ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ

Update: 2023-09-10 03:20 GMT

ಪ್ರತೀ ವರ್ಷ ಸೆಪ್ಟಂಬರ್ 10ರಂದು ವಿಶ್ವ ಆತ್ಮಹತ್ಯಾ ತಡೆದಿನ ಎಂದು ಆಚರಿಸಿ, ಜನರಲ್ಲಿ ಆತ್ಮಹತ್ಯೆಯನ್ನು ಮಾಡದಿರುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ವಿಶ್ವದಲ್ಲಿ ಪ್ರತೀ 60 ಸೆಂಕೆಂಡ್ಗೆ ಒಬ್ಬರಂತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಮತ್ತು ವರ್ಷವೊಂದರಲ್ಲಿ ಏನಿಲ್ಲವೆಂದರೂ 10ರಿಂದ 12 ಲಕ್ಷ ಮಂದಿ ಆತ್ಮಹತ್ಯೆ ಮಾಡುತ್ತಿದ್ದಾರೆ. ಜೀವನದಲ್ಲಿ ಜಿಗುಪ್ಸೆ, ಬದುಕಿನಲ್ಲಿ ನಿರಾಸಕ್ತಿ, ಉದ್ಯೋಗದಲ್ಲಿ ನಷ್ಟ, ವಿದ್ಯಾಭ್ಯಾಸದಲ್ಲಿ ಅನುತ್ತೀರ್ಣ, ಕೆಲಸದಲ್ಲಿ ಒತ್ತಡ ಹೀಗೆ ಹತ್ತು ಹಲವು ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. 15-20 ವರ್ಷದೊಳಗಿನವರಲ್ಲಿ ಸಾವಿಗೆ ಎರಡನೇ ಅತೀ ದೊಡ್ಡ ಕಾರಣ ಆತ್ಮಹತ್ಯೆ ಎಂಬುದು ಬಹಳ ಕಳವಳಕಾರಿ ಅಂಶವಾಗಿದೆ.

 

ಯಾರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ?

►  ಮನೋರೋಗ ಹೊಂದಿದವವರು. ಉದಾಹರಣೆಗೆ ಖಿನ್ನತೆ, ಸ್ಕಿಜೋಫ್ರೀನಿಯಾ ಇತ್ಯಾದಿ ಮಾನಸಿಕ ರೋಗದಿಂದ ಬಳಲುತ್ತಿರುವವರು.

►  ಮದ್ಯಪಾನ ಮತ್ತು ಮಾದಕ ದ್ರವ್ಯ ವ್ಯಸನಿಗಳು ಆತ್ಮಹತ್ಯೆ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.

► ಈ ಹಿಂದೆ ಆತ್ಮಹತ್ಯೆಗೆ ಪ್ರಯತ್ನಿಸಿದವರು, ಮಗದೊಮ್ಮೆ ಆತ್ಮಹತ್ಯೆ ಮಾಡುವ ಸಾಧ್ಯತೆ ಹೆಚ್ಚು.

► ಜೀವನದಲ್ಲಿ ಅತೀ ಹೆಚ್ಚು ಒತ್ತಡದ ಸನ್ನಿವೇಶಗಳನ್ನು ಎದುರಿಸುತ್ತಿರುವವರು. ಉದಾಹರಣೆಗೆ ವ್ಯಾಪಾರದಲ್ಲಿ ನಷ್ಟ, ಉದ್ಯೋಗ ಸಿಗದಿರುವುದು, ಆಟದಲ್ಲಿ ಸೋಲು, ವಿದ್ಯಾಭ್ಯಾಸ ಹಿನ್ನೆಲೆ, ಮಾನಹಾನಿಯಾದ ಸಂದರ್ಭಗಳು ಇತ್ಯಾದಿ ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತದೆ.

► ಅತೀ ಹತ್ತಿರದ ಸಂಬಧಿಗಳ ಸಾವು, ಪ್ರೇಮದಲ್ಲಿ ವೈಫಲ್ಯ ಮುಂತಾದವುಗಳಿಂದ ಭಾವನಾತ್ಮಕವಾಗಿ ವೇದನೆ ಹೆಚ್ಚಾದಾಗ ಆತ್ಮಹತ್ಯೆಯಲ್ಲಿ ಪರ್ಯಾವಸಾನವಾಗುತ್ತದೆ.

 ಕ್ಯಾನ್ಸರ್ ಮುಂತಾದ ಗುಣಪಡಿಸಲಾಗದ ಮಾರಣಾಂತಿಕ ಕಾಯಿಲೆ ಅಥವಾ ತಡೆದುಕೊಳ್ಳಲಾರದ ನೋವುಗಳು ಕೂಡ ಆತ್ಮಹತ್ಯೆಗೆ ಕಾರಣವಾಗುತ್ತದೆ.

 

► ಕೆಲಸದ ವಾತಾವರಣದಲ್ಲಿನ ವಿಪರೀತವಾದ ಒತ್ತಡ ಕೂಡ ಆತ್ಮಹತ್ಯೆಗೆ ಕಾರಣವಾಗುತ್ತದೆ. ಕ್ಷುಲ್ಲಕ ಕಾರಣಗಳು ಮತ್ತು ಮಕ್ಕಳಾಟಿಕೆ ಕೂಡ ಆತ್ಮಹತ್ಯೆಯಲ್ಲಿ ಅಂತ್ಯ ಕಾಣಬಹುದು. ಟಿವಿ ನೋಡಲು ಜಗಳ, ರಿಮೋಟ್ ಕೊಡಲಿಲ್ಲ ಎಂಬ ಜಗಳ ಇತ್ಯಾದಿ.

► ನಿರೀಕ್ಷಿತ ಫಲಿತಾಂಶ ಸಿಗದಿದ್ದಾಗ ಮಕ್ಕಳು ಆತ್ಮಹತ್ಯೆಗೆ ಮೊರೆ ಹೋಗುವುದು ಹೆಚ್ಚಾಗುತ್ತಿದೆ.

 

 

ಹೇಗೆ ತಡೆಯಬಹುದು?

* ಋಣಾತ್ಮಕ ಚಿಂತನೆ ಇರುವ ವ್ಯಕ್ತಿಗಳ ಬಗ್ಗೆ ಅಸಡ್ಡೆ ಬೇಡ. ಅವರ ಬಗ್ಗೆ ಕನಿಕರ, ಸಹಾನುಭೂತಿ ತೋರಿಸಬೇಕು. ಒಂದು ಒಳ್ಳೆಯ ಮಾತು ಅಥವಾ ಸಾಂತ್ವನದಿಂದ ಒಂದು ಜೀವ ಉಳಿಯಲೂ ಬಹುದು.

* ನಿಮ್ಮ ಮನೆಯಲ್ಲಿ ಈ ರೀತಿಯ ಖಿನ್ನತೆ ಇರುವ ವ್ಯಕ್ತಿ ಇದ್ದಲ್ಲಿ, ಯಾವುದೇ ಕಾರಣಕ್ಕೂ ಒಬ್ಬಂಟಿಯಾಗಿ ಇರಲು ಬಿಡಬೇಡಿ. ಯಾವತ್ತೂ ಅಂತಹ ವ್ಯಕ್ತಿಗಳ ಮೇಲೆ ಒಂದು ಕಣ್ಣು ಇಡಬೇಕು. ಅಂತಹ ವ್ಯಕ್ತಿಗಳಿಗೆ ಸುಲಭವಾಗಿ ಹರಿತ ಆಯುಧ, ಹಗ್ಗ ಅಥವಾ ವಿಷಕಾರಿ ಔಷಧಿ ಸುಲಭವಾಗಿ ಸಿಗದಂತೆ ನೋಡಿಕೊಳ್ಳಿ.

* ಯಾವ ಕಾರಣಕ್ಕಾಗಿ ವ್ಯಕ್ತಿ ಖಿನ್ನತೆಯಿಂದ ಬಳಲುತ್ತಿದ್ದಾನೆ ಎಂದು ತಿಳಿದು ಅದಕ್ಕೆ ಪೂರಕವಾದ ಚಿಕಿತ್ಸೆ ನೀಡಬೇಕು. ಮನೋವೈದ್ಯರ ಬಳಿ ತೋರಿಸಿ ಆಪ್ತ ಸಮಾಲೋಚನೆ ಮಾಡಿಸಿಕೊಳ್ಳಿ. ಸಾಕಷ್ಟು ಪ್ರೀತಿ, ಆದರ, ಧೈರ್ಯ ಮತ್ತು ಸಾಂತ್ವನದ ನುಡಿ ಹೇಳಿ ಅವರನ್ನು ಉಲ್ಲಸಿತರಾಗಿರುವಂತೆ ನೋಡಿಕೊಳ್ಳಬೇಕು.

 4 ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಹೆತ್ತವರು ಮತ್ತು ಶಿಕ್ಷಕರು ಮಕ್ಕಳಿಗೆ ನೈತಿಕ ಬೆಂಬಲ ನೀಡಲು ಮುಂದಾಗಬೇಕು.

 

ಕೊನೆಮಾತು

  ‘‘ಸಾಯಲು ನೂರು ಮಾರ್ಗವಿದ್ದರೆ ಬದುಕಲು ಸಾವಿರ ಮಾರ್ಗವಿದೆ’’ ಎಂಬ ಸತ್ಯವನ್ನು ಜನರು ಅದರಲ್ಲೂ ಯುವಜನರು ಅರ್ಥಮಾಡಿಕೊಳ್ಳಬೇಕು. ಬದುಕಿ, ಸಾಧಿಸಿ ತೋರಿಸಬೇಕಾದ ಹೊತ್ತಲ್ಲಿ, ಕ್ಷುಲ್ಲಕ ನೋವಿಗಾಗಿ ಸಾವಿಗೆ ಶರಣಾಗಿ ಹೇಡಿಗಳಾಗುವ ಬದಲು, ಛಲದಿಂದ ಜೀವನದ ಕಷ್ಟಕಾರ್ಪಣ್ಯಗಳನ್ನು ಎದುರಿಸಿ ಜೀವನದಲ್ಲಿ ಏನಾದರೂ ಸಾಧಿಸಿ ತೋರಿಸುವ ಗಟ್ಟಿತನವನ್ನು ಯುವಜನರು ಮೈಗೂಡಿಸಿಕೊಳ್ಳಬೇಕು. ಹಾಗಾದಲ್ಲಿ ಮಾತ್ರ ಸುಂದರ ಸುದೃಢ ಸಮಾಜ ನಿರ್ಮಾಣವಾಗಬಹುದು.

 

 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಡಾ. ಮುರಲೀಮೋಹನ್ ಚೂಂತಾರು

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!