ಕನ್ನಡಿಗರ ಮನ ಬೆಳಗುತಿದೆ ಗೃಹ ಜ್ಯೋತಿ

Update: 2023-08-09 17:46 GMT

ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಗೃಹಜ್ಯೋತಿ ಯೋಜನೆಯಿಂದಾಗಿ ಜನಸಾಮಾನ್ಯರು ಖುಷಿಯಾಗಿದ್ದಾರೆ. ಮನೆಗೆ ಬಂದ ಮೆಸ್ಕಾಂ ಸಿಬ್ಬಂದಿ ನೀಡಿದ ವಿದ್ಯುತ್ ಬಿಲ್ ಗೃಹಬಳಕೆಯ ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಜನ ಸಾಮಾನ್ಯರಿಗಾಗಿ ಐದು ಗ್ಯಾರಂಟಿಗಳನ್ನು ಘೋಷಿಸಿದ್ದ ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಏನೇನೋ ನೆಪ ಹುಡುಕಿ ತಗಾದೆ ತೆಗೆಯತ್ತಿದ್ದ ಬಿಜೆಪಿಯವರಿಗೆ ಮತ್ತೊಂದು ನಿರಾಸೆ ಆದಂತಿದೆ. ಸಿಟಿ ರವಿ, ಕಟೀಲ್, ಪ್ರತಾಪ್ ಸಿಂಹ ರಂತವರು ಗ್ಯಾರಂಟಿ ಗಳ ಬಗ್ಗೆ ಟೀಕೆ ಮಾಡಿದ್ದೇ ಮಾಡಿದ್ದು, ರಾಜ್ಯ ಸರ್ಕಾರ ಮಾತ್ರ ಒಂದೊಂದೇ ಗ್ಯಾರಂಟಿಗಳನ್ನು ಜಾರಿ ಮಾಡುತ್ತಲೇ ಹೋಯಿತು.

ಆಗಸ್ಟ್ 05 ರಂದು ಕಲಬುರ್ಗಿಯ ಎನ್.ವಿ.ಮೈದಾನದಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಜ್ಯೋತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ, ಚಾಲನೆ ನೀಡಿದ್ದರು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ, ಡಿಸಿಎಂ ಡಿಕೆ ಶಿವಕುಮಾರ್, ಹಲವು ಸಚಿವರು ಹಾಗೂ ಶಾಸಕರ ಉಪಸ್ಥಿತಿಯಲ್ಲಿ ಮಾದರಿ ಮನೆಯ ವಿದ್ಯುತ್ ದೀಪ ಬೆಳಗಿಸುವ ಮೂಲಕ ಉದ್ಘಾಟನೆಗೊಂಡಿತ್ತು.

ಈ ವೇಳೆ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, "ಐದು ಗ್ಯಾರಂಟಿ ಕೊಟ್ಟರೆ ಕರ್ನಾಟಕ ದಿವಾಳಿ ಆಗುತ್ತೆ ಎಂದು ಪ್ರಧಾನಿ ಮೋದಿ ಹೇಳಿಕೆ ನೀಡಿದ್ದಾರೆ. ಆದರೆ ಈ ದೇಶವನ್ನು ದಿವಾಳಿ ಮಾಡಿದ್ದು ಮೋದಿ ಸರ್ಕಾರವೇ ಹೊರತು‌ ನಾವು ಯಾರೂ ಅಲ್ಲ. ಈಗಾಗಲೇ ಉಚಿತ‌ ಅಕ್ಕಿ, ಶಕ್ತಿ ಯೋಜನೆ, ಇಂದು ಗೃಹಜ್ಯೋತಿ ಯೋಜನೆ ಜಾರಿಗೆ ತಂದಿದ್ದೇವೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಜೊತೆಗೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಈಡೇರಿಸಿ ಕರ್ನಾಟಕ‌ದ ಸಮಗ್ರ ಅಭಿವೃದ್ಧಿ ಮಾಡಿ ಮಾದರಿಯಾಗುತ್ತೇವೆ.‌ ಬಿಜೆಪಿಯವರೇ ತಾಕತ್ತಿದ್ದರೆ ನಮ್ಮ ಗ್ಯಾರಂಟಿಗಳನ್ನು ದೇಶದ ಎಲ್ಲೆಡೆ ಜಾರಿಗೆ ತನ್ನಿ" ಎಂದು ಸವಾಲು ಹಾಕಿದ್ದರು.

"ಪ್ರಮಾಣವಚನ ಸ್ವಿಕಾರ ಮಾಡಿ ಎರಡೂವರೆ ತಿಂಗಳಲ್ಲಿ ಜನರ ವಿಶ್ವಾಸ ಉಳಿಸಿಕೊಳ್ಳವ ಕೆಲಸ ಮಾಡಿದ್ದೇವೆ. ಐದು ಗ್ಯಾರಂಟಿಗಳಲ್ಲಿ ಜೂನ್​ 11ರಂದು ಶಕ್ತಿ ಯೋಜನೆಗೆ ಚಾಲನೆ ನೀಡಿದ್ದೆವು. ಶಕ್ತಿ ಯೋಜನೆಯಡಿಯಲ್ಲಿ ಪ್ರತಿನಿತ್ಯ 55 ಲಕ್ಷ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ದೇವಸ್ಥಾನ ಸೇರಿದಂತೆ ಅವಶ್ಯಕತೆ ಇರುವ ಕಡೆಗೆ ಹೋಗುತ್ತಿದ್ದಾರೆ. ಇದು‌ ಬಿಜೆಪಿ ನಾಯಕರ ಹೊಟ್ಟೆ ಉರಿಗೆ ಕಾರಣವಾಗಿದೆ" ಎಂದು ಸಿಎಂ ಕಿಡಿಕಾರಿದ್ದರು.

ಗೃಹಜ್ಯೋತಿ ಜಾರಿಯಾದ ಬಳಿಕ 'ವಿದ್ಯುತ್ ಶುಲ್ಕ ಸೊನ್ನೆ' ಎಂದು ನಮೂದಾಗಿದ್ದನ್ನು ಕಂಡು ಗ್ರಾಹಕರು ಖುಷಿಪಡುತ್ತಿದ್ದಾರೆ. ಸರ್ಕಾರದ 'ಗೃಹಜ್ಯೋತಿ' ಗ್ಯಾರಂಟಿ ಯೋಜನೆಯ ಆರಂಭವಾದ ಮೊದಲ ವಾರದಲ್ಲಿಯೇ ಮಂಗಳೂರು ಮೆಸ್ಕಾಂ ವ್ಯಾಪ್ತಿಯಲ್ಲಿಯೇ 2.71ಲಕ್ಷ ಗ್ರಾಹಕರು ಇದರ ಪ್ರಯೋಜನ ಪಡೆದಿದ್ದಾರೆ.

'ಗೃಹಜ್ಯೋತಿ' ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗಳಿಗೆ ಆಗಸ್ಟ್ 1ರಿಂದಲೇ 'ಶೂನ್ಯ, ಬಿಲ್ ಅನ್ನು ತಲುಪಿಸುವ ಕಾರ್ಯ ಆರಂಭವಾಗಿದೆ. ಸೋಮವಾರದವರೆಗೆ 3.06 ಲಕ್ಷ ಗ್ರಾಹಕರಿಗೆ ಬಿಲ್‌ ತಲುಪಿಸಲಾಗಿದ್ದು, ಒಟ್ಟು 2.35 ಲಕ್ಷ ಗ್ರಾಹಕರು ಈ ಯೋಜನೆಯಡಿ ಶೂನ್ಯ ಬಿಲ್ ಪಡೆದಿದ್ದಾರೆ. ಇದರಿಂದ ಒಟ್ಟು ರೂಪಾಯಿ 9.85 ಕೋಟಿಗಳಷ್ಟು ಮೊತ್ತ ಗ್ರಾಹಕರ ಪಾಲಿಗೆ ಉಳಿತಾಯವಾಗಿದೆ' ಎಂದು ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ ಡಿ. ತಿಳಿಸಿದ್ದಾರೆ.

'ಒಂದು ವರ್ಷದಲ್ಲಿ (2022ರ ಏಪ್ರಿಲ್ 1ರಿಂದ 2023ರ ಮಾರ್ಚ್ 31) ತಿಂಗಳ ವಿದ್ಯುತ್‌ ಬಳಕೆ 200 ಯುನಿಟ್‌ ಮೀರದ ಗ್ರಾಹಕರು ಈ ಯೋಜನೆಯಡಿ ಸವಲತ್ತು ಪಡೆಯಲು ಅರ್ಹರು, ಪ್ರತಿ ತಿಂಗಳ ಸರಾಸರಿ ಬಳಕೆಯ ಶೇ 10ರಷ್ಟು ಹೆಚ್ಚು ಯುನಿಟ್ ವರೆಗೂ ವಿದ್ಯುತ್ ಶುಲ್ಕ ವಿನಾಯಿತಿ ಪಡೆಯಬಹುದು.

ಅಂದರೆ, ಗ್ರಾಹಕರು ತಿಂಗಳಲ್ಲಿ ಸರಾಸರಿ ಯುನಿಟ್ 180ರಷ್ಟು ಬಳಸಿದ್ದರೆ, ಅವರು 200 ಯುನಿಟ್‌ವರೆಗೆ ವಿದ್ಯುತ್‌ ಬಳಸಿದರೂ ಈ ಯೋಜನೆಯ ಪ್ರಯೋಜನ ಸಿಗುತ್ತದೆ. ಗ್ರಾಹಕರು ಈ ಯೋಜನೆ ಅಡಿ ಎಷ್ಟು ಯುನಿಟ್ ಉಚಿತವಾಗಿ ಬಳಸಲು ಅರ್ಹತೆ ಪಡೆದಿದ್ದಾರೋ ಅದಕ್ಕಿಂತ ಹೆಚ್ಚು ಯೂನಿಟ್ ಬಳಸಿ ಅದು 200 ಯುನಿಟ್‌ನ ಮಿತಿಯ ಒಳಗೆ ಇದ್ದರೆ, ವ್ಯತ್ಯಾಸದ ಯುನಿಟ್‌ಗಳ ಮೊತ್ತವನ್ನು ಗ್ರಾಹಕರು ಭರಿಸಬೇಕಾಗುತ್ತದೆ.

ಆದರೆ, ತಿಂಗಳ ವಿದ್ಯುತ್ ಬಳಕೆ 200 ಯುನಿಟ್ ಮೀರಿದರೆ ಗ್ರಾಹಕರು ಪೂರ್ತಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ' ಎಂದು ಮೆಸ್ಕಾಂ ಅಧಿಕಾರಿ ಯೊಬ್ಬರು ವಿವರಿಸಿದರು. 'ಅರ್ಹ ಯೂನಿಟ್‌ಗಳಿಗಿಂತ ಹೆಚ್ಚು ವಿದ್ಯುತ್ ಬಳಸಿ, ಒಟ್ಟು ಯುನಿಟ್ ಪ್ರಮಾಣ 200ಕ್ಕಿಂತ ಕಡಿಮೆ ಇದ್ದ 81,572 ಗ್ರಾಹಕರಿಗೂ ಈ ಯೋಜನೆ ಯ ಪ್ರಯೋಜನ ತಲುಪಿದೆ. ಅವರು ಅರ್ಹ ಪ್ರಮಾಣಕ್ಕಿಂತ ಹೆಚ್ಚು ಯೂನಿಟ್ ಬಳಸಿದ್ದಕ್ಕೆ ಮಾತ್ರ ಶುಲ್ಕ ಕಟ್ಟಿದ್ದಾರೆ. ಇಂತಹ ಗ್ರಾಹಕರ 4.74 ಕೋಟಿ ಗಳಷ್ಟು ಬಿಲ್ ಮೊತ್ತವನ್ನು ಹಣವನ್ನು ಸರ್ಕಾರ ಭರಿಸಲಿದೆ' ಎಂದು ಅವರು ವಿವರಿಸಿದರು.

'ನಮಗೆ ಪ್ರತಿ ತಿಂಗಳೂ 600ರಿಂದ 700 ರೂಪಾಯಿ ವಿದ್ಯುತ್‌ ಬಿಲ್ ಬರುತ್ತಿತ್ತು. ಈ ತಿಂಗಳು ನೀಡಿದ ಶೂನ್ಯ ಬಿಲ್ ನೋಡಿ ತುಂಬಾ ಖುಷಿಯಾಯಿತು. ನನ್ನ ಅಮ್ಮ ಅಂತೂ ವಿದ್ಯುತ್ ಬಿಲ್ ನೋಡಿ ಕುಣಿದೇ ಬಿಟ್ಟರು' ಎಂದು ಮಂಗಳೂರಿನ ಮಹಿಳೆಯೊಬ್ಬರು ಸಂತಸ ವ್ಯಕ್ತಪಡಿಸಿದರು.

ಕೆಲವು ಗ್ರಾಹಕರಿಗೆ ಮೆಸ್ಕಾಂ ಸಿಬ್ಬಂದಿ ಹಳೆಯ ಬಾಕಿಯ ಬಿಲ್ ನೀಡಿದ್ದಾರೆ. ಈ ಹಿಂದೆ ಮೀಟರ್ ಠೇವಣಿ ಕಟ್ಟದ ಗ್ರಾಹಕರಿಗೆ ಈ ಹಿಂದೆಯೂ ಬಡ್ಡಿ ವಿಧಿಸಲಾಗುತ್ತಿತ್ತು. ಆ ಮೊತ್ತಕ್ಕೆ ಬಿಲ್ ನೀಡಲಾಗಿದೆ. ಆದರೆ ಈ ತಿಂಗಳ ವಿದ್ಯುತ್ ಬಳಕೆಗೆ ಬಿಲ್ ನೀಡಿಲ್ಲ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.

ಮೆಸ್ಕಾಂ ವ್ಯಾಪ್ತಿಯಲ್ಲಿ ಗೃಹ ಬಳಕೆದಾರರಲ್ಲಿ ಶೇ 80ರಷ್ಟು ಮಂದಿ ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿದ್ದಾರೆ. ಇನ್ನುಳಿದ ಗ್ರಾಹಕರು ಶೀಘ್ರವೇ ಹೆಸರು ನೋಂದಾಯಿಸುವ ನಿರೀಕ್ಷೆ ಇದೆ ಎಂದು ಪದ್ಮಾವತಿ .ಡಿ ಹೇಳಿದರು.

ಜನಸಾಮಾನ್ಯರಿಗೆ ಪ್ರತಿದಿನ ಎದುರಿಸಲು ಬೇಕಾದಷ್ಟು ಸವಾಲು ಗಳಿರುತ್ತವೆ. ಆ ಪೈಕಿ ವಿದ್ಯುತ್ , ಅಕ್ಕಿ, ಬಸ್ ಪ್ರಯಾಣ ದಂತಹ ಕೆಲವು ಉಚಿತವಾಗಿ ಸಿಕ್ಕಿದರೆ ಅವರ ಉಳಿದ ನೂರಾರು ಸಮಸ್ಯೆಗಳನ್ನು ಎದುರಿಸಲು ಅವರಿಗೆ ಒಂದಷ್ಟು ಶಕ್ತಿ, ಚೈತನ್ಯ ಸಿಗುತ್ತದೆ. ಈ ಮೂರ್ನಾಲ್ಕು ಸೌಲಭ್ಯಗಳು ಉಚಿತವಾಗಿ ಸಿಕ್ಕಿದ ಕೂಡಲೇ ಜನರ ಉಳಿದೆಲ್ಲಾ ಸಮಸ್ಯೆಗಳು ಮಾಯವಾಗಿ ಅವರು ಹಾಯಾಗಿ ಮಲಗೋದಿಲ್ಲ. ಅಥವಾ ಬಿಜೆಪಿ, ಸಂಘ ಪರಿವಾರ ಹೇಳುವ ಹಾಗೆ ಸೋಮಾರಿ ಗಳಾಗೋದಿಲ್ಲ.

ಜನರ ತೆರಿಗೆ ದುಡ್ಡಲ್ಲಿ ಅಧಿಕಾರ ಅನುಭವಿಸಿ ಜನವಿರೋಧಿ ನೀತಿಗಳನ್ನು ಜಾರಿ ಮಾಡುವವರೇ ನಿಜವಾದ ಸೋಮಾರಿಗಳು ಮತ್ತು ಜನದ್ರೋಹಿಗಳು. ಏನೇನೋ ಭರವಸೆ ಕೊಟ್ಟು ಅಧಿಕಾರಕ್ಕೆ ಬಂದು ಅವೆಲ್ಲ ಚುನಾವಣಾ ಜುಮ್ಲಾ ಗಳು ಅಷ್ಟೇ ಎಂದು ಯಾವುದೇ ಮುಲಾಜಿಲ್ಲದೆ ಹೇಳುವವರೇ ನಿಜವಾದ ಜನದ್ರೋಹಿ ಗಳು.

ಸಿದ್ದರಾಮಯ್ಯ ಸರಕಾರ ಹೇಳಿರುವ ಎಲ್ಲ ಗ್ಯಾರಂಟಿ ಗಳೂ ಒಂದೊಂದಾಗಿ ಬೇಗ ಜಾರಿಯಾಗಲಿ. ರಾಜ್ಯದ ಜನರಿಗೆ ಅದರಿಂದ ಲಾಭ ಸಿಗಲಿ .

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!