ರಾಜ್ಯಸಭೆ ಚುನಾವಣೆ : ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಅಚ್ಚರಿಯ ಬೆಳವಣಿಗೆ
ರಾಜ್ಯಸಭೆ ಚುನಾವಣೆ ಕುತೂಹಲಕ್ಕೆ ಎಡೆ ಮಾಡಿದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಗುರುವಾರ ನಡೆದಿರುವ ಅಚ್ಚರಿಯ ಬೆಳವಣಿಗೆಯೇ ಇಂಥದೊಂದು ಕುತೂಹಲಕ್ಕೆ ಕಾರಣ. ರಾಜ್ಯಸಭೆಯ 4 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ 5ನೇ ಅಭ್ಯರ್ಥಿಯಾಗಿ ಉದ್ಯಮಿ, ಮಾಜಿ ರಾಜ್ಯಸಭಾ ಸದಸ್ಯ ಡಿ ಕುಪೇಂದ್ರ ರೆಡ್ಡಿ ಕಣಕ್ಕಿಳಿದಿದ್ದಾರೆ. ಅವರನ್ನು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ.
ಕುಪೇಂದ್ರ ರೆಡ್ಡಿಯವರನ್ನು ಕಣಕ್ಕಿಳಿಸುವ ನಿರ್ಧಾರ ಬುಧವಾರ ಮಧ್ಯಾಹ್ನದವರೆಗೂ ಇರಲಿಲ್ಲ. ಅನಂತರದ ಬೆಳವಣಿಗೆಯಲ್ಲಿ ಈ ನಿರ್ಧಾರ ಕೈಗೊಳ್ಳುವ ಮೂಲಕ ಕಾಂಗ್ರೆಸ್ ಅನ್ನು ಆತಂಕದಲ್ಲಿ ಬೀಳಿಸಲಾಗಿದೆ. ಯಾವ ಲೆಕ್ಕಾಚಾರ ಇದರ ಹಿಂದೆ ಇದೆ?. ಅಗತ್ಯ ಸಂಖ್ಯಾ ಬಲದ ಕೊರತೆಯ ನಡುವೆಯೂ 5ನೇ ಅಭ್ಯರ್ಥಿಯನ್ನು ಎನ್ಡಿಎ ಮೈತ್ರಿಕೂಟ ಕಣಕ್ಕಿಳಿಸಿರುವುದು ಕಾಂಗ್ರೆಸ್ ಮತಗಳನ್ನು ಒಡೆಯಲಿದೆಯೆ?. ಕಾಂಗ್ರೆಸ್ನಿಂದ ಒಂದು ಸ್ಥಾನವನ್ನು ಕಿತ್ತುಕೊಳ್ಳುವ ತಂತ್ರಗಾರಿಕೆಯ ಭಾಗವಾಗಿ ಈ ಆಟ ಆಡಲಾಗಿದೆಯೆ?. ಲೋಕಸಭೆ ಚುನಾವಣೆಗೆ ಮೊದಲು ಬಿಜೆಪಿ-ಜೆಡಿಎಸ್ ಮೈತ್ರಿಗೆ ಇದೊಂದು ಪರೀಕ್ಷೆಯಾಗಲಿದೆಯೆ?
ವಿಧಾನಸಭೆಯಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕರ್ನಾಟಕದ ನಾಲ್ಕು ಸದಸ್ಯರ ಅವಧಿ ಏಪ್ರಿಲ್ ಮೊದಲ ವಾರ ಮುಗಿಯಲಿದ್ದು. ಅದರೊಳಗೆ ನಾಲ್ವರು ಸದಸ್ಯರನ್ನು ಗೆಲ್ಲಿಸಬೇಕಿದೆ. ಕಾಂಗ್ರೆಸ್‌ನ ಎಲ್.ಹನುಮಂತಯ್ಯ, ಜಿ.ಸಿ.ಚಂದ್ರಶೇಖರ್, ನಾಸಿರ್ ಹುಸೇನ್ ಹಾಗೂ ಬಿಜೆಪಿಯ ರಾಜೀವ್ ಚಂದ್ರಶೇಖರ್ ಅವಧಿ ಮುಗಿಯಲಿದೆ.
ರಾಜೀವ್ ಚಂದ್ರಶೇಖರ್ ಬದಲಿಗೆ ಬಿಜೆಪಿಯಿಂದ ನಾರಾಯಣ ಸಾ ಭಾಂಡಗೆ ಅವರನ್ನು ಕಣಕ್ಕಿಳಿಸಲಾಗಿದೆ. ಕಾಂಗ್ರೆಸ್‌ನಲ್ಲಿ ಹನುಮಂತಯ್ಯ ಬದಲಿಗೆ ಕಾಂಗ್ರೆಸ್ ಖಜಾಂಚಿ ಹಾಗೂ ದೆಹಲಿ ಮೂಲದ ಅಜಯ್ ಮಾಕನ್ ಅವರಿಗೆ ಅವಕಾಶ ಮಾಡಿಕೊಡಲಾಗಿದ್ದು, ಚಂದ್ರಶೇಖರ್, ನಾಸಿರ್ ಹುಸೇನ್ ಮರು ಆಯ್ಕೆ ಬಯಸಿದ್ದಾರೆ.
ಫೆಬ್ರವರಿ 27ರಂದು ಚುನಾವಣೆ ನಡೆಯಲಿದೆ. ಪ್ರತಿಯೊಬ್ಬರು ಗೆಲ್ಲಲು ಕನಿಷ್ಠ 45 ಮತಗಳನ್ನು ಪಡೆಯಲೇಬೇಕು. ಸದ್ಯದ 224 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 135, ಬಿಜೆಪಿ 66 ಹಾಗೂ ಜೆಡಿಎಸ್ 19 ಸದಸ್ಯ ಬಲ ಹೊಂದಿವೆ. ನಾಲ್ವರು ಪಕ್ಷೇತರರಾಗಿದ್ದಾರೆ. ಇದರಲ್ಲಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್, ಗೌರಿ ಬಿದನೂರು ಶಾಸಕ ಪುಟ್ಟಸ್ವಾಮಿಗೌಡ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ್ಧಾರೆ.
ಇದರಿಂದ ಕಾಂಗ್ರೆಸ್ ಬಲ 138ಕ್ಕೆ ಏರಿದೆ. ಆದರೆ ಕಾಂಗ್ರೆಸ್ ಮೂರು ಸ್ಥಾನ ಗೆಲ್ಲಲು 135 ಸದಸ್ಯ ಬಲ ಸಾಕು. ಇನ್ನು ಬಿಜೆಪಿಯಲ್ಲಿ ನಾರಾಯಣ ಸಾ ಭಾಂಡಗೆ ಅವರಿಗೆ 45 ಮತ ನೀಡಿದರೆ ಉಳಿದ 21 ಮತಗಳನ್ನು ಮೈತ್ರಿ ಅಭ್ಯರ್ಥಿಗೆ ನೀಡಬಹುದು.
ಜೆಡಿಎಸ್‌ನ ಬಳಿಯಿರುವ 19 ಮತಗಳು ಸೇರಿ 40 ಆಗಲಿವೆ. ಪಕ್ಷೇತರ ಜನಾರ್ದನ ರೆಡ್ಡಿ ಬಿಜೆಪಿಗೆ ಬೆಂಬಲಿಸಿರುವುದರಿಂದ 41 ಮತಗಳು ಎಂದು ಲೆಕ್ಕ ಹಾಕಿದರೂ, ಇನ್ನೂ 4 ಮತಗಳ ಕೊರತೆಯಾಗಲಿದೆ. ಕಾಂಗ್ರೆಸ್ ಸದಸ್ಯರಿಂದ ಅಡ್ಡ ಮತದಾನ ಮಾಡಿಸಿದರೆ ಗೆಲ್ಲಿಸಬಹುದು ಎನ್ನುವುದು ಮೈತ್ರಿ ಲೆಕ್ಕಾಚಾರ. ಈ ಬೆಳವಣಿಗೆಯಿಂದ ಸಹಜವಾಗಿ ಆತಂಕ ಮೂಡಿರುವುದು ಕಾಂಗ್ರೆಸ್ ಪಾಳಯದಲ್ಲಿ.
ಕುಪೇಂದ್ರ ರೆಡ್ಡಿ ಗೆಲ್ಲಬಹುದೆ ಎಂಬ ವಿಚಾರದಲ್ಲಿ ಕುಮಾರಸ್ವಾಮಿಯವರಿಗೇ ಅಷ್ಟು ವಿಶ್ವಾಸವಿದ್ದ ಹಾಗಿಲ್ಲ. ಬಿಜೆಪಿಯ ರಾಷ್ಟ್ರೀಯ ನಾಯಕರು ಮತ್ತು ರಾಜ್ಯ ಘಟಕದ ನಾಯಕರ ಸಲಹೆಯಂತೆ ಅಭ್ಯರ್ಥಿ ಕಣಕ್ಕಿಳಿಸಲಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಕೊರತೆಯಿರುವ ಮತಗಳ ವಿಚಾರ ಬಗೆಹರಿಯುವುದೇನಿದ್ದರೂ ಮತದಾನದ ವೇಳೆಯೇ. ಈ ನಡುವೆ, ಮೈತ್ರಿಗೆ ಜೆಡಿಎಸ್ನೊಳಗೇ ಅಸಮಾಧಾನವಿದೆ. ಜೆಡಿಎಸ್ ಶಾಸಕ ಶರಣ್ ಗೌಡ ಕುಂದಕೂರ್ ಮೈತ್ರಿಯನ್ನು ವಿರೋಧಿಸಿದ್ದು, ಕುಪೇಂದ್ರ ರೆಡ್ಡಿಗೆ ಮತದಾನ ಮಾಡುವುದು ಅನುಮಾನ ಎನ್ನಲಾಗುತ್ತಿದೆ. ಇನ್ನು, ಅಡ್ಡಮತಗಳ ಅಪಾಯ ಎದುರಿಸುವ ಆತಂಕದಲ್ಲಿರುವ ಕಾಂಗ್ರೆಸ್, ರಣತಂತ್ರ ರೂಪಿಸುವುದರಲ್ಲಿ ನಿರತವಾಗಿದೆ.
ಬಿಜೆಪಿಯಲ್ಲೂ ಅಸಮಾಧಾನಗೊಂಡಿರುವವರು ಇದ್ದಾರೆ ಎಂದು ಕಾಂಗ್ರೆಸ್ ಲೆಕ್ಕ ಹಾಕುತ್ತಿದೆ. ಬಿಜೆಪಿಯ ಎಸ್ ಟಿ ಸೋಮಶೇಖರ್, ಶಿವರಾಮ ಹೆಬ್ಬಾರ್, ಹಾಗೆಯೇ ಜೆಡಿಎಸ್‌ನ ಶರಣಗೌಡ ಕುಂದಕೂರ್ ಅವರ ಮತಗಳನ್ನು ಸೆಳೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಇದು ಚುನಾವಣೆ ಬಗೆಗಿನ ಕುತೂಹಲವನ್ನು ಹೆಚ್ಚಿಸಿದೆ.
ಆತ್ಮಸಾಕ್ಷಿಯ ಮತಗಳು ಎಂಬುದರ ವಿಚಾರ ಕೂಡ ಚರ್ಚೆಯಾಗತೊಡಗಿದೆ. ಕುಪೇಂದ್ರ ರೆಡ್ಡಿ ಅವರಿಗೆ ಎಲ್ಲ ಪಕ್ಷಗಳಲ್ಲೂ ಮಿತ್ರರಿದ್ದು, ಆತ್ಮಸಾಕ್ಷಿಯ ಮತಗಳು ಬೀಳಲಿವೆ ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಹೇಳಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟಿರುವ ಡಿಕೆ ಶಿವಕುಮಾರ್, ನಮಗೂ ಎಲ್ಲ ಪಕ್ಷಗಳಲ್ಲೂ ಸ್ನೇಹಿತರಿದ್ದಾರೆ. ಹಾಗಾಗಿ ನಮಗೂ ಆತ್ಮಸಾಕ್ಷಿಯ ಮತಗಳು ಬೀಳಲಿವೆ ಎಂದಿದ್ದಾರೆ.
ಇನ್ನು ಕುಪೇಂದ್ರ ರೆಡ್ಡಿಯವರನ್ನು ಗೆಲ್ಲಿಸುವ ವಿಚಾರವಾಗಿ ಮೈತ್ರಿ ಪಾಳಯದಲ್ಲಿ ಆತ್ಮವಿಶ್ವಾಸದ ಮಾತುಗಳು ಕೇಳಿಬಂದಿವೆ. ಎರಡೂ ಪಕ್ಷಗಳು ಒಟ್ಟಾಗಿ ಗೆಲುವಿಗೆ ತಂತ್ರ ರೂಪಿಸುವುದಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಬಿಜೆಪಿ ಅಭ್ಯರ್ಥಿ ಜೊತೆಗೆ ಮೈತ್ರಿ ಅಭ್ಯರ್ಥಿಯೂ ಗೆಲ್ಲುವುದು ಖಚಿತ ಎನ್ನುತ್ತಿದ್ದಾರೆ. ಅಂತೂ ರಾಜ್ಯದಲ್ಲಿ ಹೊಸದೊಂದು ರಾಜಕೀಯ ಆಟ ಶುರುವಾಗಿದೆ.