ಅಯೋಮಯವಾಗಿರುವ ಕಾಲೇಜು ಮೇಷ್ಟ್ರು ಜೀವನ
ಡಾ. ಆರ್. ನಾಗರಾಜು
ಮುಖ್ಯಸ್ಥರು ಕನ್ನಡ ವಿಭಾಗ, ಬಸವೇಶ್ವರ ಕಲಾ ಮಹಾವಿದ್ಯಾಲಯ, ಬಾಗಲಕೋಟೆ
ಶಿಕ್ಷಕ ಭೌತಿಕವಾಗಿ ಏನನ್ನೂ ಸೃಷ್ಟಿಸದಿರಬಹುದು. ಆದರೆ ಮಕ್ಕಳ/ ವಿದ್ಯಾರ್ಥಿಗಳ ಜೀವನದ ಗುರಿ, ಉದ್ದೇಶಗಳನ್ನು ಮತ್ತು ಅವುಗಳನ್ನು ಸಾಧಿಸುವ ಮಾರ್ಗಗಳನ್ನು, ಧ್ಯೇಯಗಳನ್ನು, ವಿದ್ಯಾರ್ಥಿಗಳ ಮನಸ್ಸಲ್ಲಿ ಸೃಷ್ಟಿ ಮಾಡುವವನಾಗಿದ್ದಾನೆ, ಅವು ಪಕ್ವವಾಗಿ ಬೆಳೆಯುವಂತೆ ವಿವಿಧ ತತ್ವಗಳನ್ನು ತಲೆಯಲ್ಲಿ ತುಂಬುವವನು ಮತ್ತು ದಾರಿತಪ್ಪುವ ವಿದ್ಯಾರ್ಥಿಗಳ ನಡೆ ನುಡಿಗಳನ್ನು, ವಿದ್ಯಾರ್ಥಿಗಳಲ್ಲಿನ ಕೆಟ್ಟ ಯೋಚನೆಗಳನ್ನು ನಾಶಮಾಡಿ ಸರಿಯಾದ ದಾರಿಯನ್ನು ತೋರುವವನು ಗುರುವೇ ಆಗಿದ್ದಾನೆ.
ಅಂಬೇಡ್ಕರ್ ಬರೆದ ಸಂವಿಧಾನ ಇಂದು ದೇಶದ ಹಣೆಬರಹವನ್ನು ನಿರ್ಧರಿಸುವ ಒಂದು ಸಂಹಿತೆಯಾಗಿದೆ. ಆದರೆ ಅವರಿಗೆ ಸಿಕ್ಕಂತಹ ಗುರುಗಳು ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡದಿದ್ದರೆ ಅಂಬೇಡ್ಕರ್ ಓದು ಮುಂದುವರಿಸಲು ಸಾಧ್ಯವಾಗುತ್ತಿರಲಿಲ್ಲ. ಮಹಾತ್ಮಾ ಗಾಂಧೀಜಿಯವರನ್ನು ಇಡೀ ವಿಶ್ವ ಕೊಂಡಾಡುತ್ತದೆ. ಅವರ ಅಹಿಂಸೆಯ ತತ್ವಗಳನ್ನು ಬಹಳಷ್ಟು ಮಂದಿ ಇಷ್ಟಪಡುತ್ತಾರೆ. ಆದರೆ ಮೋಹನದಾಸ ಕರಮಚಂದ ಗಾಂಧಿ ಮಹಾತ್ಮಾ ಗಾಂಧಿಯಾಗಲು ಕಾರಣವಾದ ಗುರುಗಳು ಅನೇಕರು. ಅವರ ತತ್ವೋಪದೇಶಗಳು ಮಹಾತ್ಮಾ ಗಾಂಧಿಯವರ ಮನಸ್ಸನ್ನು ಆಳವಾಗಿ ಹೊಕ್ಕು ಅಹಿಂಸೆ ಸತ್ಯದ ಬಗೆಗಿನ ನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಿದವು.
ಆದ್ದರಿಂದ ಭಾರತದ ಸ್ವಾತಂತ್ರ್ಯ ಹೋರಾಟದ ದಿಕ್ಕೇ ಬದಲಾಗಿ ಅಹಿಂಸೆಯಿಂದ ಸ್ವರಾಜ್ಯವನ್ನು ಪಡೆದ ಪ್ರಪಂಚದ ಮೊದಲ ರಾಷ್ಟ್ರವಾಯಿತು. ಈಗಲೂ ನಮ್ಮ ಸುತ್ತಮುತ್ತಲಿನ ಯಾವುದೇ ನಾಯಕರನ್ನು ಕೇಳಿದರೆ ಅವರ ಜೀವನದ ಗುರಿ ಅವರ ಗುರು ಹಾಕಿಕೊಟ್ಟ ಮಾರ್ಗದ ಮೇಲೆಯೇ ನಡೆಯುತ್ತಿದೆ ಎಂಬ ಸತ್ಯ ತಿಳಿಯುತ್ತದೆ. ಆದರೆ ಇಂದು ಸಮಾಜ ವಿಚಿತ್ರ ರೀತಿಯಲ್ಲಿ ಬದಲಾಗುತ್ತಿದೆ. ಶಿಕ್ಷಕರ ಸ್ಥಾನಮಾನಗಳು ಪಲ್ಲಟವಾಗುತ್ತಿವೆ. ಗುರುಗಳ ಮೇಲಿನ ಗೌರವ ಮೊದಲಿನಂತಿಲ್ಲ. ಇದಕ್ಕೆ ಕೇವಲ ವಿದ್ಯಾರ್ಥಿಗಳಷ್ಟೇ ಕಾರಣರಲ್ಲ. ಅವರ ಪೋಷಕರು, ನಮ್ಮ ಸಾಮಾಜಿಕ ವ್ಯವಸ್ಥೆ, ಮಾಧ್ಯಮಗಳೂ ಸಹ ಕಾರಣ. ಅಲ್ಲದೆ ಶಿಕ್ಷಕರೂ ಹಲವೆಡೆ ಹಾದಿ ತಪ್ಪುತ್ತಿದ್ದಾರೆ. ಅವರ ವರ್ತನೆ ನಡವಳಿಕೆಗಳು ಅನುಕರಣೀಯವಾಗಿ ಎಲ್ಲ ಸಂದರ್ಭದಲ್ಲೂ ಇರುವುದಿಲ್ಲ. ಇದರಿಂದ ನಮ್ಮ ಸಾಮಾಜಿಕ ತಳಹದಿಯೇ ಅಲುಗಾಡುತ್ತಿದೆ.
ಇಂತಹ ಗುರುವಿನ ಸ್ಥಾನದಲ್ಲಿರುವ ಪದವಿ ಕಾಲೇಜು ಪ್ರಾಧ್ಯಾಪಕರ ಸ್ಥಿತಿ ಇಂದು ಗಂಭೀರವಾಗಿದೆ. ರಾಜಕಾರಣಿಗಳನ್ನು, ಅಧಿಕಾರಿಗಳನ್ನು, ಐಎಎಸ್ಗಳನ್ನು, ಕೆಎಎಸ್ಗಳನ್ನು ಸೃಷ್ಟಿ ಮಾಡುವ ಈ ಪ್ರಾಧ್ಯಾಪಕರನ್ನು ಎಲ್ಲಾ ಕಡೆ ಅಸಹನೀಯವಾಗಿ ನಡೆಸಿಕೊಳ್ಳಲಾಗುತ್ತದೆ. ವಿಶ್ವವಿದ್ಯಾನಿಲಯಗಳಂತೂ ಇವರನ್ನು ಬೇಕಾಬಿಟ್ಟಿಯಾಗಿ ನಡೆಸಿಕೊಳ್ಳುತ್ತಿವೆ. ಪರೀಕ್ಷಾ ಸಂದರ್ಭದಲ್ಲಿ ಮೌಲ್ಯಮಾಪನ ಸಂದರ್ಭದಲ್ಲಿ ಇವರನ್ನು ನಾಲ್ಕನೇ ದರ್ಜೆಯ ನೌಕರರಿಗಿಂತ ಕಡೆಯಾಗಿ ನಡೆಸಿಕೊಳ್ಳುತ್ತದೆ. ರವಿವಾರಗಳು ಮತ್ತು ಇತರ ರಜಾ ದಿನಗಳಲ್ಲೂ ಪರೀಕ್ಷಾ ಕಾರ್ಯ ಮತ್ತು ಮೌಲ್ಯಮಾಪನ ಕಾರ್ಯವನ್ನು ಮಾಡಬೇಕಾಗುತ್ತದೆ. ಹಾಗಂತ ಆದೇಶವನ್ನು ಹೊರಡಿಸುತ್ತಾರೆ. ಮೌಲ್ಯಮಾಪನ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆಗಳ ಕಟ್ಟುಗಳನ್ನು ಪ್ರಾಧ್ಯಾಪಕರು ತಲೆಯ ಮೇಲೆ ಹೊತ್ತುಕೊಂಡು ರೂಮಿಗೆ ಹೋಗಿ ಮೌಲ್ಯಮಾಪನ ಮಾಡಿ ಮತ್ತೆ ಅವುಗಳನ್ನ ಲಗೇಜ್ ರೀತಿಯಲ್ಲಿ ತಂದು ಒಪ್ಪಿಸಬೇಕು. ಇನ್ನು ಸರಕಾರಗಳು ಸಂಬಳವನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಎರಡು ತಿಂಗಳಾದರೂ ಸಂಬಳವನ್ನು ಬಿಡುಗಡೆ ಮಾಡದೇ ಸತಾಯಿಸುವುದು ಕಂಡುಬರುತ್ತದೆ. ಅತಿಥಿ ಉಪನ್ಯಾಸಕರ ಜೀವನವಂತೂ ಗೋಳಾಗಿದೆ.
ಐದು ಹಾಗೂ 10 ತಿಂಗಳಾದರೂ ಗೌರವಧನ ಬಿಡುಗಡೆಯಾಗುವುದಿಲ್ಲ. ಇನ್ನು ಮಹಾವಿದ್ಯಾನಿಲಯಗಳಲ್ಲಿ ಸರಕಾರದ ಆದೇಶವಿದೆ ಎಂದು ಏಳು-ಎಂಟು ಗಂಟೆ ಕಾಲೇಜಿನಲ್ಲಿ ದುಡಿಸಿಕೊಳ್ಳುವುದು ಸಹ ಕಂಡು ಬರುತ್ತಿದೆ. ಶಿಕ್ಷಕರೇ ಸೃಷ್ಟಿ ಮಾಡಿದ ರಾಜಕಾರಣಿಗಳ ಮುಂದೆ ಭಡ್ತಿ, ಪ್ರಮೋಷನ್, ಆರಿಯರ್ಸ್, ಪಿಂಚಣಿಗಾಗಿ ಆಫೀಸು ಆಫೀಸಿಗೆ ಅಲೆಯ ಬೇಕಾಗುತ್ತದೆ. ಇನ್ನ್ನು ಮೌಲ್ಯಮಾಪನ ಮತ್ತು ಪರೀಕ್ಷೆಯ ಸಂದರ್ಭದಲ್ಲಿ ಮನೆಯಲ್ಲಿ ಯಾರೇ ಸತ್ತಿದ್ದರೂ, ಕಷ್ಟವಾಗಿದ್ದರೂ, ಬರಬಾರದ ರೋಗ ಬಂದಿದ್ದರೂ ವಿಶ್ವವಿದ್ಯಾನಿಲಯಗಳ ಆದೇಶದಂತೆ ಕರ್ತವ್ಯವನ್ನೂ ನಿರ್ವಹಿಸಬೇಕು. ರವಿವಾರವೂ ಕೆಲಸ ಮಾಡಬೇಕು ಎಂದು ಆದೇಶ ಹೊರಡಿಸುವ ವಿಶ್ವವಿದ್ಯಾನಿಲಯಗಳಿಗೆ ಏನೆನ್ನಬೇಕು. ಇನ್ನೂ ವಿಶ್ವವಿದ್ಯಾನಿಲಯಗಳು ಸೇವಾ ಜೇಷ್ಠತೆಯಲ್ಲಿರುವ ಪ್ರಾಧ್ಯಾಪಕರನ್ನು ಕಡೆಗಣಿಸಿ ಅಭ್ಯಾಸ ಮಂಡಳಿ, ಪರೀಕ್ಷಾ ಮಂಡಳಿಗಳಲ್ಲಿ, ತಮಗೆ ತಾಳ ಹಾಕುವ ತೀರ್ಥ ಪ್ರಸಾದ ನೀಡುವ ಪ್ರಾಧ್ಯಾಪಕರಿಗೆ ಮಣೆ ಹಾಕುವ ವಾತಾವರಣವನ್ನು ಕಾಣಬಹುದಾಗಿದೆ.
ಪ್ರಾಧ್ಯಾಪಕರೊಳಗೇ ತಾರತಮ್ಯ ತಂದು ಒಡೆದು ಆಳುವ ನೀತಿಯನ್ನು ಮಾಡುತ್ತಿರುವುದು ಸಹ ಕಂಡುಬರುತ್ತಿದೆ. ಎಷ್ಟೋ ಜನ 30, 35 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದಂತಹವರಿಗೆ ಅಭ್ಯಾಸ ಮಂಡಳಿ ಮತ್ತು ಪರೀಕ್ಷಾ ಮಂಡಳಿಗಳಲ್ಲಿ ಅವಕಾಶವೇ ಸಿಗದಿರುವುದನ್ನು ನಾವು ಕಾಣಬಹುದಾಗಿದೆ. ಟೇಬಲ್ ಕೆಳಗಡೆ ನೋಟು ತಳ್ಳಿದರೆ ಎಲ್ಲ ಕೆಲಸವು ಸ್ಯಾಂಕ್ಷನ್ ಉಂಟು ಎನ್ನುವ ಮಾತಿನಂತೆ ಸರಕಾರದ ಕಚೇರಿಗಳು ಪ್ರಾಧ್ಯಾಪಕರನ್ನು ಹುರಿದು ತಿನ್ನುತ್ತಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯೆನ್ನಬಹುದು. ಇನ್ನು ಕಾಲೇಜುಗಳಲ್ಲಿ ನ್ಯಾಕ್ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯ ಅನ್ವಯ ವಿದ್ಯಾರ್ಥಿಗಳಿಗೆ ಪಾಠ ಮಾಡುವುದಕ್ಕಿಂತ ಬೇರೆ ಕೆಲಸಗಳು ಹೆಚ್ಚಾಗಿರುತ್ತದೆ. ಬೇಸಿಗೆ ರಜೆ ಮತ್ತು ದಸರಾ ರಜೆಗಳು ಕನಸಿನ ಮಾತುಗಳಾಗಿವೆ. ರಜೆಯ ಸಮಯದಲ್ಲಿ ಪರೀಕ್ಷೆಗಳು ಮತ್ತು ಮೌಲ್ಯಮಾಪನವನ್ನು ಮಾಡಬೇಕಾಗುತ್ತದೆ ತಿಂಗಳಾನುಗಟ್ಟಲೆ ಪರೀಕ್ಷೆಗಳು ಮತ್ತು ಮೌಲ್ಯಮಾಪನಗಳು ನಡೆಯುತ್ತವೆ ಅಷ್ಟರೊಳಗೆ ರಜೆ ಮುಗಿದೇ ಹೋಗಿರುತ್ತದೆ. ಹೆಸರಿಗೆ ಮಾತ್ರ ಎ ಗ್ರೇಡ್ ಎಂದು ಕೇಳಿಕೊಳ್ಳುವ ಪ್ರಾಧ್ಯಾಪಕರು ಕೂಲಿಗಿಂತ ಕಡೆಯಾಗಿ ಜೀವನ ಸಾಗಿಸುತ್ತಿರುವುದು ಕಂಡು ಬರುತ್ತದೆ. ಇಷ್ಟೆಲ್ಲಾ ನೋವು ಕಷ್ಟಗಳನ್ನು ಅನುಭವಿಸಿದರೂ ಹೆಚ್ಚಿನ ಪ್ರಾಧ್ಯಾಪಕರು ಸಂತೋಷದಿಂದಲೇ ಕರ್ತವ್ಯ ನಿರ್ವಹಿಸುತ್ತಾರೆ.
ವಿದ್ಯಾರ್ಥಿಗಳಿಗೆ ಎಲ್ಲಾ ಮಾರ್ಗದರ್ಶನವನ್ನು ನೀಡಿ ಯುವ ಜನರನ್ನು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪಿಸುತ್ತಿರುವ ಈ ಪ್ರಾಧ್ಯಾಪಕರು ಉನ್ನತ ಶಿಕ್ಷಣ ಸಂಸ್ಥೆಗಳು, ಉನ್ನತ ಶಿಕ್ಷಣ ಇಲಾಖೆಗಳು, ವಿಶ್ವವಿದ್ಯಾನಿಲಯಗಳು, ಇನ್ನಿತರ ವ್ಯಕ್ತಿಗಳು, ಸಂಸ್ಥೆಗಳಿಂದ ತೊಂದರೆಗೊಳಗಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ.