ವಿಧಾನ ಪರಿಷತ್‌ನಲ್ಲಿ ಮುಸ್ಲಿಮ್ ಪ್ರಾತಿನಿಧ್ಯದ ಅಗತ್ಯ

Update: 2024-05-27 04:03 GMT



ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರಕಾರ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದೆ, ಈ ಒಂದು ವರ್ಷದಲ್ಲಿ ಸಾಕಷ್ಟು ಬೆಳವಣಿಗೆಗಳು ರಾಜ್ಯದಲ್ಲಿ ಆಗಿವೆ, ಪಂಚ ಗ್ಯಾರಂಟಿಗಳು ಬಡ ಜನರಲ್ಲಿ ಆತ್ಮಸ್ಥೈರ್ಯ ತುಂಬಿವೆ, ಸಾಕಷ್ಟು ಜನ ಪಕ್ಷದ ಕಾರ್ಯಕರ್ತರೂ ಅಧಿಕಾರ ಹಾಗೂ ಗೌರವವನ್ನು ಪಡೆದಿದ್ದಾರೆ. ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರದಿಂದ ಜನತೆ ನೆಮ್ಮದಿಯಿಂದ ಜೀವನ ನಡೆಸುತ್ತಿರುವುದು ಹಾಗೂ ಪಕ್ಷದ ಕಾರ್ಯಕರ್ತರು ಉತ್ಸಾಹದಿಂದ ಬದುಕುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಹಿಂದಿನ ಬಿಜೆಪಿ ಸರಕಾರದ ಆಡಳಿತ ವೈಫಲ್ಯ, ಒಂದು ನಿರ್ದಿಷ್ಟ ಸಮುದಾಯದ ವಿರುದ್ಧ ಕೋಮುಹಗೆ ಸಾಧಿಸಲು ನಡೆಸಿದ ದುಷ್ಟ ಪ್ರಯತ್ನಗಳಿಂದ ಬೇಸತ್ತು ರಾಜ್ಯದ ಜನತೆ ಬಿಜೆಪಿ ಸರಕಾರವನ್ನು ಕಿತ್ತೆಸೆದಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ, ಬೊಮ್ಮಾಯಿ ನೇತೃತ್ವದ ಸರಕಾರದಿಂದ ಸಾಕಷ್ಟು ಅನ್ಯಾಯ ಹಾಗೂ ನೋವು ಅನುಭವಿಸಿದ ಕಾರಣದಿಂದಾಗಿ 2023ರ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಇಡೀ ಸಮುದಾಯವು ಕಾಂಗ್ರೆಸ್ ಪಕ್ಷದ ಪರವಾಗಿ ಮತ ಚಲಾವಣೆ ಮಾಡಿದ್ದು ಜಗಜ್ಜಾಹೀರು. ಈಗಲೂ ಕೇಂದ್ರದ ಬಿಜೆಪಿ ವಿರುದ್ಧ ಎದೆಯೊಡ್ಡಿ ನಿಂತಿರುವ ವಿವಿಧ ಸಮುದಾಯಗಳಲ್ಲಿ ಮುಸ್ಲಿಮ್ ಸಮುದಾಯವೇ ಮುಂಚೂಣಿಯಲ್ಲಿರುವುದು ಸ್ಪಷ್ಟ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಕಂಡ ಕೆಲ ಕಾಂಗ್ರೆಸ್ ಪಕ್ಷದ ಶಾಸಕರು/ನಾಯಕರು ಮುಸ್ಲಿಮ್ ಸಮುದಾಯದಿಂದ ದೊರೆತ ಬೆಂಬಲದ ಕುರಿತು ಬಹಿರಂಗವಾಗಿ ಧನ್ಯವಾದ ಅರ್ಪಿಸಿದ್ದರೆ ಇನ್ನೂ ಕೆಲವರು ತಮ್ಮ ಆಪ್ತ ವಲಯಗಳಲ್ಲಿ ಇದನ್ನು ಸ್ಮರಿಸುತ್ತಾರೆ, ಆದರೆ ಅದೇ ಶಾಸಕರು/ನಾಯಕರು ಮುಸ್ಲಿಮ್ ಸಮುದಾಯದ ಮುಖಂಡರಿಗೆ ರಾಜಕೀಯ ಪ್ರಾತಿನಿಧ್ಯ ನೀಡುವ ವಿಚಾರ ಬಂದಾಗ ಬಾಯಿಗೆ ಬೀಗ ಹಾಕಿಕೊಳ್ಳುವುದು ನೋಡಿ ಸಮುದಾಯದ ಪ್ರಜ್ಞಾವಂತರಿಗೆ ಬೇಸರವಾಗುತ್ತಿದೆ. ಮುಸ್ಲಿಮರು ಕಾಂಗ್ರೆಸ್ ಪಕ್ಷವನ್ನು ಮಾತ್ರ ಬೆಂಬಲಿಸುತ್ತಾರೆ ಎನ್ನುವ ಏಕೈಕ ಕಾರಣಕ್ಕೆ ಇಂದು ದೇಶದ ಪ್ರಧಾನಿಯೇ ಚುನಾವಣಾ ರ್ಯಾಲಿಗಳಲ್ಲಿ ಮುಸ್ಲಿಮರ ವಿರುದ್ಧ ನೇರವಾಗಿ ದ್ವೇಷಭಾಷಣಕ್ಕಿಳಿದಿರುವುದು ಮುಸ್ಲಿಮ್ ಸಮುದಾಯವನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವಂತಹ ಎಲ್ಲಾ ಪ್ರಯತ್ನಗಳನ್ನು ಮುಂದಿನ ದಿನಗಳಲ್ಲಿ ಬಿಜೆಪಿ ಮಾಡಲಿದೆ ಎಂಬುದಂತೂ ಸ್ಪಷ್ಟ. ಆದರೆ ಬಿಜೆಪಿಯ ಈ ಹುನ್ನಾರದಲ್ಲಿ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷವೂ ಕೈಜೋಡಿಸಿದೆಯೇ ಎಂಬ ಅನುಮಾನವು ಇತ್ತೀಚಿನ ದಿನಗಳಲ್ಲಿ ಕಾಡತೊಡಗಿದೆ. ಏಕೆಂದರೆ ರಾಜಕೀಯ ಪ್ರಾತಿನಿಧ್ಯದ ವಿಚಾರದಲ್ಲಿ ಮುಸ್ಲಿಮ್ ಸಮುದಾಯಕ್ಕೆ ಕಾಂಗ್ರೆಸ್‌ನಿಂದ ಯಾವುದೇ ಹೇಳಿಕೊಳ್ಳುವಂತಹ ಅವಕಾಶಗಳನ್ನು ಒದಗಿಸಲಾಗುತ್ತಿಲ್ಲ. ರಾಜ್ಯದಲ್ಲಿ ಮುಸ್ಲಿಮ್‌ರ ಸ್ಥಿತಿ ‘ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವುದು ಮನೆಯಲ್ಲಿ ಕೂರುವುದು’ ಎನ್ನುವ ಹಾಗಾಗಿದೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕೆಲವು ಕಡೆ ಕಾಂಗ್ರೆಸ್ ಪಕ್ಷದ ಮುಖಂಡರು ‘‘ಮುಸ್ಲಿಮ್‌ರ ಏರಿಯಾಗಳಲ್ಲಿ ಮತ ಕೇಳುವುದೇ ಬೇಡ, ಅವರು ಕಾಂಗ್ರೆಸ್‌ಗೇ ಮತ ಹಾಕುತ್ತಾರೆ, ಕಾಂಗ್ರೆಸ್ ಇಲ್ಲದಿದ್ದರೆ ಯಾರಿಗೆ ಹಾಕುತ್ತಾರೆ?’’ ಎನ್ನುವಷ್ಟರ ಮಟ್ಟಿಗೆ ಅಪಹಾಸ್ಯ ಮಾಡಿದ ಉದಾಹರಣೆಗಳೂ ಇವೆ. ಜೆಡಿಎಸ್ ಪಕ್ಷ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡ ನಂತರವಂತೂ ಮುಸ್ಲಿಮರಿಗೆ ಕಾಂಗ್ರೆಸ್ ಪಕ್ಷ ಬಿಟ್ಟರೆ ಬೇರೆ ಗತಿಯಿಲ್ಲ ಎನ್ನುವ ಸ್ಥಿತಿ ಇದೆ. ದೇಶದ ಇತರ ರಾಜ್ಯಗಳಲ್ಲಿ ಈ ಸ್ಥಿತಿ ಇಲ್ಲವೆನ್ನಬಹುದು, ಇತ್ತೀಚೆಗೆ ತೆಲಂಗಾಣದಲ್ಲಿ ನಡೆದ ಚುನಾವಣೆಯಲ್ಲಿ ಮುಸ್ಲಿಮ್ ಮತಗಳನ್ನು ಪಡೆಯಲು ಕಾಂಗ್ರೆಸ್ ಮತ್ತು ಬಿಆರ್‌ಎಸ್ ನಡುವೆ ಪೈಪೋಟಿ ಇತ್ತು, ಆಂಧ್ರಪ್ರದೇಶ ಚುನಾವಣೆಯಲ್ಲಿಯೂ ಟಿಡಿಪಿ ಮತ್ತು ವೈಎಸ್‌ಆರ್ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪಕ್ಷದ ನಡುವೆ ಪೈಪೋಟಿ ಇತ್ತು, ಅಂತಹ ಪರಿಸ್ಥಿತಿ ಕರ್ನಾಟಕದಲ್ಲಿ ಇರಲಿಲ್ಲ, ಯಾಕೆಂದರೆ ಕರ್ನಾಟಕದಲ್ಲಿ ಜೆಡಿಎಸ್ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ತನ್ನ ಜಾತ್ಯತೀತ ಸಿದ್ಧಾಂತಕ್ಕೆ ತಿಲಾಂಜಲಿ ನೀಡಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರವು ಸಚಿವ ಸಂಪುಟವನ್ನು ರಚಿಸುವಾಗ ಮುಸ್ಲಿಮ್ ಸಮುದಾಯದ ಕೇವಲ ಇಬ್ಬರನ್ನು ಮಾತ್ರ ಸಚಿವರನ್ನಾಗಿ ಮಾಡಲಾಯಿತು. ನಂತರ ನಡೆದ ವಿಧಾನ ಸಭೆಯಿಂದ ವಿಧಾನ ಪರಿಷತ್ ಸದಸ್ಯರ ಆಯ್ಕೆಯ ಸಂದರ್ಭದಲ್ಲಿ ಖಾಲಿ ಇರುವ ಮೂರು ಸ್ಥಾನಗಳಲ್ಲಿ ಮುಸ್ಲಿಮ್ ಸಮುದಾಯದ ಒಬ್ಬರಿಗೂ ಪರಿಗಣಿಸಲಿಲ್ಲ, ಅದರ ನಂತರ ವಿಧಾನ ಪರಿಷತ್‌ಗೆ ಸರಕಾರದಿಂದ ಮೂರು ಜನರಿಗೆ ನಾಮನಿರ್ದೇಶನ ಮಾಡುವ ಸಂದರ್ಭದಲ್ಲಿಯೂ ಮುಸ್ಲಿಮ್ ಸಮುದಾಯದಿಂದ ಒಬ್ಬರನ್ನೂ ನಾಮ ನಿರ್ದೇಶನ ಮಾಡಲಿಲ್ಲ. ಒಂದು ವರ್ಷದಲ್ಲಿ ವಿಧಾನ ಪರಿಷತ್‌ಗೆ ಆರು ನಾಮನಿರ್ದೇಶನ ಮಾಡಿದ್ದರೂ ಒಬ್ಬರಿಗೂ ನಾಮ ನಿರ್ದೇಶನ ಮಾಡಲು ಪಕ್ಷಕ್ಕೆ, ಸರಕಾರಕ್ಕೆ ಸಾಧ್ಯವಾಗಿಲ್ಲ. ಆರು ಸ್ಥಾನಗಳಲ್ಲಿ ಕನಿಷ್ಠ ಒಬ್ಬರಿಗಾದರೂ ಅದನ್ನು ನೀಡಬಹುದಾಗಿತ್ತು.

ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಮುಸ್ಲಿಮ್ ಸಮುದಾಯಕ್ಕೆ ಟಿಕೆಟ್ ನೀಡುವಾಗ ಮುಸ್ಲಿಮರು ಈಗಿನ ಪರಿಸ್ಥಿತಿಯಲ್ಲಿ ನೇರವಾಗಿ ಚುನಾವಣೆಯಲ್ಲಿ ಆಯ್ಕೆಯಾಗುವ ಸಾಧ್ಯತೆಯಿಲ್ಲ, ಇತರ ಸಮುದಾಯದ ಜನ ಮುಸ್ಲಿಮ್ ಅಭ್ಯರ್ಥಿಗೆ ಮತಹಾಕುವುದು ಕಷ್ಟ, ಪಕ್ಷ ಅಧಿಕಾರಕ್ಕೆ ಬಂದರೆ ವಿಧಾನ ಪರಿಷತ್‌ಗೆ

ನಾಮನಿರ್ದೇಶನ ಮಾಡುವುದರ ಮೂಲಕ ಸರಿಪಡಿಸಲಾಗುವುದು ಎಂದು ಹೇಳಲಾಗುತ್ತಿತ್ತು, ಆದರೆ ಸರಕಾರ ಅಧಿಕಾರಕ್ಕೆ ಬಂದ ನಂತರ ಆದ್ಯತೆಗಳು ಬೇರೆಯಾದವು. ಇದೇ ರೀತಿ ಹೇಳಿ-ಹೇಳಿ ಕಳೆದ ಇಪ್ಪತ್ತು ವರ್ಷಗಳಲ್ಲಿ ಮುಸ್ಲಿಮ್ ಸಮುದಾಯದಿಂದ ವಿಧಾನಸಭೆಗೆ ‘ಸ್ಪರ್ಧೆ’ ಮಾಡುವವರ ಸಂಖ್ಯೆ 22ರಿಂದ 15 ಬಂದು ತಲುಪಿದೆ. ಆದರೆ ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡುವವರ ಸಂಖ್ಯೆಯೇನು ಏರಿಕೆಯಾಗಲಿಲ್ಲ. ಅದೇ ರೀತಿ ಲೋಕಸಭೆಗೂ ಕಳೆದ ಇಪ್ಪತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷದಿಂದ ಮುಸ್ಲಿಮ್ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಸಂಖ್ಯೆ 3 ರಿಂದ ಒಂದಕ್ಕೆ ಇಳಿದಿದೆ (ಕಷ್ಟಪಟ್ಟು ಟಿಕೆಟ್ ಪಡೆದ ಬಳಿಕವೂ ಮುಸ್ಲಿಮ್ ಸಮುದಾಯದ ಅಭ್ಯರ್ಥಿ ತನ್ನ ಸ್ವಪ್ರಯತ್ನದಿಂದಲೇ ಗೆದ್ದು ಬರಬೇಕೇ ಹೊರತು ಪಕ್ಷದ ಮುಂಚೂಣಿ ನಾಯಕರ ಸಹಕಾರ ಅಪೇಕ್ಷಿಸುವಂತಿಲ್ಲ. ಇತ್ತೀಚಿನ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ, ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸ್ಟಾರ್ ಕ್ಯಾಂಪೇನರ್ ಸಿದ್ದರಾಮಯ್ಯ ಅವರು ಒಂದೇ ಒಂದು ದಿನವೂ ಕಾಣಲಿಲ್ಲ. ಆದರೆ ಕೊಪ್ಪಳ ಕ್ಷೇತ್ರದಲ್ಲಿ ಮಾತ್ರ ಸಾಕಷ್ಟು ಸಮಯ ವ್ಯಯಿಸಿದ್ದನ್ನು ಸಮುದಾಯದ ಜನರು ಗಮನಿಸಿದ್ದಾರೆ. ಮನ್ಸೂರ್ ಅಲಿ ಖಾನ್ ಅವರ ಗೆಲುವಿಗಾಗಿ ರಿಝ್ಝಾನ್ ಅರ್ಷದ್ ಹಗಲು-ರಾತ್ರಿ ರ್ಯಾಲಿಗಳಲ್ಲಿ ಪಾಲ್ಗೊಂಡರೆ, ಜಮೀರ್ ಅಹಮದ್, ಎನ್.