ಇನ್ನಷ್ಟು ಹಿರಿಯ ಕಾಂಗ್ರೆಸಿಗರು ಶೀಘ್ರ ಬಿಜೆಪಿಗೆ ? Congress Leaders switch to BJP

Update: 2024-02-27 06:34 GMT
Editor : Ismail | Byline : ಆರ್. ಜೀವಿ

ಮೊನ್ನೆ ಮೊನ್ನೆ ಮಹಾರಾಷ್ಟ್ರದ ಮಾಜಿ ಸಿಎಂ, ಹಿರಿಯ ಕಾಂಗ್ರೆಸಿಗ ಅಶೋಕ್ ಚವಾಣ್ ಬಿಜೆಪಿ ಸೇರಿದರು. ಅದಾದ ಬಳಿಕ ಈಗ ಕಾಂಗ್ರೆಸ್ನ ಅತ್ಯಂತ ಹಿರಿಯ ನಾಯಕ ಕಮಲ್ ನಾಥ್ ಪುತ್ರನ ಜೊತೆ ಬಿಜೆಪಿ ಸೇರಲು ಹೊರಟಿದ್ದಾರೆ. ​ಈಗ ಕಾಂಗ್ರೆಸ್ಗಿಂತಲೂ ​ಬಿಜೆಪಿಯಲ್ಲಿಯೇ ಹೆಚ್ಚು ಕಾಂಗ್ರೆಸಿಗರಿದ್ದಾರೆ ಎನ್ನುವ​ ಸ್ಥಿತಿ ಬಂದುಮುಟ್ಟಿದೆ. ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವ ಹೊತ್ತಿನಲ್ಲಿ ಕಾಂಗ್ರೆಸಿಗರು ಕಮಲ ಹಿಡಿಯುವುದು ಹೆಚ್ಚತೊಡಗಿದೆ.​ ​

ಅದರ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಮತ್ತೊಬ್ಬ ರಾಷ್ಟ್ರೀಯ ನಾಯಕ ಮನೀಶ್ ತಿವಾರಿ ಕೂಡಾ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗಳಿವೆ.​ಅಂದರೆ ಕಾಂಗ್ರೆಸ್ ನ ಯಾವುದೇ ನಾಯಕ ಯಾವಾಗಲೂ ಬಿಜೆಪಿ ಸೇರಿಕೊಳ್ಳಬಹುದು ಎಂಬಂತಹ ಸ್ಥಿತಿ. ಏನಾಗುತ್ತಿದೆ ಹಾಗಾದರೆ? ಭಾರತದ ಸಂಸದೀಯ ರಾಜಕಾರಣವೇ ಒಂದು ಬಿಸಿನೆಸ್ ಮಾಡೆಲ್ ಆಗಿಬಿಡುತ್ತಿದೆಯೆ?

ಹೇಗೆ ಕಳೆದೊಂದು ದಶಕದಲ್ಲಿ ವಿಪಕ್ಷದ 700ಕ್ಕೂ ಹೆಚ್ಚು ಶಾಸಕರು, ಸಂಸದರು ಹೇಗೆ ಪಕ್ಷ ಬದಲಾಯಿಸಿದರು? ಇದರಲ್ಲೇಲ್ಲ ಹೇಗೆ ಭಾರೀ ಪ್ರಮಾಣದ ದುಡ್ಡು ಬದಲಾಗಿದೆ ? ​ಅದೆಷ್ಟು ಲಕ್ಷ ಕೋಟಿ ದುಡ್ಡು ಅದಲು ಬದಲಾಗಿರಬಹುದು ? ಹಾಗೆ ಕೋಟಿ ಕೋಟಿಯ ವಹಿವಾಟು ನಡೆದು ಪಕ್ಷಾಂತರ ಆಗಿದ್ದರೆ ಮತ್ತೆ ಆ ಹಣವನ್ನು ವಸೂಲು ಮಾಡಲು ಸರಕಾರಗಳಲ್ಲಿ ಅದೆಷ್ಟು ಭ್ರಷ್ಟಾಚಾರ ನಡೆದಿರಬಹುದು ?

