ರಾಹುಲ್ ಗಾಂಧಿಗೆ ಅಮೂಲ್ಯ ಸಲಹೆ ನೀಡಿದ Stephanie Cutter

Update: 2023-08-26 13:55 GMT
Editor : Ismail | Byline : ಆರ್. ಜೀವಿ

ರಾಹುಲ್ ಗಾಂಧಿ | Photo: PTI 

ಭಾರತ್ ಜೋಡೋ ಯಾತ್ರೆಯ ವೇಳೆ, ಅದು ಕೊನೆಗೊಳ್ಳುವುದಕ್ಕೆ ಸ್ವಲ್ಪ ದಿನಗಳ ಮೊದಲು ರಾಹುಲ್ ಗಾಂಧಿ ಒಂದು ಮಾತು ಹೇಳಿದ್ದರು: "ಕಾಂಗ್ರೆಸ್ ಪಕ್ಷ ತಪಸ್ಸಿನಲ್ಲಿ ನಂಬಿಕೆ ಇಟ್ಟಿದೆ" ಎಂಬ ಅವರ ಆ ಮಾತು ಇವತ್ತಿನ ರಾಜಕೀಯ ಸನ್ನಿವೇಶದಲ್ಲಿ ಬಹಳ ಮಹತ್ವದ್ದಾಗಿತ್ತು. "ಬಿಜೆಪಿಯಾಗಲಿ, ಆರೆಸ್ಸೆಸ್ ಆಗಲಿ ತಪಸ್ಸನ್ನು ಗೌರವಿಸುವುದಿಲ್ಲ. ಆದರೆ ತನ್ನನ್ನು ಪೂಜಿಸಬೇಕೆಂತ ಒತ್ತಾಯಿಸುತ್ತದೆ. ಮೋದಿ ಕೂಡ ಇದನ್ನೇ ಬಯಸುವುದು" ಎಂದಿದ್ದರು ರಾಹುಲ್.

ನೋಟು ರದ್ದತಿ ನಿರ್ಧಾರ ತೆಗೆದುಕೊಳ್ಳುವಾಗ " ಬಡವರ ತಪಸ್ಸನ್ನು ಬಿಜೆಪಿ ಗೌರವಿಸಿತ್ತೇ " ಎಂದು ಪ್ರಶ್ನಿಸಿದ್ದ ರಾಹುಲ್, "ನಿಜಕ್ಕೂ ಇಲ್ಲ. ಅದು ತಪಸ್ಸಿನ ಮೇಲಾದ ಆಕ್ರಮಣ" ಎಂದು ವ್ಯಾಖ್ಯಾನಿಸಿದ್ದರು. ಜನರಲ್ಲಿ ಭಯ ಹುಟ್ಟಿಸಿ, ಸರ್ಕಾರಿ ಸಂಸ್ಥೆಗಳನ್ನು ಒಳಹಾಕಿಕೊಂಡು, ಹಣಬಲದ ಮೂಲಕ ಬಿಜೆಪಿ ಮತ್ತು ಆರೆಸ್ಸೆಸ್ ಮಂದಿ ಒತ್ತಾಯದ ಪೂಜೆಯ ಕಡೆಗೆ ದೇಶವನ್ನು ಕೊಂಡೊಯ್ಯುತ್ತಿದ್ದಾರೆ ಎಂಬ ರಾಹುಲ್ ಮಾತಿನಲ್ಲಿ ಸುಮ್ಮನೆ ಟೀಕೆಯಿರದೆ, ಅದನ್ನೊಂದು ತಾತ್ವಿಕ ನೆಲೆಯಲ್ಲಿ ನೋಡುವ ಒಳನೋಟವಿದ್ದುದನ್ನೂ ಯಾರೂ ಗ್ರಹಿಸಬಹುದು.

