ಅನುದ್ವೇಗದ ಸಾವಧಾನತೆ

Update: 2023-07-02 04:25 GMT

- ಯೋಗೇಶ್ ಮಾಸ್ಟರ್

ಮನಸ್ಸು ಆತಂಕಕ್ಕೆ ಒಳಗಾಗುವುದು ಇತ್ತೀಚಿನ ದಿನಗಳಲ್ಲಿ ತೀರಾ ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ಇದಕ್ಕೆ ಮೊತ್ತ ಮೊದಲನೆಯ ಕಾರಣವೆಂದರೆ ಪ್ರತಿಯೊಂದು ವಿಷಯಗಳನ್ನು ಭಾವಾತಿರೇಕದಿಂದಲೇ ಗ್ರಹಿಸುವುದು!

ಯಾವುದೇ ಒಂದು ವಿಷಯವನ್ನು ನೋಡಿದಾಗ, ಕೇಳಿದಾಗ, ಓದಿದಾಗ ಕೂಡಲೇ ಸಂತೋಷ ಪಡುವುದೋ, ಕೋಪ ಬರುವುದೋ, ದುಃಖವಾಗುವುದೋ, ವಿರೋಧಿಸುವಂತಹ ಉನ್ಮಾದತೆ ಉಂಟಾಗುವುದೋ; ಆಗುತ್ತಿದೆ ಎಂದರೆ ಮತ್ತು ಅದನ್ನು ಪ್ರದರ್ಶಿಸುವವರೆಗೂ ಸಮಾಧಾನವಾಗುತ್ತಿಲ್ಲ ಎಂದರೆ ಅವರಿಗೆ ಭಾವೋದ್ವೇಗದ ಸಮಸ್ಯೆ ಇದೆ ಎಂದು ಅರ್ಥ. ಭಾವೋದ್ವೇಗಕ್ಕೆ ಒಳಗಾಗುವವರು ವಿಷಯವನ್ನು ಮತ್ತೊಂದು ಆಯಾಮದಿಂದ ಪರಿಶೀಲಿಸುವುದಿಲ್ಲ.

ಭಾವನೆಗಳಲೆಯಲ್ಲಿ ತೇಲುತ್ತಾ ಮುಳುಗುತ್ತಾ ಅದು ಒಯ್ಯುವ ಕಡೆಗೆ ಕೊಚ್ಚಿಕೊಂಡು ಹೋಗುವರು. ಇವರು ಪ್ರವಾಹದ ವಿರುದ್ಧ ಈಜುವವರಲ್ಲ. ಒಯ್ಯುವ ಅಲೆಗೆ ಒಪ್ಪಿಸಿಕೊಂಡುಬಿಟ್ಟರೆ, ಅಲ್ಲಿ ಮತ್ತೊಂದು ದಿಕ್ಕು ಇದೆ ಎಂದೂ, ಇದ್ದರೂ ಹೋಗುವುದು ಎಂದೂ ತಿಳಿಯದೆ ಅಸಹಾಯಕರಾಗುತ್ತಾರೆ. ‘‘ಏನು ಮಾಡೋದು ಅಂತಾನೇ ಗೊತ್ತಾಗ್ತಿಲ್ಲ’’ ಅನ್ನುತ್ತಾ ರಲ್ಲಾ, ಅವರು ಭಾವೋದ್ವೇಗಕ್ಕೆ ಒಳಗಾಗಿದ್ದಾರೆಂದು ತಿಳಿಯಿರಿ. ಭಾವೋದ್ರಿಕ್ತರಾದವರಿಂದಲೇ ಹಲ್ಲೆ, ಕೊಲೆಗಳಂತಹ ಅಪರಾಧಗಳು ಆಗುವುದು. ಅವರ ಕ್ರೌರ್ಯಕ್ಕಿರುವುದು ನೈತಿಕ ಸಮಸ್ಯೆ ಅಲ್ಲ, ಮಾನಸಿಕ ಸಮಸ್ಯೆ! ಅವರಿಗೆ ತಮ್ಮ ಉದ್ರಿಕ್ತ ಭಾವೋದ್ವೇಗವನ್ನು ಹೇಗೆ ನಿಯಂತ್ರಿಸಿಕೊಳ್ಳುವುದು, ಹತೋಟಿಗೆ ತಂದುಕೊಳ್ಳುವುದು, ಬೇರೊಂದು ದಿಕ್ಕಿನಲ್ಲಿ ಹೇಗೆ ಆಲೋಚಿಸುವುದು ಎಂಬುದರ ಬಗ್ಗೆ ಅರಿವಿರುವುದಿಲ್ಲ.

