ಮಹಿಳೆ, ಮುಸ್ಲಿಮ್, ಕಲ್ಯಾಣ ಕರ್ನಾಟಕದವರ ಕಡೆಗಣನೆ

Update: 2024-06-29 04:25 GMT

ನಾಡಿನ ಅರ್ಧ ಭಾಗದಷ್ಟು ಇರುವ ಮಹಿಳಾ ಲೋಕವನ್ನು, ಕರ್ನಾಟಕದ ಜನಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿರುವ ಮುಸ್ಲಿಮ್ ಸಮುದಾಯವನ್ನು ಮತ್ತು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಸಾಂಸ್ಕೃತಿಕ ಲೋಕವನ್ನು ಅಕಾಡಮಿ-ಪ್ರಾಧಿಕಾರಗಳ ನೇಮಕಾತಿಯಲ್ಲಿ ಪರಿಗಣಿಸದೆ ಇರುವುದು ಒಟ್ಟು ಕನ್ನಡ ಸಾಂಸ್ಕೃತಿಕ ಲೋಕವನ್ನು ಮುಕ್ಕಾಗಿಸಿದಂತೆ. ಅದರಲ್ಲೂ ಸಮಾಜವಾದಿ ಹಿನ್ನೆಲೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದಲ್ಲಿ ಇಂತಹ ಅವಘಡಗಳು ಸಂಭವಿಸಿದ್ದು ಸಾಮಾಜಿಕ ನ್ಯಾಯಕ್ಕೆ ಬಗೆದ ದ್ರೋಹವೇ ಸರಿ. ಆರೆಸ್ಸೆಸ್, ಬಿಜೆಪಿಯ ಮನಸ್ಥಿತಿಗೆ ಕಡಿವಾಣ ಹಾಕದಿದ್ದರೆ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಅಪಮಾನ ಮಾಡಿದಂತೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮಾಜವಾದಿ ಹಿನ್ನೆಲೆಯಿಂದ ರಾಜಕಾರಣಕ್ಕೆ ಬಂದವರು. ಅವರ ಸೈದ್ಧಾಂತಿಕ ಬದ್ಧತೆಯನ್ನು ಯಾರೂ ಪ್ರಶ್ನಿಸಲಾರರು. ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ, ಮಹಿಳಾ ನ್ಯಾಯದ ಪರ ಇರುವ ಅವರು ಕೋಮುವಾದಿ ಶಕ್ತಿಗಳ ವಿರುದ್ಧ ನಿರಂತರ ಪ್ರತಿರೋಧ ವ್ಯಕ್ತಪಡಿಸುತ್ತಿರುವವರು. ಕಾಂಗ್ರೆಸ್ ಪಕ್ಷದಲ್ಲಿ ಸೈದ್ಧಾಂತಿಕ ಬದ್ಧತೆಯುಳ್ಳ ಕೆಲವೇ ನಾಯಕರಲ್ಲಿ ಸಿದ್ದರಾಮಯ್ಯ ಒಬ್ಬರು. ಗಾಂಧಿ, ಲೋಹಿಯಾ, ಅಂಬೇಡ್ಕರ್, ಬುದ್ಧ, ಬಸವಣ್ಣನವರ ತತ್ವಾದರ್ಶಗಳಲ್ಲಿ ನಂಬಿಕೆ ಇಟ್ಟವರು. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಅಕಾಡಮಿ-ಪ್ರಾಧಿಕಾರಗಳ ನೇಮಕಾತಿಯಲ್ಲಿ ಮಹಿಳೆ, ಮುಸ್ಲಿಮ್, ಕಲ್ಯಾಣ ಕರ್ನಾಟಕದ ಸಾಹಿತಿ- ಕಲಾವಿದರನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಅಷ್ಟಕ್ಕೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿ ಶಿವರಾಜ ತಂಗಡಗಿಯವರು ಹಾದಿ ತಪ್ಪಿಸುವ ಜಾಯಮಾನದವರಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಅಪಾರ ವಿಶ್ವಾಸ ಹೊಂದಿದವರು. ಸ್ವತಃ ಕಲ್ಯಾಣ ಕರ್ನಾಟಕ ಪ್ರದೇಶದವರಾದ ಶಿವರಾಜ ತಂಗಡಗಿಯವರು ಅದೇ ಭಾಗದ ಸಾಹಿತಿ, ಕಲಾವಿದರನ್ನು ಕಡೆಗಣಿಸುವಷ್ಟು ಹುಂಬರಲ್ಲ.

ಮಹಿಳೆ, ಮುಸ್ಲಿಮ್ ಮತ್ತು ಕಲ್ಯಾಣ ಕರ್ನಾಟಕದ ಸಾಹಿತಿ-ಕಲಾವಿದರ ಬಗ್ಗೆ ಪೂರ್ವಾಗ್ರಹ ಇಟ್ಟುಕೊಂಡಿರುವ ಆರೆಸ್ಸೆಸ್, ಬಿಜೆಪಿ ಮನಸ್ಥಿತಿಯ ಮೋದಿಯ ಪರಮ ಭಕ್ತರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿದ್ದು ಬೇಕಂತಲೇ ಹಾದಿ ತಪ್ಪಿಸುತ್ತಿರಬಹುದು. ಈ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ದೂಷಿಸಲಾಗದು. ಯಾಕೆಂದರೆ ಅವರು ಸದಾ ಆಡಳಿತಾತ್ಮಕ ವಿಷಯಗಳ ಒತ್ತಡದಲ್ಲಿರುತ್ತಾರೆ. ಅಕಾಡಮಿ-ಪ್ರಾಧಿಕಾರಗಳ ನೇಮಕಾತಿ ಮಾತ್ರವಲ್ಲ ಒಟ್ಟಾರೆ ಸಾಂಸ್ಕೃತಿಕ ವಿದ್ಯಮಾನಗಳ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಜಾಗರೂಕರಾಗಿರಬೇಕು. ಕಾಂಗ್ರೆಸ್ ಪಕ್ಷ ಪ್ರತಿಪಾದಿಸುತ್ತಾ ಬಂದ ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ, ಮಹಿಳಾ ನ್ಯಾಯದ ತತ್ವಾದರ್ಶಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಎಲ್ಲಾ ಹಂತಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆಯೇ ಎಂಬುದರ ಮೇಲೆ ಸದಾ ನಿಗಾ ಇಡುವುದು ಇಲಾಖಾ ಮಂತ್ರಿಗಳ ಹೊಣೆಗಾರಿಕೆಯಾಗಿರುತ್ತದೆ. ಇದು ಸೈದ್ಧಾಂತಿಕ ದೃಷ್ಟಿಯಿಂದ ಅಗತ್ಯ ಮತ್ತು ಚುನಾವಣಾ ಲೆಕ್ಕಾಚಾರದಲ್ಲಿ ಅನಿವಾರ್ಯ ಎಂಬುದು ಮಂತ್ರಿಗಳು ಮನಗಾಣಬೇಕು. ಪ್ರಜಾಪ್ರಭುತ್ವದ ಪ್ರಧಾನ ಆಶಯವೇ ಮಹಿಳೆಯರು ಸೇರಿ ಎಲ್ಲಾ ಸಾಮಾಜಿಕ ವಲಯಗಳನ್ನು ಒಳಗೊಳ್ಳುವುದು, ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಗಂಭೀರ ಪ್ರಯತ್ನ ಮಾಡುವುದು.

ಮಹಿಳಾ ಪ್ರಾತಿನಿಧ್ಯವನ್ನು ಎಲ್ಲಾ ಹಂತಗಳಲ್ಲಿ ವಿಸ್ತರಿಸುವುದರ ಭಾಗವಾಗಿಯೇ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಹಿಳೆಯರಿಗೆ ಪ್ರತಿಶತ 33ರಷ್ಟು ಮೀಸಲಾತಿ ನೀಡುವ ವಿಧೇಯಕ ಪಾಸು ಮಾಡಿದ್ದು. ಆ ಕಾನೂನು ಜಾರಿಯಾದರೆ ಎಲ್ಲಾ ರಾಜ್ಯಗಳ ವಿಧಾನಸಭೆ ಮತ್ತು ದೇಶದ ಲೋಕಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ ಪ್ರತಿಶತ 33ರಷ್ಟು ಕಡ್ಡಾಯವಾಗುತ್ತದೆ. ಈಗಾಗಲೇ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಕೇಂದ್ರ ಸರಕಾರವೇ 371ನೇ ಕಲಂಗೆ ತಿದ್ದುಪಡಿ ಮಾಡಿ ವಿಶೇಷ ಸ್ಥಾನಮಾನ ಕಲ್ಪಿಸಿದೆ. ವಿಶೇಷ ಸ್ಥಾನಮಾನದ ಭಾಗವಾಗಿ ಕಲ್ಯಾಣ ಕರ್ನಾಟಕದವರಿಗೆ ಸರಕಾರಿ ನೌಕರಿಗಳಲ್ಲಿ ಮೀಸಲಾತಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಕರ್ನಾಟಕ ರಾಜ್ಯ ಪುನರ್ ವಿಂಗಡನಾ ಆಯೋಗದ ಅಧ್ಯಕ್ಷ ಫಝಲ್ ಅಲಿಯವರು ತಮ್ಮ ಶಿಫಾರಸುಗಳಲ್ಲಿ ನಿಜಾಂ ರಾಜ್ಯದ ಅಧೀನ ಪ್ರದೇಶಗಳನ್ನು ವಿಶೇಷ ಸ್ಥಾನಮಾನ ನೀಡಿ ಅಭಿವೃದ್ಧಿ ಪಡಿಸಬೇಕೆಂದು ಸೂಚಿಸಿದ್ದರು. ಪ್ರಾದೇಶಿಕ ಅಸಮಾನತೆ ನಿವಾರಣಾ ಅಧ್ಯಯನ ಸಮಿತಿಯ ಅಧ್ಯಕ್ಷ, ಖ್ಯಾತ ಅರ್ಥಶಾಸ್ತ್ರಜ್ಞ ಡಿ.ಎಂ. ನಂಜುಂಡಪ್ಪ ತಮ್ಮ ವರದಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಸಾಹಿತಿ-ಕಲಾವಿದರಿಗೆ ಸಾಂಸ್ಕೃತಿಕ ಕ್ಷೇತ್ರಗಳ ಅವಕಾಶ ನೀಡುವಿಕೆಯಲ್ಲಿ ಸಾಕಷ್ಟು ಅನ್ಯಾಯವಾಗಿರುವುದನ್ನು ಗುರುತಿಸಿದ್ದಾರೆ. ಮಾತ್ರವಲ್ಲ; ಕಾನೂನಿಗೆ ತಿದ್ದುಪಡಿ ಮಾಡಿ ಸಾಂಸ್ಕೃತಿಕ ಅಸಮಾನತೆಯನ್ನು ನಿವಾರಿಸಬೇಕೆಂದು ಶಿಫಾರಸು ಮಾಡಿದ್ದರು. ದಿ. ವೈಜನಾಥ ಪಾಟೀಲರ ನೇತೃತ್ವದಲ್ಲಿ ನಡೆದ ಹೋರಾಟಗಳು, ಕಾಂಗ್ರೆಸ್ನ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಎನ್. ಧರಂ ಸಿಂಗ್ ಅವರ ಪ್ರಯತ್ನದಿಂದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಕಲಂ 371 (ಜೆ)ನೇ ತಿದ್ದುಪಡಿ ಮೂಲಕ ವಿಶೇಷ ಸ್ಥಾನಮಾನವೂ ದೊರೆಯಿತು. ಪ್ರತಿವರ್ಷ ವಿಶೇಷ ಅನುದಾನವೂ ದೊರೆಯುತ್ತಿದೆ. ಶಿವರಾಜ ತಂಗಡಗಿಯವರೂ ಸೇರಿದಂತೆ ಆ ಭಾಗದ ಜನಪ್ರತಿನಿಧಿಗಳು ವಿಶೇಷ ಅನುದಾನದ ಫಲಾನುಭವಿಗಳಾಗಿದ್ದಾರೆ. ಸಾಂಸ್ಕೃತಿಕ ಕ್ಷೇತ್ರವೂ ಸೇರಿದಂತೆ ರಾಜ್ಯ ಸರಕಾರದ ಎಲ್ಲಾ ಹಂತಗಳಲ್ಲಿ ಪ್ರಾದೇಶಿಕ ನ್ಯಾಯ ತತ್ವದಡಿ ವಿಶೇಷ ಪ್ರಾತಿನಿಧ್ಯ ನೀಡುವುದು ಕಾನೂನು ಬದ್ಧ ಹೊಣೆಗಾರಿಕೆಯಾಗಿದೆ. ಇನ್ನು ಮುಸ್ಲಿಮ್ ಸಮುದಾಯಕ್ಕೆ ವಿಶೇಷ ಮೀಸಲಾತಿ ನೀಡುವುದು, ಎಲ್ಲಾ ಹಂತಗಳಲ್ಲಿ ಪ್ರಾತಿನಿಧ್ಯ ಕಲ್ಪಿಸುವುದು ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತಾತ್ವಿಕವಾಗಿಯೇ ಒಪ್ಪಿಕೊಂಡಿದೆ. ಕಾಂಗ್ರೆಸ್ ಮುಸ್ಲಿಮ್ ತುಷ್ಟೀಕರಣ ಮಾಡುತ್ತಿದೆ ಎಂಬ ಕಾರಣಕ್ಕೆ ಬಿಜೆಪಿ ಮುಸ್ಲಿಮ್ ವಿರೋಧಿ ನೀತಿ ಅನುಸರಿಸುತ್ತಿದೆ. ಮುಸ್ಲಿಮ್ ಸಮುದಾಯದವರಿಗೆ ವಿಧಾನಸಭೆ, ಲೋಕಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಲು ಬಿಜೆಪಿ ಅವಕಾಶವೇ ನೀಡುವುದಿಲ್ಲ. ಬಿಜೆಪಿ ಸರಕಾರಗಳಲ್ಲಿ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಒಬ್ಬ ಮಂತ್ರಿಯೂ ಇರುವುದಿಲ್ಲ. ಸಾಂಸ್ಕೃತಿಕ ಕ್ಷೇತ್ರದ ಸ್ಥಾನಮಾನವೂ ಸೇರಿದಂತೆ ಸರಕಾರದ ಯಾವ ಹಂತದಲ್ಲೂ ಮುಸ್ಲಿಮ್ ಪ್ರಾತಿನಿಧ್ಯ ದೀಪ ಹಚ್ಚಿ ಹುಡುಕಿದರೂ ಸಿಗುವುದಿಲ್ಲ. ಮಹಿಳಾ ನ್ಯಾಯ, ಪ್ರಾದೇಶಿಕ ನ್ಯಾಯವನ್ನು ಬಿಜೆಪಿ ತಾತ್ವಿಕವಾಗಿಯೇ ವಿರೋಧಿಸುತ್ತದೆ. ಸ್ತ್ರೀಯರು ಸ್ವಾತಂತ್ರ್ಯಕ್ಕೆ ಅನರ್ಹರು ಎಂದು ಸಾಕ್ಷಾತ್ ಮನು ತನ್ನ ಮನುಸ್ಮತಿಯಲ್ಲಿ ಬಲವಾಗಿ ಪ್ರತಿಪಾದಿಸಿರುವಾಗ ಬಿಜೆಪಿ ಅದನ್ನು ಪಾಲಿಸದೆ ಇರಲಾಗುತ್ತದೆಯೇ? 2019ರಿಂದ 2023ರವರೆಗೆ ನಾಲ್ಕು ವರ್ಷಗಳ ಕಾಲ ರಾಜ್ಯದಲ್ಲಿ ಬಿಜೆಪಿ ಸರಕಾರವಿತ್ತು. ಮುಸ್ಲಿಮ್ ಸಮುದಾಯವನ್ನು ಹತ್ತಿಕ್ಕುವುದೇ ಬಿಜೆಪಿ ಸರಕಾರದ ಮೊದಲ ಆದ್ಯತೆಯಾಗಿತ್ತು. ನಿಗಮ, ಮಂಡಳಿ, ಅಕಾಡಮಿ-ಪ್ರಾಧಿಕಾರಗಳ ನೇಮಕಾತಿಯಲ್ಲಿ ಮುಸ್ಲಿಮ್ ಸಮುದಾಯದ ಪ್ರತಿಭಾವಂತರನ್ನು ಸಂಪೂರ್ಣ ಹೊರಗಿಟ್ಟಿದ್ದರು. ಒಬ್ಬ ಮಹಿಳೆಯನ್ನೂ ಯಾವೊಂದು ಅಕಾಡಮಿ-ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಿರಲಿಲ್ಲ.

ಪ್ರಾದೇಶಿಕ ಅಸಮಾನತೆ ನಿವಾರಣೆ ಎಂದರೆ ಬಿಜೆಪಿಯವರಿಗೆ ಅಲರ್ಜಿ. 1999ರಿಂದ 2004ರವರೆಗೆ ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಎನ್ಡಿಎ ನೇತೃತ್ವದ ಎನ್ಡಿಎ ಸರಕಾರವಿತ್ತು. ಕರ್ನಾಟಕದಲ್ಲಿ ಆಗ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದರು. ಆಗಿನ ಹೈದರಾಬಾದ್ ಕರ್ನಾಟಕ ಅಂದರೆ ಈಗಿನ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ 371ನೇ ಕಲಂಗೆ ತಿದ್ದುಪಡಿ ಮಾಡಿ ವಿಶೇಷ ಸ್ಥಾನಮಾನ ನೀಡಬೇಕೆಂದು ಕರ್ನಾಟಕ ಸರಕಾರ ಕೇಂದ್ರ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ವಿಶೇಷ ಸ್ಥಾನಮಾನದ ಪ್ರಸ್ತಾವವನ್ನು ಕರ್ನಾಟಕದ ಉಭಯ ಸದನಗಳಲ್ಲಿ ಸರ್ವಾನುಮತದ ನಿರ್ಣಯದೊಂದಿಗೆ ಅಂಗೀಕರಿಸಲಾಗಿತ್ತು. ಆ ಪ್ರಸ್ತಾವವನ್ನು ಆಗಿನ ಕೇಂದ್ರ ಗೃಹ ಸಚಿವಾಲಯ ಚರ್ಚೆಗೂ ಮಂಡಿಸದೇ ತಿರಸ್ಕರಿಸಿತ್ತು. ಆಗ ಕೇಂದ್ರದಲ್ಲಿ ಎಲ್.ಕೆ. ಅಡ್ವಾಣಿಯವರು ಗೃಹ ಸಚಿವರಾಗಿದ್ದರು. ಬಿಜೆಪಿಯವರಿಗೆ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕೊಡುವುದು ಬಿಲ್ಕುಲ್ ಇಷ್ಟವಿರಲಿಲ್ಲ. ಕೇಂದ್ರದಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರವಿದ್ದಾಗ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ದೊರೆಯಿತು. 2013ರಲ್ಲಿ ಸಿದ್ದರಾಮಯ್ಯನವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ವಿಶೇಷ ಸ್ಥಾನಮಾನದ ಕಾನೂನು ಜಾರಿಯಾಯಿತು. ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯೂ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂತು.

ಅಂದರೆ; ಕಾಂಗ್ರೆಸ್ ಪಕ್ಷ, ಅದರ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಾತ್ವಿಕವಾಗಿ ಪ್ರಾದೇಶಿಕ ನ್ಯಾಯ, ಮಹಿಳಾ ನ್ಯಾಯ ಮತ್ತು ಮುಸ್ಲಿಮ್ ಸಮುದಾಯದ ಹಿತ ಕಾಪಾಡುವ ನಿಲುವಿಗೆ ಬದ್ಧರಾಗಿದ್ದಾರೆ. ತಾತ್ವಿಕವಾಗಿಯೇ ಒಪ್ಪಿಕೊಂಡು ಅನುಷ್ಠಾನದಲ್ಲಿ ತರದಿದ್ದರೆ ಅದು ‘ನುಡಿದಂತೆ ನಡೆ’ ಹೇಗಾಗುತ್ತದೆ? ‘ನುಡಿದಂತೆ ನಡೆದಿದ್ದೇವೆ’ ಎನ್ನುವುದು ಸಿದ್ದರಾಮಯ್ಯನವರ ನೇತೃತ್ವದ ಸರಕಾರದ ಘೋಷವಾಕ್ಯ. ಆ ವಾಕ್ಯಕ್ಕೆ ಅಪಚಾರವಾಗುವಂತೆ ನಡೆದುಕೊಂಡರೆ ಆ ತಪ್ಪನ್ನು ಗಂಭೀರವಾಗಿ ಪರಿಗಣಿಸಬೇಕಲ್ಲವೇ? ತಾತ್ವಿಕವಾಗಿ ಒಪ್ಪಿಕೊಂಡಿದ್ದನ್ನು ಆಚರಣೆಯಲ್ಲಿ ತರಬೇಕು ಎಂದೇನಿಲ್ಲ ಎಂಬ ವಾದವನ್ನೇ ಒಪ್ಪಿಕೊಳ್ಳೋಣ. ಪ್ರಜಾಪ್ರಭುತ್ವದ ಆಶಯ ಎಷ್ಟೊಂದು ಉದಾತ್ತ ಮತ್ತು ಉದಾರವಾಗಿದೆ ಎಂದರೆ; ಚುನಾವಣೆಯಲ್ಲಿ ಒಂದು ಪಕ್ಷವನ್ನು ಬೆಂಬಲಿಸಿ ಆ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಿದ ಜನವರ್ಗದ ಜೊತೆಗೆ ವೋಟು ಹಾಕದ ಜನವರ್ಗವನ್ನೂ ಸರಕಾರದ ಯೋಜನೆಗಳಲ್ಲಿ ಒಳಗೊಳ್ಳಬೇಕು ಎಂದು ಹೇಳುತ್ತದೆ. ಆದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಎಲ್ಲಾ ಹಂತದಲ್ಲೂ ತನ್ನನ್ನು ಕಾಯಾ-ವಾಚಾ-ಮನಸಾ ಬೆಂಬಲಿಸಿದ ಬಹುದೊಡ್ಡ ಜನವರ್ಗವನ್ನೇ ಸಾಂಸ್ಕೃತಿಕ ಲೋಕದ ಸ್ಥಾನಮಾನಗಳಿಂದ ವಂಚಿತಗೊಳಿಸಿದ್ದು ಯಾವ ಬಗೆಯ ಮನಸ್ಥಿತಿ? ಆರೆಸ್ಸೆಸ್, ಬಿಜೆಪಿಗಿಂತಲೂ ಯಾವ ಬಗೆಯಲ್ಲೂ ಕಮ್ಮಿ ಇಲ್ಲ. ಸರಕಾರ ಅಧಿಕಾರಕ್ಕೆ ಬರಲು ಕಾರಣರಾದ ಜನವರ್ಗವನ್ನೇ ಕಡೆಗಣಿಸುವುದು ಥ್ಯಾಂಕ್ಲೆಸ್ ಪ್ರವೃತ್ತಿ ಎನಿಸಿಕೊಳ್ಳುತ್ತದೆ.

2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಾರಾಸಗಟಾಗಿ ಬೆಂಬಲಿಸಿದ್ದು; ಮಹಿಳೆಯರು, ಮುಸ್ಲಿಮರು ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಮತದಾರರು. ಬೇಕಾದರೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಖಾತ್ರಿ ಪಡಿಸಿಕೊಳ್ಳಲಿ. ಮಹಿಳೆಯರು, ಮುಸ್ಲಿಮರು ಮತ್ತು ಕಲ್ಯಾಣ ಕರ್ನಾಟಕದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಪ್ರಮಾಣದಲ್ಲಿ ಬೆಂಬಲಿಸದೆ ಹೋಗಿದ್ದರೆ 136 ಸ್ಥಾನಗಳ ಕನಸು ಕಾಣಲೂ ಸಾಧ್ಯವಾಗುತ್ತಿರಲಿಲ್ಲ. ಗ್ಯಾರಂಟಿಯೊಂದರಿಂದಲೇ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಉಮೇದಿನಲ್ಲಿದ್ದ ಕಾಂಗ್ರೆಸ್ಗೆ ಎಲ್ಲ ಫಲಾನುಭವಿಗಳು ಕೈಕೊಟ್ಟರು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂಭತ್ತು ಸ್ಥಾನಗಳಲ್ಲಿ ಗೆಲುವು ಸಾಧಿಸಲು ಗ್ಯಾರಂಟಿಯಾಗಿ ಕೈ ಹಿಡಿದದ್ದು ಮತ್ತೆ ಮಹಿಳೆಯರು, ಮುಸ್ಲಿಮರು ಮತ್ತು ಕಲ್ಯಾಣ ಕರ್ನಾಟಕದ ಮತದಾರರು. ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಿದ್ದೇ ಕೇವಲ ಒಂಭತ್ತು ಕ್ಷೇತ್ರಗಳಲ್ಲಿ. ಅದರಲ್ಲಿ ಕರ್ನಾಟಕ ಸರಕಾರ ಸಾಂಸ್ಕೃತಿಕ ನೇಮಕಾತಿಯಲ್ಲಿ ಸಂಪೂರ್ಣ ಕಡೆಗಣಿಸಿದ ಕಲ್ಯಾಣ ಕರ್ನಾಟಕದ ಪಾಲು ದೊಡ್ಡದಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ಮತದಾರರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕೈ ಹಿಡಿಯದೇ ಹೋಗಿದ್ದರೆ ಕೇವಲ ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿತ್ತು. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಐದಕ್ಕೆ ಐದೂ ಲೋಕಸಭಾ ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಮತದಾರರ ಬಗ್ಗೆ ಗೌರವವಿರಬೇಕಲ್ಲವೇ? ಕಾಂಗ್ರೆಸ್ ಪಕ್ಷದ ಮರ್ಯಾದೆ ಉಳಿಸಿದ ಮಹಿಳೆಯರು, ಮುಸ್ಲಿಮರು ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಮತದಾರರನ್ನು ಹೊರಗಿಟ್ಟು ಸಾಂಸ್ಕೃತಿಕ ನೇಮಕಾತಿ ಮಾಡಿದ್ದು ಏನನ್ನು ಸೂಚಿಸುತ್ತದೆ? ಸಾಮಾಜಿಕ ನ್ಯಾಯ, ಮಹಿಳಾ ನ್ಯಾಯ, ಪ್ರಾದೇಶಿಕ ನ್ಯಾಯ ಕಲ್ಪಿಸುವುದನ್ನು ಮರೆತ ಸರಕಾರಕ್ಕೆ ಅನಿವಾರ್ಯವಾಗಿ ವೋಟ್ಬ್ಯಾಂಕ್ ಲೆಕ್ಕಾಚಾರ ನೆನಪಿಸಲಾಗಿದೆ. ಅಷ್ಟಕ್ಕೂ ಎಲ್ಲಾ ವಲಯಗಳಲ್ಲೂ ಅರ್ಹರಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ; ಕರ್ನಾಟಕ ಸಾಹಿತ್ಯ ಅಕಾಡಮಿಗೆ ತುಮಕೂರಿನ ಡಾ. ಎಲ್.ಎನ್. ಮುಕುಂದರಾಜ್ ಅವರನ್ನು, ಕರ್ನಾಟಕ ನಾಟಕ ಅಕಾಡಮಿಗೆ ಬೆಂಗಳೂರಿನ ಕೆ.ವಿ. ನಾಗರಾಜ ಮೂರ್ತಿಯವರನ್ನು, ಕರ್ನಾಟಕ ಸಂಗೀತ ನೃತ್ಯ ಅಕಾಡಮಿಗೆ ಶುಭಾ ಧನಂಜಯ್ ಅವರನ್ನು, ಕರ್ನಾಟಕ ಶಿಲ್ಪಕಲಾ ಅಕಾಡಮಿಗೆ ಎಂ.ಸಿ. ರಮೇಶ್ ಅವರನ್ನು, ಕರ್ನಾಟಕ ಲಲಿತ ಅಕಾಡಮಿಗೆ ಪ.ಸ. ಕುಮಾರ್ ಅವರನ್ನು, ಕರ್ನಾಟಕ ಯಕ್ಷಗಾನ ಅಕಾಡಮಿಗೆ ಉಡುಪಿಯ ತಲ್ಲೂರು ಶಿವರಾಮ ಶೆಟ್ಟಿ ಅವರನ್ನು, ಕರ್ನಾಟಕ ಜನಪದ ಅಕಾಡಮಿಗೆ ಚಿಕ್ಕಬಳ್ಳಾಪುರದ ಶಿವಪ್ರಸಾದ್ ಗೊಲ್ಲಳ್ಳಿ ಅವರನ್ನು, ಕರ್ನಾಟಕ ತುಳು ಅಕಾಡಮಿಗೆ ದಕ್ಷಿಣ ಕನ್ನಡದ ತಾರಾನಾಥ್ ಅವರನ್ನು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಗೆ ದಕ್ಷಿಣ ಕನ್ನಡದ ಜೋಕಿಂ ಸ್ಟ್ಯಾನಿ ಅವರನ್ನು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಗೆ ದಕ್ಷಿಣ ಕನ್ನಡದ ಉಮರ್ ಅವರನ್ನು, ಕರ್ನಾಟಕ ಅರೆಭಾಷಾ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿಗೆ ಸದಾನಂದ ಮಾವಜಿಯವರನ್ನು, ಕರ್ನಾಟಕ ಬಯಲಾಟ ಅಕಾಡಮಿಗೆ ಧಾರವಾಡದ ಪ್ರೊ. ದುರ್ಗಾದಾಸ್ ಅವರನ್ನು, ಕರ್ನಾಟಕ ಬಂಜಾರ ಅಕಾಡಮಿಗೆ ರಾಮನಗರದ ಡಾ. ಆರ್. ಗೋವಿಂದ ಸ್ವಾಮಿಯವರನ್ನು ಅಧ್ಯಕ್ಷರುಗಳನ್ನಾಗಿ ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ದಕ್ಷಿಣ ಕನ್ನಡ ಮೂಲದ ಹೊಸದಿಲ್ಲಿಯ ಡಾ. ಪುರುಷೋತ್ತಮ ಬಿಳಿಮಲೆಯವರನ್ನು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ವಿಜಯಪುರದ ಚನ್ನಪ್ಪ ಕಟ್ಟಿಯವರನ್ನು, ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಮೈಸೂರಿನ ಮಾನಸ ಅವರನ್ನು, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಾವೇರಿಯ ಸೋಮಣ್ಣ ಬೇವಿನಮರದ ಅವರನ್ನು ಅಧ್ಯಕ್ಷರನ್ನಾಗಿಸಿದ್ದಾರೆ.

13 ಅಕಾಡಮಿ, ನಾಲ್ಕು ಪ್ರಾಧಿಕಾರಗಳ ಪೈಕಿ ಒಬ್ಬರೇ ಒಬ್ಬ ಮಹಿಳೆಗೆ ಅಧ್ಯಕ್ಷ ಸ್ಥಾನವನ್ನು ದಯಪಾಲಿಸಲಾಗಿದೆ. ಪ್ರತಿಶತ 33ರ ಮಹಿಳಾ ಮೀಸಲಾತಿ ಅನುಪಾತಕ್ಕೆ ಏನಿಲ್ಲವೆಂದರೂ ಮಹಿಳೆಯರಿಗೆ ಅಕಾಡಮಿ-ಪ್ರಾಧಿಕಾರಗಳ ಅಧ್ಯಕ್ಷ ಸ್ಥಾನಗಳನ್ನು ಕೊಡಬೇಕು. ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಮಹಿಳಾ ಸಾಹಿತಿ, ಕಲಾವಿದರ ಕೊಡುಗೆ ಪುರುಷರಷ್ಟೇ ಅಪಾರವಾಗಿದೆ. ಸಾಹಿತ್ಯ, ಸಂಗೀತ, ಲಲಿತ ಕಲೆ, ಜಾನಪದ ಸೇರಿದಂತೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆಗೈದಿದ್ದಾರೆ. ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಮುಸ್ಲಿಮ್ ಸಾಹಿತಿ-ಕಲಾವಿದರ ಕೊಡುಗೆ ಅನುಪಮವಾಗಿದೆ. ಸೂಫಿಗಳು, ಶಿಶುನಾಳ ಶರೀಫರಂತಹ ನೂರಾರು ತತ್ವಪದಕಾರರು, ಗೋನಾವರ ರಾಮದಾಸರಂತಹ ಮುಸ್ಲಿಮ್ ದಾಸರು, ಎಂ. ಜೀವನ ಅವರಿಂದ ಹಿಡಿದು ನಿತ್ಯೋತ್ಸವ ಕವಿ ನಿಸಾರ್ ಅಹಮದ್, ಸಾರಾ ಅಬೂಬಕರ್, ಬಾನು ಮುಷ್ತಾಕ್, ಸಬಿಹಾ ಭೂಮಿಗೌಡ, ರಂಜಾನ್ ದರ್ಗಾ, ಕೆ. ಶರೀಫಾ, ಬೊಳುವಾರು, ಕಟ್ಪಾಡಿ, ರಹಮತ್ ತರೀಕೆರೆ, ಡಿ.ಬಿ. ರಜಿಯಾ, ಅಬ್ದುಲ್ ರಷೀದ್, ಪೀರ್ ಭಾಷಾವರೆಗೆ ಹಲವಾರು ಸಾಹಿತಿಗಳು ಮಹತ್ವದ ಕೊಡುಗೆ ನೀಡಿದ್ದಾರೆ. ಸಂಗೀತ, ರಂಗಭೂಮಿ ಕ್ಷೇತ್ರದಲ್ಲಿ ಮುಸ್ಲಿಮ್ ಕಲಾವಿದರ ಕೊಡುಗೆ ಅಪಾರ. ಸಿತಾರ್ ರತ್ನ ರಹಮತ್ ಖಾನ್ರ ಪೀಳಿಗೆ ಸಿತಾರ್ ವಾದ್ಯದ ಪರಂಪರೆಯನ್ನು ಔನ್ಯತ್ಯಕ್ಕೆ ಕೊಂಡೊಯ್ದಿದೆ. ಒಟ್ಟು 17 ಅಕಾಡಮಿ-ಪ್ರಾಧಿಕಾರಗಳಲ್ಲಿ ಬ್ಯಾರಿ ಅಕಾಡಮಿ ಹೊರತುಪಡಿಸಿ ಏನಿಲ್ಲವಾದರೂ ಮೂರು ಅಧ್ಯಕ್ಷ ಸ್ಥಾನಗಳನ್ನು ಮುಸ್ಲಿಮ್ ಸಾಹಿತಿಗೆ-ಕಲಾವಿದರಿಗೆ ಕೊಡಲೇಬೇಕು.

ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಒಟ್ಟು ಏಳು ಜಿಲ್ಲೆಗಳಿವೆ. ಕನ್ನಡಕ್ಕೆ ಮೊದಲ ಲಾಕ್ಷಣಿಕ ಗ್ರಂಥ ನೀಡಿದ ಕವಿರಾಜ ಮಾರ್ಗಕಾರನಿಂದ ಹಿಡಿದು ವಚನಕಾರರು, ದಾಸರು, ಸೂಫಿ ತತ್ವಪದಕಾರರು ಕನ್ನಡ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ. ನಿಜಾಂ ರಾಜ್ಯದಲ್ಲಿ ಕನ್ನಡ ಭಾಷೆಗೆ ಉತ್ತೇಜನ ದೊರೆಯದಿದ್ದರೂ ಉರ್ದು ಮಾಧ್ಯಮದಲ್ಲಿ ಶಿಕ್ಷಣ ಪಡೆದು ಕನ್ನಡದಲ್ಲಿ ಸಾಹಿತ್ಯ ರಚಿಸಿದ ತವಗ ಭೀಮಸೇನರಾವ್, ಸಿದ್ದಯ್ಯ ಪುರಾಣಿಕರು, ಶಾಂತರಸ ಸೇರಿದಂತೆ ಹಲವರು ಸಾಹಿತ್ಯ ಲೋಕವನ್ನು ಬೆಳಗಿದ್ದಾರೆ. ಸಂಗೀತ, ಲಲಿತ ಕಲೆ, ರಂಗಭೂಮಿ, ಜಾನಪದ ಕ್ಷೇತ್ರಕ್ಕೆ ಈ ಭಾಗದ ಕಲಾವಿದರು ಅಪಾರ ಕೊಡುಗೆ ನೀಡಿದ್ದಾರೆ. ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಸಾಧಕರಿದ್ದಾರೆ. 13 ಅಕಾಡಮಿ, ನಾಲ್ಕು ಪ್ರಾಧಿಕಾರಗಳಲ್ಲಿ ಕಲ್ಯಾಣ ಕರ್ನಾಟಕದ ಒಬ್ಬನೇ ಒಬ್ಬ ಸಾಹಿತಿ-ಕಲಾವಿದನಿಗೂ ಅಧ್ಯಕ್ಷ ಸ್ಥಾನ ಅಲಂಕರಿಸುವ ಭಾಗ್ಯ ದೊರೆತಿಲ್ಲ. ಈ ಬಾರಿ ಕಾಂಗ್ರೆಸ್ ಪಕ್ಷದ ಮರ್ಯಾದೆ ಕಾಪಾಡಿದ, ಐದಕ್ಕೆ ಐದೂ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಿಸಿಕೊಟ್ಟ ಕಲ್ಯಾಣ ಕರ್ನಾಟಕ ಪ್ರದೇಶವನ್ನು ಅಕಾಡಮಿ-ಪ್ರಾಧಿಕಾರಗಳ ನೇಮಕಾತಿಯಲ್ಲಿ ಸಂಪೂರ್ಣವಾಗಿ ಕಡೆಗಣಿಸಿದ್ದು ಜನತಂತ್ರದ ಆಶಯಗಳಿಗೆ ಮಾಡಿದ ಅಪಮಾನವೇ ಸರಿ. ರಾಜಧಾನಿ ಕೇಂದ್ರಿತ ಕುರುಡು ದೃಷ್ಟಿಕೋನವನ್ನು ಎಲ್ಲರೂ ಖಂಡಿಸಬೇಕು.

ನಾಡಿನ ಅರ್ಧ ಭಾಗದಷ್ಟು ಇರುವ ಮಹಿಳಾ ಲೋಕವನ್ನು, ಕರ್ನಾಟಕದ ಜನಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿರುವ ಮುಸ್ಲಿಮ್ ಸಮುದಾಯವನ್ನು ಮತ್ತು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಸಾಂಸ್ಕೃತಿಕ ಲೋಕವನ್ನು ಅಕಾಡಮಿ-ಪ್ರಾಧಿಕಾರಗಳ ನೇಮಕಾತಿಯಲ್ಲಿ ಪರಿಗಣಿಸದೆ ಇರುವುದು ಒಟ್ಟು ಕನ್ನಡ ಸಾಂಸ್ಕೃತಿಕ ಲೋಕವನ್ನು ಮುಕ್ಕಾಗಿಸಿದಂತೆ. ಅದರಲ್ಲೂ ಸಮಾಜವಾದಿ ಹಿನ್ನೆಲೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದಲ್ಲಿ ಇಂತಹ ಅವಘಡಗಳು ಸಂಭವಿಸಿದ್ದು ಸಾಮಾಜಿಕ ನ್ಯಾಯಕ್ಕೆ ಬಗೆದ ದ್ರೋಹವೇ ಸರಿ. ಆರೆಸ್ಸೆಸ್, ಬಿಜೆಪಿಯ ಮನಸ್ಥಿತಿಗೆ ಕಡಿವಾಣ ಹಾಕದಿದ್ದರೆ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಅಪಮಾನ ಮಾಡಿದಂತೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!