಿದ ರಾಜ್ಯಾಡಳಿತ ಮತ್ತು ಕಂದಾಯ ಆಡಳಿತದ ಕೆನ್ನೆಗೆ ಬಾರಿಸಿದ ವಿಜಯ - ಶತಮಾನಗಳ ಸೇಡು ಆಗಿತ್ತು ಎಂಬುದಾಗಿ ಮಹರ್ ಹಾಗೂ ಇತರ ಶೋಷಿತ ದಲಿತರ ಗ್ರಹಿಕೆಯಾಗಿದೆ.

Update: 2024-01-01 06:58 GMT
Editor : Ismail | Byline : ರಘು ಧರ್ಮಸೇನ

ಪ್ರತೀ ವರ್ಷ ಜನವರಿ 1ರಂದು ಪೂನಾ ಸಮೀಪದ ಕೋರೆಗಾಂವ್ ಸೈನಿಕ ವಿಜಯ ಸ್ತಂಭದ ಬಳಿ ಭಾರತದ ವಿವಿಧ ಭಾಗಗಳಿಂದ ಬಂದ ಲಕ್ಷಾಂತರ ಜನ 1817ರಲ್ಲಿ ನಡೆದ ಮಹರ್ ರೆಜಿಮೆಂಟ್ ಪೇಶ್ವೆ ಸೈನ್ಯವನ್ನು ಸೋಲಿಸಿದ ದಿನವನ್ನು ‘ಶೌರ್ಯ - ಸ್ವಾಭಿಮಾನದ ವಿಜಯ ದಿನ’ವನ್ನಾಗಿ ಆಚರಿಸುತ್ತಾರೆ. ಈ ರೀತಿ ಸೈನಿಕ ದಿನವೊಂದು ರಾಷ್ಟ್ರೀಯ ಪ್ರತೀಕವಾಗಿ ಒಂದು ವಿದ್ಯಮಾನವಾಗಿ ಬದಲಾಗಲು ಅಸ್ಪಶ್ಯತೆಯ ವಿರುದ್ಧ ಸೈನಿಕ ವಿಜಯವನ್ನು ದಲಿತ ಅಸ್ಪಶ್ಯರು ಸಾಧಿಸಿದ್ದೇ ಒಂದು ಮುಖ್ಯ ಕಾರಣವಾಗಿದೆ ಹಾಗೂ ಇದಕ್ಕೆ ಸಂಬಂಧಿತ ಮಹರ್ ರೆಜಿಮೆಂಟ್ ಮರು ಸ್ಥಾಪನೆಗಾಗಿ ಹಾಗೂ ಅಸ್ಪಶ್ಯತೆಯ ನಾಶಕ್ಕಾಗಿನ ಅಂಬೇಡ್ಕರ್ ಅವರ ಹೋರಾಟಕ್ಕೆ ಒಂದು ಸ್ಪಷ್ಟ ದಿಕ್ಕನ್ನು ಸೂಚಿಸಿ ಬಲವನ್ನು ತುಂಬಿದ್ದು ಈ ಮಹರ್ ರೆಜಿಮೆಂಟ್ ನಡೆಸಿದ ಕೂರೇಗಾಂವ್ ಕದನ. ಈ ಹಿನ್ನೆಲೆಯಲ್ಲಿ ದಲಿತರ ಸಾಮಾಜಿಕ ವಿಮೋಚನಾ ಹೋರಾಟವನ್ನು ಕೋರೆಗಾಂವ್ ಕದನದ ಸೈನಿಕ ವಿಜಯದ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಲು ಈ ಲೇಖನ ಪ್ರಯತ್ನ ಮಾಡುತ್ತದೆ.