ನೈತಿಕತೆ ಎನ್ನುವುದು ಆಯ್ಕೆಯ ವಿಷಯವಲ್ಲ. ತರಬೇತಿಯ ವಿಷಯ. ನೈತಿಕತೆಯನ್ನು ಆಯ್ಕೆ ಮಾಡಿಕೊಂಡು, ಅದರಲ್ಲಿ ಉತ್ತಮ ಸಾಧನೆ ಮಾಡಬೇಕೆಂದು ನಿರ್ಧಾರ ಮಾಡಿಕೊಂಡಿದ್ದರೂ ಅವರು ಮಾನಸಿಕವಾಗಿ ತರಬೇತಿಯನ್ನು ಹೊಂದಿಲ್ಲದೆ ಇದ್ದ ಪಕ್ಷದಲ್ಲಿ ಅವರು ಅನೈತಿಕವಾಗಿ ತೊಡಗಿಕೊಳ್ಳುತ್ತಾರೆ. ಬ್ರಹ್ಮಚರ್ಯ ಪರಿಪಾಲನೆ ಮಾಡಬೇಕೆಂಬ ವ್ರತವನ್ನು ಸನ್ಯಾಸಿಗಳು ತೊಟ್ಟಿದ್ದರೂ ಮಠಗಳ ಅಡಗುಮೂಲೆಗಳಲ್ಲಿ ಅವರ ಅನಿಯಂತ್ರಿತ ಕಾಮನೆಗಳು ತಮ್ಮನ್ನು ತೃಪ್ತಿಪಡಿಸಿಕೊಳ್ಳಲು ಹಾತೊರೆಯುತ್ತಿರುತ್ತವೆ. ಸರ್ವಸಂಗ ಪರಿತ್ಯಾಗಿಗಳ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಲ್ಲವೂ ಒಂದಲ್ಲಾ ಒಂದು ರೀತಿಯಲ್ಲಿ ಬಹಿರಂಗ ವೇದಿಕೆಗಳಲ್ಲೇ ವಿಜೃಂಭಿಸುವ ಪ್ರದರ್ಶನಗಳನ್ನು ನೀಡುತ್ತಿರುತ್ತವೆ. ಅವರ ಆಯ್ಕೆ ತ್ಯಾಗವಾಗಿದ್ದರೂ ಭೋಗವನ್ನು ಆರಾಧಿಸುವ ಕಪಟಿಗಳು ಎಂದು ಯಾರಾದರೂ ಅಂದುಕೊಂಡರೆ ಅವರಿಗೆ ಮನೋಭೂಮಿಕೆಯ ಪರಿಚಯವಿಲ್ಲ ಎಂದೇ ಅರ್ಥ. ಅವರಿಗೂ ತಾವು ಕಪಟಿಗಳಾಗಿರಲು ಇಷ್ಟವೇನೂ ಇರುವುದಿಲ್ಲ.

ಯಾಕೆಂದರೆ ಅದರಿಂದಾಗಿ ಹುಟ್ಟುವ ಅಪರಾಧಿಭಾವ ತೀವ್ರವಾಗಿ ಕಾಡುತ್ತದೆ. ಆದರೂ ಆಗುವ ಸಮಸ್ಯೆ ಎಂದರೆ ಅವರ ಜಾಗೃತಿ ಮನಸ್ಸಿನ ಎತ್ತು ಏರಿಗೆ ಎಳೆದರೆ, ಸುಪ್ತ ಮನಸ್ಸಿನ ಕೋಣ ನೀರಿಗೆ ಎಳೆಯುವುದು. ಈ ತಾಕಲಾಟದಲ್ಲಿ ಸಾಮಾನ್ಯವಾಗಿ ಕೋಣಕ್ಕೇ ಜಯ. ಅದೇ ಬಲಶಾಲಿ. ನಕಾರಾತ್ಮಕವಾದ ಭಾವನೆಗಳಿಗೇ ಹೆಚ್ಚು ಚೈತನ್ಯ! ಹಾಗಾದರೆ ಮಾಡುವುದೇನು? ಅನುದ್ವೇಗದ ಮನಸ್ಸೊಂದೇ ಇದಕ್ಕೆ ಪರಿಹಾರ. ಭಾವನೆಗಳಲ್ಲಿ ಉದ್ರೇಕ, ಉದ್ವೇಗ, ತೀವ್ರತೆ ಮತ್ತು ಅದು ತಾನು ತೃಪ್ತಿಪಟ್ಟುಕೊಳ್ಳಲು ತುಡಿಯುತ್ತಾ ಆತುರಪಡುವುದು ಅತ್ಯಂತ ಸಹಜ. ಅದನ್ನು ಅನುದ್ವೇಗಗೊಳಿಸಲು ಕೆಲವು ಅರಿವು ಮತ್ತು ತಂತ್ರಗಳನ್ನು ಬಳಸಬೇಕು. ಭಾವೋದ್ರೇಕವು ಪ್ರತಿಕ್ರಿಯಿಸಲು ಯತ್ನಿಸುತ್ತದೆ. ಆದರೆ ಪ್ರತಿಕ್ರಿಯಿಸುವ ಬದಲು ಅವಲೋಕಿಸಲು ಅಥವಾ ವಿಷಯವನ್ನು ಗಮನಿಸುವ ರೂಢಿಯನ್ನು ಬೆಳೆಸಿಕೊಳ್ಳುವುದೇ ಮೊತ್ತ ಮೊದಲನೆಯ ಹೆಜ್ಜೆ.

