ಸ್ಥಾನದ ಘನತೆ ಮರೆತು ಯಾಕೆ ಮಾತಾಡ್ತಾರೆ ಸಚಿವ ಝಮೀರ್ ?

Update: 2023-11-24 12:33 GMT
Editor : Ismail | Byline : ಆರ್. ಜೀವಿ

ಬಿ ಝಡ್ ಝಮೀರ್ ಅಹ್ಮದ್ ಖಾನ್. ರಾಜ್ಯ ಕಾಂಗ್ರೆಸ್ ನ ಈ ಪ್ರಭಾವಿ ನಾಯಕನ ಹೆಸರು ಹೇಳಿದ ಕೂಡಲೇ ನಿಮಗೆ ಹೊಳೆಯೋದು ಏನು ?

ಮೈಕು ಕೈಗೆ ಸಿಕ್ಕಿದ ಕೂಡಲೇ ಬಾಯಿಗೆ ಬಂದಂತೆ ಮಾತಾಡಿ ಹಾಸ್ಯಾಸ್ಪದರಾಗೋದು, ತನ್ನ ಮಾತುಗಳಿಂದ ತಾನೇ ತಮಾಷೆಯ ವಸ್ತುವಾಗೋದು,

ತನಗೂ ಪಕ್ಷಕ್ಕೂ ಇಕ್ಕಟ್ಟು ತಂದಿಡೋದು, ರಾಜಕೀಯ ಎದುರಾಳಿಗಳ ಬಾಯಿಗೆ ಆಹಾರವಾಗೋದು, ಎದುರಾಳಿಗಳಿಗೆ ತನ್ನ ಮಾತುಗಳಿಂದ ತಾನೇ ರಾಜಕೀಯ ಲಾಭ ಮಾಡಿ ಕೊಡೋದು.

ಎರಡು ದಶಕಗಳ ರಾಜಕೀಯ ಅನುಭವವಿರುವ , ಚುನಾವಣಾ ರಾಜಕೀಯದ ಒಳಹೊರಗು ಚೆನ್ನಾಗಿ ಬಲ್ಲ ಝಮೀರ್ ಅಹ್ಮದ್ ಖಾನ್ ಇವತ್ತಿಗೂ ಬಾಯಿ ಬಿಟ್ಟರೆ ಬಣ್ಣಗೇಡು ಎಂಬಂತೆ ಯಾಕೆ ಮಾತಾಡ್ತಾರೆ ?. ತಾನು ಯಾವ ಹುದ್ದೆಯಲ್ಲಿದ್ದೀನಿ ? ಅದರ ಘನತೆ ಏನು , ಎಂತಹದ್ದು ?

ತಾನಾಡುವ ಮಾತುಗಳ ಪರಿಣಾಮ ಏನಾಗಲಿದೆ ?. ಅದು ಹೇಗೇಗೆಲ್ಲ ಬಳಕೆಯಾಗಲಿದೆ ಅಥವಾ ದುರ್ಬಳಕೆಯಾಗಲಿದೆ ಎಂಬ ಕನಿಷ್ಠ ಜ್ಞಾನವೂ ಇಲ್ಲದ ಹಾಗೆ ಯಾಕೆ ಮಾತಾಡ್ತಾರೆ ಝಮೀರ್ ಅಹ್ಮದ್ ಖಾನ್ ? .

ಅಥವಾ ಇವರು ಇದೇ ರೀತಿ ಸರ್ಕಸ್ ನ ವಿದೂಷಕರಂತೆ ತೀರಾ ಅಗ್ಗದ , ಕೀಳು ಅಭಿರುಚಿಯ ಮಾತಾಡುತ್ತಾ ಹೀಗೇ ತಮ್ಮ ಯೋಗ್ಯತೆ ಪ್ರದರ್ಶನ ಮಾಡ್ತಾ ಇರಲಿ ಎಂದು ಕಾಂಗ್ರೆಸ್ ಕೂಡ ಬಯಸಿದೆಯೇ ? . ಮೊನ್ನೆ ತೆಲಂಗಾಣದಲ್ಲಿ ಚುನಾವಣಾ ಪ್ರಚಾರ ಮಾಡ್ತಾ ಇದೇ ಝಮೀರ್ ಅಹ್ಮದ್ ಖಾನ್ ಸಾಹೇಬರು ಇನ್ನೊಂದು ಅಣಿಮುತ್ತು ಉದುರಿಸಿದ್ದಾರೆ.

