ಕರ್ನಾಟಕದಲ್ಲಿ 122 ವರ್ಷಗಳಲ್ಲೇ ಮೂರನೇ ಅತಿ ಭೀಕರ ಬರ

Update: 2024-02-20 05:30 GMT
Editor : Ismail | Byline : ಆರ್. ಜೀವಿ

Photo: NDTV 

ಕರ್ನಾಟಕದಲ್ಲಿ ಭೀಕರ ಬರ ತಲೆದೋರಿದೆ. ಆದರೆ ಕೇಂದ್ರದ ಬಿಜೆಪಿ ಸರ್ಕಾರ ಮಾತ್ರ ನೆರವಿಗಾಗಿ ರಾಜ್ಯ ಮಾಡಿಕೊಂಡಿರುವ ಮನವಿಯ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರಿಸುತ್ತಿದೆ. ರಾಜ್ಯದಲ್ಲಿನ ಬಿಜೆಪಿ ಜನಪ್ರತಿನಿಧಿಗಳೂ ಅಷ್ಟೆ. ತಮ್ಮದೇ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ, ಕೇಂದ್ರದ ನೆರವು ಬಾರದಿರುವ ಬಗ್ಗೆ ಚಿಂತಿಸದೆ, ಕಾಂಗ್ರೆಸ್ ಸರ್ಕಾರವನ್ನೇ ಎಲ್ಲದಕ್ಕೂ ಹೊಣೆಯಾಗಿಸುತ್ತಿದ್ದಾರೆ.

ಅದಕ್ಕಿಂತಲೂ ಕಳವಳಕಾರಿ ಸಂಗತಿಯೆಂದರೆ, ರಾಜ್ಯದಲ್ಲಿನ ಬರ ಪರಿಸ್ಥಿತಿಗೆ ಪರಿಹಾರ ಕೈಗೊಳ್ಳುವುದಕ್ಕಿಂತ ಹೆಚ್ಚಾಗಿ ಅವರಿಗೆಲ್ಲ ರಾಜ್ಯದಲ್ಲಿ ಕೋಮುವಾದಕ್ಕೆ ಕುಮ್ಮಕ್ಕು ನೀಡುವುದೇ ಮುಖ್ಯವಾಗಿಬಿಟ್ಟಿದೆ. ನ್ಯಾಯ ಕೇಳುವುದಕ್ಕಾಗಿ ಪ್ರತಿಭಟಿಸುವ ರೈತರನ್ನು ಕ್ರಿಮಿನಲ್ಗಳಂತೆ ಕಾಣುವ ಬಿಜೆಪಿ ಮಂದಿಗೆ ಅದೇ ರೈತರು ಬರ ಸ್ಥಿತಿಯಿಂದ ದಿಕ್ಕೆಟ್ಟಂತಾಗಿರುವುದು ಕಣ್ಣಿಗೆ ಕಾಣಿಸುವುದಿಲ್ಲವೆ?

ಬರದಿಂದಾಗಿ ರಾಜ್ಯ ಕಂಗೆಟ್ಟ ಸ್ಥಿತಿಯಲ್ಲಿರುವಾಗಲೂ ಇವರಿಗೇಕೆ ಕೋಮು ಭಾವನೆ ಹರಡುವುದರ ಬಗ್ಗೆಯೇ ಆಸಕ್ತಿ ಮತ್ತು ಅದಕ್ಕಾಗಿಯೇ ಏಕೆ ಯಾವಾಗಲೂ ನೆಪ ಹುಡುಕುತ್ತಿರುತ್ತಾರೆ? ರಾಜ್ಯಕ್ಕೆ ಭೇಟಿ ನೀಡಿದರೂ ರಾಜ್ಯ ಭೀಕರ ಬರ ಎದುರಿಸುತ್ತಿರುವ ಸ್ಥಿತಿಯ ಬಗ್ಗೆ ಒಂದು ಚೂರೂ ತಲೆ ಕೆಡಿಸಿಕೊಳ್ಳದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೊಣೆಗಾರಿಕೆ ಯಾವ ಥರದ್ದು?