ಗಮನಿಸುವುದರಲ್ಲಿ ಒಲವನ್ನು ಬೆಳೆಸಿಕೊಳ್ಳಲು ಆರಂಭಿಸಿದರೆ ಮಾತಾಡುವ ಬದಲು ಕೇಳಿಸಿಕೊಳ್ಳುವುದರಲ್ಲಿ ಆಸಕ್ತಿ ತೋರುತ್ತೇವೆ. ನಮ್ಮನ್ನು ಅವರಿಗೆ ಅರ್ಥ ಮಾಡಿಸುವ ಸಾಹಸದ ಬದಲು ಅವರನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತೇವೆ. ಇದರಿಂದಾಗಿ ನಮ್ಮ ಕಡೆಯಿಂದ ಕ್ರಿಯೆಗೆ ಪ್ರತಿಕ್ರಿಯೆಯ ಬದಲು ವಿಷಯವನ್ನು ಗ್ರಹಿಸುವಲ್ಲಿ ನಾವು ತೊಡಗಿದಾಗ ಭಾವೋದ್ರಿಕ್ತರಾಗಿ ಪ್ರತಿಕ್ರಿಯಿಸುವ ಬದಲು ನಮ್ಮಲ್ಲಿ ಅನುದ್ವೇಗದ ಮನಸ್ಸು ಉಂಟಾಗುತ್ತದೆ. ಈ ಅನುದ್ವೇಗದ ಮನಸ್ಸು ಯಾರೋ ದೈವೀಪುರುಷರ, ಸಂತರ ಸೊತ್ತಲ್ಲ. ನಿರಂತರ ಅರಿವಿನ ಸ್ವರಣೆ ಮತ್ತು ಅಭ್ಯಾಸದಲ್ಲಿ ಬದ್ಧತೆಯ ಫಲ. ತಪಸ್ಸೆಂದರೇನೇ ನಿರತವಾಗಿ ಮಾಡುವ ಅಭ್ಯಾಸದಲ್ಲಿ ಬದ್ಧತೆ.

ಧ್ಯಾನ, ತಪಸ್ಸುಗಳೆಲ್ಲವೂ ಯಾವುದೋ ಅತೀಂದ್ರಿಯ ರೋಮಾಂಚನಗಳಿಗಲ್ಲ. ಅತಿಯಾಗಿ ಆಡದೇ ಇರಲು ಮನಸ್ಸಿಗೆ ನೀಡುವ ಬಲವಷ್ಟೇ ಮೊದಲು. ಇನ್ನು ಮಿಕ್ಕ ಫಲಗಳೆಲ್ಲವೂ ಬೋನಸ್. ಅನುದ್ವೇಗದ ಮನಸ್ಸು ಅನಸೂಯವಾಗಿರುವುದು, ಸಂಯಮದಿಂದಿರುವುದು ಮತ್ತು ಅವಧಾನದಲ್ಲಿರುವುದು. ಯಾವುದೇ ಧ್ಯಾನ, ಪ್ರಾರ್ಥನೆಗಳೆಂಬ ತಂತ್ರಗಳು ನೆರವಾಗಬೇಕಾಗಿರುವುದೇ ಚಂಚಲದಲೆಗಳ ಮನಸ್ಸನ್ನು ತಿಳಿಗೊಳಿಸಲು, ಎಲ್ಲಾ ಆಗುಹೋಗುಗಳನ್ನು ಎಚ್ಚರಿಕೆಯಿಂದ ಗಮನಿಸಲು, ಉದ್ರೇಕ, ಉದ್ವೇಗಗಳಿಲ್ಲದೇ ಸಮಚಿತ್ತದಿಂದ ವಿಷಯಗಳನ್ನು ಅವಲೋಕಿಸಲು, ವ್ಯಕ್ತಿಗಳಿಗೆ ಮತ್ತು ಪ್ರಸಂಗಗಳಿಗೆ ತೀವ್ರವಾಗಿ ಕ್ರಿಯೆಗಳಿಗೆ ಪ್ರತಿಕ್ರಿಯಿಸದೆ ಅರಿವು, ಗಮನ ಮತ್ತು ಪ್ರಜ್ಞೆಯಿಂದ ಸ್ಪಂದಿಸಲು.