" ಕಾಂಗ್ರೆಸ್ ಯು ಟಿ ಖಾದರ್ ಅವರನ್ನು ಸ್ಪೀಕರ್ ಸ್ಥಾನದಲ್ಲಿ ಕೂರಿಸಿದೆ. ಹಾಗಾಗಿ ಈಗ ದೊಡ್ಡ ದೊಡ್ಡ ಬಿಜೆಪಿ ನಾಯಕರು ಅವರೆದುರು ನಮಸ್ಕಾರ್ ಸಾಬ್ ಎಂದು ನಿಲ್ಲಬೇಕಾಗುತ್ತೆ , ಅಂತಹ ಪರಿಸ್ಥಿತಿ ನಿರ್ಮಾಣ ಮಾಡಿದೆ ಕಾಂಗ್ರೆಸ್ " ಅಂತ ಹೇಳಿದ್ದಾರೆ ಝಮೀರ್ ಅಹ್ಮದ್ ಖಾನ್.

ಸಹಜವಾಗಿಯೇ ಇದು ಬಿಜೆಪಿ ನಾಯಕರಿಗೆ ಕಾಂಗ್ರೆಸ್ ವಿರುದ್ಧ ಕೂತಲ್ಲೇ ರಾಜಕೀಯ ಅಸ್ತ್ರವೊಂದು ಸಿಕ್ಕಂತಾಗಿದೆ. ಅವರು ಝಮೀರ್ ಹಾಗು ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದ್ದಾರೆ. ಸ್ಪೀಕರ್ ಸ್ಥಾನ ಎಂಬುದು ಮಸೀದಿಯ ಮೌಲ್ವಿಯ ಹುದ್ದೆಯಲ್ಲ ಅಂತ ಸಿ ಟಿ ರವಿ ಸಹಿತ ಬಿಜೆಪಿಯ ಹಲವು ನಾಯಕರು ಝಮೀರ್ ಗೆ ತಿರುಗೇಟು ನೀಡಿದ್ದಾರೆ.

ಸ್ವತಃ ಸ್ಪೀಕರ್ ಖಾದರ್ ಅವರಿಗೂ ಇದರಿಂದ ಮುಜುಗರವಾಗಿದೆ. ಸಹಜವಾಗಿಯೇ ಅವರೂ ಝಮೀರ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. "ಶಾಸಕರು ಗೌರವ ಕೊಡೋದು ಸ್ಪೀಕರ್ ಎಂಬ ಸಾಂವಿಧಾನಿಕ ಹುದ್ದೆಗೆ. ವೈಯಕ್ತಿಕವಾಗಿ ನನಗಲ್ಲ. ಸ್ಪೀಕರ್ ಹುದ್ದೆಯನ್ನು ಜಾತಿ ಧರ್ಮದ ಆಧಾರದಲ್ಲಿ ನೋಡುವಂತಿಲ್ಲ" ಎಂದು ಹೇಳಬೇಕಾಯಿತು.

ಸ್ಪೀಕರ್ ಸ್ಥಾನ ಅಂದ್ರೆ ರಾಜ್ಯದಲ್ಲಿ ಗವರ್ನರ್ ಬಳಿಕದ ಅತ್ಯಂತ ಪ್ರಮುಖ ಸಾಂವಿಧಾನಿಕ ಹುದ್ದೆ. ಆ ಸ್ಥಾನದಲ್ಲಿ ಯಾರೇ ಇದ್ದರೂ ಅವರಿಗೆ ಎಲ್ಲರೂ ಗೌರವ ಕೊಡುತ್ತಾರೆ. ಪಕ್ಷಬೇಧವಿಲ್ಲದೆ ಎಲ್ಲ ಶಾಸಕರಿಗೂ ಅವರೇ ಯಜಮಾನರು. ಅಂತಹ ಸಾಂವಿಧಾನಿಕ ಹುದ್ದೆ ಬಗ್ಗೆ ಚುನಾವಣಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಹೇಗೆ ಮಾತಾಡಬೇಕು ಎಂಬ ಕನಿಷ್ಠ ಪ್ರಜ್ಞೆಯೂ ಇಲ್ಲದಂತೆ ಝಮೀರ್ ಮಾತಾಡಿದ್ದಾರೆ. ಅವರೆದುರು ನಮಸ್ಕಾರ್ ಸಾಬ್ ಎಂದು ನಿಲ್ಲುತ್ತಾರೆ ಅಂತ ಹೇಳಿದ್ರೆ ಏನರ್ಥ ? ಹಾಗೆ ಗೌರವ ಕೊಡೋದು ಗುಲಾಮರಿಗಿಯೇ ? ಹಾಗೆ ಬಿಜೆಪಿಯವರು ಮಾತ್ರ ಗೌರವ ಕೊಡ್ತಾರಾ ? ಸಿಎಂ ಸಹಿತ ಕಾಂಗ್ರೆಸ್ ಶಾಸಕರೂ ಹಾಗೇ ಸ್ಪೀಕರ್ ಗೆ ಗೌರವ ಕೊಡೋದಿಲ್ವಾ ?

ಐದನೇ ಬಾರಿ ಶಾಸಕರಾಗಿರುವ, ಮೂರ್ನಾಲ್ಕು ಬಾರಿ ಸಚಿವರಾಗಿರುವ ಝಮೀರ್ ಅಹ್ಮದ್ ಗೆ ಬೀದಿಬದಿಯಲ್ಲಿ ಯಾರೋ ದಾರಿಹೋಕರು ನಿಂತು ಹರಟೆ ಮಾತಾಡುವುದಕ್ಕೂ, ವೇದಿಕೆಯೊಂದರಲ್ಲಿ ಒಬ್ಬ ಸಂಪುಟ ದರ್ಜೆ ಸಚಿವರು ಮಾತಾಡುವುದಕ್ಕೂ ಇರುವ ವ್ಯತ್ಯಾಸ ಏನು ಅಂತಾನೆ ಗೊತ್ತಿಲ್ವಾ ? .

ಈ ಬಾರಿ ರಾಜ್ಯ ಕಾಂಗ್ರೆಸ್ ನ ಒಂಬತ್ತು ಶಾಸಕರಲ್ಲಿ ಐದು ಮಂದಿಗೆ ಪಕ್ಷ ಅಧಿಕಾರ ಕೊಟ್ಟಿದೆ ಎಂದು ತೆಲಂಗಾಣದ ಮುಸ್ಲಿಮರಿಗೆ ಝಮೀರ್ ಅದೇ ಭಾಷಣದಲ್ಲಿ ಹೇಳಿದ್ದಾರೆ. ಆದರೆ 135 ಕಾಂಗ್ರೆಸ್ ಶಾಸಕರ ಪೈಕಿ ಯಾಕೆ ಕೇವಲ ಒಂಬತ್ತು ಮಂದಿ ಮಾತ್ರ ಮುಸ್ಲಿಮ್ ಶಾಸಕರು ಎಂದು ಝಮೀರ್ ಹೇಳಿಲ್ಲ.

ಈ ಸರ್ತಿ ಕೇವಲ 15 ಕಡೆ ಮಾತ್ರ ಕಾಂಗ್ರೆಸ್ ಮುಸ್ಲಿಮರಿಗೆ ಟಿಕೆಟ್ ಕೊಟ್ಟಿದ್ದು ಯಾಕೆ ಅಂತಾನೂ ಝಮೀರ್ ಹೇಳಲಿಲ್ಲ.

ಅದರಲ್ಲೂ ಎರಡು ಮೂರು ಕಡೆ ನಾಮಪತ್ರ ಸಲ್ಲಿಸಲು ಕೆಲವೇ ಗಂಟೆಗಳಿರುವಾಗ ಟಿಕೆಟ್ ಕೊಟ್ಟು ಪಕ್ಷವೇ ಮುಸ್ಲಿಂ ಅಭ್ಯರ್ಥಿ ಸೋಲುವಂತೆ ಮಾಡಿದ್ದೇಕೆ ಅಂತಾನೂ ಝಮೀರ್ ಹೇಳಲಿಲ್ಲ ?.

ಮುಸ್ಲಿಂ ಅಭ್ಯರ್ಥಿಗಳು ಗೆಲ್ಲುವ ಉಜ್ವಲ ಅವಕಾಶ ಇರುವಲ್ಲಿ ಇತರ ಪ್ರಬಲ ಸಮುದಾಯಗಳ ವೃದ್ಧ ನಾಯಕರಿಗೆ ಟಿಕೆಟ್ ಕೊಟ್ಟು ಕೆಲವು ಕಡೆ ಕೇವಲ ಲೆಕ್ಕಕ್ಕಾಗಿ ದುರ್ಬಲ ಮುಸ್ಲಿಂ ಅಭ್ಯರ್ಥಿಗಳನ್ನು ಕಾಂಗ್ರೆಸ್ ಯಾಕೆ ಹಾಕಿತು ಎಂಬುದನ್ನೂ ಝಮೀರ್ ಹೇಳಲೇ ಇಲ್ಲ.

ಶೇ.24 ಮತ ಹಾಕಿದ ಲಿಂಗಾಯತರಿಗೆ 7, ಶೇ.20 ಮತ ಹಾಕಿದ ಒಕ್ಕಲಿಗರಿಗೆ 5 ಸಚಿವ ಸ್ಥಾನ ಕೊಟ್ಟು ಶೇ.88 ಕ್ಕಿಂತ ಹೆಚ್ಚು ಮತ ಹಾಕಿದ ಮುಸ್ಲಿಂ ಸಮುದಾಯಕ್ಕೆ ಕೇವಲ ಎರಡು ಸಚಿವ ಸ್ಥಾನ ಮಾತ್ರ ಕೊಟ್ಟಿದೆ ಕಾಂಗ್ರೆಸ್ ಎಂದೂ ಹೇಳಲಿಲ್ಲ ಝಮೀರ್ ಸಾಹೇಬರು.

ಆ ಇಬ್ಬರಿಗೂ ಇತರ ಸಚಿವರಿಗೆ ಹೋಲಿಸಿದರೆ ತೀರಾ ಪ್ರಭಾವಿಯಲ್ಲದ ಹಜ್ , ವಕ್ಫ್ ನಂತಹ ಖಾತೆಗಳನ್ನೇ ಕೊಟ್ಟಿದ್ದಾರೆ ಎಂಬದನ್ನೂ ಹೇಳೋದನ್ನು ಮರೆತು ಬಿಟ್ಟರು ಝಮೀರ್ ಅಹ್ಮದ್ ಖಾನ್.

ಈ ಹಿಂದೆ ಕೊಟ್ಟಿದ್ದ ಅರೋಗ್ಯ, ವಸತಿ, ಆಹಾರ ಖಾತೆಗಳನ್ನು ಚೆನ್ನಾಗಿ ನಿರ್ವಹಿಸಿ ಈ ಬಾರಿ ಪ್ರಭಾವೀ ಖಾತೆ ಪಡೆಯಲೇಬೇಕಿದ್ದ ಯು ಟಿ ಖಾದರ್ ಅವರಿಗೆ ಸಚಿವ ಖಾತೆ ಕೊಡದೆ ಸ್ಪೀಕರ್ ಹುದ್ದೆ ಕೊಡಲಾಯಿತು ಎಂದೂ ಹೇಳಲೇ ಇಲ್ಲ ಝಮೀರ್.

ಈ ಸರಕಾರ ಬಂದ ಮೇಲೆ ಆಯ್ಕೆ ಮಾಡಿರುವ ಆರು ಮಂದಿ ವಿಧಾನ ಪರಿಷತ್ ಸದಸ್ಯರಲ್ಲಿ ಒಬ್ಬೆ ಒಬ್ಬ ಮುಸ್ಲಿಮರಿಲ್ಲ, ಇದ್ದ ಒಬ್ಬ ಮುಸ್ಲಿಂ ನಾಯಕನನ್ನೂ ಕೊನೆ ಕ್ಷಣದಲ್ಲಿ ಕಿತ್ತು ಹಾಕಿ ಬೇರೊಬ್ಬರಿಗೆ ಅವಕಾಶ ನೀಡಲಾಯಿತು ಎಂಬುದೂ ಝಮೀರ್ ಅಹ್ಮದ್ ಗೆ ತೆಲಂಗಾಣದಲ್ಲಿ ಮಾತಾಡುವಾಗ ಹೊಳೆಯಲಿಲ್ಲ.

