ಮುಂಬೈ ಗುಜರಾತಿ ಸೊಸೈಟಿಯಲ್ಲಿ ಮರಾಠಿಗಳಿಗೇ ನಿಷೇಧ !

Update: 2023-10-04 04:29 GMT

Photo: livemint.com

ಮುಂಬೈಯಲ್ಲಿ ಮರಾಠಿಗಳಿಗೆ ಮನೆಯಿಲ್ಲ !. ಹೇಳಿದ್ರೆ ಯಾರಾದ್ರೂ ನಂಬೋ ಮಾತಾ ಇದು ? . ಆದರೆ ಈ ಅಮೃತ ಕಾಲದಲ್ಲಿ ಎಲ್ಲವೂ ಸಾಧ್ಯ.

ಇಲ್ಲೀಗ ಏನು ಬೇಕಾದರೂ ಆಗಬಹುದು. ಸಬ್ ಕುಚ್ ಮುಮ್ಕಿನ್ ಹೈ !.

ಮುಂಬೈನಲ್ಲಿ ಗುಜರಾತಿಗಳ ಕಟ್ಟಡದಲ್ಲಿ ಮರಾಠಿಗರಿಗೆ ಮನೆ, ಕಚೇರಿ ಬಾಡಿಗೆಗೆ ಕೊಡುತ್ತಿಲ್ಲ ಎಂಬುದು ಈಗ ವಿವಾದದ ಸ್ವರೂಪ ಪಡೆದಿದೆ. ಮಾತ್ರವಲ್ಲ, ಅದಕ್ಕೆ ರಾಜಕೀಯ ಆಯಾಮಗಳೂ ಸೇರಿಕೊಳ್ಳತೊಡಗಿವೆ. ಮಹಿಳೆಯೊಬ್ಬರು ಈ ವಿಚಾರವನ್ನು ಕಣ್ಣೀರಿಡುತ್ತ ಹೇಳಿಕೊಂಡ ವಿಚಾರ ವೈರಲ್ ಆದ ಬೆನ್ನಿಗೇ ಈ ವಿವಾದ ಭುಗಿಲೆದ್ದಿದೆ.

ಇಂಥ ಧರ್ಮ, ಜಾತಿ, ಭಾಷೆ, ಜನಾಂಗಕ್ಕೆ ಸೇರಿದವರು ಎಂಬ ಕಾರಣಕ್ಕೆ ಬಾಡಿಗೆಗೆ ಮನೆ ಅಥವಾ ಕಚೇರಿ ಸ್ಥಳ ಕೊಡಲು ನಿರಾಕರಿಸುವುದು ತಪ್ಪು ಮತ್ತು ಅಮಾನವೀಯ ಎಂಬುದರಲ್ಲಿ ಎರಡು ಮಾತಿಲ್ಲ. ಅಂತ ತಾರತಮ್ಯಕ್ಕೆ ನಾಗರೀಕ ಸಮಾಜ ಅವಕಾಶ ನೀಡಲೇಬಾರದು. ಆದರೆ, ಪ್ರಶ್ನೆಯಿರುವುದು ಈಗ ಕಣ್ಣೀರಿಡುತ್ತಿರುವವರಿಗೆ ಅಥವಾ ಮರಾಠಿಗರಿಗೆ ಮನೆ ಕೊಡುತ್ತಿಲ್ಲ ಎನ್ನುವವರಿಗೆ ಇನ್ನೊಂದು ಸತ್ಯವೂ ಗೊತ್ತಿರಲೇಬೇಕು.

