Snapchat App ಮೂಲಕ ಐನಾಝ್‌ ಮನೆಗೆ ತಲುಪಿದ್ದ ಹಂತಕ

Update: 2023-11-22 13:48 GMT
Editor : Ismail | Byline : ಆರ್. ಜೀವಿ
ನೇಜಾರಿನ ಒಂದೇ ಕುಟುಂಬದ ನಾಲ್ವರ ಹತ್ಯಾಕಾಂಡದ ಆರೋಪಿ ಪ್ರವೀಣ್ ಅರುಣ್ ಚೌಗುಲೆಯ ವಿಚಾರಣೆಯಿಂದ ಒಂದೊಂದೇ ಹೊಸ ಮಾಹಿತಿಗಳು ಹೊರಬರುತ್ತಿವೆ. 
ತಾನು ನಡೆಸುವ ಕಗ್ಗೊಲೆಗಳ ಬಗ್ಗೆ  ಯಾವುದೇ ಸುಳಿವು ಲಭಿಸದಂತೆ  ಪ್ಲಾನ್ ಮಾಡಿಕೊಂಡಿದ್ದ ಆರೋಪಿ ಪ್ರವೀಣ್ ಚೌಗುಲೆ, ಐನಾಝ್‌ಳ ಮನೆಯ ದಾರಿಯನ್ನು ‘ಸ್ನಾಪ್ ಚಾಟ್’ app  ಮೂಲಕ ಕಂಡುಕೊಂಡಿದ್ದ ಎಂಬುದು ಪೊಲೀಸ್ ತನಿಖೆಯಿಂದ ಈಗ ಬೆಳಕಿಗೆ ಬಂದಿದೆ.
ಇದರೊಂದಿಗೆ  ಆರೋಪಿ ಪ್ರವೀಣ್ ಈ ಹಿಂದೆಯೂ  ಐನಾಝ್ ಅವರ ನೇಜಾರಿನ ಮನೆಗೆ ಬಂದಿದ್ದ ಹಾಗೂ ಕೃತ್ಯಕ್ಕೆ ಒಂದು ವಾರ ಮೊದಲು ಐನಾಝ್ ಮನೆಯಲ್ಲಿ ನಡೆದ ಹುಟ್ಟುಹಬ್ಬ ಆಚರಣೆಯಲ್ಲಿ ಆತ ಆಕೆಗೆ ಉಂಗುರ ತೊಡಿಸಿದ್ದ ಎಂಬುದೆಲ್ಲ ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿದೆ. 
ಪ್ರವೀಣ್ ಇದೇ ಮೊದಲ ಬಾರಿಗೆ ನೇಜಾರಿಗೆ ಬಂದು ಈ ಕೃತ್ಯ ಎಸಗಿದ್ದ  ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೊಲೆಗೆ ಮುನ್ನಾ ದಿನ ನ.11ರಂದು ಶನಿವಾರ ಐನಾಝ್ ಅಬುಧಾಬಿಯಿಂದ ಕರ್ತವ್ಯ ಮುಗಿಸಿ ಮಂಗಳೂರಿಗೆ ಬಂದಿದ್ದಳು.  ಆಕೆ ಅಬುದಾಬಿಯಿಂದ ಬರುವಾಗ ತಮ್ಮನಿಗೆ ಮತ್ತು ಮನೆ ಕೆಲಸದಾಕೆಯ ಮಗನಿಗೆ ತಂದ ಉಡುಗೊರೆಗಳನ್ನು ಕೊಡಲು ಶನಿವಾರ ಸಂಜೆ ನೇಜಾರಿನ ಮನೆಗೆ ಬಂದಿದ್ದಳು.
ಆಕೆ  ಮರುದಿನ ರವಿವಾರ ರಾತ್ರಿ 8ಗಂಟೆಗೆ ದುಬೈ ವಿಮಾನದಲ್ಲಿ ಕರ್ತವ್ಯಕ್ಕೆ  ಹೋಗಬೇಕಾಗಿತ್ತು. ಅದಕ್ಕಾಗಿ ಮನೆಯಿಂದ ಬೆಳಗ್ಗೆ 11ಗಂಟೆಗೆ ಮಂಗಳೂರಿಗೆ ಹೊರಡಬೇಕಿತ್ತು. ಇದೆನ್ನೆಲ್ಲ ಅರಿತಿದ್ದ ಪ್ರವೀಣ್ ರವಿವಾರ ಬೆಳಗ್ಗೆ  ಆಕೆ ಹೊರಡುವ ಮೊದಲು ಆಕೆಯನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದ  ಎಂದು ತಿಳಿದುಬಂದಿದೆ. 
 ಮೊದಲ ಬಾರಿಗೆ ನೇಜಾರಿಗೆ ಬರುತ್ತಿದ್ದ ಹಂತಕ  ಪ್ರವೀಣ್, ಆಕೆಯ ಮನೆ ಗೊತ್ತಿಲ್ಲದಿದ್ದರೂ ಸ್ನಾಪ್‌ಚಾಟ್ ಆ್ಯಪ್ ಮೂಲಕ ದಾರಿ ಕಂಡುಕೊಂಡಿದ್ದನು. ಆ್ಯಪ್ ಸೂಚಿಸಿದ ಮಾರ್ಗದಲ್ಲೇ ಬಂದು ಆತ, ಐನಾಝ್ ಮನೆ ತಲುಪಿದ್ದಾನೆ. ಸಂತೆಕಟ್ಟೆಯಿಂದ ನೇಜಾರಿನ ತೃಪ್ತಿ ಲೇಔಟ್‌ಗೆ ಪ್ರವೀಣ್ ರಿಕ್ಷಾದಲ್ಲಿ ಹೋಗಿದ್ದು, ಈ ವೇಳೆ ಚಾಲಕ ದಾರಿ ತಪ್ಪಿ ಮುಂದೆ ಹೋಗಿದ್ದ . ಆಗ ಪ್ರವೀಣ್, ಸ್ನಾಪ್‌ಚಾಟ್ ನೋಡಿಯೇ ಆಕೆಯ ಮನೆ ದಾರಿಯನ್ನು ರಿಕ್ಷಾ ಚಾಲಕನಿಗೆ ತೋರಿಸಿದ್ದ .  
 
ಒಂದು ವೇಳೆ ಆತ ಈ ಹಿಂದೆ ಮನೆಗೆ ಬಂದಿದ್ದರೆ ಅಥವಾ ಮನೆಯ ದಾರಿ ಚೆನ್ನಾಗಿ  ಗೊತ್ತಿದ್ದರೆ ರಿಕ್ಷಾ ಚಾಲಕನನ್ನು ದಾರಿ ತಪ್ಪಿ ಮುಂದೆ ಹೋಗಲು ಅವಕಾಶ ನೀಡುತ್ತಿರಲಿಲ್ಲ. ಆಕೆ ಮನೆಯಲ್ಲೇ ಇದ್ದುದರಿಂದ ಸ್ನಾಪ್‌ಚಾಟ್ ಸರಿ ಯಾಗಿಯೇ ಆಕೆಯ ಮನೆ ಇರುವ ಸ್ಥಳವನ್ನು ಆತನಿಗೆ  ತೋರಿಸಿದೆ ಮತ್ತು ಮನೆ ಎದುರೇ ರಿಕ್ಷಾ ಚಾಲಕ ಪ್ರವೀಣ್‌ನನ್ನು ಬಿಟ್ಟು ವಾಪಾಸ್ಸು ಹೋಗಿದ್ದಾರೆ. 
 ಸ್ನಾಪ್‌ಚಾಟ್  ಒಂದು  ಮಲ್ಟಿಮಿಡಿಯಾ ಇನ್‌ಸ್ಟೆಂಟ್ ಮೆಸೇಜಿಂಗ್ ಅಪ್ಲಿಕೇಶನ್. ಇದರಲ್ಲಿ ತಮ್ಮ ಗೆಳೆಯರಿಗೆ ಫೋಟೋ ಸಂದೇಶವನ್ನು   ಕಳುಹಿಸಬಹುದು. ಇಬ್ಬರಲ್ಲೂ ಈ ಅ್ಯಪ್ಲಿಕೇಶನ್ ಇದ್ದರೆ ರಿಕ್ವೆಸ್ಟ್ ಕಳುಹಿಸಿ ಫ್ರೆಂಡ್ಸ್ ಮಾಡಿಕೊಳ್ಳ ಬಹುದು. ಇದರಲ್ಲಿರುವ ಲೋಕೇಶನ್‌ಗೆ ಹೋದರೆ ತಮ್ಮ ಗೆಳೆಯರು ಯಾವ ಸ್ಥಳದಲ್ಲಿದ್ದಾರೆ ಎಂದು ಕೂಡ ನೋಡಬಹುದು. ತನ್ನ ಲೊಕೇಶನ್ ಗೆಳೆಯರಿಗೆ ಕಾಣದಂತೆ ಹೈಡ್ ಕೂಡ ಮಾಡಬಹುದು.
 
ಆರೋಪಿ ಪ್ರವೀಣ್ ಕೊಲೆ ಮಾಡಿ ಹೆಜಮಾಡಿಯಿಂದ ಮಂಗಳೂರಿಗೆ ಕಾರಿನಲ್ಲಿ ಹೋಗುವಾಗ ದಾರಿ ಮಧ್ಯೆ ಮುಲ್ಕಿ ಬಪ್ಪನಾಡು ಸಮೀಪ ತಾನು ಕೊಲೆ ಮಾಡುವಾಗ ಹಾಕಿಕೊಂಡಿದ್ದ  ಬಟ್ಟೆ ಯನ್ನು ಸುಟ್ಟು ಹಾಕಿದ್ದ. ಇದೀಗ ಈ ಬಗ್ಗೆ ತನಿಖೆ ನಡೆಸಿರುವ  ಪೊಲೀಸರು, ಸುಟ್ಟ ಬಟ್ಟೆಯ ಅವಶೇಷಗಳನ್ನು ವಶಪಡಿಸಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.
ಅದೇ ರೀತಿ ಐನಾಝ್ ವಾಸ ಮಾಡಿಕೊಂಡಿದ್ದ ಮಂಗಳೂರಿನ ಬಾಡಿಗೆ ಮನೆ ಸಮೀಪ ನಿಲ್ಲಿಸಿದ್ದ ಹಂತಕ ಪ್ರವೀಣ್ ಚೌಗುಲೆಯ ಸ್ಕೂಟರನ್ನು ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನು ಪ್ರವೀಣ್ ಐನಾಝ್‌ಗೆ ಮಾರಾಟ ಮಾಡಿದ್ದಾನೆಯೇ ಅಥವಾ ಅವನ ಹೆಸರಿನಲ್ಲಿಯೇ ಇದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಪ್ರವೀಣ್ ಚೌಗುಲೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ಗೆ ಸೇರುವ ಮೊದಲು ತನ್ನ ಊರಿನಲ್ಲಿ ಕುಸ್ತಿಪಟು ಆಗಿದ್ದ ಎಂಬ ಮಾಹಿತಿ ದೊರೆತಿದೆ.  
ಇದರಿಂದ ರಕ್ಷಣಾ ಕಲೆಗಳನ್ನು ಅರಿತಿದ್ದ ಆತ, ದೈಹಿಕವಾಗಿಯೂ ಸದೃಢವಾಗಿದ್ದ . ಹಾಗಾಗಿಯೇ  ಆತ ನಾಲ್ವರನ್ನು ಕೇವಲ 15 ನಿಮಿಷಗಳಲ್ಲಿ ಬರ್ಬರವಾಗಿ ಕೊಲ್ಲಲು ಸಾಧ್ಯವಾಗಿತ್ತು.  ಅಲ್ಲದೆ ತನ್ನ ಬಟ್ಟೆಗಳಿಗೂ ಹೆಚ್ಚು  ರಕ್ತ ಮೆತ್ತದಂತೆ ನೋಡಿಕೊಂಡು ಪರಾರಿಯಾಗಿದ್ದ ಪ್ರವೀಣ್ .
ಇನ್ನು, ಪ್ರವೀಣ್ ​ಪಡೆಯುತ್ತಿದ್ದ ವೇತನ​ಕ್ಕೂ ಆತನ ಜೀವನ ಶೈಲಿಗೂ ತಾಳೆಯಾಗುತ್ತಿರಲಿಲ್ಲ ಎಂಬ ಮಾಹಿತಿಯಿದೆ.  ​ಎರಡು ನಿವೇಶನ, ​ಫ್ಲ್ಯಾಟ್, ಕಾರು​ಗಳ  ಒಡೆಯನಾಗಿ ಐಷಾರಾಮಿ ಜೀವನ ನಡೆಸುತ್ತಿದ್ದ ಎನ್ನಲಾಗಿದೆ. ​ ಹೆಚ್ಚಿನ ಆದಾಯಕ್ಕಾಗಿ ಆತ ​ ಗೋಲ್ಡ್ ಸ್ಮಗ್ಲಿಂಗ್ ನಲ್ಲಿ ತೊಡಗಿ​ರಬಹುದು  ಎಂಬ ಸಂಶಯಗಳೂ ವ್ಯಕ್ತವಾಗುತ್ತಿದೆ. ಪೊಲೀಸರು ಆ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಸೌದಿಯಲ್ಲಿ ಶಿಕ್ಷಣ ಪಡೆದ ನೂರ್ ಮುಹಮ್ಮದ್ ಅವರ ಹಿರಿಯ ಮಗಳು  ಅಫ್ನಾನ್ ಮತ್ತು ತಂಗಿ  ಐನಾಝ್, ಒಮ್ಮೆ ತಾವು ಕಲಿತ ಶಾಲೆಯಲ್ಲಿನ ಕಾರ್ಯಕ್ರಮಕ್ಕೆ ಹೋಗಿದ್ದರು. ಅಲ್ಲಿ ಅಘ್ನಾನ್‌ ಳ  ಸುಲಲಿತ   ಇಂಗ್ಲಿಷ್ ಭಾಷಣ ಕೇಳಿ, ಅಲ್ಲಿನ ಶಿಕ್ಷಕರು ಆಕೆಯನ್ನು ತಮ್ಮ ಶಾಲೆಗೆ ಶಿಕ್ಷಕಿಯಾಗಿ  ಕಳುಹಿಸುವಂತೆ ಆಕೆಯ ತಂದೆ ನೂರ್ ಮುಹಮ್ಮದ್‌ರಲ್ಲಿ ಮನವಿ ಮಾಡಿದ್ದರು.
ತಂದೆಯ ಒಪ್ಪಿಗೆಯಂತೆ ಅಫ್ನಾನ್ ಶಿಕ್ಷಕಿಯಾಗಿ ಕೆಲಸ ಸೇರಿದ್ದಳು. ಅಲ್ಲಿ ದುಡಿದ ಹಣದಿಂದ ಆಕೆ ತನ್ನ ತಂಗಿ ಐನಾಝ್‌ಗಾಗಿ ಐಫೋನ್ ಖರೀದಿಸಿ ಗಿಫ್ಟ್ ನೀಡಿದ್ದಳು.  ಮಂಗಳೂರಿನಲ್ಲಿದ್ದ ಇವರಿಬ್ಬರು ಒಂದೇ ಫ್ಲಾಟ್‌ನಲ್ಲಿ ಇರುವಂತೆ ನೂರ್ ಮುಹಮ್ಮದ್ ತಿಳಿಸಿದ್ದರು. ಅದರಂತೆ ಇವರು ಒಂದೇ ಫ್ಲಾಟ್‌ನಲ್ಲಿ ಬಾಡಿಗೆಗೆ ಇದ್ದರು. ಈ ವಿಚಾರವನ್ನು ತಂದೆ ನೂರ್ ಮುಹಮ್ಮದ್ ವಾರ್ತಾಭಾರತಿಗೆ ತಿಳಿಸಿದ್ದಾರೆ.
 
ನಾಲ್ವರನ್ನು ಬರ್ಬರವಾಗಿ ಕೊಲೆ ಮಾಡುವುದನ್ನು ಕಣ್ಣಾರೆ ಕಂಡ ಪ್ರತ್ಯಕ್ಷ ಸಾಕ್ಷಿ ನೂರ್ ಮುಹಮ್ಮದ್ ಅವರ ತಾಯಿ ಹಾಜೀರ ಇನ್ನೂ ಆ ಆಘಾತದಿಂದ ಹೊರ ಬಂದಿಲ್ಲ ಎಂದು ತಿಳಿದುಬಂದಿದೆ.  ಹಂತಕನಿಂದ ತಪ್ಪಿಸಿಕೊಂಡು ಬಾತ್‌ರೂಮಿನಲ್ಲಿ ಚಿಲಕ ಹಾಕಿ ಪ್ರಾಣ ಉಳಿಸಿ ಕೊಂಡ ಹಾಜಿರಾ, ಮಣಿಪಾಲದಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದು, ಇದೀಗ ಅವರು  ಕುಂದಾಪುರ ತಾಲೂಕಿನ ಹೈಕಾಡಿಯ ಮನೆಯಲ್ಲಿದ್ದಾರೆ. ಶಾಕ್‌ನಲ್ಲಿಯೇ ಇರುವ ಅವರು ಅಂದಿನ ಘಟನೆ ಬಗ್ಗೆ ವಿವರಿಸುವಷ್ಟು ಇನ್ನೂ ಚೇತರಿಸಿಕೊಂಡಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!