ರಾಹುಲ್ ಅವರೊಳಗೆ ಇಷ್ಟೊಂದು ಪ್ರಬುದ್ಧತೆ ಎಲ್ಲಿತ್ತು?. ಅವರ ರಾಜಕೀಯ ಪ್ರವೇಶವಾಗಲೀ, ಅನಂತರದ ಅವರ ಕುರಿತ ಚಿತ್ರಗಳಾಗಲೀ ಅವರು ಗಾಂಧಿ ಕುಟುಂಬದವರೆಂಬ ಪೂರ್ವಗ್ರಹದಿಂದ ಬಿಡಿಸಿಕೊಂಡಿದ್ದಾಗಿರಲಿಲ್ಲ.ಅವರ ರಾಜಕೀಯ ಪ್ರವೇಶವಾದ ಐದೇ ವರ್ಷಗಳ ಬಳಿಕ ಮಾಧ್ಯಮಗಳೆಲ್ಲ ಅವರ ವಿರುದ್ಧ ವೈಯಕ್ತಿಕ ದಾಳಿಗಿಳಿದಿದ್ದವು. ಇದರ ಹಿಂದೆ ಬಿಜೆಪಿ ಮತ್ತು ಸಂಘ ಪರಿವಾರ ಇತ್ತೆಂಬುದು ಕೂಡ ಗೊತ್ತಿರದ ವಿಚಾರವಲ್ಲ.

2014 ರ ಲೋಕಸಭಾ ಚುನಾವಣೆ ವೇಳೆಗೆ ರಾಹುಲ್ ವಿರುದ್ಧದ ಅಪಪ್ರಚಾರ ಅಭಿಯಾನ ತಾರಕಕ್ಕೇರಿತ್ತು. ಯಾವುದಕ್ಕೂ ಸಲ್ಲದ ವ್ಯಕ್ತಿ ರಾಹುಲ್ ಗಾಂಧಿ ಎಂಬಂತಹ ಇಮೇಜನ್ನು ಬಹಳ ಯಶಸ್ವಿಯಾಗಿ ಟಿವಿ ಚಾನಲ್ ಗಳು, ಪತ್ರಿಕೆಗಳು, ಐಟಿ ಸೆಲ್ ಎಲ್ಲವೂ ಸೇರಿ ನಿರ್ಮಿಸಿದ್ದವು. ಅದಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಖರ್ಚೂ ಆಗಿತ್ತು.

ಸ್ವತಃ ರಾಹುಲ್ ಗಾಂಧಿ ಕೂಡ ಇಂತಹ ಅಪಪ್ರಚಾರಕ್ಕೆ ತಾವೇ ಸರಕು ಒದಗಿಸುವಂತೆ ವರ್ತಿಸುತ್ತಿದ್ದರು. ಒಂದು ದೃಢ ನಿಲುವು, ಅದಕ್ಕೆ ಬದ್ಧತೆ, ರಾಜಕೀಯಕ್ಕೆ ಇರಬೇಕಾದ ಮನೋಭಾವ ಇದ್ಯಾವುದೂ ರಾಹುಲ್ ರಲ್ಲಿ ಕಾಣುತ್ತಿರಲಿಲ್ಲ. ಅವರೊಬ್ಬ ಒಳ್ಳೆಯ ವ್ಯಕ್ತಿ , ಆದರೆ ರಾಜಕೀಯಕ್ಕೆ ಅನ್ ಫಿಟ್ ಎಂದೇ ಕಾಂಗ್ರೆಸ್ ಬೆಂಬಲಿಗರೂ ಹೇಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇದೆಲ್ಲದರ ಸಂಪೂರ್ಣ ಲಾಭ ಪಡೆದ ಬಿಜೆಪಿ, ಸಂಘ ಪರಿವಾರಗಳು ತಮ್ಮ ಬೃಹತ್ ಐಟಿ ಸೆಲ್ ಹಾಗು ಪ್ರಚಾರ ಯಂತ್ರದ ಮೂಲಕ ರಾಹುಲ್ ಅವರನ್ನು ಪಪ್ಪು ಎಂಬ ಇಮೇಜ್ಗೆ ತಂದು ನಿಲ್ಲಿಸಿ ಬಿಟ್ಟರು. ಅದೇ ಇಮೇಜ್ ರಾಹುಲ್ ಗೆ ಕನಿಷ್ಠ ಐದಾರು ವರ್ಷ ಗಟ್ಟಿಯಾಗಿತ್ತು. ಆದರೆ, ಇಂಥ ಎಲ್ಲವನ್ನೂ ಮೀರಿ ಇಂದು ನಮಗೆ ಕಾಣುತ್ತಿರುವ ರಾಹುಲ್ ಬೇರೆಯೇ ಆಗಿದ್ದಾರೆ.

ಕಳೆದೊಂದು ವರ್ಷದಲ್ಲಂತೂ ಅವರು ಸಂಪೂರ್ಣ ಬದಲಾಗಿದ್ದಾರೆ. ಈಗ ನಾವು ನೋಡುತ್ತಿರುವುದು ಬೇರೆಯೇ ರಾಹುಲ್ ಗಾಂಧಿಯನ್ನು ಎಂಬ ಅಭಿಪ್ರಾಯ ವ್ಯಾಪಕವಾಗಿದೆ. ಇಂಥದೊಂದು ಬಹುದೊಡ್ಡ ಬದಲಾವಣೆ ರಾಹುಲ್ ಅವರಲ್ಲಿ ಸಾಧ್ಯವಾದುದಕ್ಕೆ, ಅವರ ರಾಜಕೀಯ ಇಮೇಜ್ ಪೂರ್ತಿಯಾಗಿ ಬೇರೆಯೇ ಬಗೆಯಲ್ಲಿ ವ್ಯಕ್ತವಾಗುತ್ತಿರುವುದಕ್ಕೆ ಕಾರಣರಾಗಿರುವವರು ಒಬ್ಬ ಮಹಿಳೆ ಎಂಬ ವಿಶ್ಲೇಷಣೆಗಳು ಈಗ ಬರತೊಡಗಿವೆ.

ರಾಹುಲ್ ರಾಜಕೀಯದಲ್ಲಿ ಗಾಢ ಪ್ರಭಾವ ಇರುವುದು ಅವರ ತಾಯಿ ಸೋನಿಯಾ ಗಾಂಧಿ ಅವರದ್ದು. ಆದರೆ ಇನ್ನೊಬ್ಬ ಮಹಿಳೆ ರಾಹುಲ್ ರಾಜಕೀಯ ಬದಲಾವಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಈಗ ಸುದ್ದಿಯಾಗುತ್ತಿದೆ. ಇದೆಲ್ಲವೂ ಶುರುವಾದದ್ದು 2012ರಷ್ಟು ಹಿಂದೆ. ರಾಹುಲ್ ಯೋಚಿಸುವ ಮತ್ತು ಪ್ರತಿಕ್ರಿಯಿಸುವ ರೀತಿಯೇ ಬದಲಾಗುವುದಕ್ಕೆ ಕಾರಣವಾದ ಆ ಮಹಿಳೆ, ಅಮೆರಿಕದ ರಾಜಕೀಯ ಸಲಹೆಗಾರ್ತಿ ಸ್ಟೆಫನಿ ಕಟರ್.

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಮೊದಲ ಅವಧಿಯಲ್ಲಿ ಸಲಹೆಗಾರ್ತಿಯಾಗಿದ್ದ ಸ್ಟೆಫನಿ, ಒಬಾಮ ಅವರ ಮರುಚುನಾವಣೆಯ ಪ್ರಚಾರದಲ್ಲಿ ಉಪ ಪ್ರಚಾರ ವ್ಯವಸ್ಥಾಪಕಿಯಾಗಿ ಸೇವೆ ಸಲ್ಲಿಸಿದ್ದರು. ಸ್ಟೆಫನಿ 2012ರಲ್ಲಿ ರಾಹುಲ್ ಅವರಿಗೆ ನೀಡಿದ್ದ ಸಲಹೆಯೇ ಅನಂತರದ ವರ್ಷಗಳಲ್ಲಿ ರಾಹುಲ್ ವ್ಯಕ್ತಿತ್ವ ಬದಲಾಗುವುದಕ್ಕೆ, ಅವರು ರಾಜಕೀಯವನ್ನು ನೋಡುವ ಮತ್ತು ಗ್ರಹಿಸುವ ಬಗೆ ವಿಭಿನ್ನವಾಗಿರುವುದಕ್ಕೆ ಕಾರಣವಾಯಿತೆ?

ಹಿರಿಯ ರಾಜಕೀಯ ವಿಶ್ಲೇಷಕ ರಷೀದ್ ಕಿದ್ವಾಯಿ ಅವರ ಪ್ರಕಾರ, ಹೌದು. ಅಷ್ಟಕ್ಕೂ ರಾಹುಲ್ ಗಾಂಧಿಗೆ ಸ್ಟೆಫನಿ ಕಟರ್ ನೀಡಿದ್ದ ಸಲಹೆಯೇನಿತ್ತು?. ಅವರು ರಾಹುಲ್ ಅವರಿಗೆ ಧ್ರುವೀಕರಣ ರಾಜಕೀಯದ ಬಗ್ಗೆ ಹೇಳಿದ್ದರು. ಸಾರ್ವಜನಿಕ ಭಾವನೆಗೆ ಅನುಗುಣವಾಗಿ ಹೊಸ ಆಲೋಚನೆಗೆ ಅವರು ರಾಹುಲ್‌ಗೆ ಸಲಹೆ ನೀಡಿದ್ದರು. ನರೇಂದ್ರ ಮೋದಿ ವಿರುದ್ಧ ಜನಪ್ರಿಯ ಮುಖದ ಬದಲಿಗೆ ಧ್ರುವೀಕರಣದ ವ್ಯಕ್ತಿತ್ವವನ್ನು ರಾಹುಲ್ ತೋರಿಸಲು ಸಾಧ್ಯವಾದದ್ದು ಸ್ಟೆಫನಿ ಅವರ ಈ ಸಲಹೆಯಿಂದ ಎನ್ನುತ್ತಾರೆ ರಷೀದ್ ಕಿದ್ವಾಯಿ.