ಅವರು ತಮ್ಮ ಪಕ್ಷ ಎಲ್ಲ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಬೇಕು ಎಂಬುದರ ಬಗ್ಗೆ ಮಾತನಾಡುತ್ತಾರೆಯೇ ಹೊರತು, ರಾಜ್ಯದಲ್ಲಿನ ಬರ ಪರಿಸ್ಥಿತಿಯ ಬಗ್ಗೆ, ರಾಜ್ಯ ಸರ್ಕಾರ ಕೇಳಿರುವ ನೆರವಿನ ವಿಚಾರದಲ್ಲಿ ಮಾತ್ರ ಒಂದೇ ಒಂದು ಮಾತಾಡದಿರುವುದು ಮಹಾ ಜಾಣ್ಮೆಯೊ ಪ್ರತಿಷ್ಠೆಯೊ ಅಥವಾ ರಾಜ್ಯ ಕಾಂಗ್ರೆಸ್ ಸರ್ಕಾರ ತಂದಿರುವ ರಾಜ್ಯದ ಜನತೆಯ ಬಗೆಗಿನ ಸೇಡಿನ ಧೋರಣೆಯೊ?  

ಕಾಂಗ್ರೆಸ್ ಸರ್ಕಾರ ತನ್ನ ಮಹತ್ವದ ಯೋಜನೆ ಅನ್ನಭಾಗ್ಯಕ್ಕಾಗಿ ಹೆಚ್ಚುವರಿ ಅಕ್ಕಿಯನ್ನು ಹಣ ಕೊಟ್ಟು ಖರೀದಿಸುವುದಕ್ಕೂ ಅವಕಾಶ ಕೊಡದೇ ಅಡ್ಡಗಾಲು ಹಾಕಿದ್ದು ಕೂಡ ಇದೇ ಬಿಜೆಪಿ ಸರ್ಕಾರವೇ ಆಗಿತ್ತಲ್ಲವೆ?

ಈಗ ಬರ ಪರಿಹಾರಕ್ಕೆ ನೆರವು ಕೇಳಿದರೂ, ತಿಂಗಳುಗಳೇ ಕಳೆದರೂ ನೀಡದೆ ಸತಾಯಿಸುತ್ತಿರುವುರ ಉದ್ದೇಶ ಏನು?

ಇದೆಲ್ಲದರ ನಡುವೆಯೂ ರಾಜ್ಯದಲ್ಲಿ ಕೋಮು ಭಾವನೆ ಹರಡುವ, ಶಾಂತಿ ಕದಡುವ ಕೆಲಸವನ್ನು ಮಾತ್ರ ಅದು ಬಿಡದೆ ಮಾಡುತ್ತಿರುವುದರ ಹಿಂದಿನ ಹಿಕಮತ್ತುಗಳೇನು?

ರಾಜ್ಯದಲ್ಲಿನ ಬರ ಪರಿಸ್ಥಿತಿ ಎಂಥದು ಎಂಬುದರ ಸ್ಥೂಲ ಚಿತ್ರವನ್ನೊಮ್ಮೆ ಗಮನಿಸೋಣ.ಕಳೆದ 122 ವರ್ಷಗಳಲ್ಲಿಯೇ ರಾಜ್ಯದಲ್ಲಿ ಇದು ಮೂರನೇ ಅತಿ ಭೀಕರ ಬರ ಎನ್ನಲಾಗಿದೆ. ಬರದಿಂದಾಗಿ ದೊಡ್ಡ ಪ್ರಮಾಣ ಬೆಳೆ ನಷ್ಟವಾಗಿದೆ.

ಬಿತ್ತನೆಯಾದ ಒಟ್ಟು ಜಮೀನಿನ ವಿಸ್ತೀರ್ಣ 74.26 ಲಕ್ಷ ಹೆಕ್ಟೇರ್. ಬಿತ್ತನೆಯಾದ ಪ್ರದೇಶದ ಶೇ.50ಕ್ಕಿಂತ ಹೆಚ್ಚು ಭಾಗದಲ್ಲಿ ಬೆಳೆ ನಷ್ಟ ಸಂಭವಿಸಿದೆ. ಕೇಂದ್ರದ ನಿಯಮಗಳ ಪ್ರಕಾರ, ನಿರೀಕ್ಷಿತ ಇಳುವರಿಯಲ್ಲಿ ಶೇ.33ರಷ್ಟು ಅಥವಾ ಅದಕ್ಕಿಂತ ಹೆಷ್ಷು ನಷ್ಟವಾದರೆ ಅದನ್ನು ಬೆಳೆ ನಷ್ಟ ಎಂದೇ ಪರಿಗಣಿಸಬೇಕು.

ಆದರೆ ರಾಜ್ಯದಲ್ಲಿ 48.15 ಲಕ್ಷ ಹೆಕ್ಟೇರ್ನಲ್ಲಿ ಬೆಳೆ ನಷ್ಟದ ಪ್ರಮಾಣ ಶೇ.33ರಕ್ಕಿಂತಲೂ ಹೆಚ್ಚು. ಇನ್ನು 26.11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಶೇ.33ರಷ್ಟು ಬೆಳೆ ನಷ್ಟ ಉಂಟಾಗಿದೆ. ಕೆಲವೆಡೆಗಳಲ್ಲಂತೂ 100ಕ್ಕೆ 100ರಷ್ಟು ಬೆಳೆಯೂ ನಾಶವಾಗಿದೆ. ಬೆಳೆ ನಷ್ಟದ ಒಟ್ಟು ಅಂದಾಜು ಮೊತ್ತ 35,162 ಕೋಟಿ ರೂ. ಇದರಲ್ಲಿ ಸಾಮಾನ್ಯ ಬೆಳೆಯ ನಷ್ಟದ ಮೊತ್ತ 32,245 ಕೋಟಿಯಾಗಿದ್ದರೆ, ತೋಟಗಾರಿಕೆ ಬೆಳೆಯ ನಷ್ಟದ ಮೊತ್ತ 2,916 ಕೋಟಿ

ಬೆಳೆ ನಷ್ಟ ಮಾತ್ರವಲ್ಲದೆ ಮೇವು ಮತ್ತು ಕುಡಿಯುವ ನೀರಿನ ಕೊರತೆಯೂ ಎದುರಾಗಿದೆ. ಕೇಂದ್ರ ತಂಡ ರಾಜ್ಯಕ್ಕೆ ಭೇಟಿ ನೀಡಿ ತಿಂಗಳುಗಳೇ ಆಗಿವೆ. ರಾಜ್ಯ ಸರ್ಕಾರ ನೆರವು ಕೋರಿ ಹಲವು ತಿಂಗಳುಗಳೇ ದಾಟಿವೆ. ಕೇಂದ್ರದಿಂದ ರಾಜ್ಯ ಸರ್ಕಾರ ಕೇಳಿರುವ ಒಟ್ಟು ನೆರವು 18,171.15 ಕೋಟಿ

ಇದರಲ್ಲಿ ಬೆಳೆ ನಷ್ಟ ಪರಿಹಾರಕ್ಕೆ ಕೇಳಿರುವ ನೆರವು 4,663.12 ಕೋಟಿ. ಬರದ ತೀವ್ರತೆಗೆ ತುತ್ತಾದ ಕುಟುಂಬಗಳಿಗೆ ನೆರವಾಗಲು ಕೇಳಿರುವ ಮೊತ್ತ 12,577.9 ಕೋಟಿ. ಜಾನುವಾರುಗಳಿಗಾಗಿ ಮೇವು ಮತ್ತಿತರ ಉದ್ದೇಶಕ್ಕೆ ಕೇಳಲಾಗಿರುವ ನೆರವು 363.68 ಕೋಟಿ. ಬರದ ಸಂದರ್ಭದಲ್ಲಿ ಕುಡಿಯುವ ನೀರು ಒದಗಿಸುವ ಕಾಮಗಾರಿಗಾಗಿ ಕೇಳಲಾಗಿರುವ ಹಣ 566.78 ಕೋಟಿ

ಸಿದ್ದರಾಮಯ್ಯ ಅವರೇ ಹೇಳಿರುವ ಹಾಗೆ ರಾಜ್ಯದಲ್ಲಿ ಬರ ಉಂಟಾಗಿ ಆರು ತಿಂಗಳುಗಳೇ ಆಗಿವೆ. ನೆರವು ನೀಡುವಂತೆ 3 ತಿಂಗಳಿಗೂ ಹೆಚ್ಚು ಸಮಯದಿಂದ ಒತ್ತಾಯಿಸಲಾಗುತ್ತಿದೆ. ಮೋದಿಯವರನ್ನು ಭೇಟಿಯಾಗಿಯೂ ಸಮಸ್ಯೆ ವಿವರಿಸಲಾಗಿದೆ. ಇಷ್ಟಾದ ಮೇಲೂ ಒಂದು ಪೈಸೆ ಹಣ ಕೇಂದ್ರದಿಂದ ಬಿಡುಗಡೆಯಾಗಿಲ್ಲ ಎಂಬುದರ ಬಗ್ಗೆ ಸಿದ್ದರಾಮಯ್ಯ ಮತ್ತೆ ಮತ್ತೆ ಆಕ್ಷೇಪ ಎತ್ತುತ್ತಲೇ ಬಂದಿದ್ಧಾರೆ.

ಇದು ಉದ್ದೇಶಪೂರ್ವಕವಾದ ನಿರ್ಲಕ್ಷ್ಯವೊ? ಸಹಜವಾದ ನಿದ್ರಾ ಸ್ಥಿತಿಯೊ? ಎಂದೂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.ರಾಜ್ಯದಲ್ಲಿನ ಬಿಜೆಪಿ ಸಂಸದರಂತೂ ಕರ್ನಾಟಕದ ಪರವಾಗಿ ಮೋದಿಯೆದುರು ನಿಂತು ಹೇಳುವ ಹೊಣೆಗಾರಿಕೆಯನ್ನೇ ತೋರುತ್ತಿಲ್ಲ. ಆದರೆ ರಾಜ್ಯದ ಅದೇ ಬಿಜೆಪಿ ಜನಪ್ರತಿನಿಧಿಗಳು ಎರಡು ವಿಚಾರಗಳಲ್ಲಿ ಮಾತ್ರ ಬಹಳ ಮುಂದಿದ್ದಾರೆ. ಮೊದಲನೆಯದಾಗಿ, ಕಾಂಗ್ರೆಸ್ ಸರಕಾರದ ಜನಪರ ಯೋಜನೆಗಳನ್ನೆಲ್ಲ ಟೀಕಿಸುವುದರಲ್ಲಿ, ಅವುಗಳ ಬಗ್ಗೆ ಅಪಪ್ರಚಾರ ಮಾಡುವುದರಲ್ಲಿ ಅವರಿಗೆ ಬಹಳ ಆಸಕ್ತಿ.

ಎರಡನೆಯದಾಗಿ, ಕೋಮು ವಿಚಾರವಾಗಿ ಕೋಲಾಹಲ ಎಬ್ಬಿಸಲು ಸಣ್ಣ ನೆಪ ಸಿಕ್ಕಿದರೂ ಅದನ್ನು ರಾಜಕೀಯ ಲಾಭದ ಉದ್ದೇಶಕ್ಕೆ ಬಳಸಲು ಅವರು ಕಾದುಕೊಂಡೇ ಇರುತ್ತಾರೆ. ಹೇಗೆ ಬಿಜೆಪಿಯ ಮಂದಿ ಕೋಮು ವಿಚಾರ ಇಟ್ಟುಕೊಂಡು ರಾಜಕೀಯ ಆಟವಾಡಲು ನೋಡುತ್ತಾರೆ ಎಂಬುದಕ್ಕೆ ಮಂಡ್ಯದ ಕೆರಗೋಡು ಪ್ರಕರಣ ಹಾಗೂ ಮಂಗಳೂರು ಶಾಲೆಯ ಪ್ರಕರಣಗಳು ಇತ್ತೀಚಿನ ಎರಡು ತಾಜಾ ಉದಾಹರಣೆಗಳಾಗಿವೆ.

ಕರ್ನಾಟಕಕ್ಕೆ ಬರ ಪರಿಸ್ಥಿತಿ ಎದುರಿಸಲು ಕೇಂದ್ರದ ನೆರವು ಬರುವ ನಿಟ್ಟಿನಲ್ಲಿ ಪ್ರಯತ್ನಿಸಲಾರದ, ಮೋದಿ ಎದುರು ನಿಂತು ನೆರವಿಗಾಗಿ ಕೇಳಲಾರದ ಬಿಜೆಪಿ ನಾಯಕರು, ಕೋಮು ವಿಚಾರದಲ್ಲಿ ಮಾತ್ರ ಅತ್ಯಂತ ಕ್ರಿಯಾಶೀಲರಾಗಿಬಿಡುತ್ತಾರೆ. ಕೆರಗೋಡು ಹನುಮಧ್ವಜ ವಿಚಾರದಲ್ಲಿ ಕೂಡ ಹೇಗೆ ಆರ್ ಅಶೋಕ್ ಥರದ ನಾಯಕರು ಅಲ್ಲಿಗೇ ಧಾವಿಸಿ ಜನರನ್ನು ಹಿಂದುತ್ವದ ಹೆಸರಿನಲ್ಲಿ ಎತ್ತಿಕಟ್ಟುವ ಪ್ರಯತ್ನ ಮಾಡಿದರು ಎಂಬುದನ್ನು ನೋಡಿದ್ದೇವೆ.

ಅವರೊಂದಿಗೆ ಕೈಜೋಡಿಸುವ, ಹೆಸರಿನಲ್ಲಿ ಮಾತ್ರವೇ ಜಾತ್ಯತೀತ ಎಂದಿರುವ ಪಕ್ಷದ ನಾಯಕ ಕುಮಾರಸ್ವಾಮಿ ಮೋದಿ ಸರ್ಕಾರ ರಾಜ್ಯಕ್ಕೆ ಬರ ಪರಿಹಾರ ನೀಡದೆ ಸತಾಯಿಸುತ್ತಿರುವ ಬಗ್ಗೆ ತುಟಿ ಪಿಟಿಕ್ ಎನ್ನುತ್ತಿಲ್ಲ. ಮಂಡ್ಯದಲ್ಲಿ ಕೋಮುಗಲಭೆ ಎಬ್ಬಿಸುವ ಸಂಚನ್ನು ಬಿಜೆಪಿ ನಾಯಕರು ರೂಪಿಸಿರುವುದು, ಲೋಕಸಭಾ ಚುನಾವಣೆಗೆ ನಡೆಸಿರುವ ತಯಾರಿಯಾಗಿದೆ ಎಂಬುದರಲ್ಲಿ ಅನುಮಾನವೇ ಇಲ್ಲ ಎಂದು ಅವತ್ತು ಸಿಎಂ ಹೇಳಿರುವುದು ಸರಿಯಾಗಿಯೇ ಇದೆ.

