ಕಾವೇರಿ ಪ್ರಾಧಿಕಾರದ ಆದೇಶದ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲು ಸುಪ್ರೀಂಕೋರ್ಟ್ ನಕಾರ
ಕರ್ನಾಟಕ ಸರ್ಕಾರಕ್ಕೀಗ ಕಾವೇರಿ ಸಂಕಷ್ಟ ಎದುರಾಗಿದೆ. ಕಾವೇರಿ ಪ್ರಾಧಿಕಾರದ ಆದೇಶದ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡಲು ನಿರಾಕರಿಸಿದೆ. ಹೀಗಾಗಿ ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲೇಬೇಕಾದ ಸಂಕಷ್ಟ ಸ್ಥಿತಿಗೆ ಕರ್ನಾಟಕ ಸರ್ಕಾರ ಮುಟ್ಟಿದೆ. ಪ್ರತಿ 15 ದಿನಗಳಿಗೊಮ್ಮೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಗಳನ್ನು ನಡೆಸುತ್ತ ಇದರ ಬಗ್ಗೆ ನಿಗಾ ಇಟ್ಟಿರುವ ವಿಚಾರವನ್ನು ಗಮನಿಸಿರುವ ಕೋರ್ಟ್, ಪ್ರಾಧಿಕಾರದ ಆದೇಶದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದಿದೆ.
ಸೆ.13ರಿಂದ ಮುಂದಿನ 15 ದಿನಗಳವರೆಗೆ ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿತ್ತು. ಇದಕ್ಕೆ ತಡೆ ನೀಡುವಂತೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆಹೋಗಿತ್ತು. ಆದರೆ ಸುಪ್ರೀಂ ಕೋರ್ಟ್ ರಾಜ್ಯದ ಮನವಿಯನ್ನು ಮಾನ್ಯ ಮಾಡಿಲ್ಲ. ಅಲ್ಲದೆ, ಉಭಯ ರಾಜ್ಯಗಳ ರೈತರು ತಮ್ಮ ವಾದ ಆಲಿಸುವಂತೆ ಕೋರಿದ್ದ ಅರ್ಜಿಯನ್ನು ಪುರಸ್ಕರಿಸುವುದಕ್ಕೂ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ನಿರಾಕರಿಸಿದೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಗಳನ್ನು ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಕೂಡ ಕೋರ್ಟ್ ಸೂಚಿಸಿದೆ. 'ಪ್ರಾಧಿಕಾರದ ಅದೇಶ ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿದೆ. ಇಲ್ಲಿ ಬೆಳೆಗೆ ನೀರು ಒದಗಿಸುವ ವಿಷಯ ಮಾತ್ರವಲ್ಲ, ಬದಲಿಗೆ ಬೆಂಗಳೂರು, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಪ್ರಶ್ನೆಯೂ ಇದೆ. ಪ್ರಸ್ತುತ ಸನ್ನಿವೇಶದಲ್ಲಿ 3 ಸಾವಿರ ಕ್ಯೂಸೆಕ್ ನೀರು ಬಿಡುವಂತೆಯೂ ನಿರ್ದೇಶನ ನೀಡಬಾರದಿತ್ತು.“ಈ ವಿವಾದಗಳಿಗೆ ಮೇಕೆದಾಟು ಯೋಜನೆಯೇ ಪರಿಹಾರ. ಈ ಯೋಜನೆ ಅನುಷ್ಠಾನಕ್ಕೆ ಒಪ್ಪಿಗೆ ನೀಡಬೇಕು. ಈ ಸಂಬಂಧ ನಿರ್ದೇಶನಗಳನ್ನು ನೀಡಬೇಕು" ಎಂದು ಹಿರಿಯ ವಕೀಲ ಶ್ಯಾಮ್ ದಿವಾನ್ ಹಾಗೂ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ರಾಜ್ಯದ ಪರವಾಗಿ ವಾದ ಮಂಡಿಸಿದರು.
“ಇದು ಕೊರತೆಯ ವರ್ಷವಾಗಿದ್ದರಿಂದ ಕರ್ನಾಟಕವು ತಮಿಳುನಾಡಿಗೆ ಪ್ರತಿದಿನ 7,200 ಕ್ಯೂಸೆಕ್ ನೀರು ಹರಿಸಬೇಕು ಎಂದು ಪ್ರಾಧಿಕಾರ ನಿರ್ಧರಿ ಸಿತ್ತು. ನಂತರ ಅದನ್ನು 5 ಸಾವಿರ ಕ್ಯೂಸೆಕ್‌ಗೆ ಇಳಿಸಲಾಗಿತ್ತು. ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸನ್ನು ಪ್ರಾಧಿಕಾರವು ಯಾಂತ್ರಿಕವಾಗಿ ಅನುಮೋದಿಸಿದೆ. ತಮಿಳುನಾಡಿನ ಸಂಕಷ್ಟ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು 7,200 ಕ್ಯೂಸೆಕ್ ನೀರು ಹರಿಸಲು ನಿರ್ದೇಶನ ನೀಡಬೇಕು.“ಅಲ್ಲದೆ, ಇದು ತಮಿಳುನಾಡಿನಲ್ಲಿ 5 ಲಕ್ಷ ಎಕರೆಯಲ್ಲಿ ಬೆಳೆದು ನಿಂತಿರುವ ಬೆಳೆಯ ಪ್ರಶ್ನೆ " ಎಂದು ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ತಮಿಳುನಾಡು ಪರ ವಾದ ಮಂಡಿಸಿದ್ದರು.
ಸುಪ್ರೀಂ ಕೋರ್ಟ್ ಆದೇಶದಿಂದ ತಮಿಳುನಾಡಿನ ಕೈ ಮೇಲಾಗಿದೆ. ಕಾವೇರಿ ನೀರು ಹಂಚಿಕೆ ಕುರಿತು ಕರ್ನಾಟಕದ ಜೊತೆ ಯಾವುದೇ ರೀತಿಯ ಮಾತುಕತೆ ಅಗತ್ಯವಿಲ್ಲ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಅಂತಿಮ ಮತ್ತು ನಿರ್ಣಾಯಕ ಎಂದಿದೆ ತಮಿಳು ನಾಡು ಸರಕಾರ.
ಈಗ ರಾಜ್ಯದ ಪಾಲಿಗೆ ನಿಜವಾಗಿಯೂ ದೊಡ್ಡ ಬಿಕ್ಕಟ್ಟು ಎದುರಾಗಿದೆ. ಒಂದೆಡೆ ರಾಜ್ಯದ ರೈತರ ಹಿತ ಕಾಯಬೇಕಿರುವುದು, ಇನ್ನೊಂದೆಡೆ ನೀರಿನ ಕೊರತೆಯ ನಡುವೆಯೂ ತಮಿಳುನಾಡಿಗೆ ನೀರು ಬಿಡಬೇಕಾದ ಅನಿವಾರ್ಯತೆಯಲ್ಲಿ ಸಿಕ್ಕಿಹಾಕಿಕೊಂಡಿರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ಈಗ ರಾಜ್ಯದ ಎದುರು ಇರುವ ದಾರಿಗಳೇನು?
ಸುಪ್ರೀಂ ಕೋರ್ಟ್ ಮಧ್ಯಪ್ರವೇಶಕ್ಕೆ ನಿರಾಕರಿಸಿರುವ ಹಿನ್ನೆಲೆಯಲ್ಲಿ, ಮತ್ತೆ ಕಾವೇರಿ ಪ್ರಾಧಿಕಾರದ ಮುಂದೆಯೇ ರಾಜ್ಯ ಸರ್ಕಾರ ಹೋಗಬೇಕಾಗಿ ಬರಬಹುದು ಎನ್ನಲಾಗುತ್ತಿದೆ. ರಾಜ್ಯ ಸರ್ಕಾರದ ಬಳಿ ಬೇರೆ ಯಾವುದೇ ಆಯ್ಕೆಗಳು ಉಳಿಯದ ಕಾರಣ ಕೇಂದ್ರ ಸರ್ಕಾರದ ಬಳಿ ಈ ವಿಚಾರದಲ್ಲಿ ಮಧ್ಯಪ್ರವೇಶಕ್ಕೆ ಮನವಿ ಮಾಡಬೇಕಾಗಬಹುದು. ಎರಡೂ ರಾಜ್ಯಗಳ ಜೊತೆಗೆ ಕೇಂದ್ರ ಸಭೆ ನಡೆಸಿ ಮಾನವೀಯ ನೆಲೆಗಟ್ಟಿನಲ್ಲಿ ವಿವಾದ ಬಗೆಹರಿಸಬೇಕಿದೆ ಎಂಬ ಅಭಿಪ್ರಾಯಗಳಿವೆ.
ಈ ಮಧ್ಯೆ, ಕಾವೇರಿ ನೀರು ಹಂಚಿಕೆ ಸಂಬಂಧ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರ ಜತೆಗೂ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಎಚ್ ಕೆ ಪಾಟೀಲ್ ಸಭೆ ನಡೆಸಿದ್ದರು. ಕೇಂದ್ರ ಸಚಿವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವುದಾಗಿ ಸಿದ್ದರಾಮಯ್ಯ ಹೇಳಿದ್ದರು.
ಇನ್ನು, ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಕೊರತೆ ಇರುವಾಗಲೂ, ತಮಿಳುನಾಡಿಗೆ ಹೀಗೆಯೇ ನೀರು ಹರಿದರೆ ಮುಂದೇನು ಎಂಬ ಪ್ರಶ್ನೆಯೂ ಇದೆ. ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ತತ್ವಾರ ಶುರುವಾಗಬಹುದು. ಮುಂದೆ ವಾರಕೊಮ್ಮೆ ಕುಡಿಯುವ ನೀರು ಬಿಡುವ ಸ್ಥಿತಿ ನಿರ್ಮಾಣವಾದರೂ ಆಗಬಹುದು. ಒಂದು ಹಂತದ ಬಳಿಕ ಅದಕ್ಕೂ ತೊಂದರೆಯಾಗುವ ಸಾಧ್ಯತೆ ಇದ್ದು ಬೆಂಗಳೂರು ಮಾತ್ರವಲ್ಲ ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರಕ್ಕೂ ತೊಂದರೆಯಾಗಬಹುದು.
ಸಚಿವ ಎಂಬಿ ಪಾಟೀಲ್ ಕೂಡ ಇದೇ ಆತಂಕ ವ್ಯಕ್ತಪಡಿಸಿದ್ದಾರೆ. ನಮಗೆ ಸಂಕಷ್ಟ ಸೂತ್ರ ಇಲ್ಲ. ವೈಜ್ಞಾನಿಕ ಸೂತ್ರವನ್ನು ಕೂಡಲೇ ಮಾಡಬೇಕು. ಕಾವೇರಿ ವಿಚಾರವಾಗಿ ಕೂಡಲೇ ಕೇಂದ್ರ ಜಲಶಕ್ತಿ ಇಲಾಖೆ, ಪ್ರಾಧಿಕಾರ ಮಧ್ಯಪ್ರವೇಶಿಸಬೇಕು. ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿಕೊಳ್ಳಬೇಕು. ಅಧ್ಯಯನಕ್ಕೆ ತಜ್ಞರ ತಂಡವನ್ನು ಕಳಿಸಬೇಕು ಎಂಬುದು ಎಂಬಿ ಪಾಟೀಲ್ ಒತ್ತಾಯ. ಇದೆಲ್ಲದರ ನಡುವೆಯೇ ಈಗ ಸರ್ಕಾರ, ರೈತರು ಮತ್ತು ಜನತೆಯ ಆಕ್ರೋಶವನ್ನು ಎದುರಿಸುತ್ತಲೇ ಇದ್ದು. ಅದು ಇನ್ನೂ ತೀವ್ರಗೊಳ್ಳುವ ಸೂಚನೆಗಳು ಕಾಣಿಸುತ್ತಿವೆ.
ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸೆಪ್ಟೆಂಬರ್ 23ರಂದು ಮಂಡ್ಯ ಬಂದ್‌ಗೆ ಕರೆ ನೀಡಿದೆ. " ನಮ್ಮ ಪರವಾಗಿ ನಿಂತು ಮಾತನಾಡಿ ಎಂಬ ಕಾರಣಕ್ಕೆ ಜನ ನನಗೆ ಅಧಿಕಾರ ಕೊಟ್ಟಿದ್ದಾರೆ. ಆ ಜವಾಬ್ದಾರಿಯನ್ನು ನಾನು ನಿರ್ವಹಿಸಬೇಕಿದೆ. ಕಾವೇರಿ ನೀರಿಗಾಗಿ ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದರೆ ಎರಡು ಸೆಕೆಂಡ್ ಯೋಚನೆ ಮಾಡದೆ ರಾಜೀನಾಮೆ ನೀಡುತ್ತೇನೆ" ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ನಗರದ ಸರ್‌ಎಂ ವಿಶ್ವೇಶ್ವರಯ್ಯ ಪ್ರತಿಮೆ ಮುಂದೆ ಈಗಾಗಲೇ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ, ಈಗ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಧರಣಿ ಸ್ಥಳದಲ್ಲೇ ಸಮಿತಿ ಪದಾಧಿಕಾರಿಗಳು ಮತ್ತು ನಾನಾ ಸಂಘಟನೆಗಳ ಪ್ರತಿನಿಧಿಗಳ ಸಭೆ ನಡೆಸಿ ಮಂಡ್ಯ ಬಂದ್‌ಗೆ ಕರೆ ನೀಡಿದೆ.
ಜಲಾಶಯದ ನೀರಿನ ಮಟ್ಟ ಈಗಾಗಲೇ ಕುಸಿದಿದೆ. ಇರುವ ನೀರು ಯಾವುದಕ್ಕೂ ಸಾಲದಾಗಿದೆ. ಕುಡಿಯುವ ನೀರಿಗೂ ಸಮಸ್ಯೆ ಎದುರಾಗುವ ಲಕ್ಷಣಗಳು ಕಾಣುತ್ತಿವೆ ಎಂದು ರೈತ ಹಿತರಕ್ಷಣಾ ಸಮಿತಿ ಆತಂಕ ವ್ಯಕ್ತಪಡಿಸಿದೆ. ಇನ್ನೊಂದೆಡೆ ಮಾಜಿ ಸಿಎಂ ಕುಮಾರಸ್ವಾಮಿ, ಈಗಿನ ಸ್ಥಿತಿಗೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದ್ದಾರೆ.
ಎಕ್ಸ್ನಲ್ಲಿ ಈ ಬಗ್ಗೆ ಬರೆದಿರುವ ಅವರು, ಹೆಜ್ಜೆ ಹೆಜ್ಜೆಗೂ ಕಾಂಗ್ರೆಸ್ ಸರ್ಕಾರ ತಪ್ಪು ಮಾಡಿದೆ. ತಮಿಳುನಾಡಿನ ಜೊತೆ ರಾಜಕೀಯ ಹಿತಾಸಕ್ತಿ ತಳುಕು ಹಾಕಿಕೊಂಡಿದ್ದು, ಅದಕ್ಕಾಗಿ ಕಾವೇರಿ ಹಿತವನ್ನು ಬಲಿ ಕೊಡಲಾಗಿದೆ. ಕಾವೇರಿ ನಿಯಂತ್ರಣ ಸಮಿತಿ ಮತ್ತು ಪ್ರಾಧಿಕಾರದ ಸಭೆಗಳನ್ನು ಸರ್ಕಾರ ಲಘುವಾಗಿ ಪರಿಗಣಿಸಿತು ಎಂದು ಆರೋಪ ಮಾಡಿದ್ದಾರೆ.
ಆಗಸ್ಟ್ನಲ್ಲಿ ನೀರು ಬಿಡಲು ಪ್ರಾಧಿಕಾರ ಆದೇಶಿಸಿದ್ದಾಗಲೇ ತಕ್ಷಣವೇ ಸುಪ್ರೀಂ ಕೋರ್ಟ್ ಮೊರೆಹೋಗಿ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಡಬೇಕಿತ್ತು. ಆದರೆ ಸರ್ಕಾರ ಹಾಗೆ ಮಾಡದೆ, ತಮಿಳುನಾಡಿಗೆ ನೀರು ಹರಿಸಿತು. ಕನ್ನಡಿಗರ ಹಿತವನ್ನು ರಾಜಕೀಯ ಸ್ವಾರ್ಥಕ್ಕೆ ಬಲಿ ಕೊಟ್ಟಿತು ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.
ಕೆಆರ್ಎಸ್ನಲ್ಲಿ ಈಗ ಇರುವುದೇ 20 ಟಿಎಂಸಿಗೂ ಕಡಿಮೆ ನೀರು. ದಿನಕ್ಕೆ ಒಂದು ಟಿಎಂಸಿ ಹರಿದುಹೋಗುತ್ತದೆ. ದಿನಕ್ಕೆ 5 ಸಾವಿರ ಕ್ಯೂಸೆಕ್ ಹರಿದರೆ 15 ದಿನಕ್ಕೆ 7 ಟಿಎಂಸಿ ಖಾಲಿ. ಆಗ ಉಳಿಯುವುದು 13 ಟಿಎಂಸಿ. ಇದರಲ್ಲಿ ಡೆಡ್ ಸ್ಟೋರೇಜ್ 7 ಟಿಎಂಸಿ ಇರಬೇಕು. ಇನ್ನು ಉಳಿಯೋದು ಎಷ್ಟು ಎಂದು ಅವರು ಪ್ರಶ್ನಿಸಿದ್ದಾರೆ. ಬೆಂಗಳೂರಿಗೆ ಇನ್ನೂ 9 ತಿಂಗಳು ಕುಡಿಯಲಿಕ್ಕೆ ಕನಿಷ್ಠ 13 ಟಿಎಂಸಿ ನೀರು ಬೇಕು. ಎಲ್ಲಿಂದ ಬರುತ್ತೆ ಆ ನೀರು? ಆದೇಶ ಪಾಲಿಸಲು ಕರ್ನಾಟಕ, ಅನುಭವಿಸಲು ತಮಿಳುನಾಡು ಎನ್ನುವ ಮಾತು ಮತ್ತೊಮ್ಮೆ ಸಾಬೀತಾಗಿದೆ. ಇದಕ್ಕೆಲ್ಲ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ ಎಂದಿದ್ದಾರೆ.
ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂಕೋರ್ಟ್ ಕೇವಲ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಪರಿಗಣಿಸದೇ ವಾಸ್ತವ ಸ್ಥಿತಿಯನ್ನು ಆಧರಿಸಿ ತೀರ್ಪು ನೀಡಬೇಕಿತ್ತು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. " ಮತ್ತೊಮ್ಮೆ ಕರ್ನಾಟಕದ ವಸ್ತುಸ್ಥಿತಿಯನ್ನು ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಬೇಕಿದೆ. ಪ್ರಾಧಿಕಾರದ ಆದೇಶವೇ ಅಂತಿಮವಲ್ಲ. ಸುಪ್ರೀಂಕೋರ್ಟ್ ಈ ವಿಚಾರದಲ್ಲಿ ತನಗೆ ಸಂಬಂಧವೇ ಇಲ್ಲ ಎನ್ನುವುದು ಸರಿಯಲ್ಲ. ಕೇವಲ ಕರ್ನಾಟಕದ ಅಣೆಕಟ್ಟುಗಳ ನೀರಿನ ಮಟ್ಟ ಲೆಕ್ಕ ಹಾಕುವುದಲ್ಲ, ತಮಿಳುನಾಡು ಅಣೆಕಟ್ಟೆಗಳಲ್ಲಿನ ನೀರಿನ ಮಟ್ಟವನ್ನೂ ಲೆಕ್ಕ ಹಾಕಬೇಕು' ಎಂದು ಬೊಮ್ಮಾಯಿ ಆಗ್ರಹಿಸಿದ್ದಾರೆ.
ಶುಕ್ರವಾರ ರಾಜ್ಯ ಸಚಿವ ಸಂಪುಟ ನಡೆಯಲಿದೆ. ಇದರಲ್ಲಿ ರೈತರಿಗೆ ಅನುಕೂಲವಾಗುವಂತಹ ನಿರ್ಧಾರ ವನ್ನು ಕೈಗೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ಅದೇನೆಂದು ಸದ್ಯ ಬಹಿರಂಗಪಡಿಸಲಾಗದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಈಗ ನಿಜವಾಗಿಯೂ ರಾಜ್ಯ ಸರ್ಕಾರದ ಎದುರಿಗೆ ಇರುವುದು ಇಕ್ಕಟ್ಟಿನ ಸ್ಥಿತಿ. ಉತ್ತರಿಸಬೇಕಾದ ಕಷ್ಟವೂ ಅದರ ಎದುರು ಇದೆ. ಇಲ್ಲಿ ಸಮಸ್ಯೆಯೇ, ಸಂಕಷ್ಟ ಸೂತ್ರ ಇಲ್ಲದಿರುವುದು. ಸಂಕಷ್ಟ ಸೂತ್ರ ರಚನೆಯಾಗದೆ ಕರ್ನಾಟಕಕ್ಕೆ ತಾಪತ್ರಯ ತಪ್ಪಿದ್ದಲ್ಲ.