ಅಯೋಧ್ಯೆಯಲ್ಲಿ ನಡೆಯೋದು ಆರೆಸ್ಸೆಸ್, ಬಿಜೆಪಿ ಕಾರ್ಯಕ್ರಮ: ಕಾಂಗ್ರೆಸ್

Update: 2024-02-09 04:49 GMT
Editor : Ismail | Byline : ಆರ್. ಜೀವಿ

ಕಡೆಗೂ ಕಾಂಗ್ರೆಸ್ ಒಂದು ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಕ್ಷದ ನಾಯಕರು ಭಾಗವಹಿಸುತ್ತಿಲ್ಲ ಎಂದು ಅದು ಖಚಿತಪಡಿಸಿದೆ. ಒಂದು ವಿಚಾರವಂತೂ ನಿಜ. ಬಿಜೆಪಿಗೆ ಕೂಡ ಇದೇ ಬೇಕಿತ್ತು. ಕಾಂಗ್ರೆಸ್ ಹಿಂದೂ ವಿರೋಧಿ ಮತ್ತು ರಾಮನ ವಿರೋಧಿ ಎಂದು ಬಿಂಬಿಸುವುದೇ ಅದರ​ ಮುಖ್ಯ ಕೆಲಸ.

ಒಂದು ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರ್ಧಾರ ತೆಗೆದುಕೊಂಡಿದ್ದರೂ ಅದಕ್ಕೆ ಕಾಂಗ್ರೆಸ್​ ಅನ್ನು ಗುರಿ ಮಾಡಿ ಮಾತಾಡಲು ದಾರಿಯಿದ್ಧೇ ಇರುತ್ತಿತ್ತು ಎಂಬ ಮಾತು ಬೇರೆ. ಆದರೆ ಕಾಂಗ್ರೆಸ್ ಬಹಳ ಸ್ಪಷ್ಟವಾದ ನಿಲುವನ್ನು ತಳೆದಿದೆ. ಬಿಜೆಪಿ ಮತ್ತು ಆರ್ಎಸ್ಎಸ್ ಕಾರ್ಯಕ್ರಮವಾಗಿರುವುದರಿಂದ ಪಾಲ್ಗೊಳ್ಳುತ್ತಿಲ್ಲ ಎಂದು ಸ್ಪಷ್ಟ ಕಾರಣವನ್ನೂ ಕೊಟ್ಟಿದೆ.

ಕಾಂಗ್ರೆಸ್ ಹೇಳಿಕೆಯಲ್ಲಿನ ಅಂಶಗಳನ್ನು ಗಮನಿಸಬೇಕು:

1.ರಾಮನನ್ನು ದೇಶದ ಕೋಟ್ಯಂತರ ಮಂದಿ ಪೂಜಿಸುತ್ತಾರೆ. ಧರ್ಮ ಎನ್ನುವುದು ವೈಯಕ್ತಿಕ ವಿಚಾರ.

2.ಅಯೋಧ್ಯೆಯ ಮಂದಿರವನ್ನು ಬಿಜೆಪಿ ಹಾಗೂ ಆರ್ಎಸ್ಎಸ್ ರಾಜಕೀಯ ವಿಷಯವನ್ನಾಗಿ ಮಾಡಿಕೊಂಡಿವೆ.

3.ಅಪೂರ್ಣಗೊಂಡಿರುವ ದೇಗುಲವನ್ನು ಚುನಾವಣಾ ಲಾಭಕ್ಕಾಗಿ ಬಿಜೆಪಿ ಹಾಗೂ ಆರ್ಎಸ್ಎಸ್ ನಾಯಕರು ಉದ್ಘಾಟಿಸುತ್ತಿದ್ಧಾರೆ.

4.ಕೋಟ್ಯಂತರ ರಾಮಭಕ್ತರ ಭಾವನೆಗಳನ್ನು ಗೌರವಿಸುತ್ತ, 2019ರಲ್ಲಿ ರಾಮಮಂದಿರ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ಕಾಂಗ್ರೆಸ್ ಬದ್ಧವಿದೆ.

5.ಆರ್ಎಸ್ಎಸ್ ಹಾಗೂ ಬಿಜೆಪಿ ಕಾರ್ಯಕ್ರಮದ ಆಹ್ವಾನವನ್ನು ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ಅಧೀರ್ ರಂಜನ್ ಚೌಧರಿ ಅವರು ಗೌರವಪೂರ್ವಕವಾಗಿ ತಿರಸ್ಕರಿಸಿದ್ದಾರೆ.

