ಮುಸ್ಲಿಮರಿಗೆ ಮೀಸಲಾತಿ ನೀಡಿದ್ದು ದೇವೇಗೌಡರಲ್ಲ

Update: 2024-06-28 07:19 GMT
Editor : Ismail | Byline : ಶಿವಸುಂದರ್

ಆರ್ಥಿಕ-ಸಾಮಾಜಿಕ ಹಿಂದುಳಿದಿರುವಿಕೆ

ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಅಂದಾಜಿಸಿದ ನಂತರ ಸಾಮಾಜಿಕ-ಆರ್ಥಿಕ ಹಿಂದುಳಿದಿರುವಿಕೆಯನ್ನು ಅಂದಾಜಿಸುವ ಚಿನ್ನಪ್ಪರೆಡ್ಡಿ ಆಯೋಗ ಬೆಂಗಳೂರಿನ ISEC ಸಂಸ್ಥೆಯ ಪ್ರೊ. ಜಿ. ತಿಮ್ಮಯ್ಯ ಅವರ ವರದಿಯನ್ನು ಪ್ರಮಾಣವಾಗಿ ಬಳಸುತ್ತದೆ. ಅದರ ಪ್ರಕಾರ 1974-75ರ ಸುಮಾರಿಗೆ ಶೇ. 56.5ರಷ್ಟು ಮುಸ್ಲಿಮರು ಬಡತನ ರೇಖೆಗಿಂತ ಕೆಳಗಿದ್ದರು. ಒಟ್ಟಾರೆ 102 ಜಾತಿ-ಸಮುದಾಯಗಳಲ್ಲಿ ಮುಸ್ಲಿಮರಿಗಿಂತ ಹೆಚ್ಚಿನ ಬಡತನವನ್ನು ಅನುಭವಿಸುತ್ತಿದ್ದದ್ದು ಪರಿಶಿಷ್ಟ ಜಾತಿಗಳು (ಶೇ. 58.4) ಮತ್ತು ಪರಿಶಿಷ್ಟ ಬುಡಕಟ್ಟುಗಳು (ಶೇ. 66.3) ಮಾತ್ರ. ಅಂದರೆ ಮುಸ್ಲಿಮರ ಆರ್ಥಿಕ- ಸಾಮಾಜಿಕ ಪರಿಸ್ಥಿತಿ ದಲಿತರಿಗೆ ಅತ್ಯಂತ ಸಮೀಪವಾಗಿತ್ತು. ಸಮೀಪವಾಗಿದೆ!

ಇದಲ್ಲದೆ ಸರಕಾರದ ಸೇವೆಗಳಲ್ಲಿ 1988ರಲ್ಲಿದ್ದ ಸಮುದಾಯವಾರು ಪ್ರಾತಿನಿಧ್ಯವನ್ನು ಸಹ ಚಿನ್ನಪ್ಪರೆಡ್ಡಿ ಆಯೋಗ ಪರಿಶೀಲಿಸಿದೆ.

ಸರಕಾರದ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳಲ್ಲಿ ಶೇ. 3.4ರಷ್ಟಿರುವ ಬ್ರಾಹ್ಮಣರು ಶೇ. 69.3ರಷ್ಟಿದ್ದರೆ, ಒಕ್ಕಲಿಗರು ಶೇ. 12.4, ಲಿಂಗಾಯತರು ಶೇ. 9.9, ಪರಿಶಿಷ್ಟ ಜಾತಿಗಳ ಪ್ರಮಾಣ ಶೇ. 3.8ರಷ್ಟಿದ್ದರೆ ಮುಸ್ಲಿಮರ ಪ್ರಮಾಣ ಕೇವಲ ಶೇ. 2.9 ಮಾತ್ರ.

ಕರ್ನಾಟಕದ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಗ್ರೂಪ್ I, II, III ಹುದ್ದೆಗಳಲ್ಲಿ ಶೇ. 17ರಷ್ಟು ಬ್ರಾಹ್ಮಣರು, ಶೇ. 25 ಲಿಂಗಾಯತರು, ಶೇ. 17.5ರಷ್ಟು ಒಕ್ಕಲಿಗರು, ಶೇ. 8.3ರಷ್ಟು ಪರಿಶಿಷ್ಟ ಜಾತಿಗಳು.

ಮುಸ್ಲಿಮರು ಶೇ. 4.2ರಷ್ಟು ಮಾತ್ರ!

ಈ ಎಲ್ಲಾ ಕಾರಣಗಳಿಂದ ನ್ಯಾ. ಚಿನ್ನಪ್ಪರೆಡ್ಡಿ ಆಯೋಗವು ಹೀಗೆ ಅಭಿಪ್ರಾಯ ಪಡುತ್ತದೆ:

‘‘The picture presented by the Muslim Community as a whole is that of a Socially and Educationally Backward Class’’

ಎಂದರೆ

‘‘ಒಟ್ಟಾರೆ ಈ ಅಧ್ಯಯನವು ಮುಸ್ಲಿಮರು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗವಾಗಿದ್ದಾರೆ ಎಂಬ ಚಿತ್ರಣವನ್ನು ನೀಡುತ್ತದೆ ಎಂದು ಘೋಷಿಸುತ್ತದೆ.’’

ಮತ್ತು ಒಟ್ಟಾರೆ ಹಿಂದುಳಿದ ಜಾತಿಗಳನ್ನು ಮೂರು ಪ್ರವರ್ಗಗಳಾಗಿ ಚಿನ್ನಪ್ಪರೆಡ್ಡಿ ಆಯೋಗವು ವಿಂಗಡಿಸಿ ಮುಸ್ಲಿಮರನ್ನು IIನೇ ಪ್ರವರ್ಗದಲ್ಲಿ ಸೇರಿಸಿತು. ಆ ಪ್ರವರ್ಗದಲ್ಲಿ ಬೌದ್ಧರನ್ನು ಕೂಡ ಸೇರಿಸಿತು.

ವೀರಪ್ಪ ಮೊಯ್ಲಿ ಸರಕಾರದ 2-ಬಿ ಮೀಸಲಾತಿ ಆದೇಶ

ನ್ಯಾ. ಚಿನ್ನಪ್ಪರೆಡ್ಡಿಯವರ ಆಯೋಗವು 1990ರಲ್ಲೇ ತನ್ನ ವರದಿಯನ್ನು ನೀಡಿತ್ತು. ಆದರೆ ಆ ವೇಳೆಗಾಗಲೇ ದೇಶಾದ್ಯಂತ ಮಂಡಲ್ ಆಯೋಗದ ವಿರುದ್ಧ ಮೇಲ್ಜಾತಿಗಳ ಪ್ರತಿರೋಧದಿಂದ ದೇಶ ಕುದಿಯುತ್ತಿತ್ತು. ಬಿಜೆಪಿಯು ಈ ಮಂಡಲ್ ಆಯೋಗದ ವರದಿಯ ವಿರುದ್ಧ ಕಮಂಡಲದ ರಾಮರಥಯಾತ್ರೆ ಶುರು ಮಾಡಿತ್ತು ಹಾಗೂ 1991ರಲ್ಲಿ ಲೋಕಸಭೆಗೆ ಮಧ್ಯಂತರ ಚುನಾವಣೆಯೂ ನಡೆಯಿತು. ಈ ರಾಜಕೀಯ ಕೋಲಾಹಲದ ಹಿನ್ನೆಲೆಯಲ್ಲಿ ಆಗಿನ ಕಾಂಗ್ರೆಸ್ ಸರಕಾರ ಚಿನ್ನಪ್ಪರೆಡ್ಡಿ ವರದಿಯನ್ನು ನನೆಗುದಿಯಲ್ಲಿ ಇಟ್ಟುಬಿಟ್ಟಿತು. ಇದರ ಜೊತೆಗೆ 1989ರಲ್ಲಿ ಕರ್ನಾಟಕದಲ್ಲಿ ಜನತಾ ಪಕ್ಷವನ್ನು ಅಭೂತಪೂರ್ವ ಅಂತರದೊಂದಿಗೆ ಸೋಲಿಸಿ ಭರ್ಜರಿ ಬಹುಮತದೊಂದಿಗೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದ್ದರೂ ಒಳ ಜಗಳ ಮತ್ತು ಬಣ ರಾಜಕಾರಣದಿಂದ ಮುಂದೊಡಗನ್ನು ಕಳೆದುಕೊಂಡಿತ್ತು. 1989-1994ರ ಅವಧಿಯಲ್ಲಿ ಕರ್ನಾಟಕದಲ್ಲಿ ಮೂವರು ಮುಖ್ಯಮಂತ್ರಿಗಳು ಬದಲಾದರು. ವೀರೇಂದ್ರ ಪಾಟೀಲ್, ಬಂಗಾರಪ್ಪ ಮತ್ತು ವೀರಪ್ಪ ಮೊಯ್ಲಿ.

1992-94ರ ತನಕ ಮುಖ್ಯಮಂತ್ರಿಯಾಗಿದ್ದ ವೀರಪ್ಪ ಮೊಯ್ಲಿಯವರು 1993ರ ಕೊನೆಯ ವೇಳೆಗೆ ಚಿನ್ನಪ್ಪರೆಡ್ಡಿ ವರದಿಯನ್ನು ಜಾರಿಗೊಳಿಸುವ ಕ್ರಮಗಳಿಗೆ ಮುಂದಾದರು. ಆ ವೇಳೆಗಾಗಲೇ ಇಂದ್ರಾ ಸಹಾನಿ ಪ್ರಕರಣದಲ್ಲಿ ಮಂಡಲ್ ಆಯೋಗದ ಸಿಂಧುತ್ವವನ್ನು ಎತ್ತಿಹಿಡಿದಿದ್ದ ಸುಪ್ರೀಂ ಕೋರ್ಟಿನ ಒಂಭತ್ತು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಒಟ್ಟಾರೆ ಮೀಸಲಾತಿಯ ಮೇಲ್ಮಿತಿಯನ್ನು ಶೇ. 50ಕ್ಕೆ ಸೀಮಿತಗೊಳಿಸಿತ್ತು.

ಈ ಎಲ್ಲಾ ಹಿನ್ನೆಲೆಯಲ್ಲಿ 1994ರ ಸೆಪ್ಟಂಬರ್ 17ರಂದು ವೀರಪ್ಪ ಮೊಯ್ಲಿ ಸರಕಾರ ಒಂದು ಸರಕಾರಿ ಆದೇಶವನ್ನು ಹೊರಡಿಸಿ ಈಗಲೂ ಜಾರಿಯಲ್ಲಿರುವ ಹಿಂದುಳಿದ ವರ್ಗಗಳ ಮೀಸಲಾತಿ ಸೂತ್ರವನ್ನು ಜಾರಿಗೊಳಿಸಿತು. ಈ ಸೂತ್ರದ ಭಾಗವಾಗಿಯೇ ಮುಸ್ಲಿಮರಿಗೆ 2-ಬಿ ಪ್ರವರ್ಗದಲ್ಲಿ ಶೇ. 4ರಷ್ಟು ಮೀಸಲಾತಿಯನ್ನು ಕಲ್ಪಿಸಲಾಯಿತು.

ಆಸಕ್ತರು ಈ ಆದೇಶವನ್ನು ಈ ಕೆಳಗಿನ ವೆಬ್ ವಿಳಾಸದಲ್ಲಿ ಪಡೆದುಕೊಳ್ಳಬಹುದು :

https://kscbc.karnataka.gov.in/storage/pdf-

1994ರ ನವೆಂಬರ್ - ಡಿಸೆಂಬರ್ನಲ್ಲಿ ರಾಜ್ಯ ಶಾಸನ ಸಭೆಗೆ ಚುನಾವಣೆ ನಡೆದು ಕಾಂಗ್ರೆಸ್ ಸೋತು ದೇವೇಗೌಡರ ನೇತೃತ್ವದ ಜನತಾ ದಳ ಸರಕಾರ ಅಧಿಕಾರಕ್ಕೆ ಬಂತು. ದೇವೇಗೌಡರ ಸರಕಾರವೂ ವೀರಪ್ಪ ಮೊಯ್ಲಿ ಸರಕಾರದ ಮೀಸಲಾತಿ ಸೂತ್ರವನ್ನೇ ಮುಂದುವರಿಸಿತು. 2023ರಲ್ಲಿ ಬೊಮ್ಮಾಯಿ ಸರಕಾರ ಈ ಸೂತ್ರವನ್ನು ರದ್ದುಗೊಳಿಸುವ ತನಕ ಎಲ್ಲಾ ಸರಕಾರಗಳೂ 1994ರ ಸೂತ್ರವನ್ನೇ ಮುಂದುವರಿಸಿಕೊಂಡು ಬಂದಿದ್ದವು. ಕಾಲಕಾಲಕ್ಕೆ ಕೆಲವು ಜಾತಿಗಳ ಪ್ರವರ್ಗ ಬದಲಾವಣೆ ಮತ್ತು ಸೇರ್ಪಡೆಗಳಾಗಿವೆಯೇ ವಿನಾ ಈವರೆಗೆ 1994ರ ವೀರಪ್ಪ ಮೊಯ್ಲಿ ಸರಕಾರದ ಸೂತ್ರವೇ ಜಾರಿಯಲ್ಲಿದೆ.

ಇದರ ಅರ್ಥ ಕಾಂಗ್ರೆಸ್ ಸರಕಾರಗಳು ಮುಸ್ಲಿಮರ ರಕ್ಷಣೆಗೆ ಕಟಿಬದ್ಧವಾಗಿ ನಿಂತಿವೆ ಎಂತೇನೂ ಅಲ್ಲ. 2024ರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮುಸ್ಲಿಮ್ ಅಥವಾ ಸೆಕ್ಯುಲರಿಸಂ ಪದವೂ ಇಲ್ಲದಿರುವುದು, ಮುಸ್ಲಿಮರಿಗೆ ಪಕ್ಷದಲ್ಲಿ ಮತ್ತು ಸರಕಾರದಲ್ಲಿ ಸರಿ ಪ್ರಮಾಣದ ಪ್ರಾತಿನಿಧ್ಯ ಕೊಡದಿರುವುದು, ಇನ್ನಿತರ ಹತ್ತು ಹಲವು ಜ್ವಲಂತ ಉದಾಹರಣೆಗಳನ್ನು ನೀಡಬಹುದು.

ಅದೇನೇ ಇದ್ದರೂ ಮುಸ್ಲಿಮರಿಗೆ ಹಿಂದುಳಿದ ವರ್ಗದ ಮೀಸಲಾತಿಯಡಿ ಪ್ರವರ್ಗ 2-ಬಿಯಡಿ ಶೇ.4ರಷ್ಟು ಮೀಸಲಾತಿ ಕಲ್ಪಿಸಿದ್ದು ಮಾತ್ರ ವೀರಪ್ಪ ಮೊಯ್ಲಿ ನೇತೃತ್ವದ ಕಾಂಗ್ರೆಸ್ ಸರಕಾರವೇ ವಿನಾ ದೇವೇಗೌಡರಲ್ಲ. ಅವರು ಅದೇ ಸೂತ್ರವನ್ನು ಮುಂದುವರಿಸಿದರು ಅಷ್ಟೆ.

ಈಗಲಾದರೂ ಮುಸ್ಲಿಮ್ ಮೀಸಲಾತಿಯ ಬಗ್ಗೆ ಇರುವ ಮಿಥ್ಯ ಕಥನಗಳು ನಿಲ್ಲಬಹುದೇ?

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಶಿವಸುಂದರ್

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!