ಚೀನಾ ವಿಚಾರವಾಗಿ, ರೈತರ ಸಮಸ್ಯೆಗಳ ಕುರಿತಾಗಿ, ಕೋವಿಡ್ ವಿಚಾರವಾಗಿ ರಾಹುಲ್ ಗಾಂಧಿ ಅವರು 2021 ಹೊತ್ತಿಗೆ ಮಾತನಾಡತೊಡಗಿದ್ದರ ಹಿಂದೆ ಸ್ಟೆಫನಿ ಕಟರ್ ಅವರು 2012ರಲ್ಲಿ ಅವರಿಗೆ ನೀಡಿದ ಸಲಹೆಯೇ ಕಾರಣ. ಅದನ್ನು ರಾಹುಲ್ ಅನುಸರಿಸುತ್ತಿರುವುದನ್ನು ಅವರ ಮಾತುಗಳೇ ತೋರಿಸುತ್ತಿವೆ ಎನ್ನುತ್ತಾರೆ ರಷೀದ್ ಕಿದ್ವಾಯಿ.

ಸ್ಟೆಫನಿ ಆಗ, ರಾಹುಲ್ ಅವರ ಸಾಮಾಜಿಕ ಜಾಲತಾಣದ ಅಭಿಯಾನವನ್ನು ಒಂದೆ ಹೆಜ್ಜೆ ಮುಂದಕ್ಕೆ ತೆಗೆದುಕೊಂಡು ಹೋಗಬೇಕಿರುವ ಅಗತ್ಯದ ಬಗ್ಗೆಯೂ ಹೇಳಿದ್ದರು. "ಎಲ್ಲರನ್ನೂ ಖುಷಿಪಡಿಸುವ ಯತ್ನ ಮಾಡಬೇಡಿ. ನಿಮ್ಮ ನಿಲುವೇನು ಎಂಬುದನ್ನು ಖಚಿತಪಡಿಸಿಕೊಳ್ಳಿ ಮತ್ತು ಅದಕ್ಕೆ ಯಾವಾಗಲೂ ಬದ್ಧವಾಗಿರಿ" ಎಂಬುದು ಸ್ಟೆಫನಿ ಅವರು ನೀಡಿದ್ದ ಮಹತ್ವದ ಸಲಹೆಯಾಗಿತ್ತು.

2012ರಲ್ಲೇ ಸ್ಟೆಫನಿ ಅವರಿಂದ ಅಂಥ ಸಲಹೆ ಬಂದಿತ್ತು. ಅದನ್ನು ಆಗ ಗಂಭೀರವಾಗಿ ತೆಗೆದುಕೊಳ್ಳುವುದು ರಾಹುಲ್ ಅವರಿಗೆ ಸಾಧ್ಯವಾಗದೇ ಹೋಗಿದ್ದರೂ, ಕ್ರಮೇಣ ಅದು ರಾಹುಲ್ ಮನಸ್ಸಿನಲ್ಲಿ ಇಳಿಯಿತೆಂಬುದು ನಿಜ. ಬಿಜೆಪಿಯಾಗಲೀ ಮೋದಿಯಾಗಲಿ ಹಿಂದುತ್ವ ವಿಚಾರ ಮುಂದೆ ಮಾಡುತ್ತಿರುವಾಗ ರಾಹುಲ್ ಅವರು ಭಿನ್ನ ರೀತಿಯಲ್ಲಿ ಆಲೋಚಿಸುತ್ತ, ದೇಶದಲ್ಲಿನ ಬೇರೆ ವಿಚಾರಗಳ ಬಗ್ಗೆ ಗಮನ ಸೆಳೆಯುತ್ತಿರುವುದರ ಹಿಂದೆ ಸ್ಟೆಫನಿ ಸಲಹೆಯ ಪ್ರಭಾವ ಸ್ಪಷ್ಟವಿದೆ ಎನ್ನುತ್ತಾರೆ ಕಿದ್ವಾಯಿ.

