ಬಿಜೆಪಿಗೆ ಬಲ ತುಂಬಿದ ನಿತೀಶ್ ಸಮಯ ಸಾಧಕತನ, ಮಮತಾ, ಕೇಜ್ರಿವಾಲ್ ಸ್ವಾರ್ಥ
ಸತ್ತರೂ ಬಿಜೆಪಿ ಹೋಗೋದಿಲ್ಲ ಎಂದಿದ್ದ ನಿತೀಶ್ ಕುಮಾರ್ ಬಿಜೆಪಿ ಜೊತೆ ಹೋಗಿದ್ದಾರೆ. ಎನ್ ಡಿ ಎ ಬಾಗಿಲು ನಿತೀಶ್ ಗೆ ಪರ್ಮನೆಂಟ್ ಆಗಿ ಬಂದ್ ಆಗಿದೆ ಎಂದಿದ್ದ ಬಿಜೆಪಿ ಅವರ ಬಾಗಿಲಿಗೇ ಹೋಗಿದೆ. ನಿತೀಶ್ ಕುಮಾರ್ ಪಲ್ಟು ರಾಮ್ ಎಂದು ಹೇಳುತ್ತಿರುವವರಿಗೆ, ಅವರು ಸೇರಿರುವ ಎನ್ ಡಿ ಎ ಹಾಗು ಅದರ ನೇತೃತ್ವ ವಹಿಸಿರುವ ಬಿಜೆಪಿಯಲ್ಲಿ ಪಲ್ಟು ರಾಮ್ ಗಳೇ ತುಂಬಿ ತುಳುಕುತ್ತಿದ್ದಾರೆ ಎಂದು ಹೇಳುವ ಧೈರ್ಯ ಇಲ್ಲವಾಗಿದೆ.
ಅಸ್ಸಾಂ ಬಿಜೆಪಿ ಸಿಎಂ ಹಿಮಂತ ಶರ್ಮಾ ಕಾಂಗ್ರೆಸ್ ನಿಂದ ಬಂದ ಪಲ್ಟು ರಾಮ್. ಮಹಾರಾಷ್ಟ್ರ ಎನ್ ಡಿ ಎ ಕೂಟದ ಸಿಎಂ ಏಕನಾಥ್ ಶಿಂಧೆ ಶಿವಸೇನೆಯಿಂದ ಬಂದ ಪಲ್ಟು ರಾಮ್. ಕೇಂದ್ರ ಸಚಿವರಲ್ಲಿ, ಬಿಜೆಪಿ ಸಂಸದರಲ್ಲಿ ಅದೆಷ್ಟು ಮಂದಿ ಬೇರೆ ಬೇರೆ ಪಕ್ಷಗಳಿಂದ ಬಂದ ಪಲ್ಟು ರಾಮ್ ಗಳಿಲ್ಲ ?
ಇನ್ನು, ಈ ಹಿಂದೆ ಕೈಕೊಟ್ಟ ನಿತೀಶ್ ಬಾಗಿಲಿಗೇ ಮತ್ತೆ ಮತ್ತೆ ಹೋದ ಬಿಜೆಪಿಯ ಪರಮ ನಾಯಕರನ್ನು ಇನ್ನೇನೆಂದು ಕರೆಯಬೇಕು ?. ಜೆಡಿಯು ನಾಯಕ ನಿತೀಶ್ ಕುಮಾರ್ ಮಹಾಘಟಬಂಧನ್ ತೊರೆದು, ಎನ್ ಡಿ ಎ ಬಣದೊಂದಿಗೆ ಸೇರಿ ಬಿಹಾರದಲ್ಲಿ ಸರ್ಕಾರ ರಚಿಸಿದ್ದಾರೆ. ಅದರೊಂದಿಗೆ, ಬಿಜೆಪಿ ವಿರುದ್ಧದ ವಿಪಕ್ಷ ಮೈತ್ರಿಕೂಟವೆಂಬ ಬಹು ದೊಡ್ಡ ಕನಸು ಕಮರಿಹೋದಂತಾಗಿದೆ.
ಹೇಗೆ ನಿತೀಶ್ ಸಮಯ ಸಾಧಕತನದ ಜೊತೆಗೆ, ಮಮತಾ ಬ್ಯಾನರ್ಜಿ ಹಾಗೂ ಅರವಿಂದ್ ಕೇಜ್ರಿವಾಲ್ ಅವರ ಅವಕಾಶವಾದಿ, ಸ್ವಾರ್ಥ ರಾಜಕಾರಣ ಇಂಡಿಯಾ ಮೈತ್ರಿಕೂಟವನ್ನು ಚುನಾವಣೆಗೆ ಮೊದಲೇ ಪತನದ ಅಂಚಿಗೆ ತಂದು ನಿಲ್ಲಿಸಿತು ?. ಹೇಗೆ ಈ ಮೂವರು ಪ್ರಮುಖ ನಾಯಕರು ತಮ್ಮ ಹಾಗೂ ತಮ್ಮ ಪಕ್ಷದ ಲಾಭಕ್ಕಾಗಿ ಬಿಜೆಪಿಗೆ ಚುನಾವಣೆಯನ್ನು ಹರಿವಾಣದಲ್ಲಿಟ್ಟು ಕೊಟ್ಟರು ?.
ಹೇಗೆ ಇವರೆಲ್ಲರೂ ಒಂದಾಗಿ ಬಿಜೆಪಿಯನ್ನು ಸೋಲಿಸುವ ಬದಲು, ರಾಹುಲ್ ಗಾಂಧಿಯನ್ನು ಏಕಾಂಗಿ ಮಾಡಿಬಿಟ್ಟರು ?. ನಿತೀಶ್ ಕುಮಾರ್ ನಡೆಯ ಬಗ್ಗೆ ವ್ಯಕ್ತವಾಗಿರುವ ಕೆಲವು ಅಭಿಪ್ರಾಯಗಳನ್ನು ಗಮನಿಸಿ, ಬಳಿಕ ಕೆಲವು ವಿಚಾರಗಳನ್ನು ಚರ್ಚಿಸಬಹುದು. ಮೊದಲನೆಯದಾಗಿ, ಕಸ ಹೋಗಿ ಕಸದ ತೊಟ್ಟಿಗೆ ಸೇರಿದೆ ಎಂದು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರಿ ರೋಹಿಣಿ ಆಚಾರ್ಯ ಟೀಕಿಸಿದ್ದಾರೆ.
ಕಳೆದ ವಾರ ರೋಹಿಣಿ ಅವರು, ಸೈದ್ದಾಂತಿಕವಾಗಿ ಅಲೆದಾಡುವವರು ಸಮಾಜವಾದದ ಚಾಂಪಿಯನ್ ಎಂದು ಹೇಳಿಕೊಳ್ಳುತ್ತಾರೆ ಎಂದು ಕಮೆಂಟ್ ಮಾಡಿ ಕಡೆಗೆ ಅಳಿಸಿಹಾಕಿದ್ದರು.ರೋಹಿಣಿ ಅವರ ಆ ಮಾತು ನಿತೀಶ್ ಅವರನ್ನು ಕೆರಳಿಸಿದೆ ಎನ್ನಲಾಗಿತ್ತು. ಇನ್ನು ನಿತೀಶ್ ನಡೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ನಿತೀಶ್ ಮಾಡಿರುವ ದ್ರೋಹವನ್ನು ಬಿಹಾರದ ಜನತೆ ಎಂದಿಗೂ ಕ್ಷಮಿಸಲಾರರು ಎಂದಿದೆ.
ಆಗಾಗ್ಗೆ ರಾಜಕೀಯ ಮೈತ್ರಿಯನ್ನು ಬದಲಾಯಿಸುವ ನಿತೀಶ್ ಕುಮಾರ್ ಬಣ್ಣ ಬದಲಾಯಿಸುವಲ್ಲಿ ಊಸರವಳ್ಳಿಯನ್ನೂ ಮೀರಿಸುತ್ತಾರೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟೀಕಿಸಿದ್ದಾರೆ. ಇನ್ನೊಂದೆಡೆ, ಇಂಡಿಯಾ ಮೈತ್ರಿಕೂಟದ ಮತ್ತೊಂದು ಪಕ್ಷವಾದ ಟಿಎಂಸಿ ಕೂಡ ನಿತೀಶ್ ವಿರುದ್ಧ ಪ್ರತಿಕ್ರಿಯಿಸಿದ್ದು, ಅವರನ್ನು ಅವಕಾಶವಾದಿ ಎಂದು ಕರೆದಿದೆ. ಮತದಾರರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಅದು ಹೇಳಿದೆ.
ಆದರೆ, ಮತದಾರರು ಪಾಠ ಕಲಿಸುವ ಸನ್ನಿವೇಶ ಇವತ್ತಿನ ರಾಜಕಾರಣದಲ್ಲಿ ಇದ್ದಿದ್ದೇ ಹೌದಾದರೆ ನಿತೀಶ್ ಐದನೇ ಬಾರಿ ಮೈತ್ರಿ ಬದಲಿಸುವುದು ನಡೆಯುತ್ತಲೇ ಇರಲಿಲ್ಲ. 2013ರಿಂದಲೂ ಅವರು ರಾಜ್ಯದಲ್ಲಿ ಅಧಿಕಾರದಲ್ಲಿದ್ದುಕೊಂಡೇ ಮೈತ್ರಿಕೂಟ ಬದಲಿಸುತ್ತ ಬಂದವರು.
ಎನ್ಡಿಎ ಮತ್ತು ಮಹಾಘಟಬಂಧನ್ ನಡುವೆ ಅಕ್ಕಪಕ್ಕದ ಮನೆಗೆ ಹೋಗಿ ಬಂದಂತೆ ಮಾಡುತ್ತಲೇ ಇದ್ದವರು.
ಈಗ ಮತ್ತೊಮ್ಮೆ ಅದೇ ಆಗಿದೆ. ಮತ್ತವರು ಬಿಹಾರ ರಾಜ್ಯದಲ್ಲಿ ಈಗಲೂ ಅಧಿಕಾರದಲ್ಲಿದ್ದಾರೆ. ಪ್ರತಿ ಬಾರಿ ಮೈತ್ರಿ ಬದಲಾಯಿಸಿದಾಗಲೂ ಅದಕ್ಕೊಂದು ಸಮಜಾಯಿಷಿ, ಸಮರ್ಥನೆ, ಅನಿವಾರ್ಯತೆಯನ್ನು ಬಿಂಬಿಸುವಲ್ಲಿ ಕೂಡ ಅವರೆಂದೂ ಹಿಂದೆ ಬಿದ್ದವರಲ್ಲ. ಇದರ ನಡುವೆಯೇ ಅವರು ಮೋದಿಯವರಿಗೆ ತನ್ನ ಶಕ್ತಿಯೇನೆಂಬುದನ್ನು ತೋರಿಸಲು ಆರ್ಜೆಡಿಯ ನೆರವು ಪಡೆದು ಆಟವಾಡಿದ್ದಿದೆ. ತನಗೆ ಯಾವಾಗ ಬೇಕು ಆವಾಗ " ಮಹಾಘಟಬಂಧನ್ನಲ್ಲಿ ಎಲ್ಲವೂ ಸರಿಯಿಲ್ಲ" ಎಂದು ಹೇಳಿ ಮತ್ತೆ ಎನ್ಡಿಎಗೆ ಹೋಗಲು ಅವರಿಗೆ ಯಾವ ತಾತ್ವಿಕ ಅಡಚಣೆಯೂ ಕಾಣಿಸಲಿಲ್ಲ.
ಕಳೆದ ಎರಡು ವರ್ಷಗಳಲ್ಲಿ ಬಿಜೆಪಿ ನಿತೀಶ್ ಅವರನ್ನು ಹತ್ತಿಕ್ಕಬಹುದಾದ ಯಾವ ಅವಕಾಶವನ್ನೂ ಬಿಟ್ಟುಕೊಟ್ಟಿರಲಿಲ್ಲ. ಅದರ ಹಿರಿಯ ನಾಯಕರು ಪ್ರತಿದಿನವೂ ನಿತೀಶ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮೋದಿ ಕೂಡ ತಮ್ಮ ಭಾಷಣಗಳಲ್ಲಿ ಕೆಲವು ಬಾರಿ ನಿತೀಶ್ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಿತ್ತು. ಜಂಗಲ್ ರಾಜ್ ಎಂದು ನಿತೀಶ್ ಆಡಳಿತವನ್ನು ಮೋದಿ ಜರೆದಿದ್ದರು.
ಬಿಹಾರದಲ್ಲಿ ಭ್ರಷ್ಟಾಚಾರ, ದುರಾಡಳಿತ ಮತ್ತು ಕಾನೂನು ಸುವ್ಯವಸ್ಥೆ ವೈಫಲ್ಯದ ಬಗ್ಗೆ ಬಿಜೆಪಿ ಆಂದೋಲನವನ್ನೇ ನಡೆಸಿತ್ತು. ಇಷ್ಟೆಲ್ಲದರ ನಂತರವೂ ನಿತೀಶ್ ಎನ್‌ಡಿಎಗೆ ಮರಳಿದ್ದಾರೆ, ಬಿಹಾರದಲ್ಲಿ ಮತ್ತೊಮ್ಮೆ ಬಿಜೆಪಿಗೆ ತೀರಾ ಬೇಕಾಗಿರುವ ಮಿತ್ರನಾಗಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.
ಇನ್ನೊಂದೆಡೆ ನಿತೀಶ್ ಅವರ ಸರ್ಕಾರದ ವಿರುದ್ಧ ದಾಳಿ ಮಾಡುತ್ತಲೇ ಬಂದಿದ್ದ ಮೋದಿ ಮತ್ತವರ ಪಕ್ಷ ಕೂಡ ತನ್ನ ನಡೆಗೂ ನುಡಿಗೂ ಅಜಗಜಾಂತರ ಎಂಬುದನ್ನೇ ಮತ್ತೊಮ್ಮೆ ಸಾಬೀತುಪಡಿಸಿದೆ. ಮಹಾರಾಷ್ಟ್ರದಲ್ಲಿ ಎನ್ ಸಿ ಪಿ 70 ಸಾವಿರ ಕೋಟಿ ಅವ್ಯವಹಾರ ಮಾಡಿದೆ ಎಂದು ಪ್ರಧಾನಿ ಮೋದಿ ಭಾಷಣದಲ್ಲಿ ಹೇಳಿದ ಕೆಲವೇ ದಿನಗಳಲ್ಲಿ ಮೋದಿಯವರ ಪಕ್ಷ ಎನ್ ಸಿ ಪಿ ಜೊತೆ ಮೈತ್ರಿ ಮಾಡಿಕೊಂಡು ಅಜಿತ್ ಪವಾರ್ ಅನ್ನು ಡಿಸಿಎಂ ಮಾಡಿತ್ತು.
ಉತ್ತಮ ಆಡಳಿತದ ಪ್ರತಿಪಾದನೆ, ಸ್ವಚ್ಛ ರಾಜಕೀಯ ನೀತಿಗಳೆಲ್ಲ ಬರೀ ಮಾತಿನಲ್ಲೇ ಉಳಿದು, ತನ್ನ ಚುನಾವಣಾ ಮಹತ್ವಾಕಾಂಕ್ಷೆಗಳಿಗೇ ಹೆಚ್ಚು ಆದ್ಯತೆ ನೀಡುವ ಅದರ ಬಣ್ಣವೂ ಬಯಲಾಗಿದೆ. ಆದರೆ. ಇದೆಲ್ಲದರ ನಡುವೆ ದೊಡ್ಡ ಏಟು ಬಿದ್ದಿರುವುದು ಇಂಡಿಯಾ ಮೈತ್ರಿಕೂಟಕ್ಕೆ. ರಾಜಕೀಯ ಮಹತ್ವಾಕಾಂಕ್ಷೆಯನ್ನು ಮನಸ್ಸಿನಲ್ಲಿ ತುಂಬಿಕೊಂಡೇ ವಿಪಕ್ಷ ಮೈತ್ರಿಕೂಟವನ್ನು ಕಟ್ಟಲು ಮುಂದಾದದ್ದು ನಿಜವಾದರೂ,
ಇಷ್ಟರ ಮಟ್ಟಿಗೆ ಅಂಥದೊಂದು ಮೈತ್ರಿಕೂಟ ರೂಪುಗೊಳ್ಳುವಲ್ಲಿ ನಿತೀಶ್ ಪಾತ್ರ ದೊಡ್ಡದಿತ್ತು ಎಂಬುದಂತೂ ನಿಜ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಇಂಡಿಯಾ ಮೈತ್ರಿಕೂಟ ರಚನೆಯಲ್ಲಿ ನಿತೀಶ್ ಕುಮಾರ್ ಮುಂಚೂಣಿಯಲ್ಲಿದ್ದರು. ಅದರ ಮೊದಲ ಸಭೆ ಅವರ ನೇತೃತ್ವದಲ್ಲಿಯೇ ಕಳೆದ ಜೂನ್ 23ರಂದು ಪಾಟ್ನಾದಲ್ಲಿ ನಡೆದಿತ್ತು.
ಅನಂತರ ಜುಲೈ 18ರಂದು ಬೆಂಗಳೂರಿನಲ್ಲಿ 2ನೇ ಸಭೆಯಲ್ಲಿಯೂ ನಿತೀಶ್ ಕುಮಾರ್ ಪಾಲ್ಗೊಂಡಿದ್ದರು. 3ನೇ ಸಭೆ ಮುಂಬೈನಲ್ಲಿ ಆಗಸ್ಟ್ 31 ಮತ್ತು ಸೆಪ್ಟಂಬರ್ 1ರಂದು ನಡೆದಿತ್ತು. ಬಳಿಕ ಬಹಳ ತಡವಾಗಿ 4ನೇ ಸಭೆ ದೆಹಲಿಯಲ್ಲಿ ಡಿಸೆಂಬರ್ 19ರಂದು ನಡೆದಿತ್ತು.
ಆ 4ನೇ ಸಭೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಯಾವ ಮೈತ್ರಿಪಕ್ಷಗಳ ಜೊತೆಗೂ ಚರ್ಚಿಸದೇ ಆಡಿದ ಆಟವೊಂದು ನಿತೀಶ್ ಕುಮಾರ್ ಅವರ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು. ಅಲ್ಲಿಂದಾಚೆಗೆ ಇಂಡಿಯಾ ಬಣದಿಂದ ಅವರು ಅಂತರ ಕಾಯ್ದುಕೊಂಡಿದ್ದರು.
ಈಗ ಬದಲಾದ ಸನ್ನಿವೇಶದಲ್ಲಿ ನಿತೀಶ್ ಕುಮಾರ್ ಮಹಾಘಟಬಂಧನ್ ಜೊತೆಗೆ ಸಖ್ಯ ಕಳೆದುಕೊಂಡು ಬಿಜೆಪಿ ಜೊತೆಗೆ ಹೊಸ ಸರ್ಕಾರ ರಚಿಸಿದ್ದಾರೆ. ಕಾಂಗ್ರೆಸ್ ಮಾಡಿದ ಅವಮಾನವೇ ಇಂಡಿಯಾ ಮೈತ್ರಿಕೂಟ ಪತನಕ್ಕೆ ಕಾರಣವಾಗಿದೆ ಎಂದು ಜೆಡಿಯು ವಕ್ತಾರ ಕೆಸಿ ತ್ಯಾಗಿ ಶನಿವಾರ ಹೇಳಿಕೆ ನೀಡಿದ್ದರು.
ರಾಷ್ಟ್ರೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ವರ್ಷಗಳ ಕಾಲ ನಿತೀಶ್ ಅವರ ಪ್ರಯತ್ನ ನಡೆದಿತ್ತು. ಕಾಂಗ್ರೆಸ್ ಎಂದರೇ ಆಗದ ಪಕ್ಷಗಳನ್ನೂ ಕಾಂಗ್ರೆಸ್ ಜೊತೆ ಕೂಡಿಕೊಂಡು ಚುನಾವಣೆಗೆ ಹೋಗುವಂತೆ ಒಪ್ಪಿಸುವಲ್ಲಿ ಖಂಡಿತವಾಗಿಯೂ ಅವರ ಶ್ರಮವಿತ್ತು. ಆದರೆ, ಇದೆಲ್ಲದರ ನಡುವೆಯೇ ಮೈತ್ರಿಕೂಟದ ನಾಯಕ ತಾನೇ ಆಗಬೇಕೆಂಬ ಆಸೆ ಕೂಡ ಅವರೊಳಗೆ ಜಾಗೃತವಾಗಿಯೇ ಇತ್ತು.
ಯಾವಾಗ, ಇಂಡಿಯಾ ಮೈತ್ರಿಕೂಟದ ದೆಹಲಿ ಸಭೆಯಲ್ಲಿ ಮಮತಾ ಬ್ಯಾನರ್ಜಿ ಮತ್ತು ಅರವಿಂದ್ ಕೇಜ್ರಿವಾಲ್ ಅವರು ಆಡಿದ ಸಣ್ಣ ರಾಜಕೀಯ ಆಟದಿಂದಾಗಿ ತನ್ನ ರಾಜಕೀಯ ಆಕಾಂಕ್ಷೆಗೆ ಕಲ್ಲು ಬಿತ್ತೆನ್ನಿಸಿತೋ ನಿತೀಶ್ ವರಸೆಯೇ ಬದಲಾಗಿ ಹೋಗಿತ್ತು.
ಮೈತ್ರಿಕೂಟದ ನಾಯಕನಾಗಿ ಕಾಣಿಸಿಕೊಳ್ಳುವ ನಿತೀಶ್ ಆಸೆ,
ಅಂಥದೇ ಆಸೆಯನ್ನು ಒಳಗೊಳಗೇ ಹೊಂದಿದ್ದ ಮಮತಾ ಬ್ಯಾನರ್ಜಿ ಮತ್ತು ಕೇಜ್ರಿವಾಲ್ ಅವರ ದುಡುಕುತನ,
ಅದುವರೆಗೂ ಹೇಗೋ ಒಂದು ಹಂತ ಮುಟ್ಟಿ ಇಂಡಿಯಾ ಮೈತ್ರಿಕೂಟ ಗಟ್ಟಿಯಾಗುವ ಸಾಧ್ಯತೆ ಕಾಣಿಸಿದ್ದ ಹೊತ್ತಲ್ಲಿಯೇ ಬಿರುಕಿಗೆ ಮೂಲವಾಗಿ ಹೋಗಿತ್ತು.
ಖರ್ಗೆ ಇಂಡಿಯಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಲಿ ಎಂಬ ಪ್ರಸ್ತಾಪವನ್ನು ಮಮತಾ ಮತ್ತು ಕೇಜ್ರಿವಾಲ್ ಹೊತ್ತಲ್ಲದ ಹೊತ್ತಲ್ಲಿ ಇಟ್ಟಿದ್ದರು. ಮೂರು ರಾಜ್ಯಗಳಲ್ಲಿ ಸೋತು ಮುಖ ತೋರಿಸಲಾರದ ಸ್ಥಿತಿಯಲ್ಲಿ ಕಾಂಗ್ರೆಸ್ ಇದ್ದಾಗ ಬಂದ ಅಂಥದೊಂದು ಪ್ರಸ್ತಾಪ, ತನ್ನನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ನಿತೀಶ್ ಅನುಮಾನದ ಬೆಂಕಿಗೆ ತುಪ್ಪ ಸುರಿದಿತ್ತು.
ದೆಹಲಿ ಸಭೆಗೆ ಮೊದಲೇ ಅವರು ಸಾಕಷ್ಟು ರೋಸಿಹೋಗಿದ್ದರು.
ಮೈತ್ರಿಕೂಟದ ವಿಚಾರದಲ್ಲಿ ಕಾಂಗ್ರೆಸ್ ನಿಧಾನ ಗತಿಯ ಬಗ್ಗೆ ಅವರು ತಮ್ಮ ಅಸಮಾಧಾನ ಹೊರಹಾಕಿದ್ದರು. ಗಂಭೀರತೆಯ ಕೊರತೆ ಬಗ್ಗೆ ಟೀಕಿಸಿದ್ದರು.
ಅಂಥ ಹೊತ್ತಲ್ಲಿಯೇ ಬಂದ ಪ್ರಧಾನಿ ಅಭ್ಯರ್ಥಿಯ ಪ್ರಸ್ತಾಪ ಒಗ್ಗಟ್ಟಿನ ಸಾದ್ಯತೆಯನ್ನೇ ಹಾಳುಗೆಡವಿತ್ತು. ಸೀಟು ಹಂಚಿಕೆ, ಪ್ರಚಾರ ತಂತ್ರ, ಜಂಟಿ ಕ್ರಿಯಾ ಸಮಿತಿಯಂಥ ಮೂಲಭೂತ ವಿಚಾರಗಳ ಬದಲಾಗಿ ಇದ್ದಕ್ಕಿದ್ದಂತೆ ಪ್ರಧಾನಿ ಅಭ್ಯರ್ಥಿ ವಿಚಾರವನ್ನು ಮುನ್ನೆಲೆಗೆ ತಂದಿದ್ದು ತೀರಾ ಆತುರದ ನಡೆಯಾಗಿತ್ತು.
ಅಂಥ ಪ್ರಸ್ತಾಪವನ್ನು ಒಪ್ಪದ ಖರ್ಗೆ, ಮೊದಲು ಗೆಲುವಿನ ಗುರಿ ಮುಟ್ಟಬೇಕು, ಗೆಲ್ಲುವುದಕ್ಕೇ ಆಗದಿದ್ದರೆ ಪ್ರಧಾನಿ ಅಭ್ಯರ್ಥಿಯನ್ನು ಇಟ್ಟುಕೊಂಡು ಮಾಡುವುದೇನಿದೆ ಎಂದಿದ್ದರು. ಅಲ್ಲಿಗೆ, ಮೈತ್ರಿಕೂಟದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ನಿತೀಶ್ ಇರಾದೆಗೆ ಎಲ್ಲ ದಿಕ್ಕಿನಿಂದಲೂ ಕಲ್ಲು ಬಿದ್ದಂತಾಗಿತ್ತು. ಮತ್ತವರು ತನ್ನ ಸ್ಪಷ್ಟ ಹೊಣೆಗಾರಿಕೆ ಏನೆಂದು ಕಾಂಗ್ರೆಸ್ ಖಚಿತಪಡಿಸಬೇಕೆಂದು ಒತ್ತಾಯಿಸಿದ್ದರು.
ಅಷ್ಟು ಹೊತ್ತಿಗೆ ಅವರು ತಮ್ಮ ಈಗಿನ ನಡೆಯನ್ನು ಬಹುಶಃ ನಿಶ್ಚಯಿಸಿ ಆಗಿತ್ತು. ಹೀಗೆ ನಿತೀಶ್ ಕುಮಾರ್, ಮಮತಾ ಮತ್ತು ಕೇಜ್ರಿವಾಲ್ ಈ ಮೂವರೂ ವಿಪಕ್ಷ ಮೈತ್ರಿಕೂಟದ ಕಥೆ ಹೆಚ್ಚುಕಡಿಮೆ ಮುಗಿದೇ ಹೋಗುವುದಕ್ಕೆ ಕಾರಣರಾಗಿಬಿಟ್ಟರು. ಪಂಚರಾಜ್ಯ ಚುನಾವಣೆ ಹೊತ್ತಿನಲ್ಲಿ, ಚುನಾವಣೆಗಾಗಿ ಕಾಂಗ್ರೆಸ್ ಹೆಚ್ಚಿನ ಗಮನ ಹರಿಸಿ ವಿಪಕ್ಷ ಮೈತ್ರಿಕೂಟದ ಬಗ್ಗೆ ಅಲಕ್ಷ್ಯ ತೋರಿಸಿದೆ ಎಂದು ಅಸಮಾಧಾನ ತೋರಿಸಿದ್ದ ನಿತೀಶ್, ಅನಂತರ ಭಾರತ್ ಜೋಡೋ ನ್ಯಾಯ ಯಾತ್ರೆ ಶುರುವಾದಾಗ ಮತ್ತೆ ಸಿಟ್ಟಾಗಿದ್ದರು.
ಮೈತ್ರಿಕೂಟದ ಪ್ರಚಾರ ತಂತ್ರ ರೂಪುಗೊಳ್ಳುವ ಮೊದಲೇ ಕಾಂಗ್ರೆಸ್ ಹಾಗೆ ಯಾತ್ರೆ ನಿರ್ಧಾರ ಕೈಗೊಂಡದ್ದು ನಿತೀಶ್ ಇವತ್ತಿನ ನಡೆಗೆ ಮತ್ತೊಂದು ನೆಪವಾಗಿ ಕಂಡಿತ್ತು. ಒಂದೆಡೆ ನಿತೀಶ್ ಅವರನ್ನು ಇಂಡಿಯಾ ಮೈತ್ರಿಕೂಟದಿಂದ ಅಂತರ ಕಾಯ್ದುಕೊಳ್ಳುವಂತೆ ಪ್ರಚೋದಿಸಿದ ಅದೇ ಮಮತಾ ಮತ್ತು ಕೇಜ್ರಿವಾಲ್, ಇನ್ನೊಂದೆಡೆ ಪಶ್ಚಿಮ ಬಂಗಾಳ ಮತ್ತು ಪಂಜಾಬ್ನಲ್ಲಿ ಕಾಂಗ್ರೆಸ್ ಜೊತೆ ಹೋಗದೆ ಏಕಾಂಗಿಯಾಗಿ ಚುನಾವಣೆ ಎದುರಿಸುವ ಘೋಷಣೆ ಮಾಡಿದರು.
ಇದು ನಿಜಕ್ಕೂ ಮೈತ್ರಿಕೂಟದ ಉದ್ದೇಶವನ್ನೇ ಹಾಸ್ಯಾಸ್ಪದ ನೆಲೆಗೆ ತಂದು ಮುಟ್ಟಿಸಿತ್ತು. ಬಿಜೆಪಿ ವಿರುದ್ಧ ಒಗ್ಗಟ್ಟಾಗಿ ಹೋಗುವ ಮೈತ್ರಿಕೂಟದ ಉದ್ದೇಶವನ್ನೇ ನಿರಾಕರಿಸುವ ನಿರ್ಧಾರ ಅದಾಗಿತ್ತು. ನಿತೀಶ್ ಬಲ ನಿಜವಾಗಿಯೂ ಇನ್ನೊಂದು ನೆಲೆಯಿಂದ ಇಂಡಿಯಾ ಮೈತ್ರಿಕೂಟಕ್ಕೆ ತೀರಾ ಬೇಕಾದುದಾಗಿತ್ತು ಎಂಬುದನ್ನು ಹೇಳಲೇಬೇಕು. ಬಿಹಾರದಲ್ಲಿ ನಿತೀಶ್ ನೇತೃತ್ವದ ಮಹಾಘಟಬಂಧನ್ ಸರ್ಕಾರದ ಜಾತಿ ಜನಗಣತಿ ವರದಿ ಇಂಡಿಯಾ ಮೈತ್ರಿಕೂಟದ ಪಾಲಿಗೆ ಬಹುದೊಡ್ಡ ಬಲವಾಗಿ ಒದಗಿತ್ತು.
ಒಂದು ಹಂತದಲ್ಲಿ ಬಿಜೆಪಿ ಧೃತಿಗೆಡುವುದಕ್ಕೂ ಅದು ಕಾರಣವಾಯಿತು. ಅದಲ್ಲದೆ, ನಿತೀಶ್ ಸರ್ಕಾರ ಕಳೆದ ಕೆಲವು ತಿಂಗಳುಗಳಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಯುವಕರನ್ನು ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ನೇಮಿಸಿತ್ತು. ಆ ಮೂಲಕ ಅದು ಉದ್ಯೋಗ ಮತ್ತು ಕಲ್ಯಾಣದಂತಹ ಸಮಸ್ಯೆಗಳನ್ನು ಎತ್ತಿ ತೋರಿಸಿ, ಮೋದಿ ಆಡಳಿತದ ವಿರುದ್ಧದ ತನ್ನ ಪ್ರತಿಪಾದನೆಯನ್ನು ತೀಕ್ಷ್ಣಗೊಳಿಸಿದಾಗ ಮಹತ್ವದ ಬೆಳವಣಿಗೆಯಾಗಿ ಕಂಡಿತ್ತು.
ಎಲ್ಲವೂ ಈಗ ವಿಚಿತ್ರ ತಿರುವು ಪಡೆದಂತಾಗಿದೆ. ಜಾತಿ ಜನಗಣತಿ ಪ್ರತಿಪಾದಿಸಿದ್ದ ನಿತೀಶ್ ಕುಮಾರ್, ಅದನ್ನು ವಿರೋಧಿಸುವ ಬಿಜೆಪಿಯ ತೆಕ್ಕೆಗೇ ಮತ್ತೊಮ್ಮೆ ಹೋಗಿ ಬಿದ್ದಿದ್ದಾರೆ. ಅಪಸ್ವರವೆತ್ತುತ್ತಲೇ, ಒಗ್ಗಟ್ಟಿನ ನಾಟಕವನ್ನು ಕೆಲ ಕಾಲ ಮುಂದುವರಿಸಿದ್ದ ಮಮತಾ ಮತ್ತು ಕೇಜ್ರಿವಾಲ್ ಕಾಂಗ್ರೆಸ್ ಅನ್ನು ಮತ್ತೆ ದೂರವಿಟ್ಟಿದ್ದಾರೆ. ಈ ನಡುವೆ, ಅಧಿಕಾರಕ್ಕೆ ಬಂದರೆ ದೇಶಾದ್ಯಂತ ಜಾತಿ ಜನಗಣತಿ ಎಂದು ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಪ್ರತಿಪಾದಿಸುತ್ತಿರುವ ರಾಹುಲ್ ಒಬ್ಬಂಟಿಯಾಗಿದ್ದಾರೆ.
ಪ್ರಜಾಸತ್ತೆಯನ್ನು ಉಳಿಸುವುದಕ್ಕಾಗಿ ಒಗ್ಗಟ್ಟು ಎಂದವರೆಲ್ಲರೂ, ಮತ್ತೆ ತಮ್ಮ ತಮ್ಮದೇ ದ್ವೀಪದಲ್ಲಿ ಸೇರಿಕೊಂಡಂತಾಗಿರುವ ಈ ಹೊತ್ತಿನಲ್ಲಿ,
ರಾಹುಲ್ ನ್ಯಾಯ ಯಾತ್ರೆ ಮಹಾರಾಷ್ಟ್ರ ಮುಟ್ಟುವ ಹೊತ್ತಿಗೆ ಮತ್ತೂ ಏನೇನಾಗಲಿದೆ?. ಇಂಡಿಯಾ ಮೈತ್ರಿಕೂಟದ ಬೇರೆ ಯಾವ ಯಾವ ನಾಯಕರ ಮೇಲೆ ಬಿಜೆಪಿ ಕಣ್ಣಿದೆ ?. ಅವರನ್ನು ತನ್ನತ್ತ ಸೆಳೆಯಲು ಅಥವಾ ಅವರು ಇಂಡಿಯಾ ಕೂಟವನ್ನು ಬಿಡುವಂತೆ ಮಾಡಲು ಅದರ ಬತ್ತಳಿಕೆಯಲ್ಲಿ ಇರುವ ಪ್ಲ್ಯಾನ್ ಯಾವುದು ?.
ಬಿಜೆಪಿ ವಿರುದ್ಧದ ಇಂಡಿಯಾ ಮೈತ್ರಿಕೂಟದ ಒಗ್ಗಟ್ಟಿನ ಹೋರಾಟದ ಕನಸು ಯಾರ ಬೊಗಸೆಯಲ್ಲಿದೆ ಈಗ?. ತನ್ನೊಂದಿಗೆ ಇರುವ ಇತರ ಪಕ್ಷಗಳನ್ನು ಉಳಿಸಿಕೊಂಡು ಆ ಕನಸನ್ನು ಜೋಪಾನ ಮಾಡುವ ತಾಕತ್ತು ಕಾಂಗ್ರೆಸ್ಗೆ ಇದೆಯೆ?.
ಗೊತ್ತಿಲ್ಲ. ಕಾದು ನೋಡಬೇಕು.