400 ಸೀಟು ಗೆಲ್ಲುವವರು ಹೀಗೆ ಮೇಯರ್ ಆಗಬೇಕೆ ?

Update: 2024-02-27 06:51 GMT
Editor : Ismail | Byline : ಆರ್. ಜೀವಿ

ನರೇಂದ್ರ ಮೋದಿ | Photo: NDTV 

ಮತ್ತೊಮ್ಮೆ ಬಿಜೆಪಿಗೆ, ಮತ್ತದರ ನಾಯಕ ಮೋದಿಗೆ ಭಾರೀ ಮುಖಭಂಗವಾಗಿದೆ. ಅಕ್ರಮ ನಡೆದಿದ್ದ, ಅಸಾಂವಿಧಾನಿಕ ರೀತಿಯಲ್ಲಿದ್ದ ಚಂಡೀಘಡ ಮೇಯರ್‌ ಚುನಾವಣೆಯ ಫಲಿತಾಂಶ ವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಬಲವಂತದ ಸೋಲಿಗೆ ತುತ್ತಾಗಿದ್ದ ಆಮ್ ಆದ್ಮಿ ಪಕ್ಷದ ಕುಲದೀಪ್ ಕುಮಾರ್ ಅವರನ್ನು ಹೊಸ ಮೇಯರ್ ಎಂದು ಸುಪ್ರಿಂ ಕೋರ್ಟ್ ಘೋಷಿಸಿದೆ.

 

ನಿಜವಾಗಿ ಯಾರು ಮೇಯರ್ ಆಗಿ ಅವತ್ತು ಗೆಲುವು ಸಾಧಿಸಬೇಕಿತ್ತೊ ಅದೇ ಕುಲದೀಪ್ ಕುಮಾರ್ ಈಗ ಚಂಡೀಘಡ ಮೇಯರ್ ಆಗಿದ್ಧಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಿಜೆಪಿಗೆ 400 ಸೀಟುಗಳು ಬರುತ್ತವೆ ಎಂದು ಕೊಚ್ಚಿಕೊಳ್ಳಲಾಗುತ್ತಿರುವ ಹೊತ್ತಿನಲ್ಲಿ, ಅದೇ ಬಿಜೆಪಿ ವಿಪಕ್ಷಗಳ ವಿರುದ್ಧ ಮಾಡಬಾರದ ತಂತ್ರಗಳನ್ನೆಲ್ಲ ಮಾಡುತ್ತ ಗೆಲ್ಲಲು ನೋಡುತ್ತಿರುವುದು ವಿಪರ್ಯಾಸವಾಗಿದೆ.

ಒಂದು ನಗರದ ಮೇಯರ್ ಚುನಾವಣೆಯನ್ನು ಗೆಲ್ಲುವುದಕ್ಕೆ ಕೂಡ ಬಿಜೆಪಿ ಅಕ್ರಮ ಎಸಗುತ್ತಿದೆ. ಮತ್ತದನ್ನು ನ್ಯಾಯಾಲಯ ಕಟು ಶಬ್ದಗಳಲ್ಲಿ ಖಂಡಿಸಿ, ತಿರಸ್ಕರಿಸಿದೆ. ಮದರ್ ಆಫ್ ಡೆಮಾಕ್ರಸಿ ಎಂದು ದೇಶವನ್ನು ವರ್ಣಿಸುವ ಫಾದರ್ ಆಫ್ ಪವರ್ ಪಾಲಿಗೆ ಇದಕ್ಕಿಂತ ನಾಚಿಕೆಗೇಡಿನ ದಿನ ಇನ್ನೊಂದಿರಲಾರದು. ಮೊನ್ನೆ ಚುನಾವಣಾ ಬಾಂಡ್ ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿತು. ಈಗ ಚಂಡೀಘಡ ಮೇಯರ್ ಚುನಾವಣೆ ಅಸಾಂವಿಧಾನಿಕವಾಗಿ ನಡೆದಿದೆ ಎಂದು ಹೇಳಿದೆ.

ಆದರೆ ಸರ್ಕಾರದ ಕಡೆಯಿಂದ, ಬಿಜೆಪಿ ಕಡೆಯಿಂದ ಈ ಯಾವ ವಿಚಾರಕ್ಕೂ ನೈತಿಕ ಹೊಣೆ ಹೊರಲು ಯಾರೂ ಮುಂದೆ ಬಂದಿಲ್ಲ.  

ಇನ್ನೊಂದೆಡೆ, ಈ ಯಾವ ವಿಚಾರಗಳೂ ಮಡಿಲ ಮೀಡಿಯಾಗಳನ್ನು ಕಾಡಿಯೇ ಇಲ್ಲ. ಬಿಜೆಪಿ ಕಡೆಯ ವ್ಯಕ್ತಿಯೇ ಆಗಿರುವ ಅನಿಲ್ ಮಾಸಿಹ್ ಚುನಾವಣಾಧಿಕಾರಿಯಾಗುವುದು, ಅಕ್ರಮವೆಸಗುವುದು, ಬಿಜೆಪಿ ಗೆಲುವಿಗೆ ನೆರವಾಗುವುದು ಯಾವುದೇ ಅಡೆತಡೆ ಇಲ್ಲದೆ ನಡೆದುಹೋಗುತ್ತದೆ.

ಈಗ ಆತ ಎಸಗಿದ ಅಕ್ರಮವನ್ನು ಸುಪ್ರೀಂ ಕೋರ್ಟ್ ಹಿಡಿದು ಹಾಕಿದೆ. ಆತ ಮಾಡಿದ್ದು ಜನತಂತ್ರ ವ್ಯವಸ್ಥೆಯ ಇತಿಹಾಸದಲ್ಲಿಯೇ ಘೋರ ಎನ್ನಿಸುವಂಥದ್ದು. ಅದನ್ನು ಜನತಂತ್ರದ ಕಗ್ಗೊಲೆ ಎಂದೇ ಸುಪ್ರೀಂ ಕೋರ್ಟ್ ಹೇಳಿತು. ಜನತಂತ್ರದ ಹತ್ಯೆಯಾಗಲು ಅವಕಾಶ ಕೊಡುವುದಿಲ್ಲ ಎಂದು ಹೇಳಿತು. ಇಲ್ಲಿ ಬಯಲಾಗಿರುವುದು ಅನಿಲ್ ಮಾಸಿಹ್ ಎಸಗಿದ ಅಕ್ರಮ ಮಾತ್ರವಲ್ಲ.

ಅಕ್ರಮವೇ ನಡೆದಿಲ್ಲ ಎಂದು ಸಮರ್ಥಿಸಲು ಯತ್ನಿಸಿದ, ಲೋಕತಂತ್ರದ ಕಗ್ಗೊಲೆಯಂಥ ನಡೆಯನ್ನೂ ಅಂಥ ಅಕ್ರಮವನ್ನೂ ಸರಿ ಎಂದು ಹೇಳಿದ ಮಡಿಲ ಮಿಡಿಯಾಗಳ ಬಣ್ಣವೂ ಬಯಲಾಗಿದೆ. ಕ್ಯಾಮೆರಾದಲ್ಲಿ ಎಲ್ಲವೂ ಸ್ಪಷವಾಗಿತ್ತು, ಎಲ್ಲರೂ ನೋಡಿದ್ದರು. ಅನಿಲ್ ಮಾಸಿಹ್ ಮತಪತ್ರಗಳ ಮೇಲೆ ಗುರುತು ಹಾಕುವುದು ಎಲ್ಲರ ಕಣ್ಣಿಗೂ ಕಂಡಿತ್ತು.

ಆದರೆ ಅದೇಕೆ ಮಡಿಲ ಮೀಡಿಯಾಗಳ ಕಣ್ಣಿಗೆ ಕಾಣುವುದಿಲ್ಲ? ಇಂಥದ್ದನ್ನೆಲ್ಲ ಮಾಡಬಾರದು ಎಂದಾಗಲಿ, ಯಾಕೆ ಮಾಡಲಾಯಿತು ಎಂದಾಗಲಿ ಅವು ಹೇಳುವುದಕ್ಕೆ ಹೋಗುವುದಿಲ್ಲ. ಕೇಳುವುದೇ ಇಲ್ಲ. ಆ ಬಗ್ಗೆ ಸ್ಪೆಷಲ್ ಸ್ಟೋರಿ, ಡಿಬೇಟ್, ಬೊಬ್ಬೆ, ಆರ್ಭಟ ಯಾವುದೂ ಇಲ್ಲ. ಎಲ್ಲ ಭಟ್ಟಂಗಿ ಆಂಕರ್ ಗಳ ಬಾಯಿಗೂ ಬೀಗ ಬಿದ್ದಿದೆ.

ವಿಪಕ್ಷಗಳಿಗೆ ಪ್ರಶ್ನೆ ಕೇಳುವುದಕ್ಕೆ ಭಾರಿ ದೊಡ್ಡ ಪೋಸು ಕೊಟ್ಟುಕೊಂಡು ಹೋಗುವ ಮಡಿಲ ಮೀಡಿಯಾ ಪತ್ರಕರ್ತರಿಗೆ ಈಗ ಸರ್ಕಾರವನ್ನು ಪ್ರಶ್ನಿಸಲು ಏಕೆ ಆಗುವುದಿಲ್ಲ? ಬಿಜೆಪಿ ಕಡೆಯವನಾಗಿದ್ದ ಚುನಾವಣಾಧಿಕಾರಿ ಅನಿಲ್ ಮಾಸಿಹ್ ಅಸಿಂಧು ಎಂದು ಹೇಳಿದ್ದ ವಿಪಕ್ಷಗಳ 8 ಮತಪತ್ರಗಳನ್ನು ಸುಪ್ರೀಂ ಕೋರ್ಟ್ ಸಿಂಧು ಎಂದು ಹೇಳಿದೆ.

ವೀಡಿಯೊದಲ್ಲಿ ಅನಿಲ್ ಮಾಸಿಹ್ ಮಾಡುತ್ತಿರುವುದೇನು ಎನ್ನುವುದು ಸ್ಪಷ್ಟವಾಗಿತ್ತು. ಆದರೆ ಮಡಿಲ ಮೀಡಿಯಾಗಳು ಮಾತ್ರ ಅಕ್ರಮವೆಸಗಿದವನ ರಕ್ಷಣೆಗೆ ನಿಂತಿದ್ದವು. ಪತ್ರಕರ್ತರಿಂದ ತಪ್ಪುಗಳಾಗುವುದಿಲ್ಲ ಎಂದಲ್ಲ, ಆಗುತ್ತವೆ. ಆದರೆ ಅನಿಲ್ ಮಾಸಿಹ್ ವಿಚಾರದಲ್ಲಿ ಮಡಿಲ ಮೀಡಿಯಾಗಳು ಎಸಗಿರುವ ಪ್ರಮಾದಕ್ಕೆ ಸಮರ್ಥನೆಯಿಲ್ಲ. ಚುನಾವಣಾ ಅಕ್ರಮವನ್ನು ಮರೆಮಾಚುವ ಕಸರತ್ತು, ತಪ್ಪಲ್ಲವೆಂದು ಪ್ರತಿಪಾದಿಸುವ ಕಸರತ್ತಿನಲ್ಲಿ ಮಡಿಲ ಮಿಡಿಯಾ ಪತ್ರಕರ್ತರು ಬಿದ್ದಿದ್ದರು. ವಿರೂಪಗೊಳಿಸಿಲ್ಲ ಎಂದು ವಾದಿಸಿದ್ದರು.

ಅದರಿಂದಾಗಿ ಅವರಿಗೆ ಮೋದಿಯ ಶಹಬ್ಬಾಸ್ಗಿರಿ ಸಿಗುವುದೆ ? ಪತ್ರಕರ್ತರಾಗುವುದು ಪ್ರಧಾನಿ ಜೊತೆ ಫೊಟೊ ತೆಗೆಸಿಕೊಳ್ಳುವುದಕ್ಕಲ್ಲ. ಬದಲಾಗಿ ಪ್ರಧಾನಿಗೆ ಮುಖಾಮುಖಿಯಾಗಿ ಅವರನ್ನು ಪ್ರಶ್ನಿಸುವುದಕ್ಕೆ, ಆದರೆ ಬಹಳಷ್ಟು ಪತ್ರಕರ್ತರು ಪತ್ರಿಕಾ ಧರ್ಮ ಬಿಟ್ಟು ಯಾವತ್ತೋ ದಲ್ಲಾಳಿಗಳಾಗಿಬಿಟ್ಟಿದ್ದಾರೆ. ಹಾಗಿದ್ದೂ, ತಾವು ಪತ್ರಿಕೋದ್ಯಮವನ್ನೇ ಮಾಡುತ್ತಿರುವ ಭ್ರಮೆಯಲ್ಲಿರುತ್ತಾರೆ.

2014ರ ನಂತರ ದೇಶದಲ್ಲಿ ಪತ್ರಿಕಾ ವೃತ್ತಿ ಎಲ್ಲಿಗೆ ಬಂದಿದೆ ಎಂಬುದನ್ನು ನೋಡುತ್ತಿದ್ದೇವೆ. ದಲ್ಲಾಳಿಗಳಂಥ ಪತ್ರಕರ್ತರು, ರಾಮಮಂದಿರವನ್ನು ಸಾವಿರ ವರ್ಷ ಬಾಳಿಕೆ ಬರುವಂತೆ ಕಟ್ಟಲಾಗಿದೆ ಎಂದು ಮಾತ್ರ ಬರೆದುಕೊಂಡು ಕೂತಿರುತ್ತಾರೆ. ಅಂಥವರು ಪತ್ರಿಕಾ ಧರ್ಮವನ್ನು ಎಂದೋ ಮುಗಿಸಿಹಾಕಿದ್ದಾರೆ.

ಮಡಿಲ ಮೀಡಿಯಾದಲ್ಲಿ ಪತ್ರಕರ್ತರು ರೂಪುಗೊಳ್ಳಲು ಸಾಧ್ಯವಿಲ್ಲ. ಅಥವಾ ನಿಜವಾದ ಪತ್ರಕರ್ತರಾಗಿರುವವರು ಅಲ್ಲಿ ಬಾಳಲಾರರು. ಅನಿಲ್ ಮಾಸಿಹ್ ರಕ್ಷಣೆಗಾಗಿ ಯಾವ್ಯಾವ ಪತ್ರಕರ್ತರು ಒದ್ದಾಡಿದ್ದರೊ ಅಂಥವರು ಸರ್ಕಾರದ ವಿರುದ್ಧ ಪ್ರಶ್ನೆ ಎತ್ತಲಾರರು. ಸತ್ಯವನ್ನು ಹೊರಗೆ ತರಲಾರರು. ಮಡಿಲ ಮೀಡಿಯಾಗಳ ಕಾರ್ಯಕ್ರಮಗಳನ್ನು ನೋಡಿದರೆ, ಅವು ಬಿಜೆಪಿಯ ತಪ್ಪುಗಳ ಬಗ್ಗೆ ಮಾತಾಡುತ್ತವೆಯೆ? ಪ್ರಧಾನಿಗೆ ಪ್ರಶ್ನೆಗಳನ್ನು ಹಾಕುತ್ತವೆಯೆ? ಖಂಡಿತ ಇಲ್ಲ.

ಮಾಸಿಹ್ ಕ್ಯಾಮೆರಾಗಳ ಎದುರಲ್ಲಿಯೇ ಅಕ್ರಮವೆಸಗುವ ದುಸ್ಸಾಹಸ ಮಾಡಿದ್ದರೂ ಮಡಿಲ ಮೀಡಿಯಾಗಳು ಅದರ ಬಗ್ಗೆ ಕಣ್ಣು ಮುಚ್ಚಿಕೊಂಡವು. ಇತರರಿಗೂ ಅದನ್ನು ಬೇರೆ ರೀತಿಯಲ್ಲಿ ತೋರಿಸಲು ಪ್ರಯತ್ನ ಪಟ್ಟವು. ಈಗ ಆತ ಅಸಿಂಧು ಎಂದಿದ್ದ ಮತಪತ್ರಗಳನ್ನೇ ಸುಪ್ರೀಂ ಕೋರ್ಟ್ ಮಾನ್ಯ ಮಾಡಿದೆ. ಅದರ ಆಧಾರದಲ್ಲಿ ಹೊಸ ಮೇಯರ್ ಘೋಷಣೆಯಾಗಿದೆ.

ಇಲ್ಲಿ ಬಿಜೆಪಿಗಾಗಿ ಅಕ್ರಮವೆಸಗಿದ್ದ ಅನಿಲ್ ಮಾಸಿಹ್ ಒಬ್ಬಂಟಿಯಾಗಿರಲಿಲ್ಲ. ಆತನನ್ನು ಬಚಾವ್ ಮಾಡಲು ದೇಶದ ಪ್ರತಿಷ್ಠಿತ ವಕೀಲ ಮುಕುಲ್ ರೋಹ್ಟಗಿಯೇ ಇದ್ದರು. ಆಮ್ ಆದ್ಮಿ ಪಕ್ಷ ಹೇಳಿರುವಂತೆ, ಅನಿಲ್ ಮಾಸಿಹ್ ಕಡೆಗೆ ಇಡೀ ಕೇಂದ್ರ ಸರ್ಕಾರವೇ ಇತ್ತು.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಇದ್ದರು. ದೇಶದ ಅತಿ ದೊಡ್ಡ ವಕೀಲ, ಮೋದಿ ಸರಕಾರದ ಈ ಮುಂಚಿನ ಅವಧಿಯಲ್ಲಿ ಅಟಾರ್ನಿ ಜನರಲ್ ಆಗಿದ್ದ ರೋಹ್ಟಗಿ ಇದ್ದರು. ಅಂದರೆ ಪೂರ್ತಿ ಸರ್ಕಾರವೇ ಮಾಸಿಹ್ ಕಡೆ ನಿಂತಿತ್ತು. ವಿಷಯ ಮೇಯರ್ ಚುನಾವಣೆಯದ್ದಾಗಿತ್ತು. ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎನ್ನುವುದು ಸ್ಪಷ್ಟವಾಗಿತ್ತು.

ಇದರ ವಿಚಾರಣೆ ವೇಳೆಯಲ್ಲಿ ಐತಿಹಾಸಿಕ ವಿದ್ಯಮಾನಕ್ಕೆ ಸುಪ್ರೀಂ ಕೋರ್ಟ್ ಸಾಕ್ಷಿಯಾಯಿತು. ವಿಚಾರಣೆಯ ವೇಳೆಯೇ ಮತಪತ್ರಗಳ ಮರು ಎಣಿಕೆ ನಡೆಯಿತು. ನ್ಯಾಯಾಧೀಶರೇ ಫಲಿತಾಂಶವನ್ನು ಘೋಷಿಸಿದರು. ಕುಲದೀಪ್ ಕುಮಾರ್ ಅವರನ್ನು ಮೇಯರ್ ಎಂದು ಘೋಷಿಸಲಾಯಿತು. ತೀರ್ಪಿಗೆ ಮುನ್ನವೇ ಸೋಮವಾರವೇ ಬಿಜೆಪಿಯ ಮನೋಜ್ ಸೋಂಕರ್ ಮೇಯರ್ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಆ ನಡುವೆಯೇ ಆಮ್ ಆದ್ಮಿ ಪಾರ್ಟಿಯ ಮೂವರು ಬಿಜೆಪಿಗೆ ವಲಸೆ ಹೋಗಿದ್ದರು. ಕುದುರೆ ವ್ಯಾಪಾರ ನಡೆದಿರುವುದು ಸ್ಪಷ್ಟವಾಗಿತ್ತು.   ಮರು ಚುನಾವಣೆ ನಡೆದರೆ ತಾನೇ ಗೆಲ್ಲಲು ಬಿಜೆಪಿ ಎಲ್ಲ ವ್ಯವಸ್ಥೆಯನ್ನೂ ಮಾಡಿಕೊಂಡಿತ್ತು. ಆದರೆ ಅಂಥ ಸಂದರ್ಭವೇ ಬರಲಿಲ್ಲ. ಹೊಸದಾಗಿ ಚುನಾವಣೆ ನಡೆಸಬೇಕೆಂಬ ಬಿಜೆಪಿ ಮನವಿಯನ್ನು ತಿರಸ್ಕರಿಸಿದ ಕೋರ್ಟ್, ಅನರ್ಹಗೊಳಿಸಲಾಗಿದ್ದ 8 ಮತಗಳನ್ನೂ ಸೇರಿಸಿ ಮತ ಎಣಿಕೆಗೆ ಸೂಚಿಸಿತು.

 

ಅಸಿಂಧು ಎನ್ನಲಾಗಿದ್ದ ಮತಗಳ ಎಣಿಕೆ ಮಾಡುವುದರೊಂದಿಗೆ ಮೇಯರ್ ಘೋಷಣೆ ಆಯಿತು. ಮೇಯರ್ ಚುನಾವಣೆಯಲ್ಲಿಯೇ ಬಿಜೆಪಿ ಈ ಮಟ್ಟಿಗೆ ಅಕ್ರಮ ಎಸಗಬಲ್ಲುದಾದರೆ, ಬಾಕಿ ಚುನಾವಣೆಯಲ್ಲಿ ಏನಾದೀತು ಎಂಬುದು ನಿಜಕ್ಕೂ ಆತಂಕಕಾರಿಯಾಗಿದೆ. 36 ಮತಗಳ ಚುನಾವಣೆಯಲ್ಲೇ ಹೀಗಾದರೆ ಇನ್ನು ಇತರ ಚುನಾವಣೆಗಳಲ್ಲಿ ಏನೇನಾಗಬಹುದು? ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ 20 ಮತಗಳೊಂದಿಗೆ ಬಹುಮತ ಹೊಂದಿದ್ದವು. ಆದರೆ ವಿಪಕ್ಷಗಳ 8 ಮತಪತ್ರಗಳನ್ನು ಅಸಿಂಧುಗೊಳಿಸಿ, 16 ಮತಗಳಿದ್ದ ಬಿಜೆಪಿ ಅಭ್ಯರ್ಥಿ ಗೆದ್ದಿರುವುದಾಗಿ ಘೋಷಿಸಲಾಗಿತ್ತು.

ತಮಾಷೆಯೆಂದರೆ, ಅಸಿಂಧುವಾದ ಮತಪತ್ರಗಳು ವಿಪಕ್ಷಗಳದ್ದು ಮಾತ್ರವಾಗಿದ್ದವೆ ಹೊರತು ಬಿಜೆಪಿಯ ಯಾವ ಮತಪತ್ರವೂ ಅನರ್ಹಗೊಂಡಿರಲಿಲ್ಲ. ಅವತ್ತು ಮೇಯರ್ ಆಗಿ ಬಿಜೆಪಿ ಅಭ್ಯರ್ಥಿ ಘೋಷಣೆಯಾದಾಗ ಬಿಜೆಪಿ ಸಂಭ್ರಮಿಸಿತ್ತು. ಜೆಪಿ ನಡ್ಡಾ ವಿಪಕ್ಷ ಮೈತ್ರಿಕೂಟವನ್ನು ಗೇಲಿ ಮಾಡಿದ್ದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿನ ಬಿಜೆಪಿಯ ಯಶಸ್ಸಿನ ಬಗ್ಗೆ ನಡ್ಡಾ ಮತ್ತೊಮ್ಮೆ ಮಾತನಾಡಿದ್ದರು. ಬಿಜೆಪಿ ಎದುರು ವಿಪಕ್ಷಗಳಿಗೆ ಸೋಲಾಗಿರುವುದನ್ನು ಭಾರೀ ಹೆಮ್ಮೆಯಿಂದ ಹೇಳಿಕೊಂಡಿದ್ದರು. ತಾವು ಮೇಯರ್ ಚುನಾವಣೆಯನ್ನು ಗೆದ್ದಿರುವುದು ಹೇಗೆ ಎಂಬ ವಿಚಾರ ಇವರೆಲ್ಲರಿಗೂ ಗೊತ್ತೇ ಇತ್ತಲ್ಲವೆ ? ಕಡೆಗೂ, ಪ್ರಜಾಪ್ರಭುತ್ವದ ಹತ್ಯೆಯಾಗುವುದನ್ನು ಸುಪ್ರೀಂ ಕೋರ್ಟ್ ತಡೆದಿದೆ.

ಸ್ವಾಯತ್ತ ಸಂಸ್ಥೆ ಗಳೆಲ್ಲವೂ ಒಟ್ಟಾಗಿ, ಪ್ರಜಾತಂತ್ರಕ್ಕೆ ಮಾರಕವಾಗಿರುವ ಸಂದರ್ಭಗಳನ್ನು ಇದೇ ರೀತಿಯಲ್ಲಿ ಎದುರಿಸಿ, ಪ್ರಜಾಸತ್ತೆಯನ್ನು ಉಳಿಸಬೇಕಿದೆ. ಚಂಡೀಘಡ ಮೇಯರ್ ಚುನಾವಣೆಯಲ್ಲಿ ನ್ಯಾಯವಾಗಿ ಗೆಲ್ಲಲೇಬೇಕಿದ್ದ ಅಭ್ಯರ್ಥಿಯೇ ಈಗ ಮೇಯರ್ ಆಗಿ ಘೋಷಣೆಯಾಗಿರುವುದು ಪ್ರಜಾತಂತ್ರದ ದೊಡ್ಡ ಗೆಲುವು.

ಮತ್ತದು, ಪ್ರಜಾಸತ್ತೆಯ ಉಳಿವಿಗಾಗಿ ಸುಪ್ರೀಂ ಕೋರ್ಟ್ ವಿಳಂಬಕ್ಕೆ ಎಡೆಯಿಲ್ಲದಂತೆ ಕಾರ್ಯಪ್ರವೃತ್ತವಾದ ಅತಿ ಮುಖ್ಯ ವಿದ್ಯಮಾನದ ಫಲ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಸುಪ್ರೀಮ್ ಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ಕೊಡಬೇಕಿತ್ತು. ಸುಪ್ರೀಮ್ ಕೋರ್ಟಿನ ಈ ಐತಿಹಾಸಿಕ ತೀರ್ಪು ಮದರ್ ಆಫ್ ಡೆಮಾಕ್ರಸಿ ಯ ಮಾನ ಉಳಿಸಿದೆ ಎಂದು ಅವರು ಪ್ರತಿಕ್ರಿಯೆ ಕೊಡಬೇಕಿತ್ತು. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದ ಹಾಗೆ ಕಾಣುತ್ತಿಲ್ಲ. ಯಾಕೆ ? ದೇಶದ ಯಾವ್ಯಾವುದೋ ವಿಷಯಗಳ ಬಗ್ಗೆ ಕೂಡಲೇ ಪ್ರತಿಕ್ರಿಯೆ ನೀಡುವ ಪ್ರಧಾನಿ ಹಾಗೂ ಅಮಿತ್ ಶಾ ಈ ಬಗ್ಗೆ ಯಾಕೆ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ ?

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!