ಒಂದು ಸಣ್ಣ ಅವಕಾಶ ಸಿಕ್ಕಿದರೂ, ಕಾಂಗ್ರೆಸ್ ಒಂದು ಸಮುದಾಯವನ್ನು ಓಲೈಸುವ ತುಷ್ಟೀಕರಣ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸುವುದು ಹೊಸದಲ್ಲ. ಈಗಲೂ ಅದೇ ಅಪಪ್ರಚಾರದಲ್ಲಿ ಬಿಜೆಪಿ ನಾಯಕರೆಲ್ಲ ತೊಡಗಿದ್ದಾರೆ. ಕಾಂಗ್ರೆಸ್ ಅನ್ನೂ ಸಿದ್ದರಾಮಯ್ಯನವರನ್ನೂ ಹಿಂದೂ ವಿರೋಧಿ ಎನ್ನತೊಡಗಿದ್ಧಾರೆ.

ಇದರದ್ದೇ ಮುಂದುವರಿಕೆಯಾಗಿ ನಡೆದದ್ದು ಮೊನ್ನೆ ಮಂಗಳೂರು ಶಾಲೆಯಲ್ಲಿನ ಪ್ರಕರಣ. ಮಂಗಳೂರಿನ 60 ವರ್ಷಗಳಷ್ಟು ಹಳೆಯದಾದ, ಶಿಕ್ಷಣ ಕ್ಷೇತ್ರದಲ್ಲಿ ಮಹತ್ವಪೂರ್ಣ ಕೆಲಸ ಮಾಡುತ್ತಿರುವ ಶಾಲೆಯನ್ನೂ ಬಿಡದೆ ಬಿಜೆಪಿಯವರು ತಮ್ಮ ಕೋಮು ರಾಜಕೀಯ ಮಾಡಿದರೆಂಬುದು ಕಳವಳ ಹುಟ್ಟಿಸುತ್ತದೆ.

ಮಂಗಳೂರಿನ ಸೈಂಟ್ ಜೆರೋಸಾ ಶಾಲೆಯ ಶಿಕ್ಷಕಿಯೊಬ್ಬರು ರಾಮನಿಗೆ ಅವಮಾನ ಮಾಡಿದರು ಎಂದು ಯಾವ ಪುರಾವೆಯೂ ಇಲ್ಲದೆ ಪುಕಾರು ಎಬ್ಬಿಸಿ, ಕಡೆಗೆ ಶಾಲೆಗೆ ಮುತ್ತಿಗೆ ಹಾಕುವವರೆಗೂ ಬಿಜೆಪಿ ಮತ್ತು ಸಂಘಪರಿವಾರದ ಮಂದಿ ಹೋದರು. ಕಲಿಸಿದ ಶಿಕ್ಷಕಿಯ ವಿರುದ್ಧವೇ 14-15ರ ವಯಸ್ಸಿನ ಮಕ್ಕಳನ್ನು ಎತ್ತಿ ಕಟ್ಟಿ ಆ ಶಿಕ್ಷಕಿಯನ್ನು ಬಲಿಪಶು ಮಾಡಿದರು.

 

ವಿಚಾರದ ಸತ್ಯಾಸತ್ಯತೆ ತಿಳಿಯುವುದಕ್ಕೂ ಅವಕಾಶ ಕೊಡದೆ, ಶಾಲೆಯ ಆವರಣದೊಳಕ್ಕೇ ನುಗ್ಗಿ, ಮಕ್ಕಳಿಂದಲೂ ಜೈಶ್ರೀರಾಮ್ ಘೋಷಣೆ ಕೂಗಿಸಿ, ಜನಪ್ರತಿನಿಧಿಗಳೇ ಅದಕ್ಕೆ ಕೋಮು ಬಣ್ಣ ಕೊಟ್ಟು ರಾಡಿಯೆಬ್ಬಿಸಿಬಿಟ್ಟರು. ಯಾವ ತನಿಖೆಯೂ ಇಲ್ಲದಂತೆ, ಬರೀ ತಮ್ಮ ಪುಕಾರಿನ ಆಧಾರದ ಮೇಲೆಯೇ ಶಿಕ್ಷಕಿಯ ಅಮಾನತಿಗೆ ಕಾರಣರಾಗಿಬಿಟ್ಟರು.

ಮಿಷನರಿ ಶಾಲೆಗಳಿಂದ ದೂರ ಇರಬೇಕಾದ ಕಾಲ ಇದು ಎಂದು ಹೇಳಿಕೆ ನೀಡುವ ಮಟ್ಟಕ್ಕೆ ತಮ್ಮ ಕೋಮುದ್ವೇಷ ತೋರಿಸಿದರು. ಅದೆಲ್ಲವೂ ಲೋಕಸಭೆ ಚುನಾವಣೆ ಹೊತ್ತಿಗೆ ಕೋಮುದ್ವೇಷದ ಲಾಭ ಪಡೆಯಲು ಆಡಿದ ಆಟವೇ ಆಗಿತ್ತು. ಈ ರಾಜ್ಯದ ಜನ ಯಾವುದಕ್ಕಾಗಿ ಚಿಂತಿಸುತ್ತಿದ್ಧಾರೆ? ಯಾವುದು ಜನರಿಗೆ ಬೇಕಿದೆ ಎಂಬುದನ್ನು ಈ ಜನಪ್ರತಿನಿಧಿಗಳು ಯೋಚಿಸುತ್ತಿಲ್ಲ ಎಂಬುದು ಅಮಿತ್ ಶಾ ರಾಜ್ಯ ಭೇಟಿಯ ಸಂದರ್ಭದಲ್ಲೂ ಸಾಬೀತಾಯಿತು.

ವಿಧಾನಸಭೆ ಸೋಲಿನ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಬಂದಿದ್ದ ಅಮಿತ್ ಶಾ, ರಾಜ್ಯ ಬಿಜೆಪಿ ನಾಯಕರಿಗೆ ಕೊಟ್ಟ ಟಾರ್ಗೆಟ್ ಒಂದೇ. ಅದು, ಎಲ್ಲ 28 ಲೋಕಸಭಾ ಕ್ಷೇತ್ರಗಳನ್ನೂ ಗೆಲ್ಲಬೇಕು ಎನ್ನುವುದು. ಇದರ ಹೊರತಾಗಿ ಅವರು ರಾಜ್ಯದ ಬರ ಸ್ಥಿತಿಯ ಬಗ್ಗೆ ಸೌಜನ್ಯಕ್ಕೂ ಒಂದಕ್ಷರ ಮಾತಾಡಲಿಲ್ಲ. ಇಲ್ಲಿಯ ಎಲ್ಲ ಲೋಕಸಭಾ ಕ್ಷೇತ್ರಗಳೂ ಅವರ ಪಾಲಾಗಬೇಕು. ಅಷ್ಟು ಮಾತ್ರವೇ ಅವರ ಚಿಂತೆ.

ಆದರೆ ರಾಜ್ಯದ ಜನರ ಕಷ್ಟಕ್ಕಾಗುವ ಉದ್ದೇಶ ಮಾತ್ರ ಅವರಿಗಿಲ್ಲವೇ ಇಲ್ಲ. ಕರ್ನಾಟಕದಿಂದಲೇ ರಾಜ್ಯಸಭಾ ಸದಸ್ಯೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕಕ್ಕೆ ಏನು ಕೊಟ್ಟರು ಎನ್ನುವುದು, ತೆರಿಗೆ ಪಾಲಿನ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದಲ್ಲೇ ಗೊತ್ತಾಗುತ್ತದೆ. ರಾಜ್ಯಕ್ಕೆ ಬಿಜೆಪಿ ಕೊಡುಗೆ ಅನ್ಯಾಯ ಮತ್ತು ಕೋಮುದ್ವೇಷ ಮಾತ್ರ. ಹಿಂದೆಯೂ ಅದನ್ನೇ ಮಾಡಿದ್ದ ಅದು, ಈಗಲೂ ಅದರಲ್ಲಿಯೇ ತೊಡಗಿದೆ. ಮುಂದೆಯೂ ಅದನ್ನು ಬಿಟ್ಟು ಅದರ ಯಾವ ಆಟವೂ ಇರುವುದಿಲ್ಲ.

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!