ನಾರಿಮನ್-ಕಳಚಿದ ನ್ಯಾಯಪರಂಪರೆಯ ಮತ್ತೊಂದು ಕೊಂಡಿ

Update: 2024-02-22 06:48 GMT

‘‘ನಾನು ಈ ದೇಶದಲ್ಲಿ ಬಹುಸಂಖ್ಯಾತರಿಂದ ತೊಂದರೆಗೊಳಗಾಗಿ ಬದುಕಿದ್ದೇನೆಂದು ಅನ್ನಿಸಲೇ ಇಲ್ಲ. ಅಲ್ಪಸಂಖ್ಯಾತರು ಬಹುಸಂಖ್ಯಾತ ರೊಂದಿಗೊಡಗೂಡಿ ಇಂಡಿಯಾದ ಒಟ್ಟಾರೆ ಸಂಸ್ಕೃತಿಯ ಭಾಗವೆಂದು ತಿಳಿಯುತ್ತ ಬಂದಿದ್ದೇನೆ. ನಾನು ಒಂದು ಜಾತ್ಯತೀತ ಇಂಡಿಯಾದಲ್ಲಿ ಬೆಳೆದು ಅಭಿವೃದ್ಧಿಹೊಂದಿದ್ದೇನೆ. ದೈವೇಚ್ಛೆಯಿದ್ದಲ್ಲಿ ಕಾಲಕ್ರಮದಲ್ಲಿ ನಾನು ಇದೇ ಜಾತ್ಯತೀತ ಇಂಡಿಯಾದಲ್ಲಿ ಸಾಯಲಿಚ್ಛಿಸುತ್ತೇನೆ.’’

ಹೌದು. ನಾರಿಮನ್ ಅವರು ತನ್ನಿಚ್ಛೆಯಂತೆ ಇನ್ನೂ ಜಾತ್ಯತೀತವೆಂಬ ಪದವನ್ನು ಕಳೆದುಕೊಳ್ಳದ ಇಂಡಿಯಾದಲ್ಲಿ ಬದುಕಿದರು. ಅಳಿದರು,ಉಳಿದರು.

ಭಾರತದ ಹಿರಿಯ ಮತ್ತು ಶ್ರೇಷ್ಠ ನ್ಯಾಯವಾದಿಗಳಲ್ಲೊಬ್ಬರಾದ ಫಾಲಿ ಎಸ್. ನಾರಿಮನ್ ತಮ್ಮ 95ರ ಹರೆಯದಲ್ಲಿ (10.01.1929-21.02.2024) ತೀರಿಹೋಗಿದ್ದಾರೆ. ಸುಮಾರು ಏಳು ದಶಕಗಳ ಕಾಲ ನ್ಯಾಯವಾದಿಯಾಗಿ ವೃತ್ತಿಜೀವನ ನಡೆಸಿದ ಅವರ ಸಾವಿನೊಂದಿಗೆ ಭಾರತದ ಸಾಂಪ್ರದಾಯಿಕ ನ್ಯಾಯವಾದದ ಒಂದು ಶ್ರೇಷ್ಠ ಕೊಂಡಿ ಕಳಚಿದಂತಾಗಿದೆ. ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಅವರದ್ದು ಒಂದು ಭವ್ಯ ಪರಂಪರೆ.

ಅವರ ಮಗ ರೋಹಿಂಟನ್ ನಾರಿಮನ್ ಕೂಡಾ ಪ್ರಖ್ಯಾತ ನ್ಯಾಯಪಂಡಿತರು. ಭಾರತದ ಸಾಲಿಸಿಟರ್ ಜನರಲ್ (2011-2013) ಆಗಿ ಆನಂತರ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ದುಡಿದು ನಿವೃತ್ತಿಯಾದವರು.

