ಶಶಿ ತರೂರ್ ಹೇಳಿದ್ದೇ ಒಂದು, ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ್ದೇ ಇನ್ನೊಂದು ! | Shashi Tharoor

Update: 2023-09-05 13:48 GMT
Editor : Ismail | Byline : ಆರ್. ಜೀವಿ

Shashi Tharoor  | Photo :  PTI 

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಹಾಗು ಎನ್ ಡಿ ಎ ಮೈತ್ರಿಕೂಟವನ್ನು ಎದುರಿಸಲು ವಿಪಕ್ಷಗಳು ಇಂಡಿಯಾ ಮೈತ್ರಿಕೂಟ ರಚಿಸಿಕೊಂಡು ಕಣಕ್ಕಿಳಿಯುತ್ತಿವೆ. ಈಗಾಗಲೇ ಈ ಮೈತ್ರಿಕೂಟ ಮೂರು ಸಭೆಗಳನ್ನು ಮಾಡಿ ಒಂದೊಂದಾಗಿ ತನ್ನ ಕಾರ್ಯತಂತ್ರವನ್ನು ರೂಪಿಸುವಲ್ಲಿ ನಿರತವಾಗಿದೆ.

ಆದರೆ ಈ ಬಾರಿಯ ಚುನಾವಣೆಗೆ ಮೊದಲು ಹಾಗು ಚುನಾವಣೆ ಸಂದರ್ಭದಲ್ಲಿ ಮೋದೀಜಿ ಅವರನ್ನು ಎದುರಿಸುವ ಮೊದಲು ಈ ಇಂಡಿಯಾ ಮೈತ್ರಿಕೂಟ ಎದುರಿಸಿ ಗೆಲ್ಲಬೇಕಾದ ಇನ್ನೊಂದು ದೊಡ್ಡ ಸವಾಲು ಇದೆ. ಅದು ಈ ದೇಶದ ಭಟ್ಟಂಗಿ ಮಾಧ್ಯಮಗಳು.

ಭಾರತದ ಬಹುತೇಕ ಎಲ್ಲ ಅಗ್ರಗಣ್ಯ ಟಿವಿ ನ್ಯೂಸ್ ಚಾನಲ್ ಗಳು, ಲಕ್ಷ ಲಕ್ಷ ಪ್ರಸಾರ ಇರುವ ಪತ್ರಿಕೆಗಳು, ಅವುಗಳ ವೆಬ್ ಸೈಟ್ ಗಳು, ಅವುಗಳ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಗಳು ಸಂಪೂರ್ಣವಾಗಿ ಮೋದಿಮಯವಾಗಿವೆ.

ಅವುಗಳು ಒಂದೋ ಕಾರಣವೇ ಇಲ್ಲದೆ ಸದಾ ಮೋದಿಯ ಗುಣಗಾನ ಮಾಡುತ್ತಿರುತ್ತವೆ, ಇಲ್ಲದಿದ್ದರೆ ವಿನಾಕಾರಣ ವಿಪಕ್ಷಗಳನ್ನು ದೂರುತ್ತವೆ. ಸದಾ ಹಿಂದೂ ಮುಸ್ಲಿಂ ಎಂದು ಸಮಾಜದಲ್ಲಿ ದ್ವೇಷ, ಅನುಮಾನ ಹರಡುತ್ತವೆ. ದ್ವೇಷ ಹರಡಲು, ರಾಜಕೀಯ ಧ್ರುವೀಕರಣ ಮಾಡಲು ಹಸಿ ಹಸಿ ಸುಳ್ಳು ಸುದ್ದಿ ಪ್ರಕಟಿಸಲೂ ಹಿಂಜರಿಯದ ಹಲವು ಪ್ರಮುಖ ಮಾಧ್ಯಮ ಸಂಸ್ಥೆಗಳಿವೆ.