ಅದೆಂದರೆ, ಈ ದೇಶದ ದಲಿತರು ಹಾಗು ಮುಸ್ಲಿಮರು ಎಷ್ಟೋ ಕಾಲದಿಂದ ಇಂಥದೇ ನಿರಾಕರಣೆಯನ್ನು, ಅವಮಾನವನ್ನು, ಅತ್ಯಂತ ನೋವಿನ ಸ್ಥಿತಿಯನ್ನು ಎದುರಿಸುತ್ತಲೇ ಬಂದವರು ಮತ್ತು ಈಗ ಹಿಂದೆಂದಿಗಿಂತಲೂ ಹೆಚ್ಚು ಎದುರಿಸುತ್ತಲೇ ಇರುವವರು. ಅವರ ಸ್ಥಿತಿ ಎಲ್ಲರಿಗೂ ಗೊತ್ತಿದ್ದ ಮತ್ತು ಗೊತ್ತಿರುವ ಸತ್ಯ. ಅದು ತಪ್ಪೆಂದು ಅನ್ನಿಸದೇ ಇದ್ದವರಿಗೆ, ಅದರ ಬಗ್ಗೆ ತಕರಾರೆತ್ತದೇ ಇದ್ದವರಿಗೆ ಈಗ ಮುಂಬೈನಲ್ಲಿ ಮರಾಠಿಗರಿಗೆ ಮನೆ ಕೊಡಲು ನಿರಾಕರಿಸಲಾಗುತ್ತಿದೆ ಎಂದೊಡನೆ ಅದೊಂದು ಪ್ರತಿಭಟಿಸಲೇಬೇಕಾದ ವಿಚಾರ ಎನ್ನಿಸುತ್ತದೆಯಲ್ಲವೆ ?

ತಾನು ಮರಾಠಿ ಜನಾಂಗಕ್ಕೆ ಸೇರಿರುವ ಕಾರಣಕ್ಕೆ ಮುಂಬೈನ ಮುಲುಂಡ್ ಪ್ರದೇಶದಲ್ಲಿರುವ ಗುಜರಾತಿಗಳ ಸಹಕಾರ ಸೊಸೈಟಿಯ ಶಿವ ಸದನ್ ಕಟ್ಟಡದಲ್ಲಿ ಕಚೇರಿಗಾಗಿ ಸ್ಥಳ ಕೊಡಲು ತನಗೆ ನಿರಾಕರಿಸಲಾಯಿತು ಎಂದು ಮುಂಬೈನ ಮಹಿಳೆಯೊಬ್ಬರು ಆರೋಪಿಸಿದ ಬಳಿಕ, ಇಡೀ ವಿದ್ಯಮಾನ ರಾಜಕೀಯ ತಿರುವನ್ನು ಪಡೆದಿದೆ.

ತೃಪ್ತಿ ದಿಯೋರುಖ್ಕರ್ ಎಂಬ ಮಹಿಳೆ ತಮಗೆ ಕಚೇರಿ ಸ್ಥಳವನ್ನು ಬಾಡಿಗೆಗೆ ಕೊಡಲು ನಿರಾಕರಿಸಿದ ವ್ಯಕ್ತಿ ಮತ್ತು ಆತನ ತಂದೆಯೊಡನೆ ವಾದಕ್ಕಿಳಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಒಂದು ಹಂತದಲ್ಲಿ ಆಕೆಯ ಕೈಯಿಂದ ಫೋನ್ ಕಸಿದುಕೊಳ್ಳುವವರೆಗೆ ಮುಂದುವರಿದು ಅವರಿಬ್ಬರನ್ನೂ ಕಡೆಗೆ ಮುಲುಂಡ್ ಪೊಲೀಸರು ಬಂಧಿಸಿದ್ದೂ ನಡೆಯಿತು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. "ಇಲ್ಲಿ ಮಹಾರಾಷ್ಟ್ರದವರಿಗೆ ಬಾಡಿಗೆಗೆ ಕೊಡಲು ಅನುಮತಿ ಇಲ್ಲ ಎಂದು ಆ ಕಟ್ಟಡದ ಕಾರ್ಯದರ್ಶಿ ಹೇಳಿದರು. ನಾನು ಅಂತಹ ಆದೇಶದ ಪ್ರತಿ ಕೇಳಿದ್ದಕ್ಕೆ ಆತ ನನ್ನ ಜೊತೆ ಜಗಳಕ್ಕಿಳಿದ. ಎಲ್ಲ ಗುಜರಾತಿಗಳು ಹೀಗೆ ತಾರತಮ್ಯ ಮಾಡ್ತಾರೆ ಅಂತ ನಾನು ಹೇಳೋದಿಲ್ಲ. ಆದರೆ ಅವರು ಹಾಗೆ ಮಾಡಿದರು. ಆಗ ನನ್ನ ಸಹಾಯಕ್ಕೆ ಅಲ್ಲಿದ್ದ ಮರಾಠಿಗಳೂ ಬರಲಿಲ್ಲ " ಎಂದು ಆ ಮಹಿಳೆ ಅಳಲು ತೋಡಿಕೊಂಡಿದ್ದಾರೆ.

ಈ ಘಟನೆಯ ಬೆನ್ನಲ್ಲೇ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಪಂಕಜಾ ಗೋಪಿನಾಥ್ ಮುಂಡೆ ಅವರು, ಮರಾಠಿ ಎಂಬ ಕಾರಣಕ್ಕೆ ಮುಂಬೈನಲ್ಲಿ ತಮಗೆ ಕೂಡ ಮನೆ ನಿರಾಕರಿಸಲಾಗಿತ್ತು ಎಂದು ಹೇಳಿದ್ದಾರೆ.

ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಈ ಬಿಜೆಪಿ ನಾಯಕಿ, ತಾವು ಮನೆ ಹುಡುಕುತ್ತಿದ್ದಾಗ ಆದ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ.

ನನ್ನ ಸರ್ಕಾರಿ ನಿವಾಸ ಬಿಟ್ಟು ಮನೆ ಖರೀದಿಸಲು ಬಯಸಿದ್ದೆ. ಮರಾಠಿಗರಿಗೆ ಮನೆ ನೀಡುವುದಿಲ್ಲ ಎಂದು ನಿರಾಕರಿಸುವುದು ಬಹಳ ಕಡೆ ಅನುಭವಕ್ಕೆ ಬಂತು ಎಂದು ಪಂಕಜಾ ಮುಂಡೆ ಹೇಳಿಕೊಂಡಿದ್ದಾರೆ. ಮುಂಬೈ ಎಲ್ಲರನ್ನೂ ಸ್ವಾಗತಿಸುತ್ತದೆ ಎಂದು ನಂಬಿದ್ದೆ. ಆದರೆ ಕೆಲವು ಕಟ್ಟಡಗಳಲ್ಲಿ ನಿರ್ದಿಷ್ಟ ಜನರಿಗೆ ಮನೆ ನೀಡುತ್ತಿಲ್ಲ ಎಂಬುದು ದುರದೃಷ್ಟಕರ ಎಂದು ಪಂಕಜಾ ಮುಂಡೆ ಹೇಳಿದ್ದಾರೆ. .

ಪಂಕಜಾ ಮುಂಡೆ ಈ ವೀಡಿಯೊ ಪೋಸ್ಟ್ ಮಾಡುತ್ತಿದ್ದಂತೆ ಅವರ ಬೆಂಬಲಕ್ಕೆ ರಾಜ್ ಠಾಕ್ರೆಯ ಮಹಾರಾಷ್ಟ್ರ ನವನಿರ್ಮಾಣ ಸೇನೆ ಬಂದಿದೆ. ಅವರಿಗೆ ಫ್ಲಾಟ್ ನಿರಾಕರಿಸಿದ ವಸತಿ ಸಂಕೀರ್ಣ ಯಾವುದು ಎಂದೂ ವಿಚಾರಿಸಿದೆ. ಪಂಕಜಾ ಮುಂಡೆ ಬೇರೆ ಪಕ್ಷಕ್ಕೆ ಸೇರಿದ್ದರೂ ಮರಾಠಿಗರಾಗಿರುವ ಅವರಿಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಎಂಎನ್‌ಎಸ್ ನಾಯಕ ಸಂದೀಪ್ ದೇಶಪಾಂಡೆ ಹೇಳಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಪತ್ರ ಬರೆದು ಧರ್ಮ, ಜಾತಿ ಮತ್ತು ಆಹಾರ ಪದ್ಧತಿಗಳ ಆಧಾರದ ಮೇಲಿನ ತಾರತಮ್ಯದ ವಿರುದ್ಧ ಕಾನೂನನ್ನು ರಚಿಸುವಂತೆ ದೇಶಪಾಂಡೆ ಕೇಳಿಕೊಂಡಿರುವುದಾಗಿಯೂ ವರದಿಯಾಗಿದೆ. ಅಲ್ಲದೆ, ಮುಲುಂಡ್ ಪ್ರದೇಶದಲ್ಲಿ ಮಹಿಳೆಗೆ ಕಚೇರಿ ಸ್ಥಳ ನೀಡಲು ನಿರಾಕರಿಸಿದ್ದ ಸಂಕೀರ್ಣದ ಕಾರ್ಯದರ್ಶಿ ಮತ್ತು ಆತನ ತಂದೆ ಮಹಿಳೆಯ ಬಳಿ ಕ್ಷಮೆ ಕೇಳುವಂತೆಯೂ ಮಾಡಿದ್ದಾರೆ.

ಮರಾಠಿಗರೆಂಬ ಕಾರಣಕ್ಕೆ ಮನೆ ನಿರಾಕರಿಸಿದ್ದು ದುರದೃಷ್ಟಕರ ಎಂದು ಬಿಜೆಪಿ ನಾಯಕಿಗೆ ಅನ್ನಿಸುತ್ತದೆ. ರಾಜಕೀಯ ಮತ್ತು ಸಮಾಜದಲ್ಲಿನ ಈ ವಾತಾವರಣವನ್ನು ನೋಡಿದರೆ, ಸಮಾಜದಲ್ಲಿ ಎಲ್ಲೋ ಒಂದು ಅಶಾಂತಿಯ ಭಾವನೆ ಇದೆ ಎಂಬುದು ಕೂಡ ಅವರಿಗೆ ಹೊಳೆಯುತ್ತದೆ.

ಮತ್ತೊಂದು ರಾಜಕೀಯ ಪಕ್ಷ ಅವರ ಬೆಂಬಲಕ್ಕೆ ಬರುತ್ತದೆ. ಎಲ್ಲವೂ ಸರಿಯೆ. ಆದರೆ, ಇಂಥದೇ ಪ್ರತಿಕ್ರಿಯೆ ಮುಂಬೈ ಸೇರಿದಂತೆ ದೇಶಾದ್ಯಂತ ಹಲವು ವರ್ಷಗಳಿಂದ ದಲಿತರು ಹಾಗು ಮುಸ್ಲಿಮರನ್ನು ನಡೆಸಿಕೊಳ್ಳಲಾಗುತ್ತಿರುವ ರೀತಿಯ ವಿರುದ್ಧವೂ ಬಂದಿದ್ದರೆ, ಆಗ ಇದೇ ರೀತಿ ಪ್ರಶ್ನೆ ಮಾಡಿದ್ದರೆ, ಅಂದು ಜನರು ದಲಿತರು ಹಾಗು ಮುಸ್ಲಿಮರ ಹಕ್ಕುಗಳ ಪರ ನಿಂತಿದ್ದರೆ ಇಂದು ಮುಂಬೈನಲ್ಲಿ ಮರಾಠಿಗರಿಗೆ ಮನೆಗಳನ್ನು ನಿರಾಕರಿಸುವ ಸ್ಥಿತಿ ಬರುತ್ತಿರಲಿಲ್ಲ, ಅಲ್ಲವೆ?

ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಂರು ನಿರಂತರವಾಗಿ ಇಂಥ ನಿರಾಕರಣೆಯನ್ನು, ಅವಮಾನವನ್ನು , ಅನ್ಯಾಯವನ್ನು ಎದುರಿಸುತ್ತಲೇ ಬಂದಿದ್ದಾರೆ. ಏನು ಮಾಡುತ್ತಾರೆ, ಏನು ತಿನ್ನುತ್ತಾರೆ ಎಂಬ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆಯೆ ಹೊರತು, ಮನೆಯನ್ನು ನಿರಾಕರಿಸಲಾಗುತ್ತದೆ. ಈ ದೇಶದಲ್ಲಿ ಮುಸ್ಲಿಂರು, ದಲಿತರು ಇದನ್ನು ಅನುಭವಿಸುತ್ತಲೇ ಬಂದಿದ್ದಾರೆ. ಮುಂಬೈ ಮಾತ್ರವಲ್ಲ, ದೇಶದ ಯಾವುದೇ ಸ್ಥಳದಲ್ಲಿ ಇದೊಂದು ಅಲಿಖಿತ ನಿಯಮ. ಮಾಂಸಾಹಾರಿಗಳಿಗೆ ಮನೆ ಕೊಡುವುದಿಲ್ಲ. ಈ ಮನೆಯಲ್ಲಿ ಮಾಂಸಹಾರ ಮಾಡುವಂತಿಲ್ಲ, ಇತ್ಯಾದಿ.

ಪ್ರತಿಯೊಬ್ಬರಿಗೂ ತಾನೇನು ತಿನ್ನಬೇಕು, ಏನು ಕುಡಿಯಬೇಕು ಎಂಬ ಸ್ವಾತಂತ್ರ್ಯವಿದೆ. ಅದನ್ನು ನಿರ್ಧರಿಸಲು ಇವರು ಯಾರು?. ಮುಸ್ಲಿಂರ ಜೊತೆ ವರ್ಷಗಳಿಂದ ಇದನ್ನೇ ಮಾಡಿಕೊಂಡು ಬರಲಾಯಿತಲ್ಲವೆ?. ಆದರೆ ಇಂಥದೊಂದು ಪ್ರಶ್ನೆಯನ್ನು ಯಾರೂ ಎತ್ತಲೇ ಇಲ್ಲ. ಒಂದು ಸಮುದಾಯದ ಜೊತೆ ಇತ್ತೀಚಿನ ವರ್ಷಗಳಲ್ಲಿ ಈ ಘೋರ ತಾರತಮ್ಯ ಈ ದೇಶದಲ್ಲಿ ಅತಿಹೆಚ್ಚು ನಡೆದುಕೊಂಡೇ ಬಂದಿದೆ. ಆದರೆ ಎಂದೂ ಯಾರಿಗೂ ಇದೊಂದು ಪ್ರತಿಭಟಿಸಬೇಕಾದ ವಿಷಯವೆಂದು ಅನ್ನಿಸಲೇ ಇಲ್ಲ.

ಈಗ ದೊಡ್ಡ ವಿಷಯವಾಗುತ್ತಿರುವ ಇದು, ದಲಿತರು , ಅಲ್ಪಸಂಖ್ಯಾತರು ನಿರಾಕರಣೆಯನ್ನು ಎದುರಿಸುವಾಗ ಆಗಲೇ ಇಲ್ಲ. ಈ ಹಿನ್ನೆಲೆಯಲ್ಲಿಯೇ, ತಮಗೆ ಕಚೇರಿ ಸ್ಥಳ ಕೊಡಲು ನಿರಾಕರಿಸಲಾಯಿತು ಎಂದ ಮಹಿಳೆ ವೀಡಿಯೊದಲ್ಲಿ ಕಣ್ಣೀರು ಹಾಕಿದ ಬಗ್ಗೆಯೂ ಕೆಲವು ಪ್ರಶ್ನೆಗಳನ್ನು ಈಗ ಎತ್ತಲಾಗುತ್ತಿದೆ. ಈಗ ಮರಾಠಿಗರೆಂದು ಮನೆ ನಿರಾಕರಿಸಲಾಗುತ್ತಿದೆ ಎಂಬ ಕಾರಣಕ್ಕೆ ಬರುತ್ತಿರುವ ಕಣ್ಣೀರು, ಎಸ್ಬಿಐ ಪ್ರಧಾನ ಕಚೇರಿ ಮಹಾರಾಷ್ಟ್ರದಿಂದ ಗುಜರಾತ್ಗೆ ಹೋದಾಗ, ಬ್ಯಾಂಕ್ ಆಫ್ ಬರೋಡಾದ ಹೆಡ್ ಕ್ವಾರ್ಟರ್ ಕೂಡ ಮಹಾರಾಷ್ಟ್ರದಿಂದ ಗುಜರಾತ್ಗೆ ಹೋದಾಗ, ಮುಂಬೈನಲ್ಲಿ ನೆಲೆಗೊಳ್ಳಬೇಕಾದ ಐ ಎಫ್ ಸಿ ಕೂಡ ಮುಂಬೈ ಬದಲು ಗುಜರಾತ್ ಪಾಲಾದಾಗ ಬರಬೇಕಿತ್ತಲ್ಲ, ಆಗ ಏಕೆ ಬರಲಿಲ್ಲ?

ಮರಾಠಿಗರು ಮಾತ್ರವಲ್ಲ, ಮಹಾರಾಷ್ಟ್ರದಲ್ಲಿ ನೆಲೆಸಿರುವ ಎಲ್ಲರಿಗೂ ಆಗ ನೋವಾಗಬೇಕಿತ್ತು, ಸಂಕಟವಾಗಬೇಕಿತ್ತು. ಆಗ ಏಕೆ ಆಗಲಿಲ್ಲ?. ಈಗ ಮರಾಠಿಗರಿಗೆ ಮನೆಯಿಲ್ಲ ಎಂದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವವರು , ಆಗ ಮಹಾರಾಷ್ಟ್ರದಿಂದ ಎಲ್ಲವೂ ಗುಜರಾತ್ ಕಡೆಗೆ ಹೋಗುತ್ತಿರುವಾಗ ಏಕೆ ಅವೆಲ್ಲವೂ ಇಲ್ಲಿಯೇ ಇರಬೇಕೆಂದು ಹಠ ಮಾಡಲಿಲ್ಲ? ಏಕೆ ಪ್ರತಿಭಟಿಸಿ ಗೆಲ್ಲಲಿಲ್ಲ?

ಆದರೆ, ಅದೆಲ್ಲ ಬಿಟ್ಟು ಮರಾಠಿಗರನ್ನು ತಾರತಮ್ಯದಿಂದ ನೋಡಲಾಗುತ್ತಿದೆ ಎಂಬ ವಿಷಯವನ್ನು ದೊಡ್ಡದು ಮಾಡಲಾಗುತ್ತಿದೆ. ಅದಕ್ಕೊಂದು ರಾಜಕೀಯ ಬಣ್ಣವನ್ನೂ ಕೊಡಲಾಗುತ್ತಿದೆ. ಆದರೆ, ಇಂಥ ತಾರತಮ್ಯ ಶುರುವಾದದ್ದು ಮುಸ್ಲಿಂ ಸಮುದಾಯವನ್ನು ದೂರವಿಡುವಲ್ಲಿಂದ.

ತಾರತಮ್ಯ ಶುರುವಾಗಿದೆ ಎನ್ನಲಾಗುತ್ತಿರುವುದು ಮರಾಠಿಗರಿಗೆ ಮನೆ ನಿರಾಕರಿಸಲಾಗುತ್ತಿದೆ ಎನ್ನುವಲ್ಲಿಂದ. ಹೇಗಿದೆಯಲ್ಲವೆ ರಾಜಕೀಯ?. ಆಗ ಕಾಣಿಸದೇ ಇದ್ದದ್ದು, ಅವರಿಗಾದ ಮತ್ತು ಆಗುತ್ತಿರುವ ಸಂಕಟ, ಅವಮಾನ ಎಂಥದ್ದಿರಬಹುದೆಂದು ಅರ್ಥವಾಗದೇ ಇದ್ದದ್ದು ಈಗ, ತಮ್ಮ ವಿಚಾರದಲ್ಲಿ ಕಾಣಿಸುತ್ತಿದೆ. ಈಗ ಇವರಿಗೆ ಸಂಕಟವಾಗುತ್ತಿದೆ, ಕಣ್ಣೀರು ಬರುತ್ತಿದೆ.

ಮುಸ್ಲಿಮರಿಗೆ ಅನ್ಯಾಯವಾದಾಗ ಯಾರೂ ಏನನ್ನೂ ಮಾಡಲಿಲ್ಲ. ಅದನ್ನು ವಿರೋಧಿಸಲಿಲ್ಲ, ತಡೆಯಲಿಲ್ಲ, ಯಾರೂ ಯಾವ ಪಕ್ಷವೂ ಅವರ ಪರವಾಗಿ ನಿಲ್ಲಲಿಲ್ಲ. ಈಗ ಮರಾಠಿಗರಿಗೆ ಆಯಿತು ಎಂದೊಡನೆ ಅದೊಂದು ವಿಷಯವಾಗುತ್ತಿದೆ, ಸುದ್ದಿಯಾಗುತ್ತಿದೆ. ಇದು ದುರದೃಷ್ಟಕರ.

ಆದರೆ​ ದಲಿತರು ಹಾಗು ಅಲ್ಪಸಂಖ್ಯಾತರಿಗೆ ಈ ದೇಶದಲ್ಲಿ ಆಗುತ್ತಲೇ ಇರುವ ಅವಮಾನ? ಅವರನ್ನು ಕಡೆಗಣಿಸಲಾಗುತ್ತಿರುವುದು? ಅವರನ್ನು ಬರೀ ತಾರತಮ್ಯ ಭಾವನೆಯಿಂದ ಮಾತ್ರವಲ್ಲ, ವೈರಿಗಳೆಂಬಂತೆ ನೋಡಲಾಗುತ್ತಿರುವುದು?. ಇದೆಲ್ಲವೂ ಈಗಲೂ ಯಾವುದೇ ಎಗ್ಗಿಲ್ಲದೆ ಮುಂದುವರಿಯುತ್ತಿದೆ.

ಆದರೆ, ದಲಿತ ವರ ಕುದುರೆಯೇರಿ ಬಂದ ಎಂದು ಆತನನ್ನು ಕೊಂದೇ ಹಾಕುವ ಈ ದೇಶದಲ್ಲಿ, ದಲಿತ ಮಕ್ಕಳು ತಾವು ನೀರು ಕುಡಿಯುವ ಪಾತ್ರೆ ಮುಟ್ಟಿದರು ಎಂದು ಹೊಡೆದು ಕೊಲ್ಲುವ ಈ ದೇಶದಲ್ಲಿ, ಒಬ್ಬ ಮುಸ್ಲಿಂ ವಿದ್ಯಾರ್ಥಿಯನ್ನು ಆತನ ಧರ್ಮದ ಕಾರಣಕ್ಕೇ ಆತನ ಸಹಪಾಠಿಗಳಿಂದಲೇ ಶಿಕ್ಷಕಿ ಹೊಡೆಸುವ ಈ ದೇಶದಲ್ಲಿ, ಮುಸ್ಲಿಂರೆಂಬ ಕಾರಣಕ್ಕೇ ಕೆಲವು ಕಾವಿಧಾರಿಗಳು ಕೊಲ್ಲಲು ಕರೆ ನೀಡುವ ಈ ದೇಶದಲ್ಲಿ,

ಮುಸ್ಲಿಂರಲ್ಲಿ ಭಯ ಹುಟ್ಟಿಸಿ, ಅವರು ಊರು ಬಿಟ್ಟು ಹೋಗುವಂತೆ ಮಾಡಲಾಗುತ್ತಿರುವ ಈ ದೇಶದಲ್ಲಿ ಅದಾವುದೂ ವಿಷಯವೇ ಆಗಿಲ್ಲ, ಮಾಧ್ಯಮಗಳಿಗೆ ಅದೊಂದು ಚರ್ಚಿಸಬೇಕಾದ ಸಂಗತಿಯೇ ಅಲ್ಲ. ಆಳುತ್ತಿರುವವರಿಗೆ ಅದೊಂದು ಯೋಚಿಸಬೇಕಾದ ಸಂಗತಿಯೇ ಅಲ್ಲ.

ತಾರತಮ್ಯ ಎಂದು ಈಗ ಬಹಳ ದೊಡ್ಡದಾಗಿ ಹೇಳುತ್ತಿರುವ ಮಾಧ್ಯಮದವರಿಗೆ, ಬಿಜೆಪಿಗೆ, ಅದರದ್ದೇ ಮನಃಸ್ಥಿತಿಯ ಎಂಎನ್ಎಸ್ ಗೆ ಈ​ಗಾಗಲೇ ಚಾಲ್ತಿಯಲ್ಲಿರುವ ಅತಿ ಘೋರವಾದ ತಾರತಮ್ಯದ ಬಗ್ಗೆ ಏನೇನೂ ಗೊತ್ತಿಲ್ಲವೆ?. ​ಅದಕ್ಕೆ ಅಲ್ವಾ ಖ್ಯಾತ ಉರ್ದು ಕವಿ ರಾಹತ್ ಇಂದೋರಿ ಹೇಳಿದ್ದು :

​ಲಗೇಗಿ ಆಗ್ ತೋ,

ಆಯೆಂಗೆ ಕಹೀ ಘರ್ ಝದ್ ಮೇ

ಯಹಾಂ ಪೇ ಸಿರ್ಫ್

ಹಮಾರಾ ಮಕಾನ್ ಥೋಡೀ ಹೈ

ಅಂದ್ರೆ

ಇಲ್ಲಿ ಬೆಂಕಿ ಬಿದ್ದಿತೆಂದರೆ ಹಲವು ಮನೆಗಳು ಭಸ್ಮವಾಗಲಿವೆ,

ಇಲ್ಲಿರುವುದು, ಕೇವಲ ನಮ್ಮ ಮನೆ ಮಾತ್ರ ಅಲ್ಲವಲ್ಲ!

ನಮ್ಮ ಸಮಾಜದಲ್ಲಿ ಯಾರ ಮನೆಗೂ ಬೆಂಕಿ ಬೀಳದಂತೆ ತಡೆಯೋದು, ಬಿದ್ದರೆ ತಕ್ಷಣ ಅದನ್ನು ನಂದಿಸೋದು ನಮ್ಮೆಲ್ಲರ ಕರ್ತವ್ಯ. ಏಕೆಂದರೆ ಪಕ್ಕದ ಮನೆಗೆ ಬಿದ್ದಾಗ ಸುಮ್ಮನೆ ನೋಡುತ್ತಿದ್ದರೆ ಆ ಬೆಂಕಿ ಕೊನೆಗೆ ನಮ್ಮ ಮನೆಯನ್ನೂ ಸುಡದೇ ಬಿಡೋದಿಲ್ಲ.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!