ಎ. ಹ್ಯಾರಿಸ್ ಆಗಾಗ ಪಾಲ್ಗೊಂಡಿದ್ದು, ಕೆ.ಜೆ. ಜಾರ್ಜ್ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಒಮ್ಮೆ ಪಾಲ್ಗೊಂಡಿರುವುದು ವಿವಿಧ ಮಾಧ್ಯಮಗಳಲ್ಲಿ ಕಂಡಿದೆ ಇಂತಹ ಹಲವಾರು ಕಾರಣಗಳಿಂದಾಗಿಯೇ ಕಳೆದ ಇಪ್ಪತ್ತು ವರ್ಷಗಳಲ್ಲಿ ಲೋಕಸಭೆಯಲ್ಲಿ ರಾಜ್ಯದ ಮುಸ್ಲಿಮ್ ಸಮುದಾಯದಿಂದ ಯಾರೂ ಪ್ರತಿನಿಧಿಗಳೇ ಇಲ್ಲದಂತಾಗಿದೆ. ಇದೇ ಅವಧಿಯಲ್ಲಿ ರಾಜ್ಯ ಸಭೆಗೆ ನಾಮನಿರ್ದೇಶನ ಮಾಡುವಲ್ಲಿಯೂ ಯಾವುದೇ ಬದಲಾವಣೆಯಾಗಲಿಲ್ಲ, ಹಿಂದೆಯೂ ಒಬ್ಬರನ್ನು ನಾಮನಿರ್ದೇಶನ ಮಾಡಲಾಗುತ್ತಿತ್ತು, ಇಂದೂ ಒಬ್ಬರನ್ನು ನಾಮನಿರ್ದೇಶನ ಮಾಡಲಾಗುತ್ತಿದೆ. ಲೋಕಸಭಾ ಚುನಾವಣೆಗಿಂತ ಮೊದಲು ವಿವಿಧ ನಿಗಮ ಮಂಡಳಿಗಳಿಗೆ ಸಚಿವ ಸಂಪುಟ ಸ್ಥಾನಮಾನದೊಂದಿಗೆ ಅಧ್ಯಕ್ಷರನ್ನಾಗಿ ನಾಮ ನಿರ್ದೇಶನ ಮಾಡಲಾಯಿತು. ಅಳೆದು ತೂಗಿ ಕೆಲವೇ ಕೆಲವು ಮುಸ್ಲಿಮರಿಗೆ ಅವಕಾಶ ನೀಡಲಾಯಿತು. (ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ರಚಿಸಿದ ಜಿಲ್ಲಾ ಸಮಿತಿಗಳಲ್ಲಿ ಒಬ್ಬೇ ಒಬ್ಬ ಮುಸ್ಲಿಮ್ ಸಮುದಾಯದ ವ್ಯಕ್ತಿಯೂ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷನಾಗಿ ನೇಮಕವಾಗಿರುವುದು ಕಂಡಿಲ್ಲ!) ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಿರುವುದು ಉತ್ತರ ಕರ್ನಾಟಕದಲ್ಲಿ, ಅದರಲ್ಲಿಯೂ ವಿಶೇಷವಾಗಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ, ಆದರೆ ಬಹುತೇಕ ನಾಮನಿರ್ದೇಶನಗಳು ಬೆಂಗಳೂರು ನಗರಕ್ಕೆ ಸಿಮೀತಗೊಂಡಿವೆ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಹಾಗೂ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ನೇಮಕ ಬೆಂಗಳೂರಿನ ನಾಯಕರಿಗೆ ಮೀಸಲಿಟ್ಟಂತಿದೆ. ಇದರಿಂದ ರಾಜ್ಯದ ಇತರ ಪ್ರದೇಶದ ಮುಸ್ಲಿಮ್ ಸಮುದಾಯಕ್ಕೆ ಉಪಯೋಗವಿಲ್ಲ, ಯಾಕೆಂದರೆ ಅವರ್ಯಾರೂ ರಾಜ್ಯ ಪ್ರವಾಸ ಮಾಡಿ ಯೋಜನೆಗಳ ಅನುಷ್ಠಾನ ಮಾಡಲು ಆಸಕ್ತಿ ತೋರುವುದಿಲ್ಲ.

ಈಗ ರಾಜ್ಯದಲ್ಲಿ 11 ವಿಧಾನ ಪರಿಷತ್ ಸದಸ್ಯರು ನಿವೃತ್ತಿಯಾಗಲಿದ್ದಾರೆ. ಅಲ್ಲದೇ ಜಗದೀಶ ಶೆಟ್ಟರ್ ರಾಜೀನಾಮೆಯಿಂದ ತೆರವಾದ ಒಂದು ಸ್ಥಾನ ಸೇರಿ ಒಟ್ಟು 12 ಸ್ಥಾನಗಳಿಗೆ ವಿಧಾನ ಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ನಡೆಯಲಿದೆ. ಇದರಲ್ಲಿ 11 ಸ್ಥಾನಗಳಿಗೆ ಚುನಾವಣಾ ಅಧಿಸೂಚನೆ ಹೊರಡಿಸಲಾಗಿದೆ. ಇನ್ನೂ ಒಂದು ಸ್ಥಾನಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಿರುವುದಿಲ್ಲ. ಈಗ ನಡೆಯುತ್ತಿರುವ 11 ವಿಧಾನ ಪರಿಷತ್ ಸ್ಥಾನದ ಚುನಾವಣೆಯಲ್ಲಿ ಸಂಖ್ಯಾ ಬಲವನ್ನು ಆಧರಿಸಿ ಕಾಂಗ್ರೆಸ್ ಪಕ್ಷಕ್ಕೆ 7 ಸ್ಥಾನಗಳು ಲಭಿಸಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ, 7 ಸ್ಥಾನಗಳಲ್ಲಿ ಅಬ್ಬಬ್ಬಾ ಎಂದರೆ ಒಂದು ಸ್ಥಾನ ಮುಸ್ಲಿಮರಿಗೆ ನೀಡಬಹುದು. ಆದರೆ ಈ ಬಾರಿ ನ್ಯಾಯಯುತವಾಗಿ ಎರಡು ಸ್ಥಾನಗಳನ್ನು ಮುಸ್ಲಿಮರಿಗೆ ನೀಡಬೇಕು. ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಇಬ್ಬರು ಮಾತ್ರ ವಿಧಾನ ಪರಿಷತ್ ಸದಸ್ಯರಾಗಿ ವಿಧಾನಸಭೆಯಿಂದ ಆಯ್ಕೆಯಾಗಿದ್ದಾರೆ. ಒಬ್ಬರು ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿದ್ದಾರೆ. ರಾಜ್ಯದಲ್ಲಿ ಇರುವ ಒಟ್ಟು 75 ಸ್ಥಾನಗಳ ಬಲ ಹೊಂದಿರುವ ವಿಧಾನ ಪರಿಷತ್‌ನಲ್ಲಿ ಮುಸ್ಲಿಮ್ ಸಮುದಾಯದ ಕೇವಲ 3 ಜನ ಮಾತ್ರ ಇರುವುದು, ಇದು ಎಂತಹ ಪ್ರಾತಿನಿಧ್ಯ? ಈಗಾಗಲೇ ನೇರವಾಗಿ ನಾಮನಿರ್ದೇಶನ ಹೊಂದಿರುವ 12 ಜನ ವಿಧಾನ ಪರಿಷತ್ ಸದಸ್ಯರಲ್ಲಿ ಒಬ್ಬರೂ ಮುಸ್ಲಿಮ್ ಸಮುದಾಯದಿಂದ ಇಲ್ಲ. 25 ಜನ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವವರಲ್ಲಿ ಕೇವಲ ಒಬ್ಬರು ಮಾತ್ರ ಮುಸ್ಲಿಮ್ ಸಮುದಾಯದಿಂದ ಇರುವುದು ಮುಸ್ಲಿಮ್ ಪ್ರಾತಿನಿಧ್ಯದ ಕುರಿತು ಕಾಂಗ್ರೆಸ್‌ನಿಂದ ಆಗುತ್ತಿರುವ ಅನ್ಯಾಯದ ಸ್ಪಷ್ಟ ಉದಾಹರಣೆ. ಅಲ್ಲದೆ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರದಿಂದ ಆಯ್ಕೆಯಾಗುವ 14 ಸ್ಥಾನಗಳಲ್ಲಿ ಒಬ್ಬರಿಗೂ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುವುದಿಲ್ಲ, ಅಲ್ಲಿ ಪ್ರಾತಿನಿಧ್ಯದ ಪ್ರಶ್ನೆಯೇ ಉದ್ಭವಿಸುವುದಿಲ್ಲ, ಅಲ್ಲಿ ಟಿಕೆಟ್ ಕೇಳಿದರೆ ಮುಸ್ಲಿಮರಿಗೆ ಯಾರು ಮತ ನೀಡುತ್ತಾರೆ ಎಂದು ಹೇಳುವ ನಾಯಕರಿದ್ದಾರೆ.

ಕಾಂಗ್ರೆಸ್ ಪಕ್ಷ ವಿಧಾನ ಸಭೆಯಲ್ಲಿ ಸೋಲು ಗೆಲುವನ್ನು ಲೆಕ್ಕಿಸದೆ ಕನಿಷ್ಠ 30 ಜನರಿಗೆ ಟಿಕೆಟ್ ನೀಡಬಹುದು, ಅದು ಮುಂದಿನ ದಿನಗಳಲ್ಲಿ ಪ್ರಯತ್ನಿಸಬಹುದು. ಈಗ ವಿಧಾನ ಪರಿಷತ್‌ನಲ್ಲಿ ಮುಸ್ಲಿಮ್ ಸಮುದಾಯದ ಪ್ರಾತಿನಿಧ್ಯ ಹೆಚ್ಚಿಸುವಲ್ಲಿಯಾದರೂ ಕಾಂಗ್ರೆಸ್ ಪಕ್ಷ ಸೂಕ್ತ ನಿರ್ಣಯ ಕೈಗೊಳ್ಳುವ ಅವಶ್ಯಕತೆ ಇದೆ. ಇಲ್ಲದೇ ಇದ್ದರೆ ಲೋಕಸಭೆಯಲ್ಲಿ ಇಲ್ಲವಾಗಿರುವ ಪ್ರಾತಿನಿಧ್ಯದ ರೀತಿಯಲ್ಲಿಯೇ ವಿಧಾನ ಸಭೆ/ವಿಧಾನ ಪರಿಷತ್‌ಗಳಲ್ಲಿಯೂ ಮುಸ್ಲಿಮ್ ಸಮುದಾಯದ ಪ್ರಾತಿನಿಧ್ಯ ಇಲ್ಲವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಗ ನಡೆಯುತ್ತಿರುವ ವಿಧಾನ ಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಕನಿಷ್ಠ ಇಬ್ಬರಿಗಾದರೂ ಮುಸ್ಲಿಮ್ ಸಮುದಾಯದ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಪಕ್ಷ ಅವಕಾಶ ನೀಡಬೇಕು. ಸಿದ್ದರಾಮಯ್ಯ ಅವರು ತಮ್ಮ ಅಧಿಕಾರದ ಕೊನೆಯ ಅವಧಿಯಾದ್ದರಿಂದ ಮುಸ್ಲಿಮರ ರಾಜಕೀಯ ಪ್ರಾತಿನಿಧ್ಯದ ವಿಚಾರದಲ್ಲಿ ಹೆಚ್ಚು ಗಮನ ನೀಡದೆ ಇರಬಹುದು ಅಥವಾ ನಾನೇ ಸಿಎಂ ಆಗಿರುವಾಗ ಮುಸ್ಲಿಮ್ ಸಮುದಾಯಕ್ಕೆ ಪ್ರಾತಿನಿಧ್ಯದ ವಿಚಾರವೇಕೆ? ಸಮುದಾಯದ ಸಾಮಾಜಿಕ ಹಾಗೂ ಆರ್ಥಿಕ ಏಳಿಗೆಯೇ ಮುಖ್ಯ ಹೊರತು ರಾಜಕೀಯ ಪ್ರಾತಿನಿಧ್ಯವಲ್ಲ ವೆಂಬುದು ಅವರ ಯೋಚನೆಯಾಗಿರಬಹುದು. ಆದರೆ ಸಿದ್ದರಾಮಯ್ಯ ಅವರ ಬಳಿಕ ಮುಖ್ಯಮಂತ್ರಿ ಗಾದಿಗಾಗಿ ಪ್ರಯತ್ನ ಪಡುತ್ತಿರುವ ಡಿ.ಕೆ. ಶಿವಕುಮಾರ್ ಅವರು ಮುಸ್ಲಿಮ್ ಸಮುದಾಯಕ್ಕೆ ಸಾಮಾಜಿಕ-ಆರ್ಥಿಕ ನ್ಯಾಯದ ಜೊತೆಗೆ ರಾಜಕೀಯ ನ್ಯಾಯವೂ(ಪ್ರಾತಿನಿಧ್ಯ) ಮುಖ್ಯವೆಂದು ಅರಿತು ರಾಹುಲ್ ಗಾಂಧಿಯವರ ಕನಸಿನ ‘ನ್ಯಾಯ’ದ ಪರಿಕಲ್ಪನೆಗೆ ರೆಕ್ಕೆಯಾಗಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಎಂ.ಎಚ್. ರೆಹಮಾನ್

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!