ಮಹಾ ಅಸ್ತಿತ್ವದ ಇಡೀ ಚೈತನ್ಯದೊಟ್ಟಿಗೆ ತನ್ನಿರುವಿನ ಚೈತನ್ಯವನ್ನು ಕೂಡಿಸಿಕೊಳ್ಳುವಂತಹ ನಿರಾಳತೆಯ ಅನುಗ್ರಹವುಂಟಾಗುವುದೇ ಅನುದ್ವೇಗದ, ಸಾವಧಾನದ ಮನಸ್ಸಿನಿಂದ. ಅನುಗ್ರಹವೆಂಬುದನ್ನು ಮೋಡಗಳಾಚೆಯ ಯಾರೋ, ಯಾವುದೋ ಮಾಡುವುದಲ್ಲ. ಜಗದಗಲ, ಮುಗಿಲಗಲದಲ್ಲಿ ಹೇರಳವಾಗಿ ಮತ್ತು ಮುಕ್ತವಾಗಿರುವ ಚೈತನ್ಯವನ್ನು ತೆರೆದ ಮನಸ್ಸಿನಿಂದ ಪಡೆಯುವುದು. ಇಂತಹ ಅನುದ್ವೇಗದ ಮನಸ್ಸನ್ನು ಮಕ್ಕಳಿಂದಲೇ ರೂಢಿ ಮಾಡಿಸದಿದ್ದರೆ ಅವರು ವಯಸ್ಕರಾದ ಮೇಲೂ ಉದ್ವೇಗಿಗಳಾಗಿರುತ್ತಾರೆ ಮತ್ತು ಅಸಹನೆಯ ಪ್ರಕಟಣೆಗಳೇ ಆಗಿರುತ್ತಾರೆ.

ಹಾಗಾಗಿ ಹಿರಿಯರೆನಿಸಿಕೊಂಡವರು ಇಂತಹ ಅನುದ್ವೇಗವಿಲ್ಲದ ಸಾವಧಾನದ ಆಲೋಚನೆ, ವರ್ತನೆ, ಕ್ರಿಯೆ, ಪ್ರತಿಕ್ರಿಯೆಗಳನ್ನು ಅಭ್ಯಾಸ ಮಾಡುತ್ತಿದ್ದರೆ ಮಕ್ಕಳೂ ಅನುಸರಿಸುತ್ತಾರೆ. ಬೋಧನೆಗಳು ಮಕ್ಕಳನ್ನು ರೂಪುಗೊಳಿಸುವುದಿಲ್ಲ. ವಾತಾವರಣವೇ ವ್ಯಕ್ತಿತ್ವಗಳನ್ನು ರೂಪುಗೊಳಿಸುವುದು. ವರ್ತಮಾನ ಮತ್ತು ಭವಿಷ್ಯದ ಪೀಳಿಗೆಗಳಾಗಿ ಅಂತಹ ವಾತಾವರಣವನ್ನು ಸೃಷ್ಟಿಸುವುದು ಹಿರಿಯರ ಮಹತ್ತರ ಹೊಣೆಗಾರಿಕೆಯಾಗಿದೆ. ಹೌದು, ಈ ಹೊಣೆಗಾರಿಕೆಯನ್ನು ಹೊರುವುದಕ್ಕೆ ನ್ಮು ಭುಜಗಳು ಮುಂದಾಗಬೇಕಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!