ಸರಕಾರದ ವಿರುದ್ಧ ಅಪಪ್ರಚಾರ : ಬಿಜೆಪಿಗೆ ಅರ್ಚಕರಿಂದ ಮಂಗಳಾರತಿ | BJP | Karnataka | Congress Guarantee

Update: 2024-03-06 04:39 GMT
Editor : Ismail | Byline : ಆರ್. ಜೀವಿ

ಸುಳ್ಳು ಹಾಗು ಅಪಪ್ರಚಾರವೇ ರಾಜಕೀಯ ಪಕ್ಷವೊಂದರ ಬಂಡವಾಳ ಎಂದಾದರೆ ಅದು ಎಂತೆಂತಹ ಕೆಟ್ಟ ಪರಿಸ್ಥಿತಿ ತಂದಿಡುತ್ತದೆ ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಶನಿವಾರದಿಂದ ಬಿಜೆಪಿ ಹಾಗು ಆ ಪಕ್ಷದ ಮುಖಂಡರು ನೀಡುತ್ತಿರುವ ಹೇಳಿಕೆಗಳೇ ಸಾಕ್ಷಿ. ತೋರಿಸಲು ಬೇರಾವುದೇ ಜನಪರ ಸಾಧನೆ ಇಲ್ಲದೆ ಕೇವಲ ಸಮಾಜದಲ್ಲಿ ವಿವಿಧ ಸಮುದಾಯಗಳನ್ನು ಪರಸ್ಪರ ಎತ್ತಿಕಟ್ಟುವುದೇ ರಾಜಕೀಯ ಎಂದುಕೊಂಡವರಿಂದ ಸಮಾಜದಲ್ಲಿ ಏನೇನೆಲ್ಲ ಅವಾಂತರ ಆಗುತ್ತದೆ ಎಂಬುದಕ್ಕೂ ಇದು ಅತ್ಯುತಮ ನಿದರ್ಶನ.

ವಿವಾದಕ್ಕೆ ಆಸ್ಪದವೇ ಇಲ್ಲದಲ್ಲಿ ವಿವಾದ ಸೃಷ್ಟಿಸುವುದು, ಹಸಿ ಹಸಿ ಸುಳ್ಳು ಹೇಳುವುದು, ಹಿಂದೂ ಮುಸ್ಲಿಮ್ ಎಂದು ಜನರನ್ನು ವಿಭಜಿಸುವುದು, ಸರ್ಕಾರದ ವಿರುದ್ಧ ಜನರಲ್ಲಿ ಅಸಹನೆ ಉಂಟು ಮಾಡುವುದು - ಬಿಜೆಪಿಗೆ ರಾಜಕೀಯ ಅಂದ್ರೆ ಇವೇ ಎಂಬಂತಾಗಿದೆ. ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕ-2024 ಮೊನ್ನೆ ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ಅನುಮೋದನೆ ಪಡೆಯುವಲ್ಲಿ ವಿಫಲವಾಗಿದೆ. ಶುಕ್ರವಾರ ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಅವರು ಮಂಡಿಸಿದ ಈ ವಿಧೇಯಕ ಮೇಲ್ಮನೆಯಲ್ಲಿ ತಿರಸ್ಕೃತವಾಗಿ ಸರ್ಕಾರಕ್ಕೆ ಮುಖಭಂಗವಾಗಿದೆ. ವಿಧೇಯಕದಲ್ಲಿನ ಕೆಲವು ಅಂಶಗಳಿಗೆ ಬಿಜೆಪಿ ಸದಸ್ಯರು ತೀವ್ರ ಅಕ್ಷೇಪ ವ್ಯಕ್ತಪಡಿಸಿದರು. ದೇಗುಲಗಳ ನಿವ್ವಳ ಆದಾಯದಲ್ಲಿ ಶೇ.10 ನಿಧಿ ಸಂಗ್ರಹ ಮಾಡುವುದು ಸರಿಯಲ್ಲ. ಈ ನಿರ್ಧಾರವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು. ಈ ಮಧ್ಯೆ ವಿಧೇಯಕವನ್ನು ಧ್ವನಿಮತಕ್ಕೆ ಹಾಕಲು ಉಪ ಸಭಾಪತಿ ಸೂಚಿಸಿದರು. ಆದರೆ, ಕಾಂಗ್ರೆಸ್ ನ ಕೇವಲ 9 ಸದಸ್ಯರು ಮಾತ್ರ ಸದನದಲ್ಲಿದ್ದು, ಬಿಜೆಪಿ-ಜೆಡಿಎಸ್‌ ಸದಸ್ಯರು ವಿಧೇಯಕದ ವಿರುದ್ಧ ಮತ ಹಾಕಿದ್ದರಿಂದ ಅದು ತಿರಸ್ಕಾರಗೊಂಡಿತು.

ಈ ವಿಧೇಯಕ ತಿರಸ್ಕೃತವಾದ ಬೆನ್ನಿಗೇ ಬಿಜೆಪಿ ಸರಕಾರದ ವಿರುದ್ಧ ಅಪಪ್ರಚಾರ ಶುರು ಮಾಡಿಬಿಟ್ಟಿತು.

" ಜಾಗೃತರಾಗಿ ಹಿಂದೂಗಳೇ, ದೇವರ ಹುಂಡಿಗೆ ಕನ್ನ ಹಾಕುತ್ತಿದ್ದಾರೆ ಕನ್ನರಾಮಯ್ಯನವರು."

" ಹಿಂದೂಗಳು ದೇವಸ್ಥಾನದ ಹುಂಡಿಗೆ ಹಾಕುವ ದಾನವನ್ನು ಸಿದ್ದರಾಮಯ್ಯರ ಹುಂಡಿಗೆ ವರ್ಗಾಯಿಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ ಎಂದು ಅಪಪ್ರಚಾರ ಹಾಗು ಸುಳ್ಳಿನ ಅಭಿಯಾನವನ್ನೇ ಶುರು ಮಾಡಿತು ಬಿಜೆಪಿ. "

ಅದರ ಬೆನ್ನಿಗೇ, " ಸರ್ಕಾರದ ಖಜಾನೆಯನ್ನು ಬೇಕಾಬಿಟ್ಟಿ ಬರಿದು ಮಾಡಿ ದೇವಸ್ಥಾನಗಳ ಹುಂಡಿಗೆ ಕೈ ಹಾಕಲು ಸಿದ್ದರಾಮಯ್ಯ ಸರ್ಕಾರ ಧರ್ಮಾದಾಯ ವಿಧೇಯಕ ಮಸೂದೆಯನ್ನು ಅಂಗೀಕರಿಸಲು ಮಾಡಿದ ಪ್ರಯತ್ನ ಬಿಜೆಪಿಯ ಸೈದ್ಧಾಂತಿಕ ಬಲದಿಂದ ವಿಫಲವಾಗಿದೆ. ಭಾರತೀಯ ಧರ್ಮವನ್ನು ದುರುಪಯೋಗಪಡಿಸಿ ದೇವಸ್ಥಾನಗಳ ಹಣ ಹೊಡೆಯುವ ಹುನ್ನಾರ ಮಾಡಿದ ಕಾಂಗ್ರೆಸ್ ಸರ್ಕಾರಕ್ಕೆ ಸೋಲಿನ ಪಾಠದ ರುಚಿ ಸಿಕ್ಕಿದೆ.

ರಾಮನ ಅಸ್ತಿತ್ವ ಪ್ರಶ್ನಿಸುವ ಮನಸ್ಥಿತಿ ಇಟ್ಟುಕೊಂಡು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನೇ ವಿರೋಧಿಸಿ, ಹಿಂದೂ ಧರ್ಮವೇ ಒಂದು ವ್ಯಾಧಿ ಎನ್ನುವವರ ಜತೆ ಕೈಜೋಡಿಸಿ ಭಾರತೀಯ ಸಂಸ್ಕೃತಿಯ ಸರ್ವನಾಶಕ್ಕೆ ಕೈ ಹಾಕುವ ಸಿದ್ದರಾಮಯ್ಯನವರ ಮುಂದಿನ ಸರ್ವಪ್ರಯತ್ನಗಳೂ ವಿಫಲವಾಗುವುದು ಖಚಿತ ಮತ್ತು ನಿಶ್ಚಿತ " ಎಂದು ಹೇಳಿತು ಬಿಜೆಪಿ.

