ನಾರೀ ನಿನ್ನ ಮಾರೀ ಮ್ಯಾಗ...

ಈ ಕಾಯ್ದೆಯ ಬಗ್ಗೆ ಈಗಾಗಲೇ ಸಾಕಷ್ಟು ಪರ, ಒಂದಿಷ್ಟು ವಿರೋಧಿ ಪ್ರತಿಕ್ರಿಯೆಗಳು ಬಂದಿವೆ. ಇವು ಯಾವುವೂ ನನ್ನ ಅರಿವನ್ನು ವಿಸ್ತರಿಸದಿರುವುದರಿಂದ ನನ್ನ ಈ ಪ್ರತಿಕ್ರಿಯೆ; ಒಂದಿಷ್ಟು ಕ್ರಿಯೆಯೂ. ಸಂವಿಧಾನದಡಿಯ ತಿದ್ದುಪಡಿಯ ಮೂಲಕ ಈ ಕಾಯ್ದೆಯನ್ನು ತರಲಾಗಿದೆ. ಎಷ್ಟೇ ಅರ್ಥವಾಗದ ಹಾಗೆ ಸರಕಾರದ ಅಧಿನಿಯಮಗಳನ್ನು, ತಿದ್ದುಪಡಿಗಳನ್ನು ರಚಿಸಿದರೂ ಅದಕ್ಕೊಂದು ಅರ್ಥ- ಸಾಹಿತ್ಯ ಮತ್ತದರ ವಿಮರ್ಶೆಯ ಹಾಗೆ- ಕೊೆಗೆ ಅನುಭವವಾದರೂ ಇರುತ್ತದಲ್ಲ.

Update: 2023-09-28 03:03 GMT

- ಬಾಲಸುಬ್ರಹ್ಮಣ್ಯ ಕಂಜರ್ಪಣೆ


ಅಂಬಿಕಾತನಯದತ್ತರ ‘ನಾರೀ ನಿನ್ನ ಮಾರೀ ಮ್ಯಾಗ’ ಕವನದ ಮೊದಲ ಸಾಲುಗಳು ಹೀಗಿವೆ: ನಾರೀ ನಿನ್ನ ಮಾರೀ ಮ್ಯಾಗ ನಗ ನವಿಲು ಆಡತಿತ್ತ ಆಡುತಿತ್ತ ಓಡುತಿತ್ತ ಮುಗಿಲ ಕಡೆಗೆ ನೋಡತಿತ್ತ॥ಮುಂದೆ ಈ ಕವಿತೆ ನವಿರಾದ ನೋಟಗಳನ್ನೂ ವಿಷಾದಗಳನ್ನೂ ಹಿತಮಿತವಾಗಿ ಬೆರೆಸಿ ಮೋಡಗಟ್ಟಿಸುತ್ತದೆ. ಮಳೆ ಬಂತೋ ಇಲ್ಲವೋ ಗೊತ್ತಿಲ್ಲ.

ರಾಮಾಯಣ ಪುರಾಣದಲ್ಲಿ ಬರುವ ಅಹಲ್ಯೆಯ ಐತಿಹ್ಯ ಅರ್ಥಪೂರ್ಣ. ಆಕೆ ಮನುಷ್ಯಳಾಗಿದ್ದು ಋಷಿಪತ್ನಿಯಾಗಿದ್ದವಳು. ಸುಂದರಿ ಬೇರೆ. ಆಗಿನ ಋಷಿಗಳೆಂದರೆ ಈಗಿನ ಯುನಿವರ್ಸಿಟಿ ಪ್ರೊಫೆಸರ್ಗಳ ಹಾಗೆ ಮರ್ಜಿಯವರು. ‘ನ ಸ್ತ್ರೀ ಸ್ವಾತಂತ್ರ್ಯಮರ್ಹತಿ..’ಯನ್ನು ಜಪಿಸಿದರೇ ಹೊರತು ‘ಯತ್ರ ನಾರ್ಯಸ್ತು ಪೂಜ್ಯಂತೇ..’ ಅವರ ಪಠ್ಯದಲ್ಲಿರಲಿಲ್ಲ. ಸಿಟ್ಟಾದಾಗ ಅವಿವೇಕದಿಂದ ಜಪಿಸುವುದನ್ನು ಮರೆತು ಶಪಿಸುವವರು. ಪತಿಯ ಶಾಪಕ್ಕೆ ಅಹಲ್ಯೆ ಕಲ್ಲಾದಳು. ಮಹರ್ಷಿಗಳು ತಮ್ಮ ಜಪ-ತಪಕ್ಕೆ ಮರಳಿದರು. ಅಕ್ರಮವಾಗಿ ಭೋಗಿಸಿದ ಇಂದ್ರನಿಗೆ ನಷ್ಟವಾಗಲಿಲ್ಲ. ಸಹಸ್ರಾಕ್ಷನಾದ. ಪ್ರಾಯಃ ಆತನೂ ಸಿನೆಮಾ ಸ್ಟೈಲಿನಲ್ಲಿ ‘ನೂರು ಕಣ್ಣು ಸಾಲದು ನಿನ್ನ ನೋಡಲು..’ ಎಂದು ಹಾಡಿದ್ದನೋ ಏನೋ? ಎಲ್ಲರ ಬದುಕೂ ಸಾರ್ಥಕವಾಯಿತು. ಕಲ್ಲಾಗಿಯೂ ಸುಂದರಿಯಾಗಿದ್ದಿರಬೇಕು. ಅವಳ ಅದೃಷ್ಟಕ್ಕೆ ಯಾರೂ ಆ ಮೊದಲೇ ಮನೆಗೊಯ್ದು ಬಟ್ಟೆ ಒಗೆಯುವ ಕಲ್ಲಾಗಿಯೋ ಮೆಟ್ಟಲಾಗಿಯೋ ಬಳಸಲಿಲ್ಲ. ಬಹಳ ಕಾಲದ ಬಳಿಕ ಶ್ರೀರಾಮಪಾದ ಆಕೆಯನ್ನು ಎಡವಿದಾಗ ಮತ್ತೆ ಮನುಷ್ಯಳಾದಳು; ಮರಳಿ ಪತಿಗೃಹ ಸೇರಿದಳು. ಮುಂದಿನ ಕಥೆ ಪ್ರಸ್ತುತವಲ್ಲ.

ಆಡಳಿತ ವಿಜ್ಞಾನಕ್ಕೆ ಸಂಬಂಧಪಟ್ಟಂತೆ ‘Child Widow Syndrome’(ಬಾಲ ವಿಧವಾ ನಡವಳಿಕೆ) ಎಂಬ ಸಿದ್ಧಾಂತವಿದೆ. ಇದು ಈಗಿನ ಕಾಲಕ್ಕೆ ಅನ್ವಯಿಸುವುದಿಲ್ಲ. ಹಿಂದೆ ಜನಪದೀಯ ಬಾಲವಿಧವೆಯರು ಗಂಡನ ಮನೆಯಲ್ಲೋ, ತವರಿನಲ್ಲೋ ಇದ್ದು ನಿರ್ಲಕ್ಷಕ್ಕೆ ಗುರಿಯಾಗುತ್ತಿದ್ದರು. ಊರಿಗೆಲ್ಲ ಒಂದೇ ಬಾವಿ. (ಈಗಿನ ಸಾರ್ವಜನಿಕ ನಲ್ಲಿಯ ಹಾಗೆ.) ನೀರು ತರುವ ಕಷ್ಟ, ಶ್ರಮ ಈ ಅಭಾಗಿನಿಯರ ಪಾಲಿಗೆ. ಇಂತಹ ಬಾಲವಿಧವೆಯರು ಅಲ್ಲಿ ನಿತ್ಯ ಸೇರುತ್ತಿದ್ದರು. ತಮ್ಮ ತಮ್ಮ ಮನೆಯಲ್ಲಿ ಅನುಭವಿಸುವ ಕಷ್ಟ-ನಿಷ್ಠೂರಗಳನ್ನು ಹಂಚಿಕೊಳ್ಳುವವರು. ಮತ್ತೆ ಅವರವರ ಮನೆಗಳಿಗೆ ತೆರಳಿ/ಮರಳಿ ಅದೇ ಗೋಳಿನ ಧಾರಾವಾಹಿಯಲ್ಲಿ ಭಾಗವಹಿಸುವವರು. ‘ಪುನರಪಿ ಜನನಂ ಪುನರಪಿ ಮರಣಂ, ಪುನರಪಿ ಜನನೀ ಜಠರೇ ಶಯನಂ! ಇಹ ಸಂಸಾರೇ ಬಹು ದುಸ್ತಾರೇ...’ (ಕೃಪಯಾ ಪಾರೇ ಪಾಹಿ ಮುರಾರೇ ಮಾತ್ರ ಊರಲ್ಲಿಲ್ಲ!) ಇವೆಲ್ಲ ಕಾವ್ಯದ, ಕವಿಯ ಸ್ವಾತಂತ್ರ್ಯ.

ಆದರೆ ವಾಸ್ತವಕ್ಕೆ ಬಹು ಹತ್ತಿರ. ಕೆಲವು ದಶಕಗಳ ಹಿಂದೆ ಗೋಗಿಯಾಪಾಷಾ ಎಂಬ ಜಾದೂಮಾಂತ್ರಿಕನಿದ್ದ. ಆತನ ಪ್ರದರ್ಶನಗಳೆಂದರೆ ಮಕ್ಕಳಿಗೂ ದೊಡ್ಡವರಿಗೂ ಅಚ್ಚುಮೆಚ್ಚು. ಆತ ವೇದಿಕೆಯಲ್ಲಿ ಕುಣಿಯುತ್ತ, ದೊಡ್ಡ ಬಟ್ಟೆಯನ್ನು, ಬೆಳಕಿನ ಉರಿಯನ್ನು ಪ್ರದರ್ಶಿಸುತ್ತ ಪ್ರೇಕ್ಷಕರನ್ನು ಕುಣಿದಾಡಿಸುತ್ತಿರುವಾಗಲೇ ಯಕ್ಷಗಾನದ ಮಹಿಷಾಸುರನಂತೆ ಸಭಾಂಗಣದ ಹಿಂದಿನಿಂದ ಪ್ರವೇಶಿಸುತ್ತಿದ್ದ. ಒಮ್ಮೆ ಮಾತ್ರ ಆತ ಈ ಬೆಳಕಿನ ರಮ್ಯತೆಯ ಸಮ್ಮೋಹನದ ನಡುವೆ ವೇದಿಕೆಯ ಹಿಂಭಾಗದಿಂದ ಸಭಾಂಗಣದ ಹಿಂಭಾಗಕ್ಕೆ ಓಡುವಾಗ ಕೆಲವು ಪಡ್ಡೆಹುಡುಗರ ಕೈಗೆ ಸಿಕ್ಕಿಬಿದ್ದು ಬಯಲುಗೊಂಡ. ಆನಂತರ ಆತನ ಜಾದೂ ಅದೃಶ್ಯವಾಯಿತು. ಆಗ ಎಳೆಯರಾಗಿದ್ದ ನಾವೆಲ್ಲ ‘‘ಇದೆಲ್ಲದರ ಅರ್ಥವೇನು ದೇವರೇ’’ ಎಂದು ಕಾರ್ನಾಡರ ಶೈಲಿಯಲ್ಲಿ ದುಃಖಿಸಿದೆವು. ಒಬ್ಬರನ್ನು ಅನೇಕ ಬಾರಿಯೂ ಹಲವರನ್ನು ಒಂದು ಬಾರಿಯೂ ಮೋಸಮಾಡಬಹುದು; ಆದರೆ ಎಲ್ಲರನ್ನೂ ಎಲ್ಲ ಕಾಲಕ್ಕೂ ಮೋಸಮಾಡಲು ಸಾಧ್ಯವಿಲ್ಲ ಎಂಬುದು ಈಗ ಸುಳ್ಳೆಂದು ಸಾಬೀತಾದ ‘ಗೋಲ್ಮಾಲ್’ ಸತ್ಯ.

ನಮ್ಮ ಪ್ರಜಾತಂತ್ರ ಆದರ್ಶಪ್ರಾಯವಾದದ್ದು. ಸ್ಥೂಲಾವಲೋಕನದಲ್ಲಿ ಎಲ್ಲವೂ ಸಪಾಟಾಗಿದೆಯೆನ್ನಿಸುತ್ತದೆ; ವಾಸ್ತವವನ್ನು ಮರೆಮಚುವ ವಾದ, ತರ್ಕ ನಮ್ಮನ್ನಾಳುವವರದ್ದು. ಸೂಕ್ಷ್ಮಾವಲೋಕನದಲ್ಲಷ್ಟೇ ನಿಜವನ್ನು ಅರಿಯಬಹುದು. ಈಗ ಸಂಸತ್ತಿನ ಎರಡೂ ಸದನಗಳಲ್ಲಿ ಅಂಗೀಕರಿಸಿದ ‘ನಾರೀಶಕ್ತಿ ವಂದನ್ ಅಧಿನಿಯಮ’ವೆಂದು ಪ್ರಚಾರವಾದ ಕಾಯ್ದೆ ಸುಮಾರಾಗಿ ಈ ರೀತಿಯಲ್ಲೇ ಇದೆ. ಇದರ ಆಂಗ್ಲ ಸ್ವರೂಪವು ಗಝೆಟ್ಟಿನಲ್ಲಿ ‘The Constitution (One Hundred and Twenty-Eighth Amendment) Bill, 2023’ ಎಂದಿದೆ. ಆದರೆ ಭಕ್ತಿ ಪಂಥಕ್ಕೆ ತರ್ಕವಿಲ್ಲ. ಮೊದಲೆಲ್ಲ ‘ನಾಗರಪಂಚಮಿ ನಾಡಿಗೆ ಬಂದರೆ ನಾರಿಯರೆಲ್ಲಾ ನಲಿದಾರು..’ ಈಗ ಈ ಮಸೂದೆ ಬಂದ ತಕ್ಷಣ ನಾರಿಯರೆಲ್ಲ ಬೀದಿಗೆ ಬಂದು ನಲಿಯುತ್ತಿದ್ದಾರೆ. ಎಲ್ಲೆಡೆ ಪ್ರಧಾನಿಯವರಿಗೆ ಧನ್ಯವಾದಗಳನ್ನು, ಸ್ತುತಿಗಳನ್ನು, ಆದರಾತಿಥ್ಯಗಳನ್ನು ಮಾಡುತ್ತಿದ್ದಾರೆ. ಈ ಸಂಭ್ರಮ ಸಮಾರಂಭಗಳು ಪ್ರಾಯಃ ಮುಂದಿನ ಲೋಕಸಭಾ ಚುನಾವಣೆಯವರೆಗೂ ಯೋಜಿಸಲ್ಪಡಬಹುದು; ಪ್ರಾಯೋಜಿಸಲ್ಪಡಬಹುದು.

ಈ ಕಾಯ್ದೆಯ ಬಗ್ಗೆ ಈಗಾಗಲೇ ಸಾಕಷ್ಟು ಪರ, ಒಂದಿಷ್ಟು ವಿರೋಧಿ ಪ್ರತಿಕ್ರಿಯೆಗಳು ಬಂದಿವೆ. ಇವು ಯಾವುವೂ ನನ್ನ ಅರಿವನ್ನು ವಿಸ್ತರಿಸದಿರುವುದರಿಂದ ನನ್ನ ಈ ಪ್ರತಿಕ್ರಿಯೆ; ಒಂದಿಷ್ಟು ಕ್ರಿಯೆಯೂ.

ಸಂವಿಧಾನದಡಿಯ ತಿದ್ದುಪಡಿಯ ಮೂಲಕ ಈ ಕಾಯ್ದೆಯನ್ನು ತರಲಾಗಿದೆ. ಎಷ್ಟೇ ಅರ್ಥವಾಗದ ಹಾಗೆ ಸರಕಾರದ ಅಧಿನಿಯಮಗಳನ್ನು, ತಿದ್ದುಪಡಿಗಳನ್ನು ರಚಿಸಿದರೂ ಅದಕ್ಕೊಂದು ಅರ್ಥ-ಸಾಹಿತ್ಯ ಮತ್ತದರ ವಿಮರ್ಶೆಯ ಹಾಗೆ- ಕೊನೆಗೆ ಅನುಭವವಾದರೂ ಇರುತ್ತದಲ್ಲ!

ಸಂವಿಧಾನವು ಹಲವು ಬಗೆಯ ಮೀಸಲಾತಿಯನ್ನು ನೀಡಿದೆ. ಅವಕ್ಕೆ ಗಡುವನ್ನೂ ವಿಧಿಸಿದೆ. ಕಾರಣವನ್ನೂ ಸಂವಿಧಾನ ನಿರ್ಮಾಪಕರೂ ಆನಂತರದ ಶಾಸ್ತ್ರಜ್ಞರೂ ಪರಿಣತರೂ ನೀಡಿದ್ದಾರೆ. ಸಂಸತ್ತಿಗೆ, ರಾಜ್ಯಗಳಿಗೆ, ಕೇಂದ್ರಾಡಳಿತ ಪ್ರದೇಶಗಳಿಗೆ-ಹೀಗೆ ಎಲ್ಲ ಪ್ರದೇಶಗಳಿಗೂ ಅನ್ವಯಿಸುವ ಒಂದೇ ಮೀಸಲಾತಿ ಸಾಕಾಗಿದ್ದರೂ ಪ್ರತ್ಯಪ್ರತ್ಯೇಕವಾಗಿ ಇವುಗಳನ್ನು ನಿರೂಪಿಸಲಾಗಿದೆ. ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದಂತೆ ಸಂವಿಧಾನದ 8ನೇ ಭಾಗದಲ್ಲಿ 239ಎಎ ದಿಲ್ಲಿಗೆ, ಹಾಗೆಯೇ 240ನೇ ವಿಧಿಯು ಇತರ ಕೇಂದ್ರಾಡಳಿತ ಪ್ರದೇಶಗಳಿಗೆ ವಿಶೇಷ ಹಕ್ಕು, ಕರ್ತವ್ಯ, ಸೌಲಭ್ಯ ಮತ್ತು ನಿಬಂಧನೆಗಳನ್ನು ರೂಪಿಸಿದೆ.

ಈಗ ದಿಲ್ಲಿಗೆ ಮಾತ್ರ ಅನ್ವಯವಾಗುವಂತೆ 239(2)(ಬಿಎ), (ಬಿಬಿ) ಮತ್ತು (ಬಿಸಿ)ಗಳನ್ನು ರೂಪಿಸಿ ಕೊಟ್ಟು ಒಟ್ಟು ಸ್ಥಾನಗಳಲ್ಲಿ ಮೂರನೆಯ ಒಂದು ಸ್ಥಾನಗಳನ್ನು ಮಹಿಳೆಯರಿಗೆ ಮತ್ತು ಈ ಪೈಕಿ ಮೂರನೆಯ ಒಂದು ಸ್ಥಾನಗಳನ್ನು ಪರಿಶಿಷ್ಟ ಜಾತಿ ಮತ್ತು ವರ್ಗದ ಮಹಿಳೆಯರಿಗೆ ಮೀಸಲಾಗಿರಿಸಿದೆ. ಅದೇ ರೀತಿಯಲ್ಲಿ ವಿಧಿ 330ಎ-ಯ ಮೂಲಕ ಸಂಸತ್ತಿನಲ್ಲಿ ಹಾಗೂ 332ಎ-ಯ ಮೂಲಕ ರಾಜ್ಯ ಶಾಸನ ಸಭೆಗಳಲ್ಲಿ, ಮಹಿಳೆಯರಿಗೆ ಮೂರನೆಯ ಒಂದು ಸ್ಥಾನಗಳನ್ನು ಮತ್ತು ಆ ಪೈಕಿ ಮೂರನೆಯ ಒಂದು ಸ್ಥಾನಗಳನ್ನು ಪರಿಶಿಷ್ಟ ಜಾತಿ ಮತ್ತು ವರ್ಗದ ಮಹಿಳೆಯರಿಗೆ ಮೀಸಲಾಗಿರಿಸಿದೆ. ಈ ಅಂಶಗಳು ಪ್ರಶಂಸಾರ್ಹ. ಹಾಗೆಂದು ಇದಕ್ಕೆ ಈ ಸರಕಾರವೇ ಕಾರಣವಲ್ಲ. 1993ರ ಜಾಗತಿಕ ಮಹಿಳಾ ಮೀಸಲಾತಿ ನೀತಿಯನ್ವಯ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳ ಮೂಲಕ ಭಾರತದಲ್ಲೂ ಪಂಚಾಯತ್ ಮತ್ತು ಪುರ/ನಗರ ಸಭೆಗಳಲ್ಲಿ ಮಹಿಳಾ ಮೀಸಲಾತಿಯನ್ನು ನೀಡಲಾಗಿತ್ತು.

ಆಗ ಇದಕ್ಕಿಂತ ಹೆಚ್ಚಿನ ಪ್ರಾದೇಶಿಕ, ಭೌಗೋಳಿಕ ಮತ್ತು ಅಧಿಕಾರ ವ್ಯಾಪ್ತಿಯ ಅಂದರೆ ರಾಜ್ಯ ಮತ್ತು ಸಂಸದೀಯ ಚುನಾವಣೆಗಳನ್ನು ಗಮನಿಸಿರಲಿಲ್ಲ. ಆದರೂ 1996, 1998, 1999 ಮತ್ತು 2008ರಲ್ಲಿ ಮಹಿಳಾ ಮೀಸಲಾತಿಯ ಮಸೂದೆಗಳು ಸಂಸತ್ತಿನಲ್ಲಿ ಮಂಡಿಸಲ್ಪಟ್ಟವು. ರಾಜಕಾರಣವಾಗಿ ಈ ಮಸೂದೆಗಳೆಲ್ಲವೂ ನಿರಸನಗೊಂಡವು. ಈಗ ತಂದಿರುವ ಮಸೂದೆಗೂ ಆಗಿನ ಮಸೂದೆಗಳಿಗೂ ಇದ್ದ ಒಂದು ಅಂತರವೆಂದರೆ ಆಗೆಲ್ಲ ಒಳಮೀಸಲಾತಿಯ ಪ್ರಸ್ತಾವನೆಯಿರಲಿಲ್ಲ. ಈ ಬಾರಿ ಇದೆ.

ಈ ತಿದ್ದುಪಡಿಗಳ ಧ್ಯೇಯೋದ್ದೇಶಗಳನ್ನು ಸರಕಾರ ಬಹಳ ಪ್ರಗತಿಪರವಾಗಿ ಹೀಗೆ ಹೇಳಿಕೊಂಡಿದೆ: ಸಂಕ್ಷಿಪ್ತವಾಗಿ ಅದನ್ನು ಹೇಳುವುದಾದರೆ- 1. ಸ್ವಾತಂತ್ರ್ಯದ 75ನೇ ಹೊಸ್ತಿಲಲ್ಲಿರುವ (ಈಗ ದಾಟಿದ್ದೇವೆ) ನಮ್ಮ ದೇಶವು 2047ರ ಹೊತ್ತಿಗೆ ಒಂದು ‘ವಿಕಸಿತ ಭಾರತ’ವಾಗಿಸಲು ತನ್ನ ಪಯಣವನ್ನು ಆರಂಭಿಸಿದೆ. ಈ ಗುರಿಯ ಈಡೇರುವಿಕೆಗೆ ಸಮಾಜದ ಎಲ್ಲ ಕ್ಷೇತ್ರಗಳ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್’ಗಳ ಆಶಯದೊಂದಿಗೆ ನೀಡುವ ಕೊಡುಗೆಯನ್ನವಲಂಬಿಸಿದೆ. ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಪಾತ್ರವಂತೂ ಬಹು ಮುಖ್ಯವಾಗಿದೆ. 2. ಸರಕಾರವು ಮಹಿಳೆಯರ ಅಭ್ಯುದಯಕ್ಕಾಗಿ, ಆರ್ಥಿಕ ಸ್ವಾತಂತ್ರ್ಯಕ್ಕಾಗಿ, ಸುಲಭದ ಬದುಕಿಗಾಗಿ, ಉಜ್ವಲ ಯೋಜನೆ, ಸ್ವಚ್ಛ ಭಾರತ ಮಿಶನ್, ಮುದ್ರಾ ಯೋಜನಾ ಮುಂತಾದವುಗಳ ಮೂಲಕ ಅವರನ್ನು ‘ನಾರೀ ಶಕ್ತಿ’ಯನ್ನಾಗಿಸಲು ಹಲವು ಹೆಜ್ಜೆಗಳನ್ನಿಟ್ಟಿದೆ. ಆದರೂ ಸಮಾಜದ ಪರವಾಗಿ ತೀರ್ಮಾನ ಕೈಗೊಳ್ಳುವ ಶಾಸನಸಭಾ/ಸಂಸತ್ತಿನ ಚರ್ಚೆಗಳಲ್ಲಿ ಭಾಗವಹಿಸುವ ಅವಕಾಶವನ್ನು ಹೆಚ್ಚಿಸುವುದರಿಂದ ಅವರಿಗೆ ಇನ್ನಷ್ಟು ಹೆಚ್ಚಿನ ಶಕ್ತಿಯನ್ನು ನೀಡಬೇಕಿದೆ. 3. ಪಂಚಾಯತ್ರಾಜ್ ಸಂಸ್ಥೆಗಳಲ್ಲಿ ಮತ್ತು ಪುರ/ನಗರ ಸಭೆಗಳಲ್ಲಿ ಮಹಿಳೆಯರು ಸಾಕಷ್ಟು ಪ್ರಾತಿನಿಧ್ಯ ಹೊಂದಿದ್ದರೂ ಸಂಸತ್ತು ಮತ್ತು ಶಾಸನಸಭೆಗಳಲ್ಲಿ ಅವರ ಪ್ರಾತಿನಿಧ್ಯವು ಕಡಿಮೆ. ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯವು ಸಿಗಬೇಕೆಂಬುದು ಬಹುಕಾಲದ ಬೇಡಿಕೆ.

ಹಲವು ಬಾರಿ ಮಹಿಳಾ ಮೀಸಲಾತಿಯನ್ನು ನೀಡುವ ಮಸೂದೆಗಳನ್ನು ಲೋಕಸಭೆಯಲ್ಲಿ ಮತ್ತು ರಾಜ್ಯ ಶಾಸನ ಸಭೆಗಳಲ್ಲಿ ಮಂಡಿಸುವ ಪ್ರಯತ್ನ ನಡೆದಿದೆ. ಕೊನೆಯ ಅಂತಹ ಪ್ರಯತ್ನವು 2010ರಲ್ಲಿ ನಡೆದು ರಾಜ್ಯಸಭೆಯಲ್ಲಿ ಅಂಗೀಕೃತವಾದರೂ ಲೋಕಸಭೆಯಲ್ಲಿ ಯಶಸ್ವಿಯಾಗಲಿಲ್ಲ. 4. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಚ್ಚಿನ ಭಾಗವಹಿಸುವಿಕೆಯ ಮೂಲಕ ಆಡಳಿತ ನೀತಿಯಲ್ಲಿ ಮಹಿಳೆಯರು ಸಾರ್ವಜನಿಕ ಪ್ರಾತಿನಿಧ್ಯ ಪಡೆಯಲು ಈ ಮಸೂದೆಯನ್ನು ಮಂಡಿಸಲಾಗಿದೆ. ಈ ತಿದ್ದುಪಡಿಗಳನ್ನು ಮೂಗಿಗೆ ಸವರಿದ ತುಪ್ಪದಂತಾಗಿಸಿದ ಒಂದು ಅಂಶವೆಂದರೆ ಹೊಸದಾಗಿ 334ಎ ಎಂಬ ಸಂವಿಧಾನ ವಿಧಿಯನ್ನು ಸೇರಿಸಿದ್ದು. ಇದು ಈ ಮೊದಲು ಹೇಳಿದ ಮೂರನೇ-ಒಂದು ಮಹಿಳಾ ಮೀಸಲಾತಿಯನ್ನು ಮತ್ತು ಅದರೊಳಗೆ ಮೂರನೇ-ಒಂದು ಒಳಮೀಸಲಾತಿಯನ್ನು ಅಣಕಿಸುವಂಥಾದ್ದು. ಇದರನ್ವಯ ಈ ಮೀಸಲಾತಿಗಳು ಹೊಸದಾಗಿ ಜನಗಣತಿಯನ್ನು ಮತ್ತು ಅದರನ್ವಯ ಚುನಾವಣಾ ಕ್ಷೇತ್ರಗಳ ಸ್ಥಾನಗಳ ಭೌಗೋಳಿಕ ಎಲ್ಲೆಯ ಮಿತಿ/ವ್ಯಾಪ್ತಿಯನ್ನು ನಿರ್ಧರಿಸಿದ ನಂತರವೇ ಜಾರಿಗೆ ಬರುತ್ತದೆ ಮತ್ತು ಅಲ್ಲಿಂದ 15 ವರ್ಷಗಳ ವರೆಗೆ ಮಾತ್ರ ಅನ್ವಯವಾಗುತ್ತದೆ. ಸಂಸತ್ತು ಈ ಗಡುವನ್ನು ಶಾಸನದ ಮೂಲಕ ವಿಸ್ತರಿಸಬಹುದು. ಯಾವಾಗ ಈ ಜನಗಣತಿ ಮತ್ತು ಭೌಗೋಳಿಕ ಎಲ್ಲೆಯ ಗುರುತಿಸುವಿಕೆ ನಡೆಯುತ್ತದೆಯೆಂಬುದನ್ನು ಈ ತಿದ್ದುಪಡಿ ನಮೂದಿಸಿಲ್ಲವಾದರೂ ಈಗ ಕಂಡಂತೆ 2029ರ ಮೊದಲಂತೂ ನಡೆಯುವ ಸಾಧ್ಯತೆಯಿಲ್ಲ. ಆನಂತರವೂ ಅನಿಶ್ಚಿತ. ಗಾಳಿಯಲ್ಲಿ ಗೇಣಳತೆಯಂತೆ.

ಆದರೂ ಸರಕಾರವು ಈಗಲೇ ಮಗು ಹುಟ್ಟುತ್ತದೆಂಬ ಪ್ರಸವ ವೇದನೆಯನ್ನು ಪ್ರದರ್ಶಿಸಿದೆ. ಆದರೆ ಇದು ಸಾಕಾರವಾಗಬೇಕಾದರೆ ಮೈಲುದ್ದ ಕಾಯಬೇಕಾಗಿದೆಯೆಂಬುದು ವಾಸ್ತವ. ಈ ಮಸೂದೆಗೆ ತೋರುವ ಯಾವುದೇ ವಿರೋಧವೂ ‘ಮಹಿಳಾ ವಿರೋಧಿ’ಯೆಂದು ಬಣ್ಣನೆಗೊಳ್ಳುವ ಅಪಾಯವಿತ್ತು. ಆದ್ದರಿಂದ ಮಸೂದೆಯ ಮಂಡನೆಗೆ ಯಾವ ರಾಜಕೀಯ ಒತ್ತಡವು ಕಾರಣವಾಯಿತೋ ಅದೇ ಒತ್ತಡದಿಂದಾಗಿ ಪ್ರತಿಪಕ್ಷಗಳು ಇದನ್ನು ಬೆಂಬಲಿಸಿದವು. ಸರಕಾರಕ್ಕೆ ಈ ದೇಶದ ಪ್ರಜೆಗಳ ಬೌದ್ಧಿಕ ಮಟ್ಟದ ಗುರುತಾಗಿದೆ. ಆದ್ದರಿಂದಲೇ ಗಜಗರ್ಭಕ್ಕೆ ಬೀಜ ಬಿತ್ತಿದೆ. ಮುಂದೆ ಹೇಗೋ ಏನೋ? ಆದರೆ ಈ ಮಸೂದೆಯ ಪರವಹಿಸಿದ ಮಹಿಳೆಯರಿಗೆ, ಅದರಲ್ಲೂ ಭಕ್ತಿ ಪಂಥದವರಿಗೆ ಇದು ಅರ್ಥವಾಗದಿದ್ದರೂ ಮೆಚ್ಚುಗೆಯ ಅಂಶವಾಗಿ ಗೋಚರಿಸಿದೆ. ಒಂದುಕಡೆ ಒಬ್ಬ ವಿಜ್ಞಾನಿ ಮುಂದೆ 10 ಮಿಲಿಯ ವರ್ಷಗಳ ಬಳಿಕ ಈ ಭೂಮಿಯ ಮೇಲೆ ಉಲ್ಕೆಯೊಂದು ಅಪ್ಪಳಿಸಿ ಭೂಮಿಯು ನಾಶವಾಗಬಹುದೆಂದು ಎಚ್ಚರಿಸಿದರು. ಆಗ ಸಭಾಸದರ ನಡುವಿಂದ ಹಣ್ಣುಮುದುಕಿಯೊಬ್ಬಳು ‘‘ಎಷ್ಟು ವರ್ಷ? ಇನ್ನೊಮ್ಮೆ ಹೇಳಿ!’’ ಎಂದು ಕೇಳಿದಳು. ವಿಜ್ಞಾನಿ ‘‘10 ಮಿಲಿಯ ವರ್ಷ’’ ಎಂದು ಪುನರುಚ್ಚರಿಸಿದ.

ಆಕೆ ‘‘ಅಬ್ಬ, ಈಗ ಸಮಾಧಾನವಾಯಿತು! ನಾನೆಲ್ಲೋ 5 ಮಿಲಿಯ ವರ್ಷವೆಂದು ತಿಳಿದು ಗಾಬರಿಗೊಂಡೆ’’ ಎಂದಳು. ಅಪಾಯದಲ್ಲಿ ಅಸಹಜ ಜಾಗ್ರತೆ ವಹಿಸಿದ ಆ ಮುದುಕಿ ಈ ಮಸೂದೆಯಿಂದ ಸಂತಸಗೊಂಡ ನಮ್ಮ ಮಹಿಳೆಯರಿಗಿಂತ ವಾಸಿ. ಅಕ್ಷಯತದಿಗೆಗೆ ಯಾವುದೆಲ್ಲ ಚಿನ್ನಾಭರಣಗಳನ್ನು ಖರೀದಿಸಬೇಕೆಂದು ಒಬ್ಬ ಗೃಹಿಣಿಯು ಆಭರಣಗಳ ಜಾಹೀರಾತುಗಳಿರುವ ವಿವಿಧ ನಿಯತಕಾಲಿಕಗಳನ್ನು ಸಂಗ್ರಹಿಸಿದಳಂತೆ. ಆದರೆ ಪತಿ ಅವುಗಳನ್ನು ಖರೀದಿಸುವ ಗೋಜಿಗೆ ಹೋಗದೆ ಆ ಸಂಚಿಕೆಗಳನ್ನು ಒಪ್ಪ-ಓರಣವಾಗಿಡಲು ಒಂದು ಕಪಾಟನ್ನು ತಂದುಕೊಟ್ಟನಂತೆ. ನಮ್ಮ ಒಕ್ಕೂಟ ಸರಕಾರ ಮಾಡುತ್ತಿರುವ ಕೆಲಸ ಇದೇ. ಈ ಅಗಾಧ ನಂಬಿಕೆಯನ್ನು ಆಧರಿಸಿ ಜನಗಣತಿ ಇತ್ಯಾದಿಗಳ ಬದಲು ಮುಂದಿನ ಜನ್ಮದಲ್ಲಿ ಎಂದು ಸರಕಾರ ಹೇಳಿದ್ದರೂ ಸನಾತನ ಧರ್ಮಪೋಷಕರು ಒಪ್ಪಿಕೊಂಡಾರು. ಕೊನೆಯಲ್ಲಿ ಮತ್ತೆ ಅಂಬಿಕಾತನಯರನ್ನು ಮತ್ತೆ ನೆನಪಿಸಿಕೊಳ್ಳೋಣ: ವಿಂಧ್ಯಪರ್ವತದ ತಡಿಯಿಂದ ಶಾಪಗ್ರಸ್ತ ಯಕ್ಷ ತನ್ನಾಕೆಯನ್ನು ನೆನೆದು ‘‘ಅಲ್ಲಿ ಕುಣಿಸುವಳು ನನ್ನಾಕೆ ಸಂಜೆಯಲ್ಲಿ...’’ ಎಂದು ಹೇಳುತ್ತಾನೆ. ನಮ್ಮ ನಾರಿಯರು ನಮ್ಮ ಪ್ರಧಾನಿಯನ್ನೂ ಹೀಗೆಯೇ ನೆನಪಿಸಿಕೊಂಡರೆ ಅದು ಅಕ್ಕಮಹಾದೇವಿಯನ್ನಾಲೀ ಮೀರಾಬಾಯಿಯನ್ನಾಗಲೀ ಅಣಕಿಸಿದಂತಾಗದು. ಅದೇನಿದ್ದರೂ ಗೋಪಿಯರ ಭಕ್ತಿಯ ಪರಾಕಾಷ್ಠೆ; ಚೈತನ್ಯಕೃಷ್ಣಪಂಥ.

ಆರಂಭದಲ್ಲಿ ನೆನೆದ ‘ನಾರೀ ನಿನ್ನ ಮಾರೀ ಮ್ಯಾಗ’ ಕವನದ ಮೊದಲ ಪ್ಯಾರಾದ ಕೊನೆಯ ಸಾಲು ‘ಮುಗಿಲ ಕಡೆಗೆ ನೋಡತಿತ್ತ’ದೊಂದಿಗೆ ಕವನದ ಕೊನೆಯ ಸಾಲು ‘ದೊರಕದ್ದಕ್ಕ ಬಾಡತಿತ್ತ’ ಎಂಬುದು ಈ ಮಸೂದೆಯ ಬಗ್ಗೆ ನಾರಿಯರ ಅಂತಿಮ ಶ್ರದ್ಧಾಂಜಲಿಯಾಗಬಹುದೇನೋ?

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!