ಬಿಜೆಪಿ ಟಿಕೆಟ್ ಮೊದಲ ಪಟ್ಟಿಯೊಳಗಿಂದ ಇಣುಕುತ್ತಿದೆ ಅದರ ಆತಂಕ !
ಲೋಕಸಭಾ ಚುನಾವಣೆ ಘೋಷಣೆ ಮೊದಲೇ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಈಗಾಗಲೇ ಪ್ರಕಟಿಸಿದೆ. ಆದರೆ ಈ ಟಿಕೆಟ್ ಪಟ್ಟಿ ನೋಡಿದರೆ ಅದರಲ್ಲಿರುವ ಹೆಸರುಗಳು, ಅದರಲ್ಲಿ ಇರದ ಹೆಸರುಗಳನ್ನು ನೋಡಿದರೆ ಒಂದು ಅನುಮಾನ ಮೂಡುತ್ತದೆ. ಇದು ನಿಜವಾಗಿಯೂ 400 ಸೀಟು ಗೆಲ್ಲುವ ಆತ್ಮವಿಶ್ವಾಸ ಇರುವ ಪಕ್ಷದ ಪಟ್ಟಿಯೇ ?. ಅಥವಾ ಹೇಗಾದರೂ 272 ರ ಗಡಿ ದಾಟುವ ಹೆಣಗಾಟದಲ್ಲಿರುವ ಪಕ್ಷದ ಪಟ್ಟಿಯೇ ?
ಹರ್ಷವರ್ಧನ, ಮೀನಾಕ್ಷಿ ಲೇಖಿ, ಪ್ರಜ್ಞಾ ಸಿಂಗ್ ಠಾಕೂರ್, ಗೌತಮ್ ಗಂಭೀರ್ ಗೆ ಟಿಕೆಟ್ ಯಾಕೆ ನಿರಾಕರಿಸಲಾಯಿತು ?. ಲಖೀಮ್ ಪುರ ಖೇರಿಯಲ್ಲಿ ರೈತರನ್ನು ಹೊಸಕಿ ಹಾಕಿದವನ ತಂದೆಗೆ ಯಾಕೆ ಮತ್ತೆ ಟಿಕೆಟ್ ನೀಡಲಾಯಿತು ?. ಕಾಂಗ್ರೆಸ್, ಎಸ್ಪಿ, ಬಿಎಸ್ಪಿ, ಬಿಆರ್ ಎಸ್ ಸಹಿತ ಯಾವುದೇ ಪಕ್ಷದಿಂದ ಗೆಲ್ಲುವ ಸಾಮರ್ಥ್ಯ ಇರುವ ಯಾರನ್ನು ಬೇಕಾದರೂ ಸ್ವೀಕರಿಸಿ ಟಿಕೆಟ್ ಕೊಡುತ್ತೇವೆ ಎಂಬಂತಹ ಸ್ಥಿತಿ ಬಿಜೆಪಿಗೆ ಬಂದಿರುವುದು ಯಾಕೆ ?.
ಕರ್ನಾಟಕದಲ್ಲಿ ಇಷ್ಟೆಲ್ಲಾ ಹಿರಿಯ ಸಂಸದರಿದ್ದರೂ, ಪ್ರಭಾವೀ ಕೇಂದ್ರ ಸಚಿವರು ಇದ್ದರೂ ಮೊದಲ ಪಟ್ಟಿಯಲ್ಲಿ ಯಾಕೆ ಇಲ್ಲಿಂದ ಒಬ್ಬರ ಹೆಸರೂ ಬರಲಿಲ್ಲ ?. ಹೊರಗಿನಿಂದ 400 ಸೀಟುಗಳ ಅಬ್ಬರದ ಪ್ರಚಾರ ಮಾಡುತ್ತಿರುವ ಬಿಜೆಪಿಗೆ ಒಳಗೊಳಗೇ ಕಾಡುತ್ತಿರುವ ಭಯ ಮತ್ತು ಬಿಕ್ಕಟ್ಟುಗಳು ಏನು?.
ಈಗಾಗಲೇ ಪ್ರಧಾನಿ ಮೋದಿ ಬಡಾಯಿ ಕೊಚ್ಚಿಕೊಂಡು ಅಗಿದೆ. 400 ಸೀಟುಗಳನ್ನು ಗೆಲ್ಲುವುದಾಗಿ ಹೇಳಿಕೊಳ್ಳುತ್ತಲೇ ಇದ್ಧಾರೆ. ಅಧಿಕಾರ ತಮ್ಮ ಬಳಿಯೇ ಉಳಿಯಲಿದೆ ಎಂಬ ಭಾವನೆಯನ್ನೂ ಅವರು ಎಲ್ಲೆಡೆ ತೋರಿಸುತ್ತಿದ್ದಾರೆ. ತಮ್ಮ ಕನಸು ನನಸು ಮಾಡಿಕೊಳ್ಳಲು ಮೋದಿ ನಡೆಸಿರುವ ಭಾರೀ ಕಸರತ್ತು ಮೊದಲ ಪಟ್ಟಿಯಲ್ಲಿ ಢಾಳಾಗಿ ಕಾಣಿಸುತ್ತಿದೆ.
ಅದಕ್ಕಾಗಿ ಏನೂ ನಡೆಯಬಹುದು ಎಂಬ ಸುಳಿವುಗಳೂ ಈ ಪಟ್ಟಿಯಲ್ಲಿವೆ. 16 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 195 ಕ್ಷೇತ್ರಗಳಿಗೆ ಬಿಜೆಪಿ ಉಮೇದುವಾರರನ್ನು ಘೋಷಿಸಲಾಗಿದೆ.
ಉತ್ತರ ಪ್ರದೇಶ ದಿಂದ 51 ಮಧ್ಯಪ್ರದೇಶದಿಂದ 24, ಗುಜರಾತ್ 15, ರಾಜಸ್ಥಾನ 15, ಕೇರಳ 12, ಅಸ್ಸಾಂ 11, ತೆಲಂಗಾಣ 9, ಜಾರ್ಖಂಡ್ 11, ಛತ್ತೀಸ್‌ಗಢ 11, ಹೊಸದಿಲ್ಲಿ 5, ಜಮ್ಮು ಕಾಶ್ಮೀರ 2, ಉತ್ತರಾಖಂಡ 3, ಅರುಣಾಚಲ ಪ್ರದೇಶ 2 ಹಾಗೂ ಗೋವಾ, ತ್ರಿಪುರ, ಅಂಡಮಾನ್ ಮತ್ತು ನಿಕೋಬಾರ್, ದಿಯು ಮತ್ತು ದಮನ್‌ಗಳ ತಲಾ ಒಂದು ಕ್ಷೇತ್ರಗಳಿಗೆ ಟಿಕೆಟ್ ನೀಡಲಾಗಿದೆ.
ವಾರಾಣಸಿಯಿಂದ ಮೂರನೇ ಬಾರಿಗೆ ಮೋದಿ ಕಣಕ್ಕಿಳಿಯುತ್ತಿದ್ದಾರೆ. ಮಥುರಾದಿಂದ ಹೇಮಾಮಾಲಿನಿ ಎರಡನೇ ಬಾರಿಗೆ ಸ್ಪರ್ಧಿಸುವುದು, ಲಕ್ನೋದಿಂದ ರಾಜನಾಥ್ ಸಿಂಗ್ ಸ್ಪರ್ಧೆ ಖಚಿತವಾಗಿದೆ. ಮಧ್ಯಪ್ರದೇಶದಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಬಹುಮತ ಪಡೆದ ಬಳಿಕವೂ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ರಾಜ್ಯ ರಾಜಕಾರಣ ದೂರವಾಗುತ್ತಿದೆ. ಅವರನ್ನು ವಿದಿಶಾ ಅಭ್ಯರ್ಥಿಯೆಂದು ಘೋಷಿಸಿರುವುದರೊಂದಿಗೆ, ರಾಷ್ಟ್ರ ರಾಜಕಾರಣಕ್ಕೆ ಹೋಗುವುದು ಖಚಿತವಾಗಿದೆ.
ಬಿಜೆಪಿಯ ದೆಹಲಿ ಅಭ್ಯರ್ಥಿಗಳ ಪಟ್ಟಿ ನೋಡಿದರೆ ಹಲವು ಪ್ರಶ್ನೆಗಳು ಮೂಡುತ್ತವೆ. ಹಾಲಿ ಹಲವರನ್ನು ಕೈಬಿಡಲಾಗಿದೆ. ಕೈಬಿಡಲಾದ ಇತರ ಪ್ರಮುಖ ದೆಹಲಿ ಸಂಸದರಲ್ಲಿ ಮೀನಾಕ್ಷಿ ಲೇಖಿ ಮತ್ತು ಡಾ. ಹರ್ಷವರ್ಧನ್ ಸೇರಿದ್ದಾರೆ. 2019ರ ಚುನಾವಣೆಯಲ್ಲಿ ರಾಷ್ಟ್ರ ರಾಜಧಾನಿಯ ಪ್ರತಿ ಸ್ಥಾನವನ್ನು ಗೆದ್ದಿದ್ದ ಬಿಜೆಪಿಗೆ ಈ ಬಾರಿ ದೊಡ್ಡ ಸವಾಲು ಇದೆ ಮತ್ತದರ ಬಗ್ಗೆ ಬಿಜೆಪಿಗೆ ಆತಂಕವಿದೆ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.
ಈ ಬಾರಿ ದೆಹಲಿಯಲ್ಲಿ ಬಿಜೆಪಿಗೆ ಕಾಂಗ್ರೆಸ್ ಮತ್ತು ಎಎಪಿ ಮೈತ್ರಿಯ ಸವಾಲು ಎದುರಾಗಿದೆ. ಎಎಪಿ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ಕಾಂಗ್ರೆಸ್ ಮೂರು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಬಿಜೆಪಿ ನಾಯಕಿಯಾಗಿದ್ದ ಸುಷ್ಮಾ ಸ್ವರಾಜ್ ಅವರ ಪುತ್ರಿ ಹಾಗೂ ವಕೀಲೆ ಬಾನ್ಸುರಿ ಸ್ವರಾಜ್ ಅವರು ನವದೆಹಲಿಯಿಂದ ಕಣಕ್ಕಿಳಿಯುತ್ತಿರುವ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.
ನಾಲ್ಕು ಹೊಸ ಮುಖಗಳಿಗೆ ಬಿಜೆಪಿ ಮಣೆ ಹಾಕಿದೆ. ಹಾಗಾದರೆ ಹರ್ಷವರ್ಧನ, ಮೀನಾಕ್ಷಿ ಲೇಖಿ, ಗೌತಮ್ ಗಂಭೀರ್ ಗೆ ಟಿಕೆಟ್ ಯಾಕೆ ನಿರಾಕರಿಸಲಾಯಿತು ? ಬಿಜೆಪಿ ಪಟ್ಟಿಯಲ್ಲಿ ಕೈಬಿಡಲಾದ ಮತ್ತೊಂದು ಪ್ರಮುಖ ಹೆಸರೆಂದರೆ, ಪಶ್ಚಿಮ ದೆಹಲಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ. ಎರಡು ಬಾರಿ ಸಂಸದರಾಗಿರುವ ಮತ್ತು ಮಾಜಿ ಮುಖ್ಯಮಂತ್ರಿ ದಿ. ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರ ಪರ್ವೇಶ್ ಭಾರೀ ಬೆಂಬಲ ಉಳ್ಳವರು ಎಂದೇ ಹೇಳಲಾಗುತ್ತಿತ್ತು. ಅವರು ಆಗಾಗ ಪ್ರಚೋದನಾಕಾರಿ ಹೇಳಿಕೆಗಳಿಂದ ಸುದ್ದಿಯಾಗುತ್ತಿದ್ದರು.
2020ರ ದೆಹಲಿ ಚುನಾವಣೆಗೆ ಮುಂಚಿತವಾಗಿ, ಶಾಹೀನ್ ಬಾಗ್ ಪ್ರತಿಭಟನೆಯ ಸಂದರ್ಭದಲ್ಲಿ ವರ್ಮಾ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು ಮತ್ತು ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿಭಟನಾಕಾರರನ್ನು ಒಂದು ಗಂಟೆಯಲ್ಲಿ ತೆರವುಗೊಳಿಸಲಾಗುವುದು ಎಂದಿದ್ದೆಲ್ಲ ಭಾರೀ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು.
2022ರಲ್ಲಿ ಅದೇ ಸಂಸದ ಮುಸ್ಲಿಂರನ್ನು ಬಹಿಷ್ಕರಿಸುವ ಬಗ್ಗೆ ಮಾತನಾಡಿದ್ದು ವಿವಾದಕ್ಕೀಡಾಗಿತ್ತು. ಬಿಜೆಪಿ ಎದುರಿನ ಭಯ ಯಾವುದು?
ಕ್ರಿಕೆಟ್ ರಾಜಕಾರಣ ಮಾಡಿದ್ದವರು ಈಗ ಗೌತಮ್ ಗಂಭೀರ್ ಅವರನ್ನು ಏಕೆ ಪಟ್ಟಿಯಿಂದ ಕೈಬಿಟ್ಟಿದ್ದಾರೆ? ಪ್ರಜ್ಞಾ ಸಿಂಗ್ ಠಾಕೂರ್, ರಮೇಶ್ ಬಿಧುರಿ ಮತ್ತು ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಅವರನ್ನು ಕೈಬಿಡುವ ಮೂಲಕ ದ್ವೇಷಭಾಷಣ ಮಾಡಿದವರ ವಿರುದ್ಧ ಅದು ಬಿಜೆಪಿಯ ಸಂದೇಶ ಎಂಬಂತೆ ಬಿಂಬಿಸಲಾಗುತ್ತಿದೆ.
ಆದರೆ ಅದು ನಿಜವೆ?. ಲಖೀಮ್ ಪುರ ಖೇರಿಯಲ್ಲಿ ರೈತರ ಮೇಲೆ ಕಾರು ಹರಿಸಿ ಕೊಂದವನ ತಂದೆ ಅಜಯ್ ಮಿಶ್ರಾಗೆ ಯಾಕೆ ಮತ್ತೆ ಟಿಕೆಟ್ ನೀಡಲಾಯಿತು ? ಇದರ ಮರ್ಮ ನಿಗೂಢ. ಇನ್ನೊಂದೆಡೆ ಪಶ್ಚಿಮ ಬಂಗಾಳದ ಅಸನ್ಸೋಲ್ನಲ್ಲಿ ಭೋಜ್ಪುರಿ ಗಾಯಕ ಮತ್ತು ನಟ ಪವನ್ ಸಿಂಗ್ ಅವರನ್ನು ಅಭ್ಯರ್ಥಿಯೆಂದು ಘೋಷಿಸಲಾಗಿತ್ತು. ಅದರೆ ಅವರು ಚುನಾವಣೆ ರೇಸ್ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಪವನ್ ಸಿಂಗ್ ತಮ್ಮ ಹಾಡುಗಳಲ್ಲಿ ಮಹಿಳೆಯರ ಬಗ್ಗೆ ಹಾಗೂ ಬಂಗಾಳಿಗಳ ಬಗ್ಗೆ ಕೀಳಾಗಿ ಹೇಳಿದ್ದಾರೆ ಎಂದು ಟಿ ಎಂ ಸಿ ಆರೋಪ ಮಾಡಿತ್ತು. ಈಗ ಪವನ್ ಸಿಂಗ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಇದು ಬಿಜೆಪಿಗೆ ಬಂಗಾಳದಲ್ಲಿ ಭಾರೀ ಮುಖಭಂಗ ತಂದಿದೆ.
ಪ್ರಧಾನಿ ಮೋದಿ ಭಾರೀ ಕಸರತ್ತು ತೋರಿಸಿದ ಬಳಿಕ ಪ್ರಕಟಿಸಿದಂತಿರುವ 195 ಅಭ್ಯರ್ಥಿಗಳ ಈ ಪಟ್ಟಿ ನೋಡಿದರೆ, ಹಲವು ಬಗೆಯ ಗೊಂದಲದಲ್ಲಿ ಬಿಜೆಪಿ ಬಿದ್ದಂತೆ ಕಾಣಿಸುತ್ತಿದೆ. ದಕ್ಷಿಣ ಭಾರತವನ್ನು ಇನ್ನೂ ಅರ್ಥ ಮಾಡಿಕೊಳ್ಳಲಾಗದ ಸ್ಥಿತಿಯಲ್ಲಿ ಬಿಜೆಪಿ ಇದೆ.
ಕೇರಳ, ತೆಲಂಗಾಣ ಬಿಟ್ಟರೆ ದಕ್ಷಿಣ ಭಾರತದಲ್ಲಿನ ವಿಚಾರದಲ್ಲಿ ಬಹಳ ಇಕ್ಕಟ್ಟಿನ ಸ್ಥಿತಿ ಅದರೆದುರು ಇರುವ ಹಾಗೆ ಕಾಣಿಸುತ್ತಿದೆ.
ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಬಿಜೆಪಿ ಜೊತೆಗಿದ್ದಾರೆ. ಆದರೆ ಬಿಜೆಪಿಯೆದುರಿನ ಲೆಕ್ಕಾಚಾರಗಳು ಮಾತ್ರ ಬಗೆಹರಿಯುತ್ತಿಲ್ಲ. ತೆಲಂಗಾಣದಲ್ಲಿ ಅಭ್ಯರ್ಥಿಗಳನ್ನು ಘೋಷಿಸಿರುವ ಅದು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಒಬ್ಬನೇ ಒಬ್ಬ ಅಭ್ಯರ್ಥಿಯನ್ನೂ ಘೋಷಿಸಿಲ್ಲ.
ಕರ್ನಾಟಕದಲ್ಲಿ ಗೆಲ್ಲಬಲ್ಲ ಅಭ್ಯರ್ಥಿಯೇ ಬಿಜೆಪಿಗೆ ಇಲ್ಲವೆ? ಮೊದಲ ಪಟ್ಟಿಯಲ್ಲಿ ಘೋಷಿಸಲು ಅರ್ಹರಾಗಿರುವ ಒಬ್ಬೇ ಒಬ್ಬ ಸಮರ್ಥ ನಾಯಕರೇ ಇಲ್ಲವೆ? ಹಾಗೆಯೆ ಬಿಹಾರ, ಮಹಾರಾಷ್ಟ್ರಗಳ ರಾಜಕಾರಣ ಕೂಡ ಬಿಜೆಪಿ ಪಾಲಿಗೆ ಸವಾಲಿನದ್ದಾಗಿದೆ.
ಈಚಿನ ಎರಡು ಸಂದರ್ಭಗಳನ್ನು ಗಮನಿಸಬೇಕು. ಸಮಾರಂಭವೊಂದರಲ್ಲಿ ಮೋದಿಗೆ ಭಾರೀ ಗಾತ್ರದ ಹಾರ ಹಾಕುವಾಗ ಒಂದು ಪಕ್ಕ ಜೆ ಪೀ ನಡ್ಡಾ, ಅಮಿತ್ ಶಾ , ಇನ್ನೊಂದು ಪಕ್ಕ ರಾಜನಾಥ್ ಸಿಂಗ್ ಇರುತ್ತಾರೆ.ಆ ಹಾರ ಮೋದಿಗೆ ಮಾತ್ರ ಎಂಬ ತಿಳುವಳಿಕೆ ಇದ್ದವರಂತೆ ಅಮಿತ್ ಶಾ ಹಾಗೂ ನಡ್ಡಾ ಹೊರಗೇ ಇದ್ದರೆ, ರಾಜನಾಥ್ ಸಿಂಗ್ ತಾನೂ ಹಾರದೊಳಕ್ಕೆ ತಲೆ ತೂರಲು ಹೋಗಿ ಇದ್ದಕ್ಕಿದ್ದಂತೆ ಸೂಕ್ಷ್ಮ ಅರ್ಥ ಮಾಡಿಕೊಂಡು ತಾನೇ ಹಾರದಿಂದ ಹೊರಗೆ ನಿಲ್ಲುತ್ತಾರೆ. ಮೋದಿ ಅವರತ್ತ ಕಡೆಗಣ್ಣಿನಿಂದಲೂ ನೋಡುವುದಿಲ್ಲ.
ಇನ್ನೊಂದೆಡೆ ನಿತಿಶ್ ಕುಮಾರ್ ಇರುವ ಸಮಾರಂಭದಲ್ಲಿ ಹಾರ ಹಾಕುವಾಗ ಹೊರಗಿರುವ ನಿತೀಶ್ ಕುಮಾರ್ ಅವರನ್ನು ಸ್ವತಃ ಮೋದಿಯೇ ಬಲವಂತದಿಂದ ಒಳಗೆ ಕರೆದುಕೊಂಡು ತನ್ನ ಜೊತೆ ನಿಲ್ಲಿಸಿಕೊಳ್ಳುತ್ತಾರೆ. ಬಿಜೆಪಿಯೊಳಗೆ ಎಲ್ಲರನ್ನೂ ಬದಿಗೆ ಸೇರಿಸಿ ತಾನೇ ಮಿಂಚುವ ಮೋದಿ ಯವರಿಗೆ ಬಿಹಾರದಲ್ಲಿ ನಿತೀಶ್ ಕುಮಾರ್ ಹಾರದ ಒಳಗೆ ಇರುವಂತೆ ಮಾಡುವುದು ಅನಿವಾರ್ಯವಾಗಿದೆ.
ಮೋದಿ ಪಕ್ಷಕ್ಕಿಂತ ದೊಡ್ಡದಾಗಿ ಬೆಳೆದಿದ್ದಾರೆ ಎನ್ನಲಾಗುತ್ತದೆ. ಮತ್ತು ಅದು ಹೆಚ್ಚಿನ ಸಂದರ್ಭಗಳಲ್ಲಿ ಹೌದು, ಆದರೂ ಮೋದಿಗೆ ಸಂಘ ಪರಿವಾರದ ಜರೂರತ್ತೂ ಇದೆ. ಉತ್ತರ ಪ್ರದೇಶದ 51 ಕ್ಷೇತ್ರಗಳಿಗೆ, ಪಶ್ಚಿಮ ಬಂಗಾಳದ 20 ಕ್ಷೇತ್ರಗಳಿಗೆ ಮೊದಲ ಪಟ್ಟಿಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.
ಇಂಡಿಯಾ ಮೈತ್ರಿಕೂಟದ ಬಗೆಗಿನ ಭಯವಂತೂ ಬಿಜೆಪಿಗೆ ಇದ್ದೇ ಇದೆ. ಇದರೊಂದಿಗೇ ಕರ್ನಾಟಕದ ಮಟ್ಟಿಗೆ ಜೆಡಿಎಸ್ ಜೊತೆಗಿನ ಮೈತ್ರಿ ಬಿಜೆಪಿಗೆ ಅನುಕೂಲವಾಗುವ ಬದಲು ತಿರುಗುಬಾಣವೆ ಆಗಲೂ ಬಹುದು. ಈಗ ಸೀಟು ಹಂಚಿಕೆ ವಿಚಾರವೂ ಅವುಗಳ ನಡುವೆ ಕಗ್ಗಂಟಾದ ಹಾಗಿದೆ. ಎರಡೂ ಪಕ್ಷಗಳಿಗೂ ಕೆಲವು ನಿರ್ದಿಷ್ಟ ಕ್ಷೇತ್ರಗಳ ಮೇಲೆ ಆಸೆ. ಪರಸ್ಪರ ಬಿಟ್ಟುಕೊಡಲು ತಯಾರಿಲ್ಲ.
ಬಹುಶಃ ಇಂಥದೇ ಸಮಸ್ಯೆ ಇತರ ರಾಜ್ಯಗಳಲ್ಲೂ ಅದಕ್ಕೆ ಎದುರಾಗಿದೆ. ಮೈತ್ರಿ ಮಾಡಿಕೊಳ್ಳದ ರಾಜ್ಯಗಳಲ್ಲಿ ಮಾತ್ರ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಿಹಾರ, ಮಹಾರಾಷ್ಟ್ರದಂತಹ ದೊಡ್ಡ ರಾಜ್ಯಗಳಲ್ಲಿ ಬಿಜೆಪಿಗೆ ಎದುರಾಗಿರುವ ತೊಡಕು ಕೂಡ ಇದೇ ಆಗಿದೆ.
ಒಟ್ಟಾರೆ ಚುನಾವಣೆ ಘೋಷಣೆಗೆ ಮೊದಲೇ ಪ್ರಥಮ ಪಟ್ಟಿ ಪ್ರಕಟಿಸಿ ತಾನು ಎಲ್ಲರಿಗಿಂತ ಮೊದಲೇ ಚುನಾವಣೆ ಎದುರಿಸಲು ಸಜ್ಜಾಗಿದ್ದೇನೆ ಎಂದು ಬಿಂಬಿಸಿ ಕೊಳ್ಳುತ್ತಿರುವ ಮೋದಿಜೀ ಹಾಗೂ ಅವರ ಪಕ್ಷ ಬಿಜೆಪಿ ಅದೇ ಸಂದೇಶವನ್ನು ತನ್ನ ಮೊದಲ ಪಟ್ಟಿಯ ಮೂಲಕ ಸಾರುವಲ್ಲಿ ವಿಫಲವಾಗಿದೆ. ಇದು ಬಿಜೆಪಿಯ ಆತ್ಮ ವಿಶ್ವಾಸ ವನ್ನು ತೋರಿಸುವ ಬದಲು ಚುನಾವಣೆ ಬಗ್ಗೆ, ಜನರು ಬೆಂಬಲಿಸುವ ಬಗ್ಗೆ ಅದನ್ನು ಕಾಡುತ್ತಿರುವ ಆತಂಕಗಳನ್ನು ಬಯಲು ಮಾಡಿದಂತೆಯೇ ಹೆಚ್ಚೆಚ್ಚು ಕಾಣಿಸುತ್ತಿದೆ.