ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದ ಮೋದಿ ಸರಕಾರ

Update: 2023-09-25 13:36 GMT
Editor : Ismail | Byline : ಆರ್. ಜೀವಿ

Photo:  PTI 

ಕಳೆದ ಒಂಬತ್ತು ವರ್ಷಗಳಿಂದಲೂ ​ಮಾತಿನಲ್ಲೇ ಮಂಟಪ ಕಟ್ಟಿಕೊಂಡು ಬಂದ ಮೋದಿ ಸರ್ಕಾರ, ಹೊಸ ಸಂಸತ್ ಭವನದಲ್ಲಿನ ಕಲಾಪದ ಮೊದಲ ದಿನವೂ ಮತ್ತೊಂದು ​ಮಾತಿನ ಮೋಡಿ ಮಾಡಿತೆ? ಮತ್ತೊಂದು ಬೃಹನ್ನಾಟಕವನ್ನೇ ಆಡಿತೆ?. ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಗಳವಾರ ಮಂಡಿಸುವ ಮೂಲಕ ಐತಿಹಾಸಿಕ ದಿನವೆಂದೂ, ಈ ದಿನ ಅಮರವೆಂದೂ ಬಣ್ಣದ ಮಾತಾಡುತ್ತಿರುವ ಮೋದಿ ಸರ್ಕಾರ ಜನರನ್ನು ಮರುಳು ಮಾಡುತ್ತಿದೆಯೆ? ​ಈ ದೇಶದ ಮಹಿಳೆಯರನ್ನು ಮೂರ್ಖರನ್ನಾಗಿಸುತ್ತಿದೆಯೆ?

27 ವರ್ಷಗಳಿಂದ ಬೆಂಬಲ ಸಿಗದೆ, ಇಚ್ಛಾಶಕ್ತಿಯ ಕೊರತೆಯಿಂದ ಹಾಗೆಯೇ ಇದ್ದ ಮಸೂದೆಯನ್ನು ತಾವು ಜಾರಿಗೊಳಿಸಲು ಮುಂದಾಗಿದ್ದೇವೆ ಎಂದು ತೋರಿಸಿಕೊಳ್ಳುವುದು ಮಾತ್ರವೇ ಮೋದಿ ಸರ್ಕಾರದ ಉದ್ದೇಶವೆ? ಆ ಮೂಲಕ ಮುಂಬರುವ ಚುನಾವಣೆ ಗೆಲ್ಲುವುದಕ್ಕೆ ಹೊಸದೊಂದು ಭಾವನಾತ್ಮಕ ದಾರಿ ತೆರೆಯುವ ಹುನ್ನಾರ ಮಾತ್ರವಾಗಿದೆಯೆ ಇದು?.

ಏಕೆ ಈ ಪ್ರಶ್ನೆಗಳು ಎಂಬುದನ್ನು ಗ್ರಹಿಸಲು ಒಟ್ಟಾರೆ ವಿದ್ಯಮಾನವನ್ನು ಮತ್ತು ಮಸೂದೆಯ ಒಳಸುಳಿಗಳನ್ನು​ ನಾವು ಸೂಕ್ಷ್ಮವಾಗಿ ಗಮನಿಸಬೇಕು.

ಮೊದಲನೆಯದಾಗಿ, ಈ ಮಸೂದೆ ಬಿಜೆಪಿಯದ್ದೇ ಬಹುಮತವಿರುವ ಸದನದಲ್ಲಿ ಅಂಗೀಕಾರವಾದರೂ, ಈಗ ಜಾರಿಯಾಗುವುದಿಲ್ಲ ಎಂಬ ವಿಚಾರ ಮಸೂದೆಯಲ್ಲಿಯೇ ಪ್ರಸ್ತಾಪವಾಗಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಕಲ್ಪಿಸುವ ಮಹಿಳಾ ಮೀಸಲಾತಿ ಮಸೂದೆ 2029ರಲ್ಲಿ ಜಾರಿಯಾಗಬಹುದು ಎನ್ನಲಾಗುತ್ತಿದೆ.

ಮಸೂದೆ ಈಗ ಕಾನೂನಾದರೂ, ಮೊದಲು ಲೋಕಸಭಾ ಕ್ಷೇತ್ರಗಳ ಮರು ವಿಂಗಡನೆಯಾಗಬೇಕು. ಆ ಬಳಿಕವೇ ಮಹಿಳಾ ಮೀಸಲಾತಿ ಜಾರಿಯಾಗಲಿದೆ.​ ಹಾಗಂತ ಮಸೂದೆಯಲ್ಲೇ ಇದೆ. ಕ್ಷೇತ್ರ ಮರುವಿಂಗಡಣೆ ಯಾವಾಗ ಎಂದು ಕೇಳಿದರೆ, ಅದು ಮುಂದಿನ ಜನಗಣತಿಯ ನಂತರ.

