ನಫ್ರತಿ ಚಿಂಟು' ಬಿಜೆಪಿ ಸಂಸದ ತೇಜಸ್ವಿ ಸೂರ್ಯ

Update: 2023-12-17 02:48 GMT
Editor : Ismail | Byline : ಆರ್. ಜೀವಿ

ತೇಜಸ್ವಿ ಸೂರ್ಯ | Photo : PTI 

​​ವಿಮಾನದ ಎಮರ್ಜೆನ್ಸಿ ಡೋರ್ ತೆರೆದು, ತಾನೆಷ್ಟು ಬಾಲಿಶ ಎಂದು ಸಾಬೀತು ಮಾಡಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪ್ರಮಾದಗಳ ಪಟ್ಟಿಗೆ ಇನ್ನೊಂದು ಸೇರ್ಪಡೆಯಾಗಿದೆ. ಸಂಸದರಾಗಿ ಸದಾ ಒಂದಿಲ್ಲೊಂದು ವಿವಾದಗಳ ಮೂಲಕವೇ ಸುದ್ದಿಯಾಗುವ ತೇಜಸ್ವಿ ಸೂರ್ಯ ಈಗ ಮತ್ತೆ ಇಲ್ಲದ ವಿವಾದ ಸೃಷ್ಟಿಸಿ ​ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಅದಕ್ಕಿಂತ ಬೇಸರ ಮತ್ತು ಕಳವಳಕಾರಿ ಸಂಗತಿಯೆಂದರೆ, ತನ್ನ ಕೆಟ್ಟ ರಾಜಕೀಯಕ್ಕಾಗಿ​ ತೇಜಸ್ವಿ ಸೂರ್ಯ ಹುತಾತ್ಮ ಯೋಧನನ್ನು ದುರುಪಯೋಗ ಪಡಿಸಿಕೊಂಡಿರುವುದು. ಸೈನಿಕರ ಸಾವುಗಳನ್ನೂ ಬಿಡದೆ ರಾಜಕಾರಣ ಮಾಡುವ ಬಿಜೆಪಿ ಮಂದಿಯ ಅತ್ಯಂತ ​ಕೆಟ್ಟ ನಡವಳಿಕೆಗೆ ಈಗ ತೇಜಸ್ವಿ ಸೂರ್ಯ ಮಾಡಿರೋ ವಿಕೃತಿ ಕೂಡ ಸೇರುತ್ತದೆ.

ಹುತಾತ್ಮ ಯೋಧನ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಸುಳ್ಳೇ​ ಆರೋಪ ಮಾಡುವ ಈ ತೇಜಸ್ವಿ ಸೂರ್ಯ, ಹುತಾತ್ಮ ಯೋಧನ ಅಂತ್ಯ ಸಂಸ್ಕಾರ ನಡೆಯುವ ದಿನ ಪ್ರಧಾನಿ ಬೆಂಗಳೂರಿನಲ್ಲೇ ಇದ್ದರೂ ಅಂತಿಮ ದರ್ಶನಕ್ಕೆ ಹೋಗದ ವಿಚಾರವನ್ನು ಮರೆಮಾಚುವುದೇಕೆ?. ಹುತಾತ್ಮ ಯೋಧನ ಅಂತಿಮ ದರ್ಶನಕ್ಕೆ​ ಬೆಂಗಳೂರಲ್ಲೇ ಇದ್ದ ಪ್ರಧಾನಿ​ ಹೋಗುವಂತೆ ವಿನಂತಿಸುವ ಸಾಮರ್ಥ್ಯವಿಲ್ಲದ ಈ ಸಂಸದ, ದ್ವೇಷ ರಾಜಕಾರಣ ಮಾಡಿಯೇ ಅಸ್ತಿತ್ವದಲ್ಲಿರೋಕ್ಕೆ ಒದ್ದಾಡುತ್ತಿರೋದು ​ಸ್ಪಷ್ಟವಾಗ್ತಿದೆ.

ಆದರೆ, ಕಾಂಗ್ರೆಸ್ ಪಕ್ಷವೇ ಒಮ್ಮೆ ಕರೆದ ಹಾಗೆ ಈ ​'ನಫ್ರತಿ ಚಿಂಟು​' ಉದ್ದಕ್ಕೂ ಮಾಡಿಕೊಂಡು ಬಂದಿರೋದು ದ್ವೇಷ ರಾಜಕಾರಣ, ಉಡಾಫೆ ಭಾಷಣವನ್ನೇ. ನೋಡುತ್ತ ಹೋದರೆ, ತೇಜಸ್ವಿ ಸೂರ್ಯ ಎಂಬ ಸಂಸದ ತನ್ನ ಬಣ್ಣ ತಾನೇ ಬಯಲು ಮಾಡಿಕೊಳ್ಳುತ್ತ ಬಂದಿರೋದು ಗೊತ್ತಾಗುತ್ತದೆ.

ಅದಕ್ಕೂ ಮೊದಲು, ಈಗ ಈ ವ್ಯಕ್ತಿ ಮಾಡಿರೋ ಕೀಳು ರಾಜಕೀಯ ಎಂಥದು​, ಮತ್ತು ಅವರಿಗೇ ತಿರುಗುಬಾಣ ಆಗಿದ್ದು ಹೇಗೆ ಅನ್ನೋದನ್ನ ನೋಡಬೇಕು.​ ಕಾಶ್ಮೀರದ ರಜೌರಿಯಲ್ಲಿ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದ ಬೆಂಗಳೂರು ಮೂಲದ ಕ್ಯಾಪ್ಟನ್ ಪ್ರಾಂಜಲ್ ಅವರ ಕುಟುಂಬಕ್ಕೆ ಪರಿಹಾರ ನೀಡುವ ವಿಚಾರದಲ್ಲಿ, ತಪ್ಪು ಅರ್ಥ ಬರುವಂತೆ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ತಿರುಚಿ ಹರಿಬಿಟ್ಟ ಆರೋಪ ಈಗ ತೇಜಸ್ವಿ ಸೂರ್ಯ ಮೇಲೆ ಬಂದಿದೆ.

​ಒಮ್ಮೆ ಹುತಾತ್ಮ ಯೋಧನ ಕುಟುಂಬಕ್ಕೆ 50 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ ಮತ್ತೆ ಹಾಗೆ ಹೇಳಿದ್ದು ಯಾರು ಎಂದು ಕೇಳಿದ್ದಾರೆ ಎಂದು ತೇಜಸ್ವಿ ಸೂರ್ಯ ಅಪಪ್ರಚಾರ ಮಾಡಿದ್ದರು. ಅದಕ್ಕಾಗಿ ಅರ್ಧಂಬರ್ಧ ವೀಡಿಯೊ ಒಂದನ್ನು ಹರಿಬಿಟ್ಟಿದ್ದರು. ಸಿಎಂ ಸಿದ್ದರಾಮಯ್ಯ ಅವರು ತೇಜಸ್ವಿ ಸೂರ್ಯ ನಡೆಯನ್ನು ವಿಕೃತಿ ಎಂತಲೇ ಕರೆದಿದ್ದಾರೆ.

ಸಿಎಂ ಈ ಬಗ್ಗೆ ಕೊಟ್ಟಿರುವ ಕಟುವಾದ ಪ್ರತಿಕ್ರಿಯೆ ಹೀಗಿದೆ: ಗದ್ದಲದ ಕಾರಣದಿಂದಾಗಿ ವರದಿಗಾರರ ಪ್ರಶ್ನೆ ಪ್ರಾರಂಭದಲ್ಲಿ ಸರಿಯಾಗಿ ಕೇಳಿರಲಿಲ್ಲ. ಪತ್ರಕರ್ತರ ಪ್ರಶ್ನೆ ಹುತಾತ್ಮರಾದ ವೀರಯೋಧ ಪ್ರಾಂಜಲ್ ಅವರ ಕುರಿತಾಗಿರುವುದು ಎಂದು ಗೊತ್ತಾದ ನಂತರ ರಾಜ್ಯ ಸರ್ಕಾರ ಪರಿಹಾರ ನೀಡಲು ಬದ್ಧವಾಗಿರುವುದನ್ನು ತಿಳಿಸಿದ್ದು ಮಾತ್ರವಲ್ಲ, ಬೇರೆ ಯಾವ ರಾಜ್ಯದಲ್ಲಿಯಾದರೂ ಹುತಾತ್ಮ ಯೋಧರಿಗೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಿರುವುದು ಗೊತ್ತಾದರೆ ಅಷ್ಟೇ ಮೊತ್ತವನ್ನು ನೀಡಲು ಸಿದ್ಧ ಎಂದೂ ತಿಳಿಸಿದ್ದೇನೆ. ಇಂದು ನಮ್ಮ ಅಧಿಕಾರಿಗಳು ಪರಿಹಾರದ ಚೆಕ್ ಅನ್ನು ಹುತಾತ್ಮ ಪ್ರಾಂಜ​ಲ್ ಅವರ ಕುಟುಂಬಕ್ಕೆ ನೀಡಿದ್ದಾರೆ. ತೇಜಸ್ವಿ ಸೂರ್ಯ ಎಂಬ ಬಿಜೆಪಿ ಸಂಸದ, ತಪ್ಪು ಅರ್ಥ ಬರುವಂತೆ ನನ್ನ ಹೇಳಿಕೆಯನ್ನು ತುಂಡರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟು ವಿಕೃತಿ ಮೆರೆದಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ರಾಜಕೀಯ ದುರುದ್ದೇಶದಿಂದ ಈ ವಿಡಿಯೋವನ್ನು ತಿರುಚಿ ಹಂಚಿಕೊಂಡಿರುವ ಅವರು ಹುತಾತ್ಮ ಪ್ರಾಂಜಲ್ ಮತ್ತು ಅವರ ಕುಟುಂಬ ವರ್ಗಕ್ಕೆ ಮಾತ್ರವಲ್ಲ ಸಮಸ್ತ ಯೋಧ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಅವರು ತಪ್ಪನ್ನು ಒಪ್ಪಿಕೊಂಡು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ದೇಶ, ದೇವರು, ಸೈನಿಕರು ಎಲ್ಲವೂ ಭಾರತೀಯ ಜನತಾ ಪಕ್ಷಕ್ಕೆ ರಾಜಕೀಯ ವ್ಯಾಪಾರದ ಸರಕುಗಳು ಮಾತ್ರ ಎನ್ನುವುದನ್ನು ದೇಶದ ಜನರು ಅರ್ಥಮಾಡಿಕೊಂಡಿದ್ದಾರೆ. ಹುತಾತ್ಮ ಪ್ರಾಂಜಲ್ ಅವರ ಮೃತದೇಹವನ್ನು ಇಲ್ಲಿಗೆ ತಂದ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಇದ್ದರೂ ಅಂತಿಮ ದರ್ಶನ ಮಾಡಿ ಹೆತ್ತವರಿಗೆ ಸಾಂತ್ವನ ಹೇಳುವ ಸೌಜನ್ಯವನ್ನೂ ತೋರಲಿಲ್ಲ. ಇದನ್ನು ನಾವು ವಿವಾದ ಮಾಡಲು ಹೋಗಲಿಲ್ಲ.

ಈ ಬಿಜೆಪಿ ಸಂಸದ ಒಬ್ಬ ವೀರ ಯೋಧನ ಬಲಿದಾನವನ್ನು ಕೂಡಾ ತನ್ನ ಸುಳ್ಳು ಸುದ್ದಿಯ ಫ್ಯಾಕ್ಟರಿಗೆ ಸರಕಾಗಿ ಮಾಡಿ ನನ್ನ ಮಾನಹಾನಿಗೆ ಪ್ರಯತ್ನಿಸಿರುವುದು ಅಕ್ಷಮ್ಯ. ಇಂತಹ ಸುಳ್ಳುಕೋರರು ನಮ್ಮ ನಾಡಿಗೆ ಕಳಂಕ. ಇವರಿಗೆ ರಾಜ್ಯದ ಜನರೇ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದ್ವೇಷ ರಾಜಕಾರಣದ ಈ ಚಾಳಿಯಾಗಲೀ, ತಾನೇನೋ ಮಹಾ ಮೇಧಾವಿ ಎಂಬಂತೆ ವರ್ತಿಸುವುದಾಗಲೀ ತೇಜಸ್ವಿ ಸೂರ್ಯಗೆ ಹೊಸದೇನಲ್ಲ.

ಕಳೆದ ವರ್ಷದ ಡಿಸೆಂಬರ್ನಲ್ಲಿ ಈ ಸಂಸದ ವಿಮಾನದಲ್ಲಿ ಎಮರ್ಜೆನ್ಸಿ ಡೋರ್ ತೆರೆದು ಎಲ್ಲರನ್ನೂ ಬೆಚ್ಚಿಬೀಳಿಸಿ, ತಾನೆಷ್ಟು ಬಾಲಿಶ ಎಂಬುದನ್ನೂ ತೋರಿಸಿದ್ದಾಗಿತ್ತು. ಬಿಜೆಪಿ ಸಂಸದನಾದುದಕ್ಕೆ ಆ ಪ್ರಕರಣದಲ್ಲಿ ಬಚಾವಾದದ್ದೇನೋ ನಿಜ. ಅದೇ ಬೇರೆಯವರಾಗಿದ್ದರೆ ಅದನ್ನು ಭಯೋತ್ಪಾದಕ ಕೃತ್ಯ ಎಂದು ಇದೇ ಬಿಜೆಪಿಯವರೇ ಹೇಳುತ್ತಿದ್ದರೊ ಏನೊ.

ಹಾಗೆ ವಿಮಾನದ ಎಮರ್ಜೆನ್ಸಿ ಡೋರ್ ತೆರೆದು ವಿವಾದಕ್ಕೆ ಈಡಾದ ಸ್ವಲ್ಪ ದಿನಗಳಲ್ಲೇ, ರೈತರ ಸಾಲ ಮನ್ನಾ ಮಾಡುವುದರಿಂದ ದೇಶಕ್ಕೆ ಉಪಯೋಗವಾಗುವುದಿಲ್ಲ ಎಂದು ಮಂಗಳೂರಿನಲ್ಲಿ ತೇಜಸ್ವಿ ಸೂರ್ಯ ನೀಡಿದ್ದ ಹೇಳಿಕೆ ವಿವಾದವೆಬ್ಬಿಸಿತ್ತು.

ರೈತರ ಸಾಲ ಮನ್ನಾ ಮಾಡಿದ್ದು ಒಂದು ತಾತ್ಕಾಲಿಕ ಪರಿಹಾರ ಮಾತ್ರ. ಇದರಿಂದ ರೈತರಿಗೆ ಒಂದಿಷ್ಟು ಉಪಯೋಗ ಆಗಿರಬಹುದು. ಆದರೆ ಇದರಿಂದ ದೇಶಕ್ಕೆ ಯಾವುದೇ ರೀತಿಯ ಆರ್ಥಿಕ ಉಪಯೋಗ ಆಗಿಲ್ಲ ಎಂದು ಈ ಮಹಾ ಮೇಧಾವಿ ಅವತ್ತು ಮಾತಾಡಿದ್ದು ಪ್ರತಿಭಟನೆಗೂ ಕಾರಣವಾಗಿತ್ತು.

2019ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸಲು ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಾಗಲೇ ಈ ಮನುಷ್ಯನ ಮತ್ತೊಂದು ಬಣ್ಣ ಬಯಲಾಗಿತ್ತು. ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದರು. 5 ವರ್ಷ ನಾನು ತೇಜಸ್ವಿ ಸೂರ್ಯ ಕೈಯಲ್ಲಿ ನಲುಗಿದ್ದೇನೆ. ನನ್ನ ಪ್ರೀತಿ ಕುರುಡಾಗಿತ್ತು. ನಾನು ಮೊದಲನೇ ಬಲಿಪಶು ಅಲ್ಲ, ಕೊನೆಯವಳೂ ಅಲ್ಲ ಎಂದು ಆ ಮಹಿಳೆ ಟ್ವೀಟ್ ಮೂಲಕ ಹೇಳಿಕೊಂಡಾಗ, ಇದು ಮೀಟೂ ಕೇಸಾ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿತ್ತು.

​ಈ ತೇಜಸ್ವಿ ಸೂರ್ಯ ಅದೆಂತಹ ಸೋಗಲಾಡಿ ಅಂದ್ರೆ 2014 ರಲ್ಲಿ ಇದೇ ತೇಜಸ್ವಿ ಸೂರ್ಯ ಮೋದಿ ಸರಕಾರದ ಅಜೇಂಡಾದಲ್ಲಿ ಮಹಿಳಾ ಮೀಸಲಾತಿ ಒಂದು ಬಿಟ್ಟು ಉಳಿದೆಲ್ಲವೂ ಬಹಳ ಚೆನ್ನಾಗಿದೆ. ಮಹಿಳಾ ಮೀಸಲಾತಿ ಪಾಸಾಗುವ ದಿನದ ಬಗ್ಗೆ ನಾನು ಭಯಭೀತನಾಗಿದ್ದೇನೆ ಎಂದು ಮಹಿಳಾ ಮೀಸಲಾತಿಯನ್ನು ಖಡಕ್ಕಾಗಿ ವಿರೋಧಿಸಿದ್ದರು.

2019 ರಲ್ಲಿ ಬಿಜೆಪಿ ಟಿಕೆಟ್ ಸಿಕ್ಕಿದ ಕೂಡಲೇ ಆ ಟ್ವೀಟ್ ಅನ್ನು ತೇಜಸ್ವಿ ಸೂರ್ಯ ಡಿಲೀಟ್ ಮಾಡಿದ್ರು. ಮಹಿಳಾ ಮೀಸಲಾತಿ ಪಾಸಾದ ಬಳಿಕ ಅದೇ ತೇಜಸ್ವಿ ಸೂರ್ಯ ಇದು ಮಹಿಳಾ ಸಬಲೀಕರಣದ ಹಾದಿಯಲ್ಲಿ ಐತಿಹಾಸಿಕ ನಡೆ ಎಂದು ಹೇಳಿಕೆ ಕೊಟ್ಟರು.

2013 ರಲ್ಲಿ ಹಿಂದೂ ಮಹಾ ಸಭಾದ ನಾಯಕ ಎನ್ ಬಿ ಖಾರೆ ಹೇಳಿಕೆಯನ್ನು ನೆಹರೂ ಹೇಳಿಕೆ ಎಂದು ತಿರುಚಿ ಟ್ವೀಟ್ ಮಾಡಿ ಇದೇ ತೇಜಸ್ವಿ ಸೂರ್ಯ ಟೀಕೆಗೆ ಗುರಿಯಾಗಿದ್ದರು. 2019ರ ಡಿಸೆಂಬರ್ನಲ್ಲಿ ಪೌರತ್ವ ಕಾಯ್ದೆ ಬೆಂಬಲಿಸಿ ಬೆಂಗಳೂರಿನ ಟೌನ್ಹಾಲ್ ಮುಂದೆ ನಡೆದ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಈ ಬಿಜೆಪಿ ಸಂಸದ, ಎದೆ ಸೀಳಿದರೆ ಎರಡಕ್ಷರ ಇಲ್ಲದಂತಹ, ಪಂಕ್ಚರ್ ಅಂಗಡಿ ಹಾಕಿಕೊಂಡಿರುವಂಥವರು ಈ ಕಾರ್ಯಕ್ರಮಕ್ಕೆ ಬಂದಿಲ್ಲ. ಇಲ್ಲಿ ಯಾರೂ ಯಾರನ್ನೂ ಕರೆದಿಲ್ಲ. ಎಲ್ಲರೂ ಸ್ವಇಚ್ಛೆಯಿಂದ ಬಂದಿದ್ದಾರೆ. ಪೌರತ್ವ​ ಕಾಯ್ದೆಗೆ ಬೆಂಬಲ ಇದೆ ಎಂಬುದಕ್ಕೆ ಇದೇ ಸಾಕ್ಷಿ ಎಂದದ್ದು, ಈ ವ್ಯಕ್ತಿ ಎಷ್ಟು ದ್ವೇಷ ಮತ್ತು ಹೀನವಾಗಿ ಯೋಚಿಸಬಲ್ಲ ಎಂಬುದಕ್ಕೆ ಸಾಕ್ಷಿಯಾಗಿತ್ತು.

2020ರ ನವೆಂಬರ್ನಲ್ಲಿ ಹೈದರಾಬಾದ್‌ನ ಒಸ್ಮಾನಿಯಾ ವಿಶ್ವವಿದ್ಯಾಲಯದ ಆವರಣಕ್ಕೆ ಅನುಮತಿ ಇಲ್ಲದೇ ಪ್ರವೇಶ ಮಾಡಿದ ಆರೋಪದ ಮೇಲೆ, ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲಾಗಿತ್ತು.

ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣಾ ಪ್ರಚಾರದ ನಿಮಿತ್ತ ಹೈದರಾಬಾದ್‌ನಲ್ಲಿದ್ದ ತೇಜಸ್ವಿ ಸೂರ್ಯ, ಒಸ್ಮಾನಿಯಾ ವಿವಿಯ ಎನ್‌ಸಿಸಿ ಗೇಟ್ ಬಳಿ ಹಾಕಿದ್ದ ತಡೆಗೋಡೆಯನ್ನು ಮುರಿದು ಬೆಂಬಲಿಗರೊಂದಿಗೆ ವಿವಿ ಆವರಣ ಪ್ರವೇಶಿಸಿದ್ದಾರೆ ಎಂಬ ಆರೋಪ ಹೊರಿಸಲಾಗಿತ್ತು.

2021ರಲ್ಲಿ ಉಡುಪಿ ಕೃಷ್ಣ ಮಠದಲ್ಲಿನ ಕಾರ್ಯಕ್ರಮದಲ್ಲಿ ಮಾತನಾಡಿದ್ದ ತೇಜಸ್ವಿ ಸೂರ್ಯ, ಹಿಂದೂ ಸಂಸ್ಕೃತಿ, ಸಮಾಜ, ಪರಂಪರೆ ಉಳಿಬೇಕಾದರೆ ಹಿಂದೂ ಧರ್ಮ ಉಳಿಯಬೇಕು. ಇದಕ್ಕಾಗಿ ಮತಾಂತರವಾಗಿ ಪಾಕಿಸ್ತಾನಕ್ಕೆ ಹೋದವರನ್ನು ಹಿಂದೂ ಧರ್ಮಕ್ಕೆ ಕರೆತರಬೇಕು. ಜೊತೆಗೆ ಚೀನಾ, ಜಪಾನಿಗೆ ಹೋಗಿ ಮತಾಂತರಗೊಂಡವರನ್ನು ಭಾರತಕ್ಕೆ ವಾಪಸ್ ಕರೆಸಿಕೊಳ್ಳಬೇಕು. ಮುಸ್ಲಿಮರು, ಕ್ರೈಸ್ತರನ್ನು ಘರ್ ವಾಪಸಿ ಮಾಡದೆ ಬೇರೆ ದಾರಿಯಿಲ್ಲ​, ಇದಕ್ಕೆಲ್ಲ ಫೈನಲ್ ಸೊಲ್ಯೂಶನ್ ಆಗಲೇಬೇಕು ಎಂದಿದ್ದರು. ಈ ಹೇಳಿಕೆ ವಿವಾದ ಸೃಷ್ಟಿಸುತ್ತಿದ್ದಂತೆ ವಾಪಸ್ ಪಡೆದಿದ್ದರು.

2021ರಲ್ಲಿ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದಾಗ,​ ಜನರ ನೆರವಿಗೆ ಧಾವಿಸುವ ಬದಲು ಬೆಡ್ ಬ್ಲಾಕಿಂಗ್ ವಿಚಾರ​ದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಹರಡಲು ಸುಳ್ಳಾರೋಪ ಮಾಡಿ ​ಮತ್ತದೇ ಕೀಳು ಮಟ್ಟದ ರಾಜಕೀಯ ಮಾಡಿದ್ದ ತೇಜಸ್ವಿ ಸೂರ್ಯ ​ ಲೇವಡಿಗೆ ತುತ್ತಾಗಿದ್ದರು.

ತಿನ್ನುವ ಅನ್ನದಿಂದ ಹಿಡಿದು ಮನುಷ್ಯನ ಪ್ರಾಣದವರೆಗೆ ಎಲ್ಲದರಲ್ಲಿಯೂ ಜಾತಿ-ಧರ್ಮವನ್ನು ಎಳೆದು ತರುವ ನಿಮ್ಮ ಕೊಳಕು ಬುದ್ಧಿಯನ್ನು ಕೊರೊನಾ ರೋಗಕ್ಕೂ ಯಾಕೆ ಎಳೆದು ತರ್ತೀರಿ ಎಂದು ಆಗ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದರು.

​ಅದೇ ವರ್ಷ ತಮಿಳು ನಾಡಿಗೆ ಹೋಗಿದ್ದಾಗ ಅಲ್ಲಿನ ಹೋಟೆಲ್ ಒಂದರ ಮಾಲಕರು ಸೌಜನ್ಯದ ಸಂಕೇತವಾಗಿ ಬಿಲ್ ಬೇಡ ಎಂದಿದ್ದನ್ನೇ ರಾಜಕೀಯಕ್ಕೆ ಬಳಸಿ ಡಿಎಂಕೆ ವಿರುದ್ಧ ಟೀಕೆ ಮಾಡಿ ಟ್ವೀಟ್ ಮಾಡಿದ್ದರು ತೇಜಸ್ವಿ ಸೂರ್ಯ. ಆದರೆ ಅದಕ್ಕೆ ಹೋಟೆಲ್ ಮಾಲಕ ಅಷ್ಟೇ ನಯವಾಗಿ ತಿರುಗೇಟು ನೀಡಿ ತೇಜಸ್ವಿ ಸೂರ್ಯ ತೀವ್ರ ಮುಜುಗರ ಎದುರಿಸುವಂತಾಯ್ತು.

2022ರ ಜೂನ್ನಲ್ಲಿ ಸಿಡ್ನಿ ವಿವಿಯಲ್ಲಿ ತೇಜಸ್ವಿ ಸೂರ್ಯ ಭಾಷಣ ನಿಗದಿಯಾಗಿತ್ತು. ಆದರೆ, ಸ್ತ್ರೀದ್ವೇಷಿಯಾದ ಫ್ಯಾಸಿಸ್ಟ್ ಸಂಸದನನ್ನು ಆಸ್ಟ್ರೇಲಿಯಾಕ್ಕೆ ಕರೆಸಬಾರದೆಂದು​ ಅಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಅದನ್ನು ರದ್ದುಪಡಿಸಲಾಗಿತ್ತು.

2022ರ ಸೆಪ್ಟೆಂಬರ್ನಲ್ಲಿ ಮಳೆಯ ಅಬ್ಬರಕ್ಕೆ ಬೆಂಗಳೂರು ತತ್ತರಿಸಿದ್ದಾಗ, ನಗರದ ಹಲವಾರು ಪ್ರದೇಶಗಳು ಜಲಾವೃತವಾಗಿದ್ದಾಗ, ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುತ್ತಿದ್ದಾಗ ಬೆಂಗಳೂರು ದಕ್ಷಿಣ ಕ್ಷೇತ್ರದ ಈ ಎಂಪಿಗೆ ಮಸಾಲೆ ದೋಸೆ ತಿನ್ನುವ ಟೆಂಪ್ಟ್ ಆಗಿದ್ದನ್ನು ಜನ ಮರೆತಿರಲಾರರು.

ಇನ್ಸ್ಟಾಗ್ರಾಂನಲ್ಲಿ ದೋಸೆಯ ಫೋಟೊ ನೋಡಿ ಟೆಂಪ್ಟ್ ಆಯಿತೆಂದು ಹೇಳಿಕೊಂಡು ಮಸಾಲೆ ದೋಸೆ ತಿನ್ನುತ್ತಿದ್ದ ವೀಡಿಯೊ ವೈರಲ್ ಆಗಿತ್ತು ಮಾತ್ರವಲ್ಲ, ಊರೆಲ್ಲ ಮುಳುಗಿರುವಾಗ ಈ ಸಂಸದನಿಗಾಗಿದ್ದ ಮಸಾಲೆ ದೋಸೆ ಟೆಂಪ್ಟ್ ​ಆಕ್ರೋಶಕ್ಕೂ ಒಳಗಾಗಿತ್ತು. ಕರ್ನಾಟಕದಲ್ಲಿ ಕಳೆದ ವಿಧಾನಸಭೆ ಚುನಾವಣೆಯ ಹೊತ್ತಲ್ಲಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಗೂಂಡಾ ರಾಜ್, ಮಾಫಿಯಾ ರಾಜ್, ಇಸ್ಲಾಮೀಕರಣ ಮತ್ತು ಭಯೋತ್ಪಾದನೆಯ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಇದೇ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದರು.

ಕರ್ನಾಟಕ ವಿಧಾನಸಭೆ ಚುನಾವಣಾ ಪ್ರಚಾರದ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಈ ಮಹಾ ಮೇಧಾವಿಯ ಹೆಸರೇ ಇರಲಿಲ್ಲ.ಆ ಹೊತ್ತಲ್ಲಿಯೇ ಕಾಂಗ್ರೆಸ್ ಸ್ವತಃ ಬಿಜೆಪಿ ನಾಯಕರಿಂದಲೇ ಕಡೆಗಣನೆಗೆ ಒಳಗಾಗಿದ್ದ ಈ ಸಂಸದನ ಬಗ್ಗೆ ಕರ್ನಾಟಕದಲ್ಲೂ ಯಾರೂ ಕ್ಯಾರೇ ಮಾಡುತ್ತಿಲ್ಲ ಎಂದು ಲೇವಡಿ ಮಾಡಿತ್ತು. ನಫ್ರತಿ ಚಿಂಟು ಎಂದು ಕರೆದಿತ್ತು. ಈಗಲೂ ಈ ಸಂಸದನ ಬಗ್ಗೆ ಯಾರೂ ಕ್ಯಾರೇ ಮಾಡುತ್ತಿಲ್ಲವಾದರೂ, ನಫ್ರತಿ ಚಿಂಟು ಈಗ ಮತ್ತೆ ಹಳೇ ವರಸೆಯದ್ದೇ ಆಟವನ್ನು ಹೊಸದಾಗಿ ಶುರು ಹಚ್ಚಿಕೊಂಡಿದ್ದಾರೆ.​

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!