ಅದರಲ್ಲೂ ಕಾಂಗ್ರೆಸ್ ನ ಇನ್ನೂ ಹಲವು ಪ್ರಮುಖ ನಾಯಕರು, ಸಂಸದರು ಪಕ್ಷ​ ಬಿಡಲಿದ್ದಾರೆ ಎನ್ನಲಾಗುತ್ತಿರುವುದು ನಿಜವೆ? ಇದೆಲ್ಲ ಈ ಬಾರಿಯ ಲೋಕಸಭಾ ಚುನಾವಣೆ ನಡೆಯುವ ಹೊತ್ತಿಗೆ ಎಲ್ಲಿಗೆ ಹೋಗಿ ತಲುಪಲಿದೆ ? ಕುದುರೆ ವ್ಯಾಪಾರದ ಮೂಲಕವೇ ಸರ್ಕಾರ ರಚಿಸುವುದು ​ಇತ್ತೀಚಿನ ವರ್ಷಗಳಲ್ಲಿ ಒಂದು ರಾಜಕೀಯ ತಂತ್ರದ ಭಾಗವೇ ಆಗಿಬಿಟ್ಟಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಶಾಸಕರು ಅತ್ತ ಹೋದ ಪರಿಣಾಮ ಹೇಗೆ ಬಿಜೆಪಿ ಸರ್ಕಾರ ರಚನೆಯಾಗುವುದು ಸಾಧ್ಯವಾಗಿತ್ತು ಎಂಬುದನ್ನು ನೋಡಿದ್ದೇವೆ​.

ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಬಿಜೆಪಿ ಪಾಳಯ ಸೇರಿ ಸರ್ಕಾರ ಪತನವಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಮಹಾರಾಷ್ಟ್ರದಲ್ಲಿ ಶಿವಸೇನೆಯನ್ನೇ ಒಡೆದು ಹಾಕಿ ಕಾಂಗ್ರೆಸ್ ಶಿವಸೇನೆ ಎನ್ ಸಿ ಪಿ ಮೈತ್ರಿ ಸರಕಾರವನ್ನೇ ಉರುಳಿಸಿ ಬಿಜೆಪಿ ಸರಕಾರ ಬಂತು.

ಬಿಹಾರದಲ್ಲಿದ್ಧ ಮೈತ್ರಿ ಸರಕಾರ ಉರುಳಿಸಿ ಅಲ್ಲೂ ಬಿಜೆಪಿ ಮೈತ್ರಿ ಸರಕಾರ ಬಂತು. ಗೋವಾದಲ್ಲಿ, ಅರುಣಾಚಲದಲ್ಲಿ, ಮಣಿಪುರದಲ್ಲಿ - ಈಶಾನ್ಯದ ಇನ್ನೂ ಕೆಲವೆಡೆ ಹೀಗೆಯೇ ಆಗಿದೆ. ಅಸ್ಸಾಂ ನಲ್ಲಿ ಬಿಜೆಪಿ ಸಿಎಂ ಮೊದಲು ಕಾಂಗ್ರೆಸ್ ನಲ್ಲಿದ್ದವರು.

ದೇಶದ ಬಹಳಷ್ಟು ರಾಜ್ಯಗಳಲ್ಲಿ ಹೀಗೆ ಕಾಂಗ್ರೆಸಿಗರನ್ನು ಸೆಳೆಯುವ ಬಿಜೆಪಿಯ ಆಟ ಈಚಿನ ವರ್ಷಗಳಲ್ಲಿ ನಡೆದುಕೊಂಡೇ ಬಂದಿದೆ.

ಈಚಿನ ಹಲವು ವರ್ಷಗಳಲ್ಲಿ, 1133ಕ್ಕೂ ಹೆಚ್ಚು ಅಭ್ಯರ್ಥಿಗಳು ಮತ್ತು 700ಕ್ಕೂ ಹೆಚ್ಚು ಸಂಸದರು, ಶಾಸಕರು ಪಕ್ಷಗಳನ್ನು ಬದಲಾಯಿಸಿದ್ಧಾರೆ.

ಅವರಲ್ಲಿ ಹೆಚ್ಚಿನವರು ಕಾಂಗ್ರೆಸಿಗರು ಮತ್ತು ಉಳಿದವರು ಬಿಎಸ್ಪಿಯವರು. ಅವರನ್ನೆಲ್ಲ ಬಳಸಿಕೊಂಡು​ ಅತಿ ಹೆಚ್ಚು ಲಾಭ ಪಡೆದಿರುವುದು ಮಾತ್ರ ಬಿಜೆಪಿ.