ರಾಹುಲ್ ಅವರನ್ನು ಪಪ್ಪು ಎಂದು ಆಡಿಕೊಂಡಿದ್ದವರೇ ಈಗ ಅವರ ಮಾತುಗಳಿಗೆ, ಪ್ರಶ್ನೆಗಳಿಗೆ, ಆಲೋಚನೆಗಳಿಗೆ ತತ್ತರಿಸುವ ಹಾಗಾಗಿದೆ. ಅಧಿಕಾರಕ್ಕೆ ಸಂಚಕಾರ ಬರುವ ಭಯ ಅವರಿಗೆ ಎದುರಾಗಿದೆ. ರಾಹುಲ್ ಅವರನ್ನು ಒಬ್ಬ ಪ್ರಭಾವಿ ರಾಜಕಾರಣಿಯಾಗಿ ದೇಶದ ಜನತೆ ಇಂದು ಗಮನಿಸುವ ಮಟ್ಟಿಗೆ ರಾಹುಲ್ ಬೆಳೆದಿದ್ದಾರೆ.

ಈಚಿನ ವರ್ಷಗಳಲ್ಲಿ, ಅದರಲ್ಲೂ ಭಾರತ್ ಜೋಡೋ ಯಾತ್ರೆಯ ಹೊತ್ತಿನಲ್ಲಿ ರಾಹುಲ್ ಅವರ ಬದಲಾದ ವ್ಯಕ್ತಿತ್ವವನ್ನು, ಅವರ ವಿಭಿನ್ನ ಆಲೋಚನೆಗಳನ್ನು, ಅವರ ಕಾಳಜಿ ಮತ್ತು ಕಳಕಳಿಯನ್ನು ದೇಶ ಹೆಚ್ಚು ಸ್ಪಷ್ಟವಾಗಿ ತಿಳಿಯುವುದು ಸಾಧ್ಯವಾಯಿತು. ಸಂಸತ್ತಿನಲ್ಲಿ ಅವರು ಎತ್ತಿದ ಪ್ರಶ್ನೆಗಳು, ಮೋದಿ ಸರ್ಕಾರದ ವಿರುದ್ಧದ ಅವರ ಮಾತುಗಳು, ಮಣಿಪುರ ಹಿಂಸಾಚಾರ ಸಂದರ್ಭದಲ್ಲಿ ಅವರು ಸ್ವತಃ ಅಲ್ಲಿಗೆ ಭೇಟಿ ನೀಡಿ, ಸಂತ್ರಸ್ತರ ಶಿಬಿರಗಳಲ್ಲಿದ್ದವರ ಸಂಕಟ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದು ಇವೆಲ್ಲವೂ ಅವರೊಬ್ಬ ಪ್ರಬುದ್ಧ ರಾಜಕೀಯ ನಾಯಕ ಎಂಬುದನ್ನು ಮತ್ತೆ ಮತ್ತೆ ನಿರೂಪಿಸಿದವು.

ಭಾರತ್ ಜೋಡೋ ಯಾತ್ರೆ ಮುಗಿಸಿ ಬಂದ ರಾಹುಲ್, ತಾವು ಆಲಿಸುವುದನ್ನು ಕಲಿತದ್ದರ ಬಗ್ಗೆ ಹೇಳಿದ್ದರು."ನಮ್ಮ ದೇಶದ ಆತ್ಮ ಎಂದು ಯಾರನ್ನು ನಾವು ಬಣ್ಣಿಸುತ್ತೇವೆಯೊ ಅವರನ್ನು ನಾವು ಭೇಟಿಯಾದೆವು. ಜನರಿಗೆ ವಿಷಯಗಳನ್ನು ವಿವರಿಸಲು ಹೊರಟಿದ್ದ ನಾವು ಇದ್ದಕ್ಕಿದ್ದಂತೆ ಮೌನವಾದೆವು. ಎಲ್ಲವನ್ನೂ ಆಲಿಸಲು ಪ್ರಾರಂಭಿಸಿದೆವು. ಅಪಾರವಾದ ಸಂಕಟದ ಕಥೆಗಳನ್ನು ಕೇಳಿಸಿಕೊಂಡೆವು. ನಮ್ಮ ರಾಜಕೀಯ ಮತ್ತು ನಮ್ಮ ಜನರ ನಡುವೆ ದೊಡ್ಡ ಕಂದಕ ಬಿದ್ದಿದೆ ಎಂಬುದು ಸ್ಪಷ್ಟವಾಗಿ ಕಂಡಿದ್ದು ಆಗಲೇ." ಎಂದರು ರಾಹುಲ್.