1817ರ ನವೆಂಬರ್ 5ರಂದು ಬ್ರಿಟಿಷ್ ಸೈನ್ಯದ ಮೇಲೆ ಪೇಶ್ವೆ ಸೈನ್ಯ ದಾಳಿ ಮಾಡಿತು. ಪರಿಣಾಮವಾಗಿ ಯುದ್ಧದ ಕೊನೆಗೆ ಪೂನಾ ಬ್ರಿಟಿಷರ ವಶ ಆಯಿತು. ಈ ಸಂದರ್ಭದಲ್ಲಿ ಮಹರ್ ಸುಬೇದಾರ್ ಸಿದನಾಕ ಪೇಶ್ವೆ ಬಾಜಿರಾಯನ ಅರಮನೆಗೆ ಬಂದು ‘‘ನಾವು ನೀವು ಈ ದೇಶದವರು; ಇಬ್ಬರೂ ಸೇರಿ ಬ್ರಿಟಿಷರನ್ನು ಎದುರಿಸುವ; ಗೆದ್ದ ಮೇಲೆ ನಮ್ಮನ್ನು ಸ್ವಾಭಿಮಾನಿಗಳಾಗಿ ಬಾಳಲು ಅವಕಾಶ ನೀಡಿ’’ ಎಂದು ಕೇಳಿಕೊಳ್ಳುತ್ತಾನೆ. ಇದಕ್ಕೆ ಪ್ರತಿಯಾಗಿ ಬಾಜಿರಾಯ ‘‘ಯುದ್ಧದಲ್ಲಿ ನಾವು ಗೆದ್ದರೂ ಧರ್ಮ ಗ್ರಂಥಗಳು ನಿಮಗೆ ಯಾವ ಸ್ಥಾನವನ್ನು ನೀಡಿವೆ ಅದನ್ನೇ ನೀಡುತ್ತೇವೆ’’ ಎಂದು ಉತ್ತರಿಸುತ್ತಾನೆ ಎಂಬುದಾಗಿ ಹೇಳಲಾಗುತ್ತದೆ. ಇದರಿಂದ ರೊಚ್ಚಿಗೆದ್ದ ಸಿದನಾಕನು ಪೇಶ್ವೆಗಳು ಮಾಡಿದ ಅಪಮಾನದ ವಿರುದ್ಧ ಯುದ್ಧ ಮಾಡಿಯೇ ಸೇಡು ತೀರಿಸಿಕೊಳ್ಳಲು ತಯಾರಾಗುತ್ತಾನೆ. ಈ ಉದ್ದೇಶದಿಂದ ಮಹರ್ ಸೈನಿಕರು ಬ್ರಿಟಿಷ್ ಸೈನ್ಯಕ್ಕೆ ಸೇರಿಕೊಳ್ಳುತ್ತಾರೆ

ಮಹಾರಾಷ್ಟ್ರದ ಪೂನಾದಿಂದ 12 ಕಿ.ಮೀ. ದೂರದಲ್ಲಿರುವ ಕೋರೆಗಾಂವ್‌ನ ಭೀಮಾ ನದಿ ತೀರದಲ್ಲಿ ಪೇಶ್ವೆಗಳ ಸೈನ್ಯಕ್ಕೂ ಬ್ರಿಟಿಷರ ಸೈನ್ಯಕ್ಕೂ 1817ರ ಡಿಸೆಂಬರ್ ತಿಂಗಳ 30ರ ರಾತ್ರಿ ಯುದ್ಧ ನಡೆಯುತ್ತದೆ. ಕ್ಯಾಪ್ಟನ್ ಸ್ಟಾಂಟನ್ ನೇತೃತ್ವದ ಬ್ರಿಟಿಷ್ ಸೈನ್ಯವು ಮಹರ್ ರೆಜಿಮೆಂಟನ್ನು ಒಳಗೊಂಡಿತ್ತು. ಅದರ ನೇತೃತ್ವವನ್ನು ಸಿದನಾಕ ವಹಿಸಿದ್ದನು. ಮಹರ್ ರೆಜಿಮೆಂಟ್ ಯುದ್ಧ ತಯಾರಿಯಲ್ಲಿ ಇಲ್ಲದೆ ಇರುವಾಗಲೇ ಸುಮಾರು 25,000 ಸೈನಿಕರನ್ನು ಒಳಗೊಂಡ ಬಾಜೀರಾಯ ನೇತೃತ್ವದ ಪೇಶ್ವೆ ಸೈನ್ಯ ಹಠಾತ್ ಆಗಿ ಬ್ರಿಟಿಷ್ ಸೈನ್ಯದ ಮೇಲೆ ಮುಗಿಬೀಳುತ್ತದೆ. ಕ್ಯಾಪ್ಟನ್ ಸ್ಟಾಂಟನ್ ಹೆಚ್ಚುವರಿ ಸೈನ್ಯಕ್ಕೆ ಬೇಡಿಕೆ ಇಟ್ಟರೂ ನೆರವು ಲಭ್ಯವಾಗುವುದಿಲ್ಲ. ಇದರಿಂದ ಬೆದರಿದ ಸ್ಟಾಂಟನ್ ತನ್ನ ರೆಜಿಮೆಂಟ್‌ಗೆ ಪೇಶ್ವೆ ಸೈನ್ಯಕ್ಕೆ ಶರಣಾಗಲು ಆದೇಶಿಸುತ್ತಾನೆ. ಆದರೆ ಸತ್ತರೂ ಪರವಾಗಿಲ್ಲ ನಾವು ಹೋರಾಡುತ್ತೇವೆ; ಶರಣು ಆಗುವ ಮಾತೇ ಇಲ್ಲ ಎಂಬುದಾಗಿ ಮಹರ್ ರೆಜಿಮೆಂಟ್ ಬಲವಾಗಿ ವಾದಿಸುತ್ತದೆ ಎಂದು ಹೇಳಲಾಗುತ್ತದೆ. ಯಾವುದೇ ನೆರವು ಇಲ್ಲದೇ ಬರೀ 500 ಸೈನಿಕರನ್ನು ಒಳಗೊಂಡ ಮಹರ್ ರೆಜಿಮೆಂಟ್ ವೀರಾವೇಶದಿಂದ ಸುಮಾರು 12 ಗಂಟೆಗಳ ಕಾಲ ಭೀಮಾ ನದಿ ತೀರದಲ್ಲಿ ಹೋರಾಡಿ ಪೇಶ್ವೆ ಸೈನ್ಯವನ್ನು ಸೋಲಿಸುತ್ತದೆ. ಪರಿಣಾಮವಾಗಿ ಸುಮಾರು 20 ಮಹರ್ ಸೈನಿಕರು ಕೊಲ್ಲಲ್ಪಡುತ್ತಾರೆ. ಅದರಲ್ಲಿ ಸುಬೇದಾರ್ ಸಿದನಾಕಾ ಕೂಡ ಮರಣವನ್ನು ಅಪ್ಪುತ್ತಾನೆ. ಈ ಕದನ ಮುಗಿದದ್ದು ಮರು ದಿವಸ ಮುಂಜಾನೆ (1 ಜನವರಿ 1818). ಈ ಯುದ್ಧದ ನೆನಪಿಗೆ ಮುಂದೆ 26 ಮಾರ್ಚ್ 1821ರಲ್ಲಿ ಕೋರೆಗಾಂವ್ ನಲ್ಲಿ ವಿಜಯ ಸ್ತಂಭ ಸ್ಥಾಪಿಸಲ್ಪಟ್ಟಿತು. ಹಾಗೆಯೇ ಈ ಮಹರ್ ಬೆಟಾಲಿಯನ್ ಗೆ

‘ಗ್ರೆನೆಡಿಯರ್ ರೆಜಿಮೆಂಟ್’ ಎಂದು ಪುನರ್ ನಾಮಕರಣ ಮಾಡಲಾಯಿತು.

ಮುಂದೆ, 1858ರಲ್ಲಿ ನೇಮಕಗೊಂಡ ಪೀಲ್ ಕಮಿಷನ್ ಬ್ರಿಟಿಷ್ ಸೈನ್ಯದ ಪುನರ್ ರಚನೆ ಸಂದರ್ಭದಲ್ಲಿ ಮಹರ್ ಸೈನಿಕರನ್ನು ವಜಾಗೊಳಿಸಿತು. 1893ರ ವೇಳೆಗೆ ಸಂಪೂರ್ಣವಾಗಿ ಮಹರ್‌ಗಳ ಸೈನ್ಯ ಭರ್ತಿಯನ್ನು ನಿಲ್ಲಿಸಲಾಯಿತು. ಹಾಗೆಯೇ 1922ರಲ್ಲಿ ಮಹರ್ ರೆಜಿಮೆಂಟನ್ನೇ ವಿಸರ್ಜಿಸಲಾಯಿತು. ಇದು ಭಾರತದ ಅಸ್ಪಶ್ಯ ದಲಿತರಲ್ಲಿ ಒಂದು ದೊಡ್ಡ ಅಸಮಾಧಾನವನ್ನು ಹುಟ್ಟುಹಾಕಿತು.

ಬ್ರಿಟಿಷರು ತಮ್ಮ ಸೈನ್ಯದಲ್ಲಿ ದಲಿತರನ್ನು ಅದರಲ್ಲೂ ಮಹರ್ ಸಮುದಾಯದ ಸೈನಿಕರನ್ನು ನೇಮಕಾತಿ ಮಾಡಿಕೊಳ್ಳುವುದನ್ನು ಇದ್ದಕ್ಕಿದ್ದ ಹಾಗೆ ನಿಲ್ಲಿಸಿದ್ದು ಭೀಮಾ ಕೋರೆಗಾಂವ್ ಯುದ್ಧದ ಇತಿಹಾಸ ಮುನ್ನೆಲೆಗೆ ಬರಲು, ಸಾರ್ವಜನಿಕ ಚರ್ಚೆಗೆ ಬರಲು ಮುಖ್ಯ ಕಾರಣವಾಯಿತು. ಡಾ. ಅಂಬೇಡ್ಕರ್ ಅವರ ತಂದೆ ಮತ್ತು ಅವರ 6 ಜನ ಚಿಕ್ಕಪ್ಪಂದಿರು ಕೂಡಾ ಬ್ರಿಟಿಷ್ ಸೈನ್ಯದಲ್ಲಿ ಸುಬೇದಾರ್ ಗಳು ಆಗಿದ್ದರು. ಇಂತಹ ಸಂದರ್ಭದಲ್ಲಿ ದಲಿತರು, ಅದರಲ್ಲೂ ಮಹರ್ ಸಮುದಾಯ ತೀವ್ರ ಆಘಾತವನ್ನು ಅನುಭವಿಸುತ್ತದೆ. ಯಾಕೆಂದರೆ ಶಿವಾಜಿ ತನ್ನ ಸೈನ್ಯದಲ್ಲಿ ಮಹರ್ ಸಮುದಾಯದ ಸೈನಿಕರನ್ನು ಸುಬೇದಾರ್‌ಗಳನ್ನಾಗಿ ನೇಮಿಸಿ ಅವರಿಗೆ ಭೂಮಿಯ ಒಡೆತನವನ್ನು ಕೊಡಿಸಿ, ಅವರಲ್ಲಿ ಸ್ವಾಭಿಮಾನಕ್ಕೆ ಕಾರಣವಾಗಿದ್ದರೆ; ಆದೇ ರೀತಿ ಬ್ರಿಟಿಷ್ ಸೈನ್ಯದಲ್ಲಿನ ನೌಕರಿ ಮಹರ್ ತರಹದ ದಲಿತ ಸಮುದಾಯಗಳಲ್ಲಿ ಕೂಡ ಸ್ವಾಭಿಮಾನ ತುಂಬಲು ಕಾರಣವಾಗಿತ್ತು. ಇಂತಹ ಹಿನ್ನೆಲೆಯಲ್ಲಿ ತನ್ನ ಸೈನಕ್ಕೆ ದಲಿತರನ್ನು ಸೇರಿಸಿಕೊಳ್ಳದೆ ಇರುವ ಬ್ರಿಟಿಷರ ನಿರ್ಧಾರದ ವಿರುದ್ಧ ಅಂಬೇಡ್ಕರ್ ಒಂದು ಹೋರಾಟವನ್ನು ರೂಪಿಸುತ್ತಾರೆ. ಈ ಹೋರಾಟ ಸುಮಾರು 14 ವರ್ಷ ಕಾಲ ನಡೆಯುತ್ತದೆ. ಇದರ ಹಿನ್ನೆಲೆಯಲ್ಲಿ ಬ್ರಿಟಿಷ್ ಸೈನ್ಯಕ್ಕೆ ದಲಿತರ ಕೊಡುಗೆಗಳ ಅಧ್ಯಯನ ಮಾಡುತ್ತಾ ಹೋದಾಗ ಕೋರೆಗಾಂವ್ ಯುದ್ಧದ ಚರಿತ್ರೆ ಅನಾವರಣಗೊಳ್ಳುತ್ತಾ ಸಾಗುತ್ತದೆ. ಡಾ. ಅಂಬೇಡ್ಕರ್ ಅವರು 1927ರಲ್ಲಿ ಭೀಮಾ ಕೋರೆಗಾಂವ್ ಯುದ್ಧದ 109 ನೇ ವಾರ್ಷಿಕ ಆಚರಣೆಯ ಸಂದರ್ಭ ಆ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ್ದರು ಎಂದು ಹೇಳಲಾಗಿದೆ. ಮುಂದೆ ಅಂಬೇಡ್ಕರ್ ಅವರು ಪ್ರಥಮ ದುಂಡುಮೇಜಿನ ಪರಿಷತ್‌ನಲ್ಲಿ ಕೋರೆಗಾಂವ್ ಯುದ್ಧದ ಬಗ್ಗೆ ಪ್ರಸ್ತಾಪಿಸುತ್ತಾರೆ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ದಲಿತರು ಸೈನಿಕ ಸಮುದಾಯ ಅಲ್ಲ ಎಂಬ ನೆಪವನ್ನು ಒಡ್ಡಿ ಬ್ರಿಟಿಷರು ತಮ್ಮ ಸೈನ್ಯಕ್ಕೆ ದಲಿತರ ನೇಮಕಾತಿಯನ್ನು ನಿಲ್ಲಿಸಿ ಎಂದು ಬ್ರಿಟಿಷರಿಗೆ ಒತ್ತಾಯಿಸಿದ್ದು ಅವರ ಜೊತೆ ಸಂಬಂಧಗಳನ್ನು ಇರಿಸಿಕೊಂಡಿದ್ದ ಭಾರತದ ಆಳುವ ವರ್ಗಗಳು ಎಂದು ಹೇಳಲಾಗುತ್ತದೆ. ಇದನ್ನು ಸಾಬೀತುಪಡಿಸಲು ಯಾವುದೇ ದಾಖಲಾತಿಗಳು ಲಭ್ಯವಿಲ್ಲ. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ಬ್ರಿಟಿಷ್ ಸೈನ್ಯ ಮತ್ತು ಸಾಮ್ರಾಜ್ಯಕ್ಕೆ ಭಾರತದ ದಲಿತರು ಅಪಾರ ಕೊಡುಗೆಗಳನ್ನು ಕೊಟ್ಟಿದ್ದರೂ ಅವರನ್ನು ಬ್ರಿಟಿಷ್ ಸೈನ್ಯಕ್ಕೆ ನೇಮಕಾತಿ ಮಾಡದೆ ಇರುವ ಕ್ರಮವನ್ನು ಪ್ರಥಮ ದುಂಡು ಮೇಜಿನ ಪರಿಷತ್‌ನಲ್ಲಿ ತೀವ್ರವಾಗಿ ಖಂಡಿಸುತ್ತಾರೆ. ‘‘ಪ್ಲಾಸಿ ಕದನ ಮತ್ತು ಕೋರೆಗಾಂವ್ ಕದನ ಭಾರತವನ್ನು ವಶಪಡಿಸಿಕೊಳ್ಳಲು ಬ್ರಿಟಿಷರಿಗೆ ಸಹಾಯ ಮಾಡಿದೆ. ಪ್ಲಾಸಿ ಕದನದಲ್ಲಿ ಬಂಗಾಳದ ‘ದುಸ್ಸಾದ್’ಗಳು ಹೋರಾಡಿದ್ದರೆ; ಕೋರೆಗಾಂವ್ ಕದನದಲ್ಲಿ ಹೋರಾಡಿದ್ದು ಮಹರ್‌ಗಳು. ಈ ಎರಡೂ ಸಮುದಾಯಗಳು ದಲಿತರೇ ಆಗಿವೆ. ಇದನ್ನು ಪೀಲ್ ಕಮಿಷನ್ ಕೂಡಾ ಒಪ್ಪಿಕೊಂಡಿದೆ. ಹೀಗಿರುವಾಗ ದಲಿತರನ್ನು ಬ್ರಿಟಿಷ್ ಸೈನ್ಯದಿಂದ ಕೈಬಿಡುವುದು ಕೃತಘ್ನತೆಯಾಗಿದೆ’’ ಎಂಬುದಾಗಿ ಅಂಬೇಡ್ಕರ್ ತಮ್ಮ ಬೇಸರವನ್ನು ವ್ಯಕ್ತಪಡಿಸುತ್ತಾರೆ. ಮುಂದೆ ಸತತ 14 ವರ್ಷಗಳ ಕಾಲ ಅಂಬೇಡ್ಕರ್ ಅವರು ಮಹರ್ ಜನರನ್ನು ಬ್ರಿಟಿಷ್ ಸೈನ್ಯಕ್ಕೆ ನೇಮಿಸಬೇಕು ಮತ್ತು ಮಹರ್ ರೆಜಿಮೆಂಟ್‌ನ ಮರು ಸ್ಥಾಪನೆಗಾಗಿ ಒತ್ತಾಯಿಸಿ ನಿರಂತರ ಹೋರಾಟವನ್ನು ಮುಂದುವರಿಸುತ್ತಾರೆ. ಇದೇ ಸಂದರ್ಭದಲ್ಲಿ ಮಾಜಿ ಸೈನಿಕ ಬಾಬಾ ವಾಲಂಕರ್ ಮಹರ್ ಸೈನಿಕರ ಪರವಾಗಿ ನ್ಯಾಯಾಲಯದಲ್ಲಿ ದಾವೆ ಕೂಡಾ ಹೂಡಿದ್ದರು ಎಂದು ಹೇಳಲಾಗುತ್ತದೆ.