2014 ರಿಂದ 2021 ರ ಅವಧಿಯಲ್ಲಿ ಒಟ್ಟು 222 ಅಭ್ಯರ್ಥಿಗಳು ಕಾಂಗ್ರೆಸ್ ತೊರೆದು ಇತರ ಪಕ್ಷಗಳಿಗೆ ಸೇರಿದ್ದರು. ಅಲ್ಲದೆ 177 ಸಂಸದರು ಮತ್ತು ಶಾಸಕರು ಕಾಂಗ್ರೆಸ್ ತೊರೆದಿದ್ದರು. ಹಾಗೆಯೇ ಅದೇ ಅವಧಿಯಲ್ಲಿ ವಿವಿಧ ಪಕ್ಷಗಳಿಂದ 115 ಅಭ್ಯರ್ಥಿಗಳು ಮತ್ತು 61 ಸಂಸದರು, ಶಾಸಕರು ಕಾಂಗ್ರೆಸ್ ಸೇರಿದ್ದಿದೆ.

2014ರಿಂದ 111 ಅಭ್ಯರ್ಥಿಗಳು ಮತ್ತು 33 ಸಂಸದರು, ಶಾಸಕರು ಬಿಜೆಪಿ ತೊರೆದಿದ್ದರು.ಆದರೆ ಆ ಹೊತ್ತಲ್ಲಿಯೇ 253 ಅಭ್ಯರ್ಥಿಗಳು ಮತ್ತು 173 ಸಂಸದರು ಮತ್ತು ಶಾಸಕರು ಇತರ ಪಕ್ಷಗಳನ್ನು ಬಿಟ್ಟು ಬಿಜೆಪಿ ಸೇರಿದ್ದರು. ಕಾಂಗ್ರೆಸ್ ಹೊರತುಪಡಿಸಿದರೆ, ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷ ತೊರೆದು ಬೇರೆಡೆ ಸೇರ್ಪಡೆಯಾದವರು ಬಿಎಸ್ಪಿ ಅಭ್ಯರ್ಥಿಗಳು ಮತ್ತು ಸಂಸದರು, ಶಾಸಕರು.

153 ಅಭ್ಯರ್ಥಿಗಳು ಮತ್ತು 20 ಸಂಸದರು, ಶಾಸಕರು ಬಿಎಸ್‌ಪಿ ಬಿಟ್ಟು ಇತರ ಪಕ್ಷಗಳಿಗೆ ಸೇರಿದ್ದರು. ಅದೇ ಹೊತ್ತಲ್ಲಿ 65 ಅಭ್ಯರ್ಥಿಗಳು ಮತ್ತು 12 ಸಂಸದರು, ಶಾಸಕರು ಬಿಎಸ್‌ಪಿಗೆ ಬಂದಿದ್ದರು. ಇದೇ ಅವಧಿಯಲ್ಲಿ 60 ಅಭ್ಯರ್ಥಿಗಳು ಮತ್ತು 18 ಸಂಸದರು,ಶಾಸಕರು ಎಸ್ಪಿಯಿಂದ ದೂರವಾಗಿದ್ದರು. ಆ ಅವಧಿಯಲ್ಲಿ, 29 ಅಭ್ಯರ್ಥಿಗಳು ಮತ್ತು 13 ಸಂಸದರು,ಶಾಸಕರು ಎಸ್ಪಿ ಸೇರಿದ್ದರು. ಅದೇ ರೀತಿ, ಒಟ್ಟು 31 ಅಭ್ಯರ್ಥಿಗಳು ಮತ್ತು 26 ಸಂಸದರು, ಶಾಸಕರು ಟಿಎಂಸಿ ತೊರೆದಿದ್ದರು. ಮತ್ತು 23 ಅಭ್ಯರ್ಥಿಗಳು ಮತ್ತು 31 ಸಂಸದರು, ಶಾಸಕರು ಟಿಎಂಸಿ ಸೇರಿದ್ದರು.

ಇನ್ನು ಜೆಡಿಯುನಿಂದ 59 ಅಭ್ಯರ್ಥಿಗಳು ಮತ್ತು 12 ಸಂಸದರು, ಶಾಸಕರು ಪಕ್ಷ ಬದಲಾಯಿಸಿದ್ದರು. 23 ಅಭ್ಯರ್ಥಿಗಳು ಮತ್ತು 12 ಶಾಸಕರು, ಸಂಸದರು ಜೆಡಿಯುಗೆ ಸೇರಿದ್ದರು. ಈಗ ದೊಡ್ಡ ವಿಚಾರವಾಗಿರುವುದು ಕಮಲ್ ನಾಥ್ ಬಿಜೆಪಿ ಸೇರುತ್ತಿದ್ದಾರೆ ಎಂಬುದು. ಇನ್ನೊಂದೆಡೆ, ಅಶೋಕ್ ಚವಾಣ್ ಬಿಜೆಪಿ ಸೇರ್ಪಡೆ ಬಳಿಕ 10 ಮಂದಿ ಕಾಂಗ್ರೆಸ್ ಶಾಸಕರು ಪಕ್ಷದ ಚಿಂತನ ಶಿಬಿರದಿಂದ ದೂರವುಳಿದಿರುವುದು ಸುದ್ದಿಯಾಗಿದೆ.

