ಮೇಲ್ಜಾತಿಗಳನ್ನೇ ಬೆಂಬಲಿಸಿ, ಕೆಳವರ್ಗವನ್ನು ಕಡೆಗಣಿಸುವ
ಆರೆಸ್ಸೆಸ್-ಬಿಜೆಪಿ ಸರಕಾರವು ಪ್ರಮುಖ ಕೈಗಾರಿಕೋದ್ಯಮಿಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ಬ್ರಾಹ್ಮಣ ಕೈಗಾರಿಕೋದ್ಯಮಿಗಳು ಆರೆಸ್ಸೆಸ್-ಬಿಜೆಪಿಯ ರಾಜಕೀಯ ಅಜೆಂಡದೊಂದಿಗೆ ಸೈದ್ಧಾಂತಿಕ ಸಂಬಂಧವನ್ನು ಹೊಂದಿದ್ದಾರೆ. ವಾಸ್ತವವಾಗಿ, ಆ ಪ್ರಮುಖ ಕೈಗಾರಿಕೋದ್ಯಮಿಗಳಲ್ಲಿ ದಲಿತರು, ಶೂದ್ರರು ಮತ್ತು ಆದಿವಾಸಿಗಳು ಇಲ್ಲ. (ಶಿವ ನಾಡಾರ್ ಕುಟುಂಬವೊಂದು ಇದಕ್ಕೆ ಅಪವಾದ). ಗುಜರಾತಿ ಬನಿಯಾಗಳು ಮತ್ತು ಮಾರ್ವಾಡಿಗಳ ಉಪಸ್ಥಿತಿಯು ಎಷ್ಟು ಗೋಚರಿಸುತ್ತದೆ ಎಂದರೆ ತಮ್ಮನ್ನು ತಾವು ಮುನ್ನಡೆಸಲು ಸರಕಾರದ ಸಂಪನ್ಮೂಲಗಳನ್ನು ಕುಶಲತೆಯಿಂದ ನಿರ್ವಹಿಸುವಲ್ಲಿ ಬೇರೆ ಯಾವುದೇ ಜಾತಿಗಳು ಅವರನ್ನು ಮೀರಿಸಲು ಸಾಧ್ಯವಿಲ್ಲ.
ಇಲ್ಲಿಯವರೆಗೆ ಭಾರತದಲ್ಲಿ ಅಥವಾ ವಿದೇಶದಲ್ಲಿ ಶಿಕ್ಷಣ ಪಡೆದಿರುವ ಭಾರತೀಯ ಅರ್ಥಶಾಸ್ತ್ರಜ್ಞರು ಮಾತನಾಡುವ ಮತ್ತು ಬರೆಯುವ ಸ್ಥೂಲವಾದ ಮೂರು ಅಭಿವೃದ್ಧಿ ಮಾದರಿಗಳೆಂದರೆ: 1. ಉದಾರ ಅಭಿವೃದ್ಧಿ ಮಾದರಿ; 2. ನವ ಉದಾರವಾದಿ ಅಭಿವೃದ್ಧಿ ಮಾದರಿ; ಮತ್ತು 3. ಸಮಾಜವಾದಿ ಅಭಿವೃದ್ಧಿ ಮಾದರಿ. 1990ರ ದಶಕದ ಜಾಗತೀಕರಣ ಮತ್ತು ಉದಾರೀಕರಣದವರೆಗೆ ಕಾಂಗ್ರೆಸ್ ಪರ ಅರ್ಥಶಾಸ್ತ್ರಜ್ಞರು ಉದಾರವಾದಿ ಅರ್ಥಶಾಸ್ತ್ರಜ್ಞರು ಮತ್ತು ಆರೆಸ್ಸೆಸ್/ಬಿಜೆಪಿ ಪರ ಅರ್ಥಶಾಸ್ತ್ರಜ್ಞರು ನವ ಉದಾರವಾದಿಗಳಲ್ಲಿದ್ದರು. ಎಡ ಪಂಥೀಯ ಅರ್ಥಶಾಸ್ತ್ರಜ್ಞರನ್ನು ಸಮಾಜವಾದಿ ಅಭಿವೃದ್ಧಿಯ ಬೆಂಬಲಿಗರನ್ನಾಗಿ ನೋಡಲಾಯಿತು.
ಭಾರತದ ವಸಾಹತುಶಾಹಿ ನಂತರದ ಆರ್ಥಿಕ ಸಂವಾದದಲ್ಲಿ ಯಾವುದೇ ಸ್ಥಳೀಯ ಆರ್ಥಿಕ ಮಾದರಿಯನ್ನು ಅಭಿವೃದ್ಧಿಪಡಿಸಲಾಗಿಲ್ಲ. ಜಾತಿ ಲಾಭದ ದೃಷ್ಟಿಕೋನದಿಂದ ರಾಜ್ಯ ಬಜೆಟ್‌ನಿಂದ ಹಣಕಾಸು ಹಂಚಿಕೆಗಳನ್ನು ನಿರ್ಧರಿಸುವಲ್ಲಿ ಜಾತಿಯ ಪಾತ್ರವನ್ನು ಅರ್ಥಶಾಸ್ತ್ರಜ್ಞರು ನಿಭಾಯಿಸದಿದ್ದರೆ, ಅವರು ತಮ್ಮದೇ ಆದ ಜಾತಿಯ ಸ್ಥಾನ ಏನೇ ಇರಲಿ, ಜಾತಿ ತಾರತಮ್ಯವನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿದ ಆರ್ಥಿಕ ವಿಶ್ಲೇಷಣೆಯನ್ನು ಮಾಡುತ್ತಾರೆ ಮತ್ತು ಅದು ಬ್ರಾಹ್ಮಣ ಆರ್ಥಿಕತೆಗೆ ಸಹಾಯ ಮಾಡುತ್ತದೆ. ಯಾವುದೇ ಉತ್ಪಾದಕ ಕೆಲಸದಲ್ಲಿ ತೊಡಗಿಸಿಕೊಳ್ಳದೆ ರಾಜ್ಯದ ಹಣವನ್ನು ಗಳಿಸುವ ಬ್ರಾಹ್ಮಣ ವಿಧಾನಗಳು ಅವರ ಜಾತಿ ಸಿದ್ಧಾಂತ ಮತ್ತು ವರ್ಣಾಶ್ರಮ ಪರಂಪರೆಯ ಭಾಗವಾಗಿವೆ. ಸನಾತನ ಧರ್ಮದ ಆಧ್ಯಾತ್ಮಿಕ ವ್ಯವಸ್ಥೆಯು ಎಲ್ಲವನ್ನೂ ಬ್ರಾಹ್ಮಣರಿಗೆ ಕೊಡುವ ಮತ್ತು ಕೃಷಿಕರನ್ನು ಹಸಿವಿನಿಂದ ಇಡುವ ಉದ್ದೇಶದ್ದಾಗಿದೆ.
ಇಂಥ ವಿಧಾನವನ್ನು ಅನುಸರಿಸುವ ಹಣಕಾಸಿನ ಹಂಚಿಕೆಯು ಸಂಪೂರ್ಣ ಕೃಷಿ ಮತ್ತು ಕುಶಲಕರ್ಮಿ ಆರ್ಥಿಕತೆಗೆ ವಿರುದ್ಧವಾಗಿದೆ. ಅದನ್ನು ನಾನು ಶೂದ್ರ ಆರ್ಥಿಕತೆ ಎಂದು ಕರೆಯುತ್ತೇನೆ. ಶೂದ್ರ ಆರ್ಥಿಕತೆಯು ರಚನಾತ್ಮಕವಾಗಿ ಬ್ರಾಹ್ಮಣ ಆರ್ಥಿಕತೆಗೆ ವಿರುದ್ಧವಾಗಿದೆ. ಶೂದ್ರ ಆರ್ಥಿಕತೆಯು ಮುಖ್ಯವಾಗಿ ಕೃಷಿ ಮತ್ತು ಕುಶಲಕರ್ಮಿಗಳ ಉತ್ಪಾದನೆಯ ಮೇಲೆ ನಿಲ್ಲುತ್ತದೆಯೇ ಹೊರತು ಲಾಭದ ಮೇಲೆ ಅಲ್ಲ. ಭೂಮಿಯಲ್ಲಿ ದುಡಿಮೆಯಲ್ಲಿ ಹೂಡಿಕೆ ಮಾಡುವುದು ಮತ್ತು ಆಹಾರ ಮತ್ತಿತರ ಸರಕುಗಳನ್ನು ಉತ್ಪಾದಿಸುವುದು ಶೂದ್ರ ಸಿದ್ಧಾಂತದ ಕೇಂದ್ರವಾಗಿದೆ. ರಾಜ್ಯ ಬಜೆಟ್‌ಗೆ ಹಣ ಹೆಚ್ಚಾಗಿ ಅವರ ಚಟುವಟಿಕೆಗಳಿಂದ ಬರುತ್ತದೆ. ಉತ್ಪಾದನೆಯ ಆ ಕ್ಷೇತ್ರಗಳಲ್ಲಿ ಅದನ್ನು ಮರುಹೂಡಿಕೆ ಮಾಡದಿದ್ದರೆ, ಆರ್ಥಿಕತೆಯು ಕುಸಿತಕ್ಕೆ ಒಳಗಾಗುತ್ತದೆ.
ಶೂದ್ರ ಶಕ್ತಿಗಳು ಕೈಗಾರಿಕೋದ್ಯಮಗಳಲ್ಲಿ ಬೆಳೆದರೆ, ಆಗ ಕೈಗಾರಿಕೋದ್ಯಮ ಕೃಷಿ ಆರ್ಥಿಕತೆಯ ಕುರಿತ ಸಹಾನುಭೂತಿಯನ್ನು ಹೊಂದಿರುವುದು ಸಾಧ್ಯವಾಗುತ್ತದೆ ಮತ್ತು ಕಾರ್ಮಿಕರು, ಭೂಮಿಯೊಂದಿಗಿನ ಅವರ ಸಂಬಂಧ ಸಂವಾದಾತ್ಮಕವಾಗಿರುವುದು ಸಾಧ್ಯ. ಬ್ರಾಹ್ಮಣ ಕೈಗಾರಿಕೋದ್ಯಮಿ ಪ್ರಜ್ಞೆಯು ಶೂದ್ರ ವಿರೋಧಿ ಮತ್ತು ಕೃಷಿ ವಿರೋಧಿಯಾಗಿದೆ. ವಾಸ್ತವವಾಗಿ, ಬ್ರಾಹ್ಮಣ ಆರ್ಥಿಕತೆಯು ಸಹಸ್ರಾರು ವರ್ಷಗಳಿಂದ ಶೂದ್ರ, ದಲಿತ ಮತ್ತು ಆದಿವಾಸಿಗಳ ಆರ್ಥಿಕ ಸಂಪನ್ಮೂಲಗಳನ್ನು ಮಾರುಕಟ್ಟೆ ಮತ್ತು ಆಡಳಿತ ವ್ಯವಸ್ಥೆಯ ನೆರವಿನಿಂದ ಲೂಟಿ ಮಾಡುವುದರ ಮೂಲಕ ಮಾತ್ರ ಉಳಿದುಕೊಂಡಿತು ಮತ್ತು ಅಭಿವೃದ್ಧಿ ಹೊಂದಿತು. ಆರೆಸ್ಸೆಸ್-ಬಿಜೆಪಿ ಅಧಿಕಾರಕ್ಕೆ ಬಂದಾಗ ಭಾರತೀಯ ಉದ್ಯಮವು ಬೃಹತ್ ಪ್ರಮಾಣದಲ್ಲಿ ಅಭಿವೃದ್ಧಿಯಾಗಿದೆ. ಏಕೆಂದರೆ ಕೇಂದ್ರ ಸರಕಾರವು ಬಹುತೇಕ ಶೂದ್ರರು, ದಲಿತರು ಮತ್ತು ಆದಿವಾಸಿ ಸಮುದಾಯಗಳ ಕೈಯಲ್ಲಿರುವ ಕೃಷಿ ವಲಯವನ್ನು ಹಸಿವಿನೆಡೆಗೆ ತಳ್ಳುತ್ತ, ಬ್ರಾಹ್ಮಣ ಉದ್ಯಮಿಗಳ ಕೈಗೆ ಗುತ್ತಿಗೆ ಆರ್ಥಿಕತೆಯನ್ನು ತಳ್ಳುತ್ತಿದೆ. ಇಲ್ಲಿಯವರೆಗೆ, ಯಾವುದೇ ಆರ್ಥಿಕ ಮಾದರಿಯು ಬಜೆಟ್ ಸಂಪನ್ಮೂಲಗಳ ಹಂಚಿಕೆಯಲ್ಲಿ ಈ ವ್ಯವಸ್ಥಿತ ಪಕ್ಷಪಾತವನ್ನು ವಿಶ್ಲೇಷಿಸಿಲ್ಲ ಮತ್ತು ಅರ್ಥ ಮಾಡಿಕೊಂಡಿಲ್ಲ.
ಆರೆಸ್ಸೆಸ್-ಬಿಜೆಪಿ 2014ರಲ್ಲಿ ‘ಸಬ್ ಕಾ ಸಾಥ್ ಮತ್ತು ಸಬ್ ಕಾ ವಿಕಾಸ್’ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದ ನಂತರ, ರಾಷ್ಟ್ರೀಯ ರಾಜ್ಯ ಬಜೆಟ್ ಆರ್ಥಿಕತೆಯು ನಿಜವಾಗಿ ಎಲ್ಲಿ ಖರ್ಚು ಮಾಡಿತು? ಇದು ಯಾರನ್ನು ಅಭಿವೃದ್ಧಿಪಡಿಸಿತು? ಜಾತಿ-ವರ್ಗದ ಪರಿಭಾಷೆಯಲ್ಲಿ, ಕೃಷಿಕ ಮತ್ತು ಕುಶಲಕರ್ಮಿ ಶೂದ್ರ, ದಲಿತ ಮತ್ತು ಆದಿವಾಸಿ ಜನಸಾಮಾನ್ಯರಿಗೆ ಕೇಂದ್ರ ಸರಕಾರವು ನಿಗದಿಪಡಿಸಿದ ಸಂಪನ್ಮೂಲಗಳೊಂದಿಗೆ ಕಣ್ಣಿಗೆ ಕಾಣಿಸುವ ಯಾವುದೇ ವಿಕಾಸ ಆಗಲಿಲ್ಲ. ಹೆದ್ದಾರಿಗಳು, ದೊಡ್ಡ ವಿಮಾನ ನಿಲ್ದಾಣಗಳು, ವಂದೇ ಭಾರತ್ ಮುಂತಾದ ಮೂಲಸೌಕರ್ಯಗಳಿಗೆ ಕೇಂದ್ರ ಬಜೆಟ್‌ನ ಹೆಚ್ಚಿನ ಭಾಗವನ್ನು ಖರ್ಚು ಮಾಡಲಾಗಿದೆ. ಆರೆಸ್ಸೆಸ್-ಬಿಜೆಪಿ ಸರಕಾರವು ಜಾಗತಿಕ ಆಟಗಳಿಗಾಗಿ ಕ್ರೀಡಾಂಗಣಗಳನ್ನು ನಿರ್ಮಿಸಲು ಸಹ ಹಣವನ್ನು ಖರ್ಚು ಮಾಡುತ್ತಿದೆ.
ಅಗ್ಗದ ದರದಲ್ಲಿ ಹೆಚ್ಚಿನ ಸರಕಾರಿ ಕೈಗಾರಿಕಾ ಘಟಕಗಳ ಖಾಸಗೀಕರಣ, ಹೆಚ್ಚಾಗಿ ಬನಿಯಾ-ಬ್ರಾಹ್ಮಣ ಕೈಗಾರಿಕೋದ್ಯಮಿಗಳ ಸಲುವಾಗಿ ಆಗುತ್ತಿದೆ. ದಲಿತ, ಆದಿವಾಸಿ ಮತ್ತು ಇತರ ಹಿಂದುಳಿದ ಸಮುದಾಯಗಳಿಗೆ ಮೀಸಲಾದ ಉದ್ಯೋಗಗಳು ದೊಡ್ಡ ಪ್ರಮಾಣದಲ್ಲಿ ಇಲ್ಲವಾಗಿವೆ. ಈ ವಲಯಗಳಲ್ಲಿ ಉದ್ಯೋಗದಲ್ಲಿರುವ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ವ್ಯಕ್ತಿಗಳ ಆದಾಯವು ಗ್ರಾಮೀಣ ಕೃಷಿಕ ಮತ್ತು ಕುಶಲಕರ್ಮಿ ಸಮುದಾಯಗಳಲ್ಲಿನ ಹೂಡಿಕೆಯ ಮೂಲವಾಗಿದೆ. ಇಂತಹ ಮೀಸಲಾತಿ ಉದ್ಯೋಗಗಳನ್ನು ಕಡಿತಗೊಳಿಸುವ ಮೂಲಕ ಬಿಜೆಪಿ-ಆರೆಸ್ಸೆಸ್ ಸರಕಾರವು ಬ್ರಾಹ್ಮಣ-ಬನಿಯಾ ಶ್ರೀಮಂತರಿಗೆ ನೇರವಾಗಿ ಸಹಾಯ ಮಾಡುತ್ತಿದೆ ಮತ್ತು ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ ಬೆಳೆದ ಮತ್ತು ಖಾಸಗಿ ವಲಯದ ಶಾಲಾ-ಕಾಲೇಜುಗಳಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಯುವಕರಿಗೆ ಹೆಚ್ಚಿನ ಉದ್ಯೋಗಗಳನ್ನು ಒದಗಿಸುತ್ತಿದೆ. ಆರೆಸ್ಸೆಸ್/ಬಿಜೆಪಿಯು ಕೃಷಿಕರು ಮತ್ತು ಕುಶಲಕರ್ಮಿಗಳ ಮಕ್ಕಳು ಕಲಿಯುವ ಸರಕಾರಿ ವಲಯದ ಶಿಕ್ಷಣದಲ್ಲಿ ಆಂಗ್ಲ ಮಾಧ್ಯಮವನ್ನು ವಿರೋಧಿಸುತ್ತಿದೆ. ಹಾಗಾಗಿ ಭಾರತದಲ್ಲಿ ಆಗುತ್ತಿರುವುದು ರಾಷ್ಟ್ರೀಯ ಆರ್ಥಿಕ ಕುಸಿತ ಎನ್ನುವುದಕ್ಕಿಂತ ಹೆಚ್ಚಾಗಿ ಜಾತಿ ಆರ್ಥಿಕ ಕುಸಿತವಾಗಿದೆ.
ಆರೆಸ್ಸೆಸ್-ಬಿಜೆಪಿ ಸರಕಾರವು ಪ್ರಮುಖ ಕೈಗಾರಿಕೋದ್ಯಮಿ ಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ಬ್ರಾಹ್ಮಣ ಕೈಗಾರಿಕೋ ದ್ಯಮಿಗಳು ಆರೆಸ್ಸೆಸ್-ಬಿಜೆಪಿಯ ರಾಜಕೀಯ ಅಜೆಂಡದೊಂದಿಗೆ ಸೈದ್ಧಾಂತಿಕ ಸಂಬಂಧವನ್ನು ಹೊಂದಿದ್ದಾರೆ. ವಾಸ್ತವವಾಗಿ, ಆ ಪ್ರಮುಖ ಕೈಗಾರಿಕೋದ್ಯಮಿಗಳಲ್ಲಿ ದಲಿತರು, ಶೂದ್ರರು ಮತ್ತು ಆದಿವಾಸಿಗಳು ಇಲ್ಲ. (ಶಿವ ನಾಡಾರ್ ಕುಟುಂಬವೊಂದು ಇದಕ್ಕೆ ಅಪವಾದ). ಗುಜರಾತಿ ಬನಿಯಾಗಳು ಮತ್ತು ಮಾರ್ವಾಡಿಗಳ ಉಪಸ್ಥಿತಿಯು ಎಷ್ಟು ಗೋಚರಿಸುತ್ತದೆ ಎಂದರೆ ತಮ್ಮನ್ನು ತಾವು ಮುನ್ನಡೆಸಲು ಸರಕಾರದ ಸಂಪನ್ಮೂಲಗಳನ್ನು ಕುಶಲತೆಯಿಂದ ನಿರ್ವಹಿಸುವಲ್ಲಿ ಬೇರೆ ಯಾವುದೇ ಜಾತಿಗಳು ಅವರನ್ನು ಮೀರಿಸಲು ಸಾಧ್ಯವಿಲ್ಲ. ಅಂಬಾನಿ, ಅದಾನಿ, ವೇದಾಂತ, ಲಕ್ಷ್ಮಿ ಮಿತ್ತಲ್ ಹೀಗೆ ಹೆಸರಾಂತರೆಲ್ಲ ಬನಿಯಾ ಕೈಗಾರಿಕೋದ್ಯಮಿಗಳೇ ಆಗಿದ್ದಾರೆ. ದೊಡ್ಡ ಸಾಫ್ಟ್‌ವೇರ್ ಕಂಪೆನಿಯಾದ ಇನ್ಫೋಸಿಸ್ ಅನ್ನು ನಡೆಸುತ್ತಿರುವುದು ಬ್ರಾಹ್ಮಣ ಕುಟುಂಬ.
ಕೇಂದ್ರ ಸರಕಾರ ಬ್ಯಾಂಕ್‌ಗಳ ಮೇಲೆ ಹಿಡಿತ ಹೊಂದಿರುವುದರಿಂದ ದೊಡ್ಡ ಕೈಗಾರಿಕೋದ್ಯಮಿಗಳಿಗೆ ನೀಡಿದ್ದ ಲಕ್ಷ ಕೋಟಿ ರೂ. ಸಾಲಗಳನ್ನು ಮನ್ನಾ ಮಾಡಿದೆ. ಈಗಾಗಲೇ ಹೇಳಿದಂತೆ, ದೊಡ್ಡ ಉದ್ಯಮಿಗಳು ಮತ್ತು ದೊಡ್ಡ ಕೈಗಾರಿಕೋದ್ಯಮಿಗಳು ಬ್ರಾಹ್ಮಣ, ಬನಿಯಾ, ಕಾಯಸ್ಥ, ಖಾತ್ರಿ ಮತ್ತು ಕ್ಷತ್ರಿಯ ಜಾತಿಗಳಿಂದ ಬಂದವರು. ಆ ಆರ್ಥಿಕತೆಯಲ್ಲಿ ಶೂದ್ರರು, ದಲಿತರು ಮತ್ತು ಆದಿವಾಸಿಗಳು ಅಷ್ಟೇನೂ ಇಲ್ಲ. ಆ ಆರ್ಥಿಕತೆಯಲ್ಲಿ ಸರಕಾರದ ಹೂಡಿಕೆಗಳು ಉತ್ಪಾದಕ ವರ್ಗವಾದ ಶೂದ್ರ, ದಲಿತ ಮತ್ತು ಆದಿವಾಸಿ ಸಮುದಾಯಗಳಿಗೆ ಹೆಚ್ಚಿನ ಲಾಭವನ್ನು ನೀಡುವುದಿಲ್ಲ. ಅದೇ ಸಮಯದಲ್ಲಿ, ಆರೆಸ್ಸೆಸ್-ಬಿಜೆಪಿ ಸರಕಾರವು ಸಣ್ಣ ಕೃಷಿ ಸಾಲಗಳನ್ನು ಮನ್ನಾ ಮಾಡುವುದರ ವಿರುದ್ಧವಿದೆ. ಇಂತಹ ಪ್ರಕ್ರಿಯೆಯು ರೈತರನ್ನು ಸೋಮಾರಿಗಳನ್ನಾಗಿ ಮಾಡುತ್ತದೆ ಎಂದು ಅವರ ಅರ್ಥಶಾಸ್ತ್ರಜ್ಞರು ವಾದಿಸುತ್ತಲೇ ಇರುತ್ತಾರೆ. ಆದರೆ ಅವರು ಎಂದಿಗೂ ಕೈಗಾರಿಕೋದ್ಯಮಿಗಳನ್ನು ಸೋಮಾರಿಗಳು ಅಥವಾ ಅಪರಾಧಿಗಳು ಎಂದು ನಿರೂಪಿಸುವುದಿಲ್ಲ.
ಅಂತಹ ಕೈಗಾರಿಕಾ ಒಪ್ಪಂದದ ಆರ್ಥಿಕತೆಗೆ ಹೋಗುವ ಬೃಹತ್ ಮೊತ್ತವು ರಾಜ್ಯದ ಜಿಎಸ್‌ಟಿ ಆದಾಯವನ್ನು ಹೆಚ್ಚಿಸಲು ಮಾರುಕಟ್ಟೆಗಳಿಗೆ ಹಿಂದಿರುಗುವುದಿಲ್ಲ. ಅದರಲ್ಲಿ ಕೆಲವು ಭಾಗ ಮಾತ್ರ ಮರುಹೂಡಿಕೆಯಾಗುತ್ತದೆ. ಕೆಲವು ಭಾಗ ಬ್ಯಾಂಕ್‌ಗಳಲ್ಲಿ ಉಳಿಯುತ್ತದೆ ಮತ್ತು ಕೆಲವು ಹವಾಲಾ ವಹಿವಾಟು ಮತ್ತು ಆಸ್ತಿ ಖರೀದಿಯ ಮೂಲಕ ವಿದೇಶಗಳಿಗೆ ಹೋಗುತ್ತದೆ. ಅವರು ಭಾರತದಲ್ಲಿ ಒಂದು ಕಾಲು ಮತ್ತು ಲಂಡನ್ ಅಥವಾ ನ್ಯೂಯಾರ್ಕ್‌ನಲ್ಲಿ ಮತ್ತೊಂದು ಕಾಲಿನೊಂದಿಗೆ ಅರ್ಧ ಭಾರತೀಯ ಎಂದು ಕರೆಯಬಹುದಾದ ಜೀವನವನ್ನು ನಡೆಸುತ್ತಾರೆ. ಆರೆಸ್ಸೆಸ್-ಬಿಜೆಪಿ ಅವರನ್ನು ಯಾವಾಗಲೂ ಭಾರತದಲ್ಲಿ ವಾಸಿಸುವ, ಅದೂ ಹಳ್ಳಿಗಳಲ್ಲಿಯೇ ಬದುಕುವ ಶೂದ್ರರು, ದಲಿತರು ಮತ್ತು ಆದಿವಾಸಿಗಳಿಗಿಂತಲೂ ಹೆಚ್ಚಿನ ರಾಷ್ಟ್ರೀಯವಾದಿಗಳೆಂದು ಬಿಂಬಿಸುತ್ತದೆ.
ಈ ಬಗೆಯ ಆರ್ಥಿಕತೆಯ ಮೂಲಕ ಬೃಹತ್ ಹೆದ್ದಾರಿಗಳು, ವಿಮಾನ ನಿಲ್ದಾಣಗಳು ಮತ್ತು ಬಂದರುಗಳಂತಹ ಬೃಹತ್ ಮೂಲಸೌಕರ್ಯಗಳ ಮೇಲೆ ಹೆಚ್ಚು ಹೆಚ್ಚು ಬಜೆಟ್ ಹೂಡಿಕೆ ಮಾಡುವ ಆರೆಸ್ಸೆಸ್-ಬಿಜೆಪಿಯ ಗಮನವು ಬೃಹತ್ ಲಾಭದ ಅನುಪಾತಗಳ ಮೂಲಕ ಸಂಪೂರ್ಣವಾಗಿ ಅದೇ ಮೇಲ್ಜಾತಿಯ ವ್ಯಾಪಾರಿಗಳ ಕೈಗೆ ಹೋಗುತ್ತದೆ. ಆ ಲಾಭದ ಆರ್ಥಿಕತೆಯಲ್ಲಿ ಶ್ರೀಮಂತ ಕೃಷಿಕರಾಗಿರುವ ಶೂದ್ರರಿಗೂ ಪಾಲು ಇಲ್ಲ. ಪಟೇಲರು, ಮರಾಠರು, ಜಾಟ್‌ಗಳು, ರೆಡ್ಡಿಗಳು, ಕಮ್ಮಗಳು, ಲಿಂಗಾಯತರು, ಒಕ್ಕಲಿಗರು, ಮುದಲಿಯಾರ್‌ಗಳು, ನಾಯರ್‌ಗಳಂತಹ ಶ್ರೀಮಂತ ಶೂದ್ರ ಭೂಮಾಲಕ ಜಾತಿಗಳು ಕೂಡ ಈ ಕೇಂದ್ರ ಗುತ್ತಿಗೆ ಆರ್ಥಿಕತೆಯಲ್ಲಿ ಹೆಚ್ಚಿನ ಪಾಲು ಪಡೆಯುವುದಿಲ್ಲ.
ಆ ಆರ್ಥಿಕತೆಯಲ್ಲಿ ಆಗುವ ಅಭಿವೃದ್ಧಿಯು ಬ್ರಾಹ್ಮಣ-ಬನಿಯಾ ಅಭಿವೃದ್ಧಿ ಆರ್ಥಿಕತೆಯಾಗಿದೆ. ಇದು ಭಾರತದ ಕೃಷಿ ಆರ್ಥಿಕತೆಯಲ್ಲಿ ಆರ್ಥಿಕ ಕುಸಿತವನ್ನು ಸೃಷ್ಟಿಸಿದೆ. ಆ ವಲಯದಲ್ಲಿನ ಕಡಿಮೆ ಬೆಳವಣಿಗೆಯಿಂದಾಗಿ ಮತ್ತು ಸಾಕಷ್ಟು ಹೂಡಿಕೆಯ ಕೊರತೆಯಿಂದಾಗಿ ಇಂಥ ಕುಸಿತವಾಗುತ್ತಿದೆ. ಶುದ್ಧ ವರ್ಗ ವಿಧಾನದ ಆಧಾರದ ಮೇಲೆ ಎಡಪಂಥೀಯ ಆರ್ಥಿಕ ವಿಶ್ಲೇಷಣೆಯು ಈ ಪ್ರಕ್ರಿಯೆಯನ್ನು ಗ್ರಹಿಸಲು ಸಾಧ್ಯವಾಗಲಿಲ್ಲ. ಜಾತಿ ತಾರತಮ್ಯದೆಡೆಗಿನ ಉದ್ದೇಶಪೂರ್ವಕ ನಿರ್ಲಕ್ಷ್ಯ ಅವರ ಸಿದ್ಧಾಂತವನ್ನು ಕೊಂದುಹಾಕಿದೆ.
ಎಲ್ಲೆಲ್ಲಿ ಬಿಜೆಪಿ ಅಧಿಕಾರದಲ್ಲಿದೆಯೋ ಆ ರಾಜ್ಯಗಳಲ್ಲೆಲ್ಲ, ರಾಜ್ಯ ಬಜೆಟ್‌ನಿಂದ ರೈತ ಮತ್ತು ಕುಶಲಕರ್ಮಿಗಳ ವರ್ಗವಾಗಿರುವ ಜನಸಾಮಾನ್ಯರ ಪ್ರಗತಿ ಪ್ರಮಾಣವು ತುಂಬಾ ಕಡಿಮೆಯಾಗಿದೆ. ಮಧ್ಯಪ್ರದೇಶ, ತೆಲಂಗಾಣ, ಛತ್ತೀಸ್‌ಗಡ, ರಾಜಸ್ಥಾನ ಮತ್ತು ಮಿಜೋರಾಂ - ಐದು ರಾಜ್ಯಗಳ ವಿಧಾನಸಭೆಗಳಿಗೆ ನಡೆದಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳಿಗೆ ವಿರುದ್ಧವಾಗಿ ಬಿಜೆಪಿಯ ಪ್ರಣಾಳಿಕೆಯಲ್ಲಿ ನೀಡಲಾದ ಕಲ್ಯಾಣ ಪ್ಯಾಕೇಜ್ ಅತ್ಯಂತ ಕಡಿಮೆಯಾಗಿದೆ. ತೆಲಂಗಾಣದಲ್ಲಿ, ಪ್ರಾದೇಶಿಕ ಪಕ್ಷವಾಗಿರುವ ಬಿಆರ್‌ಎಸ್ ಕಲ್ಯಾಣ ಪ್ಯಾಕೇಜ್‌ಗೆ ವಿರುದ್ಧವಾಗಿ, ಕಾಂಗ್ರೆಸ್ ಪಕ್ಷವು ಉತ್ತಮವಾದ ಕೃಷಿ ಕಲ್ಯಾಣ ಪ್ಯಾಕೇಜ್ ಅನ್ನು ನೀಡಿದೆ. ಮೊದಲ ಬಾರಿಗೆ, ರಾಷ್ಟ್ರೀಯ ಪಕ್ಷವೊಂದು ಎಕರೆಗೆ 15,000 ರೂ. ಮತ್ತು ಕೃಷಿ ಕಾರ್ಮಿಕರಿಗೆ ಪ್ರತೀ ವ್ಯಕ್ತಿಗೆ 12,000 ರೂ. ವೃದ್ಧಾಪ್ಯ ಪಿಂಚಣಿ, ಸಬ್ಸಿಡಿ ಗ್ಯಾಸ್ ಸಿಲಿಂಡರ್ ಪೂರೈಕೆ ಭರವಸೆಗಳೂ ಸೇರಿವೆ. ಅದಕ್ಕಿಂತ ಮುಖ್ಯವಾಗಿ ಕಾಂಗ್ರೆಸ್ ಈಗ 2 ಲಕ್ಷ ಕೃಷಿ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದು, ಇದನ್ನು ಬಿಜೆಪಿ ತೀವ್ರವಾಗಿ ವಿರೋಧಿಸುತ್ತಿದೆ. ಆದರೂ, ಅದೇ ವೇಳೆ ಅದು ಬ್ರಾಹ್ಮಣ ಕೈಗಾರಿಕೋದ್ಯಮಿಗಳ ಬ್ಯಾಂಕ್ ಸಾಲಗಳನ್ನು ಸತತವಾಗಿ ಬೃಹತ್ ಪ್ರಮಾಣದಲ್ಲಿ ಮನ್ನಾ ಮಾಡುತ್ತಿದೆ.
ರೈತಾಪಿ ಜನಸಾಮಾನ್ಯರ ಖಾತೆಗಳಿಗೆ ತುಂಬಿದ ಹಣವನ್ನು ಒಂದು ಅಥವಾ ಎರಡು ತಿಂಗಳೊಳಗೆ ಗ್ರಾಮೀಣ ಮಾರುಕಟ್ಟೆಗಳಿಗೆ ಮತ್ತು ಆ ಮೂಲಕ ರಾಜ್ಯದ ಜಿಎಸ್‌ಟಿ ಆದಾಯಕ್ಕೆ ತೆಗೆದುಕೊಳ್ಳಲಾಗುತ್ತದೆ. ತೆಲಂಗಾಣದಲ್ಲಿ ಬಿಜೆಪಿ ಕೊಡುಗೆ ಏನು? ಪ್ರತೀ ಕುಟುಂಬಕ್ಕೆ ಒಂದು ಹಸು ಮತ್ತು ಮುಸ್ಲಿಮರಿಗೆ ಲಭ್ಯವಿರುವ ಶೇ.4ರ ಮೀಸಲಾತಿಯನ್ನು ರದ್ದುಗೊಳಿಸುವುದು. ಆರೆಸ್ಸೆಸ್-ಬಿಜೆಪಿ ಬಜೆಟ್ ಹಣವನ್ನು ಶೂದ್ರ, ದಲಿತ ಮತ್ತು ಆದಿವಾಸಿ ಜನರ ಖಾತೆಗಳಿಗೆ ಹಾಕಲು ಬಯಸುವುದಿಲ್ಲ. ಆದರೆ ಶ್ರೀಮಂತ ಕೈಗಾರಿಕೋದ್ಯಮಿಗಳ ಖಾತೆಗಳಿಗೆ ಏಕೆ ಪೂರೈಸುತ್ತಿದೆ? ಕೃಷಿ ಕಲ್ಯಾಣದ ಬಗ್ಗೆ ಒಬಿಸಿ ಪ್ರಧಾನ ಮಂತ್ರಿಯ ಅಭಿಪ್ರಾಯವೇನು?
ರೈತ ಉತ್ಪಾದಕರ ಮೇಲಿನ ಬಿಜೆಪಿ ದ್ವೇಷಕ್ಕೂ ಪ್ರಧಾನಿ ಮೋದಿ ಯವರು ರೆವಿಡಿ ಸಂಸ್ಕೃತಿ (ಉಚಿತ ಆಹಾರಗಳ ಸಂಸ್ಕೃತಿ) ಎಂದು ಕರೆದಿದ್ದಕ್ಕೂ ಹೊಂದಿಕೆಯಾಗುತ್ತದೆ. ಅವರು ಉಚಿತ ಕೊಡುಗೆಗಳನ್ನು ದೇಶದ ಅಭಿವೃದ್ಧಿಗೆ ಅಪಾಯಕಾರಿ ಎಂದು ಹೇಳುತ್ತಾರೆ. ಹಾಗಾದರೆ ಯಾರ ಅಭಿವೃದ್ಧಿಯ ಬಗ್ಗೆ ಅವರಿಗೆ ಅಷ್ಟೊಂದು ಕಾಳಜಿ?
ಕೃಷಿ ಉತ್ಪಾದಕರಿಗೆ ಉದ್ದೇಶಿಸಿರುವ ಕಲ್ಯಾಣ ಯೋಜನೆಗಳ ಕುರಿತ ಈ ದೃಷ್ಟಿಕೋನಕ್ಕೆ ವಿರುದ್ಧವಾಗಿ, ಮೋದಿ ಅವರು ಕೈಗಾರಿಕೋದ್ಯಮಿಗಳ ಜೊತೆಗೆ ನಿಲ್ಲಲು ಹೆದರುವವರಲ್ಲಿ ತಾನಿಲ್ಲ ಎಂದು ಬಹಿರಂಗವಾಗಿ ಹೇಳಿದರು.
ಅವರು ಎಂದಿಗೂ ರೈತರು ಮತ್ತು ಕೃಷಿ ಕಾರ್ಮಿಕರ ಜೊತೆಗೆ ನಿಂತಿಲ್ಲ. ಮೋದಿಯವರಿಗೆ ಅಭಿವೃದ್ಧಿ ಎಂದರೆ ಬ್ರಾಹ್ಮಣ-ಬನಿಯಾ ಅಭಿವೃದ್ಧಿ. ಬ್ರಾಹ್ಮಣ ಎಂದು ಹೇಳಿಕೊಂಡ ರಾಹುಲ್ ಗಾಂಧಿ ಮೋದಿಯ ಹಾಗೆ ಮಾಡದೆ, ಹೊಲದಲ್ಲಿ ಕೂಲಿ ಮಾಡುವ ಆಳುಗಳ ಜೊತೆ ಹೋಗಿ ನಿಂತರು. ಆದರೆ ಒಬಿಸಿ ಪ್ರಧಾನ ಮಂತ್ರಿಗಳು ಎಂದಿಗೂ ಹೊಲಗಳಿಗೆ ಹೋಗುವುದಿಲ್ಲ ಮತ್ತು ರೈತರೊಂದಿಗೆ ನಿಲ್ಲುವುದಿಲ್ಲ. ಕೃಷಿ ಮತ್ತು ಕೃಷಿಕ ಜನಸಾಮಾನ್ಯರನ್ನು ಧಿಕ್ಕರಿಸುವ ಈ ವಿಧಾನವು ಆರೆಸ್ಸೆಸ್‌ನಿಂದ ಕಲಿತ ಪಾಠವಾಗಿದೆ.
ಶೂದ್ರ ಅಭಿವೃದ್ಧಿ ಮಾದರಿಯು ಗ್ರಾಮೀಣ ಜೀವನವನ್ನು ಸುಧಾರಿಸುತ್ತದೆ. ರಾಜ್ಯವು ತನ್ನ ಬಜೆಟ್‌ನಿಂದ ಹಣವನ್ನು ಖರ್ಚು ಮಾಡಿದಾಗ, ಸರ್ವತೋಮುಖ ಅಭಿವೃದ್ಧಿಯಾಗುತ್ತದೆ. 1960ರ ದಶಕದ ಉತ್ತರಾರ್ಧದಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದಾಗ ತಮಿಳುನಾಡಿನಲ್ಲಿ ಆದ ಬೆಳವಣಿಗೆ ಇದಕ್ಕೆ ಸಾಕ್ಷಿ. ಡಿಎಂಕೆ ಆಗ ಶಾಲಾ ಮಕ್ಕಳಿಗೆ ಆಹಾರಕ್ಕಾಗಿ, ಪುಸ್ತಕಗಳು ಮತ್ತು ಶಾಲೆಯ ಮೂಲಸೌಕರ್ಯಗಳನ್ನು ಸುಧಾರಿಸಲು ಹಣವನ್ನು ಖರ್ಚು ಮಾಡಿತು. ಗ್ರಾಮೀಣ ತಮಿಳು ಮಾಧ್ಯಮ ಶಾಲೆಗಳು ಶೂದ್ರ, ದಲಿತ ಮತ್ತು ಆದಿವಾಸಿ ಕೃಷಿಕರಿಗೆ ಮೀಸಲಾದವು, ಆದರೆ ಬ್ರಾಹ್ಮಣರು ತಮ್ಮ ಮಕ್ಕಳನ್ನು ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಳುಹಿಸುತ್ತಿದ್ದರು. ಈಗ, ತಮಿಳುನಾಡಿನಲ್ಲಿ ಗ್ರಾಮೀಣ ಜನತೆಯ ಕಲ್ಯಾಣಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಖರ್ಚು ಮಾಡಲಾಗುತ್ತಿದೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿಯವರು ಶಾಲಾ-ಕಾಲೇಜುಗಳಿಗೆ ಹೋಗುವ ಮಕ್ಕಳ ತಾಯಂದಿರಿಗೆ ಗಣನೀಯ ಪ್ರಮಾಣದ ಹಣವನ್ನು ವರ್ಗಾಯಿ ಸುವುದು, ಅಮರಾವತಿಯಲ್ಲಿ ಸಿಂಗಾಪುರದಂತಹ ರಾಜಧಾನಿ ಎಂದು ಕರೆಯಲ್ಪಡುವ ನಿರ್ಮಾಣವನ್ನು ನಿಲ್ಲಿಸುವ ಮೂಲಕ ಶಾಲೆಯ ಮೂಲಸೌಕರ್ಯಗಳನ್ನು ಸುಧಾರಿಸಲು ಹಣವನ್ನು ಖರ್ಚು ಮಾಡು ವುದು ಶೂದ್ರ ಅಭಿವೃದ್ಧಿ ಮಾದರಿಗೆ ಹೊಸ ಬಲವನ್ನು ಒದಗಿಸಿದೆ.
ರಾಹುಲ್ ಗಾಂಧಿಯವರು ‘ಭಾರತ್ ಜೋಡೊ ಯಾತ್ರೆ’ ಮತ್ತು ಹೊಲಗಳಲ್ಲಿ, ಹಳ್ಳಿಗಳಲ್ಲಿ, ರಸ್ತೆ ಬದಿಯ ಚಹಾ ಅಂಗಡಿಗಳಲ್ಲಿ ರೈತಾಪಿ ಜನಸಾಮಾನ್ಯರೊಂದಿಗೆ ಸಂವಾದದ ಮೂಲಕ, ಚುನಾವಣೆಗಳಿರುವ ರಾಜ್ಯಗಳಲ್ಲಿ ಶೂದ್ರ ಅಭಿವೃದ್ಧಿ ಮಾದರಿಯನ್ನು ಅಳವಡಿಸಿಕೊಳ್ಳುವತ್ತ ಕಾಂಗ್ರೆಸ್ ಅನ್ನು ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿ ಅವರು ಅದನ್ನೇ ಮಾಡಿದರು ಮತ್ತು ತೆಲಂಗಾಣದಲ್ಲಿಯೂ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅನುಭವಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಈ ದಿಕ್ಕಿನಲ್ಲಿ ಸಾಗುತ್ತಿರುವುದರಿಂದ ಖಂಡಿತವಾಗಿಯೂ ಸ್ವಲ್ಪ ಭರವಸೆ ಇದೆ. ದಕ್ಷಿಣದ ರಾಜ್ಯಗಳು ಈಗ ಈ ಹೊಸ ದಿಕ್ಕಿನಲ್ಲಿ ಸಾಗುತ್ತಿವೆ ಮತ್ತು ಬ್ರಾಹ್ಮಣ-ಬನಿಯಾ ಅಭಿವೃದ್ಧಿ ಮಾದರಿಗೆ ವಿರುದ್ಧವಾಗಿ ಶೂದ್ರ ಅಭಿವೃದ್ಧಿ ಮಾದರಿಯನ್ನು ಬೆಂಬಲಿಸಲು, ಈ ಹಿಂದೆ ವಿವಿಧ ಹಂತಗಳಲ್ಲಿ ಬೆಂಬಲಿಸುತ್ತಿದ್ದ ರಾಷ್ಟ್ರೀಯ ಪಕ್ಷವೊಂದು ಮುಂದಾಗಿದೆ.
(ಕೃಪೆ:thewire.in)