ಕಾಂಗ್ರೆಸ್ನ ಈ ನಿರ್ಧಾರ ಈಗಿನ ಸನ್ನಿವೇಶದಲ್ಲಿ ಪಡೆಯುತ್ತಿರುವ ಮಹತ್ವವೇನು?. ಈ ನಿರ್ಧಾ​ರದ ಹಿಂದೆ ಇರುವ ಸೈದ್ಧಾಂತಿಕ ಸ್ಪಷ್ಟತೆ ಎಂತಹದ್ದು?. ಇದನ್ನು ಸ್ಪಷ್ಟಪಡಿಸಿಕೊಳ್ಳಬೇಕಾದರೆ, ರಾಜೀವ್ ಗಾಂಧಿ ಅವಧಿಯ ಸಂದರ್ಭವನ್ನು ನೆನಪು ಮಾಡಿಕೊಳ್ಳಬೇಕಿದೆ. ಕಾಂಗ್ರೆಸ್ನಿಂದ ದೂರವಾಗುತ್ತಿದ್ದ ಹಿಂದೂಗಳನ್ನು ಸಮಾಧಾನ ಪಡಿಸಲು ಒಂದು ದಾರಿಯಾಗಿ ಅವರು ಮುಚ್ಚಿದ್ದ ರಾಮಮಂದಿರದ ಬೀಗ ತೆಗೆಸಿ ಪೂಜೆಗೆ ಅವಕಾಶ ಮಾಡಿಕೊಟ್ಟಿದ್ದರು. ​ಮೊನ್ನೆ ಕರ್ನಾಟಕ ಕಾಂಗ್ರೆಸ್ ಸ್ವತಃ ಹೆಮ್ಮೆಯಿಂದ ಹೇಳಿಕೊಂಡ ಹಾಗೆ ರಾಮ ಮಂದಿರದಲ್ಲಿ ವಿಶ್ವ ಹಿಂದೂ ಪರಿಷತ್ ಗೆ ಪೂಜೆಗೆ ಅವಕಾಶ ಮಾಡಿ ಕೊಟ್ಟಿದ್ದೇ ರಾಜೀವ್ ಗಾಂಧಿ.

ಆದರೆ ರಾಜಕಾರಣ ಅವರ ಲೆಕ್ಕಾಚಾರಕ್ಕೆ ವಿರುದ್ಧವಾಗಿ ನಡೆದು​ ಎಲ್ಲೆಲ್ಲಿಗೋ ತಲುಪಿ ಇವತ್ತಿನ ಈ ಸನ್ನಿವೇಶದವರೆಗೂ ಬಂದು ಮುಟ್ಟಿದೆ. ಅಂದು ಕಾಂಗ್ರೆಸ್ ತೆಗೆದುಕೊಂಡಿದ್ದ ನಿಲುವಿಗೂ, ಇಂದು ಕಾಂಗ್ರೆಸ್ ತೆಗೆದುಕೊಂಡ ನಿಲುವಿಗೂ ಭಾರೀ ವ್ಯತ್ಯಾಸವಿದೆ. ಅವತ್ತಿನದು ಅನಿವಾರ್ಯವಾಗಿ ಧರ್ಮವನ್ನು ಬಳಸಿಕೊಳ್ಳುವ ರಾಜಕಾರಣವಾಗಿತ್ತು ಮತ್ತು ಇಂದು ಧರ್ಮವನ್ನು ಗೌರವಿಸುತ್ತಲೇ, ಅದು ರಾಜಕೀಯವಾಗಿರುವುದನ್ನು, ಒಂದು ಪಕ್ಷ ತನ್ನ ಕಾರ್ಯಕ್ರಮವಾಗಿ ಅದನ್ನು ಬಳಸಿಕೊಳ್ಳುತ್ತಿರುವುದನ್ನು ವಿರೋಧಿಸುವ ಘನತೆಯ ನಿಲುವಾಗಿ ಕಾಣಿಸುತ್ತಿದೆ.

ಮತ್ತು ಅದಕ್ಕಾಗಿಯೇ ಇವತ್ತಿನ ಸಾಮಾಜಿಕ ಮತ್ತು ರಾಜಕೀಯ ತಲ್ಲಣದ ಸಂದರ್ಭದಲ್ಲಿ ಅದು ಕಾಂಗ್ರೆಸ್ ತೆಗೆದುಕೊಂಡಿರುವ ಬಹಳ ಧೈರ್ಯದ ನಿಲುವಾಗಿದೆ. ಮಹತ್ವದ ಚುನಾವಣೆ ಎದುರಿಗಿರುವಾಗಲೂ ತನ್ನ ಸಾಮಾಜಿಕ​, ಸೈದ್ಧಾಂತಿಕ ಬದ್ಧತೆಯನ್ನು ಬಿಟ್ಟುಕೊಡದ ಧೈರ್ಯವನ್ನು ತೋರಿದೆ ಎಂಬ ಕಾರಣಕ್ಕಾಗಿ ಕಾಂಗ್ರೆಸ್ ಗಮನ ಸೆಳೆದಿದೆ.

ಡಿಸೆಂಬರ್ ಅಂತ್ಯದ ವೇಳೆಗೆ ಕಾಂಗ್ರೆಸ್ನ 139ನೇ ಸಂಸ್ಥಾಪನಾ ದಿನದ ಅಂಗವಾಗಿ ನಾಗ್ಪುರದಲ್ಲಿ ಏರ್ಪಡಿಸಿದ್ದ ಬೃಹತ್ ರ್ಯಾಲಿಯಲ್ಲಿಯೂ ಕಾಂಗ್ರೆಸ್ ತನ್ನ ಸಾಮಾಜಿಕ ಬದ್ಧತೆಯನ್ನು ಮತ್ತೆ ಸ್ಪಷ್ಟಪಡಿಸಿತ್ತು. ಈ ನಡುವೆಯೇ, ಅಯೋಧ್ಯೆ ಕಾರ್ಯಕ್ರಮದ ಆಹ್ವಾನ ಕಾಂಗ್ರೆಸ್ನ ಮೂವರು ​ಹಿರಿಯ ನಾಯಕರಿಗೆ ಬಂದಿತ್ತು.

ಕಾಂಗ್ರೆಸ್​ ಅನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವ ತನ್ನ ಉದ್ಧೇಶದ ಭಾಗವಾಗಿಯೇ ಬಿಜೆಪಿ ಅಯೋಧ್ಯೆ ಕಾರ್ಯಕ್ರಮದ ಆಹ್ವಾನವನ್ನು ನೀಡಿತ್ತು ಎಂಬುದರಲ್ಲಿ ​ಯಾವುದೇ ಅನುಮಾನವಿಲ್ಲ. ಎದುರಾಳಿಗಳ ಪಾಲಿಗೆ ರಾಜಕೀಯ ಸಂದಿಗ್ಧವನ್ನು ಸೃಷ್ಟಿಸಿ ಆಟ ನೋಡುವ ಚಾಳಿ ಅದರದು.

ಒಪ್ಪಿದರೂ ಕಷ್ಟ, ಒಪ್ಪದೇ ಇದ್ದರೂ ಸವಾಲುಗಳು ತಪ್ಪುವುದಿಲ್ಲ ಎಂಬ ಸಂದಿಗ್ಧತೆಯ ನಡುವೆಯೂ ಹೆಚ್ಚು ಹೊಯ್ದಾಟಗಳಿಲ್ಲದೆ ಕಾಂಗ್ರೆಸ್ ತನ್ನ ನಿರ್ಧಾರವನ್ನು ಪ್ರಕಟಿಸಿದೆ ಮತ್ತು ಅದರ ಪರಿಣಾಮವನ್ನು ಸವಾಲಾಗಿಯೇ ಸ್ವೀಕರಿಸಿದೆ. ರಾಮನ ಹೆಸರಿನ ಕಾರ್ಯಕ್ರಮದಲ್ಲಿ, ರಾಷ್ಟ್ರದ ಕಾರ್ಯಕ್ರಮ ಎಂದು ಬಿಂಬಿಸು​ತ್ತಾ ಬಿಜೆಪಿ ಮತ್ತು ಆರ್ಎಸ್ಎಸ್ ಮಾಡುತ್ತಿರುವುದು ತಮ್ಮ ರಾಜಕೀಯ ಕಾರ್ಯಕ್ರಮವನ್ನು ಮಾತ್ರ ಎಂದು ಕಾಂಗ್ರೆಸ್ ಬಹಳ ಸ್ಪಷ್ಟವಾಗಿಯೇ ಹೇಳಿದೆ.

ಕಾರ್ಯಕ್ರಮಕ್ಕೆ ಯಾರನ್ನು ಕರೆಯಬೇಕು, ಯಾರನ್ನು ಕರೆಯಬಾರದು ಎನ್ನುವಲ್ಲಿ ರಾಜಕಾರಣವಿದೆಯಲ್ಲವೆ?. ಅಂಬಾನಿ, ಅದಾನಿಗಳನ್ನು ಕರೆಯುವಲ್ಲಿ, ಸರ್ಕಾರಕ್ಕೆ ಬೇಕಿರುವಂತೆ ಮಾತನಾಡುವ ನಟರು, ಕಲಾವಿದರನ್ನು ಕರೆದಿರುವಲ್ಲಿ ರಾಜಕೀಯ ಇದೆಯಲ್ಲವೆ?. ಸರ್ಕಾರದ ತುತ್ತೂರಿಯಾಗಿರುವ ಪತ್ರಕರ್ತರನ್ನು ಮಾತ್ರ ಆಹ್ವಾನಿಸಿ, ಪ್ರಶ್ನಿಸುವ ಪತ್ರಕರ್ತರನ್ನು ದೂರವಿಟ್ಟಿರುವುದು ರಾಜಕೀಯವಲ್ಲವೆ?

ಅಡ್ವಾಣಿ, ಮುರಳಿ ಮನೋಹರ ಜೋಶಿಯವರನ್ನು ವಯಸ್ಸಿನ ನೆಪ ಮುಂದೆ ಮಾಡಿ ದೂರವಿಟ್ಟಿರುವುದರಲ್ಲಿ ಮಹಾ ರಾಜಕಾರಣವೇ ಇದೆಯೆಲ್ಲವೆ?

ಉದ್ಧವ್ ಠಾಕ್ರೆಯನ್ನು ಆಹ್ವಾನಿಸದಿರುವ ನಡೆ ರಾಜಕೀಯದ್ದೇ ಆಗಿದೆಯಲ್ಲವೆ?. ರಾಮನ ಹೆಸರಿನ ಕಾರ್ಯಕ್ರಮದಲ್ಲಿ ಇಷ್ಟೊಂದು ರಾಜಕೀಯ ನಡೆದಿದೆ​. ರಾಮನ ಪೂಜೆಯ ಹೆಸರಿನಲ್ಲಿನ ಈ ರಾಜಕೀಯದ ಹಿಂದೆ ಇರುವವರು ಯಾರು?. ಇವರ ಆತ್ಮವಂಚನೆಗೆ ಕೊನೆಯೇ ಇಲ್ಲವೆ? ದೇಶದ ಜನರನ್ನೂ ವಂಚಿಸುವ ರೀತಿಯಲ್ಲವೆ ಇದು?.

ರಾಮನ ಹೆಸರಲ್ಲಿ ಇಡೀ ದೇಶವನ್ನು ಬಿಜೆಪಿಮಯವಾಗಿಸುವ ಈ ಬಿಜೆಪಿ, ಆರ್ಎಸ್ಎಸ್ ರಾಜಕಾರಣ, ಅದೇ ಗುಂಗಿನಲ್ಲಿ ಜನರಿರುವಾಗಲೇ ಚುನಾವಣಾ ಪ್ರಚಾರ ಭಾಷಣಗಳೊಂದಿಗೆ ಮತ್ತೆ ಜನರನ್ನು ಎದುರುಗೊಳ್ಳಲಿದೆಯ​ಲ್ವಾ ?. ಈಗ ನಿಜಕ್ಕೂ ಸವಾಲುಗಳು ಇರುವುದು ಕಾಂಗ್ರೆಸ್ ಎದುರಿನಲ್ಲಿ. ಅದು ಈಗ ಹಿಂದೂ ವಿರೋಧಿ ಮತ್ತು ರಾಮನ ವಿರೋಧಿ ಎಂದು ಬಿಂಬಿಸುವವರ ಅಬ್ಬರ ಮತ್ತು ಕೋಲಾಹಲಗಳನ್ನು ಎದುರಿಸಬೇಕಾಗಿದೆ.

ಆ ಗದ್ದಲ ಮತ್ತು ಸುಳ್ಳು ಪ್ರಚಾರದ ನಡುವೆಯೇ ಅದು ಜನರ ಬಳಿಗೆ ಹೋಗಬೇಕಾಗಿದೆ. ಚುನಾವಣೆಯನ್ನು ಗೆಲ್ಲಲು ತಾನು ನೆಚ್ಚಿಕೊಂಡಿರುವ​ ಜಾತ್ಯತೀತ ಮೌಲ್ಯಗಳ ಮಹತ್ವವನ್ನು ಜನರಿಗೂ ಮನವರಿಕೆ ಮಾಡುವ ಕಷ್ಟವಂತೂ ಸಣ್ಣದಲ್ಲ. ಹಾಗೆ ನೋಡಿದರೆ, ರಾಮಮಂದಿರ​ ಕಾರ್ಯಕ್ರಮದ ವಿಚಾರದಲ್ಲಿ ​ದೇಶದ ​ಪ್ರಮುಖ ಹಿಂದೂ ಸ್ವಾಮೀಜಿಗಳು ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿದ್ಧಾರೆ.​

ಬಿಜೆಪಿ, ಆರೆಸ್ಸೆಸ್ ಹಾಗು ಪ್ರಧಾನಿ ಮೋದಿ ರಾಮ ಮಂದಿರ ಕಾರ್ಯಕ್ರಮವನ್ನು ಸಂಪೂರ್ಣವಾಗಿ ರಾಜಕೀಯ ಕಾರ್ಯಕ್ರಮ ಮಾಡಿದ್ದಾರೆಂದು ತೀವ್ರ ​ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂತಹ ಕಾರ್ಯಕ್ರಮಕ್ಕೆ ತಾವು ಹೋಗೋದೇ ಇಲ್ಲ ಎಂದು ಹೇಳಿದ್ದಾರೆ. ಹಾಗಿದ್ದೂ ಆ ಸ್ವಾಮೀಜಿಗಳು ರಾಮನ ವಿರೋಧಿಗಳಾಗುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಮೋದಿಯ ವಿರೋಧಿಗಳೂ ಆಗುವುದಿಲ್ಲ. ಆ ಆಪಾದನೆಯೇನಿದ್ದರೂ ಈಗ ಕಾಂಗ್ರೆಸ್ ಪಾಲಿಗೆ ಮಾತ್ರ.

ಇಬ್ಬರು ಸ್ವಾಮೀಜಿಗಳು ಹೇಳಿದ್ದನ್ನು ಇಲ್ಲಿ ಗಮನಿಸಬೇಕು. ಮೊದಲನೆಯದಾಗಿ, ಪುರಿಯ ಗೋವರ್ಧನಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಹೇಳಿಕೆ. ಆಚಾರ್ಯನ ಸ್ಥಾನವೇನಿದ್ದರೂ ಬ್ರಾಹ್ಮಣನಿಗೆ ಮಾತ್ರ ಎಂದು ಹೇಳಿದ್ದ ಸ್ವಾಮೀಜಿ ಇವರು. ಪ್ರಧಾನಿ ಮೋದಿ ರಾಮನ ಪ್ರತಿಮೆಯನ್ನು ಮುಟ್ಟಿ ಅದನ್ನು ಪ್ರತಿಷ್ಠಾಪನೆ ಮಾಡುವುದಾದರೆ, ಅದನ್ನು ನೋಡಿ ಚಪ್ಪಾಳೆ ತಟ್ಟಲು ನಾನು ಅಲ್ಲಿಗೆ ಹೋಗಬೇಕೆ? ಎಂದು ಅವರು ಪ್ರಶ್ನಿಸಿದ್ದಾರೆ.

ಇನ್ನೊಬ್ಬರು ಉತ್ತರಾಖಂಡದ ಜ್ಯೋತಿರ್ಮಠ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ. ರಾಮಮಂದಿರ ನಿರ್ಮಾಣ ಇನ್ನೂ ಅಪೂರ್ಣವಾಗಿರುವುದರಿಂದ ಪ್ರಾಣ​ ಪ್ರತಿಷ್ಠಾಪನೆ ಶಾಸ್ತ್ರ​ದ ವಿರುದ್ಧ​ವಾಗಿದೆ ಎಂದು ಅವರು ಹೇಳಿದ್ಧಾರೆ. ಶಂಕರಾಚಾರ್ಯರ ನಾಲ್ಕೂ ಮಠಗಳ ಮಠಾಧೀಶರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ. ಕಾರ್ಯಕ್ರಮ ಶಾಸ್ತ್ರಕ್ಕೆ ವಿರುದ್ಧವಾಗಿರುವುದರಿಂದ ಎಂಬ ಕಾರಣ ನೀಡಲಾಗಿದ್ದು, ಇದರಲ್ಲಿ ಮೋದಿ ವಿರೋಧಿಯಾದುದು ಏನೂ ಇಲ್ಲ ಎಂದೂ ಸ್ಪಷ್ಟಪಡಿಸಲಾಗಿದೆ.

ಆದರೆ ಕಾಂಗ್ರೆಸ್ ವಿರುದ್ದ ಮಾತ್ರ ಆಗಲೇ ಆಕ್ರೋಶ ಶುರುವಾಗಿಬಿಟ್ಟಿದೆ. ಕೇಂದ್ರ ಸಚಿವರುಗಳಾದ ಅನುರಾಗ್ ಠಾಕೂರ್, ಸ್ಮೃತಿ ಇರಾನಿ, ಹರ್ದೀಪ್ ಸಿಂಗ್ ಪುರಿ, ಸಂದಸ ಮನೋಜ್ ತಿವಾರಿ ಮೊದಲಾದವರೆಲ್ಲ ಕಾಂಗ್ರೆಸ್ ವಿರುದ್ದ ಮುಗಿಬಿದ್ದಿದ್ದಾರೆ. ಹಿಂದೂ ವಿರೋಧಿ, ಸನಾತನ ವಿರೋಧಿ ಎಂದೆಲ್ಲ ಜರೆದಿದ್ದಾರೆ. ಜನರು ಕಾಂಗ್ರೆಸ್​ ಅನ್ನು ಬಹಿಷ್ಕರಿಸಲಿದ್ಧಾರೆ ಎಂದು ಹೇಳುವ ಮೂಲಕ, ಜನರನ್ನು ಎತ್ತಿಕಟ್ಟುವುದಕ್ಕೂ ಆಗಲೇ ಶುರು ಮಾಡಿಬಿಟ್ಟಿದ್ಧಾರೆ.

ಅಧಿಕಾರ, ಹಣ,​ ಮಡಿಲ ಮೀಡಿಯಾ, ​ಐಟಿ ಸೆಲ್ , ಕಾರ್ಯಕರ್ತರು ​- ಎಲ್ಲರನ್ನೂ ಇಟ್ಟುಕೊಂಡು ಅವರು ಅಯೋಧ್ಯೆ ಮಂದಿರ ವಿಚಾರವನ್ನು ರಾಜಕೀಯವಾಗಿಸಿ, ಅಂತಿಮವಾಗಿ ಅದನ್ನು ಕಾಂಗ್ರೆಸ್ ವಿರುದ್ಧ ಚುನಾವಣಾ ಅಸ್ತ್ರವಾಗಿಸಲಿದ್ದಾರೆ. ಸ್ವಾಮೀಜಿಗಳು ಆಕ್ಷೇಪಿಸಿರುವ ಹಾಗೆ, ಅಲ್ಲಿ ಪ್ರಾಣಪ್ರತಿಷ್ಠಾಪನೆಗೆ ಸ್ವಾಮೀಜಿಗಳಿರುವುದಿಲ್ಲ. ಮೋದಿಯೇ ಎಲ್ಲವನ್ನೂ ಮಾಡಿ ಮುಗಿಸುತ್ತಾರೆ.

ಎಲ್ಲವೂ ಮೋದಿಗಾಗಿಯೇ ನಡೆಯುತ್ತದೆ. ಹೇಳುವುದಕ್ಕೆ ರಾಷ್ಟ್ರದ ಕಾರ್ಯಕ್ರಮ ಎನ್ನಲಾಗುವ ಕಾರ್ಯಕ್ರಮದ ಪೋಸ್ಟರ್ಗಳಲ್ಲಿ ಮಿಂಚುತ್ತಿರುವುದು ​ಮೋದಿ ಮಾತ್ರ. ರಾಮಮಂದಿರ ಎನ್ನುವುದು ಬಿಜೆಪಿ ಪ್ರಾಜೆಕ್ಟ್ ಮಾತ್ರ ಎನ್ನುವಂತಾಗಿರುವುದು ಇವರ ರಾಜಕೀಯದಲ್ಲಿ ಸ್ಪಷ್ಟವಾಗಿ ಕಾಣಿಸತೊಡಗಿದೆ.

ರಾಮನ ಹೆಸರಲ್ಲಿನ ಕಾರ್ಯಕ್ರಮ, ಅವರು ಹೇಳಿದ್ದಕ್ಕೆ ಹೂಂಗುಟ್ಟುವವರ ಜೊತೆಗಿನ ಸಮಾವೇಶ ಮಾತ್ರವಾಗಲಿದೆ. ಹೀಗಿದ್ದೂ, ಕಾಂಗ್ರೆಸ್ ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ಇರುವುದಕ್ಕಾಗಿ ಹಿಂದೂ ವಿರೋಧಿ, ರಾಮನ ವಿರೋಧಿ ಎಂಬ ಆರೋಪ ಹೊರಬೇಕಾಗುತ್ತದೆ.

ಇದು, ಬಹಳ ದೃಢ ನಿಲುವು ತಳೆದಿರುವ ಕಾಂಗ್ರೆಸ್ ಎದುರಿನ ದೊಡ್ಡ ಸವಾಲು. ಈ ಸವಾಲನ್ನು ಎದುರಿಸುವಾಗ ಕಾಂಗ್ರೆಸ್ ಎದುರು ಇನ್ನೂ ಒಂದು ತೊಡಕು ಇದೆ. ಅದೆಂದರೆ, ಅದರ​ ನಾಯಕರು, ರಾಜ್ಯ ಘಟಕಗಳು ಮಾಡುತ್ತಿರುವ ಪ್ರಮಾದಗಳು. ರಾಷ್ಟ್ರೀಯ ಪಕ್ಷವಾಗಿ ಈಗಿನ ಸನ್ನಿವೇಶದಲ್ಲಿ ಕಾಂಗ್ರೆಸ್ ತೆಗೆದುಕೊಂಡಿರುವ ಮಹತ್ವದ ನಿರ್ಧಾರವನ್ನು ಕರ್ನಾಟಕ ಸೇರಿದಂತೆ ಅದರ ರಾಜ್ಯ ಘಟಕಗಳು ಏಕೆ ಅರ್ಥ ಮಾಡಿಕೊಳ್ಳುತ್ತಿಲ್ಲ, ಏಕೆ ​ಮೃದು ಹಿಂದುತ್ವ ನಿಲುವಿನ ಪ್ರದರ್ಶನ ಮಾಡುತ್ತಿವೆ?

ನಾವೇ ವಿಶ್ವ ಹಿಂದೂ ಪರಿಷತ್ಗೆ ರಾಮ ಮಂದಿರ ತೆರೆದುಕೊಟ್ಟಿದ್ದು ಎಂದು ಎದೆ ತಟ್ಟಿ ಹೇಳುವ ಕರ್ನಾಟಕ ಕಾಂಗ್ರೆಸ್ ಹಾಗೂ ಇತರ ರಾಜ್ಯ ಘಟಕಗಳು ಸ್ಪಷ್ಟತೆ ಪಡೆಯೋದು ಯಾವಾಗ?. ​ಅಲ್ಲಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರೇ ಬಿಜೆಪಿ ಕಾರ್ಯಕರ್ತರ ಜೊತೆ ರಾಮ ಮಂದಿರದ ಮಂತ್ರಾಕ್ಷತೆ ಹಂಚಲು ಮನೆ ಮನೆಗೆ ಹೋಗುತ್ತಿರುವ ವರದಿಗಳಿವೆ.

ರಾಮಮಂದಿರದ ವಿಚಾರದಲ್ಲಿ ಬಿಜೆಪಿ ಮಾಡುತ್ತಿರುವ ರಾಜಕಾರಣಕ್ಕೆ ಪೈಪೋಟಿಯೊಡ್ಡುವ ಹಾಗೆ ರಾಜ್ಯ ಕಾಂಗ್ರೆಸ್ ನಾಯಕರು ಹೇಳಿಕೆ ಕೊಡುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದವಾಗಿದೆ ಮತ್ತು ರಾಷ್ಟ್ರೀಯ ನಾಯಕರ ನಿಲುವನ್ನೇ ಅರ್ಥ ಮಾಡಿಕೊಳ್ಳದ ಮಂಕುತನವಾಗಿದೆ. ಈ ಮಂಕುತನವನ್ನು ದಾಟಿ, ಘನತೆಯ ನಿಲುವನ್ನು ತೆಗೆದುಕೊಂಡಿರುವ ರಾಷ್ಟ್ರೀಯ ನಾಯಕರನ್ನು ​ಅವರು ಅನುಸರಿಸಬೇಕಿದೆ.

ಯಾಕೆ ಅಯೋಧ್ಯೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಾಲ್ಗೊಳ್ಳುತ್ತಿಲ್ಲ ಎಂಬುದನ್ನು ಮನನ ಮಾಡಿಕೊಂಡು, ರಾಷ್ಟ್ರೀಯ ನಾಯಕರ ನಿಲುವನ್ನು ಜನರಿಗೂ ಅರ್ಥ ಮಾಡಿಸುವ ಕೆಲಸಕ್ಕೆ ರಾಜ್ಯಗಳ​, ಜಿಲ್ಲೆಗಳ , ತಾಲೂಕುಗಳ ಕಾಂಗ್ರೆಸ್ ನಾಯಕರು ಮುಂದಾಗಬೇಕಿದೆ. ಬಿಜೆಪಿಯ ರಾಜಕಾರಣ ಬೇರೆ. ಬಿಜೆಪಿಯಂತೆ ತೋರಿಸಿಕೊಳ್ಳಲು ಹೋಗಿ ತನ್ನ ಗುಣವನ್ನು ಕಾಂಗ್ರೆಸ್ ಕಳೆದುಕೊಳ್ಳಬಾರದು,

ಮತ್ತು ಹಾಗೆ ಮಾಡುವ ಯತ್ನದಲ್ಲಿ ಈಗಾಗಲೇ ನಷ್ಟ ಅನುಭವಿಸಿರುವ ಕಹಿ ಅನುಭವವೂ ಕಾಂಗ್ರೆಸ್ ಎದುರು ಇದೆ. ಹಾಗಾಗಿಯೇ ಇದು ಅಡ್ಡಾದಿಡ್ಡಿಯಾಗಿ ನುಗ್ಗುವ ಹೊತ್ತಲ್ಲ. ಸಂಯಮದಿಂದ​, ಛಲದಿಂದ ಜನರ ಎದುರು ಹೋಗಿ, ಸತ್ಯಗಳನ್ನು ಅವರಿಗೆ ಅರ್ಥವಾಗುವ ಹಾಗೆ ಮುಟ್ಟಿಸಬೇಕಿದೆ. ಬಿಜೆಪಿಯಂತೂ ರಾಮನ ಹೆಸರಿನ ಕಾರ್ಯಕ್ರಮವನ್ನು, ರಾಮಮಂದಿರ ವಿಚಾರವನ್ನು ತನ್ನ ಸಾಧನೆ ಎಂದೇ ಜನರ ಮುಂದೆ ಈಗಾಗಲೇ ಬಿಂಬಿಸುತ್ತಿದೆ.

​ನಿರುದ್ಯೋಗ, ಬೆಲೆಯೇರಿಕೆ ​ , ಸಾರ್ವಜನಿಕ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಿಕೊಂ​ಡಿದ್ದು ​, ಭ್ರಷ್ಟಾಚಾರ ​- ಎಲ್ಲವೂ ಗೌಣವಾಗಿ ಹೋಗಲಿವೆ. ಒಡಕಿನ ರಾಜಕಾರಣದ ಬಿಜೆಪಿ ತಂತ್ರಕ್ಕೆ ​ಪ್ರತಿಯಾಗಿ ​ಕಾಂಗ್ರೆಸ್ ಈಗ ಮಾಡಬೇಕಿರುವುದು ಜನರಿಗೆ ಈ ದೇಶದಲ್ಲಿ ಧರ್ಮದ ಹೆಸರಿನಲ್ಲಿ ರಾಮನ ಹೆಸರಿನಲ್ಲಿ ಏನಾಗುತ್ತಿದೆ ಎಂಬ ಸತ್ಯವನ್ನು​ ತಲುಪಿಸುವ, ಮನವರಿಕೆ ಮಾಡುವ ಕೆಲಸ .

ಆ ಜನರ ಊಟ ಇಂದು ಎಷ್ಟು ತುಟ್ಟಿಯಾಗಿದೆ, ಏಕೆ ಅವರ ಕೈಯಲ್ಲಿ ಕೆಲಸವಿಲ್ಲವಾಗಿದೆ ಎಂಬ ಕಟು ವಾಸ್ತವವನ್ನು​ ಮನದಟ್ಟು ಮಾಡಬೇಕಿದೆ. 2024ರ ಚುನಾವಣೆಯನ್ನು ಗೆಲ್ಲಬೇಕಿರುವ ತನ್ನ ಗುರಿ ಸಾಧಿಸಲು ಕಾಂಗ್ರೆಸ್ ಖಂಡಿತವಾಗಿಯೂ ಇಂಥದೊಂದು ಕಷ್ಟದ ಹಾದಿಯಲ್ಲಿ ನಡೆಯಬೇಕಿದೆ. ರಾಹುಲ್ ಗಾಂಧಿಯವರು ಕೈಗೊಳ್ಳುತ್ತಿರುವ ಎರಡನೇ ಹಂತದ ಯಾತ್ರೆಗೆ ಪೂರಕವಾಗುವಂತೆ ಪಕ್ಷದ ಇತರ ನಾಯಕರ ಎಚ್ಚರದ ನಡಿಗೆ ಈಗ ಅಗತ್ಯವಿದೆ. ​ತಕ್ಷಣದ ಲಾಭಕ್ಕಾಗಿ ಅವರು ಹಳಿ ತಪ್ಪಿದರೆ ಮತ್ತೆ ಚಿಂತಿಸಿ ಫಲವಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!