ದೇಶಾದ್ಯಂತ ಕೋಟಿಗಟ್ಟಲೆ ಜನರನ್ನು ಪ್ರತಿದಿನ ತಲುಪುವ ಈ ಮಾಧ್ಯಮಗಳನ್ನು ಮೊದಲು ಎದುರಿಸಿ ಅವುಗಳನ್ನು ಸೋಲಿಸಿದರೆ ಮಾತ್ರ ಇಂಡಿಯಾ ಮೈತ್ರಿಕೂಟ ಮೋದಿಗೆ ಚುನಾವಣೆಯಲ್ಲಿ ಪ್ರಬಲ ಸ್ಪರ್ಧೆ ಒಡ್ಡಬಹುದು. ಇದು ಇಂಡಿಯಾ ಮೈತ್ರಿಕೂಟದ ನಾಯಕರಿಗೆ ಬಹಳ ಚೆನ್ನಾಗಿಯೇ ಗೊತ್ತಿದೆ. ಈಗಾಗಲೇ ಕಾಂಗ್ರೆಸ್ ಹಾಗು ಇಂಡಿಯಾ ಮೈತ್ರಿಕೂಟದ ವಿರುದ್ಧದ ಸುಳ್ಳು ಸುದ್ದಿ ಅಭಿಯಾನ ತೀವ್ರತೆ ಪಡೆದುಕೊಂಡಿದೆ. ಇದರ ತಾಜಾ ಉದಾಹರಣೆ ಮೊನ್ನೆ ದೇಶದ ಅಗ್ರಗಣ್ಯ ಇಂಗ್ಲೀಷ್ ದೈನಿಕ ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿರುವ ಸುಳ್ಳು ವರದಿ.

ಕಾಂಗ್ರೆಸ್ ನಾಯಕ, ತಿರುವನಂತಪುರಮ್ ಸಂಸದ ಶಶಿತರೂರ್ ಸೆಪ್ಟೆಂಬರ್ ಒಂದರಂದು ತಿರುವನಂತಪುರದಲ್ಲಿರುವ ರಾಜ್ಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದರು. ಕಾಂಗ್ರೆಸ್ ನ ಬಂಡಾಯ ನಾಯಕರ ಗುಂಪಿನ ಸದಸ್ಯ ಎಂದೇ ಶಶಿ ತರೂರ್ ಅವರನ್ನು ಗುರುತಿಸಲಾಗುತ್ತದೆ. ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೂ ಸ್ಪರ್ಧಿಸಿ ಗಮನ ಸೆಳೆದಿದ್ದರು ತರೂರ್. ಆದರೂ ಇತ್ತೀಚಿಗೆ ಕಾಂಗ್ರೆಸ್ ನ ಹೊಸ ಕಾರ್ಯಕಾರಿ ಸಮಿತಿಯಲ್ಲಿ ಅವರಿಗೆ ಸ್ಥಾನ ನೀಡಲಾಗಿತ್ತು. ಹಾಗಾಗಿ ಸಹಜವಾಗಿ ಶಶಿ ತರೂರ್ ಅವರ ಮಾತುಗಳ ಮೇಲೆ ಎಲ್ಲರ ಕಣ್ಣಿತ್ತು.

ಅಲ್ಲಿ ಇಂಡಿಯಾ ಮೈತ್ರಿಕೂಟ ಹಾಗು ಸದ್ಯದ ರಾಜಕೀಯ ಬೆಳವಣಿಗೆಗಳ ಸುತ್ತ ಶಶಿ ತರೂರ್ ಮಾತಾಡಿದ್ದರು. ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಆದರೆ ಆ ಬಗ್ಗೆ ಮರುದಿನದ ಟೈಮ್ಸ್ ಆಫ್ ಇಂಡಿಯಾ ವರದಿ ನೋಡಿದ ಶಶಿ ತರೂರ್ ಗೆ ಆಘಾತವಾಗಿದೆ.

Rahul Gandhi shouldn’t be projected as PM candidate: Shashi Tharoor . ​"ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಬಾರದು : ಶಶಿ ತರೂರ್ " ಎಂಬ ಶೀರ್ಷಿಕೆಯಲ್ಲಿ ದೊಡ್ಡ ವರದಿ ಪ್ರಕಟಿಸಿತ್ತು ಟೈಮ್ಸ್ ಆಫ್ ಇಂಡಿಯಾ. ಅದು ಪತ್ರಿಕೆಯಲ್ಲೂ ಪ್ರಮುಖವಾಗಿ ಪ್ರಕಟವಾಗಿತ್ತು ಹಾಗು ಟೈಮ್ಸ್ ಆಫ್ ಇಂಡಿಯಾದ ವೆಬ್ ಸೈಟ್ ನಲ್ಲೂ ಪ್ರಕಟವಾಗಿತ್ತು.

ಮೊದಲೇ ಶಶಿ ತರೂರ್ ಬಂಡಾಯ ನಾಯಕ ಎಂದೇ ಕಾಂಗ್ರೆಸ್ ನಲ್ಲಿ ಗುರುತಿಸಲ್ಪಟ್ಟವರು. ಈಗವರು ಕಾಂಗ್ರೆಸ್ ನ ಅತ್ಯಂತ ಜನಪ್ರಿಯ ನಾಯಕನ ಬಗ್ಗೆಯೇ ಈ ರೀತಿ ನೇರವಾಗಿ ಹೇಳಿದ್ದಾರೆ ಎಂದು ದೇಶದ ಅತಿದೊಡ್ಡ ಪತ್ರಿಕೆಯಲ್ಲಿ ವರದಿ ಪ್ರಕಟವಾದರೆ ಏನಾಗಬೇಕು ?. ಇದನ್ನು ಬಿಜೆಪಿ ಬಳಸಿಕೊಳ್ಳದೇ ಬಿಡುತ್ತದಯೇ ? ನೋಡಿ, ಕಾಂಗ್ರೆಸ್ ನಾಯಕರಿಗೇ ರಾಹುಲ್ ಗಾಂಧಿ ಮೇಲೆ ವಿಶ್ವಾಸವಿಲ್ಲ ಎಂದು ಪ್ರಚಾರ ಮಾಡುವ ಅವಕಾಶವನ್ನು ಬಿಜೆಪಿ ಬಿಟ್ಟು ಕೊಡುತ್ತದೆಯೇ ? ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ಸೇರಿದಂತೆ ಅದರ ನಾಯಕರು ಶಶಿ ತರೂರ್ ಅವರೇ ರಾಹುಲ್ ಗಾಂಧಿ ಬಗ್ಗೆ ಹೀಗೆ ಹೇಳಿದ್ದಾರೆ ನೋಡಿ ಎಂದು ಟ್ವೀಟ್ ಮಾಡಿದ್ದೇ ಮಾಡಿದ್ದು.

ಇದೊಂದು ರೀತಿಯ ಹಳೆಯ ಪ್ಯಾಟರ್ನ್. ಮೊದಲು ಪ್ರಮುಖ ಮಾಧ್ಯಮ ಸಂಸ್ಥೆ ಬಿಜೆಪಿಗೆ ಬೇಕಾದಂತೆ ಸುದ್ದಿಯನ್ನು ತಿರುಚೋದು ಅಥವಾ ಸಂಪೂರ್ಣ ಸುಳ್ಳು ಸುದ್ದಿ ಪ್ರಕಟಿಸೋದು. ಅದನ್ನು ಬಿಜೆಪಿ ಹಾಗು ಅದರ ಐಟಿ ಸೆಲ್ ತಮಗೆ ಬೇಕಾದಂತೆ ಬಳಸಿ ವಿಪಕ್ಷಗಳು , ಅದರ ನಾಯಕರ ವಿರುದ್ಧ ಅಪಪ್ರಚಾರ ಅಭಿಯಾನ ನಡೆಸೋದು.

ಕಾಂಗ್ರೆಸ್ ಹಾಗು ವಿಪಕ್ಷಗಳ ಮೇಲೆ ಗೂಬೆ ಕೂರಿಸಲು ಅವಕಾಶಕ್ಕಾಗಿ ಕಾಯುತ್ತಿರುವ ಭಟ್ಟಂಗಿ ಚಾನಲ್ ಗಳು ಹಾಗು ವೆಬ್ ಸೈಟ್ ಗಳೂ ಟೈಮ್ಸ್ ಆಫ್ ಇಂಡಿಯಾ ವರದಿಯನ್ನು ತಮಗೆ ಬೇಕಾದಂತೆ ಮಸಾಲೆ ಸೇರಿಸಿಕೊಂಡು ಬಳಸಿಕೊಂಡವು. ತಾನು ಹೇಳಿಯೇ ಇಲ್ಲದ ಹೇಳಿಕೆಯನ್ನು ಸೃಷ್ಟಿಸಿ ಸುಳ್ಳು ವರದಿ ಮಾಡಿದ್ದನ್ನು ನೋಡಿ ಕೆಂಡವಾದ ಶಶಿ ತರೂರ್ ಟೈಮ್ಸ್ ಆಫ್ ಇಂಡಿಯಾ ವಿರುದ್ಧ ಹರಿಹಾಯ್ದರು.

" ಟೈಮ್ಸ್ ಆಫ್ ಇಂಡಿಯಾ ಸಂಪೂರ್ಣ ಕಾಲ್ಪನಿಕ ಹೇಳಿಕೆಯೊಂದನ್ನು ತಾನೇ ಸೃಷ್ಟಿಸಿ ಅದನ್ನು ನಾನು ಹೇಳಿದ್ದೇನೆ ಎಂಬಂತೆ ಪ್ರಕಟಿಸಿದೆ. ಈ ಮೂಲಕ ಟೈಮ್ಸ್ ಆಫ್ ಇಂಡಿಯಾ ಹೊಸ ಸುದ್ದಿ ಪ್ರಕಟಣೆಯಲ್ಲಿ ಅಧಪತನ ಕಂಡಿದೆ. ನಿನ್ನೆ ನಾನು ಕೆಪಿಸಿಸಿ ಪ್ರಧಾನ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದಾಗ ಅಲ್ಲಿ 45 ಕ್ಕೂ ಹೆಚ್ಚು ಪತ್ರಕರ್ತರಿದ್ದರು. ಒಬ್ಬನೇ ಒಬ್ಬ ಪತ್ರಕರ್ತ ಈ ರೀತಿ ವರದಿ ಮಾಡಿಲ್ಲ. ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಬೇಕಾ ಎಂದು ಕೇಳಿದ್ದಕ್ಕೆ ನಾನು ಇಂಡಿಯಾ ಮೈತ್ರಿಕೂಟದ ಪ್ರಕಟಣೆಯನ್ನೇ ತೋರಿಸಿ ಅದರಲ್ಲಿ ಯಾವುದೇ ಒಬ್ಬ ವ್ಯಕ್ತಿಯನ್ನು ಹೆಸರಿಸಿಲ್ಲ, ಮೈತ್ರಿಕೂಟದ ಗಮನ ವಿಷಯಗಳ ಮೇಲಿದೆ, ವ್ಯಕ್ತಿ ಕೇಂದ್ರಿತ ಅಲ್ಲ ಎಂದು ಹೇಳಿದ್ದೆ. ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಬಾರದು ಎಂದು ನಾನು ಎಲ್ಲೂ ಹೇಳಲೇ ಇಲ್ಲ. ಇದನ್ನು ಟೈಮ್ಸ್ ಆಫ್ ಇಂಡಿಯಾ ಸುಳ್ಳು ವರದಿ ಮಾಡಿದೆ. ಈ ಅಪ್ರಾಮಾಣಿಕ ವರದಿಗಾರಿಕೆಗಾಗಿ ಟೈಮ್ಸ್ ಆಫ್ ಇಂಡಿಯಾ ಸ್ಪಷ್ಟೀಕರಣ ನೀಡಬೇಕು ಹಾಗು ಕ್ಷಮೆ ಯಾಚಿಸಬೇಕು. ಇಡೀ ಪ್ರೆಸ್ ಮೀಟ್ ರೆಕಾರ್ಡ್ ಮಾಡಲಾಗಿದೆ. ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದಂತೆ ನೀಡಿರುವ ಹೇಳಿಕೆಯನ್ನು ಹುಡುಕಿ ಕೊಡುವಂತೆ ನಾನು ಟೈಮ್ಸ್ ಆಫ್ ಇಂಡಿಯಾಕ್ಕೆ ಸವಾಲು ಹಾಕುತ್ತೇನೆ. ವಿವಾದ ಸೃಷ್ಟಿಸುವ ಉದ್ದೇಶದಿಂದಲೇ ಮಾಡುವ ಇಂತಹ ವರದಿಗಾರಿಕೆ ನಿಲ್ಲಬೇಕು. ಇದು ಸುಳ್ಳು ಸುದ್ದಿ , ಫೇಕ್ ನ್ಯೂಸ್ " ಎಂದು ಶಶಿ ತರೂರ್ ಟೈಮ್ಸ್ ಆಫ್ ಇಂಡಿಯಾವನ್ನು ತರಾಟೆಗೆ ತೆಗೆದುಕೊಂಡು ಸೆಪ್ಟೆಂಬರ್ 2 ರಂದು ಬೆಳಗ್ಗೆ ಟ್ವೀಟ್ ಮಾಡಿದರು.

ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆ ಅದೇ ಪ್ರಶ್ನೆಗೆ ನಾನು ನೀಡಿದ ಉತ್ತರವನ್ನು ಸ್ಪಷ್ಟವಾಗಿ ವರದಿ ಮಾಡಿದೆ ಮತ್ತು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದಂತೆ ಯಾವುದೇ ನಕಲಿ ಉಲ್ಲೇಖ ಮಾಡಿಲ್ಲ ಎಂದು ಮತ್ತೊಂದು ಟ್ವೀಟ್ ಕೂಡ ಮಾಡಿದರು ಶಶಿ ತರೂರ್ .ತನ್ನ ಪ್ರಮಾದಕ್ಕಾಗಿ ಎಲ್ಲೆಡೆಯಿಂದ ಟೀಕಾ ಪ್ರಹಾರ ಎದುರಾಗುತ್ತಲೇ ಎಚ್ಚೆತ್ತುಕೊಂಡು ಟೈಮ್ಸ್ ಆಫ್ ಇಂಡಿಯಾ ಮರುದಿನ ಅಂದರೆ ಸೆಪ್ಟೆಂಬರ್ ಮೂರರಂದು ಸಣ್ಣದೊಂದು ಸ್ಪಷ್ಟೀಕರಣ ಪ್ರಕಟಿಸಿತು.

"ತಿರುವನಂತಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸದ ಶಶಿ ತರೂರ್ ಅವರಿಗೆ ಇಂಡಿಯಾ ಮೈತ್ರಿಕೂಟಕ್ಕೆ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗಬೇಕೇ ಎಂದು ಕೇಳಲಾಯಿತು. ಅದಕ್ಕೆ ಉತ್ತರ ನೀಡಿದ ಅವರು, " ಚುನಾವಣೆಯ ನಂತರ ಘಟಬಂಧನ್‌ನ ನೇತೃತ್ವವನ್ನು ಯಾರು ವಹಿಸಬೇಕೆಂದು ನಾವು ಕುಳಿತು ನಿರ್ಧರಿಸಬಹುದು. ಸದ್ಯಕ್ಕೆ ಚುನಾವಣೆಯತ್ತ ಎಲ್ಲರೂ ಗಮನ ಹರಿಸಬೇಕು, ಉಳಿದ ಎಲ್ಲವನ್ನೂ ಆಮೇಲೆ ನೋಡಿಕೊಳ್ಳಬಹುದು ಎಂದು ಸ್ವತಃ ರಾಹುಲ್ ಗಾಂಧಿ ಹೇಳಿದ್ದಾರೆ." ಎಂದು ಹೇಳಿದ್ದರು.

ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಬಾರದು ಎಂದು ಶಶಿ ತರೂರ್ ಹೇಳಿದ್ದಾಗಿ ನಾವು ತಪ್ಪಾಗಿ ವರದಿ ಮಾಡಿದ್ದೆವು. ಈ ತಪ್ಪಿಗಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಶಿ ತರೂರ್ ಅವರು ಟೈಮ್ಸ್ ಆಫ್ ಇಂಡಿಯಾ ತನ್ನ ತಪ್ಪಿಗಾಗಿ ವಿಷಾದ ವ್ಯಕ್ತಪಡಿಸಿದೆ. ಆದರೆ ದಿಲ್ಲಿ ಆವೃತ್ತಿಯ 18ನೇ ಪುಟದಲ್ಲಿ ಈ ಸ್ಪಷ್ಟೀಕರಣವನ್ನು ಸಮಾಧಿ ಮಾಡಲಾಗಿದೆ. ನಿನ್ನೆಯ ಸುಳ್ಳು ಶೀರ್ಷಿಕೆಯ ಸುದ್ದಿ ಈಗಾಗಲೇ ತಲುಪಿರುವವರಲ್ಲಿ ಒಂದಂಶದಷ್ಟು ಜನರನ್ನೂ ಈ ಸ್ಪಷ್ಟೀಕರಣ ತಲುಪುವುದಿಲ್ಲ. ಆದರೂ ಇದೊಂದು ಸತ್ಯಕ್ಕೆ ಸಿಕ್ಕಿದ ನೈತಿಕ ಜಯ ಎಂದು ಟ್ವೀಟ್ ಮಾಡಿದ್ದಾರೆ.

ಅಲ್ಲಿಗೆ ಹೇಳದ್ದನ್ನು ತಾನೇ ಬರೆದು ಸುಳ್ಳು ಸುದ್ದಿ ಸೃಷ್ಟಿಸಿ ದೇಶದ ಜನರಲ್ಲಿ ತಪ್ಪು ಭಾವನೆ ಮೂಡಿಸುವ, ವಿಪಕ್ಷಗಳಲ್ಲಿ ಒಡಕುಂಟು ಮಾಡುವ, ಕಾಂಗ್ರೆಸ್ ನೊಳಗೂ ಅಂತರ್ ಕಲಹ ತಂದಿಡುವ ಟೈಮ್ಸ್ ಆಫ್ ಇಂಡಿಯಾದ ಯೋಜನೆ ವಿಫಲವಾಗಿದೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಅದರ ಅಜೆಂಡಾ ಎಲ್ಲರೆದುರು ಬಹಿರಂಗವಾಗಿದೆ ಎಂಬ ಆಕ್ರೋಶವೂ ವ್ಯಕ್ತವಾಗಿದೆ.

ಮುಖಪುಟದಲ್ಲಿ ಅಥವಾ ಇತರ ಪ್ರಮುಖ ಸ್ಥಳಗಳಲ್ಲಿ ದಾರಿ ತಪ್ಪಿಸುವ, ತಪ್ಪು ಭಾವನೆ ಮೂಡಿಸುವ, ಕಪೋಲಕಲ್ಪಿತ ಸುಳ್ಳು ಸುದ್ದಿಗಳನ್ನು ಪ್ರಕಟಿಸೋದು. ಬಳಿಕ ಯಾವುದಾದರೂ ಮೂಲೆಯಲ್ಲಿ ಒಂದು ಪ್ಯಾರಾದ ಸ್ಪಷ್ಟೀಕರಣ ಹಾಕೋದು ಹಲವು ದೊಡ್ಡ ಪತ್ರಿಕೆಗಳ ಜಾಯಮಾನ.

ಇಂತಹದೇ ಒಂದು ದೊಡ್ಡ ಪತ್ರಿಕೆಗೆ ಇತ್ತೀಚಿಗೆ ಮದ್ರಾಸ್ ಹೈಕೋರ್ಟ್ ಸರಿಯಾಗಿ ಪಾಠ ಕಲಿಸಿತ್ತು. ತಮಿಳುನಾಡಿನಲ್ಲಿ ಹಿಂದಿ ಕಾರ್ಮಿಕರ ಮೇಲೆ ಹಲ್ಲೆಯಾಗುತ್ತಿದೆ ಎಂದು ಸುಳ್ಳು ಸುದ್ದಿ ಪ್ರಕಟಿಸಿದ ಖ್ಯಾತ ಹಿಂದಿ ಪತ್ರಿಕೆ ದೈನಿಕ್ ಭಾಸ್ಕರ್ ಗೆ ಅದರ ಪತ್ರಿಕೆ ಹಾಗು ವೆಬ್ ಸೈಟ್ ಗಳ ಮುಖಪುಟದಲ್ಲೇ ಸ್ಪಷ್ಟೀಕರಣ ನೀಡುವಂತೆ ಮದ್ರಾಸ್ ಹೈಕೋರ್ಟ್ ಆದೇಶ ನೀಡಿತ್ತು.

ಟೈಮ್ಸ್ ಆಫ್ ಇಂಡಿಯಾ ಬಳಗದ ಟೈಮ್ಸ್ ನೌ ಚಾನಲ್ ಅಂತೂ ಮೋದಿ ಸರಕಾರದ ಭಟ್ಟಂಗಿತನ ಮಾಡುವಲ್ಲಿ ಹಾಗು ಸುಳ್ಳು, ದ್ವೇಷ ಹರಡುವಲ್ಲಿ ದೇಶದಲ್ಲೇ ಟಾಪ್ ಟಿವಿ ಚಾನಲ್ ಆಗಿದೆ. ದಿನಬೆಳಗಾದರೆ ಮೋದೀಜಿ ಗುಣಗಾನದಲ್ಲೇ ಬಿಝಿಯಾಗಿರುವ ಈ ಚಾನಲ್ ಯಾವುದಾದರೂ ಇಲ್ಲದ ನೆಪ ಹುಡುಕಿ ಕಾಂಗ್ರೆಸ್ ಹಾಗು ಇತರ ವಿಪಕ್ಷಗಳ ಮೇಲೆ ಗೂಬೆ ಕೂರಿಸುತ್ತಲೇ ಇರುತ್ತದೆ. ಇದರ ಮುಖ್ಯ ನಿರೂಪಕಿ ನಾವಿಕ ಕುಮಾರ್ ಅಂತೂ ಮೋದಿ ಭಟ್ಟಂಗಿತನ ಹಾಗು ರಾಹುಲ್ ಗಾಂಧಿ ವಿರುದ್ಧದ ದ್ವೇಷವನ್ನು ಬಚ್ಚಿಟ್ಟುಕೊಳ್ಳಲೂ ಆಗದೆ ಹಲವು ಬಾರಿ ತಮ್ಮ ಬಂಡವಾಳ ಬಯಲು ಮಾಡಿಕೊಂಡಿದ್ದಾರೆ. ಎಲ್ಲರೆದುರು ನಗೆಪಾಟಲಿಗೀಡಾಗಿದ್ದಾರೆ.

ಈಗ ಇಂಡಿಯಾ ಮೈತ್ರಿಕೂಟ ಸರಿಯಾದ ರೂಪ ಪಡೆದುಕೊಳ್ಳುತ್ತಿರುವ ಹೊತ್ತಲ್ಲೇ ಟೈಮ್ಸ್ ಆಫ್ ಇಂಡಿಯಾದಲ್ಲಿ ಇಂತಹದೊಂದು ವರದಿ ಪ್ರಕಟವಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಇಂಡಿಯಾ ಕೂಟದೆದುರು ಸವಾಲು ಬಹಳ ದೊಡ್ಡದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!