ಪ್ರಧಾನಿ ಮೌನ ಮುರಿಯಲು ಅವಿಶ್ವಾಸ ನಿರ್ಣಯದ ಮೊರೆ ಹೋದ ವಿಪಕ್ಷಗಳು

Update: 2023-08-09 17:43 GMT

 ನರೇಂದ್ರ ಮೋದಿ | PHOTO: PTI 

ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಂದು ವಿಷಯದ ಬಗ್ಗೆ ಮಾತಾಡುತ್ತಾರೆ. ಇನ್ನು ಅವರು ಮಾತಾಡಿದ ಮೇಲೆ ನಾವ್ಯಾರೂ ಮಾತಾಡಬೇಕಿಲ್ಲ ಎನ್ನುತ್ತಾರೆ ಬಿಜೆಪಿ ಮುಖಂಡರು. ಮಕ್ಕಳ ಪರೀಕ್ಷೆ ಹೇಗೆ ಬರೀಬೇಕು ಅಂತ ಸಲಹೆ ಕೊಡುತ್ತಾರೆ. ಕ್ರಿಕೆಟ್ ಬಗ್ಗೆ, ಸಿನಿಮಾದ ಬಗ್ಗೆ, ಸೆಲೆಬ್ರಿಟಿಗಳ ಬರ್ತ್ ಡೇ ಬಗ್ಗೆ - ಹೀಗೆ ಪ್ರಧಾನಿ ಮೋದಿ ಮಾತಾಡದ ವಿಷಯವೇ ಇಲ್ಲ.

ಆದರೆ ಇಷ್ಟೆಲ್ಲಾ ಮಾತಾಡುವ ಪ್ರಧಾನಿ ಮೋದಿ ಈ ದೇಶದ ರಾಜ್ಯ ವೊಂದು ಮೂರು ತಿಂಗಳಿಂದ ಹೊತ್ತಿ ಉರಿಯುತ್ತಿದ್ದರೆ ಆ ಬಗ್ಗೆ ಮಾತಾಡುತ್ತಲೇ ಇಲ್ಲ. ಹಾಗಾಗಿ ಈಗ ಅವರನ್ನು ಮಾತಾಡಿಸಲು ವಿಪಕ್ಷಗಳು ಅನಿವಾರ್ಯವಾಗಿ ಅವಿಶ್ವಾಸ ನಿರ್ಣಯದ ಹಾದಿ ಹಿಡಿದಿವೆ.

ಇದಕ್ಕಿಂತ ದೊಡ್ಡ ವಿಪರ್ಯಾಸ ಬೇಕೆ ?

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿವೆ. ಮೋದಿ ಗೈರಿನ ನಡುವೆಯೇ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ. ಮತ್ತು ಸೂಕ್ಷ್ಮವಾಗಿ ಗಮನಿಸಬೇಕಾದ ಸಂಗತಿಯೆಂದರೆ, ಮೋದಿ ಸಂಸತ್ತಿಗೆ ಬಂದು ಮಾತನಾಡಲೆಂದೇ ಮಂಡನೆಯಾಗಿರುವ ಅವಿಶ್ವಾಸ ನಿರ್ಣಯ ಇದು.

ಒಂದು ವಿಷಯ ಪ್ರತಿಪಕ್ಷಗಳಿಗೂ ಗೊತ್ತು, ಸರ್ಕಾರಕ್ಕೂ ಗೊತ್ತು. ಏನೆಂದರೆ, ಈ ಅವಿಶ್ವಾಸ ನಿರ್ಣಯ ಸಂಸತ್ತಿನಲ್ಲಿ ಅಂಗೀಕಾರಗೊಳ್ಳುವ ಯಾವ ಸಾಧ್ಯತೆಯೂ ಇಲ್ಲ. ಇದರ ಉದ್ದೇಶವೇ ಮಣಿಪುರ ಹಿಂಸಾಚಾರ ಕುರಿತು ಸಂಸತ್ತಿನಲ್ಲಿ ಪ್ರಧಾನಿ ಮೋದಿ ಮಾತನಾಡುವಂತೆ ಒತ್ತಡ ಹೇರುವುದು.

ಹಾಗಾಗಿ, ಇದೊಂದು ಬಗೆಯಲ್ಲಿ ಪ್ರತಿಪಕ್ಷಗಳ ನೈತಿಕ ಛಾತಿಯ ಸವಾಲು. ಆದರೆ ಅದೆಷ್ಟೊ ಇಂಚಿನ ಎದೆಯ ಪ್ರಧಾನಿಗೆ ಈ ಸೂಕ್ಷ್ಮ ಕೂಡ ಅರ್ಥವಾದಂತಿಲ್ಲ. ಮತ್ತು ಹಾಗೆ ಅರ್ಥವಾಗುವಂತಿದ್ದರೆ, ಪ್ರತಿಪಕ್ಷಗಳು ಇಂಥದೊಂದು ಹೆಜ್ಜೆ ತೆಗೆದುಕೊಳ್ಳಬೇಕಾದ ಅಗತ್ಯವೇ ಬೀಳುತ್ತಿರಲಿಲ್ಲ.

ಪ್ರತಿಪಕ್ಷಗಳ ಒಕ್ಕೂಟ INDIA ವನ್ನು ಘಮಂಡಿಯಾ ಎಂದು ಕರೆಯುವ ಪ್ರಧಾನಿಗೆ ತಾನೆಷ್ಟು ಘಮಂಡಿ ಎಂಬುದು ತಿಳಿದಿರಲೇಬೇಕು. ಹಾಗಿಲ್ಲದೇ ಹೋಗಿದ್ದರೆ ಹೊತ್ತಿ ಉರಿಯುತ್ತಿರುವ ಮಣಿಪುರದ ಬಗ್ಗೆ ಮಾತನಾಡದೇ ಇರುವ ಹೃದಯಹೀನ ನಡೆ ದೇಶದ ಪ್ರಧಾನಿ ತೋರುವ ನಡೆಯಾಗಿರುತ್ತಿರಲಿಲ್ಲ.

ಜುಲೈ 20ರಂದು ಸಂಸತ್‌ನ ಮುಂಗಾರು ಅಧಿವೇಶನ ಆರಂಭವಾದಾಗಿನಿಂದ ಪ್ರತಿಪಕ್ಷಗಳು ಮಣಿಪುರ ವಿಚಾರವನ್ನು ಬಹಳ ಗಂಭೀರವಾಗಿ ತೆಗೆದುಕೊಂಡು ಚರ್ಚೆಗೆ ಒತ್ತಾಯಿಸಿವೆ. ಇದಕ್ಕೆ ಸರ್ಕಾರ ಒಪ್ಪಿಕೊಂಡಿದ್ದರೂ, ಪ್ರಧಾನಿ ಮೋದಿ ಇದರ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದೆ. ಆದರೆ ಪ್ರಧಾನಿ ಮಾತನಾಡಲೇಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದಿವೆ. ಹಾಗೆ ಸಂಸತ್ತಿನಲ್ಲಿ ಅವರು ಮಾತನಾಡುವುದನ್ನು ಖಾತ್ರಿಪಡಿಸಲೆಂದೇ ಈಗ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ.

ಮಣಿಪುರ ವಿಚಾರದಲ್ಲಿ ಪ್ರಧಾನಿ ಮಾತನಾಡುವುದಿಲ್ಲ ಎಂಬ ಧೋರಣೆಯೇ ಬಹಳ ವಿಚಿತ್ರವಾದುದಾಗಿದೆ. 143 ಜನರನ್ನು ಬಲಿ ತೆಗೆದುಕೊಂಡಿರುವ, 65 ಸಾವಿರ ಜನರು ರಾಜ್ಯ ತೊರೆಯಲು ಕಾರಣವಾಗಿರುವ ಹಿಂಸಾಚಾರದ ಬಗ್ಗೆ ಮಾತನಾಡದೇ ಇರುವಂಥದ್ದು ಯಾವ ಥರದ ಪ್ರತಿಷ್ಠೆ?. ಅಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ ಹೇಯಕೃತ್ಯದ ಬಗ್ಗೆ ಪ್ರಧಾನಿ ಕೊನೆಗೂ ಮಾತಾಡಿದರೂ ಅದಕ್ಕಿಂತ ಅವರು ಮಾತಾಡದೆ ಇರೋದೇ ಒಳ್ಳೆದಿತ್ತು ಎಂದು ಎಲ್ಲರೂ ಅಭಿಪ್ರಾಯ ಪಟ್ಟರು.

ಮಣಿಪುರ ಹಿಂಸಾಚಾರದ ಬಗ್ಗೆ ಮೋದಿ ಮಾತನಾಡುವುದಿಲ್ಲ ಎಂಬ ಸರ್ಕಾರದ ಖಡಾಖಂಡಿತ ನಿಲುವೇ ಅವಿಶ್ವಾಸ ನಿರ್ಣಯವನ್ನು ಅನಿವಾರ್ಯಗೊಳಿಸಿತು ಎಂಬ ಮಾತುಗಳನ್ನು ಮಂಗಳವಾರ ಅವಿಶ್ವಾಸ ನಿರ್ಣಯ ಮಂಡಿಸಿದ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಹೇಳಿದ್ದಾರೆ.

ಮಣಿಪುರದ ಬಗ್ಗೆ ಪ್ರಧಾನಿ ಮೋದಿ ಮೌನದ ಹಠವನ್ನು ಮುರಿಯಲೆಂದೇ ವಿರೋಧ ಪಕ್ಷ INDIA ಅವಿಶ್ವಾಸ ನಿರ್ಣಯ ತರಲು ಮುಂದಾಯಿತು. ಒಂದು ಭಾರತದ ಮಾತನ್ನಾಡುವ ಸರ್ಕಾರ ಎರಡು ಮಣಿಪುರಗಳನ್ನು ಸೃಷ್ಟಿಸಿದೆ. ಕಣಿವೆಯಲ್ಲಿ ವಾಸಿಸುವವರು ಮತ್ತು ಬೆಟ್ಟದಲ್ಲಿ ವಾಸಿಸುವವರು ಎಂದು ಭೇದವೆಣಿಸುತ್ತಿದೆ ಎಂದು ಗೊಗೊಯ್ ಆರೋಪಿಸಿದರು.

ಪ್ರಧಾನಿಗೆ ಮೂರು ಪ್ರಶ್ನೆಗಳನ್ನು ಕೇಳಲಾಗಿದೆ. ಒಂದು, ಪ್ರಧಾನಿ ಏಕೆ ಇಲ್ಲಿಯವರೆಗೆ ಮಣಿಪುರಕ್ಕೆ ಭೇಟಿ ನೀಡಿಲ್ಲ?. ಎರಡು, ಮಣಿಪುರ ಕುರಿತು ಕಡೆಗೂ ಮಾತನಾಡಲು 80 ದಿನಗಳು ಬೇಕಾದವು, ಮತ್ತು ಮಾತನಾಡಿದಾಗ ಅವರೇಕೆ ಕೇವಲ 30 ಸೆಕೆಂಡ್ ಮಾತನಾಡಿದರು?. ಮೂರು, ಮಣಿಪುರ ಮುಖ್ಯಮಂತ್ರಿಯನ್ನು ಇಲ್ಲಿಯವರೆಗೆ ಪ್ರಧಾನಿ ಏಕೆ ವಜಾಗೊಳಿಸಿಲ್ಲ?

ಅನ್ಯಾಯ ಎಲ್ಲಿಯೇ ಆದರೂ ಅದು ಎಲ್ಲೆಡೆ ನ್ಯಾಯವನ್ನು ಅಪಾಯಕ್ಕೊಡ್ಡುತ್ತದೆ ಎಂದು ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಹೇಳಿದ್ದರು. ಮಣಿಪುರ ಹೊತ್ತಿ ಉರಿಯುತ್ತಿದ್ದರೆ ಇಡೀ ದೇಶ ಹೊತ್ತಿ ಉರಿಯುತ್ತಿದೆ. ಮಣಿಪುರ ಇಬ್ಭಾಗವಾಗಿದ್ದರೆ ದೇಶವೂ ಹಾಗೆಯೇ ಆಗಿದೆ. ದೇಶದ ನಾಯಕರಾಗಿ ಪ್ರಧಾನಿ ಸದನಕ್ಕೆ ಬಂದು ಮಣಿಪುರದ ಕುರಿತು ಮಾತನಾಡಬೇಕು ಎಂಬುದು ನಮ್ಮ ಆಗ್ರಹ ಎಂದು ನಿರ್ಣಯ ಮಂಡನೆ ವೇಳೆ ಗೊಗೊಯ್ ಹೇಳಿದರು.

ಪ್ರಧಾನಿ ಸಂಸತ್ತಿಗೆ ಬರುತ್ತಿಲ್ಲ. ಮಣಿಪುರಕ್ಕೂ ಹೋಗಿಲ್ಲ. ಈ ಸರ್ಕಾರ ಹೃದಯಹೀನವಾಗಿದೆ ಎಂದು ಟಿಎಂಸಿ ಸಂಸದ ಸೌಗತ ರಾಯ್, ನಿರ್ಣಯ ಕುರಿತ ಚರ್ಚೆಯ ವೇಳೆ ಹೇಳಿದ್ದಾರೆ. ಟಿಎಂಸಿ ರಾಜ್ಯಸಭೆ ಸದಸ್ಯ ಡೆರೆಕ್ ಒಬ್ರಿಯಾನ್, ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ನಾಪತ್ತೆಯಾಗಿದ್ದಾರೆ. ಅವರನ್ನು ಲೋಕಸಭೆಗೆ ಎಳೆದು ತರಲು ಅಂತಿಮವಾಗಿ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ತೆಗೆದುಕೊಂಡಿವೆ ಎಂದು ಟ್ವೀಟ್ ಮಾಡಿದ್ದಾರೆ. ಇವೆಲ್ಲವೂ ಸ್ಪಷ್ಟಪಡಿಸುತ್ತಿರುವುದು, ಮಣಿಪುರಕ್ಕಾಗಿರುವ ಅನ್ಯಾಯವೇ ಇಲ್ಲಿನ ವಿಚಾರವಾಗಿದೆ ಎಂಬುದನ್ನು. ಹಾಗಾಗಿ ಸರ್ಕಾರವನ್ನು ಸೋಲಿಸುವ ಇಂಗಿತವೇ ಈ ನಿರ್ಣಯದ್ದಲ್ಲ.

ಆದರೆ, ಪ್ರಧಾನಿ ಮೋದಿಗಾಗಲೀ ಬಿಜೆಪಿಗಾಗಲೀ ಇದರ ಸೂಕ್ಷ್ಮವನ್ನು ಮನನ ಮಾಡಿಕೊಳ್ಳುವ ಇರಾದೆ ಇದ್ದಂತಿಲ್ಲ. ಇಡೀ ಮಣಿಪುರ ದುರಂತವನ್ನು ಲಘುವಾಗಿ ತೆಗೆದುಕೊಂಡವರಂತಿರುವ ಅವರು, ಹೃದಯವಂತಿಕೆಯ ಪ್ರಶ್ನೆಯನ್ನು ಮುಂದೆ ಮಾಡಿರುವ ಈ ಅವಿಶ್ವಾಸ ನಿರ್ಣಯದ ಹಿಂದಿನ ಘನ ಉದ್ದೇಶವನ್ನೂ ಲಘುವಾಗಿಯೇ ಪರಿಗಣಿಸಿದಂತಿದೆ.

ನಿರ್ಣಯದ ಮೇಲಿನ ಚರ್ಚೆಯನ್ನು ಗೊಗೊಯ್ ಆರಂಭಿಸುತ್ತಿದ್ದರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಧ್ಯೆ ಬಾಯಿಹಾಕಿ, ರಾಹುಲ್ ಗಾಂಧಿ ಚರ್ಚೆ ಆರಂಭಿಸುತ್ತಾರೆ ಎಂದು ತಿಳಿದುಬಂದಿತ್ತು ಎನ್ನುತ್ತಾರೆ. ರಾಹುಲ್ ಗಾಂಧಿ ಏಕೆ ಮೊದಲು ಚರ್ಚೆ ಆರಂಭಿಸಿಲ್ಲ ಎಂದು ಕೇಳುತ್ತಾರೆ. ಇನ್ನೊಂದೆಡೆ, ಬಿಜೆಪಿ ಸಂಸದೀಯ ಸಭೆಯಲ್ಲಿ ಮಾತನಾಡುವ ಮೋದಿ, ಪ್ರತಿಪಕ್ಷಗಳ ನಾಯಕರು ಕೊನೆಯ ಎಸೆತದಲ್ಲಿ ಸಿಕ್ಸರ್ ಹೊಡೆಯಲು ಬಯಸುತ್ತಾರೆ ಎಂದು ಕ್ರಿಕೆಟ್ ಪರಿಭಾಷೆಯಲ್ಲಿ ಮಾತನಾಡುತ್ತ, ಗಂಭೀರ ಸಂದರ್ಭವನ್ನು ವ್ಯಂಗ್ಯ ಮಾಡುತ್ತಾರೆ.

ಹಾಗೆ ನೋಡಿದರೆ ಮೋದಿ ಕ್ರಿಕೆಟ್ ರಾಜಕೀಯ ಶುರು ಮಾಡಿಯೂ ಬಹು ಕಾಲವೇ ಆಗಿದೆ. ಕಳೆದ ಮಾರ್ಚ್ನಲ್ಲಿ ಅಹಮದಾಬಾದ್ನ ಮೋದಿ ಸ್ಟೇಡಿಯಂನಲ್ಲಿ ಏನಾಯಿತು ಎಂದು ನೋಡಿದ್ದೇವೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್- ಗವಾಸ್ಕರ್ ಟ್ರೋಫಿಯ ಅಂತಿಮ ಟೆಸ್ಟ್ ಪಂದ್ಯ ಆರಂಭಕ್ಕೂ ಆಸ್ಟ್ರೇಲಿಯಾ ಪ್ರಧಾನಿ ಆಂಟೋನಿ ಆಲ್ಬನೀಸ್ ಜೊತೆ ವಿಶೇಷವಾಗಿ ಸಿದ್ಧಪಡಿಸಲಾಗಿದ್ದ ರಥದಂಥ ತೆರೆದ ವಾಹನದಲ್ಲಿ ಕ್ರೀಡಾಂಗಣ ಸುತ್ತು ಹಾಕಿ ಕ್ರಿಕೆಟ್ ಅಭಿಮಾನಿಗಳತ್ತ ಕೈಬೀಸಿದ್ದರು ಮೋದಿ. ಅದೇನು ಕ್ರಿಕೆಟ್ ಪಂದ್ಯವೊ ರಾಜಕೀಯ ರ್ಯಾಲಿಯೊ ಎಂದು ಅನುಮಾನ ಬರುವಂತೆ ಪೋಸು ಕೊಟ್ಟಿದ್ದರು.

ಯೋಜಿತ ರಾಜಕೀಯ ಪ್ರಚಾರಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಂಥ ಸಂದರ್ಭವನ್ನೂ ಬಿಡದೆ ಬಳಸಿಕೊಂಡ ಬಿಜೆಪಿಯ ಭಂಡತನವನ್ನು ಅವತ್ತು ದೇಶ ನೋಡಿತ್ತು. ಹಾಗೆ ಕ್ರಿಕೆಟ್ ರಾಜಕೀಯ ಮಾಡಿದ್ದ ಮೋದಿ, ಕ್ರಿಕೆಟ್ ಪರಿಭಾಷೆಯಲ್ಲಿ ಪ್ರತಿಪಕ್ಷಗಳ ವಿರುದ್ಧ ವ್ಯಂಗ್ಯವಾಡುತ್ತ, ತಮ್ಮ ಮಾತಿನ ಮೊನಚಿಗೆ ತಾವೇ ಹೆಮ್ಮೆಪಟ್ಟುಕೊಳ್ಳುತ್ತಿರುವುದು ಕೂಡ ತಮಾಷೆಯಾಗಿದೆ.

ಅವಿಶ್ವಾಸ ಮತ ಸ್ವತಃ ಪ್ರತಿಪಕ್ಷಗಳ ಆಂತರಿಕ ನಂಬಿಕೆಯ ಪರೀಕ್ಷೆಯಾಗಲಿದ್ದು, ಯಾರು ಒಗ್ಗಟ್ಟಾಗಿದ್ದಾರೆ, ಯಾರು ಅವರೊಂದಿಗಿಲ್ಲ ಎಂಬುದನ್ನು ತಿಳಿಸಲಿದೆ ಎಂದು ರಾಜಕೀಯದ ಮಾತನಾಡುತ್ತಾರೆ ಪ್ರಧಾನಿ. ಇಷ್ಟೆಲ್ಲ ಮಾತನಾಡುವ ಪ್ರಧಾನಿಗೆ ಮಣಿಪುರಕ್ಕೆ ಒಂದು ಸಾಂತ್ವನ ಹೇಳಲಾರದ ಘಮಂಡಿತನ ಏಕೋ ಗೊತ್ತಾಗುತ್ತಿಲ್ಲ.

ಈಗ ಅವರು ಮಾತನಾಡಲೇಬೇಕಾಗಿದೆ. ದೇಶದ ಪ್ರಧಾನಿಯೊಬ್ಬರು ನರಮೇಧವೇ ನಡೆದುಹೋದ, ಮಹಿಳೆಯರನ್ನು ಅತ್ಯಾಚಾರ ಗೈದು ಬೆತ್ತಲಾಗಿಸಿ ಮೆರವಣಿಗೆ ಮಾಡಿದ ಹೇಯಕೃತ್ಯ ಘಟಿಸಿದ ಹಿಂಸಾಚಾರದ ಬಗ್ಗೆ ಸ್ವಯಂ ಪ್ರೇರಣೆಯಿಂದ ಮಾತನಾಡಬೇಕಿತ್ತು. ದೇಶವೇ ಒತ್ತಾಯಿಸಿದ ಮೇಲಾದರೂ ಮಾತನಾಡಬೇಕಿತ್ತು. ಪ್ರತಿಪಕ್ಷಗಳು ದಿನವೂ ದುಂಬಾಲು ಬಿದ್ದ ಬಳಿಕವಾದರೂ ಮಾತನಾಡಬೇಕಿತ್ತು.

ಮಣಿಪುರದ ಜನರೇ ದೆಹಲಿಯಲ್ಲಿ ನಿಂತು ಪ್ರತಿಭಟಿಸಿ, ಒಮ್ಮೆ ನಮ್ಮತ್ತ ನೋಡಿ ಎಂದು ಮನವಿ ಮಾಡಿಕೊಂಡ ನಂತರವಾದರೂ ಮಾತನಾಡಬೇಕಿತ್ತು. ಮಾತನಾಡಲಿಲ್ಲ.ಈಗ ಅವರು ಮಾತನಾಡುವಂತೆ ಮಾಡಲು ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯವನ್ನೇ ಮಂಡಿಸಬೇಕಾಯಿತು. ಅವಿಶ್ವಾಸ ನಿರ್ಣಯದಲ್ಲಿ ಸರ್ಕಾರಕ್ಕೆ ಸೋಲಾಗುವ ಸಾಧ್ಯತೆಯಿಲ್ಲ. ಆದರೆ, ಸರ್ಕಾರವಾಗಲೀ ಮೋದಿಯಾಗಲೀ ಈ ಅವಿಶ್ವಾಸ ನಿರ್ಣಯವನ್ನು ಎದುರಿಸಬೇಕಾಗಿ ಬಂದಿರುವುದೇ ನೈತಿಕವಾಗಿ ದೊಡ್ಡ ಸೋಲು ಎಂಬುದಂತೂ ನಿಜ. ಹೀಗೆ ಸೋತ ಮುಖ ಹೊತ್ತವರು ಗೆಲುವಿನ ಬಗ್ಗೆ ಮಾತನಾಡುವುದೇ ಬಹುದೊಡ್ಡ ವ್ಯಂಗ್ಯ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!