ಎಂದಿನಂತೆ ಬಿಜೆಪಿ ಇದನ್ನು ಶುರು ಮಾಡಿದ ಬೆನ್ನಿಗೇ ಅದರ ಐಟಿ ಸೆಲ್, ಸೋಷಿಯಲ್ ಮೀಡಿಯ ಪಡೆ ಹಾಗು ಮೀಡಿಯಾಗಳಲ್ಲೂ ಅದಕ್ಕೆ ಪೂರಕವಾಗಿಯೇ ಅಪಪ್ರಚಾರ ಶುರುವಾಯಿತು. ಪ್ರಮುಖ ಮಾಧ್ಯಮಗಳೇ ಜನರ ದಾರಿ ತಪ್ಪಿಸುವ ರೀತಿಯಲ್ಲಿ ಹೆಡ್ ಲೈನ್ ಗಳನ್ನು ಕೊಟ್ಟು ಸಿದ್ದರಾಮಯ್ಯ ಸರಕಾರ ದೇವಸ್ಥಾನದ ಹುಂಡಿಯ ಹಣವನ್ನು ಬಾಚಿಕೊಳ್ಳುತ್ತಿದ್ದಾರೆ ಎಂಬಂತೆ ವರದಿ ಮಾಡಿದವು.

ಆದರೆ ಈ ಎಲ್ಲ ಅಪಪ್ರಚಾರಕ್ಕೂ ಸತ್ಯಕ್ಕೂ ಬಹಳ ಸಂಬಂಧವೇ ಇರಲಿಲ್ಲ. ಆ ಮಸೂದೆಯಲ್ಲಿ ಇದ್ದಿದ್ದೇ ಬೇರೆ. ಬಿಜೆಪಿ ಅಪಪ್ರಚಾರ ಮಾಡಿದ್ದೇ ಬೇರೆ. ಮುಜರಾಯಿ ಇಲಾಖೆಯ ವ್ಯಾಪ್ತಿಯ ಒಂದು ಕೋಟಿಗೂ ಅಧಿಕ ಆದಾಯ ಇರುವ ದೇವಸ್ತಾನಗಳ ಹುಂಡಿಯಿಂದ ವರ್ಷಕ್ಕೆ ಶೇ 10 ರಷ್ಟು ಹಾಗು ಹತ್ತು ಲಕ್ಷದಿಂದ ಒಂದು ಕೋಟಿವರೆಗಿನ ಆದಾಯ ಇರುವ ದೇವಸ್ಥಾನಗಳ ಹುಂಡಿಯಿಂದ ಶೇ 50 ರಷ್ಟನ್ನು ಸಾಮಾನ್ಯ ಸಂಗ್ರಹಣಾ ನಿಧಿಗೆ ಸಂದಾಯ ಮಾಡುವುದು. ಹಾಗೆ ಸಂಗ್ರಹವಾದ ನಿಧಿಯನ್ನು ಸಿ ವರ್ಗದ ದೇವಸ್ಥಾನಗಳಿಗೆ ಬಳಸುವುದನ್ನು ಕಡ್ಡಾಯಗೊಳಿಸುವ ಪ್ರಸ್ತಾವ ಆ ಮಸೂದೆಯಲ್ಲಿತ್ತು.

ಅಂದ್ರೆ ಹೆಚ್ಚು ಆದಾಯ ಇರುವ ದೇವಸ್ಥಾನಗಳ ನಿಧಿಯಿಂದ ಒಂದು ಭಾಗವನ್ನು ಕಡಿಮೆ ಆದಾಯ ಇರುವ ದೇವಸ್ಥಾನಗಳಿಗೆ ಬಳಸುವ ಸದುದ್ದೇಶ ಇರುವ ಮಸೂದೆ ಅದು. ಅದರಲ್ಲಿ ಸರಕಾರ ದೇವಸ್ಥಾನಗಳ ಹುಂಡಿಗೆ ಕೈ ಹಾಕಿತು ಎಂದು ಹೇಳುವುದಕ್ಕೆ ಆಸ್ಪದವೇ ಇಲ್ಲ.

ಆದರೆ ಬಿಜೆಪಿಗೂ ಸತ್ಯಕ್ಕೂ ಆಗಿ ಬರೋದೇ ಇಲ್ಲ. ಹಾಗಾಗಿ ಬಿಜೆಪಿ ಮಸೂದೆಯ ಎರಡನೇ ಭಾಗವನ್ನು ಮುಚ್ಚಿಟ್ಟು ಸರಕಾರ ದೇವಸ್ಥಾನದ ಹುಂಡಿಯಿಂದ ಹಣ ಬಾಚಿಕೊಳ್ಳುತ್ತಿದೆ ಎಂದು ಸುಳ್ಳು ಪ್ರಚಾರ ಶುರು ಮಾಡಿ ಬಿಟ್ಟಿತು. ರಾಜ್ಯದ ದೇವಾಲಯಗಳ ಹುಂಡಿ ಹಣವನ್ನು ರಾಜ್ಯ ಸರ್ಕಾರ ಒಳ್ಳೆಯ ಕಾರ್ಯಗಳಿಗೆ ಬಳಸುತ್ತಿದೆಯೇ ಹೊರತು ಯಾವುದೇ ರೀತಿಯಲ್ಲೂ ದುರುಪಯೋಗವಾಗುತ್ತಿಲ್ಲ. ಬಿಜೆಪಿ ನಾಯಕರು ಈ ವಿಚಾರದಲ್ಲಿ ಸುಳ್ಳು ಆರೋಪ, ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ಈಗ ರಾಜ್ಯ ಅರ್ಚಕರ ಸಂಘ ಹೇಳಿದೆ.

ಈ ಮೂಲಕ, 'ದೇವಾಲಯಗಳ ಹಣವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಚರ್ಚ್, ಮಸೀದಿಗೆ ನೀಡುತ್ತಿದೆ ಎನ್ನುವ ಬಿಜೆಪಿಯ ಆರೋಪಕ್ಕೆ ದೇವಾಲಯಗಳ ಅರ್ಚಕರ ಸಂಘ ಸ್ಪಷ್ಟನೆ ನೀಡಿದೆ. ವಿಧಾನ ಪರಿಷತ್ತಿನಲ್ಲಿ 'ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿ ವಿಧೇಯಕ' ಅಂಗೀಕಾರಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ಧಾರ್ಮಿಕ ದೇವಾಲಯಗಳ ಅರ್ಚಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎಸ್. ದೀಕ್ಷಿತ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ವಿಧೇಯಕದ ಪರವಾಗಿ ಮಾತನಾಡಿದ್ದಾರೆ.

ರಾಜ್ಯದ ಎ ದರ್ಜೆಯ ದೇವಸ್ಥಾನಗಳ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ಈ ದೇವಸ್ಥಾನಗಳಲ್ಲಿ ನೂರಾರು ಕೋಟಿ ವ್ಯವಹಾರ ನಡೆಯುತ್ತಿದೆ, ಹಿಂದೂ ದೇವಾಲಯಗಳ ಹುಂಡಿ ಹಣ ಮಸೀದಿ ಮತ್ತು ಚರ್ಚ್‌ಗಳಿಗೆ ಹೋಗುತ್ತಿದೆ ಎಂಬ ಆರೋಪವನ್ನು ಅಲ್ಲಗಳೆಯುತ್ತೇವೆ. ಈ ವಿಚಾರದಲ್ಲಿ ಸರ್ಕಾರದ ವಿರುದ್ಧ ಬಿಜೆಪಿಯವರ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾದವು. ರಾಜ್ಯದ ಎ, ಬಿ, ಸಿ ದರ್ಜೆಯ ದೇವಾಲಯಗಳ ಹುಂಡಿ ಹಣ ಯಾವುದೇ ಕಾರಣಕ್ಕೂ ದುರುಪಯೋಗ ಆಗುತ್ತಿಲ್ಲ. ದೇವಾಲಯಗಳ ಹಣವನ್ನು ರಾಜ್ಯ ಸರ್ಕಾರ ಒಳ್ಳೆಯ ಕೆಲಸಕ್ಕೆ ಉಪಯೋಗಿಸುತ್ತದೆ. ದೇವಾಲಯಗಳಲ್ಲಿ ನಿತ್ಯ ಕೋಟ್ಯಂತರ ಹಣ ಸಂಗ್ರಹ ಆಗುತ್ತಿದ್ದು, ಇದನ್ನು ಬಿಜೆಪಿ ಸಹಿಸುತ್ತಿಲ್ಲ ಎನಿಸುತ್ತಿದೆ. ಈ ಬಗ್ಗೆ ಅಪಪ್ರಚಾರ ಮಾಡದಂತೆ ಬಿಜೆಪಿಯ ನಾಯಕರಿಗೂ ಮನವಿ ಮಾಡುತ್ತೇವೆ.

ಈ ಹಿಂದಿನ ಸರ್ಕಾರ ನಮಗೆ ತಸ್ತಿಕ್ ಕೊಟ್ಟಿರಲಿಲ್ಲ. ಆದರೆ ಹೊಸ ಸರ್ಕಾರ ಬಂದ ತಕ್ಷಣ ಸಚಿವ ರಾಮಲಿಂಗಾರೆಡ್ಡಿ ಅವರು ನಮ್ಮ ಬೇಡಿಕೆ ಈಡೇರಿಸಿದ್ದಾರೆ. ಈ ವಿಚಾರದಲ್ಲಿ ಯಾರ ವಿರುದ್ದವೂ ಪ್ರತಿಭಟನೆ ಮಾಡುವುದಿಲ್ಲ. ಆದರೆ, ಪ್ರತಿಯೊಬ್ಬ ಬಿಜೆಪಿ ನಾಯಕರ ಮನೆಗೂ ಹೋಗಿ ವಸ್ತು ಸ್ಥಿತಿ ತಿಳಿಸಿ ನಿಮ್ಮ ವಿರೋಧ ಸರಿಯಲ್ಲ ಎಂಬುದನ್ನು ಮನವರಿಕೆ ಮಾಡಿಕೊಡುತ್ತೇವೆ ಎಂದಿದ್ದಾರೆ.

ಈ ಬಗ್ಗೆ ನಿನ್ನೆ ರವಿವಾರ ಪ್ರತಿಕ್ರಿಯಿಸಿರುವ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು, ಧಾರ್ಮಿಕ ದತ್ತಿ ಕಾಯ್ದೆ ತಿದ್ದುಪಡಿ ಮಾಡಿದವರೇ ಬಿಜೆಪಿಯವರು. ಈ ಕಾಯ್ದೆ ಜಾರಿಗೆ ತಂದಿದ್ದೇ ವಿಜಯೇಂದ್ರ ಅವರ ಅಪ್ಪ, ಯಡಿಯೂರಪ್ಪ ಅವರೇ 2011ರಲ್ಲಿ ಈ ಕಾಯ್ದೆ ತಂದಿದ್ದು ಎಂದು ಹೇಳಿದ್ದಾರೆ.

ಕರ್ನಾಟಕ ಹಿಂದು ಧಾರ್ಮಿಕ ಸಂಸ್ಥೆಗಳು ಧರ್ಮಾದಾಯ ದತ್ತಿಗಳ ಕಾಯ್ದೆಗೆ ತಿದ್ದುಪಡಿ ಮಾಡುತ್ತಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರೋಧ ವ್ಯಕ್ತಪಡಿಸಿ, ಸರ್ಕಾರದ ಬೊಕ್ಕಸ ಖಾಲಿಯಾಗಿದೆ. ಹೀಗಾಗಿ ದೇವಸ್ಥಾನಗಳ ಹುಂಡಿಗೆ ಕೈ ಹಾಕಿದ್ದಾರೆ ಎಂಬ ಆರೋಪಕ್ಕೆ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ.

'ಮೊದಲು ಎಲ್ಲ ದೇವಸ್ಥಾನಕ್ಕೆ ಶೇ.5 ತೆರಿಗೆ ಇತ್ತು. ಯಡಿಯೂರಪ್ಪನವರು ₹10 ಲಕ್ಷಕ್ಕಿಂತ ಹೆಚ್ಚು ಆದಾಯ ಇರುವ ದೇವಸ್ಥಾನಗಳಿಗೆ ಶೇ.10 ರಷ್ಟು ಟೂಲ್ ಫಂಡ್ ಮಾಡಿದರು. ವಿಧಾನಸಭೆಯಲ್ಲಿ ಬಿಜೆಪಿಯವರೇ ಸ್ವಾಗತ ಮಾಡಿದ್ದಾರೆ. 40 ಸಾವಿರ ಜನ ಅರ್ಚಕರು, ನೌಕರರಿದ್ದಾರೆ. ಅವರ ಕುಟುಂಬಗಳಿಗೆ ಸಹಾಯ ಮಾಡುವ ಕೆಲಸ ಮಾಡುತ್ತಿದ್ದೇವೆ. ಪ್ರತಿ ವರ್ಷ 1200 ಸಿ ದರ್ಜೆ ದೇವಸ್ಥಾನಗಳಿಗೆ ಅನುದಾನ ಕೊಡುತ್ತೇವೆ. ಇದಕ್ಕೂ ಮುಂಚೆ ಯಾಕೆ ಕೊಡಲಿಲ್ಲ' ಎಂದು ಪ್ರಶ್ನಿಸಿದ್ದಾರೆ .

'ಧಾರ್ಮಿಕ ದತ್ತಿ ಕಾಯ್ದೆ ತಿದ್ದುಪಡಿ ಮಾಡಿದವರೇ ಬಿಜೆಪಿಯವರು. ಸೆಕ್ಷನ್ 19ರಲ್ಲಿ 2011ರಲ್ಲಿ ಬೇರೆ ಧಾರ್ಮಿಕ ಸಂಸ್ಥೆಗಳಿಗೆ ಹಣ ಕೊಡಬಹುದು ಎಂದು ಬಿಜೆಪಿಯವರೆ ತಿದ್ದುಪಡಿ ಮಾಡಿದರು. ಈಗ ಅದನ್ನು ಕೇವಲ ಸಿ ದರ್ಜೆ ದೇವಸ್ಥಾನಗಳಿಗೆ ಮಾತ್ರ ಕೊಡಬೇಕು ಎಂದು ನಾವು ಬಂದೋಬಸ್ತ್ ಮಾಡಿದ್ದೇವೆ. ಹೆಚ್ಚುವರಿ ಹಣ ಬರುವುದರಲ್ಲಿ 1 ಸಾವಿರ ಸಿ ದರ್ಜೆ ದೇವಸ್ಥಾನಗಳಿಗೆ ₹25 ಕೋಟಿ ರೂ ಹಣ ಬಿಡುಗಡೆ ಮಾಡುತ್ತೇವೆ . ₹ 7 ಕೋಟಿ ರೂ ವೆಚ್ಚದಲ್ಲಿ 40 ಸಾವಿರ ಅರ್ಚಕರಿಗೆ ₹5 ಲಕ್ಷ ವಿಮೆ ಮಾಡಿಸುತ್ತೇವೆ. ಅರ್ಚಕರ ಮಕ್ಕಳ ವಿದ್ಯಾಭ್ಯಾಸಕ್ಕೆ ₹5 ಕೋಟಿ ಶಿಷ್ಯವೇತನ, ಅರ್ಚಕರ ಮೂರು ಸಂಘದವರು ಮನೆ ನಿರ್ಮಿಸಿಕೊಳ್ಳಲು ₹15 ಕೋಟಿ ತೆಗೆದಿಟ್ಟಿದ್ದೇವೆ' ಎಂದರು.

ದತ್ತಿ ಕಾಯ್ದೆ ಮುಸ್ಲಿಮರ ಮಸೀದಿಗಳಿಗೂ ಅನ್ವಯವಾಗುತ್ತಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, 'ಅವರಿಗೆ ಒಂದು ಪೈಸಾ ಕೋಡೋದಿಲ್ಲ. ಈ ಕಾಯ್ದೆ ಬಂದಿದ್ದು 1997ರಲ್ಲಿ. ಆದರೆ ಜಾರಿಯಾಗಿದ್ದು 2003ರಲ್ಲಿ. 2011ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ತಂದು ಧಾರ್ಮಿಕ ಪರಿಷತ್ ಗೆ ಕೊಟ್ಟಿದ್ದೇ ಯಡಿಯೂರಪ್ಪನವರು' ಎಂದರು.

'ನಾನು ಹಿಂದು ಧಾರ್ಮಿಕ ಪರಿಷತ್‌ಗೆ ಮಂತ್ರಿ. ಅವರದ್ದು ಬೇರೆ ನಮ್ಮದು ಬೇರೆ ಕಾನೂನು ಇರುತ್ತಾ? ದೇವಸ್ಥಾನಗಳ ಹಣ ಮಸೀದಿಗಳಿಗೆ ಹೋಗಲ್ಲ. 34 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳಿಂದ ಬರುವ ಹಣದಲ್ಲಿ ಒಂದು ಪೈಸೆಯನ್ನೂ ಬೇರೆ ಧರ್ಮಗಳಿಗೆ ಕೊಡಲು ಆಗಲ್ಲ. ಬೇರೆ ಧರ್ಮ ಅಲ್ಲ, ಒಂದು ದೇವಸ್ಥಾನದ ಹಣ ಇನ್ನೊಂದು ದೇವಸ್ಥಾನಕ್ಕೂ ಕೊಡೋಕೆ ಬರಲ್ಲ. ಸರ್ಕಾರಕ್ಕೂ ಈ ದೇವಸ್ಥಾನಗಳ ಹಣ ಬರಲ್ಲ. ದೇವಸ್ಥಾನದ ಹೆಸರಿನಲ್ಲಿಯೇ ಪ್ರತ್ಯೇಕ ಅಕೌಂಟ್ ಮಾಡಲಾಗಿರುತ್ತದೆ. ಮುಜರಾಯಿ ಇಲಾಖೆಗೂ ಈ ಹಣ ಬರಲ್ಲ. ಧಾರ್ಮಿಕ ಪರಿಷತ್‌ಗೆ ಮಾತ್ರ ಶುಲ್ಕ ಬರುತ್ತೆ' ಎಂದು ಸಚಿವರು ವಿವರಿಸಿದ್ದಾರೆ.

ಈ ಬಗ್ಗೆ ಈ ಹಿಂದೆಯೇ ಸ್ಪಷ್ಟನೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ದೇವಸ್ಥಾನಗಳ ಹುಂಡಿಗಳಲ್ಲಿ ಸಂಗ್ರಹವಾಗುವ ಹಣವನ್ನು ಹಿಂದೂ ಧರ್ಮದ ಧಾರ್ಮಿಕ ಆಚರಣೆಗಳಿಗೆ ಸಂಬಂಧಪಟ್ಟಂತೆ ಮಾತ್ರವೇ ಬಳಸಲಾಗುತ್ತದೆ. ಅಮಾಯಕ ಹಿಂದೂಗಳನ್ನು ನಮ್ಮ ಸರ್ಕಾರದ ವಿರುದ್ದ ಎತ್ತಿಕಟ್ಟುವ ದುರುದ್ದೇಶದಿಂದ ಬಿಜೆಪಿ ನಾಯಕರು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದ್ದರು.

ಒಟ್ಟಾರೆ ಇಲ್ಲದ ವಿವಾದವನ್ನು ಸೃಷ್ಟಿಸಿ ಬಿಜೆಪಿ ಸಮಾಜದಲ್ಲಿ ಪ್ರಕ್ಷುಬ್ಧತೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಅಷ್ಟೇ ಅಲ್ಲ, ಸರಕಾರ ಖಜಾನೆ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡುತ್ತಿದೆ ಎಂದು ಹೇಳುವ ಮೂಲಕ ಬಿಜೆಪಿಯವರು ಸರಕಾರದಿಂದ ಸಂವಿಧಾನ ಬದ್ಧ ಹಕ್ಕಾಗಿ ಸೌಲಭ್ಯಗಳನ್ನು ಪಡೆಯುತ್ತಿರುವ ಈ ರಾಜ್ಯದ ಬಡ ಹಿಂದೂಗಳನ್ನು ಅವಮಾನಿಸಿದ್ದಾರೆ. ಬಿಜೆಪಿಯ ಈ ಜನದ್ರೋಹಿ ರಾಜಕಾರಣವನ್ನು ರಾಜ್ಯದ ಜನರು ಗುರುತಿಸಬೇಕಾಗಿದೆ. ಈ ರಾಜ್ಯದ ದೇವಸ್ಥಾನಗಳು ಹಾಗು ಅರ್ಚಕರ ಪರವಾಗಿ ಇರುವ ಮಸೂದೆಯನ್ನು ಬೆಂಬಲಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!