ಜನಗಣತಿ 2027ರಲ್ಲಿ ನಡೆಯುವ ಸಾಧ್ಯತೆಯಿದೆ. ನೆನಪಿಡಿ, ಅದು ಸಾಧ್ಯತೆ ಮಾತ್ರ. ಜನಗಣತಿಯನ್ನು 2021ರಲ್ಲಿಯೇ ನಡೆಸಬೇಕಿತ್ತು. ಆದರೆ ಸರ್ಕಾರ ಕೋವಿಡ್‌ ನೆಪ ಮಾಡಿ, ಅದನ್ನು ತಪ್ಪಿಸಿತು.

ಮಾಡಬೇಕಿದ್ದ ಜನಗಣತಿಯನ್ನೇ ಮಾಡದ ಈ ಸರ್ಕಾರ, 2021ರಲ್ಲಿ ನಡೆಯಬೇಕಿದ್ದ ಜನಗಣತಿಯನ್ನು ಇನ್ನೂ ಆರು ವರ್ಷಗಳಷ್ಟು ಮುಂದಕ್ಕೆ ಹಾಕಿ ಕುಳಿತಿರುವ ಸರ್ಕಾರ, ಆಮೇಲಾದರೂ ಅದನ್ನು ಮಾಡೀ​ತೇ ?. ಅದಾದ ಬಳಿಕ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಆದೀತೆ​ ? ಕ್ಷೇತ್ರ ವಿಂಗಡಣೆ ಬಳಿಕ ​ತಲೆದೋರುವ ತಂಟೆ ತಕರಾರುಗಳು ಏನೇನಿರಬಹುದು?

ಮಸೂದೆ ಜಾರಿಯೇನಿದ್ದರೂ ಆಮೇಲಿನ ಮಾತು. ಹಾಗಾದರೆ, ಈಗ ಜಾರಿಯಾಗುವುದಿಲ್ಲ ಎಂದಾದರೆ, ಇಷ್ಟೇಕೆ ಅಬ್ಬರವನ್ನು ಮೋದಿ ಸರ್ಕಾರ ತೋರಿಸುತ್ತಿದೆ?. ತಾನು ಮಾಡಿದೆ ಎಂದು ತೋರಿಸಿಕೊಳ್ಳಲೂಬೇಕು​, ಮತ್ತದರಿಂದ ತನಗೆ ಯಾವ ಬಾಧಕವೂ ಆಗಬಾರದು ಎಂಬ ​ರಾಜಕೀಯ ನಡೆಯೇ ​ಅಲ್ವಾ ಇದು?

27 ವರ್ಷಗಳಿಂದ ಆಗದ ಮಹಿಳಾ ಮೀಸಲಾತಿ ಮಸೂದೆಯನ್ನು ತಮ್ಮ ಸರ್ಕಾರ ಸಾಧ್ಯವಾಗಿಸಿತು ಎಂದು ಬರೆಸಿಕೊಳ್ಳುವುದು​. ಮತ್ತದರಿಂದ ಸಿಗಬೇಕಾದ ಎಲ್ಲ ರಾಜಕೀಯ ಲಾಭವನ್ನೂ ದೋಚುವುದೇ ಇದರ ಹಿಂದಿರುವ ಹಿಕಮತ್ತ​ಲ್ವಾ ?. ಎರಡನೆಯದಾಗಿ, ಈ ಮಹಿಳಾ ಮೀಸಲಾತಿಯಲ್ಲಿ ಒಬಿಸಿ​ ಅಂದ್ರೆ ಇತರ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಮಹಿಳೆಯರಿಗೆ ಮೀಸಲಾತಿಯೇ ಇಲ್ಲ.

ಹಾಗಾದರೆ ಏನಿದರ ಉದ್ದೇಶ? ಪ್ರಚಂಡ ಬಹುಮತವಿರುವ ಮೋದಿ ಸರಕಾರವೂ ತನ್ನ ಮಸೂದೆಯಲ್ಲಿ ಒಬಿಸಿ ಮಹಿಳೆಯರಿಗೆ ಮೀಸಲಾತಿ ನೀಡಲು ಸಾಧ್ಯವಾಗಿಲ್ಲ ಎಂದರೆ ಅರ್ಥವೇನು?. ಒಬಿಸಿ ಮಹಿಳೆಯರಿಗೆ ಮೀಸಲಾತಿ ಸಿಗದ ಕಾರಣ ಪ್ರತಿಭಟನೆ ಸಹಜವಾಗಿಯೇ ಸ್ಫೋಟಗೊಳ್ಳಲಿದೆ. ಎಸ್‌ಪಿ, ಆರ್‌ಜೆಡಿ, ಬಿಎಸ್‌ಪಿ, ಕಾಂಗ್ರೆಸ್ ಎಲ್ಲರೂ ಈ ವಿಚಾರಕ್ಕಾಗಿ ವಿರೋಧಿಸಿದ್ದಾರೆ.

ಈ ಮಸೂದೆಗೆ ಸ್ವಾಗತಿಸುವುದಕ್ಕಿಂತ ಹೆಚ್ಚಿನ ವಿರೋಧ ವ್ಯಕ್ತವಾಗುವ ಸಾಧ್ಯತೆಯೇ ಹೆಚ್ಚು. ಅಷ್ಟಕ್ಕೂ ಒಬಿಸಿ ಮಹಿಳೆಯರು ಇದನ್ನು ಹೇಗೆ ಒಪ್ಪಿಕೊಳ್ಳುತ್ತಾರೆ?. ಅಧಿಕಾರದ ಉದ್ದಕ್ಕೂ ಭಾವುಕತೆ ಮತ್ತು ಧಾರ್ಮಿಕತೆಯನ್ನು ಎದುರಿಟ್ಟುಕೊಂಡೇ ಆಟವಾಡುತ್ತ ಬಂದಿರುವ ಮೋದಿ ಸರ್ಕಾರ ಆರ್ಥಿಕತೆ, ಸಾಮಾಜಿಕ ನ್ಯಾಯದ ವಿಚಾರವಾಗಿ ಕಾಳಜಿ ವಹಿಸಿದ್ದಿದೆಯೆ? ಕಳಕಳಿ ಹೊಂದಿದ್ದಿದೆಯೆ?

ಇದೆಲ್ಲವನ್ನು ಮರೆತು ಅಥವಾ ಮರೆಮಾಚಿ, ಅಮೃತ ಕಾಲ ಎಂದು ಬಡಾಯಿ ಕೊಚ್ಚುವ ಮೋದಿ ಸರ್ಕಾರದ ದೃಷ್ಟಿಯಲ್ಲಿ ಯಾವುದು ಅಮೃತ ಕಾಲ ಮತ್ತು ಯಾರಿಗೆ ಅಮೃತ ಕಾಲ?. ಮೂರನೆಯದಾಗಿ, ಈ ಮಸೂದೆಯಲ್ಲಿ ಮೀಸಲಾತಿ ಎಂಬ ಶಬ್ದವನ್ನೇ ಬಳಸದೆ, ​'ನಾರಿ ಶಕ್ತಿ ವಂದನಾ ಅಧಿನಿಯಮ​' ಎಂದು ಕರೆಯಲಾಗಿದೆ.

ದೊಡ್ಡ ತಮಾಷೆಯೆಂದರೆ, ನಾರಿ ಶಕ್ತಿ ಎಂದರೇ ದ್ವೇಷ ಕಾರುವ ಮಂದಿ ಬಿಜೆಪಿಯವರೇ ಆಗಿದ್ದಾರೆ. ಅಂಥವರು ನಾರಿ ಶಕ್ತಿ ವಂದನಾ ಎನ್ನುತ್ತಿರುವುದು ಎಂಥ ತೋರಿಕೆ ಎನ್ನಿಸುವುದಿಲ್ಲವೆ?. ಸ್ವಲ್ಪ ನೆನಪು ಮಾಡಿಕೊಳ್ಳುವುದಾದರೆ,

13 ವರ್ಷಗಳ ಹಿಂದೆ, 2010ರಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಮೊದಲು ವಿರೋಧ ವ್ಯಕ್ತಪಡಿಸಿದ್ದೇ ಬಿಜೆಪಿ ಎಂಬುದು ಬಿಜೆಪಿಯವರಿಗೆ ಮರೆತುಹೋಗಿದೆಯೆ​ ?. ಈಗ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರುವ ಆದಿತ್ಯನಾಥ್ ಆಗ ಗೋರಖ್​ ಪುರ ಸಂಸದರಾಗಿದ್ದರು. 2010ರ ಏಪ್ರಿಲ್ 12ರಂದು ಹಿಂದೂಸ್ತಾನ್ ಟೈಮ್ಸ್​ ಗೆ ಅವರು ನೀಡಿದ್ದ ಮಹಿಳಾ ಮೀಸಲಾತಿ ವಿರೋಧಿ ಹೇಳಿಕೆಗಳು ಹೇಗಿದ್ದವು ಎಂಬುದನ್ನು ಗಮನಿಸಿ.

ಮಹಿಳಾ ಮೀಸಲಾತಿ ಮಸೂದೆ ಜಾರಿಯಾದರೆ ​ಅದು ಭಾರತೀಯ ರಾಜಕೀಯ ವ್ಯವಸ್ಥೆಯನ್ನು ಮುಳುಗಿಸುತ್ತದೆ. ಮಕ್ಕಳ ಆರೈಕೆಯಂಥ ಮಹಿಳೆಯರ ಮನೆಯ ಜವಾಬ್ದಾರಿ ಮೇಲೆ ಈ ಮಹಿಳಾ ಕೋಟಾ ಪರಿಣಾಮ ಬೀರುವುದಿಲ್ಲವೆ ಎಂದು ಆದಿತ್ಯನಾಥ್ ಕೇಳಿದ್ದರು. ಅಷ್ಟೇ ಅಲ್ಲ, ​" ಪುರುಷರು ಸ್ತ್ರೀ ಲಕ್ಷಣ ಬೆಳೆಸಿದರೆ ದೇವರುಗಳಾಗುತ್ತಾರೆ. ಆದರೆ ಮಹಿಳೆಯರು ಪುರುಷ ಲಕ್ಷಣಗಳನ್ನು ಬೆಳೆಸಿದರೆ ರಾಕ್ಷಸರಾಗುತ್ತಾರೆ​" ಎಂದು ಆದಿತ್ಯನಾಥ್ ಅವತ್ತು ಹೇಳಿದ್ದು, ಬಿಜೆಪಿ ಮತ್ತು ಸಂಘಪರಿವಾರದವರು ಮಹಿಳೆಯರ ಬಗ್ಗೆ ಎಂಥ ದೃಷ್ಟಿಕೋನ ಹೊಂದಿದ್ದಾರೆ ಎಂಬುದನ್ನೇ ತೋರಿಸಿತ್ತು.

2010ರಲ್ಲಿಯೇ ಯುಪಿಎ ಸರ್ಕಾರ ಮಹಿಳಾ ಮೀಸಲಾತಿ ಮಸೂದೆ ವಿಚಾರವಾಗಿ ಕಳಕಳಿ ಹೊಂದಿದ್ದಾಗ, ಈಗ ಬಿಜೆಪಿ ಐಟಿ ಸೆಲ್ ಮುಖ್ಯಸ್ಥರಾಗಿರುವ ಅಮಿತ್ ಮಾಳವೀಯ, ಮಹಿಳಾ ಮೀಸಲಾತಿ ಮೂಲಕ ಸೋನಿಯಾ ತಮ್ಮ ಅಜೆಂಡ ಪೂರೈಸಿಕೊಳ್ಳಲು ನೋಡುತ್ತಿದ್ದಾರೆ ಎಂದು ಟೀಕಿಸಿದ್ದರು.

2014ರಲ್ಲಿ ಮತ್ತೊಮ್ಮೆ ಅದೇ ಅಮಿತ್ ಮಾಳವೀಯ, ​"ಮಹಿಳೆಯರನ್ನು ರಾಷ್ಷ್ರ ನಿರ್ಮಾಪಕರೆಂದು ಕಾಣಲು ಮೋದಿಯವರು ಬಯಸುತ್ತಾರೆ. ಆದರೆ ಮಹಿಳೆಯರಿಗೆ ಮೀಸಲಾತಿ ಮತ್ತು 12 ಗ್ಯಾಸ್ ಸಿಲಿಂಡರ್ ಕೊಡಲು ರಾಹುಲ್ ಗಾಂಧಿ ಬಯಸಿದ್ದಾರೆ​" ಎಂದು ಲೇವಡಿ ಮಾಡಿದ್ದರು. ಈ ಅಮಿತ್ ಮಾಳವೀಯ, ಈ ಆದಿತ್ಯನಾಥ್ ಈಗ ​ಅವರದೇ ಮೋದಿ ಸರ್ಕಾರ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿರುವ ಹೊತ್ತಿನಲ್ಲಿ ಏ​ನು ಹೇಳ್ತಾರೆ ?

ಮತ್ತೊಬ್ಬ ಬಿಜೆಪಿ ನಾಯಕ, ಅಸ್ಸಾಂ ಸಿಎಂ ಹೇಮಂತ್ ಬಿಸ್ವಾ ಶರ್ಮಾ ಹೇಳಿಕೆಯಂತೂ ಕಠೋರವಾಗಿದೆ. ಕಮಲನಾಥ್ ನಿಜವಾಗಿಯೂ ಆಂಜನೇಯನ ಭಕ್ತನಾಗಿದ್ದರೆ 10 ಜನಪಥ್ ಅನ್ನು ಸುಟ್ಟುಹಾಕಲಿ ಎನ್ನುತ್ತಾರೆ. ಅದು 76 ವರ್ಷದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ನಿವಾಸ.

ಮುಖ್ಯಮಂತ್ರಿ ಸ್ಥಾನದಲ್ಲಿರುವ ವ್ಯಕ್ತಿ ಒಬ್ಬ ಮಹಿಳಾ ​ಸಂಸದೆಯ ಮನೆ ಸುಡಲು ಸಾರ್ವಜನಿಕವಾಗಿ ಹೇಳುವುದು ಎಂಥ ಸಂಸ್ಕೃತಿ ಎಂಬುದನ್ನು ಯೋಚಿಸಬೇಕಿದೆ.

ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು ದೇವರು ನನ್ನನ್ನು ಆಯ್ಕೆ ಮಾಡಿದ್ದಾನೆ ಎಂದು ಹೇಳಿಕೊಳ್ಳುವ ಮೋದಿ, ಅವರದೇ ಪಕ್ಷದ ನಾಯಕ ಪ್ರತಿಪಕ್ಷದ ನಾಯಕಿಯ ಮನೆ ಸುಡಲು ಹೇಳಿದ್ದನ್ನು ಖಂಡಿಸಿದರೆ?. ಬಾಯಲ್ಲಿ ಮಾತ್ರ ವಂದನೆ. ಆದರೆ ಇವ​ರೊಳಗೆ ಇರೋದು ಮಾತ್ರ ಸುಟ್ಟುಹಾಕುವ ಮನಃಸ್ಥಿತಿಯೆ?

ಆರ್ಥಿಕವಾಗಿ ದುರ್ಬಲವಾಗಿರುವ, ಜಾತಿಯಿಂದ ಕೆಳಗಿರುವ ಮಹಿಳೆಯರನ್ನು ಮಾತ್ರವಲ್ಲ, ಮಹಿಳೆ ಪ್ರತಿಷ್ಠಿತ ವರ್ಗಕ್ಕೆ ಸೇರಿದ್ದರೂ ಆಕೆಯನ್ನು ಇವರು ನೋಡುವುದು ಇದೇ ದೃಷ್ಟಿಯಿಂದ. ಇಂಥ ಮನಃಸ್ಥಿತಿಯುಳ್ಳವರು ​'ನಾರಿ ಶಕ್ತಿ ವಂದನಾ​' ಎಂದು​ ಹೆಸರಲ್ಲಿ ಮಾತ್ರ ಬಣ್ಣಿಸಿ ಚಪ್ಪಾಳೆ ಗಿಟ್ಟಸಿಕೊಳ್ಳುವುದು ನಿಜವಾಗಿಯೂ ಎಂಥ ವಿರೋಧಾಭಾಸ ​ಅಲ್ವಾ ?

ಹಾಗೆ ನೋಡಿದರೆ, 27 ವರ್ಷಗಳಿಂದ ಮತ್ತೆ ಮತ್ತೆ ಅಡ್ಡಿಯೆದುರಿಸಿದ ಈ ಮಸೂದೆ ವಿಚಾರವಾಗಿ ಇವರು ಮನಸ್ಸು ಮಾಡಿದ್ದಿದ್ದರೆ ಮಸೂದೆ ಬಂದು ವರ್ಷಗಳೇ ಕಳೆದಿರುತ್ತಿದ್ದವು. ಮಹಿಳಾ ಮೀಸಲಾತಿ ಮಸೂದೆಯನ್ನು ದೇವೇಗೌಡರು 1996ರಲ್ಲಿ ಮೊದಲು ಮಂಡಿಸಿದರು. ಲೋಕಸಭೆಯಲ್ಲಿ ಅನುಮೋದನೆ ಪಡೆಯಲು ವಿಫಲವಾದ ನಂತರ, ಅದನ್ನು ಗೀತಾ ಮುಖರ್ಜಿ ಅಧ್ಯಕ್ಷತೆಯ ಜಂಟಿ ಸಂಸದೀಯ ಸಮಿತಿಗೆ ಉಲ್ಲೇಖಿಸಲಾಯಿತು. ಅದು ಡಿಸೆಂಬರ್ 1996ರಲ್ಲಿ ತನ್ನ ವರದಿಯನ್ನು ಮಂಡಿಸಿತು. ಆದರೆ ಲೋಕಸಭೆ ವಿಸರ್ಜನೆಯೊಂದಿಗೆ ಮಸೂದೆಯು ಹಾಗೆಯೇ ಉಳಿದುಹೋಯಿತು.

ವಾಜಪೇಯಿಯವರ NDA ಸರ್ಕಾರ 1998ರಲ್ಲಿ 12ನೇ ಲೋಕಸಭೆಯಲ್ಲಿ ಮಸೂದೆಯನ್ನು ಮರುಪರಿಚಯಿಸಿತು. ಆದರೂ, ಮತ್ತೊಮ್ಮೆ ಅದು ಬೆಂಬಲ ಪಡೆಯುವಲ್ಲಿ ವಿಫಲವಾಯಿತು. 1999ರಲ್ಲಿ NDA ಸರ್ಕಾರ 13ನೇ ಲೋಕಸಭೆಯಲ್ಲಿ ಅದನ್ನು ಪುನಃ ಮಂಡಿಸಿತು. 2004ರಲ್ಲಿ ಯುಪಿಎ ಸರ್ಕಾರ ಇದನ್ನು ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ ಸೇರಿಸಿತು. ವಿಧಾನಸಭೆಗಳಲ್ಲಿ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿಗಾಗಿ ಶಾಸನವನ್ನು ರಚಿಸಲು ತನ್ನ ಬದ್ಧತೆಯನ್ನು ಸಾರಿತು.

2008 ಮತ್ತು 2010ರಲ್ಲಿ ಮತ್ತೆ ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸಲಾಯಿತು. 2010ರ ಮಾರ್ಚ್ 9ರಂದು ರಾಜ್ಯಸಭೆಯಲ್ಲಿ ಮಸೂದೆಯನ್ನು ಭಾರೀ ಚರ್ಚೆಯ ಬಳಿಕ ಅಂಗೀಕರಿಸಲಾಯಿತು. ಇತಿಹಾಸ ಸೃಷ್ಟಿಯಾಯಿತು. ನಂತರ ಮಸೂದೆ ಲೋಕಸಭೆಗೆ ತಲುಪಿತು. ಅಲ್ಲಿ ಅದು ಅಂಗೀಕಾರವಾಗಲಿಲ್ಲ. ಬಳಿಕ ಲೋಕಸಭೆ ವಿಸರ್ಜನೆಗೊಂಡಿತು.

ಯುಪಿಎ ಹಲವು ಪಕ್ಷಗಳ ಒಕ್ಕೂಟವಾಗಿದ್ದರಿಂದ ಮಹಿಳಾ ಮೀಸಲಾತಿ ಮಸೂದೆ ವಿಚಾರವಾಗಿ ಒಮ್ಮತ ಮೂಡದೆ ಅಂಗೀಕಾರ ಸಾಧ್ಯವಾಗಲಿಲ್ಲ. ಆದರೆ ಈಗ ​ಪ್ರಚಂಡ ಬಹುಮತ ಹೊಂದಿರುವ ಬಿಜೆಪಿ ಮನಸ್ಸು ಮಾಡಿದ್ದರೆ ಮಸೂದೆಗೆ ಅನುಮೋದನೆ ಪಡೆಯುವುದು ದೊಡ್ಡ ಮಾತಾಗಿರಲಿಲ್ಲ.

