ಕುಂದಾಪುರದಲ್ಲೂ ಸ್ಕೂಬಾ ಡೈವಿಂಗ್ ರೋಚಕತೆ

Update: 2024-01-15 05:52 GMT

ಸ್ಕೂಬಾ ಡೈವಿಂಗ್ ಸಾಹಸಪ್ರಿಯರ ನೆಚ್ಚಿನ ಹವ್ಯಾಸಗಳಲ್ಲೊಂದು. ಸುರಕ್ಷಾ ಸಾಧನಗಳೊಂದಿಗೆ ಸಮುದ್ರದ ಆಳದೊಳಗೆ ಇಳಿದು ಕಡಲ ಒಡಲಿನಲ್ಲಿರುವ ವೈವಿಧ್ಯಮಯ ಸಸ್ಯ, ಜಲಚರಗಳು, ಹವಳ, ಜೀವಿ ಪ್ರಪಂಚದ ವೈಶಿಷ್ಟ್ಯ ಕಣ್ತುಂಬಿಕೊಳ್ಳಲು ವಿಫುಲ ಅವಕಾಶ. ರಾಜ್ಯದ ೩೨೦ ಕಿ.ಮೀ. ಉದ್ದದ ಪಶ್ಚಿಮ ಕರಾವಳಿಯಲ್ಲಿ ನೇತ್ರಾಣಿ ದ್ವೀಪ ಹಾಗೂ ಕಾಪು ಈಗಾಗಲೇ ಸ್ಕೂಬಾ ಡೈವಿಂಗ್ ಇರುವ ತಾಣಗಳಾಗಿವೆ. ನೇತ್ರಾಣಿ ದ್ವೀಪ ಸ್ಕೂಬಾ ಡೈವಿಂಗ್ಗೆ ಹೇಳಿ ಮಾಡಿಸಿದಂತಿದ್ದು, ಪಶ್ಚಿಮ ಕರಾವಳಿಯಲ್ಲೇ ಇದು ಸಾಹಸಪ್ರಿಯರ ನೆಚ್ಚಿನ ತಾಣವೆನಿಸಿದೆ. ಇದೀಗ ಕುಂದಾಪುರ-ಬೈಂದೂರು ನಡುವೆ ನಾಯ್ಕನಕಲ್ಲು ಎಂಬಲ್ಲಿ ಅರಬಿ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಪ್ರಾರಂಭಗೊಂಡಿದೆ.

 

ಕುಂದಾಪುರ: ಕರ್ನಾಟಕ ಕರಾವಳಿ ಪ್ರದೇಶ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿದೆ. ಇಲ್ಲಿನ ಮೂರು ಜಿಲ್ಲೆಗಳ ವೈವಿಧ್ಯಮಯ ತಾಣಗಳು ದೇಶ-ವಿದೇಶಗಳಿಂದ ಜನರನ್ನು ತನ್ನತ್ತ ಕೈಬೀಸಿ ಕರೆಯುತ್ತವೆ. ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಕುಂದಾಪುರ-ಬೈಂದೂರು ನಡುವೆ ನಾಯ್ಕನಕಲ್ಲು ಎಂಬಲ್ಲಿ ಸ್ಕೂಬಾ ಡೈವಿಂಗ್ ಆರಂಭವಾಗಿದ್ದು, ನಾಡಿನ ಜಲಸಾಹಸಿಗರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ.

ಕರಾವಳಿ ಕರ್ನಾಟಕದಲ್ಲಿ ಮೂರನೇ ತಾಣ..!: ಕರಾವಳಿ ಕರ್ನಾಟಕ ವ್ಯಾಪ್ತಿಯಲ್ಲಿ ಮೊದಲಿಗೆ ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರ ಸಮೀಪದ ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್ ಇತ್ತು. ತದನಂತರ ಕಾಪುವಿನಲ್ಲಿ ಆರಂಭವಾಗಿದ್ದು, ಇದೀಗ ಕರಾವಳಿಯ ಮೂರನೇ ಸ್ಕೂಬಾ ಡೈವಿಂಗ್ ತಾಣವಾಗಿ ಕುಂದಾಪುರ- ಬೈಂದೂರು ನಡುವಿನ ನಾಯ್ಕನಕಲ್ಲು ಸೇರ್ಪಡೆ ಗೊಂಡಿದೆ. ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಉತ್ತೇಜನಕ್ಕೆ ಇದೊಂದು ಹೊಸ ಮೈಲಿಗಲ್ಲು. ಸ್ಕೂಬಾ ಡೈವಿಂಗ್ ನಡೆಸಲು ಮೆರಿಡಿಯನ್ ಅಡ್ವೆಂಚರ್ ಕುಂದಾಪುರ ಸಂಸ್ಥೆ ಗುತ್ತಿಗೆ ಪಡೆದಿದೆ.

ಕೋಡಿಯಿಂದ ಪಯಣ ಆರಂಭ: ಕುಂದಾಪುರದ ಕೋಡಿ ಬೀಚ್ನಿಂದ ಸುಮಾರು ೨೦ ಕಿ.ಮೀ. ದೂರದಲ್ಲಿರುವ ಸೋಮೇಶ್ವರ ಸಮೀಪದ ನಾಯ್ಕನಕಲ್ಲು ಸ್ಕೂಬಾ ಡೈವಿಂಗ್ ತಾಣವಾಗಿದೆ. ಕೋಡಿ ಮಾತ್ರವಲ್ಲದೆ, ಸೋಮೇಶ್ವರ ಬೀಚ್ನಲ್ಲೂ ಮುಂದಿನ ದಿನಗಳಲ್ಲಿ ಪಿಕಪ್ ಪಾಯಿಂಟ್ ಮಾಡಲಾಗುತ್ತದೆ. ಈ ಸ್ಥಳಗಳಿಂದ ಸ್ಕೂಬಾ ಡೈವಿಂಗ್ ಮಾಡಲು ಆಸಕ್ತಿಯಿರುವವರನ್ನು ಬೋಟ್ ಮೂಲಕ ನಾಯ್ಕನಕಲ್ಲಿಗೆ ಕರೆದುಕೊಂಡು ಹೋಗಲಾಗುತ್ತದೆ.

ಕೋಡಿ ಸೀವಾಕ್ ಬಳಿ ಮುಖ್ಯ ಪಿಕಪ್ ಪಾಯಿಂಟ್ ಇದ್ದು, ಅಲ್ಲಿಂದ ಬೆಳಗ್ಗೆ ೮ರಿಂದ ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿಂದ ಸುಮಾರು ೨೦ ಕಿ.ಮೀ. ದೂರ ಒಂದೂವರೆ ತಾಸು ಸಮುದ್ರದಲ್ಲಿ ಬೋಟ್ ಸಂಚಾರವಿದೆ.

ವಿಶೇಷತೆಗಳು: ಸ್ಕೂಬಾ ಡೈವಿಂಗ್ ದೇಶ- ವಿದೇಶಗಳಲ್ಲಿ ಬಹು ಜನಪ್ರಿಯಗೊಂಡಿರುವ ಜಲ ಸಾಹಸ ಕ್ರೀಡೆ. ಇದರಲ್ಲಿ ಈಜು ಗೊತ್ತಿಲ್ಲದವರು ಸಹ ಸೂಕ್ತ ಸುರಕ್ಷಾ ಪರಿಕರಗಳೊಂದಿಗೆ ಕಡಲ ಒಡಲಿನಲ್ಲಿರುವ ವಿವಿಧ ರೀತಿಯ ಕಲ್ಲುಗಳು, ವೈವಿಧ್ಯಮಯ ಸಸ್ಯ, ಜಲಚರಗಳು, ಜೀವಿ ಪ್ರಪಂಚದ ವೈಶಿಷ್ಟ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

೧೦ ವರ್ಷ ಮೇಲ್ಪಟ್ಟ ೪೫ ವರ್ಷದೊಳಗಿನವರು ಸ್ಕೂಬಾ ಡೈವಿಂಗ್ ನಡೆಸಬಹುದಾಗಿದ್ದು, ಆರು ಮಂದಿ ನುರಿತ ತರಬೇತುದಾರರು ಲಭ್ಯವಿದ್ದಾರೆ. ಡೈವಿಂಗ್ ಮಾಡಲು ಅಗತ್ಯವಿರುವ ಜೀವರಕ್ಷಕ, ಆಮ್ಲಜನಕದ ಸಿಲಿಂಡರ್, ಮೀನುಪಾದ ಸಹಿತವಾಗಿ ಎಲ್ಲ ಉಪಕರಣಗಳು ಇಲ್ಲಿ ಲಭ್ಯವಿವೆ. ೪೫ ವರ್ಷ ಮೇಲ್ಪಟ್ಟ ಆಸಕ್ತಿಯುಳ್ಳ ಆರೋಗ್ಯವಂತ ನಾಗರಿಕರಿಗೂ ಸ್ಕೂಬಾ ಡೈವ್ ಮಾಡಲು ಅವಕಾಶವಿದೆ.

ಡಾಲ್ಫಿನ್, ವೈವಿಧ್ಯಮಯ ಜಲಚರಗಳ ದರ್ಶನ

 

ಕೋಡಿಯಿಂದ ಬೋಟ್ ಮೂಲಕ ತೆರಳುವ ಒಂದೂವರೆ ಗಂಟೆ ಅವಧಿಯಲ್ಲಿ ಅಪರೂಪಕ್ಕೆ ಅಲ್ಲಲ್ಲಿ ಡಾಲ್ಫಿನ್ಗಳು ಕಾಣಲು ಸಿಗುತ್ತವೆ. ಪ್ರಸಿದ್ಧ ಮರವಂತೆ ಬೀಚ್ನ್ನು ಸಮುದ್ರದಿಂದ ನೋಡುವ ಅವಕಾಶ ಸಿಗಲಿದೆ. ನಾಯ್ಕನಕಲ್ಲುವಿನಲ್ಲಿ ಬೃಹತ್ ಬಂಡೆಯಿದ್ದು, ಅಲ್ಲಿಂದ ಸ್ಕೂಬಾ ಡೈವಿಂಗ್ ನಡೆಯಲಿದೆ. ಕಡಲ ಒಡಲಲ್ಲಿರುವ ಬ್ಲೂ ಫಿಶ್, ಗ್ರೀನ್ ಫಿಶ್, ಸ್ಟ್ರೈಪ್ ಫಿಶ್, ಪ್ಯಾರೆಟ್ ಫಿಶ್, ಬರಾಕುಡಾ, ಬಟರ್ಫ್ಲೈ ಫಿಶ್, ಫ್ರಾಗ್ ಫಿಶ್, ಟ್ರಿಗರ್ ಫಿಶ್, ಕಟಲ್ ಫಿಶ್, ಲಯನ್ ಫಿಶ್, ಸ್ನಾಪರ್ಸ್, ಬ್ಯಾನರ್ ಫಿಶ್, ಯೆಲ್ಲೊ ಟೈಲ್ ಸ್ನಾಪರ್ಸ್ ಮೊದಲಾದ ಅಪರೂಪದ ವೈವಿಧ್ಯಮಯ ಕಡಲ ಜೀವಿಗಳನ್ನು ಹಾಗೂ ಆಕರ್ಷಕ ಹವಳ, ಸಸ್ಯಗಳನ್ನು ನೋಡಬಹುದು.

ಸ್ಕೂಬಾ ಡೈವಿಂಗ್ನಲ್ಲಿ ಎರಡು ವಿಧ. ಡಿಸ್ಕವರ್ ಸ್ಕೂಬಾ ಡೈವಿಂಗ್ ಹಾಗೂ ಫನ್ ಡೈವಿಂಗ್. ಈಜು ಬಾರದ ಸಾಮಾನ್ಯರು ಕೂಡ ಡಿಸ್ಕವರ್ ಸ್ಕೂಬಾ ಡೈವಿಂಗ್ ಮಾಡಬಹುದಾಗಿದ್ದು, ಇವರನ್ನು ೮-೧೨ ಮೀಟರ್ ಆಳಕ್ಕೆ ಕರೆದೊಯ್ಯಲಾಗುತ್ತದೆ. ಪ್ರವಾಸಿಗರಿಗೆ ೨೫ರಿಂದ ೩೦ ನಿಮಿಷಗಳ ಕಾಲ ಸ್ಕೂಬಾ ಡೈವಿಂಗ್ ಮಾಡಲು ಅವಕಾಶವಿದ್ದು, ನುರಿತ ತರಬೇತುದಾರರು ಇವರೊಂದಿಗೆ ಇರಲಿದ್ದಾರೆ. ಸದ್ಯ ಒಬ್ಬರಿಗೆ ೩,೪೯೯ ರೂ. ದರ ನಿಗದಿಪಡಿಸಲಾಗಿದೆ. ಬೇರೆಬೇರೆ ಸಮಯ ಈ ದರದಲ್ಲಿ ಕೊಂಚ ಏರಿಳಿತ ಇರಲಿದೆ. ಬೋಟ್ ರೈಡಿಂಗ್ ಜೊತೆಗೆ ಸ್ನೋರ್ಕ್ಲಿಂಗ್ ಇರಲಿದೆ. ಉಚಿತ ಸ್ನಾಕ್ಸ್, ಅಂಡರ್ವಾಟರ್ ಫೋಟೋಗ್ರಫಿ ಉಚಿತವಾಗಿರಲಿದೆ.

ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಸಾಹಸಪ್ರಿಯರಿಗೆ, ಪ್ರವಾಸಿಗರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬೈಂದೂರು ಸಮೀಪದ ನಾಯ್ಕನಕಲ್ಲು ಎಂಬಲ್ಲಿ ಸ್ಕೂಬಾ ಡೈವಿಂಗ್ ಆರಂಭವಾಗಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಎಲ್ಲ ರೀತಿಯ ಪ್ರಾಯೋಗಿಕ ಪರೀಕ್ಷೆ ನಡೆಸಿದ್ದು, ಅನುಮತಿ ನೀಡಲಾಗಿದೆ. ಸ್ಕೂಬಾ ಡೈವಿಂಗ್ಗೆ ಪ್ರವಾಸಿಗರ ಪ್ರತಿಕ್ರಿಯೆ ಉತ್ತಮವಾಗಿದೆ.

| ಕುಮಾರ ಸಿ.ಯು., ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು, ಉಡುಪಿ

ಬೇರೆಡೆ ಸ್ಕೂಬಾ ಡೈವಿಂಗ್ ಹೋಗಿ ಅನುಭವ ಪಡೆದಿದ್ದು, ಕುಂದಾಪುರದಲ್ಲಿ ಈ ಸೇವೆ ಸಿಗಬೇಕೆಂಬ ನಿಟ್ಟಿನಲ್ಲಿ ಆರು ತಿಂಗಳ ಕಾಲ ಈ ಬಗ್ಗೆ ಅಧ್ಯಯನ ನಡೆಸಿ ಸ್ಥಳ ಗುರುತಿಸಿ ಪ್ರವಾಸೋದ್ಯಮ, ವಿವಿಧ ಇಲಾಖೆಗಳಿಂದ ಅನುಮತಿ ಪಡೆದು ಆರಂಭಿಸಲಾಗಿದೆ. ಒಂದು ತಿಂಗಳಲ್ಲಿ ಉಡುಪಿ, ಬೆಂಗಳೂರು, ಮುಂಬೈ, ಕೇರಳ, ಗೋವಾ, ಬೈಂದೂರು, ಕುಂದಾಪುರದ ೨೫೦ಕ್ಕೂ ಅಧಿಕ ಪ್ರವಾಸಿಗರು ಸ್ಕೂಬಾ ಡೈವಿಂಗ್ ಮಾಡಿದ್ದಾರೆ. ಡಾಲ್ಫಿನ್ ಮೀನುಗಳನ್ನು ಕಣ್ತುಂಬಿಕೊಳ್ಳಲು ಕೋಡಿ-ನಾಯ್ಕನಕಲ್ಲು ಮಧ್ಯೆ ಬೋಟ್ ಯಾನದಲ್ಲಿ ಸಾಧ್ಯ. ಸಾಗರದಾಳದಲ್ಲಿ ಅಪರೂಪದ ಹವಳಗಳು ಬೆಳೆಯುವ ಹಂತದಲ್ಲಿದ್ದು ಅದನ್ನು ರಕ್ಷಿಸಿದರೆ ಮುಂದಿನ ದಿನ ಕೋರಲ್ಸ್ ಗಾರ್ಡನ್ ಆಗುತ್ತದೆ.

| ವಿಶಾಖ ಹೆಬ್ಬಾರ್ ಕೊಲ್ಲೂರು, ನಿಖಿಲ್,

ಮೆರಿಡಿಯನ್ ಅಡ್ವೆಂಚರ್ ಕುಂದಾಪುರದ ಆಡಳಿತ ಪಾಲುದಾರರು

Writer - ವಾರ್ತಾಭಾರತಿ

contributor

Editor - Ismail

contributor

Byline - ಯೋಗೀಶ್ ಕುಂಭಾಶಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!