ನಾರಿಮನ್ ಎಂದೊಡನೆಯೇ ಕೆಲವು ಪ್ರಕರಣಗಳು- ನ್ಯಾಯಾಧೀಶರ ವರ್ಗಾವಣೆ ಪ್ರಕರಣ, ಭೋಪಾಲ್ ಗ್ಯಾಸ್ ದುರಂತ, ಗೋಳಕನಾಥ್ ಪ್ರಕರಣ, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಸ್ಥಾನಮಾನಗಳ ಪ್ರಕರಣ, ರಾಷ್ಟ್ರೀಯ ನ್ಯಾಯಾಂಗ ಆಯೋಗದ ಸಾಂವಿಧಾನಿಕತೆ, ರಾಜ್ಯಪಾಲರ ಇತಿಮಿತಿಗಳು, ಜಯಲಲಿತಾ ಜಾಮೀನು ಮುಂತಾದವು ನೆನಪಿಗೆ ಬರಬೇಕು. ಇವೆಲ್ಲ ಕಾನೂನಿನ ಜಟಿಲ ಸಮಸ್ಯೆಗಳನ್ನು ಮುಂದೊಡ್ಡಿ ನಾರಿಮನ್ ಅವರ ಖ್ಯಾತಿಯನ್ನು ಹೆಚ್ಚಿಸಿದವು. ಪ್ರಶಸ್ತಿಫಲಕಗಳಿಗೆ ಗೌರವ ತಂದೊಡ್ಡಿದವರು ನಾರಿಮನ್. ಪದ್ಮಭೂಷಣ (1991) ಹಾಗೂ ಪದ್ಮವಿಭೂಷಣ(2007) ಪ್ರಶಸ್ತಿಗಳು ಅವರಿಗೆ ಸಂದ ಗೌರವಗಳು. 1999-2005ರ ಅವಧಿಯಲ್ಲಿ ಅವರು ರಾಜ್ಯಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು.

ಭಾರತದಲ್ಲಿ ಕಳೆದ ಒಂದೆರಡು ಶತಮಾನಗಳ ಇತಿಹಾಸವನ್ನು ಗಮನಿಸಿದರೆ ಮೊದಲಿನಿಂದಲೂ ಪಾರ್ಸಿಗಳ ಹಿರಿಮೆ ಗೊತ್ತಾಗುತ್ತದೆ. ಕೈಗಾರಿಕೋದ್ಯಮಿಗಳಾದ ದಾದಾಭಾಯಿ ನೌರೋಜಿ, ಜಮ್‌ಶೆಡ್‌ಜೀ ಟಾಟಾ, ಗೋಡ್ರೆಜ್, ವಾಡಿಯಾ ಮುಂತಾದವರು, ಭಾರತದ ಮಾಜಿ ಮುಖ್ಯ ನ್ಯಾಯಾಧೀಶರಾದ ಸಾಮ್‌ಭರೂಚಾ, ಕಪಾಡಿಯಾ, ಕ್ರಿಕೆಟ್ ಪಟುಗಳಾದ ಫಾರೂಕ್ ಇಂಜಿನಿಯರ್, ಡಯಾನಾ ಎದುಲ್‌ಜೀ, ವಿಜ್ಞಾನಿ ಹೋಮಿ ಭಾಭಾ, ಖ್ಯಾತ ನ್ಯಾಯವಾದಿಗಳಾದ ಸೋಲಿಸೊರಾಬ್‌ಜೀ, ಪಾಲ್ಕಿವಾಲಾ, ಮುಂತಾದವರು ಪಾರ್ಸಿಗಳು. (ಈ ಪಟ್ಟಿ ಇನ್ನೂ ದೊಡ್ಡದಿದೆ!) ಕೆಲವೇ ಸಾವಿರ ಜನಸಂಖ್ಯೆಯ ಈ ಜನಾಂಗವು ಭಾರತಕ್ಕೆ ನೀಡಿದ ಕೊಡುಗೆ ಅವರಿಗಿಂತ ಹೆಚ್ಚು ಜನಸಂಖ್ಯೆಯಿರುವ ಇತರ ಅನೇಕ ಜನಾಂಗಗಳನ್ನು ಮೀರಿದ್ದು.