ರಾಹುಲ್ ಎಷ್ಟು ಆಳವಾಗಿ ಗ್ರಹಿಸಬಲ್ಲರು ಮತ್ತು ತೀವ್ರವಾಗಿ ಯೋಚಿಸಬಲ್ಲರು ಎಂಬುದನ್ನು ತಿಳಿಯಲು ಅವರ ಈ ಮಾತುಗಳೇ ಸಾಕು. ಹೇಳುವುದನ್ನೇ ಬಂಡವಾಳ ಮಾಡಿಕೊಂಡಿರುವ ಮೋದಿ ಎದುರು ಜನರ ಮಾತು ಕೇಳುವುದರ ಮಹತ್ವ ಹೇಳುವ ಮೂಲಕ ರಾಹುಲ್ ಜನರನ್ನು ಸೆಳೆದರು.

ಕಾಶ್ಮೀರದಲ್ಲಿ ಯಾತ್ರೆಯ ಸಮಾರೋಪದ ವೇಳೆ ಮಾತನಾಡಿದ ರಾಹುಲ್ ಹೇಳಿದ್ದು ಹೀಗೆ: "ನಮ್ಮ ಸುತ್ತ ಕಟ್ಟಿಕೊಂಡಿರುವ ಕೋಟೆ ಒಡೆಯಬೇಕಿದೆ. ಆ ಮೂಲಕ ಶೂನ್ಯವನ್ನು ಸಾಧಿಸಬೇಕು. ಹಿಂದೂ ಧರ್ಮದಲ್ಲಿ ಶೂನ್ಯ ಎನ್ನುತ್ತೇವೆ. ಇಸ್ಲಾಂನಲ್ಲಿ ಫನಾ ಎನ್ನುತ್ತಾರೆ. ಈ ವಿಚಾರಧಾರೆಗಳನ್ನು ಒಟ್ಟಿಗೆ ಕೊಂಡೊಯ್ಯುವುದೇ ಕಾಶ್ಮೀರಿತನ. ಗಾಂಧೀಜಿ, ಬಸವಣ್ಣ, ತಿರುವಳ್ಳವರ್, ನಾರಾಯಣಗುರು, ಜ್ಯೋತಿಬಾ ಫುಲೆ ಎಲ್ಲರೂ ಇದನ್ನೇ ಹೇಳಿದರು."

ದೇಶವನ್ನು ಛಿದ್ರಗೊಳಿಸುವ ಸಿದ್ಧಾಂತಗಳ ಕೊನೆಯಾಗಬೇಕಿದೆ ಎಂಬ ರಾಹುಲ್ ಮಾತುಗಳು ಇವತ್ತಿನ ಯಾವ ರಾಜಕಾರಣಿಯ ಬಾಯಲ್ಲಿ ಬರಲು ಸಾಧ್ಯ?. ರಾಹುಲ್ ಅವರ ಮಾತುಗಳಲ್ಲಿನ ಪ್ರಬುದ್ಧತೆ, ಭಾರತ್ ಜೋಡೋ ಯಾತ್ರೆಯುದ್ದಕ್ಕೂ ಅಷ್ಟೇ ಪ್ರಖರವಾಗಿತ್ತು. ರಾಜಕೀಯವನ್ನು ಚುನಾವಣೆಯ ನಂಬರ್ ಗೇಮ್ನಿಂದ ದೂರವಿಡುವ ಪ್ರಯತ್ನವೊಂದು ಅಲ್ಲಿ ಕಾಣಿಸಿತ್ತು.