ಗೈರುಹಾಜರಾದ ಶಾಸಕರಲ್ಲಿ ಅಶೋಕ್ ಚವಾಣ್ ಅವರ ನಿಕಟವರ್ತಿ​ಗಳಾದ ಮಾಧವ್ ಪವಾರ್​ , ಮೋಹನ್ ಹಂಬರ್ಡೆ, ಗಿತೇಶ್ ಅಂತಪುರ್ಕರ್ ಸೇರಿದ್ದು, ಮೂವರೂ ನಾಂದೇಡ್ ಜಿಲ್ಲೆಯ ಶಾಸಕರಾಗಿದ್ದಾರೆ. ಸುಲಭಾ ಖೋಡ್ಕೆ, ​ಝೀಶಾನ್ ಸಿದ್ದಿಕ್, ಅಮೀನ್ ಪಟೇಲ್ ಮತ್ತು ಅಮಿತ್ ಝನಕ್ ಕೂಡ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸದೇ ಇರುವ ಶಾಸಕರಲ್ಲಿ ಸೇರಿದ್ದಾರೆ.

ಇನ್ನು ಕಮಲನಾಥ್‌ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗಳ ನಡುವೆಯೇ, ಕಮಲ ನಾಥ್‌ ಪುತ್ರ​ ಸಂಸದ ನಕುಲ ನಾಥ್‌ ತಮ್ಮ ಸಾಮಾಜಿಕ ಜಾಲತಾಣಗಳ ವಿವರಣೆಯಲ್ಲಿ ಕಾಂಗ್ರೆಸ್‌ ಹೆಸರನ್ನು ಕೈಬಿಟ್ಟಿರುವುದು ಕುತೂಹಲಕ್ಕೆ ಕಾರಣವಾಗಿದೆ. ಕಮಲ್ ನಾಥ್ ಮತ್ತು ಅವರ ಪುತ್ರ ಹಾಗೂ ಛಿಂದ್ವಾರಾ ಸಂಸದ ನಕುಲ್ ನಾಥ್ ಬಿಜೆಪಿಗೆ ಸೇರ್ಪಡೆ​ ವಿಚಾರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆ ಮಧ್ಯಪ್ರದೇಶಕ್ಕೆ ಪ್ರವೇಶಿಸುವ ಆರು ದಿನಗಳ ಮೊದಲು ಈ ಬೆಳವಣಿಗೆ ಸಂಭವಿಸಿದೆ. ರಾಜ್ಯಸಭೆ ಚುನಾವಣೆಗೆ ತಮ್ಮನ್ನು ಅಭ್ಯರ್ಥಿಯಾಗಿ ಪರಿಗಣಿಸಲಿಲ್ಲ, ಜೊತೆಗೆ ಅಭ್ಯರ್ಥಿ ಆಯ್ಕೆ ಮಾಡುವಾಗ ತಮ್ಮ ಜೊತೆ ಸಮಾಲೋಚಿಸದೆ ಗ್ವಾಲಿಯರ್-ಚಂಬಲ್ ಕ್ಷೇತ್ರದ ರಾಜಕಾರಣಿ ಅಶೋಕ್ ಸಿಂಗ್ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದು ಕಮಲ್ ನಾಥ್ ಮುನಿಸಿಗೆ ಕಾರಣವಾಗಿದೆ.

ಆದರೆ ಈ ಅಸಮಾಧಾನ ಬರೀ ಒಂದು ನೆಪವಾಗಿದ್ದು,​ ಅಸಲೀ ಕಾರಣ ತನಗೆ ರಾಜ್ಯಸಭೆ ಸ್ಥಾನ ಹಾಗು ​ಪುತ್ರನಿಗಾಗಿ ಬಿಜೆಪಿಯಿಂದ ಟಿಕೆಟ್ ಗಿಟ್ಟಿಸುವುದೇ ಆಗಿದೆ ಎನ್ನುತ್ತಿವೆ ವರದಿಗಳು. ಇನ್ನೊಂದೆಡೆ, ಕಾಂಗ್ರೆಸ್ ಪಕ್ಷದ ಮತ್ತೊಬ್ಬ ರಾಷ್ಟ್ರೀಯ ನಾಯಕ ಮನೀಶ್ ತಿವಾರಿ ಕೂಡಾ ಬಿಜೆಪಿ ಸೇರಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಆದರೆ ಮನೀಶ್ ತಿವಾರಿ ಅವರ ಆಪ್ತ ವಲಯ ಈ ವದಂತಿಯನ್ನು ನಿರಾಕರಿಸಿದ್ದು, ಇವೆಲ್ಲವೂ ಆಧಾರ ರಹಿತ ಹಾಗೂ ಕ್ಷುಲ್ಲಕ ಹೇಳಿಕೆ ಎಂದಿರುವುದಾಗಿ ತಿಳಿದುಬಂದಿದೆ.

ಅಶೋಕ್ ​ಚವಾಣ್ ಬಿಜೆಪಿ ಸೇರುವಾಗ ಕಾಂಗ್ರೆಸ್ ಅನ್ನು ಜರೆದಿದ್ದಾರೆ. ಚುನಾವಣೆಗೆ ಕಾಂಗ್ರೆಸ್ ಸರಿಯಾಗಿ ತಯಾರಾಗಿಲ್ಲ. ಇದರಿಂದ ನನ್ನ ಸಮಯ ವ್ಯರ್ಥ. ಸೈದ್ಧಾಂತಿಕತೆಗಿಂತ ಹೆಚ್ಚಾಗಿ ದೇಶಕ್ಕಾಗಿ ಏನು ಮಾಡಬೇಕು ಎನ್ನುವುದು ಮುಖ್ಯವಾಗಿತ್ತು ಎಂದಿದ್ದಾರೆ.

ಬಿಜೆಪಿಯ ಜೊತೆ ಸೇರಿ ಅವರು ದೇಶಕ್ಕಾಗಿ ಏನು ಮಾಡಲಿದ್ದಾರೊ ಗೊತ್ತಿಲ್ಲ. ನಿಜವಾಗಿಯೂ ಹೀಗೆ ಆಗುತ್ತಿರುವುದು ಅಧಿಕಾರಕ್ಕಾಗಿಯೊ, ಹಣದ ಆಮಿಷಕ್ಕೆ ಬಲಿಯಾಗಿಯೊ, ಈಡಿ ಇಲ್ಲವೆ ಐಟಿ ಅಸ್ತ್ರದ ಭಯದಿಂದಲೊ​ ? ​ಈವರೆಗೆ ಬಿಜೆಪಿ ಸೇರಿರುವ ಕಾಂಗ್ರೆಸ್ ನಾಯಕರದ್ದೇ ಒಂದು ತೂಕವಾದರೆ, ಇನ್ನು ಸೇರಲಿರುವವರ ಹೆಸರುಗಳು ಇನ್ನಷ್ಟು ಅಚ್ಚರಿ ಮೂಡಿಸುವಂತಿವೆ ಎನ್ನುತ್ತಿವೆ ದಿಲ್ಲಿಯ ರಾಜಕೀಯ ವಲಯ.

ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ , ಹರ್ಯಾಣದಲ್ಲಿ ಮಾಜಿ ಸಿಎಂ ಭೂಪಿಂದರ್ ಹೂಡಾ, ಕೇರಳದ ಶಶಿ ತರೂರ್ ತರದವರು ಬಿಜೆಪಿ ಕಡೆ ನೋಡುತ್ತಿದ್ದಾರೆ ಎನ್ನುತ್ತಿವೆ ವದಂತಿಗಳು. ಮುಂದಿನ ಒಂದೆರಡು ತಿಂಗಳುಗಳಲ್ಲಿ ಕಾಂಗ್ರೆಸ್ ನ ಕೆಲವು ಘಟಾನುಘಟಿ ನಾಯಕರು ಬಿಜೆಪಿ ಕಡೆಗೆ ವಾಲಲಿದ್ದಾರೆ ಎನ್ನುತ್ತಿವೆ ದಿಲ್ಲಿಯ ಸುದ್ದಿ ಮೂಲಗಳು.

ಇದು ಹೌದಾದರೆ ಇದೆಲ್ಲ ಎಲ್ಲಿಗೆ ಹೋಗಿ ತಲುಪಲಿದೆ ? ಹೀಗೇ ಆಗುತ್ತಾ ಹೋದರೆ ಬಿಜೆಪಿ ಇನ್ನೊಂದು ಕಾಂಗ್ರೆಸ್ ಆಗೋದಿಲ್ವಾ ?

ಕಾಂಗ್ರೆಸ್ ಅನ್ನು ಯಾವ್ಯಾವ ಕಾರಣಗಳಿಗಾಗಿ ಬಿಜೆಪಿ ದೂಷಿಸುತ್ತಿದೆ, ಆ ಎಲ್ಲ ಸಮಸ್ಯೆಗಳಿಗೆ ಕಾರಣರಾದವರನ್ನೇ ತಮ್ಮ ಪಕ್ಷಕ್ಕೆ ತೆಗೆದುಕೊಳ್ಳುವ ಮೂಲಕ ಬಿಜೆಪಿ ಜನರಿಗೆ ನೀಡುತ್ತಿರುವ ಸಂದೇಶ ಏನು ?

ಕಾಂಗ್ರೆಸ್, ಟಿ ಎಂ ಸಿ, ಶಿವಸೇನೆ, ಎಸ್ಪಿ, ಬಿಎಸ್ಪಿ, ಆಪ್ ನಲ್ಲಿರುವ ಭ್ರಷ್ಟರು ಬಿಜೆಪಿಗೆ ಬಂದ ಕೂಡಲೇ ಅದೇಗೆ ಅವರೆಲ್ಲ ಪರಿಶುದ್ಧರಾಗಿ ಬಿಡ್ತಾರೆ ? ಆ ನಾಯಕರುಗಳು ತಮ್ಮ ಹಿಂದಿನ ಪಕ್ಷದಲ್ಲಿ ಮಾಡಿದ್ದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಕುಟುಂಬ ರಾಜಕಾರಣ - ಎಲ್ಲವೂ ಹೇಗೆ ದಿಢೀರನೆ ಇಲ್ಲವಾಗಿಬಿಡುತ್ತದೆ ?

ಇನ್ನು ಬಿಜೆಪಿ ಜೊತೆಗೆ ನಿಲ್ಲದಿದ್ದರೆ ನಮಗೆ ರಾಜ್ಯಕ್ಕೆ ಕೇಂದ್ರದಿಂದ ಅನುದಾನ ಬರೋದಿಲ್ಲ ಎಂಬ ಭಯವೂ ಜೋರಾಗಿಯೇ ಹಬ್ಬುತ್ತಿದೆ.

ಅಲ್ಲಿಗೆ ದಿಲ್ಲಿಯಲ್ಲಿ ಅಧಿಕಾರದಲ್ಲಿರುವವರ ಜೊತೆಗೇ ಎಲ್ಲ ರಾಜ್ಯಗಳೂ ಇರಬೇಕು. ಅಲ್ಲಿನ ಸರಕಾರಗಳು ಸ್ವತಂತ್ರವಲ್ಲ ಎಂಬಂತಹ ಪರಿಸ್ಥಿತಿ ಆದರೆ ಇಡೀ ದೇಶದ ಒಕ್ಕೂಟ ವ್ಯವಸ್ಥೆಯೇ ಎಲ್ಲಿಗೆ ಹೋಗಿ ತಲುಪಲಿದೆ ?

ಅಧಿಕಾರ ಇದ್ದರೆ ಮಾತ್ರ ರಾಜಕೀಯ ಮಾಡಬಹುದು, ಅಧಿಕಾರ ಇರುವವರ ಜೊತೆಗಿದ್ದರೆ ಮಾತ್ರ ರಾಜಕೀಯವಾಗಿ ಬದುಕಬಹುದು ಎಂಬ ಸ್ಥಿತಿ ಬಂದರೆ ಈ ದೇಶದ ಸ್ಥಿತಿ ಎಲ್ಲಿಗೆ ತಲುಪಬಹುದು ? ಮಾರಾಟ ಆಗುವುದೊಂದೇ ದಾರಿ ರಾಜಕಾರಣಿಗೆ ಉಳಿದರೆ ದೇಶದ ರಾಜಕಾರಣ ಎಲ್ಲಿಗೆ ಹೋಗಿ ತಲುಪಲಿದೆ ?

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!