ಈ ಸರಕಾರ ಬಂದ ಮೇಲೂ ರಾಜ್ಯದಲ್ಲಿ ಪ್ರಚೋದನಕಾರಿ ಭಾಷಣಕಾರರಿಗೆ, ಅನೈತಿಕ ಪೊಲೀಸ್ ಗಿರಿಗೆ ಕಡಿವಾಣ ಬಿದ್ದಿಲ್ಲ. ಆದರೆ ಫೆಲೆಸ್ತೀನ್ ಮೇಲೆ ಇಸ್ರೇಲ್ ಆಕ್ರಮಣವನ್ನು ಖಂಡಿಸಿ ಶಾಂತಿಯುತ ಪ್ರದರ್ಶನ ಮಾಡಿದರೆ ಮಾತ್ರ ಕೂಡಲೇ ಕೇಸು ಜಡಿಯಲಾಗುತ್ತದೆ ಎಂದು ಹೇಳುವುದನ್ನೂ ಮರೆತು ಬಿಟ್ಟಿದ್ದಾರೆ ಝಮೀರ್ ಅಹ್ಮದ್ ಖಾನ್. ಈ ಜಾಣ ಮರೆವಿನ ಝಮೀರ್ ಅಹ್ಮದ್ ಖಾನ್ ಆಗಾಗ ಎಡವಟ್ಟು ಮಾತಾಡುವುದನ್ನು ಮಾತ್ರ ಮರೆಯೋದೇ ಇಲ್ಲ.

ಯಾರೋ ಮೇಲಿಂದ ನಿಗದಿಗೊಳಿಸಿ ಇಟ್ಟಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಇಂತಹ ತೀರಾ ಬೇಜವಾಬ್ದಾರಿಯುತ ಅಥವಾ ಅಷ್ಟೇ ಹಾಸ್ಯಾಸ್ಪದ ಹೇಳಿಕೆ ಕೊಟ್ಟು ತಾನೂ ಜೋಕರ್ ಆಗುತ್ತಾರೆ. ನಗೆಪಾಟಲಿಗೆ ಈಡಾಗುತ್ತಾರೆ. ರಾಜಕೀಯ ಎದುರಾಳಿಗಳಿಗೆ ತಮ್ಮ ಹಾಗು ಪಕ್ಷದ ಮೇಲೆ ದಾಳಿ ಮಾಡಲು ತಾವೇ ಸರಕು ಒದಗಿಸುತ್ತಾರೆ. ರಣಹದ್ದುಗಳಂತೆ ಕಾದು ಕುಳಿತ ಟಿವಿ ಚಾನಲ್ ಗಳು ಆ ಹೇಳಿಕೆಯನ್ನು ಹಿಡಿದುಕೊಂಡು ಗಂಟೆಗಟ್ಟಲೆ ಬಿಜೆಪಿ ನಾಯಕರನ್ನು ಮಾತಾಡಿಸುತ್ತವೆ, ಡಿಬೇಟ್ ಮಾಡುತ್ತವೆ.

ಇದು ಕಾಂಗ್ರೆಸ್ ನ ಬೇಜವಾಬ್ದಾರಿತನವೋ ಅಥವಾ ಬೇಕೆಂದೇ ಅದು ಇಂತಹದೊಂದು ತಂತ್ರವನ್ನು ಅನುಸರಿಸುತ್ತದೆಯೇ ಎಂಬ ಸಂಶಯವೂ ಜನರನ್ನು ಕಾಡುತ್ತಿದೆ. ಅದು ಈ ಬಾರಿ ಸಚಿವ ಸ್ಥಾನಕ್ಕೆ ಆಯ್ಕೆ ಮಾಡಿರುವ ಎರಡೂ ಮುಸ್ಲಿಂ ಶಾಸಕರಿಗೆ ಕನ್ನಡ ಮಾತಾಡಲು ಬರೋದಿಲ್ಲ. ಅವರು ಕನ್ನಡದಲ್ಲಿ ಮಾತಾಡಲು ಒಂದಿಷ್ಟು ಪ್ರಯತ್ನವನ್ನೂ ಮಾಡೋದಿಲ್ಲ. ಇಬ್ಬರೂ ಮಂತ್ರಿಯಾಗಿ ಪ್ರಮಾಣವಚನವನ್ನೂ ಇಂಗ್ಲಿಷ್ ಭಾಷೆಯಲ್ಲಿ ಸ್ವೀಕರಿಸಿ ವಿವಾದಕ್ಕೆ ಒಳಗಾಗಿದ್ದರು. ನಾಲ್ಕು ಸಾಲಿನ ಪ್ರಮಾಣ ವಚನವನ್ನು ಕನ್ನಡದಲ್ಲಿ ಹೇಳಲು ಕಲಿಯಲು ಅವರಿಗೆ ಅಸಾಧ್ಯ ಏನಿರಲಿಲ್ಲ. ಆದರೆ ಅದಕ್ಕೆ ಅವರು ಸಿದ್ಧರಿರಲಿಲ್ಲ.

ಇನ್ನು, ಝಮೀರ್ ಅಹ್ಮದ್ ಖಾನ್ ಅವರಂತೂ ಪ್ರತಿ ಬಾರಿ ಮಾತಾಡಿದರೆ ಅದು ಜೋಕ್ ಆಗಿ, ವಿವಾದವಾಗಿ, ಮೀಮ್, ರೀಲ್ಸ್ ಆಗಿ ಚರ್ಚೆಗೆ ಬರುತ್ತದೆಯೇ ಹೊರತು ಗಂಭೀರವಾಗಿ ಅದನ್ನು ಯಾರೂ ತೆಗೆದುಕೊಳ್ಳೋದೇ ಇಲ್ಲ. ತೀವ್ರ ಭಾವಾವೇಶಕ್ಕೆ ಒಳಗಾದವರಂತೆ ಅವರು ದೊಡ್ಡ ಧ್ವನಿಯಲ್ಲಿ ಮಾತಾಡುತ್ತಿದ್ದರೆ ಅದು ಇನ್ನೊಂದು ದೊಡ್ಡ ವಿವಾದಕ್ಕೆ ನಾಂದಿ ಆಗುತ್ತದೆಯೇ ವಿನಃ ಮುಸ್ಲಿಂ ಸಮುದಾಯಕ್ಕಾಗಲಿ, ಕಾಂಗ್ರೆಸ್ ಪಕ್ಷಕ್ಕಾಗಲಿ, ಸರಕಾರಕ್ಕಾಗಲಿ ಅದರಿಂದ ಯಾವ ಪ್ರಯೋಜನವೂ ಇಲ್ಲ.

ಝಮೀರ್ ಅಹ್ಮದ್ ಖಾನ್ ಅವರನ್ನು ಹೃದಯವಂತ, ಪರೋಪಕಾರಿ, ಕೊಡುಗೈ ದಾನಿ, ಎಲ್ಲರಿಗೂ ಸ್ಪಂದಿಸುವ ಸೌಹಾರ್ದ ಪ್ರಿಯ ಎಂದೆಲ್ಲಾ ಜನ ಕೊಂಡಾಡ್ತಾರೆ. ಅದೆಲ್ಲವೂ ಸಾಕಷ್ಟು ಮಟ್ಟಿಗೆ ನಿಜವೂ ಹೌದು. ಆದರೆ ಒಬ್ಬ ಹಿರಿಯ ಜನಪ್ರತಿನಿಧಿಯಾಗಿ, ಸಚಿವನಾಗಿ, ಆಡಳಿತಗಾರನಾಗಿ, ಜನನಾಯಕನಾಗಿ ಝಮೀರ್ ಮಾಗಿಲ್ಲ. ಅವರು ಇನ್ನಷ್ಟು ಪ್ರಬುದ್ಧರಾಗಬೇಕಾಗಿದೆ. ತಮ್ಮ ಮಾತಿನ ಮೇಲೆ ಲಗಾಮು ಹಾಕಿಕೊಳ್ಳಬೇಕಾಗಿದೆ.

ಅವರಿಗೆ ರಾಜಕೀಯ ಸಾಕಷ್ಟು ಅವಕಾಶಗಳನ್ನು ಕೊಟ್ಟಿದೆ. ಬಹಳ ಕಡಿಮೆ ಜನರಿಗೆ ಇಷ್ಟು ಅವಕಾಶಗಳು ಸಿಗುತ್ತವೆ. ಆದರೆ ಆ ಅವಕಾಶಗಳನ್ನು ಅವರು ಸಮರ್ಥವಾಗಿ ಬಳಸಿಕೊಂಡಿಲ್ಲ ಎಂಬುದು ಢಾಳಾಗಿ ಎದ್ದು ಕಾಣುತ್ತದೆ. ಅವರನ್ನು ಇದೇ ರೀತಿ ಬಳಸಿಕೊಳ್ಳುವಲ್ಲೇ ಪಕ್ಷಕ್ಕೆ ಲಾಭ ಹೆಚ್ಚಿದೆ ಎಂದು ಕಾಂಗ್ರೆಸ್ ಕೂಡ ಭಾವಿಸಿದಂತಿದೆ. ಮುಸ್ಲಿಂ ಸಮುದಾಯದಿಂದ ಓಟು ಬಾಚಿಕೊಂಡು ಅದಕ್ಕೆ ಸರಕಾರದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡದೇ ಇರುವುದಕ್ಕೆ ಸಮರ್ಥನೆಯಾಗಿ ಅದು ಝಮೀರ್ ರಂತಹ ನಾಯಕರಿಂದ ಇಂತಹ ಹೇಳಿಕೆ ಕೊಡಿಸುತ್ತಾ ಅವರನ್ನೇ ತೋರಿಸುತ್ತಿದೆಯೇ ಎಂಬ ಅನುಮಾನ ಜನರನ್ನು ಕಾಡುತ್ತಿದೆ.

ಬಲಾಢ್ಯ ಸಮುದಾಯಗಳ ನಾಯಕರು ಒಂದು ಹೇಳಿಕೆ ಕೊಟ್ಟರೆ ಇದೇ ಸರಕಾರ ಹಾಗು ಆಡಳಿತಾರೂಢ ಪಕ್ಷ ಅವರನ್ನು ಓಲೈಸಲು, ಸಮಾಧಾನಿಸಲು ಅವರು ಹೇಳಿದ್ದನ್ನು ಮಾಡಿ ಕೊಡಲು ಮುಂದಾಗುತ್ತದೆ. ಆದರೆ ಮುಸ್ಲಿಂ ಸಮುದಾಯದ ಝಮೀರ್ ರಂತಹ ನಾಯಕರು ಮಾತಾಡಿದಾಗಲೆಲ್ಲ ಮುಸ್ಲಿಂ ಸಮುದಾಯವೇ ಅದಕ್ಕೆ ಸ್ಪಷ್ಟೀಕರಣ ಕೊಡಬೇಕಾದ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಇದು ಈ ನಾಯಕರಿಂದಾಗಿ ಸೃಷ್ಟಿಯಾಗುತ್ತಿದೆಯೇ ಅಥವಾ ಅಂತಹ ಸನ್ನಿವೇಶವನ್ನು ಸೃಷ್ಟಿಸಲಿಕ್ಕಾಗಿಯೇ ಇಂತಹದೇ ನಾಯಕರನ್ನು ಪೋಷಿಸಿ ಬೆಳೆಸಿ ಅವರಿಗೆ ಈ ಜವಾಬ್ದಾರಿ ನೀಡಲಾಗುತ್ತಿದೆಯೇ ಎಂಬ ಸಂಶಯ ಮುಸ್ಲಿಮರನ್ನು ಕಾಡುತ್ತಿದೆ.

ಈಗ್ಲಾದರೂ ಅದನ್ನು ಅರ್ಥ ಮಾಡಿಕೊಂಡು ಝಮೀರ್ ಅವರು ತಿದ್ದಿಕೊಳ್ಳದಿದ್ದರೆ ಅವರು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಕೇವಲ ದೊಡ್ಡವರ ಹಿಂಬಾಲಕನಾಗಿ, ವಿದೂಷಕನಾಗಿಯೇ ದಾಖಲಾಗಿಬಿಡುತ್ತಾರೆ. ಮುಸ್ಲಿಂ ಸಮುದಾಯದ ನಾಯಕ ಎಂದು ಹೇಳಿಕೊಳ್ಳುತ್ತಲೇ ಆ ಸಮುದಾಯಕ್ಕೆ ಬಹುದೊಡ್ಡ ನಷ್ಟ ತಂದಿಡುತ್ತಾರೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!