ಮತ್ತು ಅದನ್ನು ಹೆಚ್ಚು ಸೂಕ್ಷ್ಮವಾದ, ವಿವೇಚನಾಶೀಲ ನೆಲೆಗೆ, ಅಂದರೆ ಸಾಮಾಜಿಕ ಒಗ್ಗಟ್ಟು, ಬಹು ಸಾಂಗತ್ಯ, ಸಾಮೂಹಿಕ ಗುರುತು ಮತ್ತು ಪ್ರಜ್ಞೆಯಂತಹ ಪೌರತ್ವದ ಮೂಲ ಮೌಲ್ಯಗಳನ್ನು ಮರುಪಡೆಯುವ ಗುರಿಯ ನೆಲೆಗೆ ಕೊಂಡೊಯ್ಯುವ ನಡೆಯಂತಿತ್ತು.ಭಾರತ್ ಜೋಡೋ ಯಾತ್ರೆಯ ನಡುವೆ, ಕಳೆದ ಡಿಸೆಂಬರ್ನಲ್ಲಿ ಹಂಚಿಕೊಂಡಿದ್ದ ವೀಡಿಯೊ ಒಂದರಲ್ಲಿ ರಾಹುಲ್, ತಮ್ಮ ಚಾರಿತ್ರ್ಯ ವಧೆ ಮಾಡಲು ಬಿಜೆಪಿ ಸಾವಿರಾರು ಕೋಟಿ ಖರ್ಚು ಮಾಡಿದೆ ಎಂದು ಹೇಳಿದ್ದರು.

"2004ರಲ್ಲಿ ರಾಜಕೀಯ ಪ್ರವೇಶಿಸಿದೆ. 2008ರಿಂದ 2009ರವರೆಗೆ ದೇಶದಾದ್ಯಂತ ಎಲ್ಲ ಮಾಧ್ಯಮಗಳು 24 ಗಂಟೆ ನನ್ನ ಬಗ್ಗೆ ವಾಹ್ ವಾಹ್ ಎನ್ನುತ್ತಿದ್ದವು. ಆದರೆ ಯಾವಾಗ ನಾನು ನಿಯಮಗಿರಿ ಮತ್ತು ಭಟ್ಟ ಪರ್ಸಾಲ್ ಭೂಸ್ವಾಧೀನ ವಿಷಯ ಎತ್ತಿ ಬಡವರ ಹಕ್ಕು ರಕ್ಷಣೆಗೆ ಮುಂದಾದೆನೊ ಆಗಿನಿಂದ ಮಾಧ್ಯಮದಲ್ಲಿ ನನ್ನನ್ನು ಲೇವಡಿ ಮಾಡುವುದು ಶುರುವಾಯಿತು. ಆದರೆ ನನ್ನ ವ್ಯಕ್ತಿತ್ವ ನಾಶಕ್ಕೆ ಅವರೇನೇ ಮಾಡಿದರೂ ನನ್ನ ಪಾಲಿಗದು ಶಕ್ತಿಯೇ ಆಗುತ್ತದೆ. ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ" ಎಂದಿದ್ದರು ರಾಹುಲ್.

ನಿಜ. ಸತ್ಯವನ್ನು ದಮನಿಸುವುದು ಸಾಧ್ಯವಿಲ್ಲ. ಮತ್ತು ಒಂದು ಕಾಲದಲ್ಲಿ ಪಪ್ಪು ಎಂದು ಆಡಿಕೊಂಡಿದ್ದವರು ಇಂದು ಅದೇ ರಾಹುಲ್ ಎದುರು ತತ್ತರಿಸುವಂತಾಗಿರುವುದು, ಹೇಗಾದರೂ ಅವರ ಧ್ವನಿ ಅಡಗಿಸಲು ಹರಸಾಹಸ ಪಡುತ್ತಿರುವುದು ಸತ್ಯವನ್ನು ದಮನಿಸಲಾರದ ಕಾರಣದಿಂದಲೇ.

ಆರೆಸ್ಸೆಸ್ ಬಗ್ಗೆ, ಸಾವರ್ಕರ್ ಬಗ್ಗೆ ರಾಹುಲ್ ಗಾಂಧಿಗೆ ಇರುವಷ್ಟು ಸ್ಪಷ್ಟತೆ ಅವರದೇ ಪಕ್ಷದ ನಾಯಕರುಗಳಿಗೆ ಇಲ್ಲ. ಆದರೆ ರಾಹುಲ್ ಅದನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ಆರೆಸ್ಸೆಸ್ ಹಾಗು ಅದರ ಸಿದ್ಧಾಂತವನ್ನು ಖಡಾಖಂಡಿತವಾಗಿ ವಿರೋಧಿಸಿದರು. ಅವರನ್ನು ಕೋರ್ಟ್ ಕಟಕಟೆಗೆ ಎಳೆದರೂ ನನ್ನ ನಿಲುವು ಅಚಲ ಎಂದು ಹೇಳಿದರು. ಆ ಮೂಲಕ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಹಾಗು ಜನರಿಗೂ " ನನ್ನ ನಿಲುವು ಇದೇ, ಅದು ಬದಲಾಗದು" ಎಂಬ ಸ್ಪಷ್ಟ ಸಂದೇಶ ರವಾನಿಸಿದರು.

ಭಾರತ್ ಜೋಡೋ ಯಾತ್ರೆ ವೇಳೆಯೇ ಗುಜರಾತ್ ವಿಧಾನ ಸಭಾ ಚುನಾವಣೆ ಬಂತು. ಅಲ್ಲಿ ಪ್ರಮುಖ ನಾಯಕರು ಬಿಜೆಪಿ ಕಡೆ ಹೋದರು. ಆದರೆ ರಾಹುಲ್ ಗಾಂಧಿ ತಮ್ಮ ಯಾತ್ರೆ ಮುಂದುವರಿಸಿದರು. ಅವರಿಗೆ ಗೊತ್ತಿತ್ತು. ಗುಜರಾತ್ ನಲ್ಲಿರುವುದು ತಕ್ಷಣಕ್ಕೆ ಸರಿಪಡಿಸಬಹುದಾದ ಸಮಸ್ಯೆ ಅಲ್ಲ. ಅಲ್ಲಿ ತಳಮಟ್ಟದಲ್ಲಿ ಕೆಲಸ ಆಗದೆ ನಾವು ಗೆಲ್ಲೋದು ಅಸಾಧ್ಯ ಎಂದು ಅವರಿಗೆ ಮನವರಿಕೆಯಾಗಿತ್ತು. ಅವರು ತಮ್ಮ ಯಾತ್ರೆ ಮುಂದುವರಿಸಿದರು. ಯಾತ್ರೆ ಮುಗಿದ ಮೇಲೆ ಕರ್ನಾಟಕ ಚುನಾವಣಾ ಪ್ರಚಾರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು.

ಈಗ ಒಂದೊಂದೇ ಚರ್ಚೆಯಾಗದ ವಿಷಯಗಳನ್ನು ಚರ್ಚೆಗೆ ತರುವಲ್ಲಿ ರಾಹುಲ್ ಗಾಂಧಿ ಯಶಸ್ವಿಯಾಗುತ್ತಿದ್ದಾರೆ. ಬೆಲೆ ಏರಿಕೆ, ನಿರುದ್ಯೋಗ, ಬಡತನಗಳಂತಹ ವಿಷಯಗಳನ್ನು ವಿಭಿನ್ನವಾಗಿ ಕೈಗೆತ್ತಿಕೊಂಡು ಮುಖ್ಯವಾಹಿನಿಯ ಚರ್ಚೆಗೆ ತರುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದಾರೆ.

ಇಂದು ರಾಹುಲ್, ಮೋದಿ ಸರ್ಕಾರದ ವಿರುದ್ಧದ ಪ್ರತಿಪಕ್ಷಗಳ ಮೈತ್ರಿಕೂಟದ ನಾಯಕರುಗಳಲ್ಲಿ ಎದ್ದುಕಾಣಿಸಬಲ್ಲ ವ್ಯಕ್ತಿತ್ವವನ್ನು ಸಾಧಿಸಿಕೊಂಡಿದ್ದಾರೆ. ಮೋದಿ ಜನಪ್ರಿಯತೆಗೆ ಪ್ರತಿಯಾಗಿ, ಜನರ ಅಂತಃಕರಣವನ್ನು ಮುಟ್ಟಬಲ್ಲ ದನಿಯಾಗಿ ರಾಹುಲ್ ಗಮನ ಸೆಳೆಯುತ್ತಿದ್ದಾರೆ. ದ್ವೇಷದ ಎದುರಲ್ಲಿ ಪ್ರೀತಿಯ ಅಂಗಡಿ ತೆರೆಯುವ ಹೃದಯವಂತಿಕೆಯ ರಾಜಕಾರಣದಿಂದಾಗಿ ರಾಹುಲ್ ಉಂಟುಮಾಡುತ್ತಿರುವ ಸಂಚಲನ ಇವತ್ತಿನ ವಿಷಮ ಸನ್ನಿವೇಶದಲ್ಲಿ ಬಹಳ ದೊಡ್ಡದು ಮತ್ತು ಅರ್ಥಪೂರ್ಣವಾದದ್ದು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!