ಭಾರತದ ಖ್ಯಾತ ಪತ್ರಕರ್ತರ ವಿರುದ್ಧ ನಿಲ್ಲದ Pegasus spyware ಬಳಕೆ

Update: 2024-01-09 06:32 GMT

ನಿಮಗೆ ನೆನಪಿರಬಹುದು. ಅಕ್ಟೋಬರ್ 30, 2023 ರಾತ್ರಿ 11.45. ಬಹಳಷ್ಟು ಪ್ರಮುಖ ಪ್ರತಿಪಕ್ಷ ನಾಯಕರು ಮತ್ತು ಕೆಲವು ಪತ್ರಕರ್ತರಿಗೆ ಆಪಲ್‌ನಿಂದ ಒಂದು ಸಂದೇಶ ಬರುತ್ತದೆ. ಸರ್ಕಾರಿ ಪ್ರಾಯೋಜಿತ ಹ್ಯಾಕರ್ಗಳು ನಿಮ್ಮ ಐಫೋನ್‌ನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದ್ಧಾರೆ ಎಂಬ ಎಚ್ಚರಿಕೆ ಸಂದೇಶ ಅದಾಗಿತ್ತು. ಈ ವ್ಯಕ್ತಿಗಳನ್ನು ಅವರು ಯಾರು ಅಥವಾ ಅವರು ಏನು ಮಾಡುತ್ತಾರೆ ಎಂಬ ಕಾರಣದಿಂದ ವ್ಯಕ್ತಿಗತವಾಗಿ ಗುರಿ ಮಾಡಲಾಗುತ್ತಿದೆ ಎಂದು ನೋಟಿಫಿಕೇಷನ್ ಹೇಳಿತ್ತು.

ಅವತ್ತು ಅಂಥ ಸಂದೇಶ ಸ್ವೀಕರಿಸಿದ್ದವರಲ್ಲಿ ದೇಶದ ಪ್ರತಿಷ್ಠಿತ ಪತ್ರಕರ್ತರಲ್ಲೊಬ್ಬರಾದ, ದಿ ವೈರ್ ಸುದ್ದಿ ಜಾಲತಾಣದ ಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್ ಕೂಡ ಇದ್ದರು. ಪೆಗಾಸಸ್ ಸ್ಪೈವೇರ್ ನ ಇತ್ತೀಚಿನ ದಾಳಿಗೂ ಸಿದ್ಧಾರ್ಥ ವರದರಾಜನ್ ಒಳಗಾಗಿದ್ದರು ಎಂಬುದು ಈಗ ಗೊತ್ತಾಗಿದೆ. ಪೆಗಾಸಸ್ ಬಳಸಿ ಮತ್ತೊಮ್ಮೆ ಗುರಿಯಾಗಿಸಿದ ಪತ್ರಕರ್ತ​ರಲ್ಲಿ ಸಿದ್ಧಾರ್ಥ್ ವರದರಾಜನ್ ಕೂಡ ಸೇರಿದ್ದಾರೆ ಮತ್ತು ಪೆಗಾಸಸ್ ಸ್ಪೈವೇರ್ ಬಳಕೆಯ ಇತ್ತೀಚಿನ ಪ್ರಕರಣ ನಡೆದಿರೋದು ಕಳೆದ ಅಕ್ಟೋಬರ್ನಲ್ಲಿ ಎಂಬುದು ಈಗ ಬಯಲಾಗಿದೆ.

ಅಂದರೆ, ಸರ್ಕಾರಿ ಪ್ರಾಯೋಜಿತ ಹ್ಯಾಕರ್ಗಳ ಬಗ್ಗೆ ಆಪಲ್ನಿಂದ ಎಚ್ಚರಿಕೆ ಸಂದೇಶ ಬಂದಿತ್ತಲ್ಲ, ಅದೇ ತಿಂಗಳಲ್ಲಿಯೇ ಈ ಗೂಢಚರ್ಯೆ ನಡೆದಿದೆ.

ಈ ವಿಚಾರವನ್ನು ಈಗ ಬಯಲಿಗೆ ಎಳೆದಿರೋದು ಆಮ್ನೆಸ್ಟಿ ಇಂಟರ್ನ್ಯಾಷನಲ್ ಮತ್ತು ದಿ ವಾಷಿಂಗ್ಟನ್ ಪೋಸ್ಟ್ ಗುರುವಾರ ಪ್ರಕಟಿಸಿರೋ ಜಂಟಿ ತನಿಖಾ ವರದಿ. ದೇಶದ ಪತ್ರಕರ್ತರ ಮೇಲೆ ಪೆಗಾಸಸ್ ಮೂಲಕ ಗೂಢಚರ್ಯೆ ನಡೆಯುತ್ತಿತ್ತು ಎಂಬುದು ಈಗ ಸಾಬೀತಾಗಿದೆ.

ಸರಕಾರದ ಬಗ್ಗೆ ವಿಮರ್ಶಾತ್ಮಕವಾಗಿ ಬರೆಯುವ, ಸರಕಾರದ ಅತ್ಯಾಪ್ತ ಬಂಡವಾಳಶಾಹಿಗಳ ಕುರಿತು ಸತ್ಯ ಬಯಲು ಮಾಡುವ ಪತ್ರಕರ್ತರಿಗೆ ಈಗ ಸುರಕ್ಷತೆಯಿಲ್ಲ ಎಂಬ ಆತಂಕಕಾರಿ ವಿಚಾರ ಮತ್ತೊಮ್ಮೆ ದೃಢಪಟ್ಟಿದೆ. ಆಮ್ನೆಸ್ಟಿ ಇಂಟರ್ನ್ಯಾಷನಲ್ ಮತ್ತು ದಿ ವಾಷಿಂಗ್ಟನ್ ಪೋಸ್ಟ್ ವರದಿ ಪ್ರಕಾರ, ಸಿದ್ಧಾರ್ಥ ವರದರಾಜನ್ ಮತ್ತು ʼದಿ ಆರ್ಗನೈಸ್ಡ್ ಕ್ರೈಂ ಆ್ಯಂಡ್ ಕರಪ್ಶನ್ ರಿಪೋರ್ಟ್ ಪ್ರಾಜೆಕ್ಟ್ʼ (ಒಸಿಸಿಆರ್ಪಿ) ದಕ್ಷಿಣ ಏಷ್ಯಾ ಸಂಪಾದಕ ಆನಂದ ಮಂಗ್ನಾಲೆ ಅವರು ತಮ್ಮ ಐಫೋನ್ಗಳಲ್ಲಿ ಪೆಗಾಸಸ್ ಸ್ಪೈವೇರ್ನ ಇತ್ತೀಚಿನ ದಾಳಿಗೆ ತುತ್ತಾದ ಪತ್ರಕರ್ತರಲ್ಲಿ ಸೇರಿದ್ಧಾರೆ.

ಆಮ್ನೆಸ್ಟಿ ಇಂಟರ್ನ್ಯಾಷನಲ್ ನ ಸೆಕ್ಯೂರಿಟಿ ಲ್ಯಾಬ್ ನಡೆಸಿದ ವಿಧಿವಿಜ್ಞಾನ ತನಿಖೆಗಳು ಈ ವಿಚಾರವನ್ನು ಖಚಿತಪಡಿಸಿವೆ. ದೃಢಪಡಿಸಿವೆ.ಈ ಹಿಂದೆ ಕೂಡ ಪತ್ರಕರ್ತರು, ಪ್ರತಿಪಕ್ಷ ನಾಯಕರು, ಹೋರಾಟಗಾರರ ವಿರುದ್ಧ ಪೆಗಾಸಸ್ ಸ್ಪೈವೇರ್ ಬಳಸಿ ಗೂಢಚರ್ಯೆ ನಡೆಸಲಾಗಿತ್ತೆಂಬುದು ವಿವಾದಕ್ಕೆ ಕಾರಣವಾಗಿತ್ತು. ಆಗಲೂ ಪತ್ರಕರ್ತ ಸಿದ್ಧಾರ್ಥ ವರದರಾಜನ್ ಈ ಸ್ಪೈವೇರ್ ದಾಳಿಗೆ ತುತ್ತಾಗಿದ್ದರು.

ಪೆಗಾಸಸ್ ಅನ್ನು ವಿಶ್ವದಾದ್ಯಂತ ಸರ್ಕಾರಗಳು ತಮ್ಮ ಟೀಕಾಕಾರರನ್ನು ಗೂಢಚರ್ಯೆಗೆ ಒಳಪಡಿಸಲು ಬಳಸುತ್ತಿರುವುದಾಗಿ ಜುಲೈ 2021 ರಲ್ಲಿ ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳ ಒಕ್ಕೂಟ ವರದಿ ಮಾಡಿತ್ತು. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಸಿದ್ಧಾರ್ಥ್ ವರದರಾಜನ್ ಮತ್ತು ದಿ ವೈರ್‌ನ ಇನ್ನೊಬ್ಬ ಸಂಸ್ಥಾಪಕ ಸಂಪಾದಕ ಎಂಕೆ ವೇಣು ಸೇರಿದಂತೆ ಅನೇಕರ ವಿರುದ್ಧ ಸ್ಪೈವೇರ್ ಬಳಸಲಾಗಿರುವುದು ಬಹಿರಂಗಗೊಂಡಿತ್ತು.

ಭಾರತದಲ್ಲಿ 161 ಮಂದಿಯ ವಿರುದ್ಧ ಪೆಗಾಸಸ್ ಬಳಸಿ ಬೇಹುಗಾರಿಕೆ ನಡೆದಿತ್ತೆಂದು ದಿ ವೈರ್ ವರದಿ ಮಾಡಿತ್ತು. ಭಾರತ ಸರ್ಕಾರ ಆರೋಪಗಳನ್ನು ನಿರಾಕರಿಸಿತ್ತು. ತಾವು ಪೆಗಾಸಸ್ ಸ್ಪೈವೇರ್ ಅನ್ನು ಖರೀದಿಸಿದ್ದೇವೆಯೇ ಅಥವಾ ಅದನ್ನು ಬಳಸಿದ್ದೇವೆಯೇ ಎಂಬ ಬಗ್ಗೆ ಭಾರತ ಸರ್ಕಾರದ ಅಧಿಕಾರಿಗಳು ಈತನಕವೂ ಸ್ಪಷ್ಟ ಅಥವಾ ಪಾರದರ್ಶಕ ಉತ್ತರವನ್ನು ನೀಡಿಲ್ಲ. ಪೆಗಾಸಸ್ ಸ್ಪೈ ವೇರ್ ಅನ್ನು ನೀಡುವ ಇಸ್ರೇಲ್ ನ ಎನ್ ಎಸ್ ಓ ಗ್ರೂಪ್ ತಾನು ಅದನ್ನು ಸರಕಾರಗಳಿಗೆ ಮಾತ್ರ ನೀಡುತ್ತಿರುವುದಾಗಿ ಹೇಳಿದೆ.

ಅಕ್ಟೋಬರ್ನಲ್ಲಿ ಆಪಲ್ ಅಲರ್ಟ್ ಬಂದ ಹೊತ್ತಿನಲ್ಲಿ ಅಂಥ ಸಂದೇಶ ಸ್ವೀಕರಿಸಿದ್ದವರ ಫೋನ್ಗಳ ವಿಧಿವಿಜ್ಞಾನ ವಿಶ್ಲೇಷಣೆಯನ್ನು ಆಮ್ನೆಸ್ಟಿ ಇಂಟರ್ನ್ಯಾಷನಲ್ನ ಸೆಕ್ಯೂರಿಟಿ ಲ್ಯಾಬ್ ಕೈಗೆತ್ತಿಕೊಂಡಿತ್ತು. ವರದರಾಜನ್ ಮತ್ತು ಮಂಗ್ನಾಲೆ ಅವರ ಫೋನ್ಗಳಲ್ಲಿ ಪೆಗಾಸಸ್ ಸ್ಪೈವೇರ್ ಚಟುವಟಿಕೆಯ ಕುರುಹುಗಳನ್ನು ಆ ವಿಶ್ಲೇಷಣೆಯಲ್ಲಿ ಪತ್ತೆ ಹಚ್ಚಲಾಗಿತ್ತು.

ಅದಾನಿ ಗ್ರೂಪ್ ತನ್ನ ಶೇರುಗಳ ಬೆಲೆಗಳನ್ನು ಕೃತಕವಾಗಿ ಹೆಚ್ಚಿಸಿದೆ ಎಂಬ ಆರೋಪಗಳ ಕುರಿತು ಬರಹ ಸಿದ್ಧಗೊಳಿಸುತ್ತಿದ್ದ ಸಂದರ್ಭದಲ್ಲೇ ಪೆಗಾಸಸ್ ದಾಳಿಯ ಪ್ರಯತ್ನಕ್ಕೆ ಮಂಗ್ನಾಲೆ ಗುರಿಯಾಗಿದ್ದರು. ಸಿದ್ಧಾರ್ಥ್ ವರದರಾಜನ್ ಮತ್ತು ಮಂಗ್ನಾಲೆ ಅವರ ಫೋನ್ಗಳನ್ನು ಗುರಿಯಾಗಿಸಿದ್ದು ಒಬ್ಬನೇ ಪೆಗಾಸಸ್ ಬಳಕೆದಾರ ಎನ್ನುವುದನ್ನೂ ವಿಶ್ಲೇಷಣೆ ಬಯಲಿಗೆಳೆದಿದೆ.

ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಿರುವುದಕ್ಕಾಗಿ ಭಾರತದಲ್ಲಿನ ಪತ್ರಕರ್ತರು ಕಾನೂನುಬಾಹಿರ ಕಣ್ಗಾವಲು ಬೆದರಿಕೆಯನ್ನು ಎದುರಿಸುತ್ತಿರುವುದು ಹೆಚ್ಚುತ್ತಿದೆ ಎಂಬ ಆತಂಕವನ್ನು ಆಮ್ನೆಸ್ಟಿ ಇಂಟರ್ನ್ಯಾಷನಲ್ನ ಸೆಕ್ಯೂರಿಟಿ ಲ್ಯಾಬ್ ಮುಖ್ಯಸ್ಥ ಡಾನ್ಚಾ ಒ ಸಿಯರ್ಭೇಲ್ ವ್ಯಕ್ತಪಡಿಸಿದ್ದಾರೆ.

ಇದರ ಜೊತೆಗೆ ಕರಾಳ ಕಾನೂನುಗಳಡಿ ಜೈಲುವಾಸ, ಸುಳ್ಳು ಆರೋಪಗಳು, ಕಿರುಕುಳ ಮತ್ತು ಬೆದರಿಕೆಗಳನ್ನು ಪತ್ರಕರ್ತರು ಎದುರಿಸುತ್ತಿದ್ದಾರೆ ಎನ್ನುವುದನ್ನು ನಮ್ಮ ಇತ್ತೀಚಿನ ಅಧ್ಯಯನಗಳು ತೋರಿಸಿರುವುದಾಗಿ ಅವರು ಹೇಳಿದ್ದಾರೆ. ಮತ್ತೆ ಮತ್ತೆ ಇಂಥ ಗೂಢಚರ್ಯೆ ವಿಚಾರ ಬಯಲಾಗುತ್ತಿದ್ದರೂ, ಭಾರತದಲ್ಲಿ ಪೆಗಾಸಸ್ ಸ್ಪೈವೇರ್ ಬಳಕೆ ನಿಲ್ಲದಿರುವುದು ನಾಚಿಕೆಗೇಡು. ಇದು ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ನಿರ್ಭೀತ ಭಾವನೆ ಹೆಚ್ಚಲು ಕಾರಣವಾಗುತ್ತದೆ ಎಂದು ಸಿಯರ್ಭೇಲ್ ಹೇಳಿದ್ದಾರೆ.

ಭಾರತದಲ್ಲಿ ಪೆಗಾಸಸ್ ಬಳಕೆ ಕುರಿತು ಸುಪ್ರೀಂ ಕೋರ್ಟ್‌ನ ತಾಂತ್ರಿಕ ಸಮಿತಿಯ ವರದಿಯಲ್ಲಿನ ಅಂಶಗಳನ್ನು ತಕ್ಷಣವೇ ಬಿಡುಗಡೆ ಮಾಡುವಂತೆಯೂ ಆಮ್ನೆಸ್ಟಿ ಇಂಟರ್ನ್ಯಾಷನಲ್ ಒತ್ತಾಯಿಸಿದೆ. 2021ರಲ್ಲಿ ಪೆಗಾಸಸ್ ದಾಳಿ ಆರೋಪಗಳ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತಜ್ಞರ ಸಮಿತಿ ರಚಿಸಿತ್ತು. ಆಗಸ್ಟ್ 2022ರಲ್ಲಿ ಸಮಿತಿ ಪರೀಕ್ಷಿಸಿದ್ದ 29 ಫೋನ್‌ಗಳಲ್ಲಿ ಐದರಲ್ಲಿ ಕೆಲವು ಮಾಲ್‌ವೇರ್ ಕಂಡುಬಂದಿದ್ದರೂ, ಅದು ಪೆಗಾಸಸ್ ಎಂಬುದು ಸ್ಪಷ್ಟವಾಗಿರಲಿಲ್ಲ.

ತಾಂತ್ರಿಕ ಸಮಿತಿಯ ವರದಿಯನ್ನು ಕೋರ್ಟ್ ಬಹಿರಂಗಗೊಳಿಸಿಲ್ಲವಾದರೂ, ಕೇಂದ್ರವು ವಿಚಾರಣೆಗೆ ಸಹಕರಿಸುತ್ತಿಲ್ಲ ಎಂಬ ವಿಚಾರ ಕೋರ್ಟ್ ಗಮನಕ್ಕೆ ಬಂದಿತ್ತು. ಭಾರತ ಸರ್ಕಾರ ಇತ್ತೀಚಿನ ವರದಿಗಳಲ್ಲಿ ಬಹಿರಂಗವಾಗಿರುವುದೂ ಸೇರಿದಂತೆ ಉದ್ದೇಶಿತ ಕಣ್ಗಾವಲಿನ ಎಲ್ಲಾ ಪ್ರಕರಣಗಳ ಬಗ್ಗೆ ತಕ್ಷಣದ, ಸ್ವತಂತ್ರ, ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕಿದೆ ಎಂದೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಹೇಳಿದೆ.

ಮತ್ತೊಂದು ವಿಚಾರವೇನೆಂದರೆ, ಅವತ್ತು ಅಕ್ಟೋಬರ್ನಲ್ಲಿ ಆಪಲ್ ಕಂಪನಿ ಸರ್ಕಾರ ಪ್ರಾಯೋಜಿತ ಹ್ಯಾಕರ್ಗಳ ಬಗ್ಗೆ ಎಚ್ಚರಿಸಿದ್ದಾಗ, ಕೇಂದ್ರ ಸರ್ಕಾರ ಆರೋಪ ನಿರಾಕರಿಸಿತ್ತು. ಎಲ್ಲರ ಅನುಮಾನದ ಕಣ್ಣುಗಳು ತನ್ನತ್ತ ತಿರುಗಿರುವುದನ್ನು ಮೋದಿ ಸರ್ಕಾರಕ್ಕೆ ಸಹಿಸಲಾಗಿರಲಿಲ್ಲ. ಆರೋಪಗಳ ಬಗ್ಗೆ ಆಪಲ್ ವಿರುದ್ಧವೇ ದೂರಿದ್ದ ಸರ್ಕಾರ, ತನಿಖೆ ನಡೆಸುವ ಮಾತಾಡಿತ್ತು. ಆದರೆ ಅದೇ ಸರ್ಕಾರ ಆಪಲ್ ಕಂಪನಿಯ ಮೇಲೆಯೇ ಒತ್ತಡ ಹೇರುತ್ತಿರುವ ವಿಚಾರವನ್ನೂ ವಾಷಿಂಗ್ಟನ್ ಪೋಸ್ಟ್ ವರದಿ ಬಹಿರಂಗಪಡಿಸಿದೆ.

ಆಪಲ್ ಕಂಪನಿಯಿಂದ ಅಂಥ ಅಲರ್ಟ್ ಬಂದ ಬೆನ್ನಲ್ಲೇ ಭಾರತದ ಅಧಿಕಾರಿಗಳು ವಿದೇಶದಲ್ಲಿನ ಆಪಲ್ ಭದ್ರತಾ ತಜ್ಞರನ್ನು ನವದೆಹಲಿಗೆ ಕರೆಸಿಕೊಂಡಿದ್ದರು ಮತ್ತು ಸರ್ಕಾರಿ ಪ್ರಾಯೋಜಿತ ದಾಳಿ ಎಚ್ಚರಿಕೆಯನ್ನು ನಿರಾಕರಿಸುವ ಬಗೆಯ ಪ್ರಕಟಣೆ ಕೊಡುವುದಕ್ಕೆ ಕೇಳಿದ್ದರು ಎಂಬುದನ್ನು ವಾಷಿಂಗ್ಟನ್ ಪೋಸ್ಟ್ ವರದಿ ಹೇಳಿದೆ.

ಮೋದಿ ಸರ್ಕಾರದ ಅಧಿಕಾರಿಗಳು ತೀವ್ರ ಅಸಮಾಧಾನಗೊಂಡಿದ್ದರು ಎಂಬುದನ್ನು ಆ ಭದ್ರತಾ ಪರಿಣಿತ ಹೇಳಿರುವುದರ ಬಗ್ಗೆಯೂ ವರದಿ ಉಲ್ಲೇಖಿಸಿದೆ. ಆಪಲ್ ವಿರುದ್ಧವೇ ಆರೋಪ ಹೊರಿಸುವ ಮತ್ತದರ ಮೇಲೆ ಒತ್ತಡ ಹೇರುವ ಯತ್ನವನ್ನು ಕೇಂದ್ರ ಸರ್ಕಾರ ಮಾಡಿತ್ತೆಂಬುದು ಬಯಲಾಗಿದೆ.

ಆದರೆ ಇದೆಲ್ಲ ಕಟ್ಟುಕತೆ, ನಾವು ಹಾಗೆ ಮಾಡಿಯೇ ಇಲ್ಲ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸ್ಪಷ್ಟನೆ ಕೊಟ್ಟಿದ್ದಾರೆ. ಒಂದೆಡೆ, ತನ್ನ ಟೀಕಾಕಾರರನ್ನು, ತನ್ನನ್ನು ಪ್ರಶ್ನಿಸುವವರನ್ನು ನಿಯಂತ್ರಿಸಲು ಮತ್ತು ಅವರೇನು ಮಾಡುತ್ತಾರೆಂಬುದರ ಕಡೆ ಕಣ್ಣಿಡಲು ಅಕ್ರಮ ದಾರಿ ಬಳಸುವುದು, ಮತ್ತೊಂದೆಡೆ, ಅದು ಬಯಲಾಗಿಬಿಟ್ಟರೆ ಅದನ್ನೇ ಸುಳ್ಳೆಂಬಂತೆ ಬಿಂಬಿಸಲು ಇನ್ನೂ ಅಧಿಕಾರಯುತ ದಾರಿಗಳನ್ನು ಬಳಸುವುದು ಇಲ್ಲಿ ನಡೆಯುತ್ತಿದೆ ಎಂಬುದು ಸಾಬೀತಾಗುತ್ತಿದೆ.

ಸತ್ಯವನ್ನು ಅಡಗಿಸುವ ಕೆಲಸವೇ ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತ ಬಂದಿದೆ. ಸತ್ಯವನ್ನು ಹೇಳಹೊರಟವರನ್ನು ದಮನಿಸುವ ಕೆಲಸ ಕೂಡ ನಿರಂತರ ಜಾರಿಯಲ್ಲಿದೆ ಎಂಬುದೇ ಕಳವಳಕಾರಿ ಸಂಗತಿಯಾಗಿದೆ. ಹೀಗೆ ತಮ್ಮ ವಿರೋಧಿಗಳು ಮತ್ತು ಟೀಕಾಕಾರರ ಮೇಲೆ ಅನುಮಾನದ ಕಣ್ಣಿಡುವುದು ಕೂಡ ಸರ್ವಾಧಿಕಾರಿ ಮನಃಸ್ಥಿತಿಯ ಲಕ್ಷಣವೇ ಆಗಿದೆಯಲ್ಲವೆ?

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!