ಹೀಗೆ ಅಂಬೇಡ್ಕರ್ ಮತ್ತು ಇತರರ ನಿರಂತರ ಹೋರಾಟದ ಕಾರಣಕ್ಕೆ 1940ರಲ್ಲಿ (ದ್ವಿತೀಯ ಮಹಾಯುದ್ಧದ ವೇಳೆಗೆ) ಮಹರ್ ರೆಜಿಮೆಂಟ್ ಅನ್ನು ಮರು ಸ್ಥಾಪಿಸಲಾಗುತ್ತದೆ. 1941ರಲ್ಲಿ ಅಂಬೇಡ್ಕರ್ ಅವರು ರಕ್ಷಣಾ ಇಲಾಖೆಯ ಸಲಹಾ ಸಮಿತಿಯ ವೈಸರಾಯ್ ಆಗಿದ್ದು ಮಹರ್ ರೆಜಿಮೆಂಟ್‌ಗಾಗಿ ಮತ್ತಷ್ಟು ಒತ್ತಾಯವನ್ನು ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 1941ರಲ್ಲಿ ಬೆಳಗಾವಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಜಾಕ್ಸನ್ ಮತ್ತು ಸುಬೇದಾರ್ ಮೇಜರ್ ಶೇಕ್ ಹಸನುದ್ದಿನ್ ನೇತೃತ್ವದಲ್ಲಿ ಮಹರ್ ರೆಜಿಮೆಂಟ್ ಅನ್ನು ಸ್ಥಾಪಿಸಲಾಯಿತು. ಮತ್ತೆ ಮಹಾರಾಷ್ಟ್ರದ ಕಾಮ್ಟೆಯಲ್ಲಿ ರೆಜಿಮೆಂಟ್‌ನ ಎರಡನೇ ಬೆಟಾಲಿಯನ್ ಅನ್ನು ಸ್ಥಾಪಿಸಲಾಯಿತು. 1942ರಲ್ಲಿ ಮತ್ತೆ ಮೇಜರ್ ಸರ್ದಾರ್ ಬಹದ್ದೂರ್ ಲಿಟ್ಕೋಜಿ ರಾವ್ ಭೋಂಸ್ಲೆ ಮತ್ತು ಲೆಫ್ಟಿನೆಂಟ್ ಕರ್ನಲ್ ವಿಚೆಂಬಿಯಾರ್ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಮೂರನೇ ಬೆಟಾಲಿಯನನ್ನು ಸ್ಥಾಪಿಸಲಾಯಿತು. (ಮಹಾದೇವ ಕುಮಾರ್ ಡಿ., ಕೋರೆಗಾಂವ್ ವಿಜಯೋತ್ಸವ; ಅಸ್ಪಶ್ಯರ ಮೊದಲ ಸ್ವಾತಂತ್ರ್ಯ ಸಂಗ್ರಾಮ, ಲಿಪಿಗ್ರಾಫ್ ಮೈಸೂರು 2016, ಪುಟ ; 49-50) ಮುಂದೆ, 1947ರಲ್ಲಿ ಭಾರತ ಪಾಕಿಸ್ತಾನ ದಂಗೆ, 1965ರಲ್ಲಿ ಚೀನಾ ಯುದ್ಧ ಹಾಗೂ ಕೊರಿಯಾ, ಕಾಂಗೋ, ಗೋವಾ ಮುಂತಾದ ಯುದ್ಧ ಸೈನಿಕ ಕಾರ್ಯಾಚರಣೆಗಳಲ್ಲಿ ಮಹರ್ ರೆಜಿಮೆಂಟ್ ಪಾಲ್ಗೊಂಡಿದೆ ಎಂದು ಹೇಳಲಾಗುತ್ತದೆ.

ಕೋರೆಗಾಂವ್ ಕದನದ ಕಾರಣಗಳು

ಪೇಶ್ವೆ ಮತ್ತು ಬ್ರಿಟಿಷರ ನಡುವೆ ನಡೆದ ವಸಾಯಿ ಒಪ್ಪಂದವನ್ನು ಮುರಿದು ಬರೋಡಾ ಸಂಸ್ಥಾನದ ವಕ್ತಾರ ಗಂಗಾಧರ ಶಾಸ್ತ್ರಿಯನ್ನು ಪೇಶ್ವೆಗಳು ಪೂನಾದ ಹಾದಿಯಲ್ಲಿ ಕೊಂದು ಹಾಕಿದ್ದೇ ಬ್ರಿಟಿಷರು ಪೇಶ್ವೆಗಳ ಮೇಲೆ ಯುದ್ಧ ಮಾಡಲು ಇದ್ದ ತಕ್ಷಣದ ಕಾರಣವಾಗಿದ್ದರೆ, ಮಹರ್ ರೆಜಿಮೆಂಟ್‌ನ ಸಿದನಾಕನನ್ನು ಪೇಶ್ವೆ ಬಾಜೀರಾಯ ಹಾಗೂ ಆತನ ಸೈನ್ಯದ ಸರದಾರರು ಹಾಗೂ ಸೈನಿಕರು ಅಪಮಾನಿಸಿದ್ದು ಒಂದು ಪ್ರಮುಖ ಕಾರಣವಾಗಿರುವ ಜೊತೆಗೆ ಮಹರ್ ಜನಾಂಗದ ಮೇಲೆ ಪೇಶ್ವೆಗಳು ಹಾಗೂ ಜಾತಿ ಜನರು ಮಾಡುತ್ತಿದ್ದ ಅಸ್ಪಶ್ಯತೆಯ ಅನ್ಯಾಯಗಳು ಅಷ್ಟೇ ಪ್ರಮುಖ ಕಾರಣವಾಗಿತ್ತು. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಮಹರ್ ಸಿದನಾಕ ಬಾಜಿರಾಯನ ಅರಮನೆಗೆ ಹೋಗಿ ‘‘ಬ್ರಿಟಿಷರ ವಿರುದ್ಧ ನಿಮ್ಮ ಹೋರಾಟದಲ್ಲಿ ನಮ್ಮನ್ನು ಸೇರಿಸಿಕೊಳ್ಳಿ. ನಾವು ಒಟ್ಟಿಗೆ ಸೇರಿ ಬ್ರಿಟಿಷರನ್ನು ಸೋಲಿಸುವ’’ ಎಂದಾಗ ಅವನನ್ನು ಅಪಮಾನಿಸಿ ಕಳಿಸಲಾಗುತ್ತದೆ. ಅದೂ ಅಲ್ಲದೇ ಸಿದನಾಕಾ ಅರಮನೆಯಲ್ಲಿ ನಿಂತಿದ್ದ ಜಾಗವನ್ನು ಗಂಗಾಜಲ ಹಾಕಿ ತೊಳೆದುದಲ್ಲದೆ ಸಿದನಾಕನನ್ನು ಅರಮನೆಗೆ ಕರೆದುಕೊಂಡು ಬಂದ ಸರದಾರನ್ನು ಸೈನ್ಯದಿಂದ ಉಚ್ಚಾಟಿಸಲಾಗುತ್ತದೆ.

ಇದಕ್ಕಿಂತಲೂ ಮಿಗಿಲಾಗಿ ಇರುವ ಇನ್ನೊಂದು ಲಾಜಿಕಲ್ ಕಾರಣ ಏನೆಂದರೆ ಶಿವಾಜಿ ಮಹಾರಾಜ ಮತ್ತು ಆತನ ಮಗ ಸಂಭಾಜಿಯ ಬರ್ಬರ ಹತ್ಯೆಗೆ ಮಹರ್ ಸಮುದಾಯ ಸಮಯ ಕಾದು ಕೋರೆಗಾಂವ್ ಯುದ್ಧದಲ್ಲಿ ಸೇಡು ತೀರಿಸಿಕೊಂಡದ್ದು. ಇದು ಜನ ಸಮುದಾಯಗಳಿಗೆ ಗೊತ್ತಾಗದಂತೆ ಇಲ್ಲಿವರೆಗೆ ಕಾಪಾಡಿಕೊಂಡು ಬರಲಾಗಿತ್ತು. ಪೇಶ್ವೆಗಳ ಒಂದು ಗುಂಪು ಶಿವಾಜಿ ಮತ್ತು ಅವನ ಮಗ ಸಂಬಾಜಿಯ ಸಾವಿಗೆ ಸಂಚು ನಡೆಸುತ್ತದೆ ಎಂದು ಹೇಳಲಾಗಿದೆ. ಅದರಲ್ಲೂ ಸಂಬಾಜಿಯ ಅಂತ್ಯ ಸಂಸ್ಕಾರವನ್ನು ಮಾಡಲು ಸಂಬಾಜಿಯ ಸಮುದಾಯದವರು ಮುಂದೆ ಬಾರದೇ ಇದ್ದಾಗ, ಇಂತಹ ಪ್ರಜಾ ರಾಜನಿಗೆ ಇಂತಹ ಬರ್ಬರ ಸಾವು ಬಂತಲ್ಲ ಅಂತ ಮಹರ್ ಜನರು ದುಃಖಿಸುತ್ತಾರೆ. ಮತ್ತು ಮಹಾರಾಜನ ಸಾವಿಗೆ ಸೇಡು ತೀರಿಸಿಕೊಳ್ಳಲು ಶಪಥಗೈಯುತ್ತಾರೆ. ಹಾಗೆಯೇ ಗಾಯಕವಾಡ ಎಂಬ ಮಹರ್ ಸಂಬಾಭಾಜಿಯ ಅಂತ್ಯ ಸಂಸ್ಕಾರವನ್ನು ನೆರವೇರಿಸುತ್ತಾನೆ ಮತ್ತು ವಧು ಬದ್ರುಕ್ ಎಂಬಲ್ಲಿ ಮಹಾರಾಜನ ದೇಹದ ಸಮಾಧಿಯನ್ನು ಮಾಡುತ್ತಾನೆ. ಇಲ್ಲೇ ಆ ಗಾಯಕವಾಡನ ಸಮಾಧಿ ಕೂಡಾ ಇದೆ ಎಂದು ಹೇಳಲಾಗಿದೆ. ಡಿಸೆಂಬರ್ 30( 2017) ರಂದು ಕೋರೆಗಾಂವ್ ವಿಜಯೋತ್ಸವದ ಹಿನ್ನೆಲೆಯಲ್ಲಿ ಈ ಇಬ್ಬರ ಸಮಾಧಿಗಳನ್ನು ನಾಶ ಮಾಡುವ ಮೂಲಕ ಹಿಂಸೆಗೆ ನಾಂದಿ ಹಾಡಲಾಯಿತು. ಈ ಮೂಲಕ ಶಿವಾಜಿ ಮತ್ತು ಸಂಬಾಜಿಯ ಸಾವಿಗೆ ಸೇಡನ್ನು ತೀರಿಸಿದ ಮಹರ ಜನರ ವೀರತ್ವಕ್ಕೆ ಮತ್ತು ದಲಿತ-ಮರಾಠಾ ಮೈತ್ರಿಯನ್ನು ಮರೆಮಾಚುವ ಹಾಗೂ ಅದಕ್ಕೆ ಹಿಂಸೆಯ ಕಳಂಕ ಹಚ್ಚುವ ಪ್ರಯತ್ನಗಳು ನಡೆದವು.

ಕೋರೆಗಾಂವ್ ಕದನದಲ್ಲಿನ ಮಹರ್ ಗಳ ವಿಜಯ ಇನ್ನಿಲ್ಲದಂತೆ ಜಾತಿ ವ್ಯವಸ್ಥೆ ಹಾಗೂ ಜಾತಿ ರಾಜ್ಯಾಡಳಿತ ಮತ್ತು ರಾಜಕೀಯ ಆಡಳಿತದ ಮೇಲೆ ಅಪ್ಪಳಿಸಿತು ಮತ್ತು ಅದರ ಅಡಿಪಾಯವನ್ನು ಅಲುಗಾಡಿಸಿತು. ಇದು ಮಹರ್ ಗಳ ಕುತ್ತಿಗೆಗೆ ಮಣ್ಣಿನ ಮಡಿಕೆ ಮತ್ತು ಬೆನ್ನಿಗೆ ಪೊರಕೆಯನ್ನು ಕಟ್ಟಿಸಿದ ರಾಜ್ಯಾಡಳಿತ ಮತ್ತು ಕಂದಾಯ ಆಡಳಿತದ ಕೆನ್ನೆಗೆ ಬಾರಿಸಿದ ವಿಜಯ - ಶತಮಾನಗಳ ಸೇಡು ಆಗಿತ್ತು ಎಂಬುದಾಗಿ ಮಹರ್ ಹಾಗೂ ಇತರ ಶೋಷಿತ ದಲಿತರ ಗ್ರಹಿಕೆಯಾಗಿದೆ. ಈ ವಿದ್ಯಮಾನವನ್ನು ಸೂಕ್ಷ್ಮವಾಗಿ ಗಮನಿಸಿದ ಅಂಬೇಡ್ಕರ್ ಅವರು ಕೋರೆಗಾಂವ್ ಕದನದ ವಿಜಯವನ್ನು ದಲಿತ ಶೋಷಿತರ ಹೆಮ್ಮೆಯ ಪ್ರತೀಕವಾಗಿ ಪರಿಗಣಿಸಿ ದಲಿತರ ವಿಮೋಚನಾ ಹೋರಾಟಕ್ಕೆ ಬಲ ತುಂಬಿದರು ಎಂಬುದಾಗಿ ಕಂಡು ಬರುತ್ತದೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ರಘು ಧರ್ಮಸೇನ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!