ಇಂತಹ ಪಾರ್ಸಿ ಜನಾಂಗಕ್ಕೆ ಸೇರಿದ ಫಾಲಿ ಎಸ್. ನಾರಿಮನ್ 95 ವರ್ಷ ಬದುಕಿದರು. ಕಾನೂನು ಪದವಿ ಪಡೆದು 1950ರಲ್ಲಿ ಅವರ ರಂಗಪ್ರವೇಶ. 1971ರಲ್ಲಿ ಅವರು ಸರ್ವೋಚ್ಚ ನ್ಯಾಯಾಲಯದ ಹಿರಿಯ ವಕೀಲರಾಗಿ ನೇಮಕಗೊಂಡರು. 1972ರಲ್ಲಿ ಹೆಚ್ಚುವರಿ ಸೊಲಿಸಿಟರ್ ಜನರಲ್ ಆಗಿ ನೇಮಕಗೊಂಡರು. 1975ರಲ್ಲಿ ತುರ್ತುಸ್ಥಿತಿ ಘೋಷಣೆಯಾದಾಗ ನಿಷ್ಠುರವಾಗಿ ಪ್ರತಿಭಟಿಸಿ ಈ ಹುದ್ದೆಗೆ ರಾಜಿನಾಮೆ ನೀಡಿದರು. ನರ್ಮದಾ ಪ್ರಕರಣದಲ್ಲಿ ಅವರು ಗುಜರಾತ್ ಸರಕಾರವನ್ನು ಪ್ರತಿನಿಧಿಸಿದರು. ಆದರೆ ಕ್ರೈಸ್ತರ ಮೇಲೆ ಗುಜರಾತ್ ರಾಜಕೀಯ ಪ್ರೇರಿತ ದಾಳಿ ನಡೆದಾಗ ಪ್ರಕರಣದಿಂದ ಹಿಂದೆ ಸರಿದರು. ಮೇಲೆ ಹೇಳಿದ ಗೋಳಕನಾಥ್ ಪ್ರಕರಣ, ನ್ಯಾಯಾಧೀಶರ ನೇಮಕಾತಿ ಮತ್ತು ವರ್ಗಾವಣೆಯ ಪ್ರಕರಣ, ಹೀಗೆ ಅನೇಕ ಸಾಂವಿಧಾನಿಕ ಪ್ರಕರಣಗಳಲ್ಲಿ ಅವರದ್ದು ಚಿರಸ್ಥಾಯಿಯಾಗಬಲ್ಲ ಹೆಸರು. 1991ರಲ್ಲಿ ಪದ್ಮಭೂಷಣ ಗೌರವ. 1996ಲ್ಲಿ ರಾಜ್ಯಸಭಾ ಸದಸ್ಯತ್ವ. 2007ರಲ್ಲಿ ಪದ್ಮವಿಭೂಷಣ ಗೌರವ. ಅನೇಕ ರಾಷ್ಟ್ರೀಯ, ಅಂತರ್‌ರಾಷ್ಟ್ರೀಯ ವೇದಿಕೆಗಳಲ್ಲಿ, ಸಮಿತಿಗಳಲ್ಲಿ ಅವರ ಸ್ಥಾನ ಮಹತ್ವದ್ದು.

ಅವರಿಗೆ ಸಿಕ್ಕಿದ ಗೌರವ, ವೃತ್ತಿಯು ತಂದುಕೊಟ್ಟ ಘನತೆ ಇವುಗಳೊಂದಿಗೆ ಸಾಮಾನ್ಯವಾಗಿ ಯಾರೇ ಆಗಿದ್ದರೂ ವೃತ್ತಿಯನ್ನು ನಿಲ್ಲಿಸಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಆದರೆ ತಿಳಿದದ್ದನ್ನು ಕೊನೆಯ ಉಸಿರಿನ ವರೆಗೂ ಬಳಸುವ ಸಂಕಲ್ಪದ ನಾರಿಮನ್ ತನ್ನ ಯೋಗ್ಯತೆಗೆ ತಕ್ಕ ಪ್ರಕರಣಗಳನ್ನು ನಡೆಸಿದವರು. (ಇಂತಹ ಇನ್ನೊಬ್ಬ ಧೀಮಂತ ರಾಮ್ ಜೆಠ್ಮಲಾನಿ.) ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಪರವಾಗಿ ವಾದ ಮಂಡಿಸಿ ಕೇಂದ್ರ ಸರಕಾರವು ತಂದ ಶಾಸನವನ್ನು ಅನೂರ್ಜಿತಗೊಳಿಸುವಲ್ಲಿ ಅವರ ಪಾತ್ರ ಹಿರಿದು. ಆದರೆ ಎಂದಿಗೂ ಅವರು ತನ್ನ ಅಥವಾ ನ್ಯಾಯಾಲಯದ ಘನತೆಗೆ ಕುಂದು ತಂದವರಲ್ಲ.

ಕಾವೇರಿ ನದಿ ನೀರಿನ ವಿವಾದದ ನ್ಯಾಯಾಧಿಕರಣದಲ್ಲಿ ನಾರಿಮನ್ ಅವರ ನೇತೃತ್ವದಲ್ಲಿ ಕರ್ನಾಟಕ ವಾದ ಮಂಡಿಸಿತು. ಅನಿಲ್‌ದಿವಾನ್ ಎಂಬ ಇನ್ನೊಬ್ಬ ಹಿರಿಯ ನ್ಯಾಯವಾದಿಯೂ ಇದ್ದರು. ಅವರಲ್ಲದೆ ಹತ್ತಾರು ಇತರ ನ್ಯಾಯವಾದಿಗಳ ಮತ್ತು ಪರಿಣತರ ತಂಡವೇ ಇವರ ಬೆನ್ನಿಗಿತ್ತು. ಆದರೂ ನ್ಯಾಯಾಧಿಕರಣವು ತನ್ನ ತೀರ್ಪನ್ನು ನೀಡುವಾಗ ಕನಾಟಕಕ್ಕೆ ಅಲ್ಪಮಟ್ಟಿನ ಅನ್ಯಾಯವಾಗಿದೆಯೆಂಬಂತೆ ಭಾಸವಾಯಿತು. ಯಾವುದೇ ಪ್ರಕರಣವು ಅದರಷ್ಟಕ್ಕೇ ನ್ಯಾಯವಾದಿಯ ಯೋಗ್ಯತೆಯ ಅಳತೆಗೋಲಲ್ಲ. ಅದು ಆ ಪ್ರಕರಣದ ಯೋಗ್ಯತೆಯೇ ಹೊರತು ನ್ಯಾಯವಾದಿಯದ್ದಲ್ಲ. ಆ ಪ್ರಕರಣದ ತೀರ್ಪಿನ ಮೂಲಕ ಅವರ ಮಾನವನ್ನು ಅವರಷ್ಟು ಯೋಗ್ಯರಲ್ಲದ ನ್ಯಾಯಾಧೀಶರು, ನ್ಯಾಯಮೂರ್ತಿಗಳು ನಿರ್ಧರಿಸುತ್ತಾರೆಂದು ನಾವು ತಿಳಿದರೆ ತಪ್ಪು. ಆ ಪ್ರಕರಣದ ಇತಿಮಿತಿಗಳಲ್ಲಿ ಒಂದು ತೀರ್ಮಾನ ಹೊರಬರುತ್ತದೆ. (ಕೆಲವು ಬಾರಿ ಅನರ್ಹ ನ್ಯಾಯವಾದಿಗಳು ಪ್ರಕರಣದ ದುಷ್ಪರಿಣಾಮಕ್ಕೆ ಕಾರಣರಾಗುವುದು ಉಂಟು! ಆದರೆ ಇವು ಅಪವಾದಗಳೇ ಹೊರತು ನಿಯಮಗಳಲ್ಲ! ಯಾವ ನ್ಯಾಯವಾದಿಯೂ ಉದ್ದೇಶಪೂರ್ವಕವಾಗಿ ತನ್ನ ಕಕ್ಷಿದಾರರನ್ನು ಸೋಲಿಸುತ್ತಾನೆಂದು ನಂಬಬಾರದು.) ಆದರೆ ನಾರಿಮನ್ ಉದ್ದೇಶಪೂರ್ವಕವಾಗಿಯೇ ಕರ್ನಾಟಕಕ್ಕೆ ಅನ್ಯಾಯ ಮಾಡಿದರೆಂಬಂತೆ ಟೀಕೆಗಳು ತೀಟೆ ತೀರಿಸಿಕೊಳ್ಳುವ ನೆಪದಂತೆ ಪ್ರಕಟವಾದವು. ಇವನ್ನು ಓದುವಾಗ ಬರೆದವರ (ಅ)ಯೋಗ್ಯತೆಯೇನೇ ಇರಲಿ, ಇಂಥವರ ನಾಲಗೆಗೆ, ಲೇಖನಿಗೆ ನಾರಿಮನ್ ತುತ್ತಾಗುತ್ತಿದ್ದಾರಲ್ಲ, ಯಾರ ತಪ್ಪಿದು ಎಂಬೆಲ್ಲ ಪ್ರಶ್ನೆಗಳು ಉದ್ಭವಿಸುತ್ತವೆ. ಇದರ ಅಂತರಾರ್ಥ ಅರಿಯಬೇಕಾದರೆ ನಾರಿಮನ್ ಎಂಬ ವ್ಯಕ್ತಿಯ ವ್ಯಕ್ತಿತ್ವ ಅರ್ಥವಾಗಬೇಕು. ಕಾವೇರಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶದ ಹೊರತಾಗಿಯೂ ಕರ್ನಾಟಕ ಸರಕಾರವು ಶಾಸಕಾಂಗದಲ್ಲಿ ನಿರ್ಣಯವನ್ನು ಕೈಗೊಂಡು ನೀರು ಹರಿಸದಿರಲು ನಿರ್ಧರಿಸಿದಾಗ ನ್ಯಾಯಾಲಯದ ಒಬ್ಬ ಕಾನೂನುಪಾಲಕನಾಗಿ ಅದನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸಿ ಹೇಳಲು ಸಾಧ್ಯವಿಲ್ಲವೆಂಬುದಾಗಿ ತಿಳಿಸಿದವರು. ಆನಂತರ ನೀರು ಹರಿಸಿದ ನಂತರ ಅವರೇ ವಾದ ಮಾಡಿದ್ದು, ದಿನಾ ಇಷ್ಟಿಷ್ಟು ನೀರು ಹರಿಸಿ ಎಂದರೆ ವಾದಿಸುವುದಾದರೂ ಹೇಗೆ ಎಂದು ನ್ಯಾಯಾಲಯವನ್ನೇ ಪ್ರಶ್ನಿಸಿದರು. ನಾರಿಮನ್ ವ್ಯಕ್ತಿತ್ವದ ಪರಿಚಯವಾಗದವರಷ್ಟೇ ಅವರನ್ನು ಹಳಿದಾರು. ಅವರ ಯೋಗ್ಯತೆಯನ್ನು ಅಳೆಯಹೊರಡುವುದೆಂದರೆ ಅಂಗುಲಹುಳವು ಕಾಡನ್ನು ಅಳೆಯಲು ಹೊರಟಂತೆ. ಕರ್ನಾಟಕದಿಂದ ಅವರಿಗೆ ಬೇಸರವಾದರೆ ಅದು ಕರ್ನಾಟಕಕ್ಕೆ ಕೆಟ್ಟ ಜಾಹೀರಾತೇ ವಿನಾ ಅವರಿಗಲ್ಲ.

ಅವರು ಈ ರೀತಿ ನಡೆದುಕೊಂಡದ್ದು ಇದೇ ಮೊದಲಲ್ಲ. ಸರ್ವೋಚ್ಚ ನ್ಯಾಯಾಲಯವು ತಪ್ಪಿ ನಡೆದಾಗ ತಿದ್ದಿ ಹೇಳುವ ಯೋಗ್ಯತೆ, ಧೈರ್ಯವನ್ನು ಅನೇಕ ಬಾರಿ ತೋರಿದವರು. ನ್ಯಾಯಾಲಯಕ್ಕೆ ನಿರ್ಭಯವಾಗಿ ಘನತೆಯಿಂದ ಅವರು ನೀಡುವ ಸಲಹೆಯ ಮಾತುಗಳನ್ನು ನ್ಯಾಯಾಲಯಗಳು ಪ್ರಕರಣಗಳ ಮತ್ತು ನ್ಯಾಯಾಲಯಗಳ ಒಳಗೂ ಹೊರಗೂ ಗಂಭೀರವಾಗಿ ಗಮನಿಸಿವೆಯೆಂದರೆ ಅವರ ಹಿರಿಮೆ ಸ್ಪಷ್ಟವಾದೀತು.

ನಾರಿಮನ್ ತಮ್ಮ ಆತ್ಮಚರಿತ್ರೆ ‘ಬಿಫೋರ್ ಮೆಮೊರಿ ಫೇಡ್ಸ್’ (ನೆನಪು ಮಾಸುವ ಮುನ್ನ) ಕೃತಿ (ಪ್ರಕಟಣೆ:2010)ಯಲ್ಲಿ ತಮ್ಮ ವೃತ್ತಿ ಜೀವನದ ಹಾದಿಯನ್ನು, ತಾನು ಕಂಡ ಜಗತ್ತನ್ನು, ದೇಶ ಎದುರಿಸುತ್ತಿರುವ ಆತಂಕಗಳನ್ನು ಚಿತ್ರಿಸಿದ್ದಾರೆ. ತಾನು ಆತ್ಮಚರಿತ್ರೆಯನ್ನು ಬರೆಯಲು ಸ್ಪೂರ್ತಿ ಪಡೆದ ಮ್ಯಾಥ್ಯೂ ಆರ್ನಾಲ್ಡನ ಮಾತುಗಳನ್ನು ಅವರು ತಮ್ಮ ಕೃತಿಯ ಭರತವಾಕ್ಯವಾಗಿ ‘ನಾವು ಮರೆಯುತ್ತೇವೆ ಮರೆಯಬೇಕೆಂದಲ್ಲ, ಮರೆಯುವುದು ಅನಿವಾರ್ಯ’ವೆಂದು ಬರೆದಿದ್ದಾರೆ. ರಂಗೂನ್‌ನಲ್ಲಿ ಹುಟ್ಟಿ ಬಾಲ್ಯದಲ್ಲೇ ಭಾರತಕ್ಕೆ ಬಂದು ದಿಲ್ಲಿಯಲ್ಲಿ ಬದುಕುತ್ತಿದ್ದ ನಾರಿಮನ್ ಎಂದಿಗೂ ತನ್ನ ಸ್ವಾಭಿಮಾನವನ್ನು ಬಿಟ್ಟುಕೊಟ್ಟಿಲ್ಲವೆಂಬುದು ಅವರ ಆತ್ಮಚರಿತ್ರೆಯಿಂದ ಮಾತ್ರವಲ್ಲ, ಅವರ ಸಾರ್ವಜನಿಕ ವ್ಯವಹರಣೆಯಲ್ಲಿ, ಧೋರಣೆಯಲ್ಲಿ ಗೊತ್ತಾಗುತ್ತದೆ. ತಮಗೆ ಬಂದ ಎಲ್ಲ ಪ್ರಶಸ್ತಿಗಳ ಫಲವನ್ನೂ ಅವರು ತಾವು ಓದಿದ ಶಿಮ್ಲಾದ ಬಿಷಪ್ ಕಾಟನ್ ಶಾಲೆಗೆ ಮುಡಿಪಾಗಿಟ್ಟಿದ್ದಾರೆ.

ತಮ್ಮ ಆತ್ಮಚರಿತ್ರೆಯಲ್ಲಿ ಸಂವಿಧಾನ ತಜ್ಞರಾದ ಅವರ ಒಂದು ಸಾಂದರ್ಭಿಕ ಮಾತುಗಳು ಹೀಗಿವೆ:

‘‘ಒಂದು ದೇಶದ ಚರಿತ್ರೆಯ ನಿರಂತರ ಪಯಣದಲ್ಲಿ ಎರಡನೇ ಅವಕಾಶವೆಂಬುದಿಲ್ಲ. ಅಲ್ಲಿರುವುದು ಬೇರೆ ಕಡೆಯ ಪರಿಸ್ಥಿತಿಗೆ ಹೋಲಿಸಿ ಕಲಿಯಲಿರುವ ಪಾಠಗಳು ಮಾತ್ರ.

ಯಾವುದೇ ದೇಶದ ಪರಿಸ್ಥಿತಿಯು (ಸರಿದಾರಿಯಲ್ಲಿ ಯೋಚಿಸುವ ಜನರ ಮನಸ್ಸಿನಲ್ಲಿ) ಸಂಪೂರ್ಣ ಕೈಮೀರಿ ಹೋದಾಗ, ಕಾನೂನು ಮುರಿದು ಬಿದ್ದಾಗ, ರಾಜಕಾರಣಿಗಳು ಖರೀದಿಗೊಳಪಟ್ಟಾಗ -ಅವರು ಖರೀದಿಯಾದ ನಂತರ ಕನಿಷ್ಠ ಅಲ್ಲೇ ಉಳಿಯುವ ಲಜ್ಜೆಯೂ ಅವರಲ್ಲಿರುವುದಿಲ್ಲ!-ಮತ್ತು ಅಂತಹ ಸಂದರ್ಭದಲ್ಲಿ ಸರ್ವಾಧಿಕಾರಿಗಳು ದೇಶವನ್ನು ಕೈಗೆತ್ತಿಕೊಳ್ಳುತ್ತಾರೆ ಮತ್ತು ತಮ್ಮನ್ನು ಸ್ಥಾಪಿಸಿಕೊಳ್ಳುತ್ತಾರೆ.

ಮರ್ಯಾದೆಯ ವರ್ತನೆಯ ಮಾನದಂಡಗಳು ಮತ್ತು ಸ್ಥಾಪಿತ ಸಿದ್ಧಾಂತಗಳು ಶೂನ್ಯವಾದಾಗ, ರೂಢಿಗತ ನಂಬಿಕೆಗಳು ಗಾಳಿಗೆಸೆಯಲ್ಪಟ್ಟಾಗ, ಯಾವ ಸಂವಿಧಾನವೂ, ಅದೆಷ್ಟೇ ಚೆನ್ನಾಗಿ ರಚಿಸಲ್ಪಟ್ಟಿರಲಿ, ಕಾರ್ಯವೆಸಗದು.

ಅಂತಹ ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವವು ಆತ್ಮಹತ್ಯೆಗೆ ಉದ್ಯುಕ್ತವಾಗುತ್ತದೆ.’’

ತನ್ನ ಕೃತಿಯ ಕೊನೆಯಲ್ಲಿ ಅವರು ಹಿಂದುತ್ವದ ಕುರಿತ ಆತಂಕಗಳನ್ನು ಮತ್ತು ಜಾತ್ಯತೀತತೆಯ ಕುರಿತ ತನ್ನ ಅತೀವ ಆಸೆ, ಅಭಿಮಾನವನ್ನು ಸ್ಪಷ್ಟಮಾತುಗಳಲ್ಲಿ ವ್ಯಕ್ತಪಡಿಸಿದ್ದಾರೆ. ಅಸಹನೆಯು ಸಮಾಜದ ಅಂತರಂಗವನ್ನು ಪ್ರವೇಶಿಸಿದ ಬಗ್ಗೆ ಅವರು ‘ತನ್ನ ಅತೀ ದೊಡ್ಡ ವಿಷಾದ’ವೆಂದು ಹೇಳುತ್ತಾರೆ.

‘‘ಶತಮಾನಗಳ ಕಾಲ ಹಿಂದುತ್ವವು ಎಲ್ಲಾ ಧರ್ಮಗಳ ಪೈಕಿ ಹೆಚ್ಚು ಸಹನಶೀಲವಾಗಿತ್ತು. ಆದರೆ ಕಳೆದ ಕೆಲವು ವರ್ಷಗಳಲ್ಲಿ, ನಾನು ಒಂದು ಹೊಸ ವಿದ್ಯಮಾನಕ್ಕೆ ಸಾಕ್ಷಿಯಾಗಿದ್ದೇನೆ. ಹಿಂದೂ ಸಹನಶೀಲತೆಯು ವಿಷಮತೆಯತ್ತ ಮುಖಮಾಡಿದೆ; ಅದರ ಮತೀಯತೆ ತನ್ನ ಹೆಡೆಯನ್ನೆತ್ತಿದೆ. ವಿವಿಧ ಭಾಷೆಗಳ ಐಕ್ಯಗಾನವು ಬಹುದೇವಾರಾಧನೆಯು ಈಗ ತನ್ನ ಶ್ರುತಿಯನ್ನು ಕಳೆದುಕೊಂಡಂತಿದೆ. ಹಿಂದುತ್ವವು ತನ್ನ ಮುಖವನ್ನು ಬದಲಾಯಿಸಿಕೊಳ್ಳುತ್ತಿದೆಯೇ? ಹಾಗಾಗದಿರಲಿ. ಆದರೆ ಹಾಗಾಗುತ್ತದೆಂಬ ಭಯ ನನಗಿದೆ. ಜಾತ್ಯತೀತ ಇಂಡಿಯಾ ಮತ್ತು ಉಗ್ರ ಹಿಂದುತ್ವದ ಮುಖಾಮುಖಿಯು ಅಮೆರಿಕದ ರಾಯಭಾರಿ ಜಾರ್ಜ್ ಕೀನನ್ ಹೇಳಿದ ಡಯನೋಸೆರಸ್ ರೂಪಕದಂತಿದೆ....ಡಯನೋಸೆರಸ್‌ನ ಸಂಖ್ಯೆ ಅಪಾಯಕಾರೀ ಮಟ್ಟಕ್ಕೆ ಹೆಚ್ಚುತ್ತಿದೆ. ಒಂದು ಮತೀಯ ಶಿಬಿರದ ಡಯನೋಸೆರಸ್ ಇನ್ನೊಂದನ್ನು ಬೆಳೆಸುತ್ತದೆ. ವಿಜ್ಞಾನಿಗಳು ಹೇಳುವ ಪ್ರಕಾರ ಒಂದು ಭಾರೀ ಉಲ್ಕಾಪಾತದಿಂದಾಗಿ ಈ ಎಲ್ಲ ಡಯನೋಸೆರಸ್‌ಗಳು ಭೂಮಿಯಿಂದ ನಾಶವಾದವು. ಅದು ಹೌದಾದರೆ ಉಲ್ಕಾಪಾತವು ಭಗವಂತನ ದುಷ್ಟದಮನದ ಸಂಕೇತವೆಂದು ಯೋಚಿಸುವುದು ನನಗಿಷ್ಟವಾಗುತ್ತದೆ.’’

‘‘ನಾನು ಈ ದೇಶದಲ್ಲಿ ಬಹುಸಂಖ್ಯಾತರಿಂದ ತೊಂದರೆಗೊಳಗಾಗಿ ಬದುಕಿದ್ದೇನೆಂದು ಅನ್ನಿಸಲೇ ಇಲ್ಲ. ಅಲ್ಪಸಂಖ್ಯಾತರು ಬಹುಸಂಖ್ಯಾತ ರೊಂದಿಗೊಡಗೂಡಿ ಇಂಡಿಯಾದ ಒಟ್ಟಾರೆ ಸಂಸ್ಕೃತಿಯ ಭಾಗವೆಂದು ತಿಳಿಯುತ್ತ ಬಂದಿದ್ದೇನೆ. ನಾನು ಒಂದು ಜಾತ್ಯತೀತ ಇಂಡಿಯಾದಲ್ಲಿ ಬೆಳೆದು ಅಭಿವೃದ್ಧಿಹೊಂದಿದ್ದೇನೆ. ದೈವೇಚ್ಛೆಯಿದ್ದಲ್ಲಿ ಕಾಲಕ್ರಮದಲ್ಲಿ ನಾನು ಇದೇ ಜಾತ್ಯತೀತ ಇಂಡಿಯಾದಲ್ಲಿ ಸಾಯಲಿಚ್ಛಿಸುತ್ತೇನೆ.’’

ಹೌದು. ನಾರಿಮನ್ ಅವರು ತನ್ನಿಚ್ಛೆಯಂತೆ ಇನ್ನೂ ಜಾತ್ಯತೀತವೆಂಬ ಪದವನ್ನು ಕಳೆದುಕೊಳ್ಳದ ಇಂಡಿಯಾದಲ್ಲಿ ಬದುಕಿದರು. ಅಳಿದರು,ಉಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!