ಬಾಯಲ್ಲಿ ಮಾತ್ರ ಮಹಿಳಾ ಸಬಲೀಕರಣದ ಮಾತನ್ನಾಡುವ ಬಿಜೆಪಿಯದ್ದು ಕಡೆಗೂ ಮನುಸ್ಮೃತಿ ಮನಸ್ಥಿತಿಯೇ. ಇಲ್ಲವಾಗಿದ್ದರೆ, ಮಹಿಳಾ ಸಬಲೀಕರಣದ ಭಾಗವಾಗಿಯೇ ಮಹಿಳಾ ಮೀಸಲಾತಿ ಮಸೂದೆಯನ್ನು ಮರುಮಂಡನೆ ಮಾಡುವ ನಿಲುವನ್ನು ಅದು ಯಾವತ್ತೋ ತೋರಿಸಬೇಕಿತ್ತು. 2014ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದರೂ, ಮಸೂದೆಯ ಹತ್ತಿರಕ್ಕೇ ಹೋಗಲಿಲ್ಲ. 2018ರ ಜುಲೈನಲ್ಲಿ, ಅಂದಿನ ಮುಂಗಾರು ಅಧಿವೇಶನಕ್ಕೂ ಮೊದಲು, ಪ್ರಧಾನಿ ಮೋದಿಗೆ ಪತ್ರ ಬರೆದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಹಿಳೆಯರ ವಿಚಾರದಲ್ಲಿ ತಮ್ಮ ಬದ್ಧತೆ ಪ್ರದರ್ಶಿಸಿ, ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸಿ ಎಂದು ಒತ್ತಾಯಿಸಿದ್ದರು.

ಆದರೆ ಯಾವುದಕ್ಕೂ ಮೋದಿ ಸರ್ಕಾರ ಮಣಿದಿರಲಿಲ್ಲ. ಆದರೆ ಈಗ 10 ವರ್ಷಗಳ ನಂತರ ಮೋದಿ ಸರ್ಕಾರಕ್ಕೆ ಈ ಮಸೂದೆ ಏಕೆ ನೆನಪಾಗಿದೆ?

. ಚುನಾವಣೆ ಎದುರಿಗೆ ಇರುವ ಹೊತ್ತಿನಲ್ಲಿ ಈ ಮಸೂದೆಯನ್ನು ನೆನಪಿಸಿಕೊಂಡು ಸದ್ದು ಮಾಡುತ್ತಿದ್ದರೂ, ಅದರಲ್ಲಿ ​ಒಬಿಸಿ ಮಹಿಳೆಯರ ವಿಚಾರವಿಲ್ಲ​,ಅಲ್ಪಸಂಖ್ಯಾತ ಮಹಿಳೆಯರ ವಿಚಾರವಿಲ್ಲ ​. ಅಲ್ಲದೆ, ಇನ್ನೈದು ವರ್ಷದ ಒಳಗಂತೂ ಜಾರಿಯೇ ಆಗುವುದಿಲ್ಲ.

ಕಾಂಗ್ರೆಸ್ನ ಸುಪ್ರಿಯಾ ಶ್ರಿ​ನೇತ್ ಈ ವಿಚಾರವಾಗಿಯೇ ಟೀಕಿಸಿದ್ದಾರೆ. ಬಿಜೆಪಿಯ ಸಂಶಯಾಸ್ಪದ ಉದ್ದೇಶಗಳು ಮಹಿಳಾ ಮೀಸಲಾತಿ ಮಸೂದೆಯಲ್ಲಿ ಸ್ಪಷ್ಟವಾಗಿದೆ. ನಿಜವಾಗಿಯೂ ಅದು ಮಹಿಳೆಯರ ರಾಜಕೀಯ ಪಾಲ್ಗೊಳ್ಳುವಿಕೆಯನ್ನು ಬಯಸುತ್ತಿದ್ದಲ್ಲಿ 2010ರಲ್ಲಿ ರಾಜ್ಯಸಭೆಯಲ್ಲಿ ಅಂಗೀಕರಿಸಲಾದ ಮಸೂದೆಯನ್ನೇ ಲೋಕಸಭೆಗೆ ತರುತ್ತಿತ್ತು ಎಂದಿದ್ದಾರೆ.

ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಚುನಾವಣೆ ಹೊತ್ತಿನ ಅತಿ ದೊಡ್ಡ ಸುಳ್ಳು ಭರವಸೆ ಇದೆಂದು ಟೀಕಿಸಿದ್ದಾರೆ. ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಹಿಂದುಳಿದ, ದಲಿತ, ಅಲ್ಪಸಂಖ್ಯಾತ, ಆದಿವಾಸಿ ಮಹಿಳೆಯರ ಮೀಸಲಾತಿ ವಿಚಾರ ಸ್ಪಷ್ಟವಾಗಬೇಕು ಎಂದಿದ್ದಾರೆ. ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ಮೀಸಲಾತಿಯಲ್ಲಿ ಒಬಿಸಿ, ಎಸ್‌ಸಿ ಮತ್ತು ಎಸ್‌ಟಿ ವಿಭಾಗದ ಮಹಿಳೆಯರಿಗೆ ಪ್ರತ್ಯೇಕ ಕೋಟಾ ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಒಬಿಸಿ ಮಹಿಳೆಯರ ಮೀಸಲಾತಿ ಇಲ್ಲವೆಂದಾದರೆ ಅದು ಅಪೂರ್ಣ ಎಂದು ದಲಿತ ನಾಯಕ ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ. ಮಹಿಳೆಯರ ಯೋಗಕ್ಷೇಮ ಮತ್ತು ಕಲ್ಯಾಣದ ಬಗ್ಗೆ ಬಿಜೆಪಿಗೆ ಆಸಕ್ತಿಯಿಲ್ಲ. ಮಸೂದೆಯ ನಿಬಂಧನೆಗಳನ್ನು ಸೂಕ್ಷ್ಮವಾಗಿ ಓದಿದರೆ ಅದು ಮಹಿಳಾ ಬೇವಕೂಫ್ ಬನಾವೊ ಮಸೂದೆ ಎಂಬಂತೆ ಕಾಣಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಹಿರಿಯ ನಾಯಕಿ ಅತಿಶಿ ಟೀಕಿಸಿದ್ದಾರೆ.

​ಪ್ರಧಾನಿ ಮೋದಿ ಹಿಂದುಳಿದ ವರ್ಗದಿಂದ ಬಂದಿರುವ ನಾಯಕ ಎಂದೇ ಬಿಜೆಪಿ ಪ್ರಚಾರ ಮಾಡಿಕೊಳ್ಳುತ್ತದೆ. ಆದರೆ ಅದೇ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಯಾಕೆ ಪ್ರಧಾನಿ ಮೋದಿ ಸರಕಾರ ಮಂಡಿಸುತ್ತಿರುವ ಮಸೂದೆಯಲ್ಲಿ ಮೀಸಲಾತಿ ಇಲ್ಲ ?. ಬಿಜೆಪಿ ಎಷ್ಟೇ ಜಾಣತನ ತೋರಿದರೂ, ಅದರ ಹುನ್ನಾರ ಅರ್ಥವಾಗದ್ದೇನೂ ಅಲ್ಲ. ಅದನ್ನೇ ಪ್ರತಿಪಕ್ಷದ ನಾಯಕರೆಲ್ಲ ಈಗ ಹೇಳುತ್ತಿರುವುದು.

ಮಹಿಳಾ ಮೀಸಲಾತಿ ಮಸೂದೆಯಲ್ಲಿ ಜನಗಣತಿ ಮತ್ತು ಕ್ಷೇತ್ರ ಮರು ವಿಂಗಡಣೆ ನಿಬಂಧನೆಗಳನ್ನು ಸೇರಿಸಿರುವುದೇ ​ಅದರ ರಾಜಕೀಯ ಲೆಕ್ಕಾಚಾರದ ನಡೆ. ತಾನು ಮಾಡಿದೆ ಎಂದಾಗಬೇಕು, ಆದರೆ ತನಗೆ ಬೇಕಿರದ ಈ ಮಹಿಳಾ ಮೀಸಲಾತಿಯ ಎಲ್ಲ ಪರಿಣಾಮಗಳಿಂದ ತಾನು ತಪ್ಪಿಸಿಕೊಂಡು ಚುನಾವಣೆಯನ್ನು ಗೆದ್ದುಬಿಡಬೇಕು ಎಂಬುದೇ ಮೋದಿ ಸರ್ಕಾರದ ಇರಾದೆ. ಮಹಿಳಾ ಮೀಸಲಾತಿಯನ್ನು ಜಾರಿಗೆ ತಂದದ್ದು ಬಿಜೆಪಿ ಸರ್ಕಾರ ಎಂಬುದು ಮಾತ್ರ ಅಮರವಾಗಬೇಕು ಎಂಬುದು ಮೋದಿ ಪರಿವಾರದ ಲೆಕ್ಕಾಚಾರ. ಯಾವುದನ್ನೇ ಆದರೂ​ ತಕ್ಷಣದ ​ರಾಜಕೀಯ ಲಾಭದ ಲೆಕ್ಕಾಚಾರ ಇಲ್ಲದೆಯೆ ಮಾಡಿದ್ದಿದೆಯೆ ಈ ಸರ್ಕಾರ​ ? ​ಈಗ ಮಹಿಳಾ ಮೀಸಲಾತಿ ಮಸೂದೆ ವಿಚಾರದಲ್ಲೂ ಅದೇ ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!