ನಾಮದ ಸೆಕ್ಸ್ ಮತ್ತು ಬಿ ಎಸ್ ವೈ ಸೆಕ್ಸುವಲ್ ಕ್ರೈಂ ಕೇಸ್ | ನಿನ್ನೆ ಕಲ್ಲಡ್ಕ, ಇಂದು ಬಿಎಸ್ ವೈಗೆ ಹೈಕೋರ್ಟ್ ರಿಲೀಫ್!
ಮಗುವಿಗೆ ಲೈಂಗಿಕ ದೌರ್ಜನ್ಯ ಎಸಗಿ ಪೋಕ್ಸೋ ಪ್ರಕರಣ ಎದುರಿಸುತ್ತಿರುವ ಬಿ ಎಸ್ ಯಡಿಯೂರಪ್ಪಗೆ ಹೈಕೋರ್ಟ್ ಮತ್ತೆ ರಿಲೀಫ್ ನೀಡಿದೆ. ಈ ಹಿಂದೆ ಯಡಿಯೂರಪ್ಪರನ್ನು ಬಂಧಿಸದಂತೆ ಆದೇಶಿಸಿದ್ದ ಹೈಕೋರ್ಟ್, ಶುಕ್ರವಾರ ಯಡಿಯೂರಪ್ಪ ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗುವುದರಿಂದಲೂ ವಿನಾಯಿತಿ ನೀಡಿದೆ.
"ಬಿ ಎಸ್ ಯಡಿಯೂರಪ್ಪ ವಿಚಾರಣೆಗೆ ಹಾಜರಾಗುತ್ತಾರೆ. ಹಾಗಾಗಿ ಬಂಧಿಸಬಾರದು. ವಿಚಾರಣೆ ನಡೆಯಲಿ" ಎಂದು ಬಿ ಎಸ್ ಯಡಿಯೂರಪ್ಪ ಪರ ವಕೀಲರು ಹೈಕೋರ್ಟ್ ನಲ್ಲಿ ಈ ಹಿಂದೆ ಮನವಿ ಮಾಡಿದ್ದರಿಂದ ಹೈಕೋರ್ಟ್ ಬಂಧನದಿಂದ ರಿಲೀಫ್ ನೀಡಿತ್ತು. ಶುಕ್ರವಾರ ನಡೆದ ಹೈಕೋರ್ಟ್ ಕಲಾಪದಲ್ಲಿ "ಜುಲೈ 15 ರಂದು ಪೋಕ್ಸೋ ಪ್ರಕರಣ ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ. ಆದರೆ ಬಿ ಎಸ್ ಯಡಿಯೂರಪ್ಪ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ನೀಡಬೇಕು" ಎಂದು ಯಡಿಯೂರಪ್ಪ ಪರ ವಕೀಲರು ಮನವಿ ಮಾಡಿದರು. ಯಡಿಯೂರಪ್ಪ ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್ "ಯಡಿಯೂರಪ್ಪ ಹೈಕೋರ್ಟ್ ಕಲಾಪದ ಮುಂದಿನ ದಿನಾಂಕದವರೆಗೆ ನ್ಯಾಯಾಲಯಕ್ಕೆ ಹಾಜರಾಗುವುದಕ್ಕೆ ವಿನಾಯಿತಿ ನೀಡಿದೆ"!
ಮಗುವಿಗೆ ಲೈಂಗಿಕ ದೌರ್ಜನ್ಯ ಮಾಡಿದ ಆರೋಪ ಎದುರಿಸುತ್ತಿರುವ ಬಿ ಎಸ್ ಯಡಿಯೂರಪ್ಪ ಅರೆಸ್ಟೂ ಇಲ್ಲ, ಕೋರ್ಟ್ ಗೂ ಹೋಗಬೇಕಿಲ್ಲ !
ಬಿ ಎಸ್ ಯಡಿಯೂರಪ್ಪರನ್ನು ಬಂಧಿಸಲು ಸೂಚಿಸಬೇಕು ಎಂದು ಹಿರಿಯ ವಕೀಲ ಎಸ್ ಬಾಲನ್ ಅವರು ಸಂತ್ರಸ್ತ ಬಾಲಕಿಯ ಸಹೋದರನ ಪರವಾಗಿ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. "ರಿಟ್ ಮೂಲಕ ಯಾರನ್ನಾದರೂ ಬಂಧಿಸಲು ಸೂಚಿಸುವ ಅವಕಾಶ ಹೈಕೋರ್ಟ್ ಗೆ ಇದೆಯೇ ಎಂಬ ಬಗ್ಗೆ ಇರುವ ಕಾನೂನು/ಜಡ್ಜ್ ಮೆಂಟ್ ಗಳನ್ನು ಒದಗಿಸಿ" ಎಂದು ಹೈಕೋರ್ಟ್ ಬಾಲನ್ ಗೆ ಈ ಹಿಂದೆ ಸೂಚಿಸಿತ್ತು.
ಚಾನೆಲ್ ಒಂದರಲ್ಲಿ ದೇವರ ನಾಮದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಚರ್ಚೆಗೆ ಬಂದಿದ್ದವರ ಪೈಕಿ ಒಬ್ಬರು 'ನಾಮದಲ್ಲಿ ಹಲವು ಬಗೆಯಿದೆ. ಕೆಲವರು ಎಕ್ಸ್ (✖) ನಾಮ ಹಾಕುತ್ತಾರೆ' ಎನ್ನುತ್ತಾರೆ. ಅದೇ ಚರ್ಚೆಯ ಪ್ಯಾನಲ್ ನಲ್ಲಿದ್ದ ಪ್ರಗತಿಪರ ಹೋರಾಟಗಾರ ನರಸಿಂಹಮೂರ್ತಿಯವರು "ನಾಮದಲ್ಲಿ ಎಕ್ಸೋ ಸೆಕ್ಸೋ ನನಗೆ ಗೊತ್ತಿಲ್ಲ" ಎಂದಿದ್ದರು.
ಪ್ರಗತಿಪರ ಹೋರಾಟಗಾರ ನರಸಿಂಹಮೂರ್ತಿಯವರು ಯಾವುದೋ ಚಾನೆಲ್ ನಲ್ಲಿ ಹಿಂದೂ ಧರ್ಮದ 'ನಾಮ'ದ ಬಗ್ಗೆ ಮಾತನಾಡಿದರೆಂದು ಹಿಂದೂ ಸಂಘಟನೆಯ ಕಾರ್ಯಕರ್ತರೊಬ್ಬರು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಕೇವಲ 'ನಾಮ'ದ ಬಗ್ಗೆ ಮಾತನಾಡಿದರೆಂದು ಹೋರಾಟಗಾರ ನರಸಿಂಹಮೂರ್ತಿಯವರನ್ನು ಬಂಧಿಸಲು ಕರ್ನಾಟಕ ಹೈಕೋರ್ಟ್ ಆದೇಶಿಸಿತ್ತು. ರಿಟ್ ಅರ್ಜಿಯ ಮೂಲಕ ಆರೋಪಿಯನ್ನು ಬಂಧಿಸಲು ಅವಕಾಶ ಇದೆ ಎಂದಾಯ್ತು. ಹಾಗಾಗಿ ಅದೇ ತೀರ್ಪನ್ನು ಯಡಿಯೂರಪ್ಪ ಪೋಕ್ಸೋ ಪ್ರಕರಣದಲ್ಲಿ ವಕೀಲ ಎಸ್ ಬಾಲನ್ ಹೈಕೋರ್ಟ್ ಗೆ ಸಲ್ಲಿಸಿದರು. ಆದರೆ ಈ ಬಗ್ಗೆ ಹೈಕೋರ್ಟ್ ನಲ್ಲಿ ಚರ್ಚೆ ನಡೆಯಲಿಲ್ಲ.
ಹಿಂದೂ ಧರ್ಮದ 'ನಾಮ'ವನ್ನು ಅವಹೇಳನ ಮಾಡಿದ್ದರಿಂದ ಪ್ರಗತಿಪರ ಹೋರಾಟಗಾರರನ್ನು ಬಂಧಿಸಬೇಕು ಎಂದು ಹಾಕಲಾಗಿದ್ದ ರಿಟ್ ಅನ್ನು ಹೈಕೋರ್ಟ್ ಪುರಸ್ಕರಿಸುತ್ತದೆ. ಅದೇ ಹೈಕೋರ್ಟ್ ಪೋಕ್ಸೋ ಪ್ರಕರಣದಲ್ಲಿ ಮಗುವಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪಿ ಬಿ ಎಸ್ ಯಡಿಯೂರಪ್ಪರನ್ನು ಬಂಧಿಸಲು ಸೂಚಿಸಿ ಎನ್ನುವ ರಿಟ್ ನಲ್ಲಿ ಆರೋಪಿಗೆ ರಿಲೀಫ್ ನೀಡುತ್ತದೆ. ಬಾಲಕಿಗೆ ಸೆಕ್ಸುವಲ್ ಹೆರಾಸ್ಮೆಂಟ್ ಕೊಡುವುದಕ್ಕಿಂತ ನಾಮಕ್ಕೆ ಸೆಕ್ಸ್ ಎನ್ನುವುದು ಗಂಭೀರ